ಆಗಿನ್ನ ತಾತನ ಪಾದ ಮುಗುದ ಗೋಲಿಯಾಟತಲ್ಲಿ ಬಂದ
ಏ ಹುಡುಗರ್ಯಾ
ಹೊಟ್ಟೆ ಹಸಿಲಾಕ್‌ತೈತಿ
ನಿಮ್ಮ ಮನಿಗೆ ನೀವು ಹೋಗಿ
ಹೊಟ್ಟೆ ತುಂಬ ಊಟ ಮಾಡಿ ಬರ್ರಿ
ನಾನು ಮನಿಗಿ ಹೋಗಿ
ಹೊಟ್ಟೆ ತುಂಬ ಊಟ ಮಾಡಿ
ಈಸು ಗೋಲಿ ತರ್ತಿನಿ
ಒಂದು ಕೈ ಚೀಲದ ತುಂಬ
ನಿಮಗೇಸು ಬೇಕೋ
ಆಸು ಕೊಡ್ತೀನಿ
ದಿನಾಲಾಡಾನಂದ
ಏ ಉದ್ರಿಗಿರಿ ಪಟ್ಣದವನು
ಅದಕೆ ಅಯ್ಯ ನೀನು ಆಟ ಕೆಡಿಸಿ ಹೋತಿ
ಅಂತ ನನಗೆ ಗೊತ್ತಿತ್ತು
ಏನನ್ನ ಅನ್ರಪ್ಪ ನನಗೆ ಹೊಟ್ಟೇಸಲ್ಯಾಕತೈತಿ
ಜೀವಕ್ಕ ಸುಖ ಇದ್ರೆ ಎಲ್ಲಿ
ಜೀವಕ್ಕ ಕಷ್ಟ ಇದ್ದಾಗ
ಯಾವಾಟ ತಗಂಡು ಏನ್ಮಾಡ್ತಿ ಅಂತ
ಶರಬಂಧರಾಜ ಚಾಂಪುರಪಟ್ಣಲಿದ್ದ
ಸುಡುಗಾಡು ರುದ್ರಭೂಮಿಗೆ ಬಂದ
ತಾಯಿ ಮಾಳಿಗೇರಿ ನೋಡಿದ್ಳು
ನನ್ನ ಮಗ ಬರ್ತಾನಂತ

ಚರಿಗೆ ನೀರು ತಾಯಿ ಹಿಡಿದಾಳ
ಹಿಡಿಯಪ್ಪ ನೀರು ನನ್ನ ಮಗನೆ
ತಾಯಿ ಪಾದ ಹಿಡುದಾನ ನೀರು ಬ್ಯಾಡ ನನಗೆಮ್ಮ || ತಂದಾನ ||

ಎದಕ್ಕಪ್ಪಾ
ಕಾಲು ಮುಖ ತೊಳ್ಕಂಡು
ಹಾಲು ಸಕ್ರಿ ಅನ್ನ ಊಟ ಮಾಡು
ಛಿ ಛಿ ಛಿ ನನಗೇ ನೀರುಬ್ಯಾಡ ಅನ್ನಾಬ್ಯಾಡ
ಅಂತಾ ಪದ ಹಿಡ್ಕಂಡ
ಇವನನೇನು ಗುಡ್ಡ ಅಂತ ಹೆಳಿಬಿಟ್ಟೆ
ಊರಾಕ ಹೋಗ್ಯಾನ

ಯಮ್ಮಾ ಏನೋ ಇವನು ತಿಳ್ಕಂಡಾನಮ್ಮಾ
ಇನ್ನ ನಿನ್ನ ಹೊಟ್ಟ್ಯಾಗ ಹುಟ್ಟೀನಿ ತಾಯಿ
ಮಗನಿಗೆಷ್ಟು ಅಬದ್ ಹೇಳಿದೆನಮ್ಮ
ಮಗನಿಗೆ ಎಷ್ಟು ಸುಳ್ಳಾಗಿ ಸುಡಿದೆಯಮ್ಮ || ತಂದಾನ ||

ಅಮ್ಮಾ ಎಷ್ಟು ಅಬದ್ದು ಹೇಲಿದಿ
ಎಷ್ಟು ಸುಳ್ಳು ಹೆಳಿದಿ ಮಗನಿಗೆ
ಹಾಂ ನಾನೇನು ಹೇಳಿದೆನಪ್ಪ
ಮಗನೆ ಗುಂಡು ಗುಂಡು ಮ್ಯಾಗ ಗುಂಡು ಇರ್ತೈತಿ ಅಂದೆ
ಕರ‍ಡಿ ಇರ್ತಾವ ಹುಲಿ ಇರ್ತೈತಿ ಅಂತ್ಹೇಳಿದಿ
ಅಮ್ಮಾ ಗುಡ್ಡ ಅಲ್ಲ
ಮಾಳಿಗೆಮ್ಮಾಲೆ ಮಾಳಿಗೆ ಮಾಳಿಗೆ ಮ್ಯಾಲೆ ಮಾಳಿಗೆ ಐತಿ
ಚಾಂಪುರ ಪಟ್ಣ ಅದು
ಹುಲಿ ಅಮತ ಗಂಡುಮಕ್ಕಳು
ಕರಡಿ ಹಂಥಾ ಹೆಣ್ಮಕ್ಕಳು ಇದಾರ
ಯಮ್ಮಾ ಊರು ಬಿಟ್ಟು ಮೂರು ಹರ್ದಾರಿ
ಸುಡುಗಾಡ್ಯಾಗ ಸೇರಿಯಲ್ಲಮ್ಮ ನೀನು
ಹಾಂ ಆ ಊರಾಗಿದ್ರೆ ನಿನಗೆ ಹೆಣ್ಣುಮಕ್ಕಳು
ಹೆಣ್ಮಕ್ಕಳು ಜೊತೆಯಾಗ್ತಿದ್ದಿಲ್ಲ
ನನಗೆ ಹುಡುಗ್ರು ಹುಡುಗ್ರು ಜತೆ ಆಗ್ತಿದಿಲ್ಲ
ಏನಮ್ಮಾ ಆ ಊರಾಗ ಗುದ್ದಾಡಿಯಾ
ಜಗಳಾಡಿಯಾ ಅಂತ ಕೇಳಿದ
ಇಲ್ಲಪ್ಪಾ ಇಲ್ಲೇ ಹುಟ್ಟಿದ್ದು
ಇಲ್ಲೇ ಬೆಳದಿದ್ದು
ಮಗನೇ ಇಲ್ಲೇ ಇರೋದಪ್ಪಾ ಅಂದ್ಳು
ಸರೆಮ್ಮಾ ಅಲ್ಲಿ ಗಂಡುಮಕ್ಕಳು ಹೆಣ್ಮಕ್ಕಳು ಇದಾರೆ
ಇಲ್ಲಿ ಬರೇ ಹೆಣ್ಮಕ್ಕಳು ಇದಾರೆ
ಯಮ್ಮಾ ನನಗೆ ಅಮ್ಮಾ ಅಂಬಾಕ ಬರ್ತೈತಿ
ಅಪ್ಪಾ ಅಂಬಾಕ ಬರುವಲ್ದೆ ಅಂತ ಕೇಳ್ದ

ಯಮ್ಮಾ ಎದಿ ಅಂಬೋದು ತಣ್ಣಗೆ ಆಗೇತಿ
ಯಾರೋ ಇವನಿಗೆ ಹೇಳಿ ಬಿಟ್ಟಾರಮ್ಮ
ತಂದಿನೆಲ್ಲ ಇವನು ನೋಡಿ ಬಂದನೇನೋ || ತಂದಾನ ||

ಮಗನಾ ನಿನ್ನ ಪಾದಜ್ಞೆ ಹೇಳ್ತಿನಿ ಕೇಳಪ್ಪ
ನನಗೆ ಹುಟ್ಟಿದಾಗಿಲ್ಲಿದ್ದ ಮುದುವೆ ಇಲ್ಲ
ನಾನು ಶಿವನ ಪ್ರಾರ್ಥನೆ ಮಾಡ್ತಿನಿ
ದಿನಾಲು ಸ್ನಾನ ಮಾಡಕ್ಯಂಬೋದು
ಸೆರಗೊಡ್ಡಿ ಶರಣು ಮಾಡೋದು
ಶಿವಾ ನೀನೇ ಅದೀಯಪ್ಪ
ಶಿವಾ ನೀನೇ ಅದೀಯಂತ
ಅಂದು ಕೈ ಮುಗೀತಿದ್ರೆ
ಅಲೆಲೆ ಈ ಯಮ್ಮ ಸುಡುಗಾಡು ರುದ್ರಭೂಮಿದಾಗ ಒಬ್ಬಾಕೆ
ದಿನಾಲು ಸೆರಗೊಡ್ಡಿ ದುಃಖ ಮಾಡ್ತಾಳಂತ
ಆಗ ಸೆರಗೊಡ್ಡಿದ್ದಕ್ಕೆ ಸೆರಗಿನಾಗ
ಒಬ್ಬ ಮಗನ್ನ ಹಾಕಬೇಕಂತ
ಮ್ಯಾಗಲಿದ್ದ ಮೂರು ತಿಂಗಳು ಮಗ ಆಗಿ
ನನ್ನ ಉಡಿಯಾಗೆ ಬಿದ್ದ್ರೆ

ಹಾಲ್ಹಾಕಿ ಬೆಣ್ಣಿಟ್ಟು ಬೆಳಸಿನಿ ಮಗನೆ
ನಿನ್ನ ನಾನು ಜೋಪಾನ ಮಾಡಿನಿ || ತಂದಾನ ||

ಅಬಾಅಬಾ
ದಿನಾಲು ಶಿವ ಅಂತ ಉಡಿ ವಡ್ಡಿ ಶರಣ ಮಾಡಿದ್ದಿಗೆ
ನಿನ್ನ ಭಕ್ತಿನೋಡಿ ಉಡಿಯಾಗ ಒಗದುಬಿಟ್ಟಾನ
ನನ್ನ ಸಲುವಿಕೊಂಡಿ ಹಾಲ್ಹಾಕಿ ಬೆಣ್ಣಿ ಇಟ್ಟಿ