ಯಮ್ಮಾ ಹಡೀಲಾರ್ದೆ ನಾವು ಬಂಜಿರಾದೆವಲ್ಲೇ
ಗೊಡ್ಡೊಳು ಕೈಗೆ ಒಯ್ದು ಕೊಡ್ತಾನಮ್ಮ
ತಂಗಿ ಬಂಜಿರವರಳಿಗೆ ಒಯ್ದು ಕೊಡ್ತಾನಮ್ಮ
ನಮ್ಮಕ್ಕಳನಾಗಿ

ಯಮ್ಮ ಮಲಿ ಹಾಲಿ ನಮಗೆ ನಿಂದ್ರಿಸಲಾರಿರಿ
ಯಂಗೆ ಮಾಡನಾ ಲೋಕಗೆ ಈಗ ನಾವು ಬಾಯಿ ಬಡದಾರ ಒದ್ದುತಾನ
ನಮ್ಮ ಜೀವನ ನಮಗೆ || ತಂದಾನ ||

ಈಗ ನಾವು ಬಾಯಿ ಬಡದರ
ನಮ್ಮ ಬಾಯಿಮ್ಯಾಲೆ ಒದ್ದಬಿಡ್ತಾನ
ನಮ್ಮ ಜೀವಗೆ
ನಮ್ಮ ಜೀವಕ್ಕೆ ಒದ್ದುಬಿಡ್ತಾನ
ಹ್ಯಾಂಗ ಮಾಡ್ಬೇಕೆ ತಾಯಿ
ಆಗ ಹೊಟ್ಟಿವಳಗ ದುಃಖ ಮಾಡುತ್ತಾರ ಅವರು
ಆರುಮಂದಿ ಎತ್ತಿಕ್ಯಂಡು
ಚಿಕ್ಕೆಂಡ್ತಿತಲ್ಲಿ ಅಗಸಿ ಹೊರಕ್ಕ ಬಂದುಬಿಟ್ಟ ಕಾಂಭೋಜರಾಜ
ಅಗಸಿ ಹೊರಾಗ ಮನೆ ಇರೊದು
ಮೂರು ಅಂಕಣ ಮನಿ
ಸಿರಿದೇವಿ ಮನಿಯಾಗಲಿದ್ದ ನೋಡುಬಿಟ್ಳು
ಜೀವದೋನು ಬರ್ತಾನಂತ ಚೆರಿಗಿ ನೀರ ಹಿಡ್ಕಂಡು
ಬಾಕಲಿಗ ಬಂದು ಅಡ್ಡ ನಿಂತ್ಕಂಡ್ಳು
ಏನ್ರೀ ಜೀವದವ್ನೇ
ಈಗ ನೀರು ತಗಂಡು ಜೀವಕ್ಕ ತೊಳಿರಿ
ಕೇಳವೇ ಈಗ ನನಗ ಈ ನೀರು ಬ್ಯಾಡ
ಈಗ ಹಡದವ್ರು ನಿಮ್ಮ ಅಕ್ಕನವ್ರು
ಜೋಪಾನ ಮಾಡಾಕಿ ನೀ ತಂಗಿ
ಈಗ ದೇವರು ಮಕ್ಕಳು ದಾನ ಕೊಟ್ಟವ್ನು
ದಾನನೇ ಕೊಡಬೇಕಂತೆ
ಈಗ ನೀನು ಜೋಪಾನ ಮಾಡಬೇಕಂದ
ನೋಡ್ರಿ ಕುರುಡಾಗ್ಲಿ ಕುಂಟಾಗ್ಲಿ
ನನ್ನ ಜೀವಕ್ಕ ಹುಟ್ಟಬೇಕು
ನನ್ನ ಕೈಯಾಗ ಬೆಳಸಬೇಕು
ಅವರು ಒಂಬತ್ತು ತಿಂಗಳು
ಹೊಟ್ಟ್ಯಾಗಿಟ್ಟುಕೊಂಡು
ಬೇಳಿಸ್ಕಂಡಿದೋರು
ಈಗ ಹಡೆದವರು ಕಷ್ಟಪಡದು
ಏನ್ರಿ ಅವರಿಗೇ ಕೊಡು
ನನಗ ಬ್ಯಾಡ
ಅವರು ಮೊಲಿ ಹಾಲಿ ನಿಂದ್ರಿಸಲಾರ್ದ
ಅವರು ಬೈದ್ರ ಯಾರಿಗೆ ಬಡಕೋಬೇಕ್ರಿ
ಬ್ಯಾಡ ಒಬ್ರ ಐಯ್ಯೋ ಎನಿಸಬಾರದು ಜೀವನ
ಕೇಳವೇ ನನ್ನ ಮಾತು ಕೇಳ್ತಿಯಾ ಇಲ್ಲ
ಇಲ್ರಿ ಈ ಮಾತು ಕೇಳಂಗಿಲ್ಲ
ಸರಿ

ಗಣಿಸಿಗೆ ಎದುರಾಡವಳೆ ನೀನು ಹೆಣಸಲ್ಲ ನನಗಾಗಿ
s ನನ್ನ ಮಾತು ಕೇಳಿದರೆ ನೀನು ಕೇಳಿದಂಗೆ ಲೋಕಕ್ಕೆ || ತಂದಾನ ||

ಕೇಳವೇ ನನ್ನ ಮಾತು ಕೇಳಿದ್ರೆ ಕೇಳಿದಂಗ
ಕೇಳಇದ್ರೆ ಇಲ್ಲ
ಇಲ್ರೀ ನಿಮ್ಮ ಮಾತ ಕೇಳಂಗಿಲ್ಲ
ಏ ಆರುಮಂದಿ ದಾಸಿದವರೆ
ವರಸಮ್ಯಾಲೆ ಒಗೆದು ಹೋಗ್ರಿ
ಆರುಮಂದಿ ಮಕ್ಕಳನ್ನೂ
ವರಸೆಮ್ಯಾಲೆ ಒಗದ್ರೆ

ಕ್ಯಾವ್ಕ್ಯಾವ್ಕ್ಯಾವ್ಅಂತಾರ
ಆರುಮಂದಿ ಮಕ್ಕಳು ನೋಡಮ್ಮ || ತಂದಾನ ||

ಸಣ್ಣಿಗೆ ಮಕ ಮಾಡಿಕ್ಯಂಡು
ಆಗ ಮನಿಗ ಹೋದ ಆತ
ಆಗ ರಾಜ ಕಛೇರಿಗೆ ಬಂದು ರಾಜ ಕುತ್ಗಂಡ
ಆಗ ಆರುಮಂದಿ ಹೆಣ್ಣುಮಕ್ಕಳು
ಈಗ ವತ್ಗಂಡು ಬಂದಿದ್ದ ದಾಸಿದವ್ರು
ಆರುಮಂದಿ ಇನ್ನು ಅವರ ತಾಯೋರು
ಮನಿಗ ಹೋದ್ರು
ಹೊರ್ಸ ಮ್ಯಾಲ ದುಃಖ ಮಾಡ್ತಾರ
ಮಂಕನದೇವಿ ಮಾಡಲ್‌ದೇವಿ
ರತ್ನಾಲದೇವಿ ಸೂರಮ್ಮ ದೇವಿ
ಸುಂಕಮ್ಮದೇವಿ ಸೂರಮ್ಮ ದೇವಿ
ಆಗ ಹೊರ್ಸ ಮ್ಯಾಲ ಬಿದ್ದು
ದುಃಖ ಮಾಡ್ತಾರ
ಇವ್ರು ಕ್ಯಾವ್‌ ಕಾವ್‌ ಅರಸ್ತಿದ್ರೆ
ತಾಯಿ ಚಿಕ್ಕ ಆಯಮ್ಮ
ಮಕ್ಕಳಿಲ್ದಾಕಿ ಸಿರಿದೇವಿ ನೋಡ್ದಳು
ಒಬ್ಬ್ರಿಗೆ ಕನಕರ ಹುಟ್ತದ ಜೀವಕ್ಕ
ಒಬ್ಬೊಬ್ರಿಗೆ ಬಂಜರಿಗ
ಕನಕರ ಹುಟ್ಟಂಗಿಲ್ಲ ಮಕ್ಕಳ ಮ್ಯಾಲೆ
ಯಮ್ಮಾ ಈಗ ನಮ್ಮಕ್ಕನಿಗಾದ್ರು ಒಂದೇ
ನನ್ನ ಜೀವಕ್ಕಾದ್ರು ಒಂದೇ
ಈಗ ಯಾವತ್ತಿಗೆ ಜೀವದ ಗಂಡಗೆ ಎದುರು ಕೊಟ್ಟಿಲ್ಲ
ಇವೊತ್ತು ಎದುರಾಡಿದೆ ಜೀವಕ್ಕ
ಈ ಮಕ್ಕಳು ಬಿಸ್ಹಾಕಿ ಹೋದ್ರು
ಕ್ಯಾವ್‌ ಕ್ಯಾವ್ ಅಂತಾವ
ನಾನ ಕಣ್ಣಿಲಿ ಹ್ಯಾಂಗ್ ನೋಡ್ಲಿ ಅಂತ
ಕೇಳೆ ಮನಿ ದಾಸಿದವ್ಳೆ
ಹಾಲು ಕಾಯ್ಸಿಕಂಡು
ಹಾಲು ಸೋಸಿ

ಆಗ ಸೌಟಿಲಾಗಿ ತುಂಬಿಕ್ಯಂಡು ಮಕ್ಕಳಿಗೆ ನಾವು ಕುಡಿಸೋಣ
ಮಕ್ಕಳಿಗಾಗಿ ಸೌಟಿಲಿ ಕುಡಿಸ್ತಾರಾ
ಒಬ್ಬೊಬ್ರಗಿ ಇನ್ನುವಾದರೆ ಜಾಮ್ಜಾಮ್ವಣ್ಣ || ತಂದಾನ ||

ಹಾಲು ಕುಡುಸೋ ಹೊತ್ತಿಗೆ
ಕಪ್ಪೆ ಹೊಟ್ಟೆ ಊದಿಕ್ಯಂಡಂಗ ಊದಿಕ್ಯಂಡ್ವು
ಆರುಮಂದಿಗಿ ನೀರು ಕಾಸಿ
ಆಗ ಎಣ್ಣೆ ಹಚ್ಚಿ
ಮಕ್ಕಳಿಗೆ ನೀರ್ಹಾಕ ಹೊತ್ತಿಗೆ ಬಿಸಿನೀರು
ಆಗ ಮಕ್ಕಳನ್ನಾಡ ಹಡದ ತಾಯೋರು ಬಗಲಾಗ
ಕೈಯಾಗ ಕ್ಯಾವ್ಯಕ್ಯಾವ್‌ ಅಂತಾವ
ವರಸಮ್ಯಾಲೆ ಮಲಗಿಸಿದ್ರೆ
ಹತ್ತಿನ ದಿಂಡುಮ್ಯಾಲೆ
ಮಿಸುಕಲಾರದಂಗ ನಿದ್ದೆ ಮಾಡಿಬಿಟ್ರು
ಆಹಾ ನನ್ನ ಜೀವದವ್ನು ಬರ್ತಾನ
ಈಗ ಹಾಂಗ ಮಾಡ್ಬೇಕಂತ
ಆಗ ಬಾಕ್ಲು ಮುಂದೆ ಕುತ್ಕಂಡು ನೋಡತಿದ್ರೆ
ಅವಳು ಬಂಜಿರದವಳು
ಆರುಮಂದಿಗ ಕೊಟ್ಟ
ಅವಳಿಗಿ ಕೊಡಲಿಲ್ಲಲ್ಲ
ಮಕ್ಕಳು ಸಲುವುತಾಳೋ
ಇಲ್ಲದ್ರೆ ವರಸಿಮ್ಯಾಲೆ
ಮಕ್ಕಳುನ ಅಳ್ಸತಾಳೋ
ಅಳಸತಿದ್ರೆ
ದುಃಖ ಮಾಡ್ತಿದ್ರೆ
ಅವ್ರು ಮಕ್ಕಳು ಒಯ್ದು
ಅವ್ರಿಗೆ ಕೊಟ್ಟುಬಿಡ್ತೀನಿ ಅಂತ

ಮತ್ತೆ ತಿರುಗ ವಾಪಸು ಬರುತಾನ
ಹೆಣುಮಕ್ಳು ಗುಣ ಹ್ಯಾಂಗ ವೈತಾವಂತ
ಬರುತಾನಂತ ನೀರು ತಂದಾಳ ಬಾಕಿಲಿಗಡ್ಡ ದೇವಿ ನಿಂತಾಳ
ಹಿಡಿರಿ ನನ್ನ ಸರ್ವ ತಪ್ಪುರೀ ನಿನ ಪಾದಗೆ ಶರಣು || ತಂದಾನ ||

ಕೇಳವೇ ಈಗ ಅಂದ ಮಾತು
ಆಗ ಅಂದಿದ್ರೆ
ನನ್ನ ಜೀವ ಎಷ್ಟು ವೃದ್ಧಿ ಆಗ್ತಿತ್ತು
ಎಷ್ಟು ಶಾಂತಿ ಆಗ್ತಿತ್ತು
ಕೇಳವೇ ನಮಗೆ ಮಕ್ಕಳಿಲ್ಲದಿದ್ರೇನ
ಈಗ ಮಂದಿ ಮಕ್ಕಳ ತಂದು
ಹಾಲ್ಹಾಕಿ ನೀರ್ಹಾಕಿ ಬೆಳೆಸಿದ್ರೆ
ಸತ್ರೆ ಕುಣಿ ಇಳಿತೈತಿ
ಜೀವಕ್ಕೆ ದಾರಿ ಸಿಗುತೈತಿ
ಕೇಳವೇ ಹರಿ ಪಾಪನ್ನ ಬರ್ಲಿ
ಧರ್ಮನ್ನ ಬ್ರ್ಲಿ ಕರ್ಮನ್ನ ಬರ್ಲಿ
ಈ ಮಕ್ಕಳ ಕಾಲಾಗ
ಜೀವ ಹೋದ್ರ ಚಿಂತಿಲ್ಲ

ಅಕ್ಕನ ಮಕ್ಕಳಲ್ಲ ನನ್ನ ಮಕ್ಳು ಶಿವ
ಮಕ್ಕಳಾಗಿ ನಾನು ಬೆಳಸಿ ಬಿಡುತೀನಿ ಅಯ್ಯ
ನಿನ್ನ ಮಾತಿಗೆ ಎದುರುಮಾತು ಕೊಡಂಗಿಲ್ಲ || ತಂದಾನ ||

ಮೂರು ಸರ್ತಿನೆ ಹಾಲು ಕುಡಿಸ್ತಾಳ
ಹೊತ್ತು ಮುಳುಗೊತ್ತಿಗೆ
ಮೂರು ಸರ್ತಿನೆ ಮೈ ತೊಳಿತಾಳ
ಯಾಗ ನೋಡಿದ್ರು ತೊಟ್ಲುದಾಗ ಹಾಕೋದು
ತೊಟ್ಲುದಾಗ ಹಾಕಿಬಿಟ್ಳು || ತಂದಾನ ||

ಆರುಮಂದಿ ತೊಟ್ಲ ಮಾಡ್ಸಿ
ತೊಟ್ಲ ತೊಟ್ಲ ಜೈಂಟು
ಆರು ತೊಟ್ಲಿಗ ಒಂದೇ ಸರಪಣಿ
ಒಂದೇ ಸರಪಣಿ ಎಳದ್ರೆ
ಆರು ತೊಟ್ಲ ಲೈನ್‌ ತೂಗಬೇಕು
ಆಗ ತೊಟ್ಲದಾಗ ಹಾಕಿ
ಬೆಳ್ಳಿ ಉಡುದಾರ
ಕಿರುಬೆರಳಿಗೆ ಬಂಗಾರದುಂಗ್ರ
ದಡೆವು ಮಲ್ಲಿಗೆ ಹೂ ಹಾಕಿ
ಏನಮ್ಮಾ ದಾಸಿದವಳೆ ಮನ್ಯಾಗಿರಾಕಿ
ಈಗ ನಮ್ಮ ಅಕ್ಕನವ್ರುನ್ನ ಕರ್ಕಂಡು ಬಾರಮ್ಮ
ಏನ್ರಿ ಒಂಭತ್ತು ತಿಂಗಳ
ಆಗ ಹೊಟ್ಟ್ಯಾಗಿಡ್ಕಂಡು ಹಡೆದ್ರವ್ರು
ಹುಟ್ಟಿದ ಮೂರುಗಂಟಿಗೆ ಮಕ್ಕಳ್ನ
ನನ್ನ ಕೈಗೆ ತಂದು ಕೊಟ್ರಿ
ಆಗ ನಾನಂದ್ರೆ ಜೀವದಲ್ಲಿ ತಿಳಿವಳಿಕೆ ಇದ್ದಾಕ್ಕಿ
ಈಗ ನಮ್ಮ ಅಕ್ಕನವ್ರ ಕರೆ ಕಳ್ಸಿಲಿಲ್ಲಂದ್ರೆ
ಮುಂದಕ ಏನಂತ ಮಾತ ಬರ್ತೈತಿ
ಕೇಳಮ್ಮಾ
ಎಂಜಲು ಹಾಲ ಕುಡದಂತಾಕಿ
ಒಂದು ತಾಯಿಗ್ಹುಟ್ಟಿ
ಒಂದು ಗಂಡನ್ನ ಮಾಡಿಕ್ಯಂಡಿವಿ
ಹೆಸರಿಡಕ್ಕಾನ್ನ ಕರಿಲಿಲ್ಲ
ಎಂಥಾ ಗೊಡ್ಡು ಅವ್ಳು ಕರ್ಮಿಷ್ಟೆ ಅಂತಾರ
ಏನ್ರಿ ಬಂದ್ರೂ ಒಳ್ಳೆದೆ ಬರಲಿದ್ರೂ ಒಳ್ಳೆದೇ
ಮುಂದಕ ಮಾತು ಸಿಬ್ಬೇಕ್ರಿ ನಮ್ಮ ಜೀವಕ
ಸರಿ ಬಿಡಬ್ಬೇ
ಹೋಗಮ್ಮಾ ಕರ್ಕಂಡು ಬಾ ಹೋಗು
ಯಮ್ಮಾ ಆರುಮಂದಿ ಅಕ್ಕತಂಗ್ಯೋರೆ
ನಿಮ್ಮ ತಂಗಿ ಜೋಪಾನ ಮಾಡಾಕಿ
ನಿಮ್ಮ ಜೀವಗುಟ್ಟಿದ ಮಕ್ಕಳಿಗೆ
ಈಗಿನ್ನ ಹೆಸರಿಡ್ತಾರಂತೆ ಬರಬೇಕಮ್ಮ
ಅಂದ್ರೆ ಬಂದ್ರೆ ಬರಬೇಕು
ಇಲ್ಲಂದ್ರೆ ನಾ ಬರಾದಿಲ್ಲ ಅನ್ನಬೇಕು

ಯಮ್ಮಾ ಗೊಡ್ರಾಗಿ ನಾವು ಕುಂತುಕಂಡಿವಮ್ಮಾ
ಬಂಜೆರಾಗಿ ನಾವು ಮನ್ಯಾಗಿದ್ದೀವಮ್ಮಾ
ಕೊಲ್ಲಹಡ್ಡಗೊಡ್ಡೋಗಳಿಗೆ ಕೊಟ್ಟಿವಮ್ಮಾ || ತಂದಾನ ||

ಯಮ್ಮ ತೊಟ್ಲಕಟ್ಲಿದ್ರೆ ಸುಡಗಾಡಿಗೆ ಒಯ್ದು ಇನ್ನವಾಗಿ ಮಕ್ಕಳ ಇದಲಿ
ಹಡದ ದಿವಸವೆ ಮಕ್ಕಳು ಸತ್ತುಹೋಗ್ಯಾರ
ನಮ್ಮ ಜೀವಕ್ಕಾಗಿ || ತಂದಾನ ||

ಯಮ್ಮಾ ಕೊಲ್ಲಡದು
ಗೊಡ್ಡೋಳಿಗೆ ಕೊಟ್ಟಾರ
ನಾವು ಹಡಿಲಾರ್ದೆ ಬಂಜೀರಾಗೇವಿ
ಈಗಿನವ್ರು ತೊಟ್ಲ ಕಟ್ಟಲಿದ್ರೆ
ಇವತ್ತೆ ಸುಡುಗಾಡಿಗೋಗ್ಯಾರಂತ
ನಾವು ತಿಳಿಕಂಡಿವಿ ತಾಯಿ
ಏಯಮ್ಮ ಕಂಡ ದೇವರಿಗೆ ಕೈಮುಗುದ
ಆಗ ಇನ್ನ ಗಿಡುಗಳು ಹಾಕಿಬಿಟ್ಟ
ಗಿಡುಗಿಡುಗಿ ನೀರು ಹಾಕಿಬಿಟ್ರು
ಈಗ ಹನ್ನೆರಡು ವರ್ಷ ಒಳಗೆ
ಆರು ಮಂದಿ ಮಕ್ಕಳು ಹುಟ್ಟ್ಯಾರ
ಯಮ್ಮಾ ಯಂಥಾ ಮಾತುಗಳು ನುಡಿತಿರಿ ತಾಯಿ
ಈಗ ನಿಮ್ಮ ಜೀವದ ಗಂಡ ಕೇಳಿಬಿಟ್ರೆ
ನಿಮ್ಮ ಜೀವನೇ ಕಳಿತಾನ
ಆಗ ಕೇಳವೇ
ನೀನು ತಾಯಿ ತಂದಿ ಕುಲಕ್ಕೆ ನೆಟ್ಟಗೆ ಹುಟ್ಟಿದ್ರೆ
ನೀನು ಹೋಗಿ ಹೇಳೇ ತೀರಬೇಕು
ಈ ಮಕ್ಳ ಕಾಲಾಗ ಜಲ್ಮ ಕಳಕಂಡ್ರು ಚಿಂತಿಲ್ಲ
ಸರಿ ಹಂಗಾದ್ರೆ
ನಾನು ಕುಲಕ್ಕೆ ಹುಟ್ಟಿದ್ರೆ ಬೇಸಿ ಹೇಳ್ಬೇಕು
ಇಲ್ಲಂದ್ರೆ ಇಲ್ಲವಾ
ಈಗ ನಿಮ್ಮ ಜೀವಗ್ಹುಟ್ಟಿದ ಮಕ್ಕಳು
ಈಗ ಜೀವನೇ ಕಳೀಸ್ತಿನಂತ

ಆಗ ಬಡಬಡ ಮನಿಗ ಬಂದಳಮ್ಮ
ಶರಣ್ರಿ ನಿನ್ನ ಜೀವಕ್ಕೆ ಇನ್ನ ಮನೆ ದಾಸಿದವಳ್ದು || ತಂದಾನ ||

ಶರಣ್ರಿ ನಿನ್ನ ಜೀವಕ್ಕ
ಏನಮ್ಮಾ ಮನಿ ಕೆಲಸ ಮಾಡಾಕಿ
ಏನಿಲ್ರಿ ನೀವು ಕೋಡೋ ಸಂಬಳ ಬ್ಯಾಡ
ನಿಮ್ಮ ಕೂಟ ಅನಿಸ್ಕೊಂಬುದು ಬ್ಯಾಡ
ಯಾರಂದ್ರಮ್ಮಾ ನಿನ್ನ
ಇಲ್ರಿ ನಿಮ್ಮ ಆರು ಮಂದಿ ದೊಡ್ಡ ಹೆಂಡ್ರು
ಹಡಿಲಾರ್ದ ಬಂಜೀರೋಳು ಕೈಗಿ ಕೊಟ್ಟಾರಂತೆ
ಈಗ ಹಡೆದಿದ್ದ ದಿವಸ
ಸತ್ತು ಹೋಗ್ಯಾರಂತ ತಿಳ್ಕಂಡಾರಂತೆ
ತೊಟ್ಲು ಕಟ್ಟಲಿದ್ರೆ ಸುಡುಗಾಡಿಗೆ ಒಯಿಯಂದ್ರು

ಪಟ ಪಟ ಪಟ ಹಲ್ಲು ಕಡಿದಾನ
ಬಿಳೇದುಡ್ಡಿಗೆ ರಕ್ತ ವಿಳಸ್ಯಾನ
ರಂಡೆದವರು ರಂಡೆ ಮಾತುನುಡಿದರೆನೋ
ಕರ್ಮದಗೆಡಿಯವ್ರು || ತಂದಾನ ||

ಅಂತ ಆರುಎತ್ತಗೊಳ ಬಾರಕೋಲು
ಹೆಣ್ತಿರಿಗೆ ಹಾಕುವಾಗ
ಚಿಕ್ಕ ತಾಯಿ ಸಿರಿದೇವಿ
ಗಂಡನ ಪಾದ ಒಡ್ಡಿ ಬಿಟ್ಟು
ಮುತ್ತಿನ ಸೆರಗಾಸಿ ಸೆರಗೊಡ್ಡಿ ಬಿಟ್ಳು
ಏನ್ರಿ ಈಗ

ಅಕ್ಕನವರು ಬಡಿಯೋ ಬದಲು ನನ್ನ ಜೀವ ನೀನು ಬಡಿಯಯ್ಯಾ || ತಂದಾನ ||

ನೋಡ್ರಿ
ಒಂಬತ್ತು ತಿಂಗಳು ಹೊಟ್ಟ್ಯಾಗಿಟ್ಟುಕೊಂಡು
ಹಡೆದವ್ರು ಮಲಿಹಾಲ ನಿಂದ್ರಿಸಲಾರ್ದ
ಬಾಯಿಗೆ ಬಂದಗೆ ಬೈಯ್ತಾರ
ಹೊಟ್ಟಿ ಉರಿತೀರ್ತೈತಿ
ಬೈತಾರ ಮಣ್ಣು ತೂರ್ತಾರ
ಬೈದ್ರೆ ಗಾಳಿಗೆ ಹೋಯ್ತು
ತಿಂದ್ರೆ ಹೊಟ್ಟ್ಯಾಗ ಹೋಯ್ತು
ಬಡಿದ್ರೆ ಮೈ ನೋವಾಯ್ತು
ಏನ್ರಿ ನಮ್ಮ ಮಕ್ಕಳೆಲ್ಲಾ ಸಾಯ್ತಾರೇನ್ರಿ
ಅವರು ಸತೋಗಂದ್ರೆ ಸತ್ತೋಗ್ತಾರೇನ್ರಿ
ಈಗ ಅಕ್ಕನೋರ್ನ ಬಡಿಯೋ ಬದಲು
ನನ್ನ ಬಡಿರಿ ಅಂಬೋತ್ಗೆ
ಕೇಳವೇ ನಿಮ್ಮ ಅಕ್ಕನವರು ನಿನಗೆ ಸೇರಂಗಿಲ್ಲ
ನಿನ್ನ ಅಕ್ಕನವರ್ಗೆ ಬಡಿದ್ರೆ ನಿನಗ್ಯಾಕ
ಇಲ್ರಿ ನಾನು ಬಡಿಸಿದಂಗಾಗ್ತೈತ್ರಿ
ಬ್ಯಾಡ್ರಿ ಅಂಬೋತ್ತಿಗೆ
ಕೇಳ್ರಿ ನಿನ್ನ ಜಲ್ಮಕ ಹುಟ್ಟಿದವ್ರು
ಮುಂದಕ ಇಂಥಾ ಮಾತು ಬರತೈತಿ ಅಂತ
ನಾನು ಇನ್ನ ಹೇಳಿ ಖಳಿಸಿದಿನ್ರಿ
ಏನ ಅಂಬ್ತಾರ
ಕೇಳಮ್ಮ ಆಗ ನಮ್ಮನ್ನ ಕರೆ ಕಳ್ಸಿಲ್ಲವೇ?
ಅಂತಾರ
ಯಮ್ಮಾ ಆಳಿಟ್ಟು ಕಳಿಸಿದ್ರೆ ನೀವು ಬರ್ಲಿಲ್ಲ
ನಾವೇನು ಮಾಡಾನ ದೇವಿ ಅಂತ
ಮುಂದಕ ಅಂಬಾಕಿರತೈತ್ತಿರಿ
ಸರಿಬಿಡು ಬಾಮ
ಮತ್ತ ಎನಂತ
ನಿನ ಜೀವಕ್ಕೆ ತಿಳಿದಾಂಗೆ ಇಡ್ರಿ
ಮಕ್ಕಳಿಗೆ
ಅಂದ್ರೆ ಹಾಲುಗೊಲ್ರವನು ಕಾಂಭೋಜರಾಜ
ನಮ್ಮ ಜೀವಕ್ಕ ಹುಟ್ಟಿದವ್ರು
ಆಯಿತ್ವಾರ ಹುಟ್ಟಿ ಮಕ್ಕಳಿಗ ಏನಂತ ಹೆಸರಿಡ್ತಾನ

ನಾಗ ಚತ್ತಿರಿ ದೇವಚತ್ತರಿ ಅಪ್ಪ
ಕುಲಚತ್ತಿರಿ ಕುಲಮರಿಯಾದೆ ಕಳೆಯವ್ರು
ಯೋಗಚತ್ತರಿ ಭೋಗ ಚತ್ತರಿ ಮುನಿ ಚತ್ತರಿ ಅಪ್ಪ || ತಂದಾನ ||