ಆಗ ಮಗ ಇನ್ನ ಬರತನಲ್ಲಾ
ಭೂಪತಿ ಪಟ್ಟ ಬಿಟ್ಟಾನ ಇನ್ನ ದಾರಿಮಂದೆ ಹಿಡ್ದಾನಾ
ಹೇಯ್ ಹನ್ನೆರ್ಡು ಗಾವುದಗೆ ಒಂದು ಪಟ್ಟ ಲೋಕ ನೋಡಣ್ಣಾ
ಹನ್ನೆರ್ಡು ಗಾವುದ್ಕ ಒಂದು ಪಟ್ಲ
ಆಗ ದೇವಿಗಿರೀಗೆ ಮಗನ ಹೊಂಟು ಬಂದಾನಾ
ದೇವಿಗಿರಿಪಟ್ಲ || ತಂದಾನ ||

ಭೂಪತಿ ಪಟ್ಣಲಿದ್ದ ದೇವಿಗಿರಿಗೆ ಬಂದ
ಆ ದೇವಿಗಿರಿ ಪಟ್ಲದಾಗ ಏನೈತಂದ್ರೆ
ನಾಗೆಂದ್ರ ಹೊಟ್ಟ್ಯಾಗ ಹುಟ್ಟ್ಯಾಳಪ್ಪ
ನಾಕ ಕೈ ಆಕಿಗಿ ಈಶ್ವರ ಮಠದಾಗ
ದೇವ ಮಠದಾಗ ಹುಟ್ಟ್ಯಾಳ
ದೇವಸ್ಥಾನಿ ಆಕಿ
ಆಕಿ ಏನಂತ ಒಪ್ಸ್ಯಾಳ ಊರಿಗೆ ಅಂದ್ರೆ
ಬಂಡಿ ಗುಗ್ರಿ ಬಂಡಿ ಕೊಡುಬು
ಒಂದು ಮಣ್ಸೇನ ಕೊಡಬೇಕಾಕಿಗೆ
ಆಕಿ ಮೂಗಿನ್ಯಾಗ
ಒಂದು ರಾಕ್ಷಸಿ ಒಂದು ಕರದಿ
ರಾಕ್ಷಾಸಿಗೇನು ಮಣ್ಸೇರು
ಈಗ ಕರ್ಡಿಗೇನು ಬಂಡಿ ಗುಗ್ರಿ
ದಿನಾಲೂ ಕೊಂಡಕೊಂಡು ಬಂದು ಹಾಕಬೇಕಂದ್ರೆ
ಎಲ್ಲಿ ಕೊಂಡ್ತಾಳೆ ಆಕಿ ದೇವಾಸ್ಥಾನಿ
ಬಂಡಿ ಗುಗ್ರಿ ಬಂಡಿ ಕೊಡುಬು ಒಂದು ಮಣ್ಸೇನ
ಯಾರು ಮಾರ್ತಾರ
ಮಣ್ಸೇರ್ ಕೊಂಡಾಕ
ಹಂಗಲ್ಲ ಊರಿಗೆ ಒಪ್ಸಿದ್ರೆ ಅವ್ರೆ ಕೊಡ್ತಾರ
ಊರಿಗೆ ಹೊರಗ ಈಶ್ವರ ಮಟುದಾಗ
ದೇವಸ್ಥಾನಿ ದೇವಿ ಮಟುದಾಗ ಅದ್ಯಾಳ
ಅಯಮ್ಮ್ನ ಕೈಯಾಗ ಇಬ್ರು
ಗುಮಾಸ್ತುರು
ಊರೆಲ್ಲ ಆಗ್ಯೋಗೈತಿ
ಊರಿಗೆ ತಳವಾರರು
ಆಗ ಗಂಡ ಸತ್ತ್ಯೋಗ್ಯಾನ
ಮಗೊಂದು ಅದ್ಯಾನ ಹನುಮಂತ
ಹೆಣ್ಣು ತೆಗ್ದು ಬಂದಾಳ
ಇನ್ನೊಂದು ಎಂಟು ದೀಸೈತಿ ಮದುವಿ
ಆಗ ತಳವಾರು ಬಂದು ಏನಂತ ಹೇಳ್ದ
ಏನಮ್ಮಾ ನಾಯ್ಕರ ಹನುಮಕ್ಕ
ತಳವಾರು ಹನುಮಕ್ಕ
ಈಗ ಬಂಡಿ ಗುಗ್ಗರಿ ಬಂಡಿ ಕಡುಬು
ನಿನ್ನ ಮಗನ್ನ ನೀನನ್ನ ಹೋಗ್ಬೇಕು ದೇವಸ್ಥಾನಿ ಮಟಕ್ಕೆ
ಏ ಯಪ್ಪಾ ಎರಡು ಬಂಡಿ ಗುಗ್ಗುರಿ ಮಾಡಂದ್ರೆ ಮಾಡ್ತಿನಿ
ಎರಡು ಬಂಡಿ ಕಡುಬು ಮಾಡಂದ್ರೆ ಮಾಡ್ತೀನಿ
ಇರೋದು ನನ ಮಗ
ಈಗ ಮಗ ಸತ್ತರೆ
ನನ ಮಗನ್ನ ಮದುವೆ ಮಾಡೋರಿಲ್ಲ
ಈಗ ನಾನು ಸತ್ತರೆ
ನನ ಮನಿಗ ಬೆಳಕಾಗಂಗಿಲ್ಲ
ಯಮ್ಮಾ ಎಂಟು ದಿನೈತಿ ಮದುವೀ
ಹ್ಯಾಂಗ ಮಾಡಬೇಕು ಅಂತ
ತಲೆ ತಲೆ ಹಿಂಡ್ಕಂಡು ದುಃಖ ಮಾಡ್ತಾರ ತಾಯಿ ಮಗ
ಯಪ್ಪಾ ನಾನ್ಹೋತಿನಿ ನೀನು ಮದುವೀ ಮಾಡಿಕೋ
ಇಲ್ಲಮ್ಮಾ ನನ್ಗ ಮದುವಿ ಮಾಡವ್ರು ಯಾರು
ನಾನೇ ಹೋತಿನಿ ನೀನೆ ಇರು ಅಂತಂದ್ರೆ
ಹೆನ್ನೆರ್ಡುದಾರಿ ಎಲ್ಲಿಗಿ ಬರಬೇಕು
ಅಗಸಿಗೇ ಬರಬೇಕು
ಹುಡುಗ ದಾರಿಹಿಡ್ಕೋಂಡು ಬಂದ
ಅಗಸಿ ಮುಂದೇ ಅವರ ಮನಿ
ತಳವಾರ ಮನಿ
ಊರ ಮುಂದೇ ತಳವಾರ ಮನಿ
ಅಳತಿದ್ರೆ
ಏನ್ರಮ್ಮಾ ಏನ್ ಕಳ್ಕಂಡೀರಿ
ಬೆಳ್ಳಿನ ಕಳಕಂಡ್ಯೀರ
ಬಂಗಾರ ಕಳಕಂಡ್ಯೀರ ಮನ್ಯಾಗ
ಏನನ್ನ ಯಾರನ್ನ ಸತ್ತಾರೇನಮ್ಮ
ಹಂಗ ಅಳ್ತೀರಿ ಅಂತ ಕೇಳ್ದ
ಅಯ್ಯೋ ತಮ್ಮಾ ಶರಣಪ್ಪಾ
ನಿಂದು ಯಾವೂರ್ರಂದ್ಳು
ಅಂಬೋತ್ತಿಗೆ ನಂದು ಚಾಂಪುರಪಟ್ಣ
ಕುಲದಲ್ಲಿ ಹಾಲುಗೊಲ್ರು
ನಮ್ಮ ತಂದಿ ಕಾಂಭೋಜರಾಜ
ನನ್ನೆಸರು ಶರಬಂದ ರಾಜ
ನಮ್ಮ ತಂದಿಗಿ ಹುಣ್ಣು ಹುಟೈತಿ
ಮೇಟೌಷಧಿ ತರಾಕ
ಏಳು ಸಮುದ್ರಕ್ಕ ಹೋಗಬೇಕು
ಯಮ್ಮಾ ಈ ದಾರಿ ಹಿಡ್ಕಂಡು ಬಂದೆ
ನಿಮ್ಮೂರಿಗೆ ಬಂದೈತಿ
ಈ ಊರು ಹೆಸರೇನಮ್ಮ ಅಂದ
ದೇವಿಗಿರಿ ಪಟ್ಣಪ್ಪಾ
ಮತ್ತೆ ಯಾಕ ದುಃಖ ಮಾಡ್ತೀರ ಅಂದ
ನೋಡ್ರಿ ಬಳ್ಳಿ ಹೋದ್ರೆ
ಬೆಳ್ಳಿ ಸಂಪಾದಿಸಿಗಂತೀವಿ
ಬಂಗಾರ್ಹೋದ್ರೆ ಬಂಗಾರ ಕಲಿಡ್ತಿವಿ
ಮಕ್ಕಳು ಸತ್ರೆ ಮತ್ತೆ ಮಕ್ಕಳು ಹಡಿತಿವಿ
ಯಪ್ಪಾ ಈಗ ದೇವಸ್ಥಾನಿ ದೇವಿಮಠದಾಗ
ನಾಗೇಂದ್ರನ ಹುಟ್ಟ್ಯಾಗ ಹುಟ್ಟ್ಯಾಳಂತ ಆಕಿ
ನಾಕ ಕೈ ಅಂತ ಆಕಿಗಿ
ಯಪ್ಪಾ ಬಂಡಿ ಗುಗ್ಗ್ರಿ ಬಂಡಿ ಕೊಡುಬುಬೇಕಂತೆ
ಒಂದು ಮಣ್ಸೇನ ಬೇಕಂತೆ ಯಪ್ಪಾ
ಏನ್ ಮಾಡ್ತೀ ಊರೆಲ್ಲ ಕೊಟ್ಟು ಬಿಟ್ಟಾರ
ಲಾಸ್ಟಿಗೆ ನನ್ಗೆ ಬಂದೈತಪ್ಪಾ
ಅಬಾಬ ಹೆಣುಮಗಳು
ಬಂಡಿ ಗುಗ್ಗುರಿ ಬಂಡಿ ಕೋಡಬು
ಒಂದು ಮಣ್ಸೇನ್ ತಿಂತಾಳ ಅವಳು
ಛೇ..

ಅವಳೂ ಯಂತೋಳು ನಾನು ನೋಡ್ಯನ್ನ ನೋಡ್ಪೇನು || ತಂದಾನ ||

ಅವಳು ಯಂತವಳೊ ನೋಡ್ಬೇಕು
ಏನಮ್ಮಾ ತಳವಾರು ಹನುಮಕ್ಕ
ನೀನೇನು ದುಃಖ ಮಾಡ್ಬೇಡ
ಬಂಡಿ ಗುಗ್ಗರಿ ಮಾಡು
ಬಂಡಿ ಕಡುಬು ಮಾಡು
ಐದು ಹಳೆ ಸೀರಿ ಕೊಡು
ಹತ್ತು ಸೇರು ಗೋಧಿ ಬೀಸು
ಬೇಶ್ ನೆನಿಟ್ಟು
ಗೋಧಿ ಹಿಟ್ಟುನಾ
ಏರಡು ಡೆಬ್ಬೆ ಒಳ್ಳೆಣ್ಣೆ ತರಸು
ಆಗ ಬಂಡಿ ಗುಗ್ರಿ ಬಂಡಿ ಕಡಬು
ಒಂದು ಮಣ್ಸೇನ ತಿಂಬಾಕಿ

ದೇವಸ್ಥಾನಿ ನೋಡ್ತೀನಿ ನಾನು ದೇವ ಮಠಕೋತಿನಿ || ತಂದಾನ ||

ಆಗ ತಳವಾರು ಹನುಮಕ್ಕ ಏನಂದ್ಳು
ಏ ಯಪ್ಪಾ ನಿಮ ತಾಯಿ ತಂದಿ
ಎಷ್ಟು ದುಃಖ ಮಾಡ್ತಾರೋ
ಎಷ್ಟು ಮಣ್ಣು ತೂರ್ತಾರೋ
ನಾವು ಜೀವ ಕಳೀಕ್ಯಂಬದ್ಕೆ
ನಿನ್ನ ಜೀವ ಯಾಕ ಕಳಕಂತಿಯಪ್ಪ
ನಾವು ಸಾಯೋದ್ಹೋಗಿ
ನೀನ್ಯಾಕ ಸಾಯೀತೀಯಪ್ಪಾ
ಬ್ಯಾಡಪ್ಪಾ
ನಿನ್ನ ಕರ್ಮ ನಮಗ್ಯಾಕಪ್ಪಾ ಅಂದ್ಳು
ನೀವು ಸಾಯಂಗಿಲ್ಲ
ನಾನು ಸಾಯಂಗಿಲ್ಲ
ಸಾಯೋಳು ಸಾಯಿತಾಳೆ ದೇವಸ್ಥಾನಿ
ಅಂತ ಎಲ್ಲಾ ಮಾಡಿಬಿಟ್ರು
ಆಗ ತಳವಾರು ಬಂದ್ರು ಎರ್ಡು ಬಂಡಿ ಕಟ್ಟಿಗ್ಯಂಡು
ದೇವಸ್ಥಾನಿ ಕೈಯಾಗಿರೋರು
ಏನಮ್ಮಾ ಹನುಮಕ್ಕ ಹನುಮಂತ
ಹಾಂ ಬಂದ್ರು ನೋಡಪ್ಪಾ ಹುಡುಗಾ ಶರಬಂದಾ
ಏನಪ್ಪಾ ಅವ್ರು ತಾಯಿ ಮಗ ಬರಾದಿಲ್ಲ
ನಾನ್ ಬರ್ತೀನಿ ಅಂದ
ಯಾರನ್ನ ಬರ್ಯ್ರಪ್ಪ ನಿಮ್ಮಿಷ್ಠ ದೇವಸ್ಥಾನಿಗಿ
ಬಂಡಿ ಗುಗ್ರಿ ಬಂಡಿ ಕಡುಬು ಏರಿಸಿದ್ರು ಬಂಡಿಗೆ
ಆಗ ಗೋಧಿ ಹಿಟ್ಟು ತಗಾಂಡ
ಐದು ಹಳೇ ಸೀರೆ
ವಂದು ಡಬ್ಬೆ ವಳ್ಳೆಣ್ಣೆ
ಮೂರು ದಡೇವು ಚಂದ್ರಾಯುಧ
ಬಂಡಿಗೆ ಶರಣು ಮಾಡಿ

ಬಂಡಿ ಏರಿ ಬಿಟ್ಟಾನ ಹುಡ್ಗ ಬಂಡಿ ಮ್ಯಾಲೆ ಕುಂತಾನ || ತಂದಾನ ||

ದೇವಿಗಿರಿಪಟ್ಣ ಹೆಣ್ಣು ಗಂಡು
ಯಮ್ಮಾ ಈ ಹುಡುಗ ಬೇರೆ ಊರಹುಡುಗ
ಹೋಗಿ ಬಿಡ್ತಾನಮ್ಮಾ
ಆಗ್ಹೊತಮ್ಮ ಹುಡುಗ ಉಳೇದಿಲ್ಲಮ್ಮ
ಎಷ್ಟು ಚೆಲವಿದೆನಂತ ಕಣ್ಣೀರು ಉದುರುಸ್ತಾರ
ಆಗ ಹುಡುಗ ದೇವಸ್ಥಾನಿ ಮಟುದಾಗ ಬಂದ
ಕಡ್ಡಿ ಬಾಕ್ಲಿ ಎರಡು ಬಾಕ್ಲು ತಟಾದು
ಒಳಕ್ಕ ಬಂದ್ರು ಭಂಡಿ ಹೊಡ್ಡೊಂಡು
ಎಡಕ್ಕೊಂದು ಕೋಣಿ ಬಲಕ್ಕೊಂದು ಕೋಣಿ
ಎಡಕ್ಕೋಣಿದಾಗ ಗುಗ್ರಿ ಹಾಕಿದ್ರು
ಬಲಕ್ಕೋಣಿದಾಗ ಇನ್ನಕೊಡಬು ಹಾಕಿದ್ರು
ಏನಪಾ ಇಲ್ಲಿ ಕುಂತುಕೋ
ನಾವ ಬಂಡೀಗುಳು ಬಿಟ್ಟು ಬರ್ತೀವಿ ಅಂದ್ರು
ಸರೆ ಬಿಡು ಅಂತ
ಗೋಧಿ ಹಿಟ್ಟು ತಗಂಡಾ ಐದು ಹಳೇಸೀರೆ
ಆಗ ಇನ್ನ ಒಂದು ಡಬ್ಬೆ ಒಳ್ಳೆಣ್ಣೆ ತಗಂಡು ಕುಂತ್ಗಂಡ
ಆಗ ಬಂಡಿ ಬಿಟ್ಟು ಬರ್ತಾನಂದ್ರೆ
ಎರ್ಡು ಕಡ್ಡಿ ಬಾಕ್ಲು ತಟಾದು
ಎರಡು ಬಾಕ್ಲು ಮುಚಿದ್ರು , ಬೀಗ ಹಾಕಿದ್ರು
ದೇವಸ್ತಾನಿ ಎಲ್ದು ರೂಮು
ಆ ಕಡೀಗ್ಯಾದಳಪ್ಪ ಗಂಧದ ವರಸುಮ್ಯಾಲೆ
ಹೊತ್ತು ಮುಣುಗಿದ ಮೂರು ಗಂಟೆಗೆ
ಮೂಗಿನ್ಯಾಗಲಿಂದ ಜಾರಿಕಂಡು ಎರ್ಡು
ಆ ದೇವ್‌ಸ್ತಾನಿ ಏನಂತ ವಿಳಾಸ ಹಾಕ್ಯಾಳ ಆ ಮಟಕ್ಕೆ
ಈಶ್ವರ ಮಟಕ್ಕೆ
ಈ ಮೂಗಿನಾಗಿರೋವ ಕರ್ಡಿ ರಾಕ್ಷಾಸಿ
ಯಾವೋನು ಕೊಲ್ತಾನೋ ನನ ಜೀವನದಲ್ಲಿ ಮೂಗಿನಾಗಿರೋವು
ಅವ್ನೇ ನನ್ನ ಜೀವ್ದ ಗಂಡ ಅಂತ ಬೋರ್ಡು ಹಾಕಿದ್ಳು
ಆಗ ಏನ್ ಮಾಡಿ ಬಿಟ್ಟು ತಾವು
ಆಗ ನಿದ್ದಿ ಮಾಡ್ಯಾಳ
ಇವು ಜಾರಿ ಕ್ಯಂಡುವು
ಈ ಹುಡ್ಗ
ಬರತೀವಿ ಬಂಡಿ ಬಿಟ್ಟಂದ್ರ
ಬೀಗ್ಹಕ್ಯಂಡು ಹೋಗಿ ಬಿಟ್ರೆ
ಛ್ಯಾ ಈ ಕಡೆ ಕೊಟೆಡ್ಯಾಗ ಗುಗ್ರಿ ಅದ್ಯಾವ
ಈ ಕಡೆ ಕೊಟ್ಟೆದ್ಯಾಗ ಕೊಡಬು ಅದ್ಯಾವ
ಈ ಕೊಡುಬು ತಿಂಬಾಕ ಏನ್ ಬರತೈತೋ
ಈ ಗುಗ್ರಿ ತಿಂಬಾಕ ಏನ್ ಬರತೈತೋ
ಇಲ್ಲೇ ನೋಡ್ಬೇಕು ನಾನು
ಅಂತಾ ಗೋದಿಟ್ಟು ಕುಣಿ ಮಾಡ್ದಾ
ಕುಣಿ ತುಂಬಾ ಒಳ್ಳೆಣ್ಣೆ ಹಾಕ್ದ
ಐದು ಹಳೇ ಸೀರೆ ಪಣತಿ ಮಾಡಿಟ್ಟ
ಜ್ಯೋತಿ ಮಾಡ್ದ
ಡೆಬ್ಬಿಟ್ಟು ಡಬ್ಬಿ ಮ್ಯಾಲೆ
ದೀಪ ಬೆಳಕು ಮಾಡ್ದ
ಡೆಬ್ಬಿ ಹಿಂದೆ ಬೊಗ್ಗಿ ಕುಂತ್ಕೊಂಡ
ಚಂದ್ರಾಯುಧ ಹಿಡ್ಕುಂಡು

ಮುಂಚ್ಯಾಗೊಂಡು ರಾಕ್ಷಾಸಿ ಬಂತೂ
ರಾಕ್ಷಾಸಿನೆ ಬಂದು ಬಿಡ್ತು ಎಣ್ಣಾ
ನಿಂತುಗೊಂಡು ಅತ್ತಗಿತ್ತಾಗಿ ನೋಡ್ತೈತೊ ರಾಕ್ಷಾಸಿ || ತಂದಾನ ||

ರಾಕ್ಷಸಿ ಬಂತು
ದಿನಾಲು ಮಣ್ಸೇನು ಮುಂದೆ ಕುಂತಿರತಿದ್ದ
ಲಟಕ್ನ ಬಾಯಗಿಟ್ಕಂತಿತ್ತು
ಅವು ಗುಗ್ರಿ ಕೊಡುಬು
ಯಾರಿಗೇ ರಾಕ್ಯಸಿಗಲ್ಲ
ಕರ್ಡಿಗೇ ಅವು
ಮಣ್ಸೇನು ಈ ರಾಕ್ಷಾಸಿಗೆ
ಆಗ ಜೋತ್ಯೋಂದೇ ಉರಿತೈತಿ
ಮಣ್ಸೇನಿಲ್ಲಾಂತ
ಜ್ಯೋತಿ ಮುಂದೆ ನಿಂತ್ಗಂಡು ನೋಡ್ತೈತೆ
ಈ ಡಬ್ಬಿ ಬಗಲಾಗ ಕುಂತೋನು

ದಿಗ್ಗನಂಗ ಎದ್ದಾನಾ
ಹುಡುಗೋ ಡಗ್ಗ ಅಂಗ ಕಡ್ಡಾನ
ಕತ್ರಿ ಸೈಗ್ಯಂಡು ಬಿದೈತೋ
ಎರ್ಡು ತುಂಡು ಬಿದೈತೋ || ತಂದಾನ ||

ಜೀವ ಹೋಯ್ತು
ದೆಗ್ಗನೆದ್ದ ಗರಗ್‌ನೆ ಕಡ್ಡ
ಕತ್ತರಿಸ್ಕ್ಯಂಡು ಬಿತ್ತು
ರಾಕ್ಷಾಸಿನ್ನ ಕೊಲ್ಲಿಬಿಟ್ಟ
ಆ ರಾಕ್ಷಾಸಿನ್ನ ತಗ್ದು
ಗುಗ್ರಿ ಕೋಟಡಿ ವಳ್ಗ
ಮೂಲಿಗೆ ವಗ್ದು ಬಿಟ್ಟ
ಮತ್ತೆ ಕುಂತ್ಕೊಂಡ
ಹುಡುಗ ಡಬ್ಬಿ ಬಗಲಾಗ

ಕರ್ಡಿ ವಂದು ಬರುತೈತೋ
ಗುಡು ಗುಡು ಗುಡುಗುಡು ಅನಕಾಂತ
ಗುಗ್ಗುರಿಗಾಗಿ ಬೊಗಸಿ ಒಡ್ಡಿತೋ
ಕೈ ಚಾಚಿ ಬಿಟೈತೋ
ನೋಡೆ ನಮ್ಮ ಹುಡುಗಾಗಿ
ಏಯ್ ಗರಕ್ಕನ್ಹಂಗೆ ಕಡುದಾನ
ಯರ್ಡು ಕೈ ಕತ್ತರಿಸಿ ಬಿದ್ದಾವ
ಕೈ ಚಾಚಿ ಇನ್ನಾಗಿ || ತಂದಾನ ||

ಕರ್ಡಿವಾಗಿ
ಎರ್ಡು ಕೈ ಕಡ್ಡ
ಹಂಗೆ ಬಿದ್ದು ಬಿಟ್ಟತಪ್ಪ
ಕತ್ತರಿಸಿಗ್ಯಂಡು
ಕತ್ತರ್ಸ ಹೊತ್ತಿಗೆ
ಇನ್ನ ಕೆಳಗೆ ಬಿದ್ದುವು
ಆಗ ಓಡಿ ಬಂದ ಬಿಡ್ತು ಕರ್ಡಿ
ಯಮ್ಮಾ ದೇವಸ್ತಾನಿ
ದೇವ ಮಠದಾಗಿದ್ದಾಕಿ

ಯಮ್ಮಾ ಕರ್ಡಿವಾಗಿ ಇನ್ನಾಗಿ
ನನ್ನ ಕೈ ಕೊಯ್ಯೋನು ಬಂದಾನಾ
ಕೈ ಕೊಯ್ದು ಹೋದ್ವಮ್ಮಾ || ತಂದಾನ ||