ಮೇಟೌಷದ್ದ ತಂದ್ಹಾಕೀದ್ದ್ರೇನೆ ಬೇಸಾಗೋದು
ಇಲ್ಲದಿದ್ರೆ ಬೇಸಾಗದಿಲ್ಲ
ಆಗ ಏಳು ಸಮುದ್ರ ಆಕಡಿಕೆ ಹೋಗಿ
ಅವುಷದ್ದ ತರಬೇಕಂತೆ
ಆ ಅವುಷದ್ದ ತರೋವ್ರು ಯಾರು
ತಮ್ಮಾ ಹೆಂಗನ್ನ ತಂದ್ಹಾಕಪ್ಪಾ
ನಿನ್ಗೆ ಕೇಳಿದ್ದು ಕೊಡ್ತಿನಿ
ಹೇ ನನ್ಗೆ ಸಾಧ್ಯ ಇಲ್ಲಪ್ಪ
ಏಳು ಸಮುದ್ರದ ಆ ಕಡಿಗೆ ಹೋಗಾಕ
ನಿನ್ಗ ಹೆಂಡ್ರು ಮಕ್ಕುಳು ಯಾರಿಲ್ಲಾಂದ
ಅಯ್ಯೋ ಆರುಮಂದಿ ಹೆಂಡ್ರು
ಆರು ಮಂದಿ ಮಕ್ಕಳು ಇದಾರ
ಮತ್ತೆ ಕರೆಕಳ್ಸು ಅಂದ
ನೋಡಬೇಕು ನಮಣ್ಣೋರು ಅಂತ
ಬರ್ರೆಪ್ಪಾ ನಾಗಚತ್ರಿ ದೇವಚತ್ರಿ
ಮುನಿಚತ್ರಿ ಕುಲಚತ್ರಿ ಯೊಗಚತ್ರಿ ಭೋಗ ಚತ್ರಿ
ಅಬ್ಬಬಬ್ಬಾ ಕುಲಚತ್ರಿ ಅಂತೆ

ಕುಲ ಮರ್ಯಾದಿ ಕಳಿಯುವರೂ ಇವ್ರು ಕರ್ಮವಾಗಿ ಜಲ್ಮಕ್ಕೆ || ತಂದಾನ ||

ಏನಪ್ಪಾ ನಮ್ಮನ್ನ ಕರದೇ
ಯಪ್ಪಾ ಈತ ಮೇಟಿ ಔಷದ್ಧ ಮಾರವನು
ಈತಂದು ಕಾಶಿ ಪಟ್ಣಂತೆ
ಹೇಳ್ತಾನಾ ಕೇಳ್ಯ್ರೋ ಮಕ್ಕಳ್ನಾರೇ
ಏನ್ರೀ
ನೋಡಪ್ಪಾ ಏಳು ಸಮುದ್ರದ ಆ ಕಡಿಗೆ
ಬಕಾಸುರನ ತಂಗಿ
ಮೈರಾಮನ ಮಗಳು ಎದನಗಂಧಿ
ಹನ್ನೆರಡ ಕೈ ಆದಿಶಕ್ತಿ ಆಕೆ
ಈಗ ಮಾತಾಡೋ ಅಡಿಕೆ
ನಗೋ ಎಲೆ ಒಡ್ಯಾಡೋ ಕಾಂಚು
ಸೂಗೂರು ಸುಣ್ಣ
ಬೆಂಕಿತಿಂದ ಪಕ್ಷಿ ರಕ್ತ ಕೂಟ
ಇನ್ನ ತಯ್ಯಾರು ಮಾಡ್ತಾಳ ಮೇಟಿ ಔಷದ್ಧ
ಮದ್ದಿದ್ರೆ ನಿದ್ದಿ ಮದ್ದಿಲ್ದರೆ ನಿದ್ದಿಲ್ಲ
ಆಕೀ ಕೈಚೀಲದಾಗ ಇಟ್ಕೊಂಡು
ತಲೆ ಅಡೇಲಿ ನಿದ್ದಿಮಾಡ್ತಾಳ
ಮೂರು ತಿಂಗಳು ಇನ್ನ ನಿದ್ದಿಮಾಡಾಕಿ
ಆರು ತಿಂಗಳು ಊಟ ಮಾಡಾಕಿ
ಹಂತಾಕಿ ಇನ್ನ
ಆಗ ಮನೆ ಮುಂದೆ ಏನು ಕಾಯ್ತಾವ ಆಕೀಗೆ
ಏಳು ಸಮುದ್ರದ ಆಕಡೀಗೆ ಅಡಿವ್ಯಾಗ ಇರೋದು
ಮುರಂತಸ್ಥ ಮಾಳಿಗೆ
ಬರೇ ಕನ್ಡಿಮನಿ
ಹುಲಿ ಕರಡಿ ಕೆಂಪುಕೋತಿ ಕರೆಕೋತಿ
ಒಂದೊಂದು ಇನ್ನ ಗಂಡಿರುವಿ ಹೆಗ್ಗಣ ದಪ್ಪಾ
ಒಂದೊಂದು ಕೆಂಪಿರುವಿ ಇಲಿ ದಪ್ಪ
ಇಲಿಗಳು ಹೆಗ್ಗಣ ದಪ್ಪ
ಅವು ಕಾಯ್ತಾವ
ಹತ್ತು ದನುಗುಳು ಕೊಯ್ತಾಳಾಕಿ
ದೇವ ಮೃಗುಗಳೀಗೆ ಹಾಕ್ತಾಳ
ಒಬ್ಬ ನರಪ್ರಾಣಿ ದುಷ್ಟರು ದುರಮಾರ್ಗರು
ಒಬ್ಬ ಗಣಮಗ ಹೋಗಂಗಿಲ್ಲ ಅಕಿ ತಲ್ಲಿಗೆ
ಹಂತಾಕಿ ತಲ್ಲಿಗ್ಹೋಗಿ
ಆಕಿ ತಲೆಡೇಲಿಯ ಅವುಷದ್ಧ ತಂದು
ನಿಮ್ಮ ತಂದಿಗ್ಹಾಕಿದ್ರೆ
ಶನಿಮಾತ್ಮ ಸಾಯ್ತಾನ
ಇಲ್ಲದಿದ್ರೆ ಸಾಯಾದಿಲ್ಲ
ಅಂದ್ರೆ ಕೈಲಾದೋರಗೆ ಬಲಾ ಹೆಚ್ಚಂತೆ
ಆಗ ಬಲಾ ಇಲ್ಹೋರಿಗೆ ಮಾತ್ಹೆಚ್ಚಂತೆ
ಏನಂತಾರ ಹುಡುಗುರು ಆರುಮಂದಿ
ಏನಪಾ ಅವುಷದ್ಧ ಮಾರೊವ್ನೆ
ಹೇ ಕೆಳಗೈತಾ ಮ್ಯಾಲೈತಾ
ಏಳು ಸಮುದ್ರ ಎಡಗಾಲಿಲಿ
ಈಸಲ್ಹೊಡ್ತಿವಿ
ಬಲಗೈಲಿ ಅವುಳ್ನ ಹದ್ನಾರು ತುಂಡು ಮಾಡ್ತಿನಿ
ಸಾವುರು ಲಕ್ಷಲ್ಲ ಇನ್ನ ಹುಲಿ ಕರಡಿ
ಕಡ್ಡು ಕಡ್ಡು ಕುಪ್ಯಾಕೀ ಬಿಡ್ತಿವಿ

ಇವತ್ತೇ ಹೋಗೇವ ನಾವು ಅವುಷದ್ಧ ತಂದೇವಾ || ತಂದಾನ ||

ಇವತ್ತೋಗಿ ನಾಳೆ ಅವುಷದ್ದ ತರತಿವಿ
ಹೇ ಮೆಟೌಷದ್ದೊನೆ ಇಲ್ಲೇ ಇರು
ನೀನ್ಯಾಕ ಹೊಂಟಿ
ಇಲ್ಲಪಾ ನಮ್ಮಪ್ಪ ನಮಮ್ಮ
ಆಗ ಇನ್ನ ನನ ಮಗ ತರುಬೇಕು
ನಾವು ಊಟ ಮಾಡ್ಬೇಕಂತ
ಆಗ ಅವುಷದ್ದ ಮಾರಬೇಕು
ಅಕ್ಕಿ ಬ್ಯಾಳೆ ಒಯ್ದು ಕೊಟ್ರೆ ಅಲ್ಲ
ನನ್ ಜೀವ್ದ ತಾಯಿ
ನನ್ ಜೀವಕ್ಕ ಕೂಳ್ಹಾಕೋದು
ಇಲ್ಲಪ್ಪಾ ನಾನಿರೋದಿಲ್ಲ
ಈಗ ನಾಳೆಂತೀರಲ್ಲ
ನಾಳೆ ತಗಂಡು ಬರ್ರೀ
ನಾನು ಬರತಿನಿ
ಆಗ ಯಾರಿಗೇನೆ ವೊತ್ಗೋಂಡ್ಹೊಗಂಗಿಲ್ಲಪಾ
ಈಗ ಬೇಸಾಗೋದು ಬೇಕಪಾ ಅಂದ
ಅಂಬೋತ್ತಿಗೇ
ಹಂಗಾರೆ ಇವೊತ್ಹೋಗಿ ನಾಳೆ ತರತೀರ್ಯಾ ಅಂದ
ಹೇs ತರತೀವಿ ಅಂದ್ರು
ನೋಡ್ರಪ್ಪಾ ಆಕಿತಲ್ಲಿ ಹೋಗಬೇಕಂದ್ರೆ
ಹೋಗೋದು ಆರು ತಿಂಗಳಾ
ಬರೋದು ಮೂರು ತಿಂಗಳಾ
ನಿಮ್ಮ ತಾಯಿ ಹೊಟ್ಟಿಲ್ಲಿ ಸರೀಗ್ಹುಟ್ಟಿದ್ರೆ
ತಾಯೀ ತಂದಿಗೆ
ನೀವು ಮಾಡಿದ ಪುಣ್ಯ ಆದ್ರೆ
ಈಗ ತಾಯಿ ಹೊಟ್ಟೆ ತಣ್ಣಗಾದ್ರೆ
ತಿರಗಾ ಬರತೀರಿ ವಾಪಸ್ಸು
ನಿಮ್ಮ ತಾಯಿಹೊಟ್ಟೆ ಕೆಟ್ಟದಾದ್ರೆ

ಆತ್ತಗೇ ಹೋತೀರಿ ಏಳು ಸಮುದ್ರಗಲೆ ನೀವು || ತಂದಾನ ||

ಆಗ ಏಳು ಸಮುದ್ರಾದಾಗ ಅತ್ತಾಗೇ ಹೋತೀರಿ
ಸೆರೆಬಿಡಪ್ಪಾ ನಾವು ಇವೊತ್ತ್ಹೋಗಿ
ನಾಳೆ ತರಲಿದ್ರೆ ಅವಗನು
ತಂದೇನಂತಾನ ಮಕ್ಕಳಾರಾ
ಆರು ಮಂದಿ ಹುಟ್ಟಿದೀರಿ
ಕಂಡ ದೇವ್ರಿಗಿ ಬೇಡಿಕಂಡೆ ನಿಮ್ ಕ್ವಾಸರಾ
ಯಪ್ಪಾ ನೀವು ಹುಟ್ಟಿದ ಮ್ಯಾಲೆ
ನನ್ಗೆ ಹುಣ್ಣು ಹುಟ್ತು
ನನ್ ಜಲುಮುಳುಸ್ರೋ ಮಕ್ಕಳಾರಾ
ನಿಮಗೆಲ್ಲಾರಿಗೆ ಜೀವ
ತಾಯೀನೇ ತಂದೀನೆ ಉಳಿಸಿಗ್ಯರಪ್ಪಾ ಮಕ್ಕುಳಾರಾ
ಅಂತ ತಂದೆ ಅಂತಾನ
ಸರೆ ಹೋಗಿ ಬರತಿವಪ್ಪ ಅಂದ್ರು