ಚಾಂಪುರ ಪಟ್ನದಾಗ ಐನೋರು ಈರಮ್ಮನ ಮಗ ಮಡಪ
ಸಾಲಿ ಓದೋನು
ಗಂಡಸತ್ತ್ಹೋಗ್ಯಾನ
ಒಬ್ನೇ ಮಗ
ಯಪ್ಪಾ ಶಿವರಾತ್ರಿ ಜಾಗರಣಲೋ
ಈವೊತ್ತು ನಿನ್ನ ಸಾಲಿ ರಜ ಬಿಟ್ಟಾರ
ಯಪ್ಪಾ ಹೋಗಲೋ ನಿಮ್ಮ ತಂದಿಗ ಹುಟ್ಟಿದ ಮಗ
ಊರಿಗೆ ಗಣಂಗಳಾಗಿ
ಏನಿಲ್ಲ ಇದ್ಯೆ ಇಲ್ಲ ಪುರಾಣಲ್ಲ
ಓದಿಕ್ಯಂಬಾಂಗಿಲ್ಲ ದಣ್ಕಾಂಬಂಗಿಲ್ಲ
ಕುಂತಿ ಬೀಕ್ಷಾ ಕೋಡಾಂಡಸಿವ
ಶಿವಾ ಅಂತ ಅಂದು ಬಿಡು
ಬರ್ರೀ ಸ್ವಾಮಿ ಮನ್ಯಾಕ ಅಂತ ಕರೀತಾರ
ಬಣ್ಣದ ರಗ್ಗು ಹಾಸ್ತಾರ
ನಿನ್ನ ಕುಂದ್ರಸ್ತಾರ
ಆಗ ಪಾತ್ರೆ ತರತ್ತಾರ
ಆಗ ಪಾದ ಇಡ್ತಿ
ಪಾದ ತೊಳಕಂಬತ್ತಾರ
ಆಗ ಮುತ್ತಿನ ಸೆರಗು ಹಾಸಿ
ಹತ್ತು ರೂಪಾಯಿ ಕಾಣಿಕೆ ಇಟ್ಟು
ನಿನ್ನ ಪಾದ ಹಿಡಕಂಬತ್ತಾರ
ಏನು ನಾವೇನೂ ಕಷ್ಟ ಪಡಂಗಿಲ್ಲ
ಚಿರಂಜೀವ ಚಿರಂಜೀವ ವಿಷ್ಣು ಈಶ್ವರ ದುರ್ಗಾವಸಿ
ಅಂಬೋದು
ಇಷ್ಟೇ ಏನು ಎಳ್ಳು
ಹೆಸರು ಕುಬ್ಳಕಾಯಿ ಈರೇಕಾಯಿ ಬೆಂಡೆಕಾಯಿ
ಆಗ ಅಕ್ಕಿ ಬ್ಯಾಳಿ ಬೆಳದಿದ್ದುವೆಲ್ಲ ಕೊಡ್ತಾರ
ಇಲ್ಲ ಅಂದ ಮನೆ ಹಾಳಾಗಿ ಹೋಗುತ್ತೈತಿ
ಹೋಗಿದ್ದ ಮನಿಗೆ ಮೂರು ಸರ್ತಿ ಹೋಗು
ಹೊರಾಗಿಟ್ಟುಕ್ಕಂಡು ದಾನ ಮಾಡ್ತಾರ ಅಂದ್ಳು
ಯಮ್ಮಾ ಯಾವತ್ತೂ ಹೋಗಿಲ್ಲಮ್ಮ
ಹೋಗಬೇಕಪ್ಪ ಹ್ಯಾಂಗಲೋ ಮಗನೆ
ನಿಮ್ಮಪ್ಪ ಹೋದ
ಊರಿಗೆ ಗಣಂಗಳು ಐನೋರು ಮಠದವರು
ಕಂಡೋರ ಮನ್ಯಾಗ ಭಿನ್ನ ತೀರಿಸಬೇಕು
ಹೋದ ಮ್ಯಾಲೆ
ಮಗ ಬ್ಯಾಡಬ್ಯಾಡ ಅಂದ್ರೆ
ಲಿಂಗ ಇನ್ನ ಹಾಕಿ ಬಿಟ್ಳಪ್ಪ ಕೊಳ್ಳಾಗ
ಕೈಯಾಗ ಗಂಟೆ ಕೊಟ್ಟಳು
ಎಡ ಕೈಯಾಗ ಒಂದು ಕೋಲು ಕೊಟ್ಳು
ಜೋಳಿಗೆ ಸಿಗೆ ಹಾಕಿದ್ಳು
ಆಗ ಮಗನಿಗೆ ಹೋಗಲೋ ಹೋಗಲೋ ಅಂದಳು
ಯಮ್ಮಾ ಯಾವತ್ತೂ ಹೋಗಿಲ್ಲ
ನಾನನ ಬರ್ತಿನಿ ನಡೇಲೋ
ಎಂಥಾ ಮಗ ಹುಟ್ಟೀಯಿ
ಎಂಥಾ ದಡ್ಡದವನು ಅಪ್ಪಾ ನೀನು
ನಡಿ ನಾನು ತೋರುಸ್ತಿನಿ
ಅಂತ ಬಾಕ್ಲು ಮುಚ್ಚಿದ್ಳು
ಬಂದ್ಳು ಅಮ್ಮ ಯಾವ ಮನಿ ಕೇಳಬೇಕು
ಮಗನೇ ಈ ಗೌಡ್ರು ಮನ್ಯಾಕ ಹೋಗು
ಬೇಕಾದಂಗ ಪಾದ ತೊಳಕಂಡು ದಾನ ಮಾಡ್ತಾರ
ಆಗ ಕೇಳಪ್ಪಾ ದೊಡ್ಡ ಹೇಣ್ತಿ ಮಾಡ್ತಿನಿ ಹೋಗಲೋ ಅಂದ್ಳು
ಸರಿಬಿಡು ಅಂತ ದಡ ದಡ ದಡ ಮನ್ಯಾಕ ಬಂದ
ಎರಡು ಬಾಕ್ಲ ತಟಾದ
ಒಬ್ರು ಕಂಡಿಲ್ಲ
ಹಿಂದಕ ನೋಡಿದ
ಆಗ ಏ ಯಮ್ಮ ಬಡಗ್ನ್ ಬಾಕ್ಲ ಮುಚ್ಚಿ
ನನ್ನ ಬಡ್ತಾಬಡಿದ್ರೆ
ಏ ಮನ್ಯಾಕ ಬಂದೀಯಂತ
ಯಮ್ಮಾ ಇವೊತ್ತು ಶಿವ ನನ್ನ ಮ್ಯಾಲೆ ಹೋಗ್ತಾನ
ಯಾರಮ್ಯಾಲೆ ಹೋಗದಿಲ್ಲ
ಅಂತ ಹಿಂದಿಕ ಬಂದ
ಈ ಯಮ್ಮು ಐನೋರು ಈರಮ್ಮ ನೋಡಿದ್ಳು
ಅರೇ ಸುಮ್ನೆ ಬಾಕಿಲ್ ಮುಚ್ಚಿ ಬಂದಿನಿ
ಬೀಗನ್ನ ಹಾಕಿ ಬರ್ತಿನಿ ಅಂತ

ಮನಿಗಾಗಿ ಬಂದಾಳ ಬಾಕ್ಲ ತೆರಕಂಡಾಳ ಮನ್ಯಾಗೆ ಕುಂತಾಳ || ತಂದಾನ ||

ಬೀಗ ಹಾಕಿ ಬರ್ತಿನಿ ಅಂತ ಬಂದು
ಬಾಕ್ಲ ತೆರಕಂಡು ಮನ್ಯಾಕ ಕುಂತಕಂಡ್ಳು ಆಕಿ
ಎಲೆಡಿಕೆ ಹಕ್ಯಂತ
ಇನ್ನೇನು ಮಗ ಹೋಗ್ಯಾನ
ನಾಕ ಮನಿ ಭೀಕ್ಷೆ ಬೇಡಿಕ್ಯಂಡು ಬರತ್ತಾನಂತ
ಆಗ ಮಗ ಏನ್ಮಾಡಿದ ಇನ್ನ ಹೊರಾಗ ಬಂದ
ಅಯೊಯ್ಯಮ್ಮ ನನಗ ಭಯ
ಆಗತಂತ
ಆಗ ಗೌಡ್ರು ಮನಿಗಳು ಬಿಟ್ಟು ಕಡೇ ಲಾಸ್ಟಿಗೆ
ಕುರುಬರ ಗುಡಿಸಲು ಹುಲ್ಲಿನ ಗುಡಿಸಲು
ಮನಿಗಳಿಗ ಬಂದ ಬಡತನದ ಮನಿಗ
ಗಣ ಗಣಾ ಗಂಟೆ ಬಡಿದ
ಕುಂತೀ ಬೀಕ್ಷಾಂದೇಹಿ ಅಂದ
ಅಂಬೋತ್ತಿಗೆ ಇವ್ರು ಓಣ್ಯೆಲ್ಲ ಹುಡುಕ್ಯಾಡಿಕಂತ
ಕಡೇ ಲಾಸ್ಟಿಗೆ ಬಂದ್ರು
ಲಟಕ್ನ್‌ಹಿಡ್ಕಂಬಿಟ್ಟು ಆ ಹುಡುಗನ್ನ
ಲೇ ಧರ್ಮ ಕೊಟ್ರೆ ಒಳ್ಳೇದು
ದಾನ ಮಾಡಿದ್ರೆ ಒಳ್ಳೇದು
ಧರ್ಮ ಮಾಡಲಿದ್ರೆ
ಯಾವುದೋ ಮಂತ್ರಿಸಿ
ಆಗ ಅಂಬ್ರಿಯಷ್ಟು ಬೆನ್ನಮ್ಯಾಲೆ ಬೊಬ್ಬೆ
ಬರಿಸಿ ಓಡಿ ಹೋಗ್ತೀಯಾ

ನೀನಾಗಿ ಬಂಧೀಯಾ ಕಡೆ ಲಾಸ್ಟಿಗಾಗಿ ಭೀಕ್ಷಾ ಬೇಡ್ತಿಯಾ || ತಂದಾನ ||

ರಾಜ ಕಛೇರಿಗ ನಮ್ಮ ಗೌಡ ಕರೀತಾನ ಬಾ

ಯಪ್ಪಾ ನಾನಲ್ಲಪ್ಪ ದೇವರಾಣಿಯಪ್ಪೊ
ನಾನಲ್ಲಪ್ಪ ದಿಂಡ್ರಾಣಿ ಶಿವ || ತಂದಾನ ||

ಏ ದೇವರಾಣಿ ನಾನು ಬಂದಿಲ್ಲ
ಶಿವಾಜ್ಞೆ ನಾನು ಬಂದಿಲ್ಲಂತೀಯಾ
ನೀನು ಬಂದಿಲ್ಲಂದ್ರೆ ನಿಮ್ಮಪ್ಪ ಬಂದಿದ್ನ
ಊರೆಲ್ಲಾ ಹುಡುಕಿದ್ರೆ ಸಿಗ್ಲಿಲ ಎಲ್ಲಿ ನಿನ ಕಡೇಗದೀಯಂತ
ಆ ಹುಡುಗನ್ನ ನಾಲರು ಹಿಡ್ಕಂಡ್ರು
ಹಿಡಕಂಡ್ರೆ ಗಡಗಡ ಗಡಗಡ ನಡುಗತಾನ ಆ ಹುಡುದ
ಓದಿಕ್ಯಂಬೋನು ಯಾವತ್ತೋ ಭಿಕ್ಷೆಗೆ ಹೋಗಿಲ್ಲ
ಆಗ ನಾಲರು ಹಿಡ್ಕಂಡು

ಅವನು ಇನ್ನ ಕಿವಿ ಹಿಂಡತಾನ
ಇವನು ಇನ್ನ ದವಡಿ ಹಿಂಡತಾನ
ಹಿಂದಿದ್ದವನು ಬೆನ್ನಿಗ ಗುದ್ದುತಾನ
ಯಮ್ಮಾ ಗಡಗಡಗಡಗಡ ಹುಡುಗ ನಡುಗುತಾನ
ಇನ್ನ ಹಿಂದೆಯೇ ಉಚ್ಚೇ ಹೊಯಿದಾನಮ್ಮ
ಓಣ್ಯಾಗ ಹುಡುಗನ್ಹಾಡ || ತಂದಾನ ||

ಯಮ್ಮಾ ನಮ್ಮ ತಾಯಿ ನನಗೆ ಮದುವೆ
ಮಾಡ್ತಿನಿ ಮದುವೆ ಮಾಡ್ತಿನಂತ ನಮ್ಮ ತಾಯಿ ಅಂದಳು
ಯಮ್ಮಾ ಮ್ಯಾಳತಾಳ ಇಲ್ಲದ ಮದುವೆಯಮ್ಮಾ
ಈಗ ಮದುವೆ ಯಂಗೈತಿ ನಂದು

ಯಮ್ಮಾ ಅವರದು ಒಂದು ಕೈ ಐತಿ
ನಂದೂ ಒಂದು ಮೈ ಐತೆಯಮ್ಮಾ
ಓಣೆದಾಗ || ತಂದಾನ ||

ಅವನು ಮೈ
ಈಗ ನನ್ನ ಮೈ ಮೆತ್ತಗಾಗ್ತ
ನಮ್ಮಮ್ಮ ಮದುವೆ ಮಾಡ್ತೀನಂದ್ಳು
ನನ್ನ ಮದುವೆ ತಯ್ಯಾರು ಮಡ್ತಾರ
ಗಡಗಡಗಡಗಗಡ ನಡುಗುತಾನ
ಆಗ ಯಪ್ಪಾ ನನ್ನ ಅಮ್ಮನ ಮನಿಗೆ ಹೋಗಾನ
ಯಪ್ಪಾ ನಾನು ಬಂದಿಲ್ಲಾ ಅಂತಾನ
ಏ ನೀನು ಬಂದಿಲ್ಲಂದ್ರೆ ನೀಮಮ್ಮಪ್ಪ ಬಂದೀಹಿ
ಬಾರಲೇ ಮಗನೆ
ಅಂತ ನಾಲರು ಕೈಹಿಡ್ಕಂಡು ದಬ್ಬಿಕ್ಯಂತ ಬಂದ್ರು
ಆಗ ಇನ್ನ ಕಾಂಭೋಜರಾಜ ಗೊಲ್ರವನು ನೋಡಿದ
ಏ ಕಳ್ಳ ನಾಯಿ ಓಡಿ ಹೋದ್ರೆ
ಓಡ್ಯಾಡೊ ನಾಯಿನ್ನ ಹಿಡ್ಕಂಡು ಬಂದ್ರಿ
ಪಾಪ ಚಿಕ್ಕ ವಯಸ್ಸಿನ ಹುಡುಗ
ಸಾಲಿ ಓದೋನು
ಐನೂರು ಈರಮ್ಮನ ಮಗ
ಮಡಪತಿಯೋನು
ಇದ್ದುರೋನು
ಏ ಬಿಟ್ಟು ಬಿಡ್ರಿ ಇವನ್ನ ಅಂದ
ಆ ಹುಡುಗನ್ನ ಬಿಡೋ ಹೊತ್ತಿಗೆ
ಜೋಳಿಗೆ ಹೆಗಲಿಗೆ ಹಕ್ಯಂಡು

ಆಗ ಹುಡುಗ ಒಂದು ನೋಡಮ್ಮ
ಓಡೋಡಿ ಬರುತಾನ
ಮನೆಗೆ ಓಡಿ ಬಂದಾನ || ತಂದಾನ ||

ಜೋಳಿಗೆ ನೆಲಕ್ಕ ಹಾಕಿಬಿಟ್ಟು
ಓಡೋಡಿ ಬಂದ
ಬರೀ ಜೋಳಿಗೆಪ್ಪ
ಒಂದು ಹಿಡಿಕಿ ಕಾಳಿಲ್ಲ
ಜೋಳಿಗೆ ಬೀಸ್ಹಾಕಿದ

ಕೌದಿ ಮ್ಯಾಲೆ ಕೌದಿ ಹೋದಿಕ್ಯಂಡ
ಗಡಗಡ ಗಡಗಡ ಹುಡುಗ ನಡುಗುತಾನ || ತಂದಾನ ||

ಐನೋರು ಈರಮ್ಮ ನೋಡಿದ್ಳು
ಯಪ್ಪಾ
ಹುಟ್ಟುಲಾರ್ದ ಎಂಥಾ ಬೆರಿಕೆಯವನು ಹುಟ್ಟಿಯಪ್ಪ
ಮಲ್ಲಿ ಹೂವಿನಂತ ಮಗ ಹುಟ್ಟೀಯಿ
ಎಷ್ಟು ತಡೀಲಾರನೆಪ್ಪ
ಏನಾಯ್ತೋ ಚಳಿಜ್ವರ ಬಂತಾ ನಿನಗೆ ಆಸರ ಆಯ್ತಾ
ಏನಪ್ಪಾ ಮಗನೆ ಮಡಪ್ಪಾ
ಮಡುಪದವರು ನಾವು ಮಠದವರು
ಏನ್ಮಾಡ್ತೀಯಮ್ಮ
ನೀನು ದೊಡ್ಡ ಹೇಣ್ತೆ ಮಾಡ್ತೀನಂದಿ
ಮದುವಿ ಮದುವಿ ಅಂತಿದ್ದೆ
ನನ್ನ ಮದುವಿ ತಯ್ಯಾರಾಯ್ತು
ನಂದು ಮೈ ಅವರದು ಕೈ
ಯಮ್ಮಾ ನಮ್ಮ ಗೌಡಗೆ
ಯಾವನೋ ಆಗ ಅಂಬ್ರಿಯಷ್ಟು
ಬೊಬ್ಬೆ ಹುಟ್ಟಿಸಿ ಹೋಗ್ಯಾನಂತ
ನನ್ನ ಹಿಡ್ಕಂಡು ಬಡ್ತಾ ಬಡೀತಿದ್ರೆ ಬ್ಯಾಡಮ್ಮ
ಶಿವ ಯಾರ ಮ್ಯಾಲೆ ಹೋಗಿಲ್ಲ
ನನ್ನ ಮ್ಯಾಲೇ ಹೋಗಿ ಬಿಟ್ಟಾನ
ಇಡೀ ಊರು ಲೋಕ ಬಿಟ್ಟು
ಏ ಯಾವನು ಬಡ್ಡಿದ್ದ ಅವನ ಹೆಸರೇಳ ದೇವ್ವ ಬಿಡಿಸ್ತೀನಿ
ಈಗ ಬೈದರೆ ಗಾಳಿಗೆ ಹೋಯ್ತು
ತಿಂದ್ರೆ ಒಳಕ್ಕೆ ಹೋಯ್ತು
ಮೈಯೆಲ್ಲಾ ನೋವಾಗೈತಿ
ಏಟುಗಳು ಬಿದ್ದಿದ್ದು ಬರಾಂಗಿಲ್ಲ
ನೀನು ಬೈಕ್ಯಂತಾ ಹೋದ್ರೆ
ಈ ಮುದ್ಯಾಕಿಗೆ ಏನೋ ದೆವ್ವ ಬಡಕಂಡೈತಿ ಬೈಕ್ಯಂತ ಬರತಾಳಂತ

ಯಮ್ಮಾ ಚಂಪೆ ಚಂಪೆ
ಪಡಾಪಡಾ ಬಡದು ಕೇಳ್ತಾರೆ ನಿನ್ನ || ತಂದಾನ ||

ನನಗೆ ದೆವ್ವ ಬಿಡಸ್ಯಾರ
ನಿನಗೇ ದೆವ್ವ ಬಿಡಸ್ತಾರ
ಕೇಳವೇ ತಾಯಿ
ಈಗಿನವರ ಯಾರ ಹೆಸರು ನನಗ ಗೊತ್ತಿಲ್ಲ
ಏ ಆಗ ತೋರಸು ಬಾರಲೆ

ಯಮ್ಮಾ ಸತ್ರೆ ಊರಾಕ ಬರಾಂಗಿಲ್ಲ
ಮನಿ ಹೊರಾಗ ನಾನು ಹೊಂಟಾಂಗಿಲ್ಲಮ್ಮ || ತಂದಾನ ||

ಮನಿ ಹೊರಾಗ ಬರಾಂಗಿಲ್ಲ
ಈ ಊರು ಒಳಗೆ
ಸ್ವಾಮಿ ನಮ್ಮ ಮನಿಗೆ ಬರ್ರಿ
ಈಗ ನಿನ್ನ ಪಾದ ತೊಳಕೊಬೇಕ್ರಿ
ಊಟ ಮಾಡಿ ಬರುವಂತ್ರಿ
ಭಿನ್ನ ತೀರಿಸಿ
ಅವರೆ ಪಾದ ತೊಳ್ಕಂಬೋದು
ಅವರೇ ಊಟ ಮಾಡೊದು
ನೋಡಪ್ಪ ಅವರೇ ಇನ್ನ ಭಿನ್ನ ತೀರಸೋದು

ಏಸು ಬಾರಿ ಕರೆದರೇನು ಸತ್ತರು ನಾನು ಹೊರಾಗ ಹೊಂಡದಿಲ್ಲ
ಹೋಗೋದಿಲ್ಲ || ತಂದಾನ ||

ಅಂತ ಹುಡುಗ ಗಡಗಡ ನಡುಗಕ್ಯಂತಿದಾನ
ಈ ಹುಡುಗುಂದು ಹೀಂಗಿರ್ಲಿ