ಆಗವಿನ್ನ ಶರಣಪ್ಪ ಯಮ್ಮೋ
ಗೊಲ್ರುಡ್ಹುಗ ಶರಬಂದ ತಾವೊಂದೇ ಬರುತಾನ
ಹೇs ಹನ್ನೆರಡೆ ಗಾವಾದ ಭೂಪತಿ ಪಟ್ಣಕ್ಕ ಬಂದಾಗ ಹುಡುಗ || ತಂದಾನ ||

ಹನ್ನೆರಡು ಗಾವುದ
ಭೂಪತಿ ಪಟ್ಣಕ್ಕ ಬಂದ
ಹೊತ್ತು ಮುಣಿಗಿ
ವಂದ್ವರೆ ಗಂಟಿಗಿ ಊರಿಗೆ ಬಂದ
ಆ ಊರಿವಳಗೆ
ಇನ್ನೇನು ಎಲ್ಲಾರು ಮುಚ್ಯಗಂಡು
ಆಗ್ಲೆ ಊಟ ಮಾಡಿಕ್ಯಂಡು ನಿದ್ದೆ ಮಾಡ್ಯಾರ
ಊರು ಮುಂದೆ ಅಗಸ್ಯಾಗ
ಮುವ್ವಾರು ಮುದುಕ್ರು ಕುಂತಿದ್ರು ಗಣಮಕ್ಕಳು
ತಾತಾ ನಿನ್ನ ಜೀವುಕ್ಕ ಶರಣು ಅಂದ
ನಾನು ಯ್ಯಾಳೆ ತಪ್ಪಿ ಬಂದೀನಿ
ಹೊತ್ತು ಮುಣುಗಿ ವಂದ್ವರೆ ಗಂಟಿಗಿ
ಊರಿಗೆ ಬಂದೀನಿ ನಿಮ್ಮೂರಿಗೆ
ಆಗ ತಾತಾ ಈವೂರು ಹೆಸರೇನು
ಭೂಪತಿ ಪಟ್ಣಪ್ಪಾ
ಆಗ ನಿಂದ್ಯಾವೂರು
ನಂದು ಚ್ಯಾಂಪುರು ಪಟ್ಣ
ನಮ ತಂದಿ ಕಾಂಭೋಜರಾಜಗ
ಹುಣ್ಣು ಹುಟೈತಿ
ತಂದೆ ಜೀವಕ ಹುಟ್ಟೀನಿ
ಮೇಟೌಷದ್ದ ತರಬೇಕಂತ
ಏಳು ಸಮುದ್ರ ಆಕಡೀಗ್ಹೋಗಬೇಕು ನಾನು
ಹೊತ್ತು ಮುಣಿಗಿ ಯ್ಯಾಳ್ಯತಪ್ಪಿ ಬಂದೀನಿ
ತಂದಿಲ್ಲ ತಾಯಿಲ್ಲ
ತುತ್ತನ್ನ ಕೊಟ್ಟು ಚೆರಿಗೆ ನೀರು ಕೊಡಂತವ್ರು
ಯಾರಿದ್ದಾರಪ್ಪಾ ನಿಮ್ಮೂರಾಗ
ಹೇಯ್ ತಮ್ಮಾ ಹೊಸಾರು ಹರೆದೋರು ಬಂದ್ರೆ
ಯಾರು ನೀರು ಕೊಡಾದಿಲ್ಲ
ಯಾರ ಮನ್ಯಾಕ ಕರಕಂಬಾದಿಲ್ಲ
ನಮ್ಮ ಭೂಪತಿ ಪಟ್ಣದಾಗ
ಮನಿಗಿನ್ನ ಎರಡು ಸೇರಕ್ಕಿ
ಮನಿಗೆ ಇನ್ನ ಎಂಟಾಣಿ ರೊಕ್ಕ ಪಟ್ಟಿ ಹಚ್ಚಿ
ಹುವ್ವಮಾರೋ ಜೀರಗೂರು ಸುಬ್ಬಮ್ಮಗ ಕೋಟ್ಟೀವಿ
ಮುದುಕಿ ಹುವ್ವ ಕಟ್ವೋಳಿಗೆ
ಆ ಮುದುಕಿ ಯಾರನ್ನ ಯ್ಯಾಳತಪ್ಪಿ ಬಂದ್ರೆ
ಚೆರಗೆ ನೀರು ಕೋಡೋದು
ಆಗಿನ್ನ ಕೌದ್ಯೋ ಪೌದ್ಯೋ
ಜಮಖಾನ ಕೊಡ್ತಾಳ
ಅವಳ ಮನ್ಯಾಗ ಊಟ ಮಾಡೋದು
ನಿದ್ದಿ ಮಾಡಿ ಹೋಗೋದು
ಬೇರೆ ಊರೋರು ಬಂದ್ರೆ
ನಮ್ಮೂರು ಯಾರನ ನಂಬಂಗಿಲ್ಲಂದ
ಸರೆ ಆ ಮುದುಕಿ ಮನಿಗ್ಹೋಗಪ್ಪಾ
ಉಂಬಾಕಿಡ್ತಾರ ಆ ಮುದ್ಯಾಕಿ ಮನ್ಯಾಗ
ನಿದ್ದಿ ಮಾಡಿ ಹೋಗುವಂತಿ ಅಂದ್ರು
ಆ ಮುದುಕಿ ಏನು ಅರಪಾವು ಅಕ್ಕಿ ಮಾಡಕ್ಯಂಡಾಳ
ಚಟಾಕ್ ಬ್ಯಾಳೆ ಮಾಡಿಕ್ಯಂಡು ಬಾಯಗಿಟ್ಟಗಂಡು
ಗಡಿಬೆತೊಳ್ದು ಕೌದಿ ಹೊದ್ದಕೊಂಡಾಳ
ಕೌದಿ ಹಾಸಕೊಂಡಾಳ
ಕಡ್ಡಿಪುಡಿ ಬಾಯಾಗ ಉಗ್ಗತಾಳ
ಬಂಕದಾಗ ಕುಂತಗಂಡು
ಹುಡುಗ ಬಂದ
ಶರಣವ್ವಾ ಜೀರಗೂರು ಸುಬ್ಬವ್ವ
ಏನಪಾ ನೀನು ಯಾರು ಅಂದ್ಳು
ಯವ್ವಾ ನಂದು ಚಾಂಪುರಪಟ್ಣ
ಹಾಲುಗೊಲ್ರು
ನನ್ಹೆಸುರು ಶರಬಂದರಾಜ
ನಮ್ಮತಂದಿ ಕಾಂಭೋಜರಾಜಗ
ಹುಣ್ಣು ಹುಟೈತಿ
ಮೇಟೌಷದ್ದಕೆ ಬಂದೀನಿ
ಯ್ಯಾಳ್ಯಾ ತಪ್ಪಿ ನಿಮ್ಮೂರಿಗೆ ಬಂದ್ರೆ
ಯಜಮಾನ್ರೆಲ್ಲಾ ಏನಂದ್ರು
ಆ ಮುದುಕೀತಲ್ಲಿಗ್ಹೋಗು
ನಿನ್ಗೆ ಊಟ ಕೊಡ್ತಾರಪಾಂತ ಹೇಳ್ಯಾರ
ಎಲ್ಲ ಪಟ್ಟಿಮಾಡಿ ಕೊಟ್ಟಾರಂತ
ಯಾವುನು ಪಟ್ಟಿಮಾಡಿ ಕೊಟ್ಟಾನಪ್ಪಾ ನನ್ಗೆ
ಯಾರು ಪಟ್ಟಿ ಮಾಡಿಕೊಟ್ಟಿಲ್ಲಪ್ಪಾ ನನ್ಗೆ
ಯವ್ವಾ ಹೊಟ್ಟಿಹಸಿಗ್ಯಂಡು ಬಂದೀನಿ
ನೀನೇ ಅವ್ವ
ನಾನು ಮೊಮ್ಮಗ
ಜೀವಕ್ಕೆ ಚರಿಗೆ ನೀರು ಕೊಟ್ಟು
ಈಟು ಅನ್ನ ನೀಡವ್ವಾ ಅಂದ
ಅಯ್ಯೋ ತಮ್ಮಾ ನಾನು ಅರಪಾವು ಬ್ಯಾಳೆ
ಅರಪಾವು ಅಕ್ಕಿ ಮಾಡಿಕ್ಯಂಡಿದ್ನೆಪ್ಪಾ
ಆಗನಾ ಬಂದ್ಯಾ
ನಾನು ಮಾಡಿಕಂಡಾಗ ತುತ್ತು ನೀಡತಿದ್ದೆ
ಇವಾಗೆಲ್ಲ ಗಡಿಗಿ ಪಡಿಗಿ ತೊಳಿದಿನಿ
ಈಗ ನಾನು ಮಕ್ಕಂಬೋ ಟೈಮಿನ್ಯಾಗ ಬಂದ್ರೆ
ಈ ಕತ್ಲಾಗ ಎಲ್ಲಿ ಮಾಡಿ ಇಕ್ಲಪ್ಪಾ ಅಂತ ಕೇಳಿದ್ಳು
ಯವ್ವಾ ನೀನು ಪುಸ್ಗ್ಯಾಟಿಗೆ ಮಾಡುಬ್ಯಾಡವ್ವಾ
ನಿನ ಕೈ ಮುಗಿತೀನಿ
ನಾನು ತಿಳಿದಿದ್ದು ಕೊಡ್ತೀನಿ ಮಾಡು ಅವ್ವ ಅಂದ
ಏ ಯ್ಯಪ್ಪಾ ದೇವರಾಣಿ ತಮ್ಮ
ಮನ್ಯಾಗ ಚ್ಯಾರಕ್ಕಿಲ್ಲಪ್ಪ
ಇಲ್ಸಿ ತಿಂಬಾಕ ಯೇಳ ಕಾಳಿಲ್ಲಪ್ಪ ಅಂದ್ಳು
ಕೆರಸೆ ತುಂಬ ಇದಾವಕ್ಕಿ
ವದ್ದಾಡಿ ಯಾವನು ಮಾಡ್ಬೇಕು
ಅಂತ ಕತ್ಲಾದ್ಮೇಲೆ
ಯವ್ವಾ ನಿನ್ಗ ಕಾಲು ಮುಗಿತೀನವ್ವ
ಈಗ ಐದ್ ರೂಪಾಯಿ ಕೊಡ್ತೀನಿ ಮಾಡವ್ವಾ ಅಂದ
ತಮ್ಮಾ ಎಲ್ಲ ಅಂಗಡಿ ಮುಚ್ಚಿಗ್ಯಂಡರಪಾ
ಇವಾಗ ಅಂಗಡಿ ಯಾರು ತೆರಿತಾರಪಾ ಅಂದ್ಳು
ಯಾವ್ವಾ ಯಂಗನ್ನ ಹೋಗಿ ತಗೋಣಬಾವ್ವ
ಐದ್ ರುಪಾಯಿ ತಗೊವ್ವ
ಒಂದ ಊಟಕ್ಕೆ ಅಂದ
ಒಂದ್ಸರ್ತಿ ಊಟ ಮಾಡಿದ್ರೆ
ಈಟು ಉಂಡಾನು
ಒಂದು ಪಾವಕ್ಯಾದ್ರೆ ಆಗ್ಯೋತು ಆವ್ನಿಗೆ
ಐದ್‌ರೂಪಾಯಿ ಉಳಕಂತಾವೆ ನನ್ಗೆ
ಐದ್‌ದಿವ್ಸ ಎಲೆಡಿಕೆ ಯೆಂಗನ್ನ ಕಾಲಕಳಿಲಿ

ತಾರನ್ನ ತಾರಪ್ಪ ನಾನು ವದ್ದ್ಯಾಡಿ ಮಾಡ್ತೀನಿ || ತಂದಾನ ||

ಆ ಮುದುಕಿ ಎಷ್ಟು ಆಸೆ ಬಿಟ್ಟಾಳ್ ನೋಡು
ಹುವ್ವ ಕಟ್ಟಾ ಮುದುಕಿ
ತಾರನ್ನ ತಾರಪ್ಪ ವದ್ದ್ಯಾಡಿ ಮಾಡ್ತೀನಂದ್ಳು
ಐದು ರೂಪಾಯಿ ಕೊಟ್ಟುನು
ಬಚ್ಚಿ ಚೀಲ್ದಾಗ ಎಲೆಡಿಕೆ ಚೀಲ್ದಾಗ ಇಟ್ಟಗೊಂಡ್ಳು
ಅಲ್ಲಿಗ್ಯನ್ನ ಹೋಗ್ಯನ್ನ ಬಂದಿದ್ರೆ ಬೇಸಿತ್ತು
ಮನ್ಯಾಗ ಚ್ಯಾರಕ್ಕಿ ಇಲ್ಲಂದ್ಳು
ಇಲ್ಸಿ ತಿಂಬಾಕ ಏಳು ಕಾಳಿಲ್ಲಂದ್ಳು
ಎಲ್ಲಿಂದ ತರತಾಳ ನೋಡಬೇಕು ಈ ಮುದುಕೀನ
ಕ್ರಿಷ್ಣಗೊಲ್ರಪ್ಪ ತಂಟೆಗೊಲ್ರು
ಆಗ ಮನ್ಯಾಗ ತುಂಬಾ ಇದಾವ ಅಕ್ಕಿಬ್ಯಾಳೆ
ಆಂತ ಕೆರಸ್ಯಾಗಿ ಸೇರಿಟ್ಟು
ಅರ್ಧ ಸೇರು ತುಂಬಿಕ್ಯಂಡ್ಳು
ಮರದಾಗ ಹಾಕ್ಯಂಡು ಪಟಪಟ ಕೇರಿದ್ಳು
ಆಗಿನ್ನವರತ ಗುಂಡಾಳ್ಯಾಗ್ಹಾಕಿ ತೊಳದ್ಲು
ಅರಪಾವು ಬ್ಯಾಳ್ಯಾಕಿದ್ಳು
ಆಗ ಗಡಿಗ್ಯಾಗ
ಆಗ ಎರಡ ಗಡಿಗೆ ಏರಿಸಿ ಬಿಟ್ಳು
ಏನು ಅಡಿಕೆ ಕಡೇ ಟೇಮಿನ್ಯಾಗ
ಅಡಿಗೆ ಮಾಡಿ ಬಿಟ್ಳು
ತೊಗೆ ತಿಕ್ಕಿದ್ಳು
ಆ ಊರೆಲ್ಲ ತಿರಿಗಿದ್ರೆ
ಬರೇ ಉಪ್ಪುನೀರೇ
ಆಗ ಇನ್ನ ಬೇರೆವೂರು ಹೆಣುಮಕ್ಕಳ್ನ
ಮಾಡಿಕ್ಯಂಡ ಬಂದೋರು
ಅರ್ಧಮಂದಿ ಹೊಟ್ಟೆ ಬ್ಯಾನೆದ್ದು
ಒದ್ದ್ಯಾಡಿ ಸತ್ತೋದ್ರು
ಅರದ ಮಂದಿ ತಾಳಿಕಟ್ಟಿದ ಗಂಡ್ರು ಬಿಡುವಲ್ರು
ಹಂಗೇ ವದ್ಯಾಡಿಕ್ಯಾಂತ ಇದಾರ
ಆ ಊರಾಗ
ಹತ್ತು ಬಾಯಿ ತೋಡಿಸಿದರ
ಬರೇ ಉಪ್ಪುನೀರೇ ಸಪ್ಪ ನೀರೇ
ಆಗ ಏನ್ ಮಾಡಿಬಿಟ್ರು
ಈಗಿನ್ನ ಮುದುಕಿ ಹೇಳ್ಯನ್ನಾ ಕೊಟ್ಟಿಲ್ಲ
ನೀರ ಹಾಳಾಗ್ಹೋಗ
ಸೀನೀರಾಗ್ಹುಟ್ಟ್ಯಾನ
ಸೀನಿರಾಗ ಬೆಳೆದಾನ
ಯಪ್ಪ ನಮ್ಮೂರಾಗ ಉಪ್ಪುನೀರೇ ನೋಡು ತಮ್ಮ
ಸಪ್ಪ ನೀರೇ ಕುಡಿಯೋದು ಅಂದಿದ್ರೆ ಬೇಸಿತ್ತು
ಎಂಟು ರೂಪಾಯಿ ಚೆರಿಗಿ ಹಿತ್ತಾಳಿ ಚೆರಗಿ
ಬಂಗಾರ ಕಂಡ್ಹಂಗ ಕಾಣತೈತಪಾ
ಥಳಥಳ ಥಳ ಮಣಿಸೇನು ನಳ್ಳು ಕಾಣತೈತೆ ಆ ಸೇರಿಗ್ಯಾಗ
ಅದೇ ಗಂಡನ ಆಸ್ತಿ ಅತ್ತೆ ಮಾವುಂದು
ಉಪ್ಪುನೀರು ತುಂಬಿಕ್ಯಂಡು ಚೆರಿಗೆ ತುಂಬ
ಸಪ್ಪನೀರು ಕುಡಿತನ
ಉಪ್ಪುನೀರು ಕಾಲು ಮಕ ತೊಳಕಂತಾನ
ಬಾಯಾಗ ನೀರು ಹಾಕ್ಯಂಡ್ರೆ
ಹೊಟ್ಟ್ಯಾಗ ಕಳ್ಳ ಸೇದಿಕ್ಯಂಡ್ಹೋತಾವ
ನ್ಯಾಲಿಗಿ ಹಾಂಗೆ ಏಳಕಂಡು ಬರತದ
ಉಪ್ಪುನೀರು ತಗೋ ತಮ್ಮ ಮೊಮ್ಮಗನೇ
ಅಂತ ನೀರು ಕೊಟ್ಳು
ಬಲಗೈಲಿ ತಗಂಡ
ಎಡಗೈಲಿ ಚೆರಗಿ ಹಿಡಕಂಡ
ಬಲಗೈಯಾಗ ಹಾಕ್ಯಂಡ
ಬಾಯಾಗ ಹಾಕ್ಯಂಡ
ಏನ್ ನ್ಯಾಲಿಗೆ ಕಿತೈತೆ
ಹೇಯ್ ಮುದುಕಿ
ಮನ್ಯಾಗ ಚ್ಯಾರಯಕ್ಕಿ ಇಲ್ಲ
ಅಂಗಡಿಗ್ಹೋಗಿ ತರಬೇಕಂದಿ
ಆಗ ಐದು ರೂಪಾಯಿ ಕೊಟ್ಟೆ
ಎಲ್ಲನ್ನ ವದ್ದ್ಯಾಡಿ ಮಾಡೆವ್ವ ಅಂತ
ತಾರಪ್ಪ ಅಂದಿ
ಐದು ರೂಪಾಯಿ ತಗಂಡು
ಉಪ್ಪು ನೀರು ಕೊಡ್ತಿಯ
ನ್ಯಾಲಿಗೆ ಕಿತ್ತಗೆಂತವು
ಛ್ಯಾ ಐದು ರೂಪಾಯಿ ಹೋದ್ರು ಚಿಂತಿಲ್ಲ
ಇದು ಎಂಟು ರೂಪಾಯಿ ಚೆರಿಗೆ
ಈ ಚೆರಿಗಿ ನಿನ ಕೈಗಿ ಕೊಡ್ತಿನಂತ

ಕೈಯಾಗಿದ್ದ ಚೆರಿಗೆ ನೋಡಿಮ್ಮಾ
ಹೇಯ್ ಎದುರ ಗ್ವಾಡಿಗೆ ಬಂಡಿಗ ಬಡುದನಮ್ಮ || ತಂದಾನ ||

ಕಡ್ಡಿಪುಡಿ ಆದಂಗಾಯ್ತದು
ಏ ಯಪ್ಪ ಎಂಟು ರೂಪಾಯಿ ಚ್ಯೆರಿಗೆ
ಹಾಳು ಮಾಡಿದ್ಯಲ್ಲೋ
ನಿನೈದು ರೂಪಾಯಿ ಹಾಳಾಗ್ಹೋಗಾ
ಎತ್ತಾಗ ಶನಿಮಾತ್ಮ ಬಂದಂಗ ಬಂದ್ಯೋ

ಮೂರು ನಾಮದವನಾಲೋ ನೀನು ನಾಮಿಟ್ಟು ಹೋತೀರಿ ನನ್ಗೆ || ತಂದಾನ ||

ಯಪ್ಪಾ ಮಾಯಗೊಲ್ರು ನೀವು
ನನ್ ಮಾಯಮಾಡಿ ಹೋಗಾಕ
ಬಂದ್ಯಲೋ ನೀನು
ನನಮನಿಗಿ ಎಂತೋನು ಬಂದ್ಯೆಲೋ ನೀನು
ಇನ್ನೇನ ಮತ್ತೆ ಐದು ರುಪಾಯಿ ತಗಂಡು
ನನ್ಗೆ ಉಪ್ಪುನೀರು ಕೊಡ್ತೀಯ
ತಮ್ಮಾ ನಿನ್ನ ಪಾದಾಜ್ಞೆ ಭೂಮಾಜ್ಞೆ
ನಮ್ಮೂರ ಎಂಟು ಬಾವಿ ತೋಡಿಸ್ರೆ
ಬರೇ ಉಪ್ನೀರು ಸಪ್ನೀರಪ್ಪ
ಬೇರೆ ಊರ ಹೆಣ್ಮಕ್ಳು ಹಂಗೆ ವದ್ದ್ಯಾಡಿ
ಅರ್ಧ ಸತ್ತು ಅರ್ಧ ಹಂಗೆ ಇದಾವಪ್ಪ
ಯವ್ವಾ ನಾಮ ಸೀನೀರಾಗ್ಹುಟ್ಟಿನಿ
ಸೀನೀರಾಗ ಬೆಳೆದಿನಿ
ಎರಡ ಹರದ್ದಾರಿ ಆಗ್ಲಿ ಮೂರ ಹರದಾರಿ ಆಗಲಿ
ಸೀನೀರ ಇದ್ದತಲ್ಲಿ ಹೆಳು
ನಾನು ತಗೊಂಡು ಬರತಿನಿ ಅಂದ
ಅಯ್ಯೋಪಾಪ
ಯಾರಿಗೇನು ಕಾಲ ಬರುತೈತೋ
ನೀರಡಿಕೆ ಆತೈತಂತ
ಅವ್ನು ತಂದಕಂತನ ಅಂತೆ
ನಾನೇನು ತರೋದು ಇಲ್ಲ
ತಮ್ಮಾ ಇಲ್ಲಿಗೆ ಮೂರ ಹರದಾರಿ
ಎಲೆ ವನಂತ್ರ ಕದ್ರಿಕೆ ಕಜ್ಜೂರ
ದ್ರಾಕ್ಷಿ ಗಿಡಗಳು ಬಾಳೆ ಗಿಡಗಳು
ಹತ್ತ ಎಕ್ರೆ ತೋಟ ಹಚ್ಚ್ಯಾನ
ಯಾರೂ ಭೂಪತಿರಾಜ
ಹಚ್ಚಿದ್ರೆ ಅದ್ರಾಗ ಮೂರ ವರ್ಷ ಆಗೈತೆ
ಹುಲಿ ಬಂದು ಸೇರಿಕ್ಯಂಡೈತೆ ತ್ವಾಟದಾಗ
ಟೆಂಗಿನ ಹಾಲಿದ್ದಂಗ ಐದಾವ ನೀರು
ಇಳೆಬಾಯಿ ಪಾಂಟ್ಗಿ ಬಾಯಿ
ಕಪ್ಲಿಬಾಯಿ
ಆಗ ತ್ವಾಟಕ್ಹೋದವ್ರು
ನೀರಿಗ್ಹೋದವ್ರು ಎಲ್ಲ ಬಾಯಾಗಿಟ್ಕಂತಿದ್ರು
ಈ ಹುಲಿ ಕಡುದೊರಗೆ
ಮಗಳ್ನ ಕೊಟ್ಟು ಮದ್ವೆ ಮಾಡ್ತಿನಂದ
ಮೈಸೂರು ಮುಂಬೈ
ಹುಬ್ಬಳ್ಳಿ ಧಾರವಾಡವ್ರು ಬಂದ್ರು
ಯಾರ ಕೈಲಾಗಲಿಲ್ಲ
ಯಪ್ಪ ನಿನ್ನ ಮಗ್ಳು ಬ್ಯಾಡ
ಹುಲಿ ಕೊಲ್ಲೋದು ಬ್ಯಾಡ
ಅಂತ ಹೋಗಿಬಿಟ್ರು
ತಮ್ಮಾ ಅಲ್ಲಿ ಸೀನೀರಪ್ಪಾ
ಸಕ್ರಿ ಇದ್ದಂಗ ಐದಾವ ನೋಡಪ್ಪಾ ನೀರು
ಯಮ್ಮಾ ಊರಿಗೆ ಹೊಸಬ ಬಂದೀನಿ
ಯಾ ದಾರಿಲಿ ಇಲ್ಲೋ
ನೀನು ನೋಡಿಯಲ್ಲ
ಯವ್ವ ಕೊಡ ನಾನ ತೊಗೊಂತಿನಿ
ಆಗ ಮನ್ಗಿ ಬೀಗ ಹಾಕು

ನಡ್ಯವ ಹೋಗಾನ ದಾರಿ ತೋರಿಸು ನನಗವೊ || ತಂದಾನ ||

ಏ ಯಮ್ಮಾ ಹಾಳು ಮಾಡುವ್ನು
ಬಂದು ಬಿಟ್ಟಮ್ಮ ನನ್ನ
ಐದು ರೂಪಾಯ್ಗಿ
ನನ್ನ ಜೀವ ಕಳಿತಾನ ಇವ್ನ ಬಿಡೋದಿಲ್ಲ
ಇವ್ನು ಗೊಲ್ರವ್ನಪ್ಪ
ತಂಟಿ ಗೊಲ್ಲ
ನಾನು ಬರಬೇಕಂತ ಇವ್ನ ಹಿಂದೆ
ರಾತ್ರಿ ಹೋಗಬೇಕಂತೆ
ರಾತ್ರಿ ಕತ್ತಲಾಗ
ಯಪ್ಪಾ ತಮ್ಮಾ ಎಡಗೈ ದಾರಿ ಬಿಟ್ಟು
ಬಲಗೈ ದಾರಿ ಹಿಡಕಂಡು ಹೋಗಲೋ
ಅಲ್ಲಿಗೆ ತ್ವಾಟಕ್ಕೆ ಕರಕಂಡ್ಹೋಗ್ತೈತೆ
ಬಾವಿಗೆ ಅಂದ್ಳು
ಯವ್ವಾ ನಾನು ನೋಡಿಲ್ಲಾ
ಆಗ ಇಬ್ರು ಹೋಗೋಣ
ಬಾ ಅವ್ವಾ ಅಂದಾ
ಏ ಯಪ್ಪ ಹುಲಿ ಐತಲೋ
ನಾನು ಬರದಿಲ್ಲಪ್ಪಾ
ಈಗ ಸುಖ ಇದ್ದ ಜೀವ
ಹುಲಿ ಬಾಯಾಗ ಬೀಳಂತ
ಯಾವ್ನು ಹೇಳ್ಯಾನ
ಏನ ಬ್ಯಾನ್ಯಾ ಜಡ್ಡ
ನಾನ ಬರೊದಿಲ್ಲ ತಮ್ಮ
ನಾನ ಹುಲಿ ಬಾಯಾಗ ಬಿಳ್ತಿನಪ್ಪೋ
ಐದು ರೂಪಾಯಿ ಪಾಪಾಸು ತಗೋ
ನಾನು ಬರೋದಿಲ್ಲ ಅಂದ್ಳು
ಕೊಟ್ಟಿದ ರೊಕ್ಕ ತಗೊಂಬೋದಿಲ್ಲ ನಾನು
ಕೇಳವ್ವಾ ನೀನು ಬರಾದಿಲ್ಲ
ಹುಲಿ ಐತಿ ಅಂತಿ
ಅದು ಹುಲ್ಯಲ್ಲ
ಊರಿನ ಬೆಕ್ಕು ಅದೇನು ಮಾಡ್ತೈತೆ
ಏನನ್ನ ಬಡಿದ್ರೆ ನನ್ನ ಮ್ಯಾಕ ಬರತೈತೆ
ಸುಮ್ನಿದ್ರೆ ಏನ ಮಾಡತೈತೆ ಅದು
ಅಯ್ಯೋ ಹೋಗಪ್ಪೋ
ಹತ್ತು ಮಂದೀನ ತಿಂದು ಬಿಡ್ತ ಅದು
ಹಾಳಾಗಿ ಹೋಗು ಅಂದ್ಳು
ನೋಡವ್ವಾ ನೀನನ್ನ ಮಕ್ಳ ಮೊಮ್ಮಕ್ಕಳನ್ನ ಕಂಡೀಯಿ
ಇವತಿಲ್ಲ ನಾಳ ಸುಡುಗಾಡಿಗಿ ಹೋಗ್ತಿ
ನಾನು ಮದುವಿ ಇಲ್ಲ ಏನಿಲ್ಲ
ಹರೇದವ್ನು ಮತ್ತ ನನ್ನ ತಿಂತೈತಿ
ನಿನ್ನೆನು ತಿಂತೈತಿ ಬರೆ ತೊಗಲು ಎಲ್ಬು
ನನ್ಗೆ ಆಶೆಯಿಲ್ಲ ಜೀವದ್ದು
ನಿನಗೇಷ್ಟು ಆಶೆ ಐತಿ ಅವ್ವ ಅಂತ ಕೇಳ್ದ
ಏಯಪ್ಪ ಆಶೆ ಅಂತಿ ಅಲೋ
ಬ್ಯಾನಿ ಗೀನಿ ಬಂದು
ಸತ್ಹೋದ್ರೆ ಒಂದು ರೀತಿಯಪ್ಪ
ಅರೆ ಹೋಗ್ಹೋಗಿ
ಹುಲಿ ಬಾಯಾಗ ಬೀಳಂತ
ಮಾವ್ನ ಹೇಳ್ಯಾನಲ್ಲೋ ಅಂದ್ಳು
ಇಲ್ಲವ್ವಾ ನಿನ್ನನೇನು ತಿಂಬೋದಿಲ್ಲ
ನನ್ನೇ ತಿಂಬೋದು
ನೀನೇನು ಮಮ್ಮಕ್ಳ ಕಂಡಿದಿ
ಯವ್ವ ನಾನೇ ಮುಂದೆ ಹೋಗ್ತಿನಿ
ನೀನು ಹಿಂದೆ ಬಾ ಅವ್ವಾ
ಹಂಗಾರೆ ಬರತಿನೋಡಪ್ಪ
ಖರೆವೆ ಇವ್ನಿಗಿ ಮದ್ವಿಯಿಲ್ಲ ಏನಿಲ್ಲ
ನಾನು ಎಲ್ಲ ಕಂಡಿನಿ
ಇವತಿಲ್ಲದ್ರ ನಾಳೆ ಹೋಗೋಳೆ
ಆಗ ಇವ್ನಿಗಿಲ್ಲದ ಆಶಿ ನನಗ್ಯಾಕ

ನಡ್ಯಣ್ಣ ನಡೆಲ್ಲೋ ಬರನ್ನ ಬರುತೀನಿ || ತಂದಾನ ||

ರಾಗಿ ಕೊಡಪಾನ ಕೊಟ್ಳು ಹುಡುಗನ ಕೈಗೆ
ಮೂರು ದಡೇವು ಚಂದ್ರಾಯುಧ ತಗಂಡ
ಯವ್ವಾ ಕೈ ಚೀಲ ಮನ್ಯಾಗ ಇಡು ಅಂದ
ಮನ್ಯಾಗಿಟ್ಳು ಬೀಗ ಹಾಕಿದ್ಳು
ಆಗ ಇನ್ನ ಮಗ ಮುಂದೆ ಬರತಾನ
ಮುದ್ಯಾಕಿ ಹಿಂದೆ ಬರತಾಳ
ಬಡಿಮೆಟ್ಟಿ ಓಣಿಕಳ್ಳಿ ಓಣಿಗೆ ಬಂದ್ಳು
ಆ ಕಳ್ಳಿ ಮ್ಯಾಲಿರತವಲ್ಲ ಗಿಡಗಳ ಮ್ಯಾಲೆ
ಊರು ಗುಬ್ಬಿ
ಪೀಸ್ ಪೀಸ್ ಪೀಸ್ ಅಂತಾವ
ಪೀಸ್‌ಪೀಸ್ ಅಂದಾಗ
ಎದೆ ಡಂ ಡಂ ಅಂತದ ಮುದುಕಿದು
ಮುಂದಕ್ಕ ನೋಡಿದ್ರೆ
ಕರ್ರಗ ಐತೆ
ಹಿಂದಕ ನೋಡಿದ್ರೆ ಬೆಳ್ ಬೆಳ್ಳಗ್ ಐತೆ
ತಮ್ಮಾ ಗೊಲ್ರಿಗಿದ್ದ ಯುಕ್ತಿ
ಯಾರ್ರಿಗಿಲ್ಲ ನೋಡಲೋ
ಇಲ್ಲ ನಾ ಮುಂದೆ ಹೋತಿನಿ
ನೀನ ಹಿಂದೆ ಬಾ ಮುದ್ಕಿ
ಹಿಂದೇಲೆ ಬಂದು
ನಾತ ಹಿಡಕಂಡು ಬಂದು
ಲಟಕನ ಹಾಕ್ಯಂಡು ಹೋತೈತೆ
ನಾನು ಬೇಷ್ ಇರಬೇಕಂತ ಮಾಡಿಯಲ್ಲ
ತಮ್ಮ ಹಿಂದ ಹುಟ್ಟಿದವ್ನಿಗೆ ಇಷ್ಟದ್ರೆ
ನಾವು ಮುಂದ್ಹುಟ್ಟಿದವ್ರಿಗೆ
ಏಷ್ಟಿರಬೇಕಲೋ ಯಜಮಾನ್ರಿಗ
ಮತ್ತೇನವ್ವ
ನಾನೇ ಮುಂದೇ ಹೋತಿನಿ ಅಪ್ಪೋ
ನಾನೇ ಹಿಂದೆ ಬಾ
ಸರಿಬಿಡವ್ವಾ
ಅಂತ ಮುದ್ಕಿ ಹಿಂದ್ಕ ಬಂದ್ಳು
ಆಗ ಮುದ್ಕಿ ಮುಂದ ಹೋತಿದ್ಳು
ಮೂರು ಗೇಣು ನೆಡೆದ್ಳು ನಿಂತಕಂಡ್ಳು
ಏನವ್ವ ನಡೆವ್ವ
ಏ ಒಳ್ಳೆ ಉಪಾಯ ನೋಡಲ್ಲೋ
ಗೊಲ್ರಿಗಿದ್ದ ಯುಕ್ತಿ ಯಾವ್ನಿಗಿಲ್ಲ
ಏನವ್ವಾ
ನೀನು ಮುಂದೆ ನಡೆಂವ್ವ
ದಾರಯಾಗೆ ಕುಂತಿರತೈತಿ
ಲಟಕ್‌ನ ಹೊತ್ಕಂಡ ಹೊತೈತಿ
ನೀನು ಹಿಂದ್ಕ ಓಡಿ ಹೋಗಬೇಕಂದ ಮಾಡಿಯಲ್ಲಾ
ಏಷ್ಟು ಪಲಾವ ಕಲ್ತಿಯಲೇ ನೀನು ಹುಡ್ಗ
ಚಿಕ್ಕ ವಯಸದಾಗ ಅಂದ್ಳು
ನಿನಗೆ ರೋಗ ಬರಲಿ
ಮುಂದೆನ ಹೋಗು ಹಿಂದೆನ್ನಾ ಬಾ
ನೋಡು ತಮ್ಮ
ನಾನು ಮೂಂದೆ ಹೋಗೋದಿಲ್ಲ
ಹಿಂದೆ ಬರೋದಿಲ್ಲ
ಹಿಂದೆ ಬಂದ್ರೆ
ನಾತ ಹಿಡ್ಕಂಡು ಬಂದು
ಹಾಕ್ಯಂಡು ಹೋತೈತಿ
ಮುಂದೆ ಹೋದ್ರೆ
ದಾರಯಾಗೆ ಕುಂತಿರತದೆ
ಬಾಯಿ ತೆರಕಂಡು ಹಂಗೆ
ಕತ್ತಲಾಗ ಹೊತ್ನೆ
ಹಾಂಗೆ ಬಯಾಕ ಹೋತಿನಿ
ಮುಂದೆ ಹೋಗೋದಿಲ್ಲ
ಮತ್ತೆ ಹ್ಯಾಂಗವ್ವ
ನಾನು ಸುತ್ತ ಹೊಡಿಕ್ಯಂತ ನಡಿತಿನಿ
ಎಡಕ್ಕ ಹೊಳ್ಳುವಾಗ ಬಲಕ್ಕ ನಡಿ
ಬಲಕ್ಕ ಹೊಳ್ಳುವಾಗ ಎಡಕ್ಕ ನಡಿ

ಹಂಗಾರೆ ನಾನು ಬಾಯಿ ತೋರಿಸ್ತಿನಲೇ
ಇಲ್ಲದಿದ್ರೆ ನಾನು ತೋರಸೋದಿಲ್ಲ ಹುಡುಗ || ತಂದಾನ ||