ಸಿರಿದೇವಿ ಸಾಧುವಿಗ ಹೇಳುವಳು ಇಲ್ಲಾ ಸ್ವಾಮಿ
ನಿನ್ನತಲ್ಲಿ ಭಕ್ತಿ ಇದ್ರೆ
ಕಡ್ಡಿ ಬಾಕ್ಲ ತೆರಕಂಡು
ಆಗ ಒಳಕ್‌ ಬಂದು
ನನ್ನ ಕಷ್ಟ ನೋಡು ಬರ್ರೀ
ಕೆಬ್ಬಣ ವರಸದ ಮ್ಯಾಲೆ
ನನ್ನ ಜೀವದವನು
ಕಷ್ಟ ಕೊಟ್ಟು ಹೊಗ್ಯಾನ
ನನ್ನ ಜಲ್ಮಕ್ಕೆ
ಓಹೋ ಆಗ ನಿನ್ನ ಭಕ್ತಿ ಇದ್ರೆ
ಈಗ ಏನಿಲ್ರಿ ನನ್ನ ಜೀವದಲ್ಲಿ
ನನ್ನ ಜೀವದವ್ನ ತಾಳಿ ನನ್ನ ಜೀವಕ್ಕೈತಿ
ಈಗ ತಾಳಿ ಹರ್ಕೊಂಡ್ಹೋಗರಿ ನಿನ್ನ ಬಿಡ್ತಿನಿ ದಾನ ಮಾಡಿ || ತಂದಾನ ||

ಕೊಳ್ಳಾನ ತಾಳಿ ಮಂಗಳ ಸೂತ್ರ
ಆಗ ನಿನ್ನ ಕೈಗ ಕೊಡ್ತಿನಿ ಶಿವ
ನೀವು ತಗೊಂಡು ಹೋಗ್ರಿ
ಎಷ್ಟು ಕಷ್ಟ ಬಂದ್ರೆ ಏನು
ಗಂಡ ಕಟ್ಟಿದ ತಾಳಿ ಕೊಡಬೇಕಂದ್ರೆ
ಸಾಮಾನ್ಯವಲ್ಲ ತಾಳಿ ಕೊಡಬೇಕಂದ್ರೆ
ಜೀವಕ್ಕಾಗಿ
ಅಮ್ಮಾ ನಿನ್ನ ಭಕ್ತಿ ಇಷ್ಟೇ ಸಾಕು
ಕೊಡತಾಳೋ ಇಲ್ಲೋ ಅಂತ ತಿಳಿಕಂಡಿದ್ದೆ ಜೀವಕ್ಕ ಜೀವ
ನೀನು ಕೊಟ್ಟೆ ತಾಯಿ
ಕೊಳ್ಳಾಗ ತಾಳಿಕೋಟ್ಟಿದಂಗಲ್ಲ
ನಿನ್ನ ಗಂಡನ್ನೇ ಕೊಟ್ಟಂಗ ನಿನಗೆ
ಅಂತ ಹಿಡಿಕಿ ವಿಭೂತಿ ತಕ್ಕಂಡು
ಆಗ ಶಿವ ಒಗದು ಬಿಟ್ಟ
ಬೆಳ್ಳದು ಮೂರು ಅಂಕಣದ ಮನಿ ಆಯ್ತು
ಆಗ ಇನ್ನ ಏನು ಮಾಡಿಬಿಟ್ಟ
ತಾಯಿತಲೆ ಅಡೆಯ ಕತ್ರಿ ಕುಡುಗೋಲು
ತೆಲೆ ದಿಂಡಾಯ್ತು
ತೆಲಿ ಅಡೆಯ ಬಾಳೆ ಬೇಲಿ
ಬಂಗಾರದ ನಾಗರ ಹೂವಾಯ್ತು
ಕೈ ಸರಪಣ ಬಂಗಾರದ ಕಡಗಗಳಾದವು
ಕಾಲಿನ ಕಬ್ಬಿಣ ಸರಪಣಿಗಳು
ಆಗ ಬೆಳ್ಳಿ ಚೈನಾದವು
ಬೆಳ್ಳಿ ಸರಪಣ ಆದವು
ಎದೆ ಮ್ಯಾಲಿನ ಬೊಗಸೆ ಅಡ್ಡಗ್ಲ ಬಂಡೆ
ತಾಳಿ ಸಾಮಾನು ಆಯ್ತು
ಬೆನ್ನಡಿಯ ನೆಗ್ಗಿನ ಬಿಟ್ಟವು
ಎಡಕ್ಕ ಬಲಕ್ಕಾ
ಡಬ್ಬಣ ಸೂರ್ನುಗಳು
ಆಗ ಗಿಣಿ ಗುಬ್ಬಿಗಳಾದವು

ಎಡಕ್ಕಲ್ಲಿದ್ದ ಬಲಕ್ಕ ಹೊಳ್ಯಾಳ ಮಗಳು
ಹೊರಸ ಮ್ಯಾಲಿಲಿದ್ದ ಕೆಳಗ ಇಳಿದಳಮ್ಮ
ಸಿರಿದೇವಮ್ಮ ಗೊಲ್ರು || ತಂದಾನ ||

ಆಗ ಮನಿ ಹೊರಾಗ ಬಂದು
ಮೂರು ಅಂಕಣದ ಮನಿ ಕಟ್ಟಿದಾನ
ಬೆಳ್ಳಗ ವಿಭೂತಿಲ್ಲಿದ್ದ ತಯಾರು ಮಾಡ್ಯಾನ ಶಿವ
ಆತ ತಾತನ ಪಾದಕ್ಕೆ ಸೆರುಗ ಹಾಸಿ ಪಾದಕ್ಕೆ ಬಿದ್ಳು
ಸ್ವಾಮಿ ಹೋಗೋ ಜಲುಮ ಯಾಕ ಉಳಿಸಿರಿ
ಇದು ಪಾಪ ಮಾಡಿದ ಕರ್ಮ ಜೀವನು
ಈಗ ನನ್ನ ಜೀವದ ಗಂಡ ಮಾಳಿಗೆ ಏರಿ ನೋಡಿ ಬಿಟ್ರೆ

ನನ್ನ ನಿನ್ನವಾಗಿ ಇನ್ನ ಕಡೀತಾನಯ್ಯ
ಜೀವ ಕಡಿದು ಬಿಸಾಕಿ ಬಿಡ್ತಾನ
ನನ್ನ ಜೀವಗ ನಿನ್ನ ಜೀವ ಹೋತದ ಶಿವಾ
ನನ್ನ ಜೀವಗ ನಿನ್ನ ಜೀವ ಹೊತೈತಿ ಶಿವಾ
ಹೆಂಗ ಮಾಡ್ಬೇಕು
ದುಷ್ಠ ಧರ್ಮಾರ್ಗಗೆ ಜೀವದವನು ನನಗೇ
ದುಷ್ಠದವನು ದುರ್ಮಾರ್ಗದವನು ಇದಾನ್ರಿ ನನ್ನ ಅದೃಷ್ಟ || ತಂದಾನ ||

ಅಮ್ಮಾ ನೀನು ಪಾಪ ಮಾಡಿದ ಕರ್ಮದವಳು
ಮಕ್ಕಳಿಗೆಲ್ಲಾ ಮದ್ದು ಇಕ್ಕವಳು
ಸುಡುಗಾಡು ರುದ್ರಭೂಮಿಗೆ ತಂದಿಟ್ಟಾನ
ಜೀವಕ್ಕಾಗಿ
ಈಗ ಪುಣ್ಯ ಮಾಡಿದ ತಯಾರಿ
ಪಾಪ ಮಾಡಿದವರಾದ್ರೆ
ಸುಡುಗಾಡಿಗೆ ತಂದಿಟ್ಟಾರ
ಪುಣ್ಯ ಮಾಡಿದವರು ಊರಾಗಿದ್ದಾರ
ಇನ್ನ ಯಾರು ಬಂದು ಸುಡುಗಾಡಿಗೆ ನೋಡ್ತಾರೆ ದೇವಿ
ಯಪ್ಪಾ ಈಗ ನೋಡಿಬಿಟ್ರೆ
ಲೇ ಈ ಮೂರು ಅಂತಸ್ತು ಮಾಳಿಗೆ ಹ್ಯಾಂಗ ಬಂತು
ನಿನಗೆ ಸುಡುಗಾಡಾಗ
ನಿನ್ನ ಮೈಮ್ಯಾಲೆ ಒಡಿ ವಸ್ತ್ರ ಹ್ಯಾಂಗ ಬಂತು
ಯಾವನ ಇಟ್ಟುಕೊಂಡಿಯಿ ಈ ಚಾಂಪುರ ಪಟ್ಣದಾಗ
ಈ ಆರುಮಂದಿ ಮಕ್ಕಳಿದ್ರೆ ನೋಡಿದ್ರೆ ಅವ್ರು
ಆಗ ತಂದಿಗೆ ಹೇಳ್ತಾರ ಅಂತ
ನನ್ನ ಜೀವ ಕೊಲ್ತಾನಂತ
ಈ ಮಕ್ಕಳು ಕೊಲ್ಲಿದ್ರೆ
ಆಗ ಯಾರು ಮನ್ಯಾಗ ಇರಾದಿಲ್ಲ
ಅವರು ಬರಾಕ ಹೋಗಾಕಿರ್ತದಂತ
ಅದಕ್ಕೆ ಮದ್ದಿಟ್ಟು ಕೊಲ್ಲೀದಿ ಅಂತಾನ
ದುಷ್ಠದವನ ಕೈಯಾಗ ಸಾಯೋ ಬದಲು

ಸ್ವಾಮಿ ಜಲ್ಮ ಬಿಡ್ತೀನಿ ಅಪ್ಪಣೆ ಕೊಡೋ ಶಿವನೆ || ತಂದಾನ ||

ಅಮ್ಮಾ ಯಾಕ ಸಾಯ್ತಿಯೇ ತಾಯಿ
ಇಲ್ಲಾ ಸ್ವಾಮಿ ನನ್ನ ಈ ಜೀವದಲ್ಲಿ ಉಳಿಯೋದಿಲ್ಲ
ನಡಿ ಸ್ವಾಮಿ ನಿನ್ಹಿಂದೆ ಮಠಕ್ಕ ಬರ್ತೀನಿ
ಮಠಕ್ಕ ಬಂದು ಏನು ಮಾಡ್ತೀಯಮ್ಮ
ಸ್ವಾಮಿ ನಿನ್ನ ಕೈಯಾಗಿರ್ತೀನಿ ನಾನು
ಶಿಶು ಮಗಳಾಗ್ತೀನಿ
ಆಗ ಕಸ ಬಳಿತಿನಿ
ನಿನ್ನ ಮಠದಾಗ
ಹೂವಿನ ಗಿಡ್ಗೆ ನೀರ್ಹಾಕುತ್ತಿನಿ
ತೆಂಗಿನಗಿಡ್ಗೆ ನೀರ್ಹಾಕ್ತಿನಿ
ಸ್ವಾಮಿ ಆಗ ನಾನು ಶಿಶುಮಗಳಾಗಿ
ನಿನ್ನ ಮಠದಾಗ್ತೀನಿ ಸ್ವಾಮಿ
ನಿನ್ನಿಂದೇ ಬಂದು ಬಿಡ್ತಿನಿ
ಅಬಾಬಾ ಇಷ್ಟೊಂದು ಹೆದರಿಕೆ ಐತೇನಮ್ಮಾ ನಿನಗೆ
ಹೌದು ಸ್ವಾಮಿ
ನನ್ನ ಜೀವ ಹೆದರುತೈತಿ ಸ್ವಾಮಿ ಜಲ್ಮದಾಗ
ಸರಿ ನನ್ಹಿಂದೆ ಬರಂಗಿದ್ರೆ ಇದ್ರೆ
ನನ್ನ ಮಠ ಸೇರಂಗಿದ್ರೆ
ನನ್ನ ಕೈಯಾಗ ಗುರುಮಗಳಾಗಿ ಇರಾಂಗಿದ್ರೆ
ಶಿಶುಮಗಳು
ನೋಡಮ್ಮಾ ಗುರುಕೊಟ್ಟಿದ್ದು ನೀನು ಊಟ ಮಾಡಬೇಕು
ಮಗನ ಕೊಡ್ತಿನಿ ತಗೊಮ್ಮಾ ಅಂದ್ರೆ
ತಗೊಂತಾಳ ತಗೊಮ್ಮಂಗಿಲ್ಲ
ಸ್ವಾಮಿ ಆರು ಮಂದಿ ಕೊಡುವಾಗೆ
ನನ್ನ ಜೀವಕ್ಕ ಕೊಡಬೇಕಿತ್ತು
ಆಗಿಲ್ಲದ ಮಗ ಈಗ್ಯಾಕ ಸ್ವಾಮಿ ಸುಡುಗಾಡಾಗ ಅಂತ
ಸಿರಿದೇವಿ ತಗಂಬೂದಿಲ್ಲಂತ
ಯಮ್ಮಾ ಸೆರಗೊಡ್ಡು ಅಂದ್ರೆ
ಗುರುಮಠ ಸೇರಿ ಗುರು ಕೊಟ್ಟಿದ್ದು ಊಟ ಮಾಡುವಿಯಂತೆ
ಅಷ್ಟಾಗಲ್ಲಂತ ಸೆರಗೊಡ್ಡಿದ್ಳು
ಪರಮಾತ್ಮ ಅಂತ ಜೋಳಿಗ್ಯಾಗ ಕೈ ಹಿಡಿದ
ವಿಷ್ಣಾ ಅಂತ ಖರ್ಜೂರ ಫಲ ಹಿಡ್ದ

ಆಗ ಶಿವನೇ ಬಂದಾನ ಮುತ್ತಿನ ಉಡಿಯಾಗ ಒಗದಾನ || ತಂದಾನ ||

ಮುತ್ತಿನ ಉಡಿಯಾಗ ಒಗದ್ರೆ
ಆಗ ಏನು ಒಗದೀನಿ ನೋಡವೇ ತಾಯಿ
ಸ್ವಾಮಿ ಹಿಂದಿನ ಕಾಲದಲ್ಲಿ ದಾಸಪ್ಪ
ಇಷ್ಣ ಬಂದು
ಇಂಥ ಹಣ್ಣೆ ಕೊಟ್ಟಿದ್ದ
ಖರ್ಜೂರಣ್ಣು ಕೊಟ್ಟಿದ್ದಿಗೆ
ಆರು ಮಂದಿ ಮಕ್ಕಳು ಹುಟ್ಟಿದ್ದಿಗೆ
ಆಗ ನನ್ನ ಕೈ ಕೊಟ್ಟಿದ್ದಿಗೆ
ನನ್ನ ಕೈಯಾಗ ಬೆಳೆದಿದ್ದಿಗೆ
ಈಗ ಮದ್ದು ಇಟ್ಟಾಳಂತ
ಮಾವಳೆ ಹಣ್ಣಿದಾಗ ಇಷ ಇಟ್ಟು
ಸುಡುಗಾಡು ರುದ್ರ ಭೂಮಿಗೆ ತಂದು
ಕೆಬ್ಬಿಣ ವರುಸದ ಮ್ಯಾಲೆ
ಕಷ್ಟ ಕೊಟ್ಟು ಹೋದ ಜೀವದವನು
ಸ್ವಾಮಿ
ಖರ್ಜೂರ ಹಣ್ಣಾದ್ರೆ ಹೆದರಿಕೆ ಆಗ್ತೈತಿ
ಮತ್ತೆ ಹ್ಯಾಂಗಮ್ಮ
ಇಲ್ಲಾ ಸ್ವಾಮಿ ಏನನ್ನ ಹಣ್ಣು ಕೊಡು
ಊಟ ಮಾಡ್ತಿನಿ
ಏನಾನ್ನ ಆಧಾರ ಕೊಡು
ಊಟ ಮಾಡ್ತೀನಿ
ಏನನ್ನ ಬೂದಿಪಾದಿ ಕೊಡು
ತಿಂತಿನಿ
ಅಯ್ಯೋ ಗಂಡು ಇದ್ದಾಗ ಹಡೀಲಿಲ್ಲ
ಈ ಗಂಡು ಇಲ್ಲದಾಗ
ಯಾರು ಹಡಿತಾರಮ್ಮ ಈ ಭೂಮಿ ಮ್ಯಾಲೆ
ಗಂಡಿದ್ದವರು ಹಡೇಯೋದೇ ಕಷ್ಟ ಐತಿ
ಗಂಡು ಇಲ್ಲದಂತೆ ಯಾವ ಲೋಕದ
ಹೆಣುಮಗಳು ಹಡಿತಿದ್ದಾಳಮ್ಮ
ಎಂಥ ಹುಚ್ಚು ತಾಯಮ್ಮ
ಇದು ಮಕ್ಕಳು ಆಗೋದಲ್ಲ
ಗುರುಕೊಟ್ಟಿದ್ದು ಗುರು ಮಠ ಸೇರೋದು
ಹಂಗಾರೆ ಊಟ ಮಾಡಲೇನು ಶಿವ
ಏನು ಪರ್ವಾಯಿಲ್ಲ ಊಟಾ ಮಾಡಮ್ಮ
ಆಗ ಏನಂತ ಊಟಾ ಮಾಡಬೇಕು ಸ್ವಾಮಿ
ಎಲ್ಲಾ ದೇವರನ್ನ ಜೀವದಲ್ಲಿ ನೆನ್ಸಕ್ಯಂಡು
ಜೀವೀಶ್ವರ ಅಂತ ಊಟ ಮಾಡು
ಏನ್ರಿ ನನ್ನ ಜೀವದವನು
ಇಷ್ಟು ಕಷ್ಟ ಕೊಟ್ಟಿದವನ್ನ
ಯಾಕ ನೆನಸಬೇಕ್ರಿ
ಆಗೋಯ್ತು ಜೀವಿಶ್ವರ ಅಂಬೋದು
ಗುಟುಕ್ನ ನುಂಗಿ ಬಿಡೋದು ಖರ್ಜೂರ ಹಣ್ಣು
ಅಷ್ಟೇ ಆಗಲಿ ಸ್ವಾಮಿ
ಯಂಥಾ ಕೆಟ್ಟವನೇ ಆಗಲಿ
ಸರಿಬಿಡು ಶಿವ

ಕುಂತಿಯಾ ನಿಂತಿಯಾ ನನ್ನ ಜೀವ ಜಲ್ಮದವನಯ್ಯ
s ಪರಮಾತ್ಮ ಅಂದಾಳ ಗೂಟೂಕ್ನುಂಗ್ಯಾಳ ಜಲ್ಮ || ತಂದಾನ ||

ಹಚ್ಚೇರು ಬಂಗಾರ ಬಿದ್ದಾಂಗಾತು ಜೀವಕ್ಕ
ಓಹೋ ಇನ್ನೇನು ಸ್ವಾಮಿ
ನಾನು ಗುಟುಕ್ನೆ ನುಂಗಿ ಬಿಟ್ಟೆ
ಜೀವಕ್ಕ ಹೋಗಿ ಬಿಡ್ತು
ಆಗ ಇನ್ನ ನಡೀ ಸ್ವಾಮಿ
ಅಯ್ಯೋ ನನ್ನ ಮಠಕ್ಕೆ ಬರುತ್ತೀಯೇನಮ್ಮ
ಮತ್ತೆ ನಡಿ ಸ್ವಾಮಿ
ಹೂವಿನ ಗಿಡ್ಗ ನೀರ್ಹಾಕಿ
ಕಸ ಬಳೀತಿನಿ ನಿನ್ನ ಮಠದಾಗ
ಅಯ್ಯೋ ಮಗಳೇ
ನೀನು ದುಷ್ಠಲೋಕ ಕರ್ಮ ಲೋಕ ಹುಟ್ಟಿದ ಮಗಳು
ಅದೃಶ ಮಾಯವಾಗ್ತಿನಿ ನಾನು
ನೀನು ಆಗ್ತಿಯೇನೇ ದೇವಿ
ಮತ್ತೆ ಹ್ಯಾಂಗ ಶಿವ
ಎರಡು ಪಾದ ಭೂಮಿ ಮ್ಯಾಲೆ ಇಟ್ಟು
ಎರಡು ಕೈ ಜೋಡಿಸಿ
ತೆರೆದ ಕಣ್ಣು ಮುಚ್ಚಲಾರದಾಂಗ
ಮ್ಯಾಕ ನೋಡಬೇಕು
ಕೆಳಗಿದ್ರೆ ಕೆಳಗನೇ ಇರ್ತಿ
ಯಾಗ ಬಿಡ್ತಾನ ಹೂವಿನ ತೊಟ್ಲ
ಯಾಗ ಬರ್ಲಿ ನಿನ್ನ ಮಠಕ ಅಂತ ಮ್ಯಾಕ ನೋಡು
ನನ್ನ ಮನಿಗೆ ನಾನು ಹೋತಿನಿ
ಆಗ ಹೂವಿನ ತೊಟ್ಲ ಆಗಿ ಬಿಡ್ತಿನಿ
ಹೂವಿನ ತೊಟ್ಲದಾಗ ಕುಂದ್ರುವಂತಿ

ನನ್ನ ಮಠಕ ನಾನಮ್ಮ ಜೀವಮಠಕ್ಕ ಹೋಗ್ತಿನಿ ನಾನು
s ಜಲ್ಮ ಮಠಕ್ಕ ಹೋಗ್ತಿನಿ ನನ ಲೋಕದಾಗ ಸಿರಿದೇವಿ ಶರಣು || ತಂದಾನ ||

ಹಂಗಾದ್ರೆ ಶಿವ ಜಲ್ದಿ ನಿನ್ನ ಮಠಕ್ಕೆ ಹೋಗಿ ಜಲ್ದಿ ಬಿಡ್ರಿ
ಅಷ್ಟಾಗಲ್ಲಮ್ಮ ಹೋಗ್ತಿನಂತ

ಅದೃಷವೇ ಮಾಯಾವಾಗ್ಯಾನ ಶಿವ
ಲಿಂಗದೊಳಗೆ ಶಿವನು ಕುಂತನಮ್ಮ
ತೋಥಡಿ ಮಾಳಗಿ ಮ್ಯಾಲೆ ಇನ್ನ ಕುಂತನ
ನಿನ್ನ ಮಗನೇ ತಾಯಿಗಾಗಿ ಅಮ್ಮ || ತಂದಾನ ||

ಮಗ ಹುಟ್ಟಿದ್ರೆ ಏನ್ಮಾಡ್ತಾಳ ನೋಡ್ಬೇಕಂತ
ಲಿಂಗದೊಳಗೆ ಶಿವಾಗಿ ಕುಂತ್ಗಂಡು
ಬೆಳ್ಳಿ ಲಿಂಗದಾಗ ಕುಂತಾನ ಶಿವ
ಈ ತಾಯಿಗೆ ಒಂಭತ್ತು ತಾಸು ಒಂಭತ್ತು ಗಂಟೆ
ಒಂಭತ್ತು ತಿಂಗಳು ಆಗ ಕಳೆದು ಬಿಟ್ಟು

ಒಂದೇ ಗಂಟೆ ಎರಡೇ ಗಂಟೇ ಯಮ್ಮ
ಮೂರು ಗಂಟೆ ನಾಲ್ಕು ಗಂಟೇ ನೋಡಮ್ಮ
ಆಗ ಒಂದು ನೋಡಣ್ಣ ಒಂಭತ್ತು ಗಂಟ್ಯಾಗ || ತಂದಾನ ||

ಒಂಭತ್ತು ಗಂಟೆ ಒಂಭತ್ತು ತಾಸ್ದಾಗ
ಎರಡು ಪಾದ ಭೂದೇವ್ತಿಗಿಟ್ಟು ಎರಡು ಕೈ ಜೋಡಿಸಿ
ತೆರೆದ ಕಣ್ಣ ಮುಚ್ಚಲಾರದಂಗ ಮ್ಯಾಕ ನೋಡ್ತಾಳವ್ವ
ಜೀವದ ಪಟ್ಣಕ್ಕೆ ಯಾಗ ಹೋಗಲಿ
ಜಲ್ಮದ ಪಟ್ಣಕ್ಕೆ ಯಾಗ ಹೋಗಲಿ ಅಂತ

ಆಗ ಮಗನು ನೋಡಮ್ಮಾ
ಶಿವನು ಕೊಟ್ಟಿದ ಮಗಮ್ಮೊ
ಎಡಕ್ಕಲ್ಲಿದ್ದ ಬಲಕ್ಹೊಳ್ಳಿದ
ಹೆದರುಬ್ಯಾಡ ನನ್ನ ತಾಯಿ
ಲೋಕ ನಾನು ಹುಟ್ಟೇನ
ಲೋಕ ನಾನು ನೋಡೇನು
ಕುಪ್ಪಳ್ಸಿ ಹಾರ್ಯಾನ ಇನ್ನು ಕೆಳಗ ಮಗನಾಗಿ || ತಂದಾನ ||

ಕುಪ್ಪಳಿಸಿ ಕೆಳಗ್ಹಾರಿ

ಕ್ಯಾವ್ಕ್ಯಾವ್ಮಗ ಅಂತಾನಮ್ಮ
ಎರಡು ಪಾದ ಅಡೇಲಿ ಮಗ ಒಂದು ವರುಸವನ || ತಂದಾನ ||

ಆಗ ದುಃಖ ಮಾಡ್ತಿದ್ರೆ
ಮ್ಯಾಕ ನೋಡಿ ನೋಡಿ ನಿಲುವು ಕಣ್ಣು ಬಿದ್ದು ಬಿಟ್ಟಾವ
ಬ್ಯಾಸರಿಕೊಂಡು ಕೆಳಗ ನೋಡಿದ್ರೆ
ಕ್ಯಾವ್‌ ಕ್ಯಾವ್‌ ಅಂತಾನ
ಈಗ ಲೋಕ ಹುಟ್ಟಿದ ದುಷ್ಠರಿಗೆ
ಕೆಡಿಸಬೇಕು ಜೀವಕಳಿಬೇಕಂತ ಇರತೈತಿ
ಈ ಪರಮಾತ್ಮ ಶಿವಗೆ
ಜೀವ ಮಠಕ್ಕಂತ ನನಗೆ
ಜೀವಕ ಮಗ ಕೊಟ್ಟು ಹೋದನಲ್ಲ
ಈ ಮಗ ಹುಟ್ಟಿದ್ದು
ನನ್ನ ಗಂಡನ ಕಿವ್ಯಾಗ ಬಿದ್ರೆ
ನನ್ನ ಜೀವ ಕತ್ತರಿಸಿ ಬಿಡ್ತಾನ
ದುಷ್ಠನ ಕೈಯಾಗ ಇನ್ನ ಜೀವ ಕಳಿಯೋ ಬದ್ಲು
ಮುಂಚಾಗ ಮಗನ ಕಡ್ದು
ಮುಂಚಾಗ ಕೊಲ್ಲಿ
ಹಿನ್ನೇಲ್ಲಿ ನಾನು ಸಾಯ್ತಿನಿ ಅಂತ
ಉಟ್ಟಿದ ಸೀರೆ ಕಚ್ಚಿ ಹಾಕಿ
ಮುತ್ತಿನ ಸೆರಗು ನಡುವು ಸುತ್ತಿಕ್ಯಂಡು
ಚಿಕ್ಕ ತಾಯಿ ಸಿರಿದೇವಿ
ಆಗ ಕೆಳಗೆ ಅರಸೋ ಮಗನ್ನ
ಹುಟ್ಟಿದ ಮಗನ್ನ ಎರಡು ಕೈಲಿ ಹಿಡಿದು

ಆಗ ಗಡ್ಗಡ್ಗಡ್ಗಡ್ತಿರುಗಿಸ್ಯಾಳ
ಎದುರು ಗ್ವಾಡಿಗ ಒಗದಾಳ
ಆಗ ಶಿವನ ವರದಲ್ಲಿ ಹುಟ್ಟಿದವ್ನೇ
ನಾ ಸಾಯಲಾರದ ಮಗನಮ್ಮಾ
ಲೋಕ ಹುಟ್ಟಿದ ಮಗನಮ್ಮೋ
ಇನ್ನ ಒಂದ ಜಲ್ಮಕ್ಕೆ
ತೋಥಡಿ ಗದ್ಗದ್ಗದ್ತಿರುಕ್ಯಂತ
ಮಗ ಬಂದ ಜಲ್ಮಕ್ಕೆ
ಆಗ ತಾಯಿ ಮುಂದಕ || ತಂದಾನ ||

ತಾಯಿ ಕೈಯಿಲ್ಹಿಡಕಂಡ್ಳು
ತಾಯಿ ಕೈಯ್ಲಿಹಿಡ್ಕಂಬೊತ್ತಿಗೆ
ಯಮ್ಮಾ ಇವನು ಗ್ವಾಡಿಗ ಒಗದ್ರೆ
ಸಾಯ್ಲಿಲ್ಲಾರಂತ ಮಗ ಕೊಟ್ಟಾನ
ನನ್ನ ಶಿವ ಜೀವಕ್ಕ
ಆಗ ಗ್ವಾಡಿಗ ಒಗದ್ರೆ
ಗಡ್‌ಗಡ್‌ ಅಂತ ತಿರುಕ್ಯಂತ ಬಂದು
ನನ್ನ ಮುಂದೆ ಬರೋತ್ತಿಗೆ ಕೈಲಿ ಹಿಡಕಂಡೆ
ಈಂಗಾದ್ರೆ ಇವನು ಜೀವ ಕಳಿಯೋದಿಲ್ಲ
ಈಂಗಾದ್ರೆ ಇವನು ಜೀವ ಬಿಡೋದಿಲ್ಲ
ಆಗಸರ ಬಟ್ಟೆ ಹ್ಯಾಂಗ ಒಗೀತಾರ ಬಂಡಿಗ್ಹಾಕಿ
ಹಂಗ ಎರಡು ಕಾಲ ಹಿಡ್ಕಂಡು ಬಂಡಿಗ್ಹೋಡಿತಿನಿ
ಇವನ್ನ ತಲೆ ಒಡೆದು ಹೋಗ್ತ
ಆಗ ಹಿಂದೇಲೆ ಎದೆ ಗುದ್ದಿಕ್ಯಂಡು ಜೀವ ಬಿಡ್ತೀನಿ ಅಂತ
ಆಗ ಮಗನ ಎರಡು ಕೈಲಿ ಹಿಡ್ಕಂಡ್ಳು
ಮ್ಯಾಕೆತ್ತಿ ಬಂಡಿಗೆ ಒಗೆಯೋ ಟೈಮಿನಾಗ
ಮಾಳ್ಗಿದಾಗ ಲಿಂಗದೊಳಗೆ ಶಿವಾ ಆಗಿ ಕುಂತಾನ
ಅಲೆಲೆಲೆಲೇ
ಇನ್ನ ಮ್ಯಾಕ ಎತ್ತುವಾಗ ಏನ್ಮಾಡ್ದ

ಮ್ಯಾಲೆತ್ತಿದ್ದಳಮ್ಮಾ ಕೈಯಾಗ ಮಗ ಕಸ್ಕಂಡ || ತಂದಾನ ||

ಕೈಯಾಗಿದ್ದ ಮಗ
ಮಾಳ್ಗಿ ಮ್ಯಾಲೆ ಲಿಂಗದಾಗ ಕುಂತ್ವ್ನು ಶಿವ
ಹಂಗೆ ಕೈಯಾಗಿದ್ದ ಮಗನ್ನ ಹಂಗೆ ಮ್ಯಾಲೆ ಎಳ್ಕಂಡ
ಯಮ್ಮಾ ಜೀವ ಹುಟ್ಟಿದ ಮಗನ್ನ ಬಂಡಿಗೆ ಹೊಡಿತಿ
ಗ್ವಾಡಿಗಿ ಒಗೀತಿ
ಇದ್ದ ಮಗನ್ನನ್ನೇ ಕೊಲ್ಲುಕೊಂಬಾಕಿ
ನೀನು ಅಕ್ಕನ ಮಕ್ಕಳನ್ನ
ಜೋಪಾನ ಮಾಡಿಯೇನಮ್ಮಾ
ಸವತಿ ಮಕ್ಕಳು ಜೀವಗ ಹುಟ್ಟಿದವ್ರನ್ನ
ಜೋಪಾನ ಮಾಡೀಯಾ
ಮದ್ದು ಇಟ್ಟು ಕೊಲ್ಲಿದಾಕಿ ನೀನು
ಈ ಮಗನೆ ಕೊಲ್ಲಾಕಿ ನೀನು
ಅಕ್ಕನ ಮಕ್ಕಳನ್ನ ಸೇರ್ತಿದ್ಯಾ
ಕೇಳವೇ ಸಿರಿದೇವಿ
ಪುಣ್ಯಾತ್ಮ ನಿನ್ನ ಗಂಡ ಜೀವದಲ್ಲಿ
ಕೆಬ್ಬಿಣ ವರಸಿನ ಮ್ಯಾಲೆ
ನೆಗ್ಗಿನ ಮುಳ್ಳಿನ ಮ್ಯಾಲೆ ಮಲಗಿಸ್ಯಾನ
ನನ್ನಂತವನ ಕೈಯಾಗ ನಿನ್ನ ಜೀವ ಇದ್ರೆ
ಉಳ್ಳಾಗಡ್ಡಿ ತರಿದಂಗ ತರಿದು
ಆಗ ಕರೆ ಕಾಗಿಗೆ ಉಗ್ಗುತಿದ್ದೆ ನಿನ್ನ
ಶಿವ ಹಂಥ ಮಾತ ನುಡಿಬ್ಯಾಡ್ರಿ
ನಿನ್ನ ಪಾದಕ್ಕೆ ಶರಣು
ನಾನು ಮದ್ದು ಇಟ್ಟಿದವಳಲ್ಲ
ಈಗ ಮದ್ದು ಇಟ್ಟಿದವಳಲ್ಲ ಅಂತಿ
ಮತ್ತೆ ಮಗನ್ನ ಯಾಕ ಕೊಲ್ತಿ
ಸ್ವಾಮಿ ಗಂಡ ಇದ್ದಾಗೆ ಮಗನ ಕೊಟ್ಟಿಲ್ಲ
ಈಗ ಗಂಡಿಲ್ಲದಂಗೆ ಯಾರನ್ನ ಹಡೀತಾರೇನು
ಸ್ವಾಮಿ ಹೆಣ್ಮಕ್ಕಳು
ನನ್ನ ಗಂಡ ಕೆಟ್ಟದವನು
ಲೇ ಆಗ ಹಡೀಲಾರ್ದೆ ಈಗ ಹ್ಯಾಂಗ ಹಡಿದೆ
ಆಗ ಹುಟ್ಟಲಾರದ ಮಗ ಈಗ ಯಂಗ ಹುಟ್ಟಿದ
ಈ ಸುಡುಗಾಡಾಗ
ಯಾವನಿಗೆ ಹಡ್ದಿ
ಅವನ ಹೆಸರ ಹೇಳ್ತಿಯೋ
ನಿನ್ನ ಜೀವ ಕೊಲ್ಲಲ್ಲೋ ಅಂತಾನ
ದುಷ್ಠದವನ ಕೈಯಾಗ
ಈ ಜೀವ ಕಳಿಯೋ ಬದಲು
ಮಗನ್ನ ಕೊಲ್ಲಿ
ಹಿಂದೇಲೆ ನಾನು ಬಲಗೈಲಿ ಎದೆಗುದ್ದಿಕ್ಯಂಡು
ಜೀವ ಕಳೀಬೇಕಂತ ನಾನು ಮಾಡಿದ್ನೋ ಶಿವಾ
ನಿನ್ನ ಪಾದಕ್ಕೆ ಶರಣು
ಓಹೋ ಅಮ್ಮಾ ತಾಯಿ
ನಾನು ನಿನ್ನ ಭಕ್ತಿ ನೋಡಿ
ಗುಣ ನೋಡಿ
ಆಗ ಮಗನ್ನ ಕೊಟ್ಟಿನೆ ಜೀವಕ್ಕ
ಈಗ ಏನು ಶಂಕೆ ಮಾಡಬೇಡ
ನಿನ್ನ ಜೀವಕ್ಕ ನನ್ನ ಜೀವ ಐತಿ
ಈಗ ಮಗ ಕೊಟ್ಟೀನಿ
ಸಾಯಿಲಾರದಂತ ಮಗ ಕೊಟ್ಟೀನೆ ದೇವಿ
ಸ್ವಾಮಿ ಈ ಸುಡುಗಾಡಾಗ
ಬರೇ ಮನೆಯೊಂದೈತಿ ಮೂರು ಅಂಕಣದ ಮನಿ
ಉಂಬಾಕ ಊಟ ಬೇಕಲ್ರಿ
ಕುಡ್ಯಾಕ ನೀರು ಬೇಕಲ್ರಿ
ಉಟ್ಟಲ್ಲಿಕ್ಕ ಮೈಮ್ಯಾಗ ಬಟ್ಟೆ ಬೇಕಲ್ರಿ
ಹಾಂಗ ಕೇಳಮ್ಮ
ಹಿಡಿಕಿ ಜೋಳಿಗ್ಯಾನ ಕಾಳು ತಗದು
ಮನ್ಯಾಕ ಒಗದ್ರೆ
ಯತ್ತಾಗ ನೋಡಿದ್ರೆ
ಕಾಳೆ ಚೀಲಗೋಳ ಚೀಲ
ಬಗಸಿ ಬಟ್ಟೆ ತಗದು ಒಗದ್ರೆ
ಯಾತ್ತಾಗ ನೋಡಿದ್ರೆ ಬಟ್ಟೆಗಳೇ
ಇನ್ನೆನ್ನಮ್ಮ
ಸ್ವಾಮಿ ಕುಡ್ಯಾಕ ನೀರು ಬೇಕಲ್ರಿ
ಸುಡುಗಾಡಾಗ ಹ್ಯಾಂಗ ಸಿಗುತವರಿ
ಕೆಬ್ಬಣ ನಾಗರ ಕೋಲು ನೇತು ಹಾಕಿ
ಇಬ್ಬರು ಮಣ್ಸೇರ ಉದ್ದ
ಇಬ್ಬರು ಮನುಷ್ಯರು ದಪ್ಪ ಗಡ್ಡೆ ಎಬ್ಬಿಸಿಬಿಟ್ಟ
ಎರಡೇ ಪಾಂಟಿಗೆ
ಎರಡೇ ಪಾದ ಇಡೋದು ವರ್ತಿ ಮಾಡಿದ
ನೀರು ತುಂಬಿಕ್ಯಂಬೋದು
ಟೆಂಗಿನ ಹಾಲು ಇದ್ದಂಗ ಸಿಹಿ ಸಕ್ರಿ ಇದ್ದಂಗ
ಇನ್ನೇಲ್ಲಿಗೆ ಹೋಗ್ತಿಯಮ್ಮ ಮನಿ ಬಿಟ್ಟು
ಸ್ವಾಮಿ ನಾನು ನನ್ನ ಮಗ
ಈ ಸುಡುಗಾಡ್ಯಾಗ ಹ್ಯಾಂಗ ಇರ್ಬೇಕು ಈ ಮನ್ಯಾಗ
ಹಾಂಗ ಕೇಳಮ್ಮ
ನಿನ್ನ ಜೀವ ಮನಸ್ಸಿದಲ್ಲಿ ಏನೇನು ಐತಿ ಕೇಳು
ನಾನು ಕೊಟ್ಟು ಹೋಗ್ವನು ಬಂದೀನಿ
ಸ್ವಾಮಿ ನಾನು ಒಬ್ಬವ್ಳು ಸ್ವಾಮಿ
ಒಂದು ಕೊಳ್ಳಾಗ ರುದ್ರಾಕ್ಷಿ ತಗದು ಹಾಕಿದ್ರೆ
ಒಂದ ದಾಸಿ ಆಗಿ ಬಿಟ್ಟ ಕಸ ಬಳಿಯಾಕಿ
ಇನ್ನ ಮೂವರು ಆದ್ರು
ಮೂರು ಹೊಲಪೆಟ್ಟು ಚಾಂಪೂರ ಪಟ್ಣಕ್ಕೆ
ಸುಡುಗಾಡಿಗೆ
ಇನ್ನೇನು ಭಯಮ್ಮ
ಸ್ವಾಮಿ ಗಂಡಿಲ್ಲದ ಮಗ ಹುಟ್ಟಿದವ್ನಿಗ ಏನಂತ ಹೆಸರಿಡ್ತೀ
ನೀನೆ ಹೆಸರಿಟ್ಟು ಹೋಗು ಸ್ವಾಮಿ
ಹಾಂಗಾರೆ ಗಂಡ ಇಲ್ಲೇನಮ್ಮ
ಹಗಲು ರಾತ್ರಿ ಗಂಡ ನಿನ್ನ ಮುಂದೆ ಇರ್ತಾನೇನು
ಜೀವಕ್ಕಿರಬೇಕಂತ ನಿನ್ನ ಜೀವಕ್ಕ ತಾಳಿ ಕಟ್ಟ್ಯಾನ ಇಲ್ಲಾ
ಗಂಡನ ಜೀವ ನಿನ್ನ ಜೀವದಲ್ಲಿ ಐತ್ಯಾ ಇಲ್ಲ
ಎಲ್ಲೇನ ಇರ್ಲಿ ಗಂಡ
ನಿನ್ನ ಜೀವದಲ್ಲಿ ಐದಾನ ಇಲ್ಲ ನಿನ್ನ ಗಂಡ
ಯಮ್ಮಾ ಜೀವದ ಗಂಡಗ್‌ ಹುಟ್ಟ್ಯಾನ
ಯಾರಿಗ ಹುಟ್ಟಿಲ್ಲಾ
ಸ್ವಾಮಿ ಈ ಮಗನ ಓದು ಹ್ಯಾಂಗ
ಈ ಸುಡುಗಾಡಾಗ
ಈ ಮಗನಿಗೆ ಏನಂತ ಹೆಸರಿಡಬೇಕು
ನೀನೇ ಇಟ್ಟು ಹೋಗಬೇಕು ಸ್ವಾಮಿ
ಸರಿ ಬಿಡು ತಾಯಿ
ಅತ್ತಾಗ ಇತ್ತಾಗ ತಲೆಗೊಬ್ರು ಕಡಿ ನಿಂತುಕೊಂಡು
ಶಲ್ಲೇವು ಹಿಡ್ಕಂಡು ನಿಂತ್ಕೋರಿ
ಮುತ್ತಿನ ಸೆರಗು ಹಾಸ್ರಿ
ಇಗೋ ಮಗನ ಬಲಗೈಲಿ ಹಿಡ್ಕಂಡು
ಒರ್ತಿ ತಣ್ಣೀರಾಗ ಅದ್ದು ಬಿಟ್ಟ
ಹುಟ್ಟಿದ ಹುಡುಗನ್ನ ಶಿವ
ಇಟ್ಟು ನ್ಯಾಲಿಗೆ ಮ್ಯಾಲೆ ಮೂರು ಅಕ್ಷರ ಬರೆದು ಬಿಟ್ಟ ಅಷ್ಟೇ
ಏನಂತ ಬರೆದ
ಸರಸ್ವತಿ ಓ ನಮಃ ಕಾಗುಣಿತ ಅಂತ ಬರ್ದ
ನೋಡಮ್ಮಾ
ಇಂಗ್ಲಿಷು ಮರಾಠಿ ಬಿದಿ ಓದೋನು
ಇವ್ನ ಮುಂದೆ ತಟಾದು ಹೋಗಂಗಿಲ್ಲ
ಕೈ ಮುಗಿದೇ ಮುಂದಕ್ಕ ಹೋಗಬೇಕು
ಯಮ್ಮಾ ಏನಂತಿ ಅಂತಾ ಮಗನ್ನ ಕೊಟ್ಟಿಲ್ಲ
ಅಂತಾ ಆ ಶಿವಾ ಏನಂತ ಹೆಸರಿಡ್ತಾನ

ಸುಡುಗಾಡು ರುದ್ರಭೂಮಿ
ಸಿರಿದೇವಿ ಮಗನಮ್ಮ ಲೋಕಕ್ಕೆ ಶರಬಂದ
s ಯಾವ ಲೋಕ ನೋಡಿದರೆ
ಶರಣು ಶರಣು ಅನಬೇಕು ಮಗನಿಗೆ || ತಂದಾನ ||

ಹೆಣ್ಣು ಗಂಡು ಆಗಲಿ ಶರಣು ಶರಣು ಅನ್ನಬೇಕು
ಸುಡುಗಾಡು ರುದ್ರಭೂಮಿದಾಗ
ಸಿರಿದೇವಿ ಮಗ ಶರಣಪ್ಪ ಅಂತ ಹೆಸರಿಟ್ಟ
ಶರಮಂಧ ಅಂತ ಹೆಸರಿಟ್ಟಿದ ಮ್ಯಾಲೆ
ಇನ್ನೇನಮ್ಮ ಉಡಿಯಾಗ ಒಗಿದಿನಿ ಹೆಸರಿಟ್ಟು
ಇನ್ನೇನನ್ನಾ ಕೇಳ್ತಿಯಾ ಕೇಳಮ್ಮ
ಇಲ್ಲ ಸ್ವಾಮಿ ಎಲ್ಲಾ ಜೀವಕ್ಕ ಸುಖ ಕೊಟ್ಟೀ ಸ್ವಾಮಿ
ಹೋಗೋ ಜೀವ ಉಳಿಸಿದೊನು
ಜೀವಕ್ಕೆ ಸುಖ ಮಾಡಿದಿ ಸ್ವಾಮಿ
ಇನ್ನ ಹೋಗಲೇನಮ್ಮ ನನ್ನ ಮಠಕ್ಕೆ
ಹೋಗು ಸ್ವಾಮಿ ನಿನ್ನ ಮಠಕ್ಕೆ ಅಂದ್ಳು