ಈ ತಾಯಿ ಸಿರಿದೇವಿ
ಇನ್ನ ಊರಿಗ ಮೂರು ಹೊಲ ಬಿಟ್ಟು
ಸುಡುಗಾಡು ರುದ್ರಭೂಮಿದಾಗ
ಎಡಕ್ಕ ಹೊಳ್ಳಾಕ್ಕಿಲ್ಲ ಬಲಕ್ಕ ಹೊಳ್ಳಾಕ್ಕಿಲ್ಲ
ಆ ತಾಯಿ ಬಾಯಿಗ್ಬಂದ್ಹಾಂಗ
ಹ್ಯಾಂಗ ಬೈಯಿತಾಳಪ್ಪ ದೇವರನ್ನ

ಕೊಟ್ಟದೇವ್ರಿಗೀಟು ಬೇಲಿ ಬಡೀಯಲಪ್ಪಾ
ಪರಮಾತ್ಮ ನಿನ್ನ ಗುಡಿಗೆ ಗುಂಡ್ಹಾಕಾ
ಬೆಂಕಿ ಹಚ್ಚ ನಿನ್ನ ಮಕಗೆ || ತಂದಾನ ||

ಹೆಣಸರಾಗಿ ಲೋಕ ಯಾಕ ಕೊಟ್ಟಿಯಲ್ಲೋs
ಹೆಣಸ್ರಾಗಿ ಯಾಕ ಕೊಟ್ಟಿದ್ದೆಪ್ಪ ಲೋಕಗೆ
ನನ್ನ ಕಷ್ಟ ನಿನ್ನ ಗುಡಿಗೆ ಮುಟ್ಟಲಾರ್ದೋ ಹೇs
ನನ್ನ ಕಷ್ಟ ನಿನ್ನ ಗುಡಿಗೆ ಮುಟ್ಟಲಿ || ತಂದಾನ ||

ಅಂತಾ ಬಾಯಿಗೆ ಬಂದಂಗ
ಬೈಯಿತಾಳಪ್ಪ ದೇವ್ರಿಗೆ ಜೀವಕೊಟ್ಟವ್ರಿಗ
ಬೈತಿದ್ರೆ
ಮೂವಾರು ಮೂರ ಮೇಗದಾಗಲಿದ್ದ ನೋಡಿಬಿಟ್ರು ಬಗ್ಗಿ
ಸಾಂಬಶಿವ ನೋಡಿದ
ಏನೋ ಪರಮಾತ್ಮನೇ
ಏನೋ ವಿಷ್ಣು
ಏನೋ ಸಾಂಬನೆ
ನೋಡಿದ್ಯಾ ಸುಡುಗಾಡು ರುಧ್ರ ಭೂಮಿದಾಗ
ನೆಗ್ಗಿನ ಮುಳ್ಳ ಡಬ್ಬಗಳು ಮುಳ್ಳುಗಳ ಮ್ಯಾಲೆ
ಕತ್ರಿ ಕುಡುಗೋಲು ಮ್ಯಾಲೆ ಮಲಗಿಸಿ ಬಂದಾನ
ದುರ್ಮಾಗಿ ದುಷ್ಠ
ಮುತ್ತಿನ ಸೆರಗಿಲಿ ಕಸ ಬಳ್ಯಾಕಿ
ಎಡಗೈಯ್ಯಾಗ ಲೋಬಾನ್ಹಾಕಾಕಿ
ಬಲಗೈಲಿ ಶರಣೊಡ್ಡಿ ಶರಣು ಮಾಡಾಕಿ
ಏನಪ್ಪಾ
ಏನ್ರಿ ಮತ್ತೆ ನೀನು ಸುಮ್ನೆ ಇದ್ದಿಯಲ್ಲಾ
ಇದೋ ನೀನು ಹೋಗಿ
ಆ ಯಮ್ಮಗೆ ಮನಿ ಕಟ್ಟಿಸಿ
ಮಗನ ಕೊಟ್ಟು ಬಾ
ಅಂದ್ರೆ ಸಾಂಬಶಿವನು
ಎಡಗೈಗೆ ಜೋಳಿಗೆ ಹಾಕಿದ
ಕಾವಿ ಧೋತ್ರ ಕಾಯಂಗಿ
ರುದ್ರಾಕ್ಷಿ ಪೋಣಿಸಿದ್ದ ಟೋಪಿ ಇಟ್ಕಂಡ
ಬಲಗೈಲಿ ಗಂಟೆ ಬಾರಿಸಿದ
ಏನ್ರೀ ಪರಮಾತ್ಮನೇ
ಕೋಟಿಲಕ್ಷ ಜೀವಕೊಟ್ಟು
ಜೀವ ಎಳಿಯಂತವನೆ
ನನಗ ಮಕ್ಕಳ ಫಲ ಕೊಡ್ರಿ
ಆಗ ಗುಡ್ದ ಬಿದ್ದಂಗ ಬಿದ್ದೈತ್ರಿ
ಕೈ ಇಟ್ಟ
ಹಿಡಕಂಡ್ರೇ ಒಂದೇ ಫಲ ಬಂದೈತಿ
ಖಜೂರ್‌ ಹಣ್ಣು ಜೋಳಿಗ್ಯಾಗಿಟ್ಟ
ಶನಿಮಹಾತ್ಮ ನೋಡಿದ
ಏನಪ್ಪಾ ಪರಮಾತ್ಮನೇ
ಯಾರ ಮನಿಗನ್ನ ಕಳಿಸಿಬಿಡಪ್ಪ
ಶಿವನ್ಹಿಂದೆ ಹೋಗಿಬಿಡ್ತಿನಿ
ಹೇಯ್‌ ಸಿರಿದೇವಮ್ಮಾಗ ಎರ್ಡು ಭಾಗ ಕಷ್ಟಕೊಟ್ಟಿದ್ರೆ
ಕಾಂಭೋಜರಾಜಗ ಮೂರು ಭಾಗ ಕೊಡಬೇಕು
ಕೇಳವೋ ಶನಿಮಹಾತ್ಮ
ನೀನು ಕರಕಂಡು ಹೋಗಬೇಕು
ಹೋಗಬೇಕು ನೀನು ಹೋಗಿ
ಏನ್ಮಾಡಬೇಕಂದ್ರೆ
ಶನಿಮಹಾತ್ಮ ನೀನು ಹೋಗಿ
ಗೊಲ್ರು ಹಾಲುಕೃಷ್ಣದವನು
ಕಾಂಭೋಜರಾಜಗೆ
ಬೆನ್ನಮ್ಯಾಲೆ ಕುಂದ್ರಬೇಕು
ಬೆನ್ನಾಗ ಹೊಕ್ಕೊಬೇಕು
ಹಾಕ್ಕೊಂಡು ಬೆನ್ನಿಗೆ ಕುರಿ ಕಟ್ರೆ ಕುರಿ ತಿನ್ನಬೇಕು
ಕೋಳಿ ಕಟ್ರೆ ಕೋಳಿ ತಿನ್ನಬೇಕು
ಮನುಷ್ಯ ಕಟ್ರೆ
ಮನುಷ್ಯರ್ನ ತಿನ್ನಬೇಕು
ಹಗಲುರಾತ್ರಿ
ಹದ್ನಾರು ಹುಲ್ಲುಕೂಟಾ ಕಡೀತಿದ್ರೆ
ಭಲ್ಲೇವು ತಗಂಡು
ತಿವಿದಂಗ ಮಾಡಬೇಕು ನೀನು
ಬೆನ್ನ ಅಗಲಾಗ ಹುಣ್ಣು ಆಗಬೇಕು
ಬಾರ್ಲು ಬಿದ್ದೋನು
ಮ್ಯಾಕ ಎದ್ದೇಳಬಾರ್ದು ಅವನು
ಜೀವ ಇರ್ಲಿಕ್ಕೇ
ಇನ್ನವನ ಯಮನ ಗುಂಡ ತೋರಿಬೇಕು ಅವನಿಗೆ
ಹೇಗ್ಯಾಗೋ ಒದ್ದಾಡಬೇಕು
ಸುಡುಗಾಡು ರುದ್ರಭೂಮಿದಾಗ
ಕೆಬ್ಬಿಣ ವರುಸದ ಮ್ಯಾಲೆ
ನೆಗ್ಗಿನ ಮುಳ್ಳು ಡೆಬ್ಬಿಗಳ್ನು ಮುಳ್ಳು ಮ್ಯಾಲೆ
ಈಗ ನೆಲಮನೆ ಗರಡಿಮ್ಯಾಲೆ
ಇನ್ನು ವರುಸದಾಗ ಮಲಗಿಸಿ ಬಂದವನು
ಸಿರಿದೇವಮ್ಮ ಚಿಕ್ಹೇಣ್ತೀನ
ಮಕ್ಕಳು ಇಲ್ಲದಾಕಿಗೆ
ಈ ಮಗ ಹುಟ್ಟುಬೇಕು
ಈಗ ಮಗನ ಕೊಟ್ಟು
ಆಗ ಹದ್ನೆಂಟು ವರುಷ ಮಗ ಆಗಿ
ಇದೋ ಬಕಾಸುರನ ತಂಗಿ
ಮೈರಾಮನ ಮಗಳು
ಹನ್ನೆರಡು ಕೈ ಆದಿಶಕ್ತಿ
ಮಾತಾಡೋ ಅಡಿಕೇ
ನಗೋ ಎಲೆ ಓಡಾಡೋ ಕಾಂಚು
ಸುಗೂರು ಸುಣ್ಣ
ಬೆಂಕಿ ತಿಂದ ರಕ್ತ ಪಕ್ಷಿಕೂಟ
ಇನ್ನವ್ರತ ಔಷಧ ಮಾಡ್ಬೇಕ ಅದು
ಗಾಜಿನ ಬುಡ್ಡಿಗೆ ತುಂಬಬೇಕು
ಥೈ ಥೈ ಥೈ ಔಷಧ ಕುಣಿಬೇಕು
ಬೊಳ್ಳಿಟ್ರೆ ಬೊಳ್ಳು ಉರಿಬೇಕು
ಭೂಮಿಮ್ಯಾಲೆ ಬಿದ್ರೆ
ತೂತು ಬಿದ್ದುಕೊಂಡು ಹೋಗಬೇಕು
ಅಂತಾ ಅವುಷದ ತೂಕ ಮಾಡಿ
ಬೆನ್ನಿಗೆ ಹಾಕೋತನಕ

ಶನಿಮಹಾತ್ಮ ನೋಡಾಲೆ ನೀನು ಬೆನ್ನು ಬಿಟ್ಟು ಬರುಬ್ಯಾಡ || ತಂದಾನ ||

ಪರಮಾತ್ಮ ಹೇಳಿಬಿಟ್ಟ ಶನಿಮಹಾತ್ಮಗೆ
ಯಪ್ಪಾ ನನಗೆ ಬಾಯಿ ಸಪ್ಪಗೆ ಆಗೈತಿ
ದೊಡ್ಡ ಸಿರಿಮಂತರ ಮನಿ ತೋರ್ಸು ನನಗೆ
ಅವನ್ನೆಲ್ಲಾ ಕಿತ್ತಿಗ್ಯಂಡು ತಿಂದು ಬಿಡ್ತಿನಿ ಅಂದ