ಸುಡುಗಾಡು ರುದ್ರಭೂಮಿದಾಗ

ಮಗನ ಹ್ಯಾಂಗ ಸಲುವುತಾಳ ಹಡದ ತಾಯಿ ಸಿರಿದೇವಮ್ಮ
s ಊರಿನ ಕೆಳಗ ಸುಡುಗಾಡೊ ರುದ್ರಭೂಮಿದಾಗಣ್ಣ ಲೋಕ
ಒಂದು ತಿಂಗಳಲ್ಲಣ್ಣ ಆರು ತಿಂಗಳಲ್ಲಣ್ಣ ಮಗ
s ಶಿವನ ಕೊಟ್ಟ ಮಗಣ್ಣ ಗೊಲ್ಲರ ಕುಲದಾಗಣ್ಣ
ಮಗಂದೆ ಶರಬಂದ || ತಂದಾನ ||

ಗೊಲ್ರ ಶರಬಂದರಾಜನ
ಸುಡುಗಾಡು ರುದ್ರಭೂಮಿದಾಗ
ತಾಯಿ ಜೋಪಾನ ಮಾಡ್ತಾಳ
ಆಗ ಮಗ ಏನು ಮಾಡಿದ

ಈಗ ಆರು ತಿಂಗಳ ಮಗನಾದ್ರೆ ಹತ್ತು ವಯಸ್ಸು ಕಾಣ್ತಾನ ಮಗ
s ಕೊಬ್ಬು ಬೆಳೆದಂಗೆ ಬೆಳಿತಾನೆ ಶಿವನ ಕೊಟ್ಟಿದ ಮಗವಣ್ಣಲೋಕ
s ಹೆದ್ನೆಂಟು ವರುಷದ ಭೂಮಿಮ್ಯಾಗೆ ಮಗನಮ್ಮ ಲೋಕ || ತಂದಾನ ||

ವಯಸ್ಸಿದಲ್ಲಿ ಎಷ್ಟು ಚೆಂದ ಕಾಣ್ತಾನ ಮಗ ಆಗಿ
ಆಗ ಹದಿನೆಂಟು ವರುಷದ ಮಗ ಆದ ಮ್ಯಾಲೆ
ಅಮ್ಮಾ ನನ್ನ ಮನೆಹೊರಗ ಬಿಡುವಲ್ಲ
ಅಮ್ಮಾ ಒಂದೇ ಮನೆ ಐತಲ್ಲಮ್ಮ ಇಲ್ಲಿ
ಆಗ ಊರಿಲ್ಲ ಉದ್ಮಾನಿಲ್ಲ
ಮಗನೆ
ಈಗ ನಾವು ಅಡವಿಯಾಗ ಇಲ್ಲೆ ಹುಟ್ಟಿದ್ದು
ಇಲ್ಲೆ ಬೆಳೆದಿದ್ದಪ್ಪಾ
ಯಮ್ಮಾ ನನಗೆ ಮಾಳಿಗೆ ಏರಂಗಾಯಿತಮ್ಮ
ನಾನು ಲೋಕ ನೋಡ್ತಿನಿ ಅಮ್ಮ ಅಂದ
ಹೊರಗ ಏನೇನೈತೋ ನೋಡ್ತಿನಂದ
ಯಪ್ಪಾ ನೀನ ಹೊರಾಗ ನೋಡಂಗಾಯ್ತ

ಹಂಗಾರೆ ಗಬಾಕ್ಷಿಲ್ಲಿದ್ದಪ್ಪ ನೀನ ಮಾಳಿಗೇರು ನನ್ನ ಮಗನೆ
s ಶಿವನ ಕೊಟ್ಟ ಮಾಳ್ಗಿ ಮ್ಯಾಕ ಮಗನು ಒಂದು ಬಂದಾಗ || ತಂದಾನ ||

ಮಾಳಿಗೆ ಮ್ಯಾಲೆ ನಿಂತ್ಕಂಡು
ಸುತ್ತನಾಕು ಲೋಕ ನೋಡಿಬಿಟ್ನಪ್ಪ
ನೋಡಿದ್ರೆ
ಎಲ್ಲಾ ಆರ್ಥವಾಗತೈತಿ
ಶಿವ ಕೊಟ್ಟಿದ ಮಗನಿಗೆ
ಏನಂತ ತಾಯಿನ್ನ ಕೇಳ್ತಾನ
ನಮ್ಮಮ್ಮನ ಬಾಯಿಂದ ಏನು ಬರ್ತೈತಿ ಅಂತ
ಅಮ್ಮಾ

ಕೆಳಗಿರೋದು ಏನನಬೇಕಮ್ಮ
ಮ್ಯಾಲಿರೋದು ಏನನ್ನಬೇಕಮ್ಮ
ನನಗೇನು ತಿಳಿವಲ್ದು ನೀನು ಹಡೆದ ತಾಯಿ ನನಗಮ್ಮ
ನೀನು ನನಗೆ ಒಡೆದು ಹೇಳಬೇಕೊ ಮಗನಿಗೆ ತಿಳುವಳಿಕೆ ಮಾಡಮ್ಮ
ತಿಳುವಳಿಕೆ ಮಾಡಬೇಕು ನೀನು || ತಂದಾನ ||

ಅಯ್ಯೋ ಮಗನ
ನಿನಗ ತಿಳುವಳಿಕೆ ಮಾಡಬೇಕಾ ನಾನು
ನೋಡಮ್ಮ ನಿನ್ನ ಜೀವಕ್ಕೆ ಹುಟ್ಟಿದವನು ನಾನು
ನನ್ನ ಜೀವಕ್ಕ ನೀನು ತಿಳುವಳಿಕೆ ಮಾಡಬೇಕು
ಅಯ್ಯೋ ಕೆಳಗಿರೋದು ಯಾರಂತ
ಇನ್ನ ಅರ್ಥ ಹೇಳಬೇಕಾ ನಿನಗೆ
ಕೆಳಗೆ ಇರೋದು ಭೂದೇವತೆ ಮಗನೆ
ಇದರ ಮ್ಯಾಲೆ ಹುಟ್ಟಿ
ಇದರೊಳಕ್ಕ ಹೋಗೋರಪ್ಪ ನಾವು
ಭೂದೇವತೆ ಅಂತ ಕರೀಬೇಕಾ
ಅಮ್ಮಾ ಮ್ಯಾಲೆನಮ್ಮ ಕರ್ರ‍ಗೈತಿ
ಅಯ್ಯೋ ಆಕಾಶ ಮಗನೆ ದೇವರದು
ನನ್ನ ನಿನ್ನ ಜೀವಕೊಟ್ಟು ಹೋದೋರು
ಅತ್ತಾಗೇ ಮಗನೆ ಇರೋದು
ಸರಿ ಆಕಾಶಂತ ಕರೀಬೇಕ
ಅಮ್ಮಾ ಕೆಳಗಡಿದೆನಮ್ಮ
ಕೆಂಪಗ ಇನ್ನು ಬೆಂಕಿ ಕಾಣ್ದಂಗ ಕಾಣ್ತೈತಿ
ಅಯ್ಯೋ ಸೂರ್ಯ ಮಗನ
ಎಲ್ಲಾರಿಗ ಬಿಸಿಲು ಹೊಡೀಬೇಕು
ಆಗ ವಣಗಬೇಕು
ಮನುಷ್ಯರ ತೊಗಲು ಬಿಗಿಸಬೇಕಂತ
ಸೂರ್ಯ ಹುಟ್ಟುತಾನ ಮಗನ
ಅದು ಸರಿ
ಮತ್ತೆ ಮ್ಯಾಗಡಿಗೇನಮ್ಮ ಬೆಳ್ಳಗ ಕಾಣ್ತೈತಿ ಅಂದ
ಅಯ್ಯೋ ಅದು ಗುಡ್ಡ ಮಗನೆ ಅಂದ್ಳು
ಏನು ಗುಡ್ಡ ಅಂತ ಕೇಳ್ದ ಹುಡುಗ
ಕೊಲ್ಲು ಮಗನೆ
ಗುಂಡುಮ್ಯಾಲೇ ಗುಂಡು ಗುಂಡುಮಾಲೆ ಗುಂಡು
ಅದಕ್ಕೆ ಬೆಳ್ಳಗ ಕಾಣ್ತಾವ ಗುಂಡುಗಳು ಅಂದ್ಳು
ಚಾಂಪುರ ಪಟ್ಣ ತೋರಿಸಿದ್ಳು ಮ್ಯಾಗಡಿಗೆ
ಮಾಳಿಗೆ ಮ್ಯಾಲೆ ಮಾಳಿಗೆ ಬೆಳ್ಳಗೆ ಇರುತಾವಲ್ಲ
ಆ ತಾಯಿ ಮಗಗ ಅರ್ಥ ಹೇಳಲಾರ್ದ
ಗುಂಡು ಮ್ಯಾಲೆ ಗುಂಡು ಗುಂಡು ಮ್ಯಾಲೆ ಗುಂಡು
ಅದು ಬೆಳ್ಳಗ ಗುಂಡುಗಳು ಕಾಣ್ತಾವ ಅಂದ್ಳು
ಆ ಗುಂಡುಗಳಾಗ ಏನಿರ್ತಾವಮ್ಮ ಅಂತ ಕೇಳಿದ
ಅಯ್ಯೋಯ್ಯಪ್ಪ ಗುಂಡುಗಳಾಗ ಏನಿರ್ತಾವಂತ ಕೇಳ್ತೀಯಾ
ಹುಲಿ ಕರ್ಡಿ ಇರ್ತಾವ ಮಗನೆ
ದೇವಮೃಗಳವೆಲ್ಲ ಅದರಾಗೆ
ಗುಂಡಿನ್ಯಾಗ ಇರೋವು ಅಂದ್ಳು
ಕರ್ಡಿ ಅಂಥ ಮಗ ಹುಟ್ಟಿನಿ
ಹುಲಿ ಅಂಥ ಮಗ ಬೆಳೆದಿನಿ
ಯಮ್ಮಾ ನೀನು ಹೇಳತ್ತಿದ್ರೆ
ನನ್ನ ಜೀವಕ್ಕೆ ಆನಂದ ಆಗೈತಿ

ಕಣ್ಣಿಲಿ ನೋಡಿ ಬರುತ್ತೀನಿ ಅದು ಹುಲಿಹ್ಯೆಂಗೆ ಐತೇನೊ
s ಕರ್ಡಿ ಹುಲಿ ನೋಡಾಕ ನಾನು ಹೋಗಿ ಬರುತ್ತಿನಿ ಹಡೆದಮ್ಮ || ತಂದಾನ ||

ಏ ಯಮ್ಮ ಹುಡುಗ ಇನ್ನು ಹೋತಾನಂತೆ
ಕರಡಿ ಹುಲಿ ನೋಡಾಕ
ಮತ್ತೆ ನೀನು ಸುಮ್ನೆ ಬಾಯಿಲಿ ಹೇಳಿಬಿಟ್ಟಿ
ನಾನು ಕಣ್ಣೀಲಿ ನೋಡುಬೇಕಲ್ಲ
ಹಾಂ ಕಣ್ಣಿಲಿ ನೋಡಿದ್ರೆ ನನಗೆ ಬೇಸು
ಹಿಂಗ ಹುಲಿ ಅಲ್ಲ ಇಂಗ ಕರಡಿಯಲ್ಲಿ ಅಂತ
ನನಗೆ ಹ್ಯಂಗ ಅರ್ಥ ಆಗಬೇಕಮ್ಮ
ನೀನು ನೋಡಿಯ ನನಗೆ ಹೇಳ್ತಿ
ನಾನು ನೋಡಬೇಕಲ್ಲ
ಇಲ್ಲ ನಾನ ನೋಡೇ ಬರ್ತಿನಿ
ಯಮ್ಮಾ ಲಂಕ ನೋಡಿ ಬಾ ಅಂದ್ರೆ
ಬೆಂಕಿ ಹಚ್ಚಿ ಬರೋನು ಇದ್ದಂಗ ಇದಾನ
ಈಗ ಊರಿಗೆ ಹೋತಾನ

ಯಮ್ಮ ಊರಾಕ ಇನ್ನ ಹೋತಾನ ಮಗಾ
ಮಗ ಉಳಿಯೋದಿಲ್ಲ ಮಗಗ ನೋಡುತಾರ
ಮಗನ ಉಳಿಸೋದಿಲ್ಲ ಕೊಲ್ಲಿ ಬಿಡ್ತಾರ
ನೋಡಾಕ ನೋಡ ಚಂದ ಮಗ ಹುಟ್ಟ್ಯಾನ ನನಗೆ
ನೋಡಲಾರ್ದ ಚೆಂದ ಹುಟ್ಟ್ಯಾನ || ತಂದಾನ ||

ಏ ಯಾರ ಮಗ ಯತ್ತೋವ್ನ ಮಗ ಅಂತ
ಕಲ್ಲು ಹಾಕ್ತಾರೊ ನನ್ನ ಮಗನಿಗೆ
ಯಪ್ಪಾ ಹೋಗಬೇಡ
ಹುಲಿ ಕರಡಿ ತಿಂದು ಬಿಡ್ತಾವಪ್ಪ
ಅಬಾಬ ಹುಲಿ ಕರ್ಡಿ ತಿಂದು ಬಿಡ್ತಾವ ನನ್ನ
ಆದ್ರನೇನನ್ನ ಏಟ ಬಡದ್ರ ತಿಂತಾವ
ಚುರುಕು ತಟ್ಟಿದ್ರೆ ಅಲ್ಲ ಸಿಟ್ಟು ಬರೋದು
ದೂರು ನಿಂತ್ಕಂಡು ನೋಡಿಬಂದ್ರೆ
ಆಗ ನನ್ನ ಯಾಕ ತಿಂತಾವ ಅಮ್ಮ ಅವು
ದೂರ ನಿಂತ್ಕಂಡು ನೋಡಿದ್ರೆ
ನನ್ನೇನು ತಿಂಬಾದಿಲ್ಲ
ಯಪ್ಪಾ ಹೋಗಿ ಬರ್ತೀ ಯಾ
ಹೋಗಿ ಬಾ ಮಗನಾ
ನಿನ್ನ ಕೊಟ್ಟಿದ್ದ ದೇವರು
ಕಾಪಾಡಿಕ್ಯಂಡು ಬರಲಿ ಅಪ್ಪ ಅಂದ್ಳು
ಅಂದ್ರೆ ಆಗ ಮಗ ತಾಯಿ ಪಾದ ಮುಗಿದು

ಮಗ ಒಂದೇ ತಾನ ಬರುತಾನಮ್ಮ
ಇನ್ನ ಸುಡುಗಾಡು ರುದ್ರಭೂಮಿ ಬಿಟ್ಟ
ತಂದೆ ಪಟ್ಣಕ್ಕೆ ಮಗ ಬಂದಾನಮ್ಮ ಶರಬಂದರಾಜ || ತಂದಾನ ||

ಸುಡುಗಡು ಬಿಟ್ಟು
ತಂದೆ ಪಟ್ಣಕ್ಕೆ ಮಗ ಬಂದ
ಆಗ ಊರ ಮುಂದೆ
ಗೋಲ್ಯಾಟ ಆಡ್ತಾರ ಅಗಸಿ ಮುಂದೆ
ಏ ಹುಡುಗರಾ
ಈ ಊರು ಏನು ಅಂತ ಕೇಳಿದ
ಐ ನಿನ್ಗ ಗೊತ್ತಿಲ್ಲ ಏನಯ್ಯಾ ಅಂದ
ನನಗೆ ಗೊತ್ತಿಲ್ಲಪ್ಪ ಅಂದ
ನಿಂದು ಯಾವೂರು ಅಂದ್ರ
ನಂದು ರುದ್ರಗಿರಿ ಪಟ್ಣ ಅಂದ
ಅದೆತ್ತಾಗೈತಯ್ಯ ರುದ್ರಗಿರಿ ಪಟ್ಣ
ಕೆಳಗಡಿಗೆ ಐತಿ
ಇಲ್ಲಿಗೆ ಮೂರು ಹೊಲ ಪಟ್ಟಲ್ಲ
ಮೂರು ಹರ್ದಾರಿ ಐತಿ
ರುದ್ರಗಿರಿ ಪಟ್ಣ ನಂದು ಅಂದ
ಸರಿ ಬಿಡಯ್ಯಾ
ಈ ಊರು ಹೆಸರು ಹೇಳ್ರಿ ಅಂದ
ಇದು ಚಾಂಪುರ ಪಟ್ಣ
ಕೃಷ್ಣಗೊಲ್ರು ಹಾಲುಗೊಲ್ರುದವರುದು
ಕಾಂಭೋಜರಾಜ ರಾಜತನ ಮಾಡ್ತಾನ ಅಂದ್ರು
ಸರೆ ಏ ಹುಡುಗರಯಾ ನಾನು ಬರ್ತಿನಿ
ಆಗ ನಮ್ಮಮ್ಮನ ನೋಡಲಾರ್ದಂಗ ನಾನು ಬಂದು ಬಿಟ್ಟಿನಿ
ನನಗೊಂದು ಎರಡು ಗೋಲಿ ಕೊಡ್ತೀರ್ಯಾ
ಮತ್ತೆ ಕರಕ್ಯಂತೀರ್ಯಾ ನಾನು ಕಲೀತೀನಿ ಅಂದ
ಏ ನಿನ್ನ ಊರು ಹೆಸರೇ
ಉದ್ರಿಗಿರಿಪಟ್ಣ ಅಂತೀಯ

ನೀನು ಉದ್ರಿ ಕೆಡಿಸಿ ಹೋಗವನಿದ್ದಂಗ
ಆಟ ಕೆಡಿಸಿ ನೀನ ಹೋಗಂಗ ಐದಿರೋ
ಊರ್ಹೆಸರು ಹಿಂಗೈತೋ ನಿನ್ನ ಗುಣ ಹ್ಯಂಗಿರಬಹುದೋ || ತಂದಾನ ||

ಯಪ್ಪೋ ನಿನ್ನ ಊರು ಹೆಸರು ಹೇಳಿದ್ರೆ
ನಮಗೆ ಹೆದರಿಕೆ ಆಗ್ತೈತಿ
ರುದ್ರಗಿರಿ ಪಟ್ಣ ಅಂದಿ
ನೀನು ಯಾವನೋ ಉದ್ರಿ ಮಾಡಂಗದೀಯ ನೀ
ಇಲ್ಲಪ್ಪಾ ನಾನು
ನೀನು ಆಡೋತನಕ ನಾನು ಆಡ್ತೀನಿ
ನೀವು ಮನಿಗೆ ಹೋಗುವಾಗ
ನಮ್ಮ ಮನೆಗೆ ನಾನು ಹೋತಿನಿ
ನಿಮ್ಮ ಮನಿಗೆ ನೀವು ಹೋಗ್ರಿ
ಸರಿ ಬಿಡಂತ ಎರ್ಡು ಗೋಲಿ ಕೊಟ್ರು
ಏ ತಮ್ಮ ಆ ಕುಣಿ ನಡುವೆ ಈ ಕುಣಿ ನಡುವೆ ಇಡು
ಕುಣ್ಯಾಗ ಮೂರೇಟಿಗ್ಯಲ್ಲ ಕುಣ್ಯಾಗೆ ಬೀಳ್ಸಿದರೆ
ನಿನ್ನ ಗೋಲೀನ
ನಾವು ಗೆದ್ದಂಗ
ಮೂರು ಏಟಿಗೆ ನಾವು ತಪ್ಪಿದ್ರೆ
ನಾವು ಇಡ್ತೀವಿ
ನೀನು ಆಡುವಂತಿ ಅಂದ್ರು
ಅಷ್ಟೇ ಆಗಲೆಪ್ಪ ನೀವೇ ಗೋಲಿ ಕೊಟ್ಟೀರಿ
ಮತ್ತೆ ನಾನು ನೀವು ಹೇಳಿದಂಗ
ನಾನು ಕೇಳಲಿಲ್ಲದಿದ್ರೆ ಆಗಾದಿಲ್ಲ
ಆ ಕುಣಿ ನಡುವಿಲಿ
ಈ ಕುಣಿ ನಡುವಿಲಿ ಇಟ್ಟ ಗೋಲಿ
ಆಗ ಬಂದು ಹುಡುಗ ಕುಂತ್ಕಂಡ
ಇವರು ಗೋಲಿ ಹೊಡೀತಾರಪ್ಪ ಹುಡುಗ್ರು
ಈ ಹುಡುಗ ಬಂದ ಟೈಮಿನಾಗ
ಆಗ ಹುಣ್ಣು ಒಳಾಗಿದ್ದ ಶನಿಮಹಾತ್ಮ
ಹದಿನಾರು ಹಲ್ಲು ಕೂಟ ಕಡೀತಿದ್ರೆ
ಬಗ್ ಬಗ್ ಬಗ್ ಬಗ್ ಅಂತ ಉರಿತೈತಿ
ಆವೊತ್ತು ನೆನಸಿಕೊಳ್ಳತಾನ
ಚಿಕ್ಕ ಹೇಣ್ತಿನ

ಬಾಮಾ ಸುಡುಗಾಡಾಗ ರುದ್ರಭೂಮಿ ಬಾಮಾ
ರುದ್ರಭೂಮಿ ಅಂತಾನ
ಬಾಮ್ಮಾ ಸತ್ತೇ ವೈದಿಯಾ ಸುಡುಗಾಡು ಒಳಗೆ ಬಾಮಾ
ನೀನ್ನ ಬಡಿದು ನಾನೇನು ಸುಖ ಪಡೆದೆ ಬಾಮಾ
ಬಾಮ್ಮಾ ಬಂದು ನನ್ನಾ ಜೀವ ಒಯ್ಯಬಾರದಾ
ದೆವ್ವಾಗಿ ಬಂದು ನನ್ನ ಜೀವ ವಯ್ಯಬಾಮ್ಮಾ
ಒಂದೇ ಗಂಗಳದಾಗ ಅನ್ನ ಉಂಡಿವಲ್ಲೇ
ಬಾಮ್ಮಾ ಜೀವದ ಹೇಣ್ತಿ
ನನ್ನ ಜೀವ ಎಳೀ ಬಾಮಾ || ತಂದಾನ ||

ಈ ಹುಡುಗ ಆಟ ಬಿಟ್ಟು ಬಿಟ್ಟ
ಇವರೇನು ಗೋಲಿ ಹೊಡಿತಾರ
ಈ ಗೋಲಿ ನೋಡದು ಬಿಟ್ಟು
ಕಿವಿ ಅತ್ತಾಗಿಟ್ಟ
ರುದ್ರಗಿರಿ ಪಟ್ಲ ಅಂದ್ರೆ ನಂದೇ
ಸುಡುಗಾಡು ಅಂದ್ರೆ ನಂದೆ
ಬಾಮ ಚಿಕ್ಕೆಂಡ್ತಿ
ಆಗ ದೆವ್ವಾಗಿ ಬಂದು
ಜೀವದವಳು ಜೀವ ಎಳಿಕೊಂಡು ಹೋಗಂತಾನೆ
ನಮ್ಮಮ್ಮಗೇನು ದೆವ್ವ ಬಡಿದೈತಾ ಹುಚ್ಚು ಹಿಡಿದೈತಾ
ಅರೆ ಊರಿಗೆ ಮೂರು ಹರ್ದಾರಿ ಮೂರು ಹೊಲ ಪೆಟ್ಟು
ನಮ್ಮಮ್ಮ ಈ ಊರಾಗಿದ್ರೆ
ಹುಡುಗುರುಡುಗರಿಗೆ ನನಗೆ ಜೊತೆ ಇರ್ತೈತಿ
ಹೆಣ್ಮುಕ್ಳ ಹೆಣ್ಣು ಮಕ್ಕಳಿಗೆ ಜೊತೆ ಇರ್ತೈತಿ
ಛ್ಯಾ ಈ ಊರಾಗೇನು ಗುದ್ದಾಡ್ಯಾಳ
ಅದಕ್ಕೇ ನಮ್ಮಮ್ಮ ಊರು ಬಿಟ್ಹೋಗಿ
ಮೂರಂಕಣದ ಮನಿ
ಅಲ್ಲಿ ಸುಡುಗಾಡ್ಯಾಗ ಕಟ್ಟಿಕ್ಯಂಡಳ
ಒಂದೇ ಮನಿ ಅಂತ
ಏ ಹುಡುಗರ್ಯಾ
ಈ ಊರಾಗ ಸಿರಿದೇವಿ ಚಿಕ್ಕ ಹೇಣ್ತಿ ಅಂತಾನಲ್ಲ
ಸಿರಿದೇವಿ ನಮ್ಮಮ್ಮೆ
ಇಲ್ಲಾ ಆತಗೇನು ಅಕ್ಕ ಆಗಬೇಕ
ತಂಗಿ ಆಗಬೇಕ ತಾಯಿ ಆಗಬೇಕ
ಪಾಪ ಎಷ್ಟು ಮರ್ಯಾದೆ ಮಾಡರಬಹುದು ಆತನ ಜೀವಕ್ಕ
ಎಷ್ಟು ನೆನಪಿಸಿಗಂತಾನ
ನೀನು ಹುಟ್ಟಿದಾಗ ನಾವು ಹುಟ್ಟೀವಿ
ನಮಗೇನು ಗೊತ್ತಯ್ಯ
ಮತ್ತು ಯಾರಾದ್ರು ಹೇಳು
ಊರು ದನ ತರ್ಬಿಕ್ಯಂಡು
ಊರು ಮುಂದೆ ಇದಾನ ನೋಡು
ಅಲ್ಲಿ ಮುದ್ಯಾತ
ಊರು ದನ ಎಲ್ಲಾ ಕಯ್ತಾನ
ಊರಾಗಿನ ಸುದ್ದಿ ಎಲ್ಲಾ
ಮುದ್ಯಾನಿಗೆ ಗೊತ್ತು
ನಮಗೇನು ಗೊತ್ತು ಅಂದ್ರು
ಸರಿಬಿಡಂತ ಮುದ್ಯಾತನತಲ್ಲಿ ಬಂದ
ಏನಯ್ಯ ಗೋಲಿಬಿಟ್ಟು ಹೋಗ್ತಿ
ಬರ್ತೀನಿ ಇವಾಗ ಅಂತ ಬಂದ