ತಮ್ಮಾ ಮೆಟೌಷದ್ದ ಮಾರೋವ್ನೆ
ಯಪ್ಪಾ ರೋಟು ತಣ್ಣುಗ ಮಾಡಪ್ಪಾಂದ ಕಾಂಭೋಜರಾಜ
ಸರಿಬಿಡು ಅಂತ
ಆಗ ಏನಂದಾ ಎರಡು ಕೈ ಜೋಡ್ಸಿದ
ಯಪ್ಪಾ ಶಿವ ನನ್ನ ಕೊಟ್ಟವನು ಯಾವನೋ
ಶಿವಾ ನನ್ ಕೊಟ್ಟು ಹೋದೆ
ಶನಿಮಾತ್ಮನ್ನ ನಮಪ್ಪನ ಜೀವಕ್ಕ ಬಿಟ್ಹೋದೆ
ನನ್ ಜೀವಹುಟ್ಟಿದಾಗ
ಈ ಶನಿಮಾತ್ಮನ್ನ ಬಿಟ್ಟೋದೆ
ಈಗ ನಮಪ್ಪನ ಹುಣ್ಣು ಮ್ಯಾಲೆ ಕೈಯಿ ಇಡ್ತೀನಿ

ನಮ್ಮಾ ತಂದಿನ ಹುಣ್ಣು ತಣ್ಣಗ ಮಾಡು ಶಿವನೇ
ಶರಣು ಶನಿಮಾತ್ಮಾ ನಿನ್ನ ಪಾದಗಪ್ಪಾ || ತಂದಾನ ||

ಶರಣಪ್ಪ ಶನಿಮಾತ್ಮಾ
ನೀನು ನಾನು ಲೋಕಗ ಬಂದೀವಪ್ಪಾ
ಈಗಿನ್ನ ನಾನು ಕೈಯಿ ಇಡ್ತೀನಿ
ನಿನ್ನ ಪಾದುಗ ಶರಣಂದೀನಿ
ಈಗ ನಾನು ಜೀವಿದ್ರೆ ನೀನು ತಣ್ಣಗಿರು
ನಮ್ಮಪ್ಪನ್ನ ಕಷ್ಟಕೊಡುಬ್ಯಾಡ
ನಾನೆಲ್ಲನ್ನ ಸತ್ತೋದ್ರೆ
ನಮ್ಮಪ್ಪಗ ಕಷ್ಟೋಕೋಟು
ಆಗ ಶನಿಮಾತ್ಮಾ ಅಂತ
ಬೇಡಿಕೊಂಬ್ಹೋತ್ತಿಗೆ
ಶನಿಮಾತ್ಮ ಕಿಲಕಿಲ ನಗುತನ
ಯಪ್ಪಾ ನಿನ್ನ ನನ್ನ ಲೋಕ ಬಿಟ್ಟೋಗ್ಯಾನ ಶಿವ
ನೀನು ತಣ್ಣಗಿದ್ರೆ
ನಾನು ತಣ್ಣಗಿರತಿನಿ
ನಿಮಪ್ಪನ ಹುಣ್ಣ್ಯಾಗ
ವಾರಿಗ್ಯಾಗಿ ಕುಂದ್ರುತಿನಿ
ಹುಣ್ಣು ಬಿಟ್ಟು ಹೋಗಾದಿಲ್ಲ
ನೀನೇಲ್ಲನ್ನ ಸತ್ರೆ
ಹದ್ನಾರು ಹಲ್ಲುಕೂಟ ಕಡಿತಿನಿ ನಿಮ್ಮಪ್ಪನ್ನ
ಭಗ್ ಬಗ್ ಉರುಪಟ ಮಾಡ್ತಿನಿ
ನೀನೇ ಹೋಗಿ ಅವುಷದ ತರಬೇಕು
ತಂದು ನಿನ್ನ ಕೈಲ್ಹಾಕುವಾಗ

ಬೆನ್ನು ಬಿಟ್ಟು ಹೋತೀನಿ ಅಷ್ಟತನ್ಕ ಹೋಗದಿಲ್ಲಾ
ಹಂಗಾರೆ ಶನಿಮಾತ್ಮಾ ಅಪ್ಪಣೆಕೊಡು ಹೋತೀನಿ || ತಂದಾನ ||

ಹಂಗಾರೆ ಶರಣಪ್ಪಾ ಶನಿಮಾತ್ಮ
ಅಪ್ಪಣೆಕೋಡು ಹೋತಿನಿ
ಹೋಗಿ ಬಾರಪ್ಪಾ ಶರುಣು ಶರಬಂದಾ