ಶರಬಂಧರಾಜ ಲಕ್ಷ್ಮಿ ಬಜಾರಕೂಟ
ರಾಜಕಛೇರಿಗೆ ಬರಬೇಕು ತಂದೇನ್ನ ನೋಡಾಕ

ಈಗ ಮದ್ದಂತ ಮದ್ದಂತ
ಕಛೇರಿ ಮುಂದಕ ಬಂದು ಬಿಟ್ಟ || ತಂದಾನ ||

ಆತನ ಕೈಯಾಗಿದ್ದೋರು
ನಾಲ್ಮರು ಸಂಬ್ಳದೋರು ಏನಂದು ಬಿಟ್ರು
ಏ ಯಾವನೋ ಆಗ ಹುಬ್ಬಳ್ಳಿ ಡಾಕ್ಟ್ರು ಅಂತ
ಬಂದೋನು ಮೇಟೌಷದೋನು
ಈಗಿನ್ನವರು ಐನೂರು ಇಸ್ಗಂಡ್ಹೋದ
ಇವನು ಯಾವನೋ ಮೇಟಿ ಅವುಷದ್ಧ ಅಂತ ಬರತಾನ
ಅವನ್ನ ಬಿಡುಬ್ಯಾಡ್ರಲೇ
ಅವನ್ನ ಹಿಡ್ಕಂಡು ಬಂದು
ಆಗ ಒಳ್ಳಾಗ ಕುಂದ್ರಿಸಿ
ಒಣಕಿ ತಗಂಡು ಕುಟ್ಟಿ
ನನಗೆ ಬೆನ್ನಿಗೆ ಕಟ್ರಿ
ಇವ್ರು ಯಾ ಮೇಟೌಷಧ ಮಾರೋರಲ್ಲ
ಈಗ ರೊಕ್ಕ ಇಸ್ಗಂಡ್ಹೋಗೋ ಸೂಳೇ ಮಕ್ಳು ಅಂತ ಕಾಣ್ತದ
ಆಗ ನಾಲ್ವರು ಸಂಬಂಳದಾವರು ಬಂದ್ರು
ಹುಡುಗನ್ನಾಡ ಕತ್ತಲ ಮನ್ಯಾಗ
ದೀಪ ಕಂಡಂಗ ಕಾಣ್ತಾನ
ಅಯ್ಯೋ ತಮ್ಮ
ಕಾಲು ನೆಟ್ಟಗಿದ್ರೆ ಇಪ್ಪತ್ತಳ್ಳಿ ತಿರುಗಾಡ್ತಿ
ಕಣ್ಣಿದ್ರೆ ಇನ್ನು ನಲವತ್ತೂರು ತಿರುಗಾಡ್ತಿ
ಯಪ್ಪಾ ನಮ್ಮೂರಾಗ ಒಳ್ಳೇವನಲ್ಲ ಗೌಡ
ಹುಟ್ಟಲಾರದು ಹುಟೈತಿ ಬೆನ್ನಿಗೆ
ತಮ್ಮಾ ಹುಬ್ಬಳ್ಳಿ ಡಾಕ್ಟ್ರು ಹಿಂಗೆ ಬಂದು
ಐನೂರು ಹಾಕ್ಯಂಡ್ಹೋದ
ಮೇಟಿ ಔಷಧೋನು
ತಮ್ಮಾ ನಿನ್ನ ಹಿಡ್ಕಂಡು ಬಂದು
ಒಳ್ಳಾಗ ಕುಂದ್ರಿಸಿ ಕುಟ್ಟಿ
ಹುಣ್ಣಿಗಿ ಕಟ್ಟಬೇಕಂತೆ
ತಮ್ಮಾ ಜೀವ ಇದ್ರೆ
ಎಲ್ಲೇನ ಮಾರಿಕ್ಯಂತೀಯಪ್ಪಾ
ನಿಮ್ಮ ತಾಯಿ ತಂದಿ
ಎಷ್ಟು ದುಃಖ ಮಾಡ್ತಾರೋ
ಬರಬೇಡಪ್ಪ ಹಿಂದಕ್ಕ ಹೋಗು
ನಾವೇನು ಅಂತಿವಿ
ಹುಡುಗರು ತಪ್ಪಲು ಹಿಡ್ಕಂಡು
ಸಮ್ನೆ ಅಂತಿದ್ರೈಯಾ ಅಂತ ನಾವ್ಹೇಳ್ತಿವಿ ಅಂದ್ರು
ನೋಡಿದ ಚರಿಗೆ ನೀರಿಗೆ ಅಂಜಿಕ್ಯಂಡ್ರೆ
ಗಡಿಗಿ ನೀರು ಯಾವೋನು ಹೊರಬೇಕು
ತಂದಿನ್ನ ನೋಡಾಕ ಬಂದಿನಿ ನಾನು
ಇಲ್ಲಯ್ಯಾ ಮೇಟಿ ಔಷಧ ಕೊಡೋರು
ಎಲ್ಲಾರು ಬೇಸು ಮಾಡ್ತಾರ
ಮತ್ತೆ ಅಪ್ಪಾ ಅಂತ ಜೋಳಿಗಿ ಹಕ್ಯಂಡು ಬರತಿನಿ
ದಾನ ಮಾಡ್ತಾರ
ಏನಾಗೈತಿ ಕುದುರಿಗೂಟ ಇದ್ದಂಗೈದಿ
ಹೋಗಲೇ ಕಸಬಳಿ ನನ್ನ ಮನಿ ಮುಮದೆ
ಆಗ ಕೂಳು ಹಾಕ್ತೀನಿ ಅಂತಾರ
ಯಾವುದೋ ಹೊಟ್ಟಿ ತಾಪತ್ರಿಗೇ
ಈಗ ಏನು ಇಲ್ಲ ನನಗೆ ಏನೂ ತಿಳ್ಯಾಂಗಿಲ್ಲ
ಯಾವ್ದೊ ಅಂಬ್ರೆ ತೊಪ್ಪಲ
ಎಕ್ಕಿ ತೊಪ್ಲ ಗುಳಿಗೆ ಮಾಡಿಕ್ಯಂಡು
ಹೊಟ್ಟಿ ತಾಪತ್ರಿಗೆ
ಆಗ ಪುಣ್ಯ ಇದ್ರೆ ಬೇಸಾತು
ಪುಣ್ಯ ಇಲ್ಲಂದ್ರೆ ಹೊಂಟ್ಹೋದ
ಹೊಟ್ಟಿ ತಾಪತ್ರಯ ಮಾಡಿದ್ರೆ
ಒಳ್ಳಾಗ ಹಾಕಿ ಕುಟ್ಟಿ
ಹುಣ್ಣಿಗೆ ಕಟತಾನ ನಿಮ್ಮ ಗೌಡ
ಎಷ್ಟು ಸಾಹುಕಾರ ಇರಬೋದು ಅವನು
ಪುಗುಸೆಟ್ಟಿಗೆ ಹುಟ್ಟೀವ್ಯಾ ನಾವು
ಪುಗುಸೇಟಿಗೆ ಹುಟ್ಟಿಲ್ಲ
ಎಲ್ಲರು ಒಳ್ಳಾಗ ಕುಟ್ಟಾಕ
ಹತ್ತು ಸಾವಿರ ಖರ್ಚು ಮಾಡಿ ನಮ್ಮಪ್ಪ ಮಾಡಿಕ್ಯಂಡ್ರೆ
ಹತ್ತು ಸಾವಿರಕ್ಕೆ ಒಬ್ನೆ ಹುಟ್ಟೀನಿ
ಗಂಡುಗ್ಹುಟ್ಟೀನಿ
ಇನ್ನ ಬಡ್ಡಿಗಿ ಹಡದಿಲ್ಲ ನಮ್ಮಮ್ಮ
ಈಗ ಎಲ್ಲಾರು
ಯಾರ‍ನ್ನೊ ಕುಟ್ಟ ಬದಲು ಹಿಡ್ಕಂಡು ಬಂದು
ಆತನ ಹುಣ್ಣಿಗೆ ಕುಟ್ಟಿದ್ರೆ ತಂಟಿಲ್ಲ
ಮುಗುದೇ ಹೋಯಿತಲ್ಲ
ಎಲ್ಲಾರನ್ನು ತಂದು ಆತಗ ಕಟ್ಟೋಬದಲು ಆತ್ನೆಗ ಕುಟ್ಟಿದ್ರೆ

ಕುಟ್ವೋನು ನೋಡ್ತಿನಿ ನಿಮ್ಮ ಗೌಡವೆಲ್ಲಿ ಐದಾನಾ
s ಆತನ ಕೂಟ ಮಾತಾಡಬೇಕು ಮಕಾ ನೋಡಬೇಕಪ್ಪಾ ನಾನು || ತಂದಾನ ||

ನಡ್ರೀ ನಾನು ಬರತೀನಿ
ಬರಬೇಡ ತಮ್ಮ
ಇಲ್ಲ ನಾನು ಬರಬೇಕು
ಆತನಕೂಟ ಮಾತಾಡಬೇಕು
ಆತನ ಮಕ ನೋಡಬೇಕು
ಅಂತ ಬಂದು ಬಿಟ್ಟ ಹುಡುಗ
ಬಂದೋಷ್ಟಿಗೆಲ್ಲ
ಆಗ ಹುಡುಗನ ಕಡಿಗೆ ತಂದೆ ನೋಡಿದ
ಎರಡು ಕಣ್ಣಿಗ್ ಥಳಕ್ ಅಂದ
ಎಲ್ಡು ಕೈ ಜೋಡಿಸಿ ಬಾರಲು ಬಿದ್ದಾನ

ತಮ್ಮಾ ಯಾವೂರು ಯಾತ್ತಾಗ ಯ್ಯಾ ತಾಯಿ ಹೊಟ್ಟ್ಯಾಗ ಹುಟ್ಟಿ
ತಮ್ಮ ತಾಯ್ಹೆಸರು ಹೇಳಪ್ಪ ತಂದೆ ಹೆಸರು ಹೇಳಪ್ಪ
ತಮ್ಮಾ ಯಾಕ ಹುಟ್ಟೀದ್ಯೊಯಪ್ಪಾ ಇಂಥ ಮಗ ಹುಟ್ಟು ಬಾರದೊ || ತಂದಾನ ||

ಅಂಬೊತ್ತಿಗೆಲ್ಲಾ
ನೋಡ್ರಿ ನಿನ್ನ ಹೆಸರೇನ್ರಿ ಅಂತ ಕೆಳಿದ
ನನ್ನ ಹೆಸರು ಹಾಲು ಗೊಲ್ರುಪಾ
ಕಾಂಭೋಜ ರಾಜ ಕೃಷ್ಣಗೊಲ್ರು ಅಂದ
ಸರೆ ಆಗ ನಿಂದು ಯಾವುರು ತಮ್ಮ ಅಂದ
ಕಾಶಿ ಪಟ್ಟಣ ಮೇಟೌಷಧ ಮಾರೋನು ನಾನು
ನನ್ನ ಹೆಸರು ಮದ್ದುಮಾರೋ ರಾಮ ಜೋಗಿ
ನಮ್ಮ ತಾಯಿ ಮದ್ದುಮಾರೋ ಸುಬ್ಬಮ್ಮ
ನಮ್ಮಪ್ಪ ಮದ್ದು ಮಾರೋ ಮಾರಯಪ್ಪ
ಓಹೋ ತಮ್ಮಾ ನೀನೇ ತಂದೆ ರೀತೆಯಪ್ಪಾ
ನಾನೇ ಮಗನ ರೀತೆಯಪ್ಪಾ
ತಮ್ಮಾ ನನ್ನ ಬೆನ್ನು ಬೇಸು ಮಾಡಪ್ಪ ಹುಣ್ಣು
ನಿನ್ನ ನನ್ನ ಊರು ನಿನ್ನ ಹೆಸರಲಿ ಮಾಡಿಸ್ತೀನಪ್ಪಾ
ಏನು ಕೇಳ್ತಿ ಬೆಳ್ಳಿ ಕೆಳ್ತಿಯಾ
ಬಂಗಾರ ಕೇಳ್ತಿಯಾ ಅಂದ
ಆ ಮಾತಿಗೇನಂದ ಆ ಹುಡುಗ
ಸರಿಯಯ್ಯಾ
ನಿಮ್ಮ ಊರು ನನಗೆ ಮಾಡಿಸ್ತಿ
ಆಸ್ತಿಯೆಲ್ಲಾ ನನಗೆ ಕೊಡ್ತಿ
ನಿನಗೆ ಹುಟ್ಟಿದ ಮಕ್ಕಳು ಸುಮ್ಮನಿರತಾರ
ಏ ನಮ್ಮಪ್ಪಗ ಹುಟ್ಟೆಯಾ
ನೀನು ನಮ್ಮ ಆಸ್ತಿ ತಿಂಬಾಕಂತಾರ
ಮಕ್ಕಳು ಮಕ್ಕಳಿಗೆ ಯಾಕ ಗುದ್ಯಾಟ ಇಡ್ತೀಯಾಪಾ
ನಿನಗೆ ಹುಟ್ಟಿದೋರು ಆದ್ರೆ
ನಿನ್ನ ಆಸ್ತಿ ಊಟ ಮಾಡ್ತಾರ
ನಾನೇನು ಹುಟ್ಟೀನಾ ನಿನಗೆ
ಏನೋ ಅಂಬ್ರೆತಪ್ಪಲ ಯಕ್ಕೆ ತಪ್ಪಲಾ
ಮಾರಿಕೊಂಬೋದು ಹೋಗಾದು
ಏನ್ರೀ ಸರೆ ಬೇಶು ಮಾಡಿದ್ರೆ ಒಳ್ಳೆವ್ನು
ಬೇಸ ಮಾಡ್ಲಿದ್ರೆ ಕೈಕಾಲು ಕಟ್ಟಿ
ಇನ್ನ ಒಳ್ಳಾಗ ಹಾಕಿ ಕುಟ್ಟಿ ಹುಣ್ಣಿಗ ಕಟ್ತಿಯಂತಲ್ಲ
ನಾವೆಲ್ಲ ಪುಗ್ಸ್ಯಾಟ್ಟೆಗೆ ಹುಟ್ಟಿವೇನ್ರಿ
ಎಲ್ಲಾರ‍ನ ಹಿಡ್ಕಂಡು ಬಂದು ಕುಟ್ಟಿ ನಿನ್ನ ಹುಣ್ಣಿಗೆ ಕಟ್ಟಾಕ
ಹತ್ತು ಸಾವಿರ ಖರ್ಚು ಮಾಡಿ ನಮ್ಮಪ್ಪ ಮಾಡಿಕ್ಯಂಡ್ರೆ
ಗಂಟಿಗ ಹುಟ್ಟೀನಿ
ಬಡ್ಡೀಗೆ ಹಡದಿಲ್ಲ ನಮ್ಮಮ್ಮ
ಎಲ್ಲಾರಿಗೆ ಕುಟ್ಟೊಬದ್ಲು
ನಿನ್ನ ಹುಣ್ಣಿಗೆ ಕುಟ್ಟಿದ್ರೆ ತಂಟಿಲ್ಲಲ್ಲಪ್ಪಾ
ತಮ್ಮಾ

ಕುಟ್ಟಾನ ಕುಟ್ಟಲ್ಲೋ ಜಲ್ಮನ್ನ ಕಳೀಯಲ್ಲೋ
ಇಷ್ಟು ಕಷ್ಟದಲ್ಲಿ ಕೊಡಬಾರದೋ ಕೊಟ್ಟಿದೇವರು ಹಾಳಾಗ || ತಂದಾನ ||

ತಮ್ಮಾ ಕೊಟ್ಟಿದ್ದ ದೇವರು ಹಾಳಾಗ
ಇಂಥ ಕೊಟ್ಟು ಕಷ್ಟ ಕೊಡಬಾರದಪ್ಪಾ ಜೀವಗೆ

ಯಪ್ಪಾ ನಾವು ಮಾಡ್ಡಕರ್ಮಕ್ಕೆ
ನಮಗೆ ದೇವರು ಕೊಡುತಾನ ಕಷ್ಟ || ತಂದಾನ ||

ದೇವರು ಯದುಕಾಗಿ ಕೊಟ್ಟಿರತಾನಯಾ ಭೂಮಿಮ್ಯಾಲೆ
ಏನಪ್ಪಾಕೊಟ್ಟಿನಿ
ಹೋಗೊದು ಒಬ್ಬನು ಬರೋದು ಒಬ್ಬನೇ
ಏನಪ್ಪಾ ನಿನ್ನ ಜೀವದಾಗ
ಇಂಥಾ ವನವಾಸ ಮಾಡಂತ ಹೇಳಿರತಾನ
ಇಷ್ಟಂದು ಉರಿ ಅಂತ ಹೇಳಿರತಾನ
ಇಷ್ಟೊಂದು ಒದ್ದಾಡ್ಯಂತ ಹೇಳಿರತಾನ
ದಾರಿ ಬಂಡಿ ದಾರಿಲಿ ಹೋದ್ರೆ
ಸುತ್ತಾದ್ರು ಸುಖದಲ್ಲಿ
ಅತ ಹೇಳ್ಯಾನ
ಕಾಲ್ಧಾರಿಲೆ ಹೋದ್ರೆ
ನೆಟ್ಟಗ್ಹೊಗಿ ಸಿಗಬೀಳಬ್ಯಾಡ್ರಿ
ಅಂತ ಹೇಳ್ಯಾನ

ನೆಟ್ಟನ ದಾರಿಗ್ಹೋಗೀರಿ
ದೇವರು ಕಣ್ನಲ್ಲಿ ನೋಡ್ಯಾನ
ನಿನಗ್ಹುಣ್ಣುವಾಗಿ ಹುಟೈತೋ || ತಂದಾನ ||

ಹೆಚ್ಚು ಉರಿದು ಬಿಟ್ಟೀ
ಉರುಕಂಡು ಬಿದ್ದುಬಿಟ್ಟಿ
ಆಗ ಇನ್ನ ದೇವರೇನು ಮಾಡ್ಯಾನಯ್ಯ
ಆಗ ದೇವರು ಕೊಟ್ಯಪ್ಪಾ
ಕೊಟ್ಟಿ ಕಷ್ಟ ಕೊಟ್ರೆಂದ್ರೆ
ನೀನು ಮಾಡಿಕ್ಯಂಡಿದ್ದು ನಿನ್ನ ಕಷ್ಟ
ಆಗ ಏನ್ ತಂದಿಲ್ಲ ನೋಡಪ್ಪ ನಾನು
ಒಲ್ಯಾಗಿನ ಬೂದಿ ಹಳ್ದಾಗಿನ ನೀರು
ಅಂಬ್ರೇ ತೊಪ್ಪಲು ಎಕ್ಕೆ ತೊಪ್ಪಲು
ತಮ್ಮಾ ಯಂಗನ್ನ ತಣ್ಣಗ ಮಾಡಪ್ಪಾ ಹುಣ್ಣು
ಯಪ್ಪಾ ನೋಡು ತಮ್ಮ ಅಂತಾ
ಮ್ಯಾಲೆ ಬಟ್ಟೆ ತೆಗ್ದರು
ಹೊಟ್ಟ್ಯಾಗಿನ ಕಳ್ಳುವು ಕಾಣಬರತಾವಪ
ಬರೇ ಎಲುಬು ತಗುಲು ನಿಂತದ
ಗಪ್ಪನ ನಾತಬರತೈತಿ
ಹೊಟ್ಟ್ಯಾಗಿನ ಕಳುವೆಲ್ಲ ಕಿತ್ಗಂಡು ಬರತೈತಿ
ಆ ಹುಡುಗ ಎರಡು ಕೈ ಜೋಡ್ಸಿ
ಪಳಪಳ ಪಳಪಳ ಕಣ್ಣೀರು ಉದುರಿಸ್ದ

ಎಂಥ ಕಷ್ಟ ನಿನಗೇ ದೇವರು ಕೊಟ್ಟಾನಪ್ಪಾ
ಯಪ್ಪಾ ಎಂಥದ್ದಾಗ ಒದ್ದಾಡ್ತೀಯಪ್ಪಾ
ಇಂಥಾ ಕಷ್ಟ ನನ್ನ ಜಲ್ಮ ನೋಡಲಿಲ್ಲೋ
ಇಂತಾ ಕಷ್ಟ ನನ್ನ ಜಲ್ಮ ನೋಡಲಿಲ್ಲಪ್ಪಾ || ತಂದಾನ ||

ಇಂಥಾ ಕಷ್ಟ ನೋಡಬಾರದಪ್ಪ ನಾವು ಅಂತ
ನೋಡ್ರಿ ಇದು ಯಾವ ಹುಣ್ಣು ಅಂದ್ರೆ
ರಾಜಗ್ಹುಟ್ಟಿದ ರಾಕ್ಷಿ ಹುಣ್ಣುದಾಗ
ಶನಿಮಾತ್ಮ ಸೇರಿಬಿಟ್ಟಾನ
ರಾಜ್ಯವಾಳೋರಿಗೆ ಹುಣ್ಣು
ಆಗ ಶನಿಮಾತ್ಮ ಸೇರಯಾನ
ಈ ಶನಿಮಾತ್ಮ ಹೋಗೋಂಗಿಲ್ಲ
ಈ ಲೋಕೌಷಧ ಹಾಕಿದ್ರನು
ಶನಿಮಾತ್ಮ ಸಾಯೋವ್ನೇ ಅಲ್ಲ
ಜಲ್ಮ ಒಯಿಲ್ಲಿಕ್ಕೆ ಬಂದಾಗ
ತಮ್ಮಾ ಯಂಗನ್ನ ಗಡ್ಡಿಗೆ ಹಾಕಪ್ಪಾ
ಈಗ ಈ ಶನಿಮಾತ್ಮ ಸಾಯಿಬೇಕಂದ್ರೆ
ಎಲೈತಂದ್ರೆ ಏಳು ಸಮುದ್ರದ ಕಡಿಗೆ ಐತೆ
ಬಕಾಸುರನ ತಂಗಿ
ಮೈರಾಮನ ಮಗಳು
ಹನ್ನೆರಡು ಕೈ ಆದಿಶ್ಕತಿ
ಆಗ ನಗೊ ಎಲೆ
ಒಡಾಡ್ಯೊಕಾಂಚ
ಸೂಗೂರು ಸುಣ್ಣ
ಬೆಂಕಿ ತಿಂದ ರಕ್ತ ಪಕ್ಷಿ ಕೂಟ
ಅವುಷದ್ಧ ಮೇಟಿ ಔಷಧ ಮಾಡ್ಬೇಕು
ಬೊಳ್ಳಿಟ್ರೆ ಉರಿತೈತಿ
ಕೆಳಗ ಬಿದ್ರೆ ತೂತು ಬಿದ್ದಕಂಡು ಹೋತೈತಿ
ಸೌಟಿ ಕೂಟ ತಕ್ಕಡಿ ಒಳಗ ಹಾಕಿ
ಕರೆಕ್ಟ್ ಬಂಗಾರ ತೂಕ ಮಾಡಿದ್ಹಾಂಗ ಮಾಡ್ಬೇಕು
ಬೆನ್ನಿಗ್ಹಾಕಿದ್ರೆ ಬೆನ್ನು ಒಳಾಗಿನ ಶನಿಮಾಹಾತ್ಮ

ದಗ್ಗನ್ಹಂಗೆ ಉರಿತಾನ ತಾವ್ಹಾಳಾಗಿ ಹೋಗತನ
ನಿನ್ನ ಹುಣ್ಣು ಯಪ್ಪಾ ಬೇಸಾಗಿ ಬಿಡುತೈತೋ || ತಂದಾನ ||