ಇವ್ರು ಆರು ಮಂದಿ ಮಕ್ಳು ಮನಿಗಿ ಬಂದ್ರು
ಯಮ್ಮಾ ಮೇಟಿ ಔಷದ್ದ ತರಬೇಕಂತೆ
ನಮ್ಮಪ್ಪ್ನ ಜಲ್ಮ ಉಳಿಸಿಗ್ಯಾಬೇಕು
ನಾವು ಆರು ಮಂದಿ ಹುಲಿಗ್ಹುಟ್ಟದ್ದಂಗ ಹುಟ್ಟೀವಿ
ತಂದಿ ವದ್ದಾಡ್ತಿದ್ರೆ
ನೀವು ಸುಮ್ನೆ ಇದ್ರಲ್ಲೋ
ಮೇಟೌಷದ್ದೋನು ಕರಕಂಡು ಬಂದು
ಆಗ ಜೀವ ಬೇಶ್ ಮಾಡ್ಸಿಕ್ಯಾಬೇಕಪ್ಪ ಅಂತ
ಲೋಕೆಲ್ಲಾ ಬೈತಾರ ನಮ್ಗ ಅಂತಾ
ಆಗ ಅತ್ರಾಣಿ ಬತ್ರಾಣಿ ಬೇಸ್ ಹಚ್ಚಿಕಂಡ್ರಪ್ಪ
ಕೈ ಚೀಲ ಹಿಡ್ಕಂಡು
ಹೋಗ ಬ್ಯಾಡ್ರಾಲೋ ಮಕ್ಕಾಳಾರಾ
ಎಳು ಸಮುದ್ರದ್ದಾಗ ಹೋಗಿ ಬಿಡ್ತಿರಿ
ಇತ್ತಾಗ ಸತ್ತಂಗಲ್ಲ ಇದ್ದಂಗಲ್ಲ
ಪಾಪ ಮಾಡಿದ್ದೋನು
ನಮ್ಮಕ್ಕಳ್ನ ಕಳಿಯಾಕ ನಿಂತಾನ
ಅಂತ ಆರು ಮಂದಿ ಮಕ್ಕಳು
ಅಣತಮ್ಮರು ಬಂದ್ರಪ್ಪಾ
ತಂದಿಪಾದ ತಾಯಿಪಾದ ಮುಗ್ದು

ಅವ್ರು ದಾರಿ ಹಿಡಿದು ಬರುತರಣ್ಣಾ
ಒಂದು ಗಾವುದ ಎರಡು ಗಾವುದಣ್ಣಾ
ಮೂರು ಗಾವುದ ಬಂದು ಬಿಟ್ಟರಣ್ಣಾ || ತಂದಾನ ||

ಮೂರು ಗಾವುದ ಬಂದು ಬಿಟ್ರು
ಗೇಟು ಕಾಯೋನು ಸುಂಕ ಇದಾನ
ತಾಳಿನ ಗುಡಿಸಲು ಹಾಕ್ಯಂಡು ಇದಾನ
ದಾರಿ ತಪ್ಪಿ ಬಂದೋರಿಗೆ
ದಾರಿ ತೋರಸವನು ಸುಂಕ
ಏನ್ರೀ ಈ ರೋಡು ಯಾವುರಿಗೆ ಹೋಗ್ತದ
ಈ ರೋಡು ಯಾವೋರಿಗೆ ಹೋಗ್ತದ
ಈ ದಾರಿ ಯಾವೂರಿಗೆ ಹೋಗ್ತದ ಅಂತ ಕೇಳದ್
ನೋಡಿದ
ಗೇಟು ಕಾಯೋನು ಸುಂಕ
ಅಬ್ಬ ಬಿಗಿದಲ್ಲಿ ಮಾತಾಡ್ತಾರ
ತಮ್ಮಾ ನಿಮ್ದ ಯಾವೂರಂತ ಕೇಳ್ದ
ನಮ್ದು ಚಾಂಪುರ ಪಟ್ಣ ನಮ್ಮತಂದಿ ಕಂಭೋಜರಾಜ
ನಾವು ಆರು ಮಂದಿ
ದೇವಚತ್ರಿ ನಾಗಚತ್ರಿ ಕುಲಚತ್ರಿ
ಅಬಾ

ಕುಲಾ ಮರ್ಯಾದಿ ಕಳಕೊಂಬೋರಪ್ಪೋ
ಕುಲಾ ಮರ್ಯಾದಿ ನೀವು ಉಳಿಸಿಗ್ಯಂಬೋರಲ್ಲಾ || ತಂದಾನ ||

ಆಗ ಕುಲ ಮರ್ಯಾದಿ ಕಳಕಂಬೋರು
ಸರೆ ಯೆದುಕಾಗಿ ನೀವ ಅಲ್ಲಿಗಿ ಹೋಗ್ತಿದ್ರಿ ಅಂತ ಕೇಳ್ದರು
ನಮ್ಮ ತಂದಿಗಿ ಹುಣ್ಣು ಹುಟೈತೆ
ಏಳು ಸಮುದ್ರ ಆ ಕಡಿಗೆ ಬಕಾಸುರನ ತಂಗಿ
ಮೈರಾಮಣನ ಮಗಳಂತೆ
ಆಗ ಎದಿನಗಂಧಿ ಕೈಚೀಲ್ದಾನ
ಗಾಜಿನ ಬುಡ್ಡಿ ಮೊದ್ದುತರಾಕ ಹೋತಿವಿ ಅಂದ್ರು
ನಿಮ್ಗ ಬಂಡಿ ದಾರಿ ಬೇಕಾ
ಕಾಲು ದಾರಿ ಬೇಕಾ ಅಂತ ಕೇಳ್ದ
ಇಲ್ರೀ
ಕಾಲು ದಾರಿಲಿ ಹೋದ್ರೆ
ಏನು ಚೆಂದೈತಿ ದಾರಯಾಗ
ಬಂಡಿ ದಾರಿಲಿ ಹೋದ್ರೆ
ಏನು ಚೆಂದ ಕಾಣತೈತೆ ಹೇಳ್ರೀ ಅಂದ
ನೋಡಪಾ ಬಂಡಿ ದಾರಿಲೀ ಹೋದ್ರೆ ಏನೂ ಚೆಂದಿಲ್ಲ
ಇಲ್ಲಿದ್ದ ಭೂಪತಿ ಪಟ್ಣ
ಭೂಪತಿ ಪಟ್ಣಲಿದ್ದ ಆಗ ದೇವಗಿರಿ
ದೇವಗಿರಿ ಪಟ್ಣಲಿದ್ದ ಚಾವುಲರಾಜ
ಚಾವುಲರಾಜ ಪಟ್ಣಲಿದ್ದ ಚಿತ್ರಿಗಿರಿ
ಚಿತ್ರಿಗಿರಿ ಪಟ್ಣಲಿದ್ದ ಏಳು ಸಮುದ್ರ
ಹಿಂಗ ಬಂಡಿ ದಾರಿಲಿ ಸುತ್ತವರಿಕ್ಯಂಡು ಹೋಗಬೇಕು
ಹಿಂಗ ಕಾಲದಾರಿ ನೆಟ್ಟಗ ಕಾಲಕೂಟ ಹೋದರೆ
ಇಲಾಮಂತ್ರ ಪಟ್ಲ ಇಲಾಮಂತ್ರ ಪಟ್ಣದ್ದಾಗ ಪಾತರಗಿತ್ತಿ
ಗವರಮೆಂಟು ಆರಡರು ತಂದು
ಇನ್ನ ಈಲಾಸ ಬೋರ್ಡು ಹಾಕ್ಯಾಳ
ಏನಂತ್ಹಾಕ್ಯಾಳಂದ್ರೆ
ಈಗ ಗಣಸೂರು ಮೀಸೆ
ಎಡಗೈ ಮುಂಗೈಗೆ ಕಟ್ಟಿಗಂತಿನಿ
ಆಕೆ ಆಟಾಡುವಾಗ ಇನ್ನ ಏನಂತ ಬಾರಸ್ತಾವಂದ್ರೆ
ಆಗ ಹೊರುಸಕ್ಕೆ
ಬಣ್ಣದ ಹೊರುಷಕ್ಕೆ
ನಾಕು ಗೊಂಬಿಗಳು
ಎರಡು ಗೊಂಬೆ ಥೈಥೈ ಥೈ ಕುಣಿತಾವ
ಎರಡು ಗೊಂಬೆ ಕಿಲ ಕಿಲ ಕಿಲ ನಗ್ತಾವ
ಆಕಿ ಕುಣಿವಾಗ ಏನು ಬಾರಿಸ್ತಾವಂದ್ರೆ
ಲೋಕ ಯಾರು ಗಣಮಕ್ಕಳು ಬಾರಸಂಗಿಲ್ಲ
ಕರಡಿ ಧಿಂ ಥೈ ಧಿಂ ಥೈ ಮದ್ದಿಲ ಹೋಡಿತೈತೆ
ಹುಲಿರಾಜ ತೂತೂ ಮ್ಯಾಳ ಊದುತೈತೆ
ಕೋತಿ ತಾತಾ ಅಂತ ತಾಳ ಹೊಡಿತೈತೆ
ಆಕಿ ಆಟಕ್ಕೆ
ಬೆಕ್ಕು ತಲಿ ಮ್ಯಾಲೆ
ಇನ್ನ ದೀಪಿಟ್ಟಗಂಡು ನೋಡ್ರಿ ಅಂತ ತೋರಸ್ತೈತೆ
ಆಕಿ ಏನಂತ ಇನ್ನ ಸರ್ತಿಕಟ್ಟ್ಯಾಳಂದ್ರೆ ಲೋಕಗೆ
ನಾನು ಇನ್ನು ಹೆಣಮಗಳಾಗಿದೀನಿ
ನೀವು ಗಣಮಕ್ಕುಳ ಇದೀರಿ
ನಾನು ಉಟ್ಟಿದ ಸೀರೆ
ಉಚ್ಚಿ ಕೆಳಾಗ ಬೀಳಂಗಮಾಡಿದ್ರೆ
ಮೂರು ಗೇಣು ದೂರಿರಬೇಕು ಗಣಮಗ
ಉಟ್ಟಿದ ಸೀರೆ ಉಚ್ಚಿ ಕೆಳಾಗ ಬಿದ್ದಾಂಗ ಮಾಡಿದ್ರೆ
ಅವ್ನೇ ನನ ಜೀವದ ಗಂಡ
ಆಂತ ಬೋರ್ಡ್ ಹಾಕ್ಯಾಳ
ಈತ ಹೇಳತಿದ್ರೆ ಇವ್ರು ಬಾಯಿ ತೆರದಾರ
ಕಪ್ಪೆಬಾಯಿ ತೆರದಾಂಗ
ಅಬ್ಬೋಬ್ಬಾಬ್ಬಾ ಹೆಣಸರ ದರ್ಪ ಅಷ್ಟೈತ್ಯಾ
ಲೇ ಆಟಾಡುವಾಗ ಎಡಗೈಲಿ ಹಿಂಗಂದ್ರೆ ಆಗ್ಯೋತು
ನಿಲ್ಗಿಹಿಡ್ಕಂಡು
ಆಗ ಸೀರಿ ಸೀರೆ ಉಚ್ಚಿ ಬೀಳ್ತೈತೆ
ಛೇ

ಅವ್ಳು ಗೆದ್ದಕಂಡೆ ಹೋಗಬೇಕು ಅವ್ಳು ನೋಡೇ ಹೋಗಬೇಕು || ತಂದಾನ ||

ಅವ್ಳು ನೋಡೆ ಹೋಗಬೇಕು ಅಂತ
ಏನ್ರೀ ಗೇಟು ಕಾಯೋರೆ
ನಾವು ಕಾಲು ದಾರಿಲಿ ಹೋತಿವ್ರಿ
ಬಂಡಿ ದಾರಿಲಿ ಹೋಗಾದಿಲ್ಲ
ಹೋಗ್ಯ್ರಪ್ಪಾ ಪಾಪ ಅಂದ್ರು
ಆಗ ಬಂದ್ರು ಇಲಾವಂತ್ರ ಪಟ್ಣಕ್ಕೆ
ಬಂದು ಅತ್ತ್ರಾಣಿ ಬತ್ತ್ರಾಣಿ ಹಚ್ಚಿಗ್ಯಂಡ್ರು
ಏನಪಾ ಪಾತರಗಿತ್ತಿ ಮನಿ ಎಲ್ಲೈತಂತ ಕೇಳಿದ್ರು
ಏ ನಿಮ್ದು ಯ್ಯಾರ ದೇಶಂದ್ರು
ನಮ್ದು ಚಾಂಪುರಪಟ್ಣಂದ್ರು
ಯಾಕಂದ್ರು
ನಮ್ಮೂರಾಗ ನಾಟಗೈತೆ
ಕರಕೊಂಡು ಹೋಗ್ಬೇಕ ಆಕಿಗಿ ಅಂದ್ರು
ಸೆರೆಬಿಡೂ ಆಕೀನ ಊರಾಗಿಟ್ಕಂಡಿಲ್ಲ ನಾವು
ಅಗೋ ಊರಿಂದು ಎರಡು ಹೊಲ ಬಿಟ್ಟು
ಕನ್ನಡಿ ಮನೆ ನೋಡು ಅದೇ ಆಕಿಂದು
ಬಣ್ಣ ಕಟ್ಟಿ ಕುಣ್ಯಾಕಿ
ಆಕೇ ನೋಡು ಆ ಮನಿ ಬಣ್ಣದ ಮನೆಂದ್ರು
ಬಂದ್ರು
ಆಕೆ ಕೈಯಾಗ ಇಬ್ರು
ಒಬ್ಬಾಕಿ ಕಸಾ ಬಳ್ಯಾಕಿ
ಒಬ್ಬಾಕಿ ಅಡಿಗೆ ಮಡಾಕಿ
ಅವ್ರು ಬೇಸ ಇದಾರ ಮುಗುಳಿತನಕ ಜಡೆ ಹಾಕ್ಯಂಡು
ಟೆರಲನ್ ಟೆರಿಕಾಟ್ ಬೇಸೇ ಉಟ್ಟುಗಂಡ ಇದಾರ ಆಕಿ ಕುಂತಗಂಡ್ರೆ ಒಂದು ಕಣ ಅಡ್ಡಾಲ
ಪಾತರಗಿತ್ತಿ
ಆಗ ಏನಮಾಡಿಬಿಟ್ಟ್ರು
ಬಂದ್ರು
ಏನಮ್ಮಾ ಪಾತರಗಿತ್ತಿ
ಅಯ್ಯಿದೀಯಾ ಮನ್ಯಾಗ
ನಮ್ಮೂರಾಗ ಆಟೈತೆ ಬರಬೇಕಂದ್ರು
ನಿನ್ನ ದುಡ್ಡು ಎಷ್ಟೈತೋ ಕೇಳಂದ್ರು
ಆಗ ತೊಂಟಗಿತ್ತಿ ದಾಸಗಿತ್ತಿ ನೋಡಿದ್ರು
ಯಮ್ಮಾ ವಳ್ಳೆ ನೀಟಿದ್ದೋರು ಬಂದಾರೆ
ಎಲ್ಲ ನಾಮ ಇಟ್ಕಂಡಾರ ಉದ್ದಕ
ಆಗ ಆರು ಮಂದಿ ಬಂದಾರಮ್ಮ
ನಮ್ಮನ್ನ ಕರಯಾಕ
ಯಮ್ಮಾ ಅವ್ನು ಖೂನ್ಹಿಡಿತಿನಿ ಏನಿಲ್ಲ
ನೀವು ನೀರೂ ತಗಂಡ್ಹೋಗಿ
ಅವ್ರಿಗೆ ಕೊಟ್ಟು
ಮನ್ಯಾಗ ಕರ್ರೀರಿ ಅಂದ್ಳು
ಆಗ ಒಬ್ಬೊಬ್ರು ಎರಡೆರಡು ಚ್ಯರಿಗೆ ನೀರಹಿಡ್ಕಂಡ್ರು
ಅಯ್ಯ ತಗ ಮಾವ ನೀಟಿದ್ದವರೆ ಅಂದ್ರು
ಅವ್ರು ನೋಡಿದ್ರು
ಯಾವತ್ತು ನೋಡಲಾರದವರು
ಹೆಣುಮಕ್ಕಳು
ಹೇ ಭಾಳಾ ಚಂದ ಇವ್ರು ವೈದರಾಲೇ
ಭಾಳ ನೀಟುಮ್ಯಾಲೆ ಇವ್ರು ವೈದರೇಲೇ || ತಂದಾನ ||

ಅಂತ ಪುಗಸಟ್ಟಿಗಿ ಬಂದ ನೀರು
ಅವರೇನು ಕಷ್ಟ ಪಟ್ಟು ತಂದಿಲ್ಲ
ಆಗ ಒಬ್ಬಬ್ರು ಎರಡು ಚೆರಿಗೆ
ಮೂರು ಚೆರಿಗೂ ತೋಳ್ದ್ರು
ಆಕಿಗಿ ಪಾತ್ರಗಿತ್ತಿಗೆನಂದ್ರೆ
ಒಂದು ಚೆರಿಗೆ ನೀರು ಕೊಟ್ರೆ
ಅರ್ಧ ಚೆರಿಗ್ಯಾಗೆ ಕಾಲು ಮಕ ತೊಳಿಬೇಕು
ಅರ್ಧ ಚೆರಿಗೆ ಹಿಂದಕ್ಕಳಿಸಿದ್ರೆ
ಅವ್ನು ಎಟಾಕತಾನಾಂತ ಆಕಿ ಜೀವಕ್ಕ ಗೊತ್ತು
ಇವ್ರು ಎರಡೆರಡು ಚೆರಿಗೆ ತೊಳಕಂಡ್ರು
ಬರ್ರೀ ಇನ್ನ ಬಣ್ಣದ ಹೊರಸಕ್ಕೆ ಅಂದ್ರು
ಬಣ್ಣದ ಹೊರಸಕ್ಕೆ ಬಂದ್ರು ಒಳಕ್ಕ
ಹೇ ಈ ಹೊರಸ್ಕ
ಎಷ್ಟು ಚೆಂದ ಇದಾವ ನೋಡಲೆ
ಎರಡು ಗೊಂಬೆ ಥೈಥೈ ಕುಣಿತಾವ
ಎರಡು ಗೊಂಬೆ ಕಿಲಕಿಲ ನಗ್ತಾವ
ಆಂತ ಬಂದು ಹೊರಸು ಮ್ಯಾಲೆ ಕುಂತ್ಗಂಡ್ರು
ಆ ಹೊರಸ್ ಅಡೇಲಿ ಆ ಗೊಂಬಿಗಳ
ಮುಗಳಾಗಲಿದ್ದ ಭೂಮ್ಯಾಗ ತಂತೈತೆ
ಆಗೇವು ಆ ಹೊರಸಡೇಲಿ ಆಗೇವು
ಆಗ ಕುಂತಗಂಡ್ರು
ಎಲೆ ಅಡಿಕೆ ತಂದಿಟ್ರು ತಟ್ಟ್ಯಾಗ
ಎಲೆ ಅಡಿಕೇಲೆ
ಎಲೇs ಎಷ್ಟು ಇನ್ನ ಹೆಣಮಕ್ಕಳು
ನಂಬಿಕ್ಯಂತಾರಲೆ ನಮ್ಮನ್ನ
ಎಷ್ಟು ಮಾರ್ಯಾದೆ ಕೊಡ್ತಾರವೇ
ನಮ್ದೇನು ನಯಾಪೈಸೆ ಖರ್ಚಾಗಿಲ್ಲ
ಎಲ್ಲಾ ಅವರದೆ
ನಾವು ತಿಂಬೋದು ಹೋಗೋದು ಅಂತ
ಆಗ ಎಲೆಡಿಕೆ ತಂದಿಟ್ಟ್ರು
ಏ ನಿಮ್ಮಾಟ ಆಡರಿ
ನಿಮ್ದೆಂಗೈತೊ ನಿಮ್ಮ ಸಂಬಳೆಷ್ಟೈತೋ
ದುಡ್ಡುಕೇಳವಂತ್ರಿ ಅಂದ
ಸ್ವೋಮಾರ ನಮ್ಮೂರಾಟ ಕರಕಂಡ್ಹೋಗಾಕ ಬಂದ್ವಿ
ನೋಡ್ರಿ ಅಂದ ಅಂದ್ರೇ
ಎಡಗಾಲಿಗೆ ಗೆಜ್ಜೆಕಟ್ದುಳು
ಬಲಗೈಲಿಗೆ ಇನ್ನ ಚೈನಾಕಿದ್ಳು
ತೊಂಟಗಿತ್ತಿ
ಆಗ ತೊಂಟಗಿತ್ತಿ ಎನಂದ್ಳು
ಅವು ಹ್ಯಾಂಗ ಭಾರಸ್ತಾವ
ಬಾಯಿ ಇಲ್ಲುದುವು ಕರಡಿ ಹುಲಿ

ಅಣ್ಣಾ ಥೈಥೈಥೈಥೈ ಥಟ್ಟಝಣ ಅಂತಿರಿ
ಥಾ ಥಾ ಧಿಗಥೈ ಝಣಂ
ಥಾಥಾ ಥಾಥಾ ದಿಗತೈತಾಜಣಂ
ಥೈ ಥೈ ಥೈ ಆಕಿ ಕುಣಿತಾಳಮ್ಮಾ
ಧಿಮ್ ತೈ ಧಿಮ್ ತೈ ವಂತ ಕುಣಿತಳಲ್ಲೇ
ಇವ್ರು ಕಿಲಿಕಿಲಿಕಿಲಿ ಕಲಿ ಇವ್ರು ನಗತರಮ್ಮಾ
ಆಗ ಬೇಸ್ ಆಡಿಕ್ಯಾಂತ ಇರುವಾಗ || ತಂದಾನ ||

ಜಾಡ್ಸಿ ಯಡಗಾಲ್ಲಲ್ಲಿ ತಂತೆ ಒದ್ದು ಬಿಟ್ಳು
ನಾಕು ಗೊಂಬಿಗುಳ ಆದ್ಯಾವಲ್ಲ
ಹೊರಸು ಮ್ಯಾಲೆ ಕುಂತೋರನ

ಲಟಕ್ನಂಗೆ ಬಾರಲಾಹಾಕ್ಯಾವಮ್ಮ
ಅಣ್ಣಾ ಬಾರಲ ಬಿದ್ದರಾ ಆಗೇವುದಾಗವಣ್ಣ
ಆರುಮಂದಿ || ತಂದಾನ ||

ಲಟಕ್ನ ತಿರುವ್ಯಾಕಿ ಬಿಟ್ಟು ಗೊಂಬಿಗುಳ್ನಾಡ
ಅಗೇದಾಗ ಬಿದ್ರು
ತೊಂಟಗಿತ್ತಿ ಬಂದ್ಳು
ಯಮ್ಮಾ ಆರು ಮಂದಿನು
ಹೊರಸ ತಿರುವ್ಯಾಕೆ
ಹಗೇದಾಗ್ಹಾಕಿ ಬಂದೀನಿ ಬಾ ಅಂದ್ಳು
ಆಗ ಪಾತರಗಿತ್ತಿ ಬಂದ್ಳು
ಲೇ ನಿಮ್ದು ಯಾವುರೆಲೆ ಅಂದ್ಳು
ಯಮ್ಮಾ ಸರ್ವ ತಪ್ಪಾಗೈತೆ
ನಿನ ಪಾದ ಮುಗೀತಿವಿ
ನಾವು ಮಕ್ಕಳು
ಬಿಡಮ್ಮಾ ಅಂದ್ರ ಬಿಡತಿದ್ದುಳು
ಇವ್ರಿಗೆಷ್ಟು ಬಿಂಕ ಬಂದೈತ್ನೋಡು
ನಮ್ಮದಾ ಚಾಂಪುರ ಪಟ್ಣ
ನಾವು ದಾ ಚಾಂಪುರ ಪಟ್ಣ
ನಾವು ಊರು ಮಾಡೋ
ಗೌಡನ ಮಕಳು ರಾಜನ ಮಕ್ಕಳು ಅಂದ್ರು
ಹೂಂ
ನಿಮ್ಮೆಸರೇನು
ಆರು ಮಂದಿ ನಾಗಚತ್ರಿ ದೇವಚತ್ರಿ ಕುಲಚತ್ರಿ
ಹಾಂ

ಕುಲಾ ಇಲ್ಲದಂಗ ನಿಮ್ಮಗ ಮಾಡಿನೆಲೆ
ಇನ್ನು ಬೇಸು ನನ ಕೈಯಾಗ ಸಿಕ್ಕಿರಲ್ಲಾ || ತಂದಾನ ||

ಎಲ್ಲಿಗ್ಯಾಗಿ ಬಂದ್ರಿ ನೀವು
ಇಲ್ಲ ನಮ್ಮಪ್ಪಗ ಹುಣ್ಣು ಹುಟೈತೆ
ಕೇಳವೇ ಪಾತ್ರಗಿತ್ತಿ
ಏಳು ಸಮುದ್ರ ಆಕಡೆಗೆ
ಮೇಟೌಷದ್ದ ತರಾಕ್ಹೋತಿದ್ವಿ
ಗೇಟು ಕಾಯುವನು
ನಿಂದು ಭಾಳಾ ಹೇಳಿಬಿಟ್ರು
ಗಣಸುರು ಮೀಸೆ ಎಡಗೈ ಕಟ್ಟಿಯಂತೆ
ಸೀರೆ ಉಚ್ಚಿ ಕೆಳ್ಗ ಬಿದ್ದಂಗ ಮಡಿದ
ಗಣಮಗನ್ನ ಲಗ್ನಮಾಡಿಕ್ಯಂತಿನಿ ಅಂದೀಯಂತೆ
ಅದ್ಕೆ ಸೀರೆ ವುಚ್ಚಿ ಕೆಳಾಗ ಬೀಳಂಗ
ಮಾಡಾಕ ಬಂದೀವಂದ್ರು
ಸರೆ ನನ್ನ ಸೀರೆ ಉಚ್ಚಿ ಕೆಳಾಗ ಬೀಳ್ಬೇಕು

ನಿಮ್ಮನ್ನ ಹಗೇವಿಲಿದ್ದ ಗಡ್ಡಿಗಿ ಬಿಡಬೇಕೂ
ಅಷ್ಟ ತನ್ಕ ನಾನೀಮ್ನ ಬಿಡೋದಿಲ್ಲ || ತಂದಾನ ||

ಅಷ್ಹೋತ್ತನಕ ನಿಮ್ಮುನ್ನ ಬಿಡೋದಿಲ್ಲ
ಈಗ ಮುದ್ದಿ ಹಾಕ್ತಿನಿ ರೊಟ್ಟಿಹಾಕತ್ತಿನಿ ತಿನ್ರಿ
ಹಗೇದಾಗೆ ಮಲಗೋದು
ಹಗೇದಾಗೆ ಹೆತಗಂಬಾದು
ಆಂತ ಅಗೇವು ಮುಚ್ಚಿದ್ಳು ಬೀಗ್ಹಾಕಿದ್ಳು
ಗರ್ ಗರ್ ಗರ್ ಪತ್ರ ಬರದ್ಳು
ಚಾಂಪುರ್ ಪಟ್ಣದಾಗಿರೋ
ಕಾಂಭೋಜರಾಜ ಹಾಲು ಗೊಲ್ರವನೇ
ನಿನ್ನ ಕುಲಮರ್ಯಾದೆ ಕಳಿಯೋ ಮಕ್ಕಳೂ
ಆರುಮಂದಿ ಛತ್ರಗುಪ್ತರು ಬಂದು
ನನ್ನ ಸೀರೆ ವುಚ್ಚಿ ಕೆಳಾಗ ಬೀಳಂಗ
ಮಾಡಾಕ ಬಂದಾರಂತೆ
ಸೀರೆ ವುಚ್ಚಿ ಕೆಳಾಗ ಬೀಳಲಿಲ್ಲ
ನಿನ್ನ ಮಕ್ಕಳು ಹಗೇದಾಗ್ಹಾಕಿ
ಬಂಡೇ ಮುಚ್ಚಿನಿ
ಈಗ ನಂತಲ್ಲಿ ಬಂದು
ನಾನು ಬೇಕಾದ ರೋಕ್ಕ ಕೊಡ್ತೀನಂದ್ರೆ
ನಾನು ತಗಂಬೋಳಲ್ಲ
ನನ್ಗೆ ಆರ್ಡರಿಲ್ಲ
ಗವರಮೆಂಟು ಇನ್ನ ಎಲ್ಲೆಲ್ಲಿದ್ದ
ಆರ್ಡರು ತಂದಿಲ್ಲ
ಗವರ್ಮಂಟಗ್ಹೋಗಿ ರೊಕ್ಕಾ ಕಟ್ಟಿ
ಅಲ್ಲಿದ್ದ ಪತ್ರ ತಂದು ನನ್ಗೆ ಪತ್ರ ತೋರಿಸಿದ್ರೆ
ನಿನ್ನ ಮಕ್ಕಳ್ನ ಹೊರಗ ಬಿಡ್ತಿನಿ

ಇಲ್ಲದಿದ್ರೆ ನಿನ್ನ ಮಕ್ಕಳ್ನ ಬೀಡೋದಿಲ್ಲ
ಆಯಿತಯ್ಯ ನಿನ್ನ ಮಕ್ಕಳು ಬರಾಂಗಿಲ್ಲಾ
ಸಾಯೋದಿನ್ನ ನಂತಲ್ಲೀ ನಿನ್ನ ಮಕ್ಕಳು || ತಂದಾನ ||

ಆಗ ನಯಾ ಪೈಸೆ ತಗೊಂಬೋದಿಲ್ಲಂತೆ
ಆ ಗವರ್ ಮೆಂಟಿಗಿಕಟ್ಟಿ
ಗವರಮೆಂಟಿಲಿದ್ದ ಆರ್ಡ್ರು ತಂದು
ಪತ್ರ ತಂದು ಕೊಟ್ರೆ ಪತ್ರ ನೋಡಿ ಬಿಡ್ತಾಳಂತೆ
ಬೊಕ್ಕಬಾರಲ ಬಿದ್ದೋನು ಮ್ಯಾಕೆದ್ದೆಳಂಗಿಲ್ಲ
ಬರೇ ಎಲುಬು ತೊಲುಗು
ಆಗ ಹ್ಯಾಂಗ ನಾನು ಎಳೋದು

ಎಲೆ ಎಂಥ ಮಕ್ಕುಳು ನನಗೆ ಹುಟ್ಟಿದರೆಲೇ
ಯಪ್ಪಾ ಕಂಡ ದೇವ್ರಿಗೆ ಬೇಡಿಕಂಡ್ಯನಲ್ಲೋ || ತಂದಾನ ||

ಮಕ್ಕಳು ಹಾಳಾಗ ಹೋಗ ಎಂಥ ಕೆಲಸ ಮಾಡಿದ್ಯ್ರೊ
ಎಂಥಾ ಮಕ್ಕಳು ಹುಟ್ಟೀರಪ್ಪಾ || ತಂದಾನ ||

ಮಕ್ಕಳಾ ಎಂಥಾ ಮಕ್ಕಳ್ಹುಟ್ಟಿದರಪ್ಪಾ
ಮನೆ ಹಾಳು ಮಾಡೋ ಮಕ್ಕಳು
ಕೇಳವೋ ಕುಲ ಮರ್ಯಾದಿ ಇಲ್ಲದಂಗ ಮಾಡ್ವವರು
ಕಂಡದೇವ್ರು ಬೇಡಿಕ್ಯಂಡೆ ನಿಮಕೋಸರ ಹಾಳಾಗ್ಹೋಗ
ನನಗೆ ಅವುಷದ್ದ ತರತಾರಂತ ಎಷ್ಟೋ ಆಸೆ ಬಿದ್ದಿದ್ದೆ
ಈಗ ರಕ್ಕಾಕಟ್ಟಿ ಬಿಡಿಸಿಗ್ಯಂಡನ್ನ ಬರಾಕ
ಇನ್ನ ಆಕೆ ತಗಾಂಬಂಗಿಲ್ಲ
ಗವರಮೆಂಟಿಗಿ ಕಟ್ಟಿ
ಅಲಿಂದ್ದ ಪತ್ರ ತಂದು ತೋರಿಸಿದ್ರೆ ಬಿಡ್ತಾಳಂತೆ
ಈಗ ತರೋವ್ರು ಯಾರು ಕಟ್ಟೋವ್ರು ಯಾರು
ಇನ್ನ ಎಲ್ಲಿ ಹುಣ್ಣು ಬೇಸಾಗ್ತದ ಅಂತ
ನಾನು ಸತ್ತೋತಿನಂತ ತಂದಿ ನೋಡು ದುಃಖ ಮಾಡ್ತಾನ
ಇನ್ನ ಅಲ್ಲಿ ಬಿದ್ದೋದ್ರಪ
ನಾಳೆ ತರತಾನಂದೋರು
ಪಾತ್ರಗಿತ್ತಿ ಕೈಗ ಸಿಕ್ಹಾಕಿಕೊಂಡ್ರು