ಆರು ಮಂದಿ ನಾಗ ಚತ್ತಿರಿ
ದೇವ ಚತ್ತಿರಿ ಕುಲಚತ್ತಿರಿ ಮುನಿಚತ್ತಿರಿ
ಯೋಗ ಚತ್ತಿರಿ ಭೋಗಚತ್ತಿರಿ
ಮರಿಯಾದ ಚತ್ತರಿ ಇಲ್ಲದ
ಮರಿಯಾದ ಕಳೆಯೋರು ಅಂತ ಹೆಸರಿಟ್ಟ
ಹಾಲು ಹಾಕುವ ಒಬ್ಬ ದಾಸಿನ ಮಾಡ್ದ

ತೊಟ್ಲ ತೂಗಕಿನ್ನ ಒಬ್ಳನ್ನ ಮಾಡಿದ

ಮಕ್ಕಳ ಯಂಗಾನೆ ಜೋಪಾನ ಮಾಡವರೋ
ಒಂದು ತಿಂಗಳ ಎರಡು ತಿಂಗಳಮ್ಮಾ
ಮೂರು ತಿಂಗಳ ಐದು ತಿಂಗಳಮ್ಮಾ
ಕೆತ್ತಿದಾಂಗ ಮಕ್ಕಳು ಬೆಳೆದರಮ್ಮಾ
ಕೊಬ್ಬು ಬೆಳದಾಂಗೆ ಬೆಳೆದ್ರು || ತಂದಾನ ||

ಆಗ ಮಕ್ಳು ಬೆಳೆದಮ್ಯಾಲೆ
ಸಿರಿದೇವಿ ಚಿಕ್ಕತಾಯಿ ನೋಡುಬಿಟ್ಟು
ಈ ಮಕ್ಳಿಗ ಇನ್ನ ಹೊರಾಗ ಬಿಡಬಾರ್ದು ಅಂತ
ಐದುಪುಟ್ಟಿ ಮಣ್ಣು ತಂದು
ಮನಿಯಾಗ ಹಾಕಿ
ಮಕ್ಕಳನ್ನೆಲ್ಲ ಕುಂಡ್ರಿಸಿಕೊಂಡು
ಮಕ್ಕಳಗೆಲ್ಲ ಶರಣು ಮಾಡಿಬಿಟ್ಟು
ಯಪ್ಪಾ ಎಷ್ಟ ಒಡವೆ ವಸ್ತ್ರ ಇದ್ರೇನು ಮಾಡ್ಬೇಕು
ಬಚ್ಚಿಕ್ತೀವಿ
ಇನ್ನ ಪೆಟ್ಟಿಗ್ಯಾಗಿಟ್ಟು ಬೀಗ ಹಾಕ್ತೀವಿ
ಈ ಮಕ್ಕಳನ್ನೆಲ್ಲಾ ಯಾವ ಪೆಟ್ಟಿಗ್ಯಾಗಿಟ್ಟು
ಬೀಗ ಹಾಕ್ಬೇಕು
ಎಷ್ಟು ಚಲುವಿ ಗಲಗಳಾಂತ ನನ್ನ ಮಕ್ಕಳು
ಎಷ್ಟೋ ಚಂದಾ ಕಾಣ್ತವೆ
ಯಪ್ಪಾ ಈಗ ಕುತಗಂಡು
ಓದುಕಲಿಸ್ತಿನಿ ಕಲೀರಪ್ಪ ಅಂದ್ರೆ
ಎಂಥಾ ದುಷ್ಟ್ರು ಎಂಥಾ ಪಡಶೆಟ್ರು
ವಿಷ್ಣಕೊಟ್ಟಿದ ಮಕ್ಕಳು
ದಾಸಪ್ಪ ಕೊಟ್ಟಿದ ಮಕ್ಕಳು
ಇದೋ ಸರಸ್ವತಿ ಅಂತ ಬರದ್ರೆ ತರಪತಿ ಅಂತಾರ
ಏs ಓ ಅಂದ್ರೆ ಆ ಅಂತಾರ
ಏs ಕಾಗುಣಿತ ಅಂದ್ರೆ

ಕಾಗೆಯಂತ ಅವ್ರು ಬರಿತಾರಮ್ಮ
ಹುಡುಗರನ್ನ ಹ್ಯಾಂಗೆ ನಾ ಕೈಯೆತ್ತಿ ಬಡಿಲಮ್ಮಾ
ಕಣ್ಣಿನಿಂದಾಗಿ ತಾಯಿ ಬೆದರಸ್ತಾಳ ಕೈಯಿಂದಾಗಿ ಮಕ್ಕಳ ತೋರ್ಸಾಕಿ
ಸಿರಿದೇವಮ್ಮ || ತಂದಾನ ||

ಕಣ್ಣಿಲಿ ಬೆದರಸ್ತಾಳ
ಕೈಲಿ ತೋರಸ್ತಾಳ ಮಕ್ಕಳ್ನ

ಹಾಂಗ ಮಕ್ಕಳಿಗೆ ಹನ್ನೆರಡು ಗಂಟೆ ಓದಿಸ್ತಾಳ
ಹನ್ನೆರಡು ಗಂಟೆಗೆ ಮೈ ತೊಳಿತಾಳ
ಹಾಲುಸಕ್ಕರೆ ಮಕ್ಕಳಿಗೆ ಇಡುತ್ತಾಳ || ತಂದಾನ ||

ಯಮ್ಮ ಹತ್ತು ವರುಷ ಇನ್ನು ವಾಯ್ತೋ
ಹುಡುಗರದಾಗ ಹ್ಯಾಂಗ ಬೆಳದಾರ
ಕೊಬ್ಬು ಬೆಳದಾಂಗ ಮಕ್ಕಳು ಬೆಳೆದಾರೆ || ತಂದಾನ ||

ಮಕ್ಕಳಾರ
ನಮ್ಮ ತಂದೆ ಎಷ್ಟೋ ಓದಕಲಿಸಿದ ನಮ್ಮನ್ನ
ಇಂಗ್ಲೀಷ್‌ತನಕ ಓದಿನಿ
ಇಲ್ಲಿಗೆ ಬಂದ ಮ್ಯಾಲೆ
ನಿಮ್ಮ ತಂದಿ ಮನಿಯಾಗ ಓದಿಲ್ಲವೋ
ಯಪ್ಪಾ ನಾನು ಓದಿಕ್ಯಂಬುತ್ತಿನಿ
ವರಸ ಸುತ್ತ ಕುತ್ಕಂಡು
ನೀವ ಓದಕಲೀರಪ್ಪ ಮಕ್ಕಳಾರೆ
ಅಷ್ಟಾಗಲ್ಲಮ್ಮ ತಾಯಿ
ಅಂತ ವರಸ ಸುತ್ತ ಕುಂತ್ಕಂಡ್ರಪ್ಪ
ಆರು ಮಂದಿ
ವರಸೆಮ್ಯಾಲೆ ತಾಯಿ ಓದಿಕ್ಯೊಂತ
ವರಸೆ ಮ್ಯಾಲೆ ತಲೆ ಇಟ್ಟು
ಅಂಗೇ ನಿದ್ದೆ ಮಾಡಿಬಿಟ್ಟು
ಇವರು ನೋಡಿದ್ರು
ಏs ನಮ್ಮಮ್ಮ ಹೊರಾಗ ಹೋಗಬ್ಯಾಡ್ರಲೆ ಅಂತಾಳೆ
ಏs ಹೊರಾಗ ಹೋದ್ರೆ ನಮ್ಮಮ್ಮ ನೋಡ್ತಾಳ
ಗವಾಕ್ಷಿಲಿಂದ ಮಾಳಿಗೇರಿ ಬಿಡಾನ

ಮಾಳಿಗೆ ಮ್ಯಾಲೆ ನಿಂತ್ಕಂಡ್ರೆ ಇನ್ನ ಲೋಕೆಲ್ಲ ಕಾಣ್ತೈತಿ || ತಂದಾನ ||

ಆಗ ನಿಚ್ಚಣಿಗೆಲಿಂದ ಮಾಳಿಗೆ ಏರಿಬಿಟ್ರು
ಮಾಳಿಗೆಮ್ಯಾಲೆ ನಿಂತ್ಕಂಡ್ರೆ
ಆಗ ಚಾಂಪುರ ಪಟ್ಣದಾಗ
ಗೋಲಿ ಆಟ ಆಡ್ತಾರ ಹುಡುಗುರು
ಅಗಸಿ ಮುಂದೆ
ದೊಡ್ಡ ದೊಡ್ಡೋರು
ನಿಂತು ನೋಡ್ತಾರ ಹುಡುಗರನ್ನ
ಏs ಎಷ್ಟು ಚಲುವೆ ಆಡ್ತಾರ
ನೋಡಲೇ ಊರು ಮಂದಿ
ಊರು ಮಾಡೋ ಗೌಡನ ಮನ್ಯಾಗ ಹುಟ್ಟಿ
ಮನ್ಯಾಗೈದೀವಿ
ಊರು ಹೋರಾಗ ಹೋಗಲಾರದಂಗ
ಏs ನಮ್ಮ ತಾಯಿನ ಎಬ್ಬಿಸಿ
ನಾವ ಕೇಳಾನ
ಅಂತ ಧಿಗ ದಿಗ ಇಳಿಕಂಡ್ರು

ಯಮ್ಮಾ ಅಮ್ಮಾ ಹೊಟ್ಟೆ ಹಸವಿ ಆಗತೈತೋ
ನಮಗೆ ಹಾಲು ಸಕ್ರೆ ಅನ್ನ ಇಡು ಅಮ್ಮಾ
ಎದ್ದಳಮ್ಮ ತಾಯಿ ಹಡೆದಮ್ಮ ಸಿರಿದೇವಿ ತಾಯಿ || ತಂದಾನ ||

ತಾಯಿ ಎಡಕ್ಕಿಲ್ಲಿದ್ದ ಬಲಕ್ಕೆದ್ದು ಬಿಟ್ಟು
ಯಮ್ಮಾ
ಈ ಜೀವ ಎಷ್ಟೊತ್ತಿದ್ರು ಕೂಳು ಹಾಕ್ಬೇಕು
ಎಷ್ಟೊತ್ತಿದ್ರು ಈ ಜೀವಕ್ಕೆ ಕೂಳು ಹಾಕ್ಬೇಕಲ್ಲ
ಒಂದು ಸರ್ತಿ ಅನ್ನ ಊಟ ಮಾಡ್ದಮ್ಯಾಲೆ
ಈ ಜೀವ ಮತ್ತೆ ಕೇಳಂಗಿಲ್ಲ
ಯಮ್ಮ ನಮಗ ಹೊಟ್ಟೆ ಹಸಿವು ಆಗ್ತೈತಿ
ಆಗ ಹಾಲು ಸಕ್ರೆ ಅನ್ನ ಇಟ್ಟು ಬಿಡ್ರಮ್ಮ
ನಾವು ಉಂಬುತ್ತೀವಿ
ಯಪ್ಪಾ ಓದುಯೆಲ್ಲಾ ಮುಗಿಸಿಬಿಟ್ರ್ಯಾ
ಇಲ್ಲಮ್ಮಾ ಊಟಮಾಡಿ ಓದಕ್ಯಂತೀವಿ
ಸರಿಬಿಡ್ರಪ್ಪ ಅಂತ
ಹಾಲುಸಕ್ರೆ ಅನ್ನ ಇಟ್ಳು
ಮಕ್ಳು ಊಟಮಾಡಿದ್ರು
ಅಮ್ಮಾ ಹಾಲು ಊಟ ಮಾಡಿವಿ
ಅನ್ನನೆ ರ್ವಾಗ ಅನ್ನನೇ ಜೀವಕ್ಕಳೇದು ಯಮ್ಮಾ

ತಲಿಗೆ ಎರಡು ಗೋಲಿ ಕೊಡಮ್ಮಾ
ಓಡ್ಯಾಡಿ ಓಡ್ಯಾಡಿ ಗೋಲ್ಯಾಟಾ ಆಡೆವಾ
ಹೊಟ್ಟ್ಯಾಗಿರೋ ಅನ್ನಮ್ಮ ಮುಗುಳಿತಲ್ಲಿ ಬರತೈತೋ || ತಂದಾನ ||

ಓಡ್ಯಾಡಿದ್ರೆ ಹೊಟ್ಟ್ಯಾಗಿದ್ದ ಅನ್ನ
ಬಾಯಲಿದ್ದ ಹೋಗಿದ್ದು
ಮುಗಳಿ ತಲ್ಲಿ ಬರ್ತೈತಿ
ಮಣಿಸೇನಿಗೆ ಆರೋಗ್ಯರ ಶಾಂತಿ ಆಗ್ತೈತಿ
ಯಮ್ಮಾ ಅನ್ನನ್ನೆ ಒಂದು ಬ್ಯಾನಿ
ಅನ್ನನೇ ಒಂದು ರೋಗ
ಯಮ್ಮಾ ನಮಗ ಜಗ್ಗಿ ಇಟ್ಟು ಬಿಟ್ಟಿ
ನಾವು ಊಟ ಮಾಡಿ ಬಿಟ್ಟಿವಿ
ಮತ್ತ ಹ್ಯಾಂಗಪ್ಪ
ತಲೀಗೆರಡು ಗೋಲಿ ತಂದುಕೊಡು
ಅಯ್ಯೋ ಗೋಲಿಯಾಟ ಆಡಿದ ಮ್ಯಾಲ
ಓದು ಯಾಗ ಓದ್ತೀರಪ್ಪ
ಇಲ್ಲಮ್ಮಾ ಸ್ವಲ್ಪಹೊತ್ತು
ಅನ್ನ ಇಳಿಯೋತನಕ
ಮತ್ತೆ ಆಕಡಿಗೆ ನಾವು ಓದಿಕ್ಯಂಬ್ತಿವೀ
ನೋಡಪ್ಪಾ ಕೇಳೋದು ಹೆಚ್ಚಾ
ನಾವು ತಂದು ಕೊಡೋದು ಹೆಚ್ಚಾ
ಏ ಮನಿ ದಾಸಿ
ಈಗ ಇರಿಶೆಟ್ಟಿ ಅಂಗಡಿಗೆ ಹೋಗಿ
ಗೋಲಿ ತಗಂಡು ಬಾಮ್ಮಾ
ಬೊಗಸಿ ತುಂಬ ಅಂದ್ಳು
ಈಗ ರೂಪಾಯಿಗೆ
ನೂರು ಬಗರಿ
ನೂರು ಗೋಲಿ
ತಗಂಡು ಬಂದ್ಳು
ಆಗ ತಗೋರಪ್ಪ ಅಂತ
ತಲೀಗೆರಡು ಗೋಲಿಕೊಟ್ಟು
ಯಮ್ಮಾ ತಲಿಗೆರಡು ಗೋಲಿಕೊಟ್ಟೀ
ಈಗ ಕಣ್ಣು ಹೋದೊರಾದ್ರೆ ಮನ್ಯಾಗ ಬಿದ್ದಿರ್ತಾರ
ಕಾಲು ಹೋದೊರಾದ್ರೆ ಮನ್ಯಾಗ ಇರ್ತಾರ
ದೇವರು ಕೊಟ್ಟ ಕೈಕಾಲ ಇದಾವ
ಯಮ್ಮಾ ನಿನ್ನ ಮಕ್ಳು
ಮನಿ ಹೊರಾಗ ಆಡ್ತಿವಿ
ಅಯ್ಯೋಯ್ಯಪ್ಪಾ ಈ ಊರು ಚಾಂಪುರ ಪಟ್ಣ
ಎಂಥಾ ಊರು ಅಂದಕಂಡಿ
ಮಕ್ಕಳಿಲ್ಲದವರು ಬಾಳ ಮಂದಿ ಐದ್ಯಾರ ಈ ಊರಾಗ

ಲಂಬಡಿಕ್ಯಾರು ಬರ್ತಾರ
ಗೆಗ್ಗರಿದಾಗ ಮುಚ್ಚಿಕ್ಯಂಡು
ಹಂಗೆ ಹೊತ್ತುಕೊಂಡು ಹೋತಾರ || ತಂದಾನ ||

ಹೇs ಅಡವಿ ಚಂಚರು ಬರ್ತಾರ
ಹಣ್ಣು ಕೊಟ್ಟು ಬಿಡ್ತಾರ
ಅವರ ಹಿಂದೆ ಅಂಗೆ ಹೋತೀರಿ ನೀವು || ತಂದಾನ ||

ಮಕ್ಳಾರ ಲಂಬಡಿಕೇರು ಬಂದ್ರೆ
ಗೊಗ್ಗರಿದಾಗ ಹಂಗೆ ಮುಚ್ಚಿಕ್ಯಂಡು
ಹೊತ್ತಗಂಡು ಹೋತಾರ
ಮಕ್ಕಳಿಲ್ಲದವರು ಜೋಪಾನ ಮಾಡಿಕ್ಯಂಬಾಕ
ಅಡವಿ ಚಂಚರು ಬಂದು ಹಣ್ಣು ಕೊಟ್ರೆ ಆಗೋಯ್ತು
ಅವರ್ಹಿಂದೆ ಸುಮ್ನೆ ಹೋಗಾದೆ
ಎಷ್ಟು ಮಂದಿ ಎಳಕಂಡ್ರುನೆ
ಹಿಂದಕ್ಕ ಬರಂಗಿಲ್ಲ ಹುಡುಗ್ರು
ಅಂತಾ ಮಂತ್ರಗಳು ಕಲಿತವರು ಇದಾರ
ಈ ಊರಾಗ
ಕೇಳಪ್ಪ ಜೀವಕ್ಕಾಗಿ ನನ್ನ ಮಾತದಲ್ಲಿ
ಈಗಿನವರು ತಾವು ಊರಾಗ
ಆರುಕಟ್ಟಿಗೇರು ಬಂದ್ರೆ
ಹಗ್ಗ ಹಾಕಿ ತಾವು ಮನ್ಯಾಗ ಎಳಿಕ್ಯಂತಾರ
ಆಗ ಪೊಡಗನಾಗ ಹಾಕಿ ಪೊಡಗ ಮುಚ್ಚುತಾರ
ಆಗ ಕೇಳವೋ
ಆರು ಮಂದಿ ಛತ್ರಿ ಗುಪ್ತರೆ
ಅಮ್ಮೋ ಹಂಗಾರ ಲಂಬಡಿಕೇರು ಬರ್ತಾರ
ಯಮ್ಮಾ ನಾವು ಹೊರಾಗ ಹೋಗೋದಿಲ್ಲಮ್ಮ
ಯಮ್ಮಾ ಸತ್ರೆ ಹೋಗೋದಿಲ್ಲ
ನೀನು ವರಸ ಮ್ಯಾಲೆ ಕುಂತ್ಕೊ
ನಾವು ವರಸ ಸುತ್ತ ಆಡ್ತಿವಿ ಗೋಲ್ಯಾಟ
ಆಡ್ರಪ್ಪಾ ನನ್ನ ಕೈಯಾಗ ಬೆಳ್ದವ್ರೆ ಆಡ್ರಿ
ನಾನ ಕಣ್ಣಿಲಿ ನೋಡ್ತಿನಿ
ತಾಯಿ ವರಸಿನ ಮ್ಯಾಲೆ ಕುತ್ಗಂಡ್ರೆ

ಓಡ್ಯಾಡಿ ಓಡ್ಯಾಡಿ
ಆಗ ಗೋಲಿಯೊಂದು ಆಡವರು
ತಾಯೇ ಕಿಲಿಕಿಲಿ ನಗುತಾಳ
ಯಮ್ಮೋ ಎಷ್ಟು ಚೆಂದ ಆಡುವರು
ಕೇಳರಪ್ಪ ಮಕ್ಕಳ || ತಂದಾನ ||

ನನ್ನ ನಗಂಗ ಮಾಡಿಬಿಟ್ಟ್ರಿ
ಯಪ್ಪಾ ನಿದ್ದಿ ಮಾಡಿ ಎದ್ದುಬಿಡ್ತೀನಿ
ನಿದ್ದಿ ಕಣ್ಣಿಲಿ ಎಬ್ಬಿಸಿಬಿಟ್ರಿ
ಈಗ ತಾಸು ಇನ್ನವರ್ತಾವ ಗೋಲಿಯಾಟ ಆಡ್ರಿ
ನಿದ್ದಿ ಮಾಡಿ ಎದ್ದು ಬಿಡ್ತೀನಿ ಅಂದಳು
ಸರೆಮ್ಮ ನಿದ್ದಿ ಮಾಡು ಅಂದ್ರು
ಆಗ ವರುಸಕ್ಕೆ ತಲೆ ಕೊಟ್ಟು ನಿದ್ದೆ ಮಾಡಿಬಿಟ್ಟು
ಈ ಹುಡುಗರು ಆಡೋ ಹುಡುಗ್ರು ನೋಡಿದ್ರು
ಲೇ ಕುರುಡ್ಯಾಟ ಕುಂಟಾಟ ಏನಾಟಲೇ
ಕಣ್ಣು ಹೋದವ್ರು ಆದ್ರೆ
ಮನ್ಯಾಗ ಬಿದ್ದಿರ್ತಾರ
ಕಾಲು ಹೋದೋರು ಆದ್ರೆ
ಮನ್ಯಾಗ ಓಡ್ಯಾಡಿಕೆಂಡಿರ್ತಾರ
ಹೇ ಕೈ ಕಾಲು ಇದ್ದಾವ
ಊರು ಮಾಡೋ ಗೌಡಗೆ ಹುಟ್ಟೀವಿ
ಊರು ಹೊರಾಗ ಹೋಗಿ ಆಡಾನ
ಹನ್ನೆರಡು ಮಂದಿ ಹುಡುಗರು ಒಳಗೆ ಕಲ್ತಾರಾ
ಲೇ ನಿಮ್ಮಮ್ನ ಕಡೀಗೆ ನೋಡು
ಇಗೋ ಒಂದು ಕಣ್ಣು ಮುಚ್ಚಿಕ್ಯೊಂಡೆ ಮಕ್ಕಂಡಾಳ
ಹೇ ಅದು ಏನ್‌ ನಿದ್ದಿ ಅನಿಕಂಡಿಯೀ
ಕೋಳಿ ನಿದ್ದಿ
ಕೋಳಿ ಹ್ಯಾಂಗ ನಿದ್ದಿ ಮಾಡೋದು
ಒಂದು ಕಣ್ಣು ತೆರಕಂಡೇ ಇರಾದು
ಒಂದು ಕಣ್ಣು ಮುಚ್ಚಿಕ್ಯಂಡೇ ಇರಾದು
ಯಮ್ಮಾ ಯಮ್ಮಾ ಅಂದ್ರೆ
ಯಮ್ಮ ಇಲ್ಲ ಗಿಮ್ಮ ಇಲ್ಲ
ಮೇಲೋಕಕ್ಕೋಗ್ಯಾಳ

ಆಗ ಆರುಮಂದಿ ಮಕ್ಕಳು ಬೊಗ್ಗಿ ಬೊಗ್ಗಿ ಬಾಕಿಲು ತಟಾರು
ಹೊರಗಾವಂದೆ ಬಂದು ಬಿಟ್ಟಾರಣ್ಣ
ಥೊತ್ತಡಿ ಹುಡುಗರು ಬಾಗಿ ಕೆವ್ಕ್ಯಾಕೆ ಹೊಡೆದು
ಊರ ಮುಂದಕೆ ಹುಡುಗ್ರು ಬಂದಾರ
ಊರ ಮುಂದಕ ಬಂದುಬಿಟ್ರು || ತಂದಾನ ||

ಅಗಸಿ ಹೊರಾಗ ಬಂದು ಬಿಟ್ಟರು
ಬಂದು ಏನ ಅಂದರು
ಏ ಆಗ ಇನ್ನವರ ನಾಯಕರ ವಡ್ರ
ತರುಕುರಾ ಪಿಂಜಾರಾ ಕಳಸೆರ
ಆಗ ಕುರುಬರೇ ಸಂಪನ್ನ ಜಾತಿದವರೆ
ಏನ್ರಿ
ನಾವು ಇನ್ನವರ್ತಾವ ಹಾಲು ಗೊಲ್ಲರು
ನಮ್ಮ ತಂದಿ ಊರು ಮಾಡೋ
ಗೌಡುಗ ಹುಟ್ಟಿದ ಮಕ್ಳು ನಾವು ಆರುಮಂದಿ
ಛತ್ರ ಗುಪ್ತರು ಅಣ್ಣತಮ್ಮರು
ಏ ನಮ್ಮಾಟ ಮುಂದೆ ಆಗಬೇಕು
ನಿಮ್ಮಾಟ ಹಿಂದಾಗಬೇಕು
ಅಲ್ರಿ ದೊಡ್ಡೋರ ಮಕ್ಕಳ್ರುರೀ ನೀವು
ಈಗ ಹ್ಯಾಂಗ ಆಡ್ಬೇಕು
ನೋಡ್ರಿ ಆ ಕುಣೀ ನಡುವಿಲಿ ಈ ಕುಣೀ ನಡುವಿಲಿ
ಲೈನಿಡಬೇಕು ಗೋಲಿ
ಮೂರೇಟಿಗೆಲ್ಲಾ ಆ ಕುಣ್ಯಾಗ ಬಿದ್ರೆ ನೀವು ಗೆದ್ದಂಗ
ಈ ಕುಣ್ಯಾಗ ಬಿದ್ರೆ ಗೆದ್ದಂಗ
ಕುಣಿ ತಪ್ಪಿದ್ರೆ
ಆಗ ಎಡಕ್ಕ ಬಲಕ್ಕ ಹೊಳ್ಳಿಬಿಟ್ರೆ
ಈಗ ನೀವು ಸೋತಂಗ
ಈ ಗೆರೆ ತಟಾದು ಹೋಗಬಾರದು
ಅಂತ ಅಂದೆಷ್ಟಗೆ ಸರಿಬಿಡಪ್ಪ ಅಂದ್ರು
ಲೈನು ಇಟ್ಟುಬಿಟ್ರರಪ್ಪ
ಆಗ ಹುಡುಗ್ರು ನಿಕ್ಕರ ಉಡುದಾರ ಬಿಗಿಸ್ಕಂಡ್ರು
ಮ್ಯಾಲೇ ಬಿಸಿಲ ಹೊಡ್ತ ಕೆಳಗ ಕಾಲು ಸುಡ್ತಾವ
ಹುಡುಗ್ರು ಬಿಸಿಲ ಅಂಬಗಿಲ್ಲ
ನೆಳ್ಳಾಗಿದ್ದ ಹುಡುಗ್ರು

ಓಡ್ಯಾಡಿ ಓಡ್ಯಾಡಿ
ಗೋಲಿವಾಗಿ ಆಡುವರು
ಎಷ್ಟು ಚೆಲುವಿ ಐದಾರ
ಲೋಕ ಮಕ್ಕಳು ಆಡ್ವರು || ತಂದಾನ ||

ಲೋಕ ಮಕ್ಕಳು ಆಡುವರು