ಭೂಪತಿರಾಜನ ಊರಾನ ಸುದ್ದೆಲ್ಲಾ
ಜಿರಗೂರು ಸುಬ್ಬಮ್ಮಗೆ ಗೊತ್ತು
ಈ ಹುಡುಗನಿಗೆ ಏನು ಗೊತ್ತು ಪಾಪ
ಹೊಸದಾಗಿ ಬಂದಾಗ ಹುಡುಗ
ಆತ ಏನಂತ ಊರೇಲ್ಲ ಡಂಗರಸ
ಮಾಡ್ಯಾನಂದ್ರೆ ಭೂಪತಿರಾಜ
ಸಂಪಗ ಜ್ಯಾತಿ ಆಗಲಪ್ಪ
ಮಾದ್ರ ಆಗಲಿ
ಬ್ಯಾಗಾರ ಆಗಲಿ
ಇಂಥ ಕುಲ ಅಂಬಂಗಿಲ್ಲ
ಈ ಹುಲೀನ ಕಡದವ್ರಿಗೆ
ತನ್ನ ಮಗಳನ್ನು ಕೊಟ್ಟು
ಮನಿ ಮುಂದೆ ಲಗ್ನ ಮಾಡಿ
ಅವನ್ಹಿಂದೆ ಖಳಿಸ್ತಿನಿ ಅಂತ ಡಂಗ್ರ ಸಾರಿದ
ಅದಕ್ಕಾಗಿ ಬಂದು
ಅರ್ಧಮಂದಿ ಹುಲಿ ಬಾಯಾಗ ಬಿದ್ರೆ
ಅರ್ಧ ಮಂದಿ ನಿನ್ನ ಮಗಳ
ಬ್ಯಾಡ ಅಂತ ಹೋಗಿ ಬಿಟ್ಟಿದ್ರು
ಈ ಮುದುಕಿ ಏನ ಉಪಾಯ ಮಾಡಿದ್ಳು ಅಂದ್ರೆ
ನನಗಿರೋ ಒಬ್ಳೇ ಮಗಳು
ಆಗ ಮಗಳಿಗಿ ಕೊಟ್ಟಿನಿ
ಈಗ ನನ್ನ ಅಳಿಯ
ನನ್ನ ಮ್ಯಾಲ ಜೀವ ಇರತಾನ
ನನ್ನ ಮಗಳು ಹೂವ ಕಟ್ಟಿಕ್ಯಂತ ಕುಂದ್ರುತಾಳ
ಈ ಭೂಪತಿರಾಜನ ಮಗಳ ಮಾಡಿದ್ರೆ
ನನ್ನ ಅಳಿಯಗೆ
ಒದ್ದ್ಯಾಡಿ ಒದ್ದ್ಯಾಡಿ ಅಡಿಗೆ ಮಾಡ್ತಾಳ
ನನ್ನ ಅಳಿಯ ನನ್ನ ಮ್ಯಾಲ ಜೀವ ಇರತಾನ
ಹೇ ನಮ್ಮತ್ತಿ ನನಗೆ ಎರಡು ಮದ್ವೆ ಮಾಡಿದ್ಳಂತ
ಅಲ್ಲಿ ಕುಂದ್ರತ್ತಿ ಇಲ್ಲಿ ಕುಂದ್ರತ್ತಿ ಅಂತಾನ
ಛೇ ಮಾಡ್ಬೇಕು ಅಂತ ಏನ ಮಾಡಿದ್ಳು
ಯಪ್ಪಾ ಹುಡುಗ
ನನ್ನ ಮೊಮ್ಮಗ ಹುಟ್ಟ್ಯಾನ
ಏನು ಮಾಡ್ತಿ
ಹಗಲು ರಾತ್ರಿ ಕ್ಯಾಂವ್ ಕ್ಯಾಂವ್
ಕ್ಯಾಂವ್ ಅಂತ ಅರಸ್ತಾನಪ್ಪಾ
ಎಷ್ಟೋ ಮಂತ್ರ ತಂತ್ರ ಓದಿ ಬಿಟ್ಟಿವಿ
ಆಗ ಹಾಕ್ಸಿ ಬಿಟ್ಟೆ
ಎಲ್ಲೆಲ್ಲಿ ದೇವ್ರ ಕೇಳ್ದೆ ಬೇಸಾಗಲಿಲ್ಲ
ಒಬ್ಬಾತ ಏನಾಂತ ಹೇಳ್ಯಾನ
ಹುಲಿ ಬಾಲ ಹುಲಿ ಉಗುರು
ಹುಲಿ ಮೂಗು ತಂದು ತೊಟ್ಲಾಗ ಕಟ್ಟಿದ್ರೆ
ನಿನ್ನ ಮೊಮ್ಮಗ
ಅಳದಿಲ್ಲವ ಅಂತ ಹೇಳ್ಯಾರ
ಅಡವ್ಯಾಗಿದ್ದ ಹುಲಿ ಸಿಗಂದ್ರೆ
ಎಲ್ಲಿ ಸಿಗುತ್ತೆ ತಮ್ಮಾ
ಯಪ್ಪ ನೀನು ಕಡ್ದಿದ್ದಿ
ಕೋಯ್ದು ಕೊಡು ತಮ್ಮ
ನನ್ನ ಮೊಮ್ಮಗನ ತೊಟ್ಲಿಗೆ ಕಟ್ಟಿಕ್ಯಂತ್ತಿನಿ ಅಂದ್ಳು
ಸರಿಬಿಡವ್ವ
ಅದೇನ್ ದೊಡ್ಡ ಸುದ್ದಿ ಅಂತ
ಕೈ ಬಿಟ್ಟು ಬಿಟ್ಟ ಹುಲಿ ಬಾಲ, ಉಗುರು
ಕೊಯ್ದು ಕೊಟ್ಟ
ಉಡ್ಯಾಗ ಇಟ್ಟಕಂಡ್ಳು
ತಮ್ಮ ಇನ್ನ ನಡೆಪ್ಪ ಹೊಟ್ಟೆ ಹಸಕಂಡೀಯಿ
ಅಡಿಗಿ ಮಾಡಿನಿ
ಉಣ್ಣುವಂತೆ
ಯವ್ವಾ ನೀರು ಕುಡಿದಿನಿ
ಇನ್ನು ಗಂಟೆ ಆಗಲಿ
ನಾನು ಊಟ ಮಾಡೋದಿಲ್ಲ ಬಿಡವ್ವ
ಕೊಡ ಹೊತ್ಕಂಡ
ಸುತ್ತರಿಕ್ಯಾಂತ ನಡೆದ ಮುದುಕಿ
ಮಾತಾಡಿದ್ರ ಬಾಯಿನಾತ
ಕಡ್ಡಿಪುಡಿ ನಾತ
ಆಗ ಹೊಟ್ಟ್ಯಾಗ ಕಳ್ಳಿಲ್ಲ
ಬರೆ ಎಲುಬು ತೊಗಲು ಅಂಥಾ ಆ ಮುದುಕಿ
ಆ ಹುಡುಗನ ಕೈಲಿ ಆಗೋದಿಲ್ಲ ನಡ್ಯಾಕ

ಗಾಳಿಪಟ ಹೋದಾಂಗ ಹೋತಾಳ
ರವುದಿ ಹೋದಾಂಗ ಮುದುಕಿ ನಡಿತಾಳಮ್ಮ
ತಮ್ಮಾ ನಿನ್ನಿಲ್ಲ ಮೊನ್ ಹುಟ್ಟಿದವ್ನು
ಮುದುಕೀ ಕೂಟ ನಡೆವಲ್ಲಲ್ಲೋ
ಹರೆಯದವನ್ಯಾಗೆ || ತಂದಾನ ||

ಗೊಲ್ರವ್ನು ಎಂಥ ಹುಡುಗಪ್ಪಾ
ಮೂದೇರ ಕೂಡ ನಡೆಲಾರೆ
ಈಗ ಕಲ್ಲಡೇಲಿ ಹಿಡ್ಕಿ ಕಲ್ಲು ಬಿದ್ದೇ
ನುಸಿನುಸೀ ಹಿಟ್ಟ್ ಹಿಟ್ಟ್ ಆಗಬೆಕಲೇ ನೆಲದ ಮ್ಯಾಲೆ
ಯವ್ವಾ ನೀನೇನ ಅಂದ್ರೆ
ಎಂಗ ಬಿಗಿ ಐದೀಯಿ ಅಂದ್ರೆ
ಹಡೆದಾಗೆಲ್ಲಾ ಕೊಬ್ರಿ ಬಟ್ಲ ತುಪ್ಪ ತಿಂದು
ಅದಕ್ಕೆ ಬಿಗಿ ಐದೀಯಿ
ಅಯ್ಯೋ ಹೋಗೋಪ್ಪೋ ಹಡೆದು ಹಡೆದು ಏನೈತಿ
ನೀನೇನು ಹರೇದ ಗಣ್ಮಗಪ್ಪ ಬಿಗಿ ಇರತಿ
ನೋಡವ್ವಾ ಹಡೆದು ಹಡೆದು ಏನಿಲ್ಲ ಅಂತೀಯಿ
ಹಡೆದಾಗ ಹಳೇ ರಕ್ತ ಹೋತೈತಿ

ಬಸುರಾದಾಗೆಲ್ಲ ನೀನ್ಗ ಹೊಸರಕ್ತ ಏರುತೈತೆ || ತಂದಾನ ||

ಅದ್ಕೇ ನಿಮ್ಗ ಹೆಣ್ಮಕ್ಕಳಿಗೆ ಶಕ್ತಿ ಬಲ ಬರೋದು
ಅಂಬೊತ್ತಿಗೆ
ಅಯ್ಯ ಒಳ್ಳೆಯ ಮಾತಿನವನು ಬಿಡಪ್ಪ ನೀನು
ಹುಡುಗ ಎಂಥ ಹುಡುಗಪ್ಪಾ
ಮುದೇರ ಕೂಡ ನೆಡೆವಲ್ಲೇ ಅಂತೀಯ
ಆಗ ಯವ್ವ ಅದೇ ಇನ್ನ ದಡೇವು ಕೊಬ್ಬರಿ
ಎರಡಸೇರ ತುಪ್ಪ ನನಗಿಡು
ನಿನಗಿನ್ನ ಮುಂಚೆ ಹೋತೀನಿ ಅಂದ
ಆಯ್ ಒಳ್ಳೆಯ ಮಾತುಗಾರ ಬಿಡಪ್ಪ ನೀನು

ಬಾರಲ್ಲೋ ನನ್ನ ಹುಡುಗ
ನನಗೆ ನಿದ್ದೆ ಬರುತೈತೋ || ತಂದಾನ ||

ಆಗ ಮುಂದೆ ಮುದುಕಿ
ಹುಡಗ ಹಿಂದೆ
ಮನೆಗೆ ಬಂದ್ರು
ಆಗ ಯವ್ವಾ ನೀರು ಕೊಡ ತಗವ್ವಾ ಅಂದ
ಮನ್ಯಾಗ ಬಾರಪ್ಪ ಅಂದ್ಳು
ಮನ್ಯಾಗ ತಂದು ಕೊಡ ಇಳಿಸಿದ
ಏನಪ್ಪಾ ತಮ್ಮಾ ಸಿಲವರ ಚೆರಗೆ ಐತೆ
ನೀರು ತುಂಬಿಕ್ಯಂಡು ಬಂದ್ಳು
ತಗೋ ತಮ್ಮ ತೊಳ್ಕೊ ಅಂದ್ಳು
ಹಾಂಗೆ ತೊಳಕಂಬೋದಿಲ್ಲ ನಾನು
ಎದಕಪ್ಪ
ಉಪ್ಪು ನೀರಿನ ಕೂಟ ಮಾಡಿದ
ಅನ್ನ ಉಂಬೋದಿಲ್ಲ
ಉಪ್ಪ ನೀರಿನ ಕೂಟ ಮಾಡಿದ
ತೊಗೆ ತಿಂಬೋದಿಲ್ಲ
ಸೀ ನೀರ ಕೂಟನೇ ಮಾಡಬೇಕು ನೀನು
ಅಯ್ಯೋ ತಮ್ಮಾ ಅಚ್ಚೇರು ಮಾಡಿನಲೋ ಮುಂಜೇನೆ
ಅನ್ನ ಪುಗಸ್ಯಾಟಿದು ಚಲ್ಲಬ್ಯಾಡಪ್ಪ
ಇಲ್ಲ ನೀನು ಊಟ ಮಾಡು
ನಾನ್ ಊಟ ಮಾಡೋದಿಲ್ಲ
ಸರಿ ಬಿಡಪ್ಪ ಅಂತ
ಮತ್ತೇ ಅಚ್ಚೇರು ಅಕ್ಕಿ ತೋಳ್ದು
ಮತ್ತೇ ಅರಪಾವ್ ಬ್ಯಾಳೆ ಹಾಕಿ
ಮತ್ತೇ ಅಡಿಗೆ ಮಾಡಿದ್ಳು
ಆಗ ಹುಡುಗನ ಕರದ್ಳು
ಮೊಸರಹಾಕಿ ತುಪ್ಪಾಕಿ
ಆಗ ಹಚ್ಚನ್ನ ತೊಗೆ ಹಾಕಿ ಇಟ್ಟುಳು
ಆಗ ಶರಣಮ್ಮ ತಾಯಿ ಸಿರಿದೇವಿ
ಸುಡುಗಾಡು ರುದ್ರಭೂಮಿದಾಗ ಎಲ್ಲೈದೀಯ

ಈಗ ನೀನಲ್ಲ ತಾಯಮ್ಮ
ನನ್ನ ದೇವರೇ ತಾಯಮ್ಮ
ಯಮ್ಮಾ ಮುದುಕಿ ಇನ್ನ ಕೈಯಾಗ ನಾನು ಊಟ ಮಾಡೇನ || ತಂದಾನ ||

ಯಮ್ಮ ನೀನಲ್ಲ ಈಕೇ ತಾಯಿ
ನಮ್ಮವ್ವ ಮುದುಕಿನ ಮನ್ಯಾಗ
ಊಟ ಮಾಡ್ತೀನಿ ಅಂತ
ಆಗ ಮೂರೇ ತುತ್ತು ಬಾಯಾಗಿಟ್ಟುಕಂಡ ಹುಡುಗ
ಇನ್ನ ಅರ್ಧ ಹೊಟ್ಟೆ ಇರಲಿಕ್ಕೆ ಎದ್ದುಬಿಟ್ಟ
ಹೆಂಗ ಎದ್ದನೆಂದರೆ
ಅನ್ನ ಕಡಿಮೆ ಇದ್ರೆ
ಮಣಷ್ಯನಿಗೆ ಬಹಳ ತಿಳುವಳಿಕೆ
ಹೊಟ್ಟೆ ತುಂಬ ಊಟ ಮಾಡಿದ್ರೆ

ಭಾಳ ಮಬ್ಬು ಬರತೈತೋ ಮಣ್ಸ್ಯಾನ ಭಾಳ ವಜ್ಜೆ ಬರತೈತೋ || ತಂದಾನ ||

ಅಂತ ಆಗ ಎದ್ದುಬಿಟ್ಟ
ಏನಪ್ಪಾ ತುತ್ತು ಗೂಡ ಊಟ ಮಾಡಿಲ್ಲ
ಏನ್ ಸಣ್ಣ ಹಸು ಮಕ್ಳು ತಿಂತಾರ ನೋಡಪ್ಪಾ
ನಾನು ಸೇರು ಅನ್ನ ತಿಂಬೋದು
ಇಲ್ದಿದ್ರೆ ಐದು ರೊಟ್ಟಿ ತಿಂಬಾಕೆ ನಾನು
ನೋಡವ್ವ ನೀವು ಹೆಣ್ಮಕ್ಕಳು ಎಂಗಾದ್ರೆ ಏನು
ಹೊಟ್ಟಿಗಿ ತಿಂತ್ರಿ ಆರೋಗ್ಯವಾಗ್ತೈತೆ

ನಮ್ಮ ಗಂಡಸರಿಗೆ ಆರೋಗ್ಯ ಆಗೋದಿಲ್ಲ
ನಮ್ಮಗೆ ಅನ್ನ ರೋಗ ಬರುತದವ್ವಾ || ತಂದಾನ ||

ಸರಿಬಿಡಪ್ಪ
ಹೆಚ್ಚು ಉಣಬಾರದವ್ವ
ಅಂಬೋತ್ತಿಗೆ
ಅಷ್ಟೇ ಆಗಲಿ ಬಿಡಪ್ಪಾ ಅಂದ್ಳು
ತಮ್ಮಾ ಆ ಕಡೆ ಬಂಕದಾಗ ನೀನು ಮಕೋ
ಈ ಕಡೆ ಬಂಕದಾಗ ನಾನು ಮಕ್ಕಂತಿನಿ
ಸರಿಬಿಡು ಅಂತ
ಜಮಖಾನ ಕೊಟ್ಳು
ಬಣ್ಣದ ರಗ್ಗು ಕೊಟ್ಟು ಹತ್ತಿನ ದಿಂಡು ಕೊಟ್ಳು
ಆ ಕಡೆ ಬಂಕದಾಗ ಮುದುಕಿ ಮಕ್ಕಂಡ್ಳು
ಈ ಕಡೆ ಬಂಕದಾಗ ಮಗ ಮಕ್ಕಂಡ
ಮೂರು ದಡೆ ಚಂದ್ರಾಯ್ಧ ಬಗಲಾಗ ಇಟ್ಕೊಂಡ
ಆಗ ತಲೆ ಅಡೇಲಿ ತಲೆ ದಿಂಬು
ಇಟ್ಕೊಂಡು ನಿದ್ದೆ ಮಾಡಿದ
ಹನ್ನೆರಡು ಗಾವುದ ನಡೆದು ಬಂದವನು
ನಿದ್ದೆ ಮಾಡಿದ
ಈ ಮುದುಕಿ ನೋಡ ಕೌದಿ ಹೊದಕಂಡು ಹಂಗೇ ಕುಂತಾಳ
ಯಾವಾಗ ಹೋತಾನೋ ಊರುಬಿಟ್ಟು
ನನ್ನ ಅಳಿಯನ ಕರೆ ಕಳಿಸಿಕ್ಯಂಡು
ಭೂಪತಿರಾಜನ ಮಗಳ್ನ ಮಾಡಬೇಕಲ್ಲಾ
ಅಂತ ಈ ಮುದುಕಿ
ಆಗ ಇನ್ನ ಕಣ್ಣು ಕೂಡ ಮುಚ್ಚಿಲ್ಲಪ್ಪ ಹುಡುಗ

ಎಲೋ ಎದ್ದೇಳಲೋ ಎದ್ದೇಳಲೋ
ಕೋಳಿ ಕೂಗ್ದುವು ಕೋಳಿ ಕೂಗ್ದುವಲ್ಲೋ
ಬೆಳಕ್ಹರಿತು ನನ್ನ ಹುಡುಗ
ಏಳು ಸಮುದ್ರಕ ಯಾಗ ಹೋತೀಯೋ || ತಂದಾನ ||

ನಿಮ್ಮಪ್ಪಗ ಮೇಟಿ ಔಷಧ
ಯಾವಾಗ ತರತಿ
ನೀನು ತರೋವಳಗ ನಿಮ್ಮಪ್ಪ ಹೊಂಟ್ಹೊತಾನ
ಎದ್ದೇಳಪ್ಪಾ ಹೋಗುವಂತಿಯಿ
ಅಂದ್ರೆ ಎಡಕದಿಂದ ಬಲಕೆದ್ದು ನೋಡ್ದ
ಯವ್ವಾ ನಿನಗೇನು ಬಂದೈತವ್ವಾ ಸಟ್ಟ ಸರಿಹೊತ್ನ್ಯಾಗ
ಸವುಕೋಳಿ ಕೂಗ್ಯಾವವ್ವ ಅವು
ಏ ಯಪ್ಪ ನೋಡಲೋ ಕೆಂಪ ಹರಿದೈತಲೋ
ಮ್ಯಾಲೆ ನೋಡು ಮೇಘ
ಅಲ್ಲೆಲ್ಲವ್ವಾ ನಿನ್ನ ಉಪಾಯ ಏನು ಈಗ್ಲೇ ಕಳಿಸಿದ್ರೆ
ಆಗ ಅಚ್ಚೇರು ಅಕ್ಕಿ ಉಳಕಂತಾವ
ಅಂತ ಮಾಡೀಯಲ್ಲ
ಮತ್ತೇ ಮುಂಜಾಲೆದ್ರೆ
ಅಡುಗೆ ಮಾಡಂತಾ ಹೇಳ್ತಾನಂತ
ನೋಡವ್ವಾ ಮತ್ತೇ ಇನ್ನ ಐದು ರೂಪಾಯಿ ಕೊಟ್ಟು
ಊಟ ಮಾಡ್ತಿನಿ
ನಾನು ಸುಮ್ನೆ ಊಟ ಮಾಡೋದಿಲ್ಲ
ಅಯ್ ಹೋಗಪ್ಪೋ ಅಂತದ್ದಲ್ಲ
ನಾನು ಅಂದಕಂಡಿಲ್ಲ
ಏಸೋ ಮಂದಿ ಊಟ ಮಾಡಿ ಹೋತಾರ
ಊರಿಗೆ ಬಂದೋರೆಲ್ಲ
ಇಲ್ಲವ್ವಾ ನಾನು ನಡೆದು ನಡೆದು ಬಂದಿನಿ
ನಮ್ಮಪ್ಪನ ಪುಣ್ಯ ಒಳ್ಳೇದಿದ್ರೆ ಉಳುಕಂತಾನಾ
ನಾನ್ಹೋಗ್ಹೊತ್ತಿಗೆ ಸತ್ಹ್ಯೋದ್ರೆ ಹೋಗಲಿ
ಯಾರ ಮಾಡದು ಏನೈತಿ
ಆತನ ಹುಣ್ಣು ನನಗೆ ಹುಟ್ಟಂದ್ರೆ ಹುಟ್ತೈತಾ
ಯಾರು ಮಾಡಿದ ಕರ್ಮ ಅವರೇ ಉಣಬೇಕು
ಆ ಯಾರ ಕರ್ಮ ಅವರೇ ಊಟಮಾಡಬೇಕು
ಕೇಳವ್ವಾ ನಾನು ನೆಡೆದು ನೆಡೆದು ಬಂದು ಸಾಕಾಗೈತೆ ಅವ್ವಾ
ಇವತ್ತು ಇಲ್ಲೇ ಇರತಿನಿ

ನಾಳೆ ನಾನು ಹೋಗಿ ಬಿಡ್ತೀನವ್ವಾ
ಇವತ್ತು ನಾನು ಹೋಗೋದಿಲ್ಲ ಯವ್ವಾ || ತಂದಾನ ||