ತಾಯಿs
ಮಗ ಆಗಿ ಹುಟ್ಟಿದ ಮ್ಯಾಲೆ ಇನ್ನು ತಂದಿಗೆ
ತಂದಿ ಕಷ್ಟ ನಾನು ನೋಡಬೇಕು
ಇಗೋ ತಂದಿಗೆ ಬೆನ್ನಗಲಾಗ ಹುಣ್ಣು ಹುಟೈತಂತೆ
ನಾನು ಹುಟ್ಟಿದಾಗ ಹುಟೈತಿ ಬಾರಲ ಬಿದ್ದಾನ
ಇದೋ ತಂದಿಗೆ ಮಗ ಹುಟ್ಟಿನಿ
ತಂದಿ ನೋಡಲಿದ್ರೆ ಆಗೈತು
ಮಗನ ನೋಡ್ಬೇಕು

ಇದೋ ನಾನೇ ಹೋಗಿ ನೋಡಿ ಬರತೇನಮ್ಮ
ತಂದಿಯಂಗ ಐದಾನ ನೋಡಿ ಬರತೇನಮ್ಮ
ತಂದಿ ಕೂಟ ಮಾತಾಡಿ ಬರುತೇನಮ್ಮ || ತಂದಾನ ||

ಅಯ್ಯೋ ಮಗನ
ನಿನ್ನ ಮಕ ನನ್ನ ಮಕ ಒಂದೇ ರೀತಿ ಐತಿ
ನಿಮ್ಮಪ್ಪ ದುಷ್ಠ ದುರ್ಮಾಗ ಖರ್ಮ
ನೀನ ಹೋಗಿಬಿಟ್ರೆ
ಲೇ ಯಾವನಿಗೆ ಹುಟ್ಟೀ ಬಂದೀ ನೀನು
ಯಾವನಿಗೆ ಹುಟ್ಟಿ ಯಾವನಿಗಿಲ್ಲ ಅಂತ
ನಿನ್ನ ಕಡ್ದು ಹಾಕ್ತಾನ ಮಗನೆ
ಸರಿಯಮ್ಮಾ ನಾನು ಹುಟ್ಟಿದ್ದು ನೋಡಿಲ್ಲ
ಬೆಳೆದಿದ್ದು ನೋಡಿಲ್ಲ
ನಮ್ಮಪ್ಪ ಹ್ಯಾಂಗ ಖೂನ್ಹಿಡ್ತಾನ
ಓಹೋ ಒಂದೇಟಿಗೆ
ನಿನ್ನ ಮಕ ನನ್ನ ಮಕ ಒಂದೇ ಐತಿ
ಆಗ ಮಕ ನೋಡಿ ಖೂನ್ಹಿಡ್ತಾನ ಅಂದ್ಳು
ಸರೆಯೆಮ್ಮಾ ನಿನ್ನ ಹೊಟ್ಟ್ಯಾಗ ಹುಟ್ಟಿನಿ
ಆಗ ಒಂಭತ್ತು ತಿಂಗಳು ನಿನ್ನ ಹೊಟ್ಟ್ಯಾಗೆ ಇದಿನಿ
ಈಗ ಹದ್ನೆಂಟು ವರುಷ ಕೈಯಾಗ ಬೆಳಕಂಡಿನಿ

ಕೇಳಮ್ಮ ನನ್ನ ತಾಯಿ ಇನ್ನ ನಿನ್ನ ಜೀವಕ್ಕೆ || ತಂದಾನ ||

ಅಮ್ಮಾ ತಾಯಿ
ನಮ್ಮ ತಂದೀನ ನೋಡಿ ಬರತೀನಮ್ಮಾ ಅಂತ
ಆ ಮಗ ಇನ್ನವರ ಮನಿ ಬಿಟ್ಹೋಗಿ
ಈಗ ಅಡಿವ್ಯಾಕ ಬಂದು ಬಿಟ್ಟ
ಬಿದ್ರು ಇನ್ನು ತಾ ಕಡ್ದ
ಎರಡು ಬಿದಿರಿ ಪುಟ್ಟಿಗಿ ಮಾಡಿದ
ಅತ್ತಾಗೊಂದು ಪುಟ್ಟಿ ಇತ್ತಾಗೊಂದು ಪುಟ್ಟಿ
ಬಿದಿರಿನ ಕೋಲಿಗೆ ಸಿಗಾಕ್ಯಂಡ
ಸಿಗ್ಯಾಕ್ಯಂಡು ಆಗ ಹುಣಸೇಬೇರು ಬೇನತೊಪ್ಪಲು
ಬೇರುಗಳನ್ನೆಲ್ಲಾ ಒಂದು ಪುಟ್ಯಾಗಿಟ್ಟು ಗಂಡ
ತಪ್ಪಲೆಲ್ಲಾ ಹರ್ಕಂಡು ಒಂದು ಪುಟ್ಟ್ಯಾಗ ಹಕ್ಯಂಡ
ಆಗ ಏನ್ಮಾಡಿದ ಅಂದ್ರೆ
ಸೌತೇಕಾಯಿ ಒಣಗಿದ್ದು ಕೊಯ್ದು
ಅದರಾಗ ಒಲ್ಯಾನ ಬೂದಿ ಹಳ್ದಾನ ನೀರು
ಸೌತೇಕಾಯಿದಾಗ ಹಕ್ಯಂಡು
ಆಗ ಒಂದು ಪುಟ್ಟ್ಯಾಗಿಟ್ಕಂಡ
ಯಪ್ಪಾ ಶಿವ ನನ್ನ ಕೊಟ್ಟಿಯಿ ಗೊಲ್ರರ ಕುಲದಾಗ
ಉದ್ದ ನಾವು ಹಚ್ಚಾಂಗಿಲ್ಲ
ಅಡ್ಡನಾಮೇ ನಾನು ಹಚ್ಚೋದು
ಶಿವಾ ಅಂತ ಮೂರು ಬೊಳ್ಳು ಈಬುತ್ತಿ ಹಚ್ಚಿದ
ಎಡಗಣ್ಣಿಗೆ ಕಾಡಿಗೆ ಹಚ್ಚಿದ
ಬಲಗಣ್ನಿಗೆ ಅರಿಷಿಣ ಹಚ್ಚಿದ
ಆಗ ಇನ್ನವರತಾವ ಪುಟ್ಟಿಗಳು ಸಿಗ್ಯಕ್ಯಂಡು
ಆಗ ಹೆಗಲ ಮ್ಯಾಲೆ ಇಟ್ಕಂಡ
ತಾಯಿತಲ್ಲಿಗೆ ಏನಂತ ಪದ ಹಾಡಿಕ್ಯಂತ ಬರತಾನ
ಇನ್ನ ತಾಯಿ ಖೂನಾ ಹಿಡಿತಾಳೊ ಇಲ್ಲಂತ

ಯಮ್ಮಾ ಮದ್ದೊಮ್ಮ ಮದ್ದೇಮ್ಮ
ಕಾಶಿಲೋಕ ನನ್ನ ಲೋಕ
ಮೇಟೌಷಧ ಮಾರೋನಮ್ಮ
ಯಮ್ಮಾ ಹಲ್ಲು ಮುರಿದವ್ರಿಗ ಹಲ್ಲು ಕೊಡ್ತಿನಿ
ಯಮ್ಮಾ ಕಣ್ಣು ಹೋದೋರಿಗೆ ಕುರಿಕಣ್ಣು
ನಾನು ಒಂದೇ ಹಾಕತಿನಿ
ಯಮ್ಮಾ ಗೂನಿ ಹೊಂಟೋರಿಗೆ ಬೇಸು ಮಾಡ್ತಿನಿ
ಯಮ್ಮಾ ಸೂಲಿ ಬ್ಯಾನಿ ಹೊಟ್ಟೆಬ್ಯಾನಿ
ಆಗ ಒಂದು ನಾರು ಹುಣ್ಣು
ಹಲ್ಲುದಾಗ ಹುಟ್ಟಿದೇನೋ
ಯಮ್ಮಾ ಹಲ್ಲು ಒಂದು ಗಂಡು ಮಾಲು
ಯಮ್ಮಾ ಎದಿಗ್ಹುಟ್ರೆ ಇನ್ನನೋಡು
ಎದೆಗಂಡು ನಾರು ಹುಣ್ಣು || ತಂದಾನ ||

ಮದ್ದು ಮದ್ದು ಅನಕಂತಾ ಬಂದ
ತಾಯಿ ಮನ್ಯಾಗಿಲಿದ್ದ ಹೊರಾಗ ಓಡಿ ಬಂದಳು
ಎರಡು ಕಣ್ಣಿಗೆ ತಳಕ್‌ಅಂದು ಬಿಟ್ಟ

ಯಪ್ಪಾ ಯ್ಯಾ ತಾಯಿ ಹಡದಾಳೋ
ಯಾರ ಮಗ ಯತ್ತಾ ಮಗಾ
ತಮ್ಮಾ ಯಾವ ಊರು ಯತ್ತಾಗ || ತಂದಾನ ||

ಅಂದ್ರೆ ಆಗ ಬಂದು ಇಳ್ದ
ಯಪ್ಪಾ ಯಾರ ಮಗಪ್ಪಾ
ಎಷ್ಟು ಚೆಲುವಿ ಐದಿಯಿ
ಯಾವ ತಾಯಿ ಹಡೆದಿದ್ದಾಳ
ನಿಂದು ಯಾವ ಊರು
ಯಕ್ಕಾ ನಂದು ಕಾಸಿ ಪಟ್ಟಣ
ನಿಮ್ಮ ತಂದೆ ಹೆಸರೇನು
ನಮ್ಮ ತಂದಿ ಮದ್ದು ಮಾರೋ ಮಾರಯ್ಯ
ನಿಮ್ಮ ತಾಯಿ ಹೆಸರೇನು
ನಮ್ಮ ತಾಯಿ ಮದ್ದು ಮಾರೋ ಸುಬ್ಬಮ್ಮ
ನಿನ್ನ ಹೆಸರೇನು
ನಾನು ಮದ್ದು ಮಾರೋ ರಾಮಜೋಗಿ
ಯಪ್ಪಾ ನನ್ನ ಮಗದಾಗ ನೀನೋಬ್ಬ ಮಗ ಇದ್ದಂಗ
ಒಳ್ಳೆ ಬಿಸಿಲಾಗ ಬಂದೀಯಲ್ಲ ತಮ್ಮಾ
ಮಕ ಎಲ್ಲಾ ಬಿಸಿಲು ಹೊಡ್ಡು ಬಾಡ್ಹೋಗೈತಿ
ಯಪ್ಪಾ ಮದ್ದು ಪುಟ್ಟಿಗಳು ಇನ್ನಾವರ ಬಂಕದಾಗಿಟ್ಟು
ಚರಿಗೆ ನೀರು ಕೊಡ್ತಿನಿ
ಯಪ್ಪಾ ಹಸ್ಗಂಡು ಬಂದೀಯೀ
ಆಗ ಊಟಾ ಮಾಡು ಬಾಪ್ಪಾ ಅಂದ್ರೆ
ಯಮ್ಮಾ ಹಡದಾಕಿ ತಾಯಿ ಅಲ್ಲ
ಅನ್ನ ಇಟ್ಟಿದಾಕಿಯೇ ತಾಯಿ
ಬಲುಪುಣ್ಯ ಬರತೈತಮ್ಮ ಜೀವಕ್ಕ
ಅಗಿನವ್ರು ಕುಲದಲ್ಲಾಗಿ
ತಾಯಿ ತಂಗಿನ್ನ ಬಿಟ್ಟು ಬಂದಿನಿ ನಾನು
ಯಮ್ಮಾ ನಿನ್ನ ಮನಿ ನೋಡಿ
ಊರು ಅಂತ ಬಂದಿನೇ ತಾಯಿ
ಯಪ್ಪಾ ಬಂದ್ರೇನು ತಪ್ಪಿಲ್ಲ
ಬಾರಪ್ಪಾ ಅಂದ್ಳು
ಕಾಲು ಮುಖ ತೊಳ್ಕಂಡ
ಬಿಳೆ ಅನ್ನದ ಮ್ಯಾಲೆ ಹಚ್ಚನ ತೊಗೆ ಹಾಕಿ
ತುಪ್ಪ ಹಾಕಿ ಅನ್ನ ಇಟ್ಳು
ಊಟ ಮಾಡ್ದ
ಯಮ್ಮಾ ಇನ್ನು ಹೋತಿನ ತಾಯಿ ಅಂದ
ತಮ್ಮಾ ಇಲ್ಲಿಗೆ ಮೂರು ಹರ್ದಾರಿ ದೂರದ
ಚಾಂಪುರು ಪಟ್ಣಕ್ಕೆ ಹೋಗು
ಹುಣ್ಣು ಹುಟ್ಟಿದೋರು ಬ್ಯಾನಿ ಬಂದೋರು
ಮೇಟಿ ಜಾಷಧ ನನಗೋ ನಿನಗೋ
ನನಗೋ ನಿನಗೋ ಅಂತ
ಜೋರ್ ವ್ಯಾಪಾರ ಆತೈತಂದ್ಳು
ಆಗ ತಮ್ಮ ಹೋತಿಯಾ ಇನ್ನು
ಹೋತಿನಮ್ಮಾ ನಿನ್ನ ಪಾದ ಮುಗಿತಿನಂದ
ಅಯ್ಯೋ ಬ್ಯಾಡಪ್ಪ
ಕರ್ಮ ಕಟ್ಟ ಬ್ಯಾಡಪ್ಪ ಅಂದ್ಳು
ಆ ಪಾದ ಹಿಡ್ಕಂಡು

ಕಿಲಿ ಕಿಲಿ ಕಿಲಿ ಕಿಲಿ ಮಗ ನಗತಾನಲ್ಲ
ಯಂಥಾ ತಾಯಿ ಹೊಟ್ಟ್ಯಾಗ ಹುಟ್ಟೀನಮ್ಮ
ಮಗವಾಗೀ ನಾನು ಇದ್ದೀನಮ್ಮ ನಿನಗಾಗಿಯೇ ನಾನು || ತಂದಾನ ||

ಅಮ್ಮಾ ಈಸೊರ್ಷ ಕೈಯಾಗ ಬೆಳಿಸಿದಾಕಿ
ಜೀವಗ್ಹುಟ್ಟಿದಾ ಜೀವ
ಇನ್ನ ಮಕನೋಡಿ ಇನ್ನ ಖೂನ್ಹಿಡಿಲಾರೆ
ನಿನ್ನ ಮಗಮ್ಮ ನಾನು
ಹೇ ನನ್ನ ಮಗಲ್ಲಪ್ಪ ನೀನು
ಇಲ್ಲಮ್ಮಾ ನಿನ್ನ ಪಾದ ಭೂಮಿ ಆಜ್ಞೆ ನಿನ್ನ ಮಗ
ಅಯ್ಯೊಯ್ಯಪ್ಪ ಮೇಟಿ ಔಷಧ
ಮಾರೋವನು ಇದ್ದಂಗೈದಿಯಪ್ಪಾ ನೀನು
ಮದ್ದು ಮಾರೋರು ಹೊಟ್ಟ್ಯಾಗ ಹುಟ್ಟಿದಂಗ ಅದೀಯೀ
ಏ ಯಮ್ಮಾ ಎಷ್ಟು ಹೊತ್ತಾಯ್ತಮ್ಮ ನಿನ್ನ ಬಿಟ್ಟುಹೋಗಿ
ನಿನ್ನ ಕೈಯಾಗ ಕಾಲಾಗ ಇದ್ದೋನು
ಆಗ ಒಂದು ಅರ್ದ ನಿಮಿಷ ಆಗಲಿಲ್ಲ
ಖೂನಿಡ್ಹಿಲಾರೇ ನಮಪ್ಪ ನನ್ನೇನು ಖೂನ್ಹಿಡಿತಾನ
ಇಷ್ಟು ಕೈಯಾಗಿದ್ದೋಳೆ ಖೂನ್ಹಿಡಿಲಾರೆ
ಏ ಮೇಟಿ ಔಷಧ ಮಾರೋನು ಇದ್ದಂಗೈದೀಯಪ್ಪ
ನನ್ನ ಮಗ ಅಲ್ಲ ಅಂತಿಯೇ
ಇನ್ನ ನಮ್ಮಪ್ಪನೇ ಏನು ಖೂನ್ಹಿಡಿತಾನ ನನ್ನ