ಮುದುಕಿ ಎದೆ ತಣ್ಣಗಾತು
ಇವತ್ತು ಇರತಾನಂತೆ
ಇವ್ನು ಹೋಗೋದಿಲ್ಲಂತೆ
ನಾಳೆ ಹೋತಾನಂತೆ
ಕಾಲು ನೋಯ್ತಾವಂತೆ
ಯಮ್ಮಾ ನನ್ನಳಿಯಗ ಯಾವಾಗ ಮಾಡ್ಲಪ್ಪ
ಭೂಪತಿ ರಾಜನ ಮಗಳ್ನ
ನೋಡವ್ವ ಈಗ ಎಬ್ಬಿಸಿದಾಂಗ
ಮತ್ತೆ ಎಬಿಸಿದ್ರೆ
ಬಗಲಾಗ ಐತೆ ನೋಡು
ಮೂರು ದಡೆವ ಚಂದ್ರಾಯುಧ
ಹುಲಿ ಕಡ್ದಂಗ ಕಡದು ಬಿಡ್ತಿನಿ
ಆಗ ನಿದ್ದಿ ಕಣ್ಣಿಲಿ ಯಾರಿಗ್ಗೊತ್ತು
ಎದ್ದೆಳಂದ್ರೆ ಬಂತಂತ ಹಂಗೆ ಕಡೀತಿನಿ
ಏಯಪ್ಪ ನಾಳಿಷ್ಟತ್ತಿಗೆ ಎದ್ದು ಬಿಡಪ್ಪ
ನಾನು ಮಾತಾಡೋದಿಲ್ಲ
ನಿನ್ನ ಎಬ್ಬಿಸೋದಿಲ್ಲ

ಯಪ್ಪಾ ಯಾವತ್ತುನೋಗಲೋ ನಾನು ಕಿಸಕಂಬೋದಿಲ್ಲಲ್ಲೋ || ತಂದಾನ ||

ಅಂತ ಕಡೆ ಬಂದಕದಾಗ
ಬಂದು ಕುಂತಗಂಡ್ಳು ಮುದುಕಿ
ಹುಡುಗ ನಿದ್ದೆ ಮಾಡಿದ
ಹೊತ್ತುಟ್ಟಿ ಎರಡು ಗಂಟೆಗೆ
ಊರಾಗ ಯಾರು
ಅಗಸರ ತಿಪ್ಪಣ್ಣ ಮಡಿವಾಳ
ಆಗ ತಿಪ್ಪಣ್ಣನ ಇಬ್ಬರು ಹೆಂಡ್ರು
ದೊಡ್ಡತಿಪ್ಪಿ ಸಣ್ಣ ತಿಪ್ಪಿ
ಎಂಡ್ರಲ್ಲಾರ
ಏನ ಮನ್ಯಾಗ ಮೆಯ್ತಿರಯಾ
ಹೋಗ್ರೀ ಬಟ್ಟೇಗೋಳು
ಎತ್ತಿಕ್ಯಂಡು ಬರಹೋಗ್ರಿ ಅಂದ
ಅಂಬೋತ್ತಿಗೆ ನೀನೇನ ಮದಲಿಂಗ
ಕೇಳ್ರೀ ತಾವು ಜೀವಕ್ಕ
ನೀವು ಹೋಗ್ರೀ ಅಂದ್ರು
ಎಯ್ ನಿಮ್ಮನ ಯಾಕ
ಇಬ್ರು ಹೆಂಡ್ರನ್ನ ಮಾಡಿಕ್ಯಂಡಿದ್ದು
ಹೋಗಿ ತರಹೋಗ್ರಿ ಅಂದ
ಅಂಬೋತ್ತಿಗೆ ಬಟ್ಟೆಗಳು
ಅವ್ರು ಹೆಣ್ಣಮಕ್ಕಳು ಹೋಗಿಬಿಟ್ಟರು
ನಾನು ಕಮಲಮ್ಮ ರತ್ನಮ್ಮ ರಾಣೆಮ್ಮ
ರೈತ ಮಗಳು ಶಾನಬಾಗರ ಮಗಳು
ಗೌಡ್ರ ಮಗಳ ಮನಿಗೆ ಹೋಗಿ ಬರತಿನಿ
ಬಂದ
ಏನಮ್ಮಾ ಅಕ್ಕನೋರ ಹಾಕ್ರೆಮ್ಮ ಬಟ್ಟೆಗೋಳು ಅಂದ
ಆಗ ರೈತ ಮಗಳು
ಸಾನುಬಾಗ ಮಗಳು
ಗೌಡನ ಮಗಳು ಮೂವಾರು ಬಂದರು
ಆಗ ಮಡೇಲವುನ್ನ ಕಿವಿಕಿವಿ ಹಿಂಡ್ತಾರೆ
ದೌಡಿ ದೌಡಿ ಹಿಂಡ್ತಾರ
ಲೇ ಬಟ್ಟೆಗಳು ಒಗ್ಯಾಂಗಿದ್ರೆ ಬೇಸ ಒಗಿ
ಇಲ್ದಿದ್ರೆ ಬಿಟ್ಟು ಬಿಡು
ನೀನಿಲ್ಲದಿದ್ರೆ ನಿಮ್ಮಪ್ಪ ಅಂಥವನಿಗೆ ಹಾಕ್ತಿವಿ
ಕೇಳವೋ ಸುಮ್ನೇ ಅದ್ದಿಕ್ಯಂಡು ಬರತೀಯಾ
ಬೇಸ ಒಗ್ಗಕಂಡು ಬರತೀಯಾ
ನಿಮ್ಮ ಹಾಳಾಗಿ ಹೋಗ
ಬರೇ ಬಿಳಿಸೀರೆ ಉಟ್ಟಿ ಯಾಕ ಹಾಳಾಗಿ ಹೋಗೋದು
ಬಿಳಿಸೀರಿಗೆ ಉಪ್ಪುನೀರಿಗೆ
ಮೈಲು ಹೋಗವಲ್ಲದು
ಝಳ ಝಳ ಆಗುವಲ್ದು
ಲೇ ಮಸಿ ಹತ್ತಿಕ್ಯಂಡೈತಿ ಬೇಸನ್ನ ಆಗೈತಾ ಬಿಳಿ ಬಟ್ಟಿ
ಏನ್ ಮಾಡ್ಬೇಕಮ್ಮಾ
ಸೀನೀರಿಗಾದ್ರೆ ಝಳಝಳ ಆಗುತ್ತೆ
ಒಕ್ಕಂಡ ಬರಬೇಕಪ್ಪಾ
ಸೀನೀರು ಇದ್ದವಲ್ಲಿ ಹೋಗಬೇಕಪ್ಪಾ
ಒಂದಿನ ಬಿಟ್ಟು ಎರಡುದಿನ ನಿದ್ದಿ ಮಾಡಿ ಒಕ್ಕಂಡು ಬರಬೇಕು
ಪುಸ್ಯಟಿ ಬಂದೈತಾ ಸಂಬಳ
ಯಮ್ಮ ನೀವು ತಲೆಗೊಂದು ಮಾತಾಡ್ತಾ ಇದ್ರೆ
ನನ್ನ ತಲೆ ಕಟ್ಟೋಗ್ತೈತೆ
ಹಾಕ್ರಿ ಹೊಳೆದಂಡೆಗೆ ಹೋಗಿ
ನಿದ್ದೆ ಮಾಡಿ
ಒಕ್ಕಂಡು ಬರತಿನಿ ಅಂದ
ಲೇ ಮಡೇಲವನೆ
ಹೊಳೆ ದಂಡಿಗೆ ಹೋಗಿ ಒಕ್ಕಂಡು ಬರತ್ತೀಯಾ
ಹೊತೀನಮ್ಮ ಮತ್ತೇ
ಅಂಗಾರೆ ದೊಡ್ಡ ಬಾಳೆ ಮನೆ ಸೀರೆ ಐತೆ
ಬರೇ ಕಡ್ಡಿ ಬಾರಬಾರ ಇರೋದು
ಆಗ ಹಬ್ಬದ ದಿವ್ಸ ದೀಪ ಬೆಳಗುವಾಗ ಉಟ್ಟುಕಂಡಿದ್ದೆ
ಆಗ ದೀಪದ ಮ್ಯಾಲೆ ಬಿದ್ದಿದ್ದೆ ಹಂಗೆ ಎಣ್ಣೆ ಹತ್ತಿಕ್ಯಂಡೈತಿ
ಬೇಸು ಸಬ್ಬು ಇಟುಗಂಡು ಇಸ್ತ್ರೀ ಮಾಡಿಕ್ಯಂಡು ಬಾ
ಇಗೋ ನಿನಗೆ ಹತ್ತು ರೂಪಾಯಿ ತಗೊ ಅಂತ ಕೊಟ್ರು
ಏನ ಟ್ರಂಕು ತೆಗ್ದ
ಆಗ ಬಟ್ಟೆಗುಳೆಲ್ಲಾ ತಂದ್ಹಾಕಿದ್ರು
ಬಟ್ಟೆಗುಳೆಲ್ಲಾ ತಂದ್ಹಾಕಿ
ಎರಡುಕತ್ತಿ ಹಿಡಕಂಡು ಬಂದ್ರು
ಕತ್ತಿಮ್ಯಾಲ ಬಟ್ಟೆ ದಿಂಡು ಎರಿಸಿದ್ರು
ಮಂಡೆ ಬಲ್ಲೇವು ತಗಂಡ
ಆಗ ಮೊಂಡ ಕತ್ತಿ ತಗಂಡ
ಲೇಯ್ ಇಬ್ರು ಹೆಂಡ್ರು
ತೆಲಿಗೊಂದು ಗಂಟು ನಿಮ್ಗೆ
ಆಗ ಒಂದು ಹೇಣ್ತಿ ಒಂದು ಕತ್ತ್ಹಿಂದೆ
ಒಂದು ಹೇಣ್ತಿ ಒಂದು ಕತ್ತೆ ಮುಂದೆ
ಇದೋ ಮುಂದೆ ಬಂದ್ರೆ ಹುಲಿರಾಜ
ಮುಂದಿರೇ ಹೇಣ್ತಿ
ಮುಂದಿರೆ ಕತ್ತಿ ತಿಂದ್ಹೊತ್ತೆ
ಹಿಂದಿರೋ ಕತ್ತಿದ್ರೆ ಸಾಕು
ಈಗ ಹಿಂದೆ ಬಂದ್ರೆ
ಹಿಂದಿರೋ ಹೇಣ್ತಿನ ತಿಂದ್ಹೋಗುತ್ತೆ
ಲೇಯ್ ನಾನು ಬೊಕ್ಬಾರಲ ಬಿದ್ದಾಗ
ಇಬ್ರು ನಡುವೀರಲಿ
ಯಾರಡು ದಿಂಡು ನನಮ್ಯಾಲ್ಹಾಕ್ರಿ
ಈಗ ನನ್ನ ಜೀವಿದ್ರೆ ಸಾಕು
ನೀವಿಬ್ರು ಹೆಂಡ್ರು
ಎರಡು ಕತ್ತೆ ಹಾಳಾಗಿ ಹೋಗ್ಲಿ
ಇನ್ನಾ ಇಂಥಾ ಹೆಂಡ್ರು
ಇನ್ನ ಹತ್ತು ಮಂದೀನಾದ್ರೇನು ಮಾಡಿಕ್ಯಂತಿನಿ
ನಾನೇಳ್ದಂಗ ಕೇಳಬೇಕು ಅಂದು
ಅಷ್ಟೇ ಆಗಲ್ರೀ ಅಂದ್ರು
ಆಗ ಮುಂದೊಂದೇಣ್ತಿ ಹಿಂದೊಂದೇಣ್ತಿ

ನಟ್ಟನಡುವೀಲಿ ತಿಪ್ಪಯ್ಯ ಬರುತಾನ
ಆಗ ಸೀನೀರ ಬಾಯಿಗಿ ಬರುತಾರ
ಬಾಯಿ ಹತ್ರಕ್ಕೆ ಅವ್ರು ಬರುತಾರಣ್ಣ || ತಂದಾನ ||

ಆಗಿನ್ನವರತಾವಾಗಿ ಹುಲೀಕಡಿಗೆ ನೋಡಿ
ಅಬ್ಬಾ ಸತ್ತೆ ಹಾಕ್ರಂದ
ಯಾರಡು ದಿಂಡು ಮ್ಯಾಲ್ಯಾಕಿದ್ರು
ಹಾಕ ಹೊತ್ತಿಗೆ ಬಾರಲು ಬಿದ್ದು ನೋಡ್ದ
ಅಬಾಬಾಬಾ
ಹುಲಿ ಬಾಯಿ ತೆರಕಂಡು ಕುಂತೈತಲೇ
ಮಣ್ಸೇರ ತಿಂದು ತಿಂದು
ಮಣ್ಸೇರ ತುಪ್ಪ ಮದ ಏರೈತ ಇದಕ
ಅಂತಾ ಆಗ ಪುಟ್ಟಿರೊಟ್ಟಿ ತಗಂಡು ಬೀಸಿ ಒಗದ
ಹುಲಿ ಮುಂದೆ ಬಿದ್ದು ಬಿಟ್ವು
ಆ ಹುಲಿಗೆ ಜೀವಿಲ್ಲ
ಈತ್ಗೆ ಪರಾಕ್ರವಿಲ್ಲ
ಹಂಗೇ ಕುಂತಗಂಡೈತಿ
ಹೇ ರೊಟ್ಟಿ ತಿಂಬೋದಲ್ಲ
ಮಣ್ಸೇರ ತಿಂಬೋದ ಇದು
ಅರೆ ಇಬ್ರು ಹೆಂಡ್ರು ನಿಂತ್ಕೊಂಡಾರ
ಕಂಬ ನಿಂತ್ಹಂಗ ತಿನಬಾರದಾ ಇದು
ಹೇ ಹಣ್ಮಕ್ಳು ಬೇಕಿಲ್ಲ
ಗಂಡಮಕ್ಕಳು ತಿಂಬೋ ಹುಲಿ ಇದು
ಗಂಡು ಹುಲಿರಾಜ ಆಹಾ
ಗಂಡು ಹುಲಿರಾಜ
ಗಂಡಮಕ್ಕಳ್ನ ತಿಂಬೋದು
ಬೇಸು ಬಲ್ತಿರತಾರಂತ
ಆಗಿನ್ನದರ ಜೀವ ನನ ಮ್ಯಾಲೈತಿ
ಅಂತ ಏನ್‌ಮಾಡ್ದ
ಮೊಂಡ ಬಲ್ಲೆವು ತಗಂಡು
ಆಗಿನ್ನ ಅದಕ್ಕ ಲಟಕ್ನ ತಿವಿದು ಬಿಟ್ಟ
ಆಗ ಕಟಗಿಟ್ಟು ನಿಂದ್ರಶ್ಯಾನ
ಎರಡು ತುಂಡು ಬಿದ್ವು

ಲೇ ತಗಿರೇಲೆ ತಗಿರೇಲೆ
ಹೇಯ್ ಹುಲಿಬಿತ್ತೋ ಹುಲಿಬಿತ್ತೋ
ಸಣ್ಣ ಮೊಂಡಕತ್ತಿ ತಾಗಂಡು
ಚಪಚಪ್ಪ್ ಕಡಿತಾನೋ
ಒಂದೊಷ್ಟು ಉಗುರೊಷ್ಟು
ಇನ್ನ ಮೈ ಹರಿವಲ್ದು
ಹೇಯ್ ಮೊಂಡು ಬಲ್ಲೇವು ತಾಗಂಡು
ಎಡ್ಗೈಲಿ ತಿವಿತಾನ ರೋಟನ್ನಾ ತೂತು ಬೀಳುವಲ್ದು
ಹೇಯ್ ಹುಲಿವಂದು ಕುಸ್ತಿಮಾಡ್ದ || ತಂದಾನ ||

ಹೆಂಡ್ರು ನೋಡಿದ್ರು
ಆಯ್ಯೋ ಯಾರೋ ಕಡ್ದು
ಬಿಸ್ಯಾಕಿ ಹೋಗ್ಯಾರ
ಅದರ ಮ್ಯಾಲ ಏನ ಪರಾಕ್ರ ತೋರಿಸ್ತಿ
ನಿನ್ನ ಬಲಾ ಏನ್ ಬಲಾಯಾ
ಮೊಂಡ ಬಲ್ಲೇವು ತಗೊಂಡು ತಿವ್ದೆ
ಎಲ್ಲಿ ತೂತು ಬಿದೈತೆ ಇಲ್ಲಿ
ಮೊಂಡು ಕತ್ತಿ ಹಿಡ್ಕಂಡು ಕಡ್ದುಬಿಟ್ಟೆ
ಉಗುರೊಷ್ಟನ್ನ ಹರದೈತ್ಯಾ ತೊಗಲು
ಏಯ್ ಕತ್ತೆರಂಡೇರೆ
ಯಾರಂತ ತಿಳ್ದಿರೀ ನನ್ನ
ತಿಪ್ಪಯ್ಯ ಅನಬಾರದು
ತಿಪ್ಪರಾಜ ಅನಬೇಕು ನನ್ನ
ರಾಜನ ಮಗಳ ನಾನು ಮಾಡಿಕ್ಯಂತೀನಿ ಇವತ್ತು
ಈ ತ್ವಾಟ ಯಾರದು
ನಂದೇ ಹತ್ತೆಕ್ರೆ
ಈಸ್ ದಿನಾ ಆಗ ಮಡಿವಳ್ಳೋನು ಅಂತಿದ್ರು
ಆಗ ಕಂಡೋರು ಬಟ್ಟೆಗುಳ್ಳೊಗಿತಿದ್ದೆ
ಈಗಿಲ್ಲಾ ರಾಜತನ ಬರತೈತೆ ನನ್ಗೆ
ಈ ಬಟ್ಟೆಗುಳು ಹಾಳಾಗಿ ಹೋಗ್ಲಿ
ಯಾಂವ ನಿಚ್ಚಾ ಹಿಂಡಬೇಕು
ಅಂತ ದಿಂಡುಗೊಳೆಲ್ಲಾ ಬಾಯಾಗ್ಹಾಕಿ ತುಳ್ದ
ಹಾಳಾಗಿ ಹೋಗ್ಲಂತ
ಅಯ್ಯಾ ಕಂಬಕಟ್ಟಿ ಬಡಿತಾರ ನಮ್ಮನ್ನ
ಹಾಳ ಮಾಡ್ಯಾರಂತ ಊರೆಲ್ಲಾ ಕಲ್ತು ಅಂತ
ಹೇಯ್ ಅಗಸೋರನ ಬಡ್ಯೋದಿಲ್ಲ
ಮಡ್ಯೊಲಂತ
ಮಕ್ಕಳು ಅಂಟು ಮೈಲು ತೊಳೆಯೋರು
ಮನಿಮಕ್ಕಳು ತೊಳೆಯೋರು
ಮನಿಮಕ್ಕಳು ತೊಳದ್ಹಂಗಾ
ಬಡಿಬಾರದು ಮನಿಮಗ ಇದ್ದಂಗ
ಆಗ ನಾಕ ಮಾತ ಬೈತಾರ
ನಿನ್ನ ಹಾಳಾಗಿಹೋಗ
ಎಲ್ಲಿ ಕಳ್ದಲೋ ಅಂತರಾ
ಅಷ್ಟೆ ಬೈಯ್ದರೆ ಗಾಳಿಗೋಗ್ತ
ಮತ್ತೆ ತಂದಕಂಬತಾರ ಅವ್ರು ಅಂದ
ಆಗ ತುಳಿದು ಬಿಟ್ಟ
ಮೊಂಡ ಬಾಲ ಮೊಂಡ ಉಗುರು
ಮೊಂಡ ಇನ್ನದರ ಮೂಗು
ಗರಕ್ಕನ ಕೊಯ್ಕಂಡ
ಶಲ್ಯೇದ್ದಾಗ ಗಂಟು ಕಟಿಗ್ಯಂಡ
ಲೇ ನೀವಿಬ್ರು ಹೆಂಡ್ರು ಏನನ್ನಬೇಕು
ಇಲ್ಲದಿದ್ರೆ ನಿಮ್ಮನ್ನ ತಿವಿದು ಬಿಡ್ತೀನಿ ನೋಡು
ಏನನಬೇಕಯ್ಯ
ಹುಲಿಕಡ್ದಾ ನನಗಂಡ ಹುಲಿಕಡ್ಡ ನನಗಂಡ
ಅಂತ ಒಂದ್ಹೇಣ್ತಿ
ಒಂದ್ಹೇಣ್ತಿ ಏನು
ಪುಣ್ಯಾತ್ಮ ಹುಲಿಕಡ್ಡ ಪುಣಿಯಾತ್ಮ ಹುಲಿಕಡ್ಡ ಅನು
ನಾನೇನಂತೀನಿ
ಭೂಪತಿರಾಜಗ ನಾನ್ ಅಳಿಯ
ಭೂಪತಿರಾಜಗ ನಾನಳಿಯ ಅಂತೀನಿ

ಅಳೋದನ್ನ ಬರಲಾಲೇ ನನ್ಗೆ ನಗೋದನ್ನ ಬರಲಾಲೇ
ಯಪ್ಪಾ ಅಂಬತೀವಿಬಿಡು ನಾವಾಗಿ ನಮ್ ಬಾಯೇನು ಸವೇದಿಲ್ಲಾ || ತಂದಾನ ||

ಇಬ್ರು ಹೆಂಡ್ರು ಏನನಕ್ಕಂತ ಬರತಾರೆ ಹಿಂದೇಲೆ
ಆಗ ಇನ್ನವರತಾವಾಗಿ
ಈ ಅಗಸರ ತಿಪ್ಪಯ್ಯ ಮುಂದೆ ಏನನಕಾಂತ ಬರಾರ್ತಾನ

ಯಮ್ಮಾ ಭೂಪತಿರಾಜಗ ನಾನಳಿಯಾ
ಭೂಪತಿರಾಜಗ ನಾನಳಿಯಾ
ಯಮ್ಮೊ ಹುಲೀಕಡ್ಡ ಪುಣ್ಯಾತ್ಮ
ಯಮ್ಮೊ ಹುಲೀಕಡ್ಡ ಧರ್ಮಾತ್ಮಾ
ಸೀ ನೀರು ಕುಡಿಯಂಗ ಮಾಡೀದಾ
ನಮ್ಮೂರಿಗೆ ದೇವ್ರಾದ
ಹೆಂಡ್ರು ಹಿಂದೆ ನುಡಿತಾವ || ತಂದಾನ ||

ಆಗ ಅಗಸೀತಲ್ಲಿಗ ಬಂದ್ರು
ತಳಬಾರು ನೋಡಿಬಿಟ್ರು
ಅಗಸೀತಲ್ಲಿ ನಿಂತೋವ್ರು
ಏಯ್ ತಿಪ್ಪಯ್ಯಾ ಅಗಸರ ತಿಪ್ಪಯ್ಯಾ
ನಿನಗೇನು ಬಂದೈತಲೋ ಮಡವಾಳವ್ನೆ ಅಂದ

ಏಯ್ ತಿಪ್ಪಯ್ಯಂದ್ರೆ ತಿವಿದೇನು
ತಿಪ್ಪ್ಯಾಗ ನೀವು ಬೀಳ್ತೀರಾ
ಇನ್ನು ಲೋಕ ಬಾಳಾದೆ || ತಂದಾನ ||

ಅಬ್ಬ ತಿಪ್ಪಯ್ಯಾ ಅಂದ್ರೆ
ನಮ್ಗ ತಿಪ್ಯಾಗ ಬಿಳಂಗ ತಿವಿತ್ಯಾನಂತೆ
ಯದುಕ್ಕಲೇ ನಿನಗೇನು ಐಲು ಬಂದೇತಾ ಅಂದ
ಏಯ್ ಒಳ್ಳೆ ಒಳ್ಳೆ ಇನ್ನ ದೊಡ್ಡುರು
ಇನ್ನವರತವಾಗಿ ಮೈಸೂರು
ಬೊಂಬಾಯಿ ಹುಬ್ಬಳ್ಳಿ ಧಾರವಾಡದವ್ರ ಬಂದ್ರೆ
ಯಾವನ್ನ ಕೈಲಾಗಲಿಲ್ಲ ಹುಲಿ ಕಡ್ಯಾಕ
ಅರ್ಧಮಂದಿ ಹುಲಿಬಾಯಾಗ ಬಿದ್ದು
ಅರ್ಧಮಂದಿ ಕೈಲಾಗಾದಿಲ್ಲಂತ ಹೋದ್ರು
ನಾನ್ಹೋಗಿ ಮಂಡಭಾಲೆ ಅಂಗೆ
ಬಾಯ್ಯಾಕ ಹಂಗೆ ತಿವಿದು ಬಿಟ್ಟೆ
ಏನಿನ್ನದರ ಚಪ್ಪಚಪ್ಪ ಕಡಿದೀನಿ
ಹುಲಿಕಡ್ಡು ಬಂದೀನಿ ಅಂದ
ಸರೆಬಿಡಪ್ಪಾ ಅಂದ್ರು
ಆಗ ರಾಜಕಛೆರಿಗೆ ಬಂದ್ರು
ಕುರ್ಚಿ ಮ್ಯಾಲೆ ಕುಂತಾನ
ಶರಣು ಮಾವಾ ಅಂದ
ರಾಜ್ಯಾಳಾತವ್ನು ನೋಡ್ದ
ಅರೆ ನಮ್ ಬಟ್ಟೆಗುಳ್ನ ಇನ್ನ ಹಿಂಡೋನು
ಏನಪ್ಪಾ ಮಡಲವ್ನೆ ಅಂದ
ಮಾವಾ ದೊಡ್ಡವ್ರು
ಮಾತುಕೊಟ್ಟು ಕಳೀಬಾರದು
ಜೀವನ್ನ ಕಳೀಕ್ಯೇಬೇಕು
ಏನಂದಿ ನೀನು
ಸಂಪನ್ನ ಜಾತ್ಯಾಗ್ಲಿ ಹುಲಿಕಡ್ದೋರಿಗೆ
ಮನೀಮುಂದೆ ಇನ್ನ ಮಗಳ್ ಕೊಟ್ಟು
ಲಗ್ನ ಮಾಡಿ ಖಳಿಸ್ತೀನಂದಿ

ಮಾವ ಹುಲಿ ಕಡ್ದು ಬಂದೀನಿ ಸೀ ನೀರು ಬಾಯಿತಲ್ಲೇನಾ
ನೋಡು ಮಾವ ಹುಲಿ ಬಾಲಾ ಹುಲಿ ಉಗುರೇ ನೋಡು ಮಾವಾ || ತಂದಾನ ||