ನಾನು ನೋಡಿಲ್ಲ ಮಾಡಿಲ್ಲ
ಯವ್ವಾ ನೀನು ಭಾಳಾ ಮುದುಕಿ ಸಿಕ್ಕಿ ಬಿಟ್ಟೆ
ಗುಬ್ಬಿ ಚೀಕ್ ಅಂದ್ರೆ
ಹೇತ್ಕಂಡ ಸಾಯಾ ಮುದುಕಿ

ನೆಡೆವ್ವ ಹೋಗನ್ನ ಹೋಗಾನ
ಸುತ್ತರಿಕ್ಯಾಂತ ಮುದುಕಿ ನಡಿತಾಳಮ್ಮ
ಎಡಕ ಹೋಳ್ಳವಾಗ ಬಲಕ್ಕ ನಡೀತಾನಮ್ಮ
ದಾರಿ ಕೂಟ ಹುಡುಗ || ತಂದಾನ ||

ಎಲ್ಲೈತವ್ವಾ
ಅಪ್ಪಾ ಮೆಲ್ಲಕ್ಕ ಮಾತಾಡಪ್ಪೋ
ಬಿಗಿ ಮಾತಾಡಬೇಡ

ಶಬ್ದ ಕೇಳ್ತದ ಧ್ವನಿ ಕೇಳ್ತದಲೇ
ತ್ವಾಟದಾಗಲೇ ಇನ್ನು ಹೊಯಿತೀಯಲ್ಲೋ || ತಂದಾನ ||

ಅಯ್ಯೋ ಏನು ಮಾಡ್ಯವ್ವಾ
ಏ ಯಪ್ಪ ಮೆಲ್ಲಗ ಮಾತಾಡಲೋ
ಅಂತ ತ್ವಾಟ್ದಾಗ ಬಂದ್ರು
ಆಗ ಯವ್ವಾ ನೀನು ಮುದುಕಿ
ಅಮಾಸೆ ಕತ್ಲ
ಪಾಂಟಿಗೆ ಜಾರೀಕ್ಯಂಡು ಬಾಯಾಗ ಬಿದ್ರೆ
ಈಸ್ಲು ಬರೋದಿಲ್ಲ
ನೀನು ನೀರು ಕುಡ್ದು ಹೆಣ ಆಗ್ತಿ
ಕರಕಂಡು ಬಂದೋನಿಗೆ
ಪಾಪ ಸುತ್ತಬೇಡ
ನಾನು ಜಾರಿಕ್ಯಂಡು ಬಿದ್ರೇನು
ಗಣ್ಮಗ ಈಸಲ್ಹೋಡಿದು ಗಡ್ಡೆರತಿನಿ
ಪಾಂಟ್ಗಿ ಮ್ಯಾಲಿದ್ದ
ಯಾವ್ವಾ ನೀನು ಗಡ್ಡೆ ಮ್ಯಾಲಿರು
ನಾನ್ಹೋಗಿ ನೀರು ತುಂಬಿಕ್ಯಂಡು ಬರತಿನಿ
ಹೇ ಒಳ್ಳೇ ಉಪಾಯಲೇ
ಮುಂದ್ಹುಟ್ಟಿಯಾ ಹಿಂದ್ಹುಟ್ಟಿಯಾ ನೀನು
ಮುದ್ಯಾಕಿ ಬಾಯಿ ಗಡ್ಡೆ ಮ್ಯಾಲ ನಿಂತ್ಕೋ
ಈ ತ್ವಟದಾಗ ಗಿಡ ಕೆಳಗ ಇರೋದು
ಹುಲಿ ಬರತೈತೆ ನಾತ ಹಿಡಕಂಡು
ನನ್ನ ಹೊತ್ಗಂಡು ಹೋತೈತಿ
ನೀನು ಬಾಯಾಗ ಬೇಸಿರಬೇಕಂತ ಮಾಡೀಯಲ್ಲ
ಇಲ್ಲಪ್ಪಾ
ನೀನೇ ಬಾಯಿ ಮೇಲೆ ನಿಂತ್ಕೋ
ಗಡ್ಡೆಮೇಲೆ
ನನಗೆ ಕೊಡ ಕೊಡು
ನಾನೇ ಹೋಗಿ ತುಂಬಿಕ್ಯಂಡು ಬರತೀನಿ ಅಂದ್ಳು
ಯವ್ವಾ ಜಾರಿಕ್ಯಂಡು ಬಿದ್ರೆ ಹ್ಯಾಂಗ
ನೋಡಪ್ಪಾ ಬ್ಯಾಡ ಬ್ಯಾಡ ಅಂದಂಗೆಲ್ಲ
ನಾನೇ ಹೋಗಿ ಕಾಲಜಾರಿ ಬಿದ್ರೆ
ನಂದೇ ಪಾಪ
ಬ್ಯಾಡ ನಾನ ಹೋಗೋದಿಲ್ಲ ಹೋಗೋದಿಲ್ಲ
ಅಂದಂಗೆಲ್ಲ ಕುತ್ಗಿ ಹಿಡಿದು ದಬ್ಬಿದ್ರೆ ನಿಂದು ಪಾಪ
ಸರಿಬಿಡವ್ವ ನಿನ್ನಷ್ಟ ಅಂದ
ಉಟ್ಟಿದ ಸೀರೆ ಕಚ್ಚಿ ಹಾಕಿದ್ಳು
ಮುತ್ತಿನ ಸೇರಗಿಲಿ
ನಡುವು ಸುತ್ತಿಕ್ಯಂಡ್ಳು

ಕೊಡ ಹಿಡಿದಳು ಮುದುಕಿ ನೋಡಮ್ಮ
ಧಿಗಿ ಧಿಗಿ ಧಿಗಿ ಧಿಗಿ ಪಾಂಟಿಗೆ ಇಳಿದಾಳಮ್ಮ
ಆಗ ನೀರು ತಲ್ಲೀಗೆ ಬಂದಾಳಮ್ಮ || ತಂದಾನ ||

ಮುದುಕಿ ಪಾಂಟಿಗೆತಲ್ಲಿ ಬಂದ್ಳು
ತೆಪ್ಪೆ ಕಟ್ಟೈತಪ್ಪ ಕೈದಪ್ಪ ನೀರು
ಆಗ ಹತ್ತು ವರ್ಷ ಆಗೈತಪ್ಪ
ನೀರು ಮುಟ್ಟಿಲ್ಲ ಒಬ್ನು ಬಂದು
ಆ ತೆಪ್ಪ ವಾರಿಗೆ ತೆಗೆದು
ಆಗ ಐದು ಬೊಗಸೆ
ನೀರು ಕುಡಿದ್ಳು ಮುದುಕಿ
ಆಗ ಬುಡ ಬುಡ ಬುಡ ಅಂತ
ಕೊಡದಾಗ ನೀರು ತುಂಬ್ತಾಳ
ಹನ್ನೇರಡು ಗಜ ಹಲಿರಾಜ
ಆಗ ಗಿಡಕೆಳಗೆ
ದ್ರಾಕ್ಷಿ ಬಳ್ಳಿ ಅಡೇಲಿ
ಮಕ್ಕಂಡೈತಿ ತ್ವಾಟದಾಗ
ನೀರು ತುಂಬೋದು ಶಬ್ದ ಕೇಳಿತು
ಅಲೆಲೇ
ಯಾವತ್ತು ನೀರು ಶಬ್ದ ಕೇಳಿಲ್ಲ
ಇವತ್ತು ಯಾರೋ ನೀರು ತುಂಬ್ತಾರಂತ
ಹುಲಿರಜ ದ್ರಾಕ್ಷಿ ಬಳ್ಳಿ ಅಡಿಯಲಿದ್ದ
ಬಂದು ಬಿಡ್ತು ಗಿಡ್ಡಾಗಲಿದ್ದ
ಈ ಹುಡುಗ ಚಂದ್ರಾಯ್ದ ಹಿಡ್ಕಂಡು
ಗಡ್ಡೆ ಮ್ಯಾಲೆ ನಿಂತಾನಪ್ಪ
ಬಾಯಿ ಗಡ್ಡೆ ಮ್ಯಾಲೆ

ಆಗ ಹುಲಿರಾಜ ನೋಡಣ್ಣ
ತಾನು ಹೊಂಟು ಬರುತೈತೋ
ಹುಡುಗನ ಮುಂದ್ಕ ಎರಗೈತೋ
ಹುಡುಗನ ಕಡಿಗೆ ನೋಡೈತೋ
ತೋಥಡಿ ಬಾಯಿ ತೆರೆದು ಬಿಟ್ಟೈತೋ
ಇನ್ನ ಹುಡುಗನ ಎದೆಮ್ಯಾಲೆ
ಬಲಪಾದ ಇಟ್ಟೈತೋ
ಬಲಪಾದ ಇಟ್ಟಿದರೆ
ಹುಡುಗ ಕಣ್ಣೀಲಿ ನೋಡಿದ ಹುಲಿಗಾಗ
ಎಡಗೈಲಿ ಹುಲಿ ಕೂದಲ ಹಿಡಿದಾನ
ಆಗ ಹುಲಿಯಾನಾರ ಬಗಿಸ್ಯಾನ
ಬಲಗೈಲಿ ಚಂದ್ರಾಯ್ಧ ಹಿಡಿದಾನ
ತೋಥಡಿ ಗ್ಯಾರಗ್ನಂಗ ಕಡಿದಾನ
ರಾಕ್ಷಿಧಂಡ ಬಿದ್ದೈತೋ
ಆಗ ಎರಡು ತುಂಡು ಆಗೈತೋ || ತಂದಾನ ||

ಗ್ಯರಗ್ನ ಕಡ್ದ
ಗುಡ್ಡ ಬಿದ್ದಂಗ ಬಿದ್ದು ಬಿಡ್ತು
ಆಗ ಒದ್ದ್ಯಾಡಿ ಜೀವ ಬಿಟ್ಟುಬಿಡ್ತು
ಹುಲಿ ಕೂಟ ಕೂಡಲ್ಲ
ಹೇಣ್ತಿ ಕೂಟ ಮಾತಲ್ಲ
ಅಂತ ಕಡ್ಡ ಹಾಕಿದ
ಅಲೆಲೆs ಈ ಮುದುಕಿ ಬರತಾಳ
ಈ ಹುಲಿ ಕೋಸುರ ಹೆದರಿಕ್ಯಂಡಾಳ
ನೋಡನ ಈ ಮುದುಕಿ ಎಷ್ಟು ಬಲ ಐತೋ
ನೋಡಾನ ಅಂತ
ಮಂಡಗೆ ತಲೆಗೆ ಕಟ್ಟಿಗೆ ಚುಚ್ಚಿದ
ಬಾಯಿ ಗಡ್ಡೇ ಮ್ಯಾಲೇ ಕುಂದ್ರಿಸಿದ
ಬಾಯಿ ಕಡೆಗೆ ಮುಖಮಾಡಿ
ಈ ಮುದುಕಿ ಏನ ಮಾಡಿದ್ಳು
ನೀರ ತುಂಬಿಕ್ಯಂಡು
ಬಗಲಾಗ ಇಟಗಂಡು
ಬಂದು ಪಾಂಟಿಗ ಏರಿದ್ಳು
ಈ ಹುಡ್ಗ ಯಾವಾಗ
ಹುಲಿ ಮ್ಯಾಲೆ ಕುಸ್ತಿ ಮಾಡ್ತಿದ್ನೋ

ಯಬ್ಬಾ ಸತ್ತ್ಯಪ್ಪಾ
ಪಾಂಟಿಗೆ ಮ್ಯಾಲೆ ಹಂಗ ಕೋಡ್ಹಾಕಿ
ಮುದುಕಿ ಲಟಕ್ನ ಬಾಯಾಗ ಎಗರಯಾಳ
ಆಗ ಎರಡು ಕೈ ಚ್ಯಾಚಾಳ
ಅಣ್ಣಾ ಸೆರಕೆ ಕಲ್ಲು ಸಿಕೈತೋ
ಸೆರಕೆ ಕಲ್ಲು ಹಿಡಿದಾಳ
ಇನ್ನು ಇಳೇ ಬಿದ್ದಾಳ || ತಂದಾನ ||

ಸೆರಕ್ಯಾಗ ಕುಂತಾಳ
ಪಿಳಿಪಿಳಿ ಪಿಳಿ ಕಣ್ ಬಿಡ್ತಾಳಪ್ಪ ಮುದ್ಕಿ
ಈ ಹುಡುಗ ಇನ್ನಾ ಬರತಾಳ ಇನ್ನಾ ಬರತಾಳ
ಯಾವಾಗ ಬರತಾಳ
ಅಲೇಲೇs ಹುಲಿ ನಾನು ಕುಸ್ತಿ ಮಾಡುವಾಗ
ಬಾಯಾಗ ಎಲ್ಲಿ ಎಗ್ಗರಿಬಿಟ್ಳೋ
ಮುದಕಿಗಿ ಬೆಂಕಿ ಹಚ್ಚ್ಯ
ಕರಕಂಡು ಬಂದು
ನಾನು ಜೀವ ಕೊಲ್ಲಿ
ನಾನ ಪಾಪ ಸುತ್ಕಂಡ್ಹಂಗ ಆತು ಅಂತ
ಹುಡುಗ ಪಾಂಟಿಗೆ ಇಳಿದು ಬಂದ
ಕೊಡ ಹಾಕಿದ್ರೆ
ಗೇಣಷ್ಟು ನೆಗ್ಗೆ ಹೊಗೈತಪ್ಪಾ ಕೊಡ
ಕೊಡಪಾನ
ಆ ಕೊಡ ಹಿಡಕಂಡು ಏನಂತಾನ

ಯಾವ್ವ ಬಾಯಾಗ ಬಿದ್ದೇನೆ
ಇನ್ನ ನೆಲಕ ಹೋದೇನೆ
ಜಲ್ಮ ಹೋಯ್ತು ಯವ್ವಾ
ಮುದುಕಿ ಇನ್ನ ಜೀವ ಕಳೆದೆವ್ವಾ
ಹ್ಯಾಂಗ ಮಾಡ್ಲಿ ನಾನವ್ವ || ತಂದಾನ ||

ಅಂತ ದುಃಖ ಮಾಡ್ತಾನ
ಯವ್ವಾ ಕರಕಂಡ ಬಂದೆ
ಬಾಯಾಗ ಜೀವ ಹೋಯ್ತೇನವ್ವಾ
ನೆಲಕ ಮುಟ್ಟೆ ನವ್ವಾ
ಅಂತ ದುಃಖ ಮಾಡತಾನ
ಇಲ್ಲಪ್ಪ ಇಲ್ಲಿ ಕುಂತೀನಿ ಸೆರಕ್ಯಾಗ
ಯಾಕ ಅಳ್ತಿಲೋ
ಕೊಡ ಮ್ಯಾಲೆ ಬಿದ್ದು ಅಂತ ಹೇಳಬಾರದ
ಆ ಮುದುಕಿ ತೆಲೆ ಬಡೀ
ಪಿಳಿ ಪಿಳಿ ಪಿಳಿ ಕಣ್ ಬಿಡ್ತಾಳ
ಗಡಗಡ ನಡಗ್ತಾಳ
ಆಗ ಅಳಕಾಂತ ಅಳಕಂತ
ಕಣ್ಣು ತೆರೆದು ನೋಡಿದಾ
ಎಡಕಲಿದ್ದ ಬಲಕು ಸೆರಕಿನ್ಯಾಗ ಕುಂತೈತೆ ಮುದುಕಿ
ಕಣ್ಣೆಂದ್ರೆ ದೀಪ ಕಂಡಂಗ ಕಾಣತಾವ
ಈ ಮುದುಕಿಗ ಬೆಂಕಿ ಹಚ್ಚ
ಯಾಕ ಅಳ್ತಿಯಲೋ
ಇಲ್ಲಿಕುಂತೀನಿ ಬಾರಲೋ ಅನ್ನಬೇಕ ಇಲ್ಲ
ಅಂತ ಹುಡುಗ ಏನ ಮಾಡ್ದ
ಶರಟು ಬಿಚ್ಚಿದ
ಪದರಾನ ಪಂಚೆ ಬಿಚ್ಚಿದ
ಮೊಂಡ ಡಾಯಾರು ಮೊಂಡ ಬನೀನು
ಹುಡುಗ ಎಗರಿ ಬಿಟ್ಟ ಬಾಯಾಗ

ಈಸ್ಲಾಡಿಕ್ಯಂತಮ್ಮ
ಮುದುಕಿತಲ್ಲಿ ಬಂದಾನ
s ಎಡಗೈಲಿ ತುರುಬು ಹಿಡಿದಾನ
ಕೂದಲು ಹಿಡಕಂಡು ಎಳೀತಾನ
ಇನ್ನ ಪಾಂಟ್ಗಿ ಹುಡುಗಮ್ಮಾ || ತಂದಾನ ||

ಸರ್ರನೆ ಎಳ್ದು ಬಿಟ್ಟ ಕೂದ್ಲು ಹಿಡ್ಕಂಡ
ಸರ್ರಂತ ಪಾಂಟಿಗ ಏಳ್ಕಂಡು ಬಂದ
ಮುದುಕಿ ಗಡ ಗಡ ಗಡ ನಡುಗ್ತಾಳೆ
ಯಪ್ಪಾ ಬಂತು ಬಂತು ಬಂತು ಅಂತಾಳೆ
ಏನು ಬಂತವ್ವಾ
ಏಯಪ್ಪ ಬಂತು ಬಂತು ಬಂತು
ಅಲೇಲೇs ಈ ಮುದುಕಿಗೆ ಏನೋ
ದೆವ್ವ ಬಡದೈತಂತ

ಪಟಾಪಟಾ ಬಡಿದಾನ
ಸೆಂಪೆ ಸೆಂಪೆ || ತಂದಾನ ||

ಅಬಾಬಾಬಾ ಬಡಿ ಬ್ಯಾಡ ಬಡಿ ಬ್ಯಾಡ ಬಡಿ ಬ್ಯಾಡ
ತಡಿತಡಿ ತಡಿ ರೋವ
ಬಾಯಿಗ ತೊರಗ ಬಿದೈತಿ
ಓಟ್ ತಡಿ ಅಪ್ಪಾ ತಡಿ
ಏನ ಬಂತವ್ವಾ
ಏಯಪ್ಪಾ ಬಂತು ಬಂತು ಬಂತು
ಏನವ್ವಾ ಹೇಳವ್ವಾ
ಅಯ್ಯೋ ತಮ್ಮಾ ಕೊಡ ಎತ್ತಿಕ್ಯಂಡು
ಒಂದೇ ಪಾಂಟಿಗೆ ಏರಿಬಿಟ್ಟೆ
ಹುಲಿ ಹಾಂಗೆ ನಿನ್ನ ಮ್ಯಾಲೆ
ಬಾಯಿ ತೆರೆದು ಬಿಡ್ತು
ಹಂಗೇ ಕೊಡ ಬಿಸ್ಹಾಕಿದೆ
ಹಂಗೆ ಎಗರಿ ಬಿಟ್ಟೆ
ಹಂಗೆ ಕೈ ಚಾಚಿದೆ
ಹಂಗೆ ಸೆರಕಿಸಿಗ್ತು
ಯವ್ವಾ ಹುಲಿ ಬಂದಿದ್ರೆ ನನ್ನ ಬಿಡ್ತಿತ್ತಾ
ಹತ್ತು ಮಂದೀನ ತಿಂದ್ಹೋಗಿತ್ತಂತೆ
ನನ್ನ ಬಿಡ್ತಿತ್ತಾ
ಬೇಸು ಮೇಯ್ದವ್ನ
ಆಗ ಬಾಳೆಹಣ್ಣು ಇಟ್ಕಂಡ್ಹಂಗ
ಬಾಯಾಗ ಗೊಟುಕ್ನ ತಿಂದು ಬಿಡ್ತಿತ್ತು
ಮುದುಕ್ಯವ್ವ
ಗುಬ್ಬಿ ಚಿಂವ
ಅಂದ್ರೆ ಹೇತ್ಗಂಡು ಸಾಯ್ತಿಯಲ್ಲಾ
ನಡೇ ಮುದುಕಿ
ನನ್ನಂಥ ಮೊಮ್ಮಗನ ಹೇಳಬೇಕ್ವಾ
ಎಷ್ಟು ಹೆದರಿಕೆ ಐತವ್ವ ನಿನಗೆ ಅಂದ
ಅಗ ಕೊಡ ಹೊತ್ಗಂಡ
ನಡೆವ್ವಾ ಅಂದ
ಮೂರು ಪಾಂಟಿಗೆ ಮುಂದೆ ಅವ್ಳು
ಮೂರು ಪಾಂಟಿಗೆ ಹಿಂದೆ ಹುಡುಗ
ಮತ್ತೇ ಆ ಹುಲಿ ನೋಡಿ
ಕೆಳಗೆ ಬಿದ್ದು
ಎಲ್ಲಿ ಬಾಯಾಗ ಬಿಳ್ತಾಳಂತ
ಹಿಂದಿದ್ರೆ ನಾನು ಹಿಡಕಂತೀನಿ
ಅಂತ ಹುಡುಗ ಮುಂದಕ ಹೋಗಂದ
ಮುದುಕಿ ಬಡಬಡ ಬಂದು

s ಯಪ್ಪಾ ಸತ್ತು ಹೋದೆನಲ್ಲಾ
ಪಾಂಟಿಗೆ ಮ್ಯಾಲೆ ಬಾರಲು ಬಿದ್ದಾಳಮ್ಮಾ
ಹುಡುಗ ಒಳ್ಳಾಡಿ ಒಳ್ಳಾಡಿಕ್ಯಂತ ಬರುತಾನಮ್ಮಾ
ಪಾಂಟ್ಗಿ ಮ್ಯಾಲೇರಿ || ತಂದಾನ ||

ಮೂರು ಪಾಂಟಿಗೆ ಮುಂದ್ಹೋಗಿ ಆಕಿ
ಆಗ ಪಾಂಟಿಗಿ ಮ್ಯಾಲ ಬಿದ್ದು
ಹೊಳ್ಳ್ಯಾಡಿ ಹೋಳ್ಳ್ಯಾಡಿಕ್ಯಾಂತ ಬರತಾಳೆ
ಹಿಂದೆ ಬರೋ ಹುಡುಗ
ಲಟಕ್‌ನ ಎಡಗೈಲಿ ಹಿಡಕಂಡ

ಎತ್ತ ಹೋತೀಯೇ ಬಾಯಾಗ ಹೋತೇಯೆವ್ವಾ
ನನಗೇನು ಬಂದೀತ್ತಂಗ ಒಳ್ಳಾಡುತ್ತೀಯಾ || ತಂದಾನ ||

ಎಯ್ ತಮ್ಮಾ
ಹುಲಿ ಇಲ್ಲ ಅಂದ್ಯಲ್ಲೋ
ಬಾಯ್ ತೆರಕೊಂಡು ಕುಂತೈತಲ್ಲೋ
ಎಲೋ ತಮ್ಮಾ
ಎಂತ ಹುಡುಗಪ್ಪಾ ನೀನು
ನಾನು ನೀನು ಇಬ್ಬರು ಹೋತಿವಲೇ
ಹುಲಿ ಬಾಯಾಗ
ನೆಟ್ಟಗ ಹೋತಿವಿ ನೋಡು
ಅದ್ರ ಕುತ್ತಿಗ್ಯಾಗ ಹಾಂಗೆ ಹೋತಿವಿ ಬಾಯಾಗ
ಇಲ್ಲವ್ವ ಅದೇನು ಮಾಡ್ತೈತೆ
ಏನನ್ನ ಬಡ್ದ್ರೆ ಆಗ ತಿಂದು ಬಡ್ತೈತೆ
ಸುಮ್ನ ಇದ್ದರ ಏನು ಮಾಡೋದಿಲ್ಲ
ಅಯ್ಯೋ ಹೋಗಪ್ಪೋ ಹೋಗು
ಈಗ ಮನುಷ್ಯರನ ತಿಂದೂ ತಿಂದು
ಮನುಷ್ಯೋರು ತುಪ್ಪ
ಮದ ಏರಿ ಬಿಟ್ತೈತೆ ಅಂದ್ಕ
ಬಾಯ್ ತೆರದೈತಿ ಅಂದ್ಳು
ನೋಡವ್ವಾ ಅದೇನು ಮಾಡೋದಿಲ್ಲ
ನಾನು ಬಾಯಕ ಕೈ ಇಡತಿನಿ ನೋಡು ಅಂತ
ಹೋಗಿ ಬಾಯಾಗ ಕೈ ಇಟ್ಟ
ಹಂಗಲ್ಲ ತಮ್ಮಾ
ಆ ಹುಲಿ ಏನಂತ ಆರ್ಥ ಮಾಡಿಕ್ಯಂಡೈತೆ
ಯಾರ ತಿಂದ್ರೆ
ಮಣ್ಸ್ಯಾನ ಜೀವಕ ರುಚಿ ಆಗತೈತಿ
ನಾನು ಹಣ್ಣು
ಹಣ್ಣು ತಿಂದ್ರೆ ರುಚಿ
ರುಚಿ ಕಾಣತೈತಿ
ನೀನು ಕಾಯಿ
ಕಾಯಿ ತಿಂದ್ರೆ ಆಗ ಏನು ರುಚಿ
ಮೆತ್ತಗೈದೀನಿ ಅಂತ

ಇರೋದೆಲ್ಲಾ ನನ್ನ ಮ್ಯಾಲೈತಲ್ಲೋ
ನಿನ್ನ ಮ್ಯಾಲೆವೋ ಇನ್ನು ಇಲ್ಲವೋ ಹುಡಗ || ತಂದಾನ ||

ಯಾವ್ವ ಸತ್ತೋಗೈತವ್ವಾ
ಸತ್ತೋಗಿದ್ರೆ ಕಣ್ಣು ಮುಚ್ಚಿಗ್ಯಂತೈತಿ
ಬಾಯಿ ಮುಚ್ಚಿಗ್ಯಂತೈತಿ
ಅಡ್ಡ ಬೀಳುತೈತಿ ಹುಲಿ
ಕುಂತಗಂಬ್ತೈತೇನು ಬಾಯಿ ತೆರಕಂಡು
ಕಣ್ನ ತೆರಕಂಡು
ಇಲ್ಲವ್ವ ಸತ್ತೋಗೈತೆ
ಹೇ ಹೊಗಪ್ಪ ಹಂಗ
ಸತ್ತಂಗ ಕುಂತ್ಗಂಡ್ರೆ
ಬಂದ ಮ್ಯಾಲ ಲಟಕ್‌ನ ಹಾಕ್ಯಂಬಾನ ಅಂತೈತೆ ಅದು
ನೋಡವ್ವಾ ಇನ್ನ ಇದು ಸತ್ಹೋಗೈತಂತ
ಆತ ಕಟ್ಗೆ ಇಟ್ಟು ಕುಂಡ್ರಸ್ಯಾನ
ಎಡಗೈಲಿ ಹಿಂಗ್ ದಬ್ಬಿಬಿಟ್ಟ
ಎರಡು ತುಂಡು ಬಿದ್ದುವು
ಮುದ್ಕಿ ನೋಡ್ದುಳು

ಯಪ್ಪಾ ನಮ್ಮೂರಿಗೆ ದೇವ್ರಾಗೀಯಲೋ
ಸೀ ನೀರು ಕುಡ್ಯಂಗ ಲೋಕ ಮಾಡಿದ್ಯಪ್ಪಾ
ಯಪ್ಪಾ ಬೇವೂರ ಹೆಣ್ಣು ಮಕ್ಕುಳ ಚಂದವೈಯ್ತು ಹುಡುಗ || ತಂದಾನ ||

ಏಸೋ ಮಂದಿ ಸತ್ತೋದ್ರು ಹುಡುಗ
ಯಪ್ಪಾ ನಮ್ಮೂರಿಗೆ ದೇವ್ರಾಗಿ ಬಂದೀಯಲೋ
ನಮ್ಮೂರಾಗ ಹತ್ತು ಬಾಯಿ ಎಂಟು ಬಾಯಿ ತೋಡಿಸಿದ್ರೂ
ಬರೇ ಉಪ್ಪು ನೀರು ಸಪ್ಪ ನೀರಲೋ
ಎಷ್ಟು ದೂರಲಿದ್ರೆ ನಾವು ಬಂದು
ನೀರ ತಂದುಕ್ಯಂಬಂತ್ತೀದಿವಪ್ಪ
ಈಗ ಹುಲಿ ಬಂದಾಗಲಿದ್ದ
ನೀರೇ ಬಿಟ್ಟ ಬಿಟ್ಟಿವಲ್ಲ ನಾವು
ತಮ್ಮಾ ಬೇಸು ಮಾಡಿದೆ