ಸುಡುಗಾಡು ರುದ್ರ ಭೂಮಿದ್ದಾಗಿರೋನು ಶರಬಂಧ
ಯಮ್ಮಾ ನಾನು ಎಷ್ಟು ಹೇಳಿದ್ರು ಕೇಳಂಗಿಲ್ಲ
ನಾನಿರಂಗಿಲ್ಲ ನಿನ ಮಗಲ್ಲ ಶಿವನ ಮಗ
ನಾನು ಹೋಗಿಬಿಡ್ತಿನಿ
ನಮ್ಮ ತಂದಿ ಜೀವ ಬೇಸ್ ಮಾಡುಬೇಕು ನಾನು
ಮಗನಾ
ಎಸು ತಿಂಗಳು ಹೋತಿ ಏಸುತಿಂಗ್ಳು ಬರತೀ
ಹೋಗೋದು ಆರು ತಿಂಗುಳು
ಬರೋದು ಮೂರು ತಿಂಗಳು
ನಿನ್ನ ಹೊಟ್ಟಿ ತಣ್ಣಗಾದ್ರೆ
ನಾನು ಮಗ ಬರತಿನಿ
ನಿನ್ನ ಹೊಟ್ಟಿ ಕೆಟ್ಟಿದಾದ್ರೆ
ಅತ್ತಾಗೆ ಹೋತೀನಿ
ಯಪ್ಪಾ ಸಾಯೋದು ಇರೋದು
ನನ್ಗೆ ಹೆಂಗ ತಿಳಿಬೇಕೋ ಮಗನೆ
ಯಾರು ಗಣಮಕ್ಕಳಿಲ್ಲಾ
ತಿಳುವಳಿಕೆ ಮಾಡೋರು
ಹಂಗ ಕೇಳಮ್ಮಾಂತ
ಆಗ ಇನ್ನ ಬೆನ್ನುತಿಕ್ಕಿ
ಬೆನ್ನುದಾಗ ಎರಡು ಬೊಗಸಿ ಮೊಣ್ನು ತಗ್ದ
ಆ ಮಣ್ಣು ತೆಗ್ದು
ಯಪ್ಪಾ ನಿನ್ನ ಬೆನ್ನು
ನನ್ಗೆ ಕಾಣಲಾರವನು
ಪರಮಾತ್ಮ ನಿನ್ನ ಬೆನ್ಹಿಂದಿರೋನು
ಈಗ ನಿನ್ನ ಮಣ್ಣು ತೆಗ್ದು
ನಿನ್ನ ಮಣ್ಣದ ಮ್ಯಾಲೆ
ಮಲ್ಲಿಗೆ ಹೂ ಬೀಜ್ಹಾಕಿದ
ಮಾಳಿಗೆ ಮ್ಯಾಲೆ ಹುಡುಗ
ನೊಡಮ್ಮಾ ಇದೇ ನನ್ನ ಜೀವ
ಜೀವ ಕೊಟೋಂದು ಜೀವ ಗಿಡ
ಮಲ್ಲಿವ್ವುಗಿಡ
ಈ ಗಿಡಕ ನೀರಹಾಕು
ತುಂಬಿದ ಚೆರಿಗೆ ನೀರಹಾಕು
ತುಂಬಿದ ಗಡಿಗೆ ಅನ್ನಿಡು
ಆವಾಗಿನ್ನ ಊದಿನ ಕಡ್ಡಿ ಹಚ್ಚು
ಪರದಕ್ಷಿಣೆ ಮಾಡಿಕೊ
ಈ ಗಿಡ ಹಚ್ಚಿಗಿದ್ರೆ
ಮಗ ನಾನಿದ್ದಂಗ
ನನ್ನ ಜೀವ್ಹೊದ್ರೆ
ವಣ್ಗಿ ನೆಲಕ ಬಿಳತೈತೆ
ಈಗ ಯಾರನ್ನ ಕಡ್ಡರೆ
ಏಸು ತುಂಡಾಗಿ ಬಿದ್ದಿರತಿನೋ
ಅಷ್ಟು ಕೊಂಬೆ ಮುರುದ ನೆಲಕ ಬಿಳ್ತಾವ

ಸತ್ತ ಮಗಾವಂತ ನೀನು ದುಃಖ ಮಾಡೇ
ಗಿಡ ಹಿಡ್ಕಂಡೇ ನೀನು ಅಳಬೇಕು
ಈ ಗಿಡ ಮ್ಯಾಲೆ ನೀನು ಗೋಳಾಡಮ್ಮಾs
ಗಿಡ ಮ್ಯಾಲೆ ಗೋಳಾಡಬೇಕು ನೀನು || ತಂದಾನ ||

ಆಗ ತಾಯಿ ನೋಡ ದುಃಖ ಪಡಿತಳಾ