ಮಗನಾ ಶರಬಂಧ ಈಗ ನನಗೆ ಅದೃಷ್ಠವಿಲ್ಲ
ನಿಮ್ಮ ತಂದಿ ಕಾಂಭೋಜರಾಜನ ಹುಣ್ಣು ತೋಳ್ತಿತಿದ್ದೆ
ಬಿಸಿನೀರು ಬಲಗೈಲಿದ್ದ
ಆಗಿನವರನ ಮುತ್ತಿನ ಸೆರಗಿಲಿ ವರಿಸ್ತಿದ್ದೆ
ಈಗ ಪಾದ ಮುಗ್ದು ಇನ್ನವರತಾ
ಜರಿ ಕಾಸಿ ಹಾಕಿ ಕುಡಿಸುತ್ತಿದ್ದೆ

ನಿನ್ನ ಕೊಟ್ಟಿದ್ದ ದೇವರು ಅಗಲಿಸಿ ಬಿಟ್ಟಾನಪ್ಪ
ನಿಮ್ಮ ತಂದಿಗೆ ನನಗೆ ಅಗಲ್ಸಿ ಬಿಟ್ಟಾನಪ್ಪ ದೇವರು
ನಾವು ಏನು ಪಾಪ ಲೋಕ ಮಾಡೀವಪ್ಪಾ
ಮಗನಾ ನಮ್ಗೆ ಸತಿ ಪತಿಗೆ ನಮ್ಗೆ ಧರ್ಮವಿಲ್ಲಪ್ಪಾ
ಎಷ್ಟ ಪಾಪ ಮಾಡೀ ಲೋಕದಾಗ ಐದೀನಪ್ಪಾ
ಜೀವದ ಗಂಡ ಆಗ ಜೀವಕ್ಕಿಲ್ಲದಂಗಾತು || ತಂದಾನ ||

ಮಗನಾ ನಮಗೆ ಕೊಟ್ಟಿದ್ದ ದೇವರು ಅಗಲಿಸಿ ಬಿಟ್ಟಾನ
ನಮಗೆ ದೈವಿಲ್ಲ
ಜೀವಗಂಡಗ ಜೀವ ಇಲ್ದಾಂಗಾತು
ನಾನೇನು ಮಾಡ್ಲಿ ಮಗನಾ ದೈವ
ಅಮ್ಮಾ ಈಗ ನಾನು ಹೋಗಿ ನೊಡಿ ಬರತಿನಿ ತಾಯಿ
ಹೋಗಿ ಬಾಪ್ಪಾ ಊರಾಗ ಹೋದ್ರೆ
ಚಾಂಪುರು ಪಟ್ಣದಾಗ ಹೆಂಗಸರು ಒಳ್ಳೋರಲ್ಲ
ಚಿತ್ತಿ ಶಂಕಿನಿ ಹಸ್ತಿನಿ ಪದ್ಮಿನಿ ಜಾತಿ
ಈಗ ಹೆಣಸು ಓಣಿಗೆ ಹೋದ್ರೆ
ಒಳ್ಳೆ ರೂಪಸ್ತ ಗಣಮಗ ಬಂದ್ರೆ

ಅವ್ರು ಇನ್ನು ಬಿಡಾವಲ್ಲಪ್ಪ
ಕೆಟ್ಟುಗುಣ ನಿನಗಾಗಿ ಬ್ಯಾಡ ಮಗನೆ
ದುಷ್ಠರಕಡಿಗೆ ಹೋಗು ಬ್ಯಾಡ ಮಗನೆ
ಯಮ್ಮಾ ನೀನು ನನಗೆ ಹೇಳುಬ್ಯಾಡ
ನನ್ನ ಜೀವಗೇ ತಿಳುವಳಿಕೆ || ತಂದಾನ ||

ಅಮ್ಮಾ ನನಗೆ ಕೆಟ್ಟತನವಿಲ್ಲಾ ದುಷ್ಠತನವಿಲ್ಲಾ
ಆಗ ಎಲ್ಲಿಮಾಡೋರು ಅಲ್ಲಿ ಮಾರಸಿತಿನಿ
ಎಲ್ಲಿ ಕುಂದ್ರಸೋರು ಅಲ್ಲಿ ಕುಂದ್ರಸ್ತಿನಮ್ಮಾ
ನನಗೆ ಅಂಥಾ ಗುಣ ಇಲ್ಲೇ ತಾಯಿ ನಿನ್ನ ಪಾದಾಜ್ಞೆ
ಮಗನಾ ಈಗ ಅಕ್ಕ ಅನ್ನಬೇಕು ತಂಗಿ ಅನ್ನಬೇಕು
ದೊಡ್ಡಮ್ಮ ಅನ್ನಬೇಕು ಅಜ್ಜಿ ಅನ್ನಬೇಕು ದೊಡ್ಡೋರಾದ್ರೆ
ಆಗ ಬಾರಲೆ ಅಂದ್ರೆ ಏನಪೆ ಅಂದ್ರೆ
ಲೇ ತಾಯಿ ಕಟ್ಟಿದೋನು ಏಪೆ ಅಂಬೋದಿಲ್ಲ

ನಿನ್ ಏಪೆ ಅಂತೀಯಾ ಅವುಷಧ ಮಾರೋನೆ
ಮುಂದೆ ನೋಡಿದ್ರೆ ತಂದಿ ಇಲ್ಲ ನಿನಗೆ
ಹಿಂದೆ ನೋಡಿದ್ರೆ ತಾಯಿ ಇಲ್ಲ ನಿನಗೆ
ತಾಯಿ ತಂದಿ ಇಲ್ಲದವನು ನಿನಗೆ ಕಂಬಕ್ಕೆ ಕಟ್ಟಿ ಬಡೀತಾರ || ತಂದಾನ ||

ಏಯ್ ಮೇಟೌಷಧ ಮಾರವನೆ
ಔಷಧ ಕೊಟ್ಟು
ಇನ್ನಮಾಯ ಮಾಡಿಕೊಂಡು ಹೋಗುವನು ಬಂದಿಯಾ
ಏಷ್ಟು ಮಂದಿನ್ನ ಮೋಸ ಮಾಡಬೇಕಂತ ಬಂದೀಯ
ಎಪೆ ಅಂತಿಯಾ ನೀನು
ಅಂತ ಹಾಕ್ರ ಅಂತಾರೆ
ಮಗನಾ ಈಗಿನ್ನ ಹಾಕಬ್ಯಾಡ್ರಿ ಬಡಿಬ್ಯಾಡ್ರಿ ಅಂತಾ
ಯಾರು ಹೇಳ್ತಾರಪ್ಪ
ಮಗನಾ ಅಕ್ಕ ತಂಗಿ ದೊಡಮ್ಮ ಕಕ್ಕ ಅವ್ವ ಅಜ್ಜಿ
ಅಂತ ಅನ್ನಬೇಕು ಮಗನೇ
ಶರಣು ಎಂಬೋರಿಗೆ ಮರಣಿಲ್ಲ
ಕೈಯೆತ್ತಿ ಮುಗುದೋರಿಗೆ ಕೈಯೆತ್ತಿ ಬಡ್ಯೊದಿಲ್ಲ
ಅಮ್ಮ ಅಷ್ಟೇ ಆಗಲಿ ತಾಯಿ ಅಂತಾ
ಆಗ ತಣ್ಣಗೆ ಹೋಗಿ ಬಾ ಮಗನೆ ಅಂದ್ಳು