ಅಮ್ಮ ನಿನ್ನ ಹೊಟ್ಟ್ಯಾಗ ಹುಟ್ಟಿದೋನು
ನಾನೊಂದು ಶಾಸ್ತ್ರ ಹೇಳ್ತಿನಿ ಕೇಳ್ತಿಯೇನಮ್ಮ ಅಂತ ಕೇಳಿದ
ಅಬಾಬ
ನನಗೆ ಬರಲಾರದ ಶಾಸ್ತ್ರ ನಿನಗೆ ಬರ್ತೈತ್ಯಾ
ನನಗೇನು ಎದುರು ಶಾಸ್ತ್ರ ಉತ್ತರ ಮಾತಾಡ್ತೀ ಮಾಡಪ್ಪ ಅಂದ್ಳು
ನೋಡಮ್ಮ ಕುಲದಲ್ಲಿ
ಒಬ್ರು ಮುದೇರು ಇದ್ರು
ಮುದೇರು ಇದ್ರೆ
ಆಗ ಇಬ್ರಿಗೆ ಮಕ್ಕಳಾಗಿಲ್ಲ
ಏನೇ ನಿನಗೆ ಮಕ್ಕಳಾಗಲಿಲ್ಲ
ಈಗ ನಿಮ್ಮ ಅಪ್ಪ ನಿಮ್ಮ ಅಮ್ಮಗೆ ನೀನೊಬ್ಬಾಕಿ ಆದಿ
ನಮ್ಮಪ್ಪ ನಮ್ಮಮ್ಮಗೆ ನಾನೊಬ್ನೆ ಆದೆ
ನಾವಿಬ್ರೆ ಆದಿವಿ
ಇಬ್ರು ನಡುವೆ ಒಬ್ಬನೂ ಹುಟ್ಟಿಲ್ಲ
ನೀನು ಸತ್ರೆ ದೀಪ ಹಚ್ಚೋರಿಲ್ಲ
ನಾನು ಸತ್ರೆ ಬೆಳಕು ಮಾಡೋರಿಲ್ಲ
ಅಂತ ಗಂಡ ಹೇಣ್ತಿ ದುಃಖ ಮಾಡಿದ್ರು
ಮಾಡಿ
ಏನ್ರಿ
ನಾವೇನು ಮಾಡಾನ
ಒಂದು ಗಿಣಿ ಸಲುವಿಕ್ಯಂಡಿವಿ
ಇಬ್ರು ನಡುವಿಲಿ ಮಲಗಿಸ್ಯಕೆಂಬೋದು
ನಿದ್ದಿ ಮಾಡೋದು
ಆ ಗಿಣಿ ಏನು ಮಾಡೋದು
ಇಬ್ರಿಗೂ ಮುದ್ದು ಕೂಡೋದು ಅದು
ಅಮ್ಮಾಂತ ಇನ್ನವರ ತಂದಿನಾ ತಾಯಿನಾ
ಇದೇ ಮಗ ಅಂಬೋದು
ಇದೇ ಮಗನೆ
ನಾವು ಗಿಣಿ ಜೋಪಾನ ಮಾಡಿಕ್ಕಂಡೀವಿ ಅಂದ್ರು
ಆಗಮ್ಮಾ ಗಿಣಿ ಜೋಪಾನ ಮಾಡಿಕ್ಯಂಡಿದ್ರು
ಆ ಗಿಣಿ ಏನು ಮಾಡಿತು
ಎಲೆಲೆ ಇವರು ಮುದ್ಯೋರೆ ಆಗಿಬಿಟ್ರು
ಇವರು ಸತ್ತಮ್ಯಾಲೆ ನನ್ನ ನೋಡೋರು ಯಾರು
ಅಂತಾ ಇಬ್ರು ನಡುವಿಲ್ಲಿರೋದು ಇಬ್ರಿಗ ಮುದ್ದುಕೊಟ್ಟು
ಪಟಪಟ ರೆಕ್ಕೆ ಬಡಿದು ಮ್ಯಾಕೆ ಹಾರಿಬಿಡ್ತು
ಏಳು ಸಮುದ್ರ ಆಕಡಿಗೆ ಬಂತು
ಏಳು ಸಮುದ್ದರದಾಗ ದಾದಿ ಮಾವಳಣ್ಣಂತ
ಐದು ತಿಂಗಳಿಗೆ ಒಂದೇ ಆಗೋದು
ಹಣ್ಣು ಗಿಡುಕ
ಬಯಿಲಿ ಹರಕ್ಯಂಡು ಬಂದು ಬಿಡ್ತು ಅದು
ಕೈಯಿಲ್ಲದ್ದು ಗಿಳಿ
ಯಮ್ಮಾ
ಈ ಹಣ್ಣು ತಿನ್ರಿ
ತಲಿಗೀಟು
ಆಗ ಹದ್ನೆಂಟು ವರುಷ ಹರೇದವರು ಆಗ್ತಿರಿ
ನಿಮಗೆ ಇದರ ರಕ್ತ ಉಕ್ಕಿ ಎರ್ತೈತಿ
ಹರೇದವರು ಆಗ್ತಿರಿ ಅಂತು
ಏಯಮ್ಮ ಗಿಣಿ ತಂದು ಕೊಡ್ತು
ಮುದೇರಹೋಗಿ ಹರೇದವರು ಆಗ್ತೀವಂತೆ
ನಾವೇನು ತಿಂತೀವಿ
ಈ ಊರಾಗ ಮುದೇರು ಬಹಳ ಮಂದಿ ಅದ್ಯಾರ
ಮುಂಚೇಗೆ ಯಾರಿಗೆ ಕೊಡಬೇಕು
ಶ್ಯಾನುಬೋಗರಿಗೆ ಕೊಡಬೇಕು
ಶ್ಯಾನುಬೋಗರಿಗೆ ಕೊಟ್ಟಮ್ಯಾಲ
ಐನೋರಿಗೆ ಕೊಡ್ಬೇಕ
ಐನೋರಿಗೆ ಕೊಟ್ಟಮ್ಯಾಲೆ
ನಾವು ಊಟ ಮಾಡ್ಬೇಕು
ಇಲ್ಲಿ ಬಚ್ಚಲೈತಿ ಮನಿಮುಂದೆ
ಅಲ್ಲಿ ಕುಣಿ ತೋಡಿ ಗೊಬ್ಬರ ಹಾಕಿ
ಈ ಹಣ್ಣು ಹಂಗೇ ಇಡ್ತಿನಿ ಈ ಭೂಮ್ಯಾಗ
ದಿನಾ ನೀರು ಹಾಕ್ತಿನಿ
ಗಿಡ ಆಕ್ತೈತಿ
ಗಿಡಕ್ಕ ಜಗ್ಗಿ ಆಗ್ತಾವ

ಎಲ್ಲಾರಿಗೆ ದಾನ ಮಾಡ್ತಿನಲ್ಲಾ
ನಾವು ಗೂಡವೂ ಊಟ ಮಾಡ್ತಿವಲ್ಲ
ಊರೆಲ್ಲಾ ಹರೇದವರು ಆಗಬೇಕು || ತಂದಾನ ||

ಊರಾಗ ನಾವೊಬ್ರೆ ಬೇಸಿದ್ರೆ ಹ್ಯಾಂಗ
ಎಲ್ಲಾರು ಊರು ಉದ್ಧಾರ ಆಗಬೇಕು
ಅಂತಾ ಆ ಮುದಿಕಿನ್ಹಾಡ ನಾಟಿ ಹಾಕಿಬಿಟ್ಟಳು
ಅದು ಬೀಜ ಒಡೇಬಡ್ಕಂಡು
ಎಲೆ ಹೊಂಟ್ತು
ಎಲೆ ಆಗಿ ಆಗ ಮಗ್ಗಿ ಆಯ್ತು
ಮಗ್ಗಿ ಆಗಿ ಒಂದೇ ಹೂವಾಯ್ತು
ಒಂದೇ ಕಾಯಾಯ್ತು
ಸಟ್ಟಸರಿಹೊತ್ನಾಗ ಕೋಳಿ ಕೂಗುವಾಗ ಎದ್ದೇಳೋದು
ಆಗ ಕಸ ಬಳಿವಾಗ

ಹಣ್ಣು ಉದುರಿ ನೆಲಕ್ಕೆ ಬಿದ್ದೈತೋ
ಒಂದೇ ಹಣ್ಣು ಇನ್ನು ಬಿದ್ದಮ್ಯಾಲೆ || ತಂದಾನ ||

ಆಗ ಮನ್ಯಾಕ ಬಂದ್ಳು
ನೂರು ವರ್ಷ ನಾಗೇಂದ್ರ
ಆಗ ಮುದೇದು
ಆಹಾಹ ಪುಣ್ಯಾತ್ಮರು
ಯಾರೊ ಗಿಡ ತಂದು ಹಾಕ್ಯಾರಂತ
ಹಣ್ಣು ಉದಿರೇತಂತ
ಆ ಮುದೇಕಿ ಕಸ ಬಳಿವಾಕಂತ
ಇನ್ನವರ ಮನಿ ಮುಂದೆ ಬಳಿಕಂತ ಬರ್ತಿದ್ಳು
ಒಂದು ಕಡಿಗೆ ಹಣ್ಣು ತಿಂದುಬಿಡ್ತಾದು ಹಾವು
ಆಗಿನ ಹದಿನೆಂಟು ವರ್ಷದ ಹಾವಾಗಿಬಿಡ್ತು ಹರೇದು
ಮುದೇ ಹಾವು ಹೋಗಿ
ಇನ್ನರ್ಧ ಒಂದು ಪಕ್ಕೆ ಐತ್ಯಲ್ಲ
ಆಗ ಏನ್ಮಾಡ್ತ ಅಂದ್ರೆ
ಆಗ ನಾಗರ ಹಾವು
ವಿಷ ತುಂಬಿಸಿಬಿಡ್ತು ಅದು
ಅದ್ರಾಕ ನಾನು ಮುಟ್ಟಿದ ಹಣ್ಣು
ಯಾರು ತಿನ್ನಬಾರ್ದು ಅಂತ
ವಿಷ ತುಂಬಿ ಬಿಡ್ತು
ಹಚ್ಚಗಾಯ್ತು ಕೆಂಪಗಿದ್ದ ಹಣ್ಣು
ಹೋಗಿಬಿಡ್ತು ಆ ನಾಗರಹಾವು
ಈ ಮುದೇಕಿ ಕಸ ಬಳೀಕಂತ ಬಂದ್ಳು
ಏಯಮ್ಮ ಅರ್ಧಗಿಣಿ ತಿಂದೈತಿ
ಅರ್ಧ ಕೆಳಗ ಬಿದೈತಿ
ಯಮ್ಮಾ ಎಷ್ಟ ಹಚ್ಚಗೈತಮ್ಮ
ಗಿಡ ಮ್ಯಾಲಿದ್ದಾಗ ಕೆಂಪಗಿತ್ತು
ಅಂತಾ ಹಣ್ಣು ತಗಂಡು ಬಂದ್ಳು
ಜಾಮಿನಾಗ ಹಾಕಿ ಗೂಡಿನ್ಯಾಗ ಇಟ್ಳು
ಆ ಊರಾಗ ಮೂರ ಮೊಮ್ಮಕ್ಕಳು ಕಂಡಾಳ
ಯಾರು ಶಾನುಭೋಗರ ಮುದೇಕಿ
ಮಕ್ಕಳು ಹೊಟ್ಟ್ಯಾಗ ಮಕ್ಕಳು
ಮಕ್ಕಳು ಹೊಟ್ಟ್ಯಾಗ ಮಕ್ಕಳು
ಮಕ್ಕಳು ಹೊಟ್ಟ್ಯಾಗ ಮಕ್ಕಳು
ಮೂರ ಮೊಮ್ಮಕ್ಕಳ ಕಂಡಾಳ
ಇನ್ನು ಎರಡು ದಿನ ಮೂರು ದಿನ ಇದ್ರೆ
ಸತ್ಹೋಗೊ ಮುದುಕಿ
ಮಲ್ಸಬೇಕು ಇನ್ನ ತಾವಾಗಿ ಎಬ್ಬಿಸಬೇಕು
ಮೊಮ್ಮಕ್ಕಳು ಹೋತಿದ್ರು
ಈ ಮುದೇಕಿ ನೋಡಿದ್ಳು
ಯಪ್ಪಾ ನಿಮ್ಮವ್ವ ಸತ್ತು ಹೋಗ್ಯಾಳ ಇದಾಳ
ಐ ಇನ್ನಾ ಇದಾಳವ್ವ ನಮ್ಮವ್ವ ಅಂದ್ರು
ಏಯಪ್ಪ ನನಗ ಗಿಣಿ ತಂದು ಕೊಟ್ಟೈತಿ
ಆಗ ಹದಿನೆಂಟು ವರುಷ ಹರೇದವರಾಗ್ತಾರಂತ
ನೂರು ವರ್ಷ ಮುದೇರು
ನಿಮ್ಮವ್ವನ ಕರ್ಕಂಡು ಬರ್ರಿ
ಹಣ್ಣು ಕೊಡ್ತೀನಂದ್ಳು
ಸರಿಬಿಡು ಅಂತ
ಹಿಂದಕ ಓಡಿಬಂದ್ರು ಆ ಹುಡುಗರು
ಯವ ಯವ್ವ ಗಿಣಿ ತಂದುಕೊಟ್ಟೈತಂತೆ
ಆಗ ನೂರ ವರ್ಷ ಮುದೇರು
ಹದ್ನೆಂಟು ವರ್ಷ ವಯಸ್ಸು ಬರ್ತೈತಂತೆ
ಊಟ ಮಾಡ್ತೀಯೇನವ್ವ ಅಂದ್ರು
ಯಪ್ಪಾ ಹ್ಯಂಗನ್ನಾ ತಂದು ಕೊಡ್ರೋ
ಮೊಮ್ಮಕಳೆ ಅಂದ್ಳು
ಅಂದ್ರೆ ಅತ್ತಾಗೊಬ್ರು ಇತ್ತಾಗೊಬ್ರು ಕೈಹಿಡ್ಕಂಡ್ರು

ಮುದಿಕಿನ್ನವಾಗೆ ಕರ್ಕಂಡು ಬಂದಾರೆ
ಅವ್ವನ ಮನಿಗೆ ಕೇಳೇ ನಮ್ಮಮ್ಮ || ತಂದಾನ ||

ಹಣ್ಣು ಕೊಟ್ರು
ಯವ್ವಾ ಬಾಯಾಗ ಹಲ್ಲಿಲ್ಲ
ಹ್ಯಾಂಗ ತಿಂತಿ ಯವ್ವಾ ಅಂತ ಕೇಳಿದ್ರು
ಯಪ್ಪಾ ಯಂಗನ್ನ ರಸನ್ನ ಹಿಂಗಿಬಿಡ್ತಿನಿ
ಅಮ್ಮಾ ಅಮ್ಮ ಹ್ಹಾ ಅಂತ ಸಪ್ಪರಿಸಿ ಬಿಡ್ತಿನಿ ಅಂದ್ಳು
ಸರಿಬಿಡಂತ ಕೊಯ್ದ ಕೊಟ್ರು
ಆಗ ಮುದಿಕಿ ಬಾಯಾಗ ಇಟ್ಕಂಡು
ಆಮ್ಮ ಅಂತ ಸಪ್ಪರಿಸಿಬಿಟ್ಳು

ಯಗರಿಬಿದ್ದು ಸತ್ತು ಹೋಗ್ಯಾಳಣ್ಣಾ
ಆಗ ನಾಗರಾವು ಇನ್ನ ಇಷಾ
ಕೆಂಪಗಿದ್ದ ಮುದೇ ಹಚ್ಚಗಾದಳಮ್ಮ ಮುದೆಕಿ || ತಂದಾನ ||

ಆ ಮುದೇಕಿ ಸತ್ತು ಹೋಗಿಬಿಟ್ಳು
ಮೂರು ಮೊಮ್ಮಕ್ಕಳು
ಸೊಸೆನೋರು ಮಗ ಬಂದು ಇನ್ನು

ಯಮ್ಮಾ ಎಷ್ಟು ಗ್ಯಾನ ನನಗೆ ಹೇಳುತ್ತಿದ್ದೆ
ಯಮ್ಮ ಏಸು ದಿನ ಕಾಲಕಳೆದೆ ಲೋಕ
ಯೇಸು ದಿನ ಕಾಲ ಕಳೆದುಬಿಟ್ಟೆ ಭೂಮಿಮ್ಯಾಲೆ
ಯಮ್ಮ ಮೂರು ತಲೇ ನೀನು ಲೋಕ ನೋಡ್ದಿ
ಕಾಲಕ್ಕಾಗೇ ನೀನು ಹೋದೆ ತಾಯಿ || ತಂದಾನ ||

ಅಂತಾ ದುಃಖ ಮಾಡಿದ್ರು
ಎಷ್ಟು ದುಃಖ ಮಾಡಿದ್ರು ಏನು ಮಾಡ್ಬೇಕು
ಹೋದ ಜೀವ ತಿರಗ ವಾಪಾಸ್ ಬಾ ಅಂದ್ರೆ
ಬರ್ತೈತಾ
ಬರದಿಲ್ಲ
ಬಂಡಿ ಕಟ್ಟಿಗೇರಿಸಿಬಿಟ್ರು
ಮೂರು ಡಬ್ಬೆ ಇನ್ನ ಒಳ್ಳೆಣ್ಣೆ ತರಿಸಿದ್ರು
ಅವ್ಬನ ದಡೇವು ಹೂ ಹಾಕಿದ್ರು

ಅವ್ವನ ಮ್ಯಾಲೆ ರೊಕ್ಕ ಉಗ್ಗುತ್ತಾರ
ನೂರೊರುಷ ಮುದೇಕಿ ಬಾಳೇಳಂತಾ
ಮೂರು ಮೊಮ್ಮಕ್ಕಳು ಲೋಕ ನೋಡೋರಿಲ್ಲಾ || ತಂದಾನ ||

ಮೂರು ಮೊಮ್ಮಕ್ಕಳನ್ನು ನೋಡಿದೋರು
ಯಾರಿದ್ದಾರೆ ಈ ಭೂಮಿಮ್ಯಾಲೆ
ಅಂತಾ ಆ ಮುದೇಕಿನ್ನ ತಂದ್ರು
ಕಟ್ಟಿಗೆ ಮ್ಯಾಲೆ ಮುದ್ಯಾಕಿನ್ನ ಮಲಗಿಸಿದ್ರು
ಮುದ್ಯಾಕಿ ಮ್ಯಾಲೆ ಗಂಧದ ಚಕ್ಕಿ ಹಾಕಿದ್ರು
ಆಗ ಇನ್ನ ಒಳ್ಳೆಣ್ಣಿ ಡಬ್ಬಿ ಸುರಿದ್ರು

ಅವಾಗಲೆ ಬೆಂಕಿ ಇಟ್ಟಾರಲ್ಲಾ
ದಗದಗ ದಗದಗ ಉರಿತದಮ್ಮಾ
ಉರಿದುವಾಗೆ ಕುಪ್ಪೆಬಿದ್ದಳಮ್ಮಾ || ತಂದಾನ ||

ಬೂದ್ಯಾಗಿ ಕುಪ್ಪೆ ಬಿದ್ದು ಬಿಟ್ಳು
ಬೂದೆಲ್ಲಿ ಕೂಡುಮಾಡಿ ಸಮಾಧಿ ಕಟ್ಟಿದ್ರು
ಆ ಮುದೇಕಿ ಮುಂದೆ
ಆಗ ತುಳಸಿ ಗಿಡ ಹಾಕಿದ್ರು
ಹಾಕಿ ಕೈಮುಗಿದು ಮನಿಗ ಬಂದ್ರು
ಏನಮ್ಮಾ ಒಳ್ಳೆ ಗಿಣಿ ಸಲುವಿಕ್ಯಂಡೀರಿ ನೀವು
ಎಲ್ಲೆನ್ನ ಮನುಷ್ಯರೇನ್ನ
ಇದ್ದೋರ್ನೆಲ್ಲ ಹಾಳು ಮಾಡೋ ಗಿಣಿ
ಖರೆವೆ ಈ ಗಿಣಿಗೆ ಬೆಂಕಿಹಚ್ಚ
ಎಷ್ಟೋ ಜೋಪಾನ ಮಾಡಿಕ್ಯಂಡಿದ್ದೆ
ಇದೇ ಮಗ ಇದೇ ಎಲ್ಲ ಅಂತ
ನಾವು ಎಷ್ಟೋ ಒದ್ದಾಡಿದ್ವಿ
ನಾವೇ ತೀದಿದ್ರೆ ಗಂಡ ಹೆಂಡ್ತಿ
ನಾವು ಸತ್ತೊತ್ತಿದ್ದಿವ್ಯಾ
ಪಾಪ ಅಂತ ಜೋಪಾನ ಮಾಡಿದ್ರೆ
ಇದೂ ಜೀವ ಕೊಲ್ಲೋ ಗಿಣಿ
ಈ ಗಿಣಿ ಇರಬಾರದು ಅಂತ
ಮುದೇರು ಹಿಡ್ಕಂಡು ಬಂದ್ರು
ನೋಡಮ್ಮಾ ತಾಯಿ ಬೇಸ್ ಕೇಳು
ಏಯಪ್ಪ ಏಟ್ಹೊತ್ತು ಹೇಳ್ತಿಯಲೋ ನೀನು
ಮತ್ತೇ ಎದುರು ಶಾಸ್ತ್ರ ಇದು ನಿಮಗೆ
ಎದುರು ಹಾಕಿನಿ
ಎದುರು ಮಗ ಹುಟ್ಟಿನಿ ನಿನಗೆ
ಅಂತಾ ಆಗ ಏನು ಮಾಡಿಬಿಟ್ರು
ಗಿಣಿ ಹಿಡ್ಕಂಡು ಬಂದ್ರು
ಊರು ಬಿಟ್ಟು ಮೂರು ಹರ್ದಾರಿ ಬಂದ್ರು
ಬಂದು ಎರಡು ರೆಕ್ಕೆ ಎರಡ ಕಾಲ ಕಡ್ದು ಬಿಟ್ರು
ಗಿಣೀನ ಹಾಂಗೆ ಬಿಟ್ಟುಬಿಟ್ರು
ಹಾರಯೋಗ್ಹಾಕ ರೆಕ್ಕೆ ಇಲ್ಲ
ನಡೋದ್ಹೋಗಾಕ ಕಾಲಿಲ್ಲ
ಆ ಗಿಣಿ ಏನಂತ ದುಃಖ ಮಾಡ್ತತ

ಯಪ್ಪಾ ಜೀವಕೊಟ್ಟವನು ಎಲ್ಲೀ ಇದ್ದಿಯಪ್ಪಾ
ನಾನು ಧರ್ಮ ತಿಳೀದಿನಿ ಭೂಮಿ ಮ್ಯಾಲೆ ಶಿವನೇ
ನಾನು ಕರ್ಮವಂತ ಲೋಕ ಹೋಗಲಿಲ್ಲ || ತಂದಾನ ||

ಆ ಗಿಣಿ ಅಂತೈತಿ
ನಾನು ಧರ್ಮಂತ ಹೋದೆ ಪರಮಾತ್ಮನೆ
ನಾನು ಪಾಪ ಅಂತ ಹೋಗಿಲ್ಲ
ಈಗ ಎರಡು ರೆಕ್ಕ ಕೆಳ್ಕಂಡೆ
ಎರ್ಡು ಕಾಲ ಕಳ್ಕಂಡೆ
ನನ್ನ ಜೀವ ಯಾಕ ಉಳಿಸ್ತಿ
ನನ್ನ ಜೀವ ಎಳಿಯಪ್ಪಾ ಪರಮಾತ್ಮನೆ ಅಂತು
ಪರಮಾತ್ಮ ಪ್ರತೇಕ್ಷವಾದ
ಬಂದು ರೆಕ್ಕೆ ರೆಕ್ಕೆ ಆನಿಸಿಬಿಟ್ಟ
ಕಾಲುಕಾಲೇ ಅನಿಸಿಬಿಟ್ಟ
ಎರ್ಡು ರೆಕ್ಕೆ ಎರ್ಡು ಕಾಲ ಬೇಸಾದವು
ಸ್ವಾಮೀ ಪರಮಾತ್ಮ ಅಂತ ಹೊಗಿ ಬಿಟ್ಟ
ಈ ಮದೇರಿಗ ಮತ್ತೆ ಐದು ತಿಂಗಳಿಗ
ಒಂದು ಹಣ್ಣು ಬಿದ್ದು ಬಿಡ್ತು
ಹೇ ನೀನು ಸತ್ರೆ ನನ್ನ ನೋಡೋರಿಲ್ಲ
ನಾನು ಸತ್ರೆ ನಿನ್ನ ನೋಡೋರಿಲ್ಲ
ಇಬ್ರೂ ಒಂದೇ ದಿವಸ ಸಾಯೋನ
ಆಗ ನಮ್ಮಾಸ್ತ್ಯೆಲ್ಲ ಅವರು ತಕಂತಾರ
ನಮ್ಮನ್ನ ಹೋತ್ಗಂಡ್ಹೋಗಿ ಕುಣ್ಯಾಗ ಹಾಕಿ ಬರತಾರ
ಅಂತ ದಾದಿ ಮಾವಲ್ಹಣ್ಣು
ತೆಲಿಗೀಟು ತಿಂದ್ರು
ತಿಂದು ಮುದೇರು ಹದ್ನೆಂಟು ವರ್ಷ
ಹರೇದವರಾಗಿ ಬಿಟ್ರು
ಆದಮ್ಯಾಲೆ ಗಂಡ ಹೆಂಡ್ತಿ ತಲೆತಲೆ ಹಿಡ್ಕಂಡು
ಏನಂತ ದುಃಖ ಮಾಡ್ತಾರ

ಯಮ್ಮಾ ಮಗನ್ನ ಕಳ್ಕಂಡಿವಿ ನಾವು ಲೋಕ ತಾಯಿ
ಯಪ್ಪಾ ಎಲ್ಲೀ ಒಯ್ದೀಯಿ ಸಾವರ ಬಣ್ಣಾದ ಮಗಾ
ನಿನ್ನ ಬಣ್ಣ ನೋಡಲಾರದ ನಾವು ಹೋದಿವಿ ಮಗನಾ
ನಮಗೆ ಬಣ್ಣ ಬಂತು ನಿನಗೆ ಬಣ್ಣ ಇಲ್ದಂಗಾತು ಮಗನೆ
ಮಗನಾ ಎಲ್ಲಿ ಹೋದಿ ಇನ್ನ ಲೋಕದಾಗ
ದುಃಖ ಮಾಡ್ತಾರ ಗಂಡ ಹೆಂಡ್ತಿ || ತಂದಾನ ||

ಕೇಳೇ ತಾಯಿ
ಅವರು ಮಗ ಗಿಣಿ
ಮತ್ತೆ ಇನ್ನ ತಂದಿಡೋ ಮಗ ಗೂಡ ಅಲ್ಲ
ಆ ಗಿಣೀನ್ನ ನೊಡಿ ದುಃಖ ಮಾಡ್ತಾರ
ತಲೆ ತಲೆ ಹಿಡ್ಕಂಡು
ಹಂಗ ಮಗನ ಗಿಣಿ ಕಳ್ಕಂಡು ಅವ್ರು ದುಃಖ ಮಾಡ್ತಾರ
ಚಾಂಪುರ ಪಟ್ಣದಾಗ

ಹೇಣ್ತೆ ಕಳ್ಕಂಡು ದುಃಖ ಮಾಡ್ತಾನಮ್ಮ
ಸಿರಿದೇವಿ ಅಂಬ್ಬೋರು ಯಾರಮ್ಮ ಲೋಕ ನೆನಸವರು
ರುದ್ರ ಭೂಮಿ ಅಂಬೋರು ಇನ್ನ ಯಾರಮ್ಮ ನಿನಗ್ಯಾಗಿ || ತಂದಾನ ||

ಅವ್ರು ಗಿಣಿ ಕಳ್ಕಂಡು ಅಳ್ತಿದ್ರೆ
ಮಗನ್ನ ಕಳ್ಕಂಡು
ಆತ ಹೇಣ್ತಿ ಕಳ್ಕಂಡು ಅಳ್ತಾನ
ಯಮ್ಮಾ ಸಿರಿದೇವಿಯಂಬೋರಯಾರು
ಈಗ ರುದ್ರಭೂಮಿಯಲ್ಲಿ ಇರೋರಂದ್ರೆ ಯಾರು
ಮಗನಾ ಇವನು ನೋಡಿ ಬಾ ಅಂದ್ರೆ
ಇನ್ನ ಎಲ್ಲಾ ತಿಳ್ಕಂಡು ಬಂದಾನಿವನು
ಯಪ್ಪಾ ಈಗ ಸಿರಿದೇವಿ ಯಂಬೋರಯಾರು ಅಂದ್ರೆ
ನೀನೊಬ್ಬಾಕೆ ಏನಮ್ಮಾ
ಊರಾಗಿರೋದು ಚಾಂಪುರುದಾಗ
ನಾನೋಬ್ಳೆ ಮಗನೆ
ಯಾರು ಹೇಳಿದ್ರಪ್ಪ?
ಯಾರು ಹೇಳಿಲ್ಲ
ನಾನು ಹೋಗಿ ನೋಡಿಬಂದೆ
ಅಯ್ಯೋ ಕಾಂಭೋಜರಾಜ ಅಂಬಾತ ನಿಮ್ಮ ತಂದಿ
ಹಾಲುಗೊಲ್ರು ನಾವು
ಏಳು ಮಂದಿ ಹೆಂಡ್ರು
ಆರು ಮಂದಿಗ ಕೊಟ್ಟ ದೇವ್ರು ವಿಷ್ಣ
ನನಗೆ ಕೊಡ್ಲಿಲ್ಲಪ್ಪ
ಆಗ ಆ ಮಕ್ಳಿಗ ನನ್ನ ಕೈ ಕೊಟ್ರು
ನಾನ ಸಲುವಿದೆ
ಮಾವಿಳ ಹಣ್ಣುದಾಗ ನಮ್ಮ ಕ್ನೋರು ಮದ್ದಿಟ್ಟು ಕೊಟ್ರು
ಮಕ್ಳು ತಿಂದು ಕೆಳಗ ಬಿದ್ದಮ್ಯಾಲೆ ಮದ್ದು ಇಟ್ಟಾಳಂತ
ನಿಮ್ಮ ತಂದಿ ನೆಗ್ಗಿನ ಮುಳ್ಳಿನ ಮ್ಯಾಲೆ
ಡಬ್ಬಗಾಳ ಮುಳ್ಳುಮ್ಯಾಲೆ
ಆಗ ಕತ್ತರಿ ಕುಡುಗೋಲು
ಕೆಬ್ಬಣ ಹೊರಸ ಮ್ಯಾಲೆ
ನನ್ನ ಕಷ್ಟ ಕೊಟ್ಹೋದ ಮಗನೆ
ನನ್ನ ಕಷ್ಟ ನೋಡಲಾರ‍ದ ಶಿವ ಬಂದು
ನನ್ನ ಕೊಟ್ಟು ಹೋದ್ನಪ್ಪ ನಿನ್ನ
ನೋಡಮ್ಮ ಅಂಗೇಳಮ್ಮಾ ಅಂದ್ರೆ
ನನಗೆ ಎದುರು ಶಾಸ್ತ್ರ ಹೇಳಾಕ ಬರ್ತೀಯಾ