ತಾಯಿ ಪಾದ ಮುಗ್ದ ಶರಬಂಧರಾಜ
ಈಗ ಪದ್ರನ ಪಂಚೆ ಶರಟು ಶಲ್ಲೆವು ತಗಂಡ
ಮೂರು ದಡೆವು ಚಂದ್ರಾಯ್ಧ ತಗಂಡ
ಆಗ ಮಗ ಕೈಚೀಲ ತಗಂಡು
ಯಪ್ಪಾ ಹೋಗು ಬಾ ಮಗನ
ನಿನ್ಗೆ ಪರುಮಾತ್ಮ ಕಾಪಾಡ್ಲೆಂದ್ಳು

ಸುಡುಗಾಡು ರುದ್ರಭೂಮಿ ಬಿಟ್ಟಾನಮ್ಮಾ
ಬರತಾನಮ್ಮಾ ಶರಬಂದ ಆರಂಡಿ ಅಡವೀಗೆ
s ವಂದು ಗಾವುದ ಎರಡು ಗಾವುದ
ಮೂರು ಗಾವುದ ಬಂದಾನೆ ಮಗ || ತಂದಾನ ||

ಮೂರ್ ರೋಡು ಕಲ್ತುವು
ಆ ಮಗ ಏನಂದ ಗೇಟ ಕಾಯೋ ಸುಂಕಗ
ಒಂದು ಪಾದ ಎರಡು ಕೈ ಜೋಡ್ಸಿ
ಯಪ್ಪಾ ದಾರಿ ತೋರಸವನೆ
ದಾರಿಲ್ದೋರಿಗೆ ದಾರಿ ತೋರವನೆ
ಈ ದಾರಿ ಯಾವೂರಿಗೆ ಹೋಗ್ತೆ
ಈ ದಾರಿ ಯಾವುರಿಗೆ ಹೋಗ್ತೆ ಅಂತ ಕೇಳ್ದ
ತಮ್ಮಾ ಶರಣಪ್ಪ ನಿನ್ಗೆ
ತಮ್ಮಾ ಎಷ್ಟು ಚೆಲುವೈದಿಯಪ್ಪಾ
ಸೂರ್ಯ ಚಂದ್ರ ಕಾಣ್ದಂಗ ಆದೀಯಪ್ಪ
ನಿಂದು ಯಾವೂರಪ್ಪ ಅಂದ
ನಂದು ಚಾಂಪುರು ಪಟ್ಣ
ನಮ್ಮ ತಾಯಿ ಸಿರಿದೇವಿ
ನನ್ಹೆಸರು ಶರಬಂಧರಾಜ
ನಾವು ಹಾಲುಗೋಲ್ರು
ನಮ್ಮ ತಂದಿ ಕಾಂಭೋಜರಾಜಗೆ
ಹುಣ್ಣು ಹುಟೈತೆ ಜೀವಕ್ಕ ತಂದಿಗೆ
ಏಳು ಸಮುದ್ರ ಆ ಕಡಿಗೆ
ಎದಿನಗಂಧಿತಲ್ಲಿದ್ದ ಮೇಟೌಷದ್ದ ತರಾಕೋತೀನ್ರಿ ಅಂದ
ತಮ್ಮಾ ಹುಟ್ರೆಸಾಕಪ್ಪ ನಿನ್ಗೆ
ತಂದ್ರೆ ನೀನೇ ತರಬೋದು ಹುಡುಗ
ಏನಪಾ ನಿನ್ನೆ ಬಂದಿದ್ರು
ಆರು ಮಂದಿ ನಾಗಚತ್ರಿ ದೇವ ಚತ್ರಿ
ಕುಲ ಚತ್ರಿ ಅಂತೆ
ಅವ್ರಿಂಗ ಕೇಳಲಿಲ್ಲಪ್ಪ
ತಮ್ಮಾನಿನ್ಗೆ ಸುತ್ತಾಲು ಬೇಕ ನೆಟ್ಟಗಬೇಕಾ ಅಂದ
ನೋಡಪಾ ಯಜಮಾನ್ರು ಏನಂತ ಹೇಳ್ಯಾರ
ಸುತ್ತಾಲಿ ಹೋದ್ರೆ ಇನ್ನ ಸುತ್ತಿಗ್ಯಾಂತ್ಹೊಂದ್ರೆ
ಸುಖಾಪ್ಪಾ ಅಂತ ಹೇಳ್ಯಾರ
ನೆಟ್ಟಗ್ಹೋಗಿ ಸಿಗೇ ಬೀಳಬ್ಯಾಡಪ್ಪಾಂತ ಹೇಳಾರೆ
ಯಜಮಾನ್ರು
ನೋಡಪಾ

ಸುತ್ತದಾರಿ ಬೇಕಪ್ಪ ನನ್ಗೆ ನೆಟ್ಟಗ ದಾರಿ ಬೇಕಿಲ್ಲಾ
ರೋಟು ತಡಾದ್ರೆ ಚಿಂತಿಲ್ಲಾ ನಾನು ತಡ ಮಾಡಿ ಹೋಗಬೇಕು || ತಂದಾನ ||

ಬಡಬಡಾ ಅಂಬಂಗಿಲ್ಲ
ನನ್ಗೆ ಕಾಲುದಾರಿ ಬೇಕಿಲ್ರಿ
ನನ್ಗೆ ಬಂಡಿ ದಾರಿ ಬೇಕಂದ
ತಮ್ಮಾ ಹುಟ್ರೆ ಸಾಕಪ್ಪಾ ಕುಲಕ್ಕ
ಆರು ಮಂದಿ ಹುಟ್ಟಿದ್ರೆ
ಏನು ಮಾಡಬೇಕು ತಮ್ಮ

ದೊಡ್ವೋರು ಗ್ಯಾನೈತೋ ನಿನ್ಗೆ ದೊಡ್ಡೋರದೆ ಗುಣೈತೋ
ತಮ್ಮಾ ನೀನು ಅವುಷದ್ ತರತೀಯೋ
ಇನ್ನ ಯಾವ್ನಕೈಲಿ ಆಗದಿಲ್ಲೋ || ತಂದಾನ ||

ಇಲ್ಲೇ ತಿಳುವರಿಕೆ ಆಯ್ತು ನನ್ಗೆ
ದೊಡ್ವೋರು ಗ್ಯಾನ
ದೋಡ್ವೋರು ಬುದ್ದಿ ಐತಪ್ಪ ನಿನ್ಗೆ
ಕೇಳವೋ ನಿಮ್ಮ ತಮ್ಮ ಅಣ್ಣೋರೆ ಆಗಬೇಕಾ
ಹೌದ್ರಿ
ಅವ್ರು ಹಿಂಗಂದಿಲ್ಲ
ಹೇಯ್ ಸುತ್ತಾಲೋದ್ರೆ
ಏನ್ ಚೆಂದ ಕಾಣ್ತದ ದಾರಯಾಗ
ನೆಟ್ಟಗ್ಹೋದ್ರೆ ಏನ್ ಚೆಂದ ಕಾಣತೈತಂದ್ರು
ನೋಡಪಾ ಸುತ್ತಾಲೋದ್ರೆ
ಏನು ಚೆಂದ ಕಾಣದಿಲ್ಲಾ
ಭೂಪತರಾಜ ಪಟ್ಣ ಆಮೇಲೆ
ದೇವಗಿರಿ ಪಟ್ಣ
ದೇವಗಿರಿ ಪಟ್ಣಾದ ಮ್ಯಾಲೆ
ಚಾವುಲರಾಜಪಟ್ಣ
ಚಾವುಲರಾಜ ಪಟ್ಣ ಮ್ಯಾಲೆ ಚಿತ್ರಗಿರಿಪಟ್ಣ
ಚಿತ್ರಿಗಿರಿ ಪಟ್ಣಾದ ಮ್ಯಾಲೆ ಏಳು ಸಮುದ್ರ
ಹಿಂಗೆ ಇನ್ನ ಕಾಲ್ದಾರಹಿಡಕಂಡೋದ್ರೆ
ಇಲ್ಲಿಗೆ ಐದು ಗಾವುದ ಐತೆ
ಇಲಾವಂತ್ರ ಪಟ್ಣ
ಇಲಾವಂತ್ರ ಪಟ್ಣಾದಾಗ ಪಾತರಗಿತ್ತಿ
ಗಣಸುರ ಮೀಸೆ ಎಡಗೈ ಮುಂಗೈಗೆ ಕಟ್ತಾಳ
ಕರಡಿ ಧಿಮ್‌ತೈ ಧಿಮ್ ತೈ
ಮದ್ದಿಲಿ ವಡೀತಾದ
ಹುಲಿರಾಜ ತೂತೂ ಮ್ಯಾಳ ಊದ್ತಾದ
ಕೋತಿ ತಾ ಆಂತ ತಾಳ ವಡೀತದೆ
ಬೆಕ್ಕು ಇನ್ನ ಬೆಳ್ಕು ತೋರಸ್ತದೆ
ಉಟ್ಟಿದ ಸೀರೆ ಉಚ್ಚಿ
ಕೆಳಗ ಬಿದ್ದಂಗ ಮಾಡಿದವ್ನು
ಜೀವದ ಸೀರೆ
ಅವ್ನೇ ನನ್ನ ಜೀವದ ಗಂಡಂತ ಬೋರಡ ಹಾಕ್ಯಾಳ
ಅಂಬೊತ್ತಿಗೆ
ಏನಪಾ ಮತ್ತೆ ಕಾಲುದಾರಿ
ಹಿಡ್ಕಂಡ್ಹೋತಿಯಾ ಅಂದ
ನೋಡಪಾ ನಿಮ್ಮಣ್ಣೋರು ಹೋದ್ರು ಅಂದ್ಳು
ನೋಡಪಾ ನನ್ಗೆ ಆಕೆ ಮೀಸ್ಯೆನ ಕಟ್ಲಿ
ಆಗ ಸೀರಯನ್ನ ವುಚ್ಚಿ ಬೀಳಲಿ

ಅವ್ರು ದೊಡ್ವೋರು ಗೊಡವೆ ನನಿಗ್ಯಾಕೆ ಯಪ್ಪಾ
ಹೆಣುಮಕ್ಕಳ ತಂಟೆ ಯಾಕ ನನಿಗ್ಯಾಕಪ್ಪ
ತಂದಿ ಜಲ್ಮುಗ್ಹುಟ್ಟೀನಿ
ನಾನು ತಂದಿಬೇಸು ಇರಬೇಕು || ತಂದಾನ ||

ತಂದಿಗ್ಹುಟ್ಟೀನಿ
ತಂದಿ ಹುಣ್ಣು ಬೇಸಿರಬೇಕು ನನ್ಗೆ
ಹೆಣಮಕ್ಕಳ ತಂಟೆ ಯಾಕಪ ನನ್ಗೆ
ಯಾವಾಕೆನ್ನ ಹೆಂಗನ್ನ ಉರಲಿ
ಈಗ ಏನ್ರಿ
ನಿನ ಪಾದಕೆ ಶರುಣು
ಈಗ ನನ್ಗೆ ನೆಟ್ಗ ದಾರಿ ಬೇಕಿಲ್ಲ
ಸುತ್ತಾದಾರಿ ಬೇಕು
ನನ್ಗಿ ಅಪ್ಪಣೆ ಕೊಡ್ರೀ ಅಂದ
ತಮ್ಮಾ ಕೊಟ್ಟಿದ್ದೇವ್ರು ಕಾಪಾಡಿಕ್ಯಂಡು ಬರಲಿ
ಶರಣಪ್ಪಾ ಹೋಗಿ ಬಾ ಅಂದ್ಳು