ಆಗ ಮಗ ದೇವಗೀರಿ ಬಿಟ್ಟಾ
ವಂದೇ ಗಾವುದ ಎರಡು ಗಾವುದವೋ
ಚಾವುಲ್‌ರಾಜ ಪಟ್ಲಕ್ಕ ಬಂದಾನಮ್ಮ ಮಗನಾಗಿ || ತಂದಾನ ||

ಚಾವುಲ್‌ರಾಜ ಪಟ್ಣಕ್ಕೆ ಬಂದ
ಚಾವುಲ್ ರಾಜನ ಮಗಳೂ
ನೆರ್ತ್ ಐದೊರ್ಷ ಇಂಗ್ಲೀಷು ಮರಾಠಿ
ಹಿಂದಿ ಬೀದಿ ಓದಿ ಬಿಟ್ಟಾಳಪಾ
ಆಗ ಹೊತ್ತ್ ಮುಣಗಲಿ ಸ್ನಾನ
ಮಾಡಾದೆ ಮಾಡಾದೆ ಮಾಡಾದೆ
ಸ್ನಾನ ಮಾಡಿದ ನೀರು
ಆನೆ ವಂಟೆ ಬಡ್ಕೊಂಡು ಹೋತಾವ
ಆಯಮ್ಮ ಮೈತೊಳ್ದ ನೀರುದಾಗ
ಆಕಿ ಏನಂತ ಸುತ್ತು ನಾಕ್ಹಳ್ಳಿ
ಪತ್ರ ಕೊಟ್ರೆ ಯಾವ್ನ ಕೈಲಾಗಲಿಲ್ಲ
ನಾನು ಹೆಣುಮಗಳು ಮೈ ತೊಳ್ದ ನೀರು
ಗಣಮಗ ತುಳಿದ್ರೆ
ಮೂರು ತಿಂಗಳು ಆಯುಸ್ಯ ಕಮ್ಮಿ
ತುಳ್ದರೆ
ನಾನು ಸ್ನಾನ ಮಾಡ್ದ ನೀರು
ಯಾವೋನು ಗಣಮಗ ಎಗ್ರಿಹೋತಾನೋ
ಅವ್ನೇ ನನ್ನ ಜೀವದ ಗಂಡ
ಪಲ್ಟಿ ಹೊಡ್ದವ್ನು ಅವನೇ ನನ ಗಂಡಂತ
ವಿಳಾಸ್ಹಾಕಿ ಬೊರಡ ಹಾಕ್ಯಳ
ಯಾರೆಗರ್ತಾರಪಾ
ಆನೆ ವಂಟೆ ಹೊಡ್ಕಂಡ್ಹೋತಾವ ಸಮುದ್ರ
ಮನ್ಯಾಗಲಿದ್ದ ಬರ್ತಾವಪ್ಪ ನೀರು
ಆ ಹುಡುಗನ್ನಾಡ ಯಾರಿಗ್ಗೊತ್ತು
ಬಂಡೀ ದಾರ್ಹಿಡ್ಕೋಂಡು ಬಂದಾ
ಅದೇ ಮನಿಗೆ ಬಂದ
ಮೂರಂತಸ್ತು ಮಾಳ್ಗಿ
ಬೆಳ್ಳಿಕಡ್ಡಿ ಕೂಟ ಕುದಲಾರಿಸ್ಕಂತಾಳಪ್ಪ
ಯಾರು ಶ್ಯಾಮಗಂಧಿ
ಈ ಹುಡುಗ
ಮ್ಯಾಕ ಯ್ಯಾಕ ನೋಡ್ತಾನ ಆ ಹುಡ್ಗ
ತಲೆ ಬೊಗ್ಗಿಸಿಕೊಂಡು ಬಂದ
ನೋಡ್ದ
ಇದೇನು ಹಾಲುಸಮುದ್ರ
ನೀಲು ಸಮುದ್ರ ಹೊಳದಂಡಿ ಅಂದ
ಇದೇನು ನಾರಯಳ್ಳ
ಅಂತ ಬೊಗ್ಗಿ ನೋಡ್ದ
ಕೂದುಲು ಎಣ್ಣೆ ಬೊಡ್ಕಂಡು ಬರ್ತೈತಿ
ಅಲೆಲೆಲೇ
ಈ ಮನ್ಯಾಗಲಿದ್ದ ಬರ್ತಾವಲ್ಲಲ್ಲ ನೀರು
ಏ ನನ್ನ ಬಸಿ ತಕ್ಕಂಡೈತ್ಯಾ
ಊಟ ತಕ್ಕಂಡೈತಾ ಅಂತ ನೋಡಿದ್ರ
ಇಲ್ಲಾ
ಹೆಣುಮಕ್ಕಳು ಸ್ನಾನ ಮಾಡಿದ್‌ ನೀರು
ಅಲೆಲೆಲೇ
ಯಂತಾ ಹೆಣಮಗಳು ಇರಬೌದಪ್ಪ
ಮೈತೊಳ್ದ ನೀರು
ಈಗ ನಾನು ಇಳ್ದೋದ್ರೆ
ಹೆಣುಮಕ್ಕಳಿಗನ್ನ ಮೂರು ತಿಂಗಳ ಕಮ್ಮಿ
ನನಗೆ ಆವಿಷ ಈ ಜೀವಕ್ಕ
ತುಳಿಬಾರದಂತಾ
ಆಗಿನ್ನವರ ಮಗ ಏನ್ ಮಾಡ್ದಾ

ಮುಂದ್ ಮೂರ ಗೇಣಾದ
ಹಿಂದಕ್ಕೇಳ ಗೇಣಾದ
ಕುಪ್ಪಳ್ಸಿ ಎಗರಿ ಬಿಟ್ಟಾನ
ಲಾಘ ಮಾಡಿ ಬಿಟ್ಟಾ
ಆಕಡಿ ಎಗರಿ ಬಿಟ್ಟಾನ || ತಂದಾನ ||

ಆ ಕಡಿಗೆಗರಿದ
ಈಕಿ ಮ್ಯಾಳಿಗೆ ಮ್ಯಾಲೆ
ಕೂದ್ಲು ಆರ್ಸಿಕ್ಯಂಬಾಕೆ ನೋಡ್ದಳು
ಏ ಯಮ್ಮಾ ಬೆಳ್ಳಗ ಬಿಳೇ ಕೋತಿ ಇದ್ದಂಗ ಇದಾನ
ಗಾಳಿ ಬಂದ್ರೆ ಹೊಡ್ಕಂಡ ಹೋತಾನ
ಜ್ವರಬಂದ್ರೆ ಕುಣಿ ತಯ್ಯಾರು ಮಾಡ್ರಿ ಅಂತಾನ
ಅಂಥವನಿಗೆ ಎಷ್ಟು ಬಲ ಇರಬೌದು ಈತ್ಗೆ
ವಳ್ಳೆವಳ್ಳೆವ್ರು ಇನ್ನವರ್ತವಾಗಿ
ನಡ್ದು ಈಸಲಾಡಿಕ್ಯಂತ ಹೋದ್ರು
ನೀರ ಗೂಡ ಕುಡಿಕ್ಯಾಂತ ವಳ್ಯಾಡಿಕ್ಯಾಂತ ಹೋದ್ರು
ಇವ್ನು ಕೂಪ್ಪಳ್ಸಿ ಎಗರಿ ಬಿಟ್ನೆ
ಛ್ಯ

ಇವನ್ನೆ ನಾನು ಮದುವೆ ಆಗ್ಬೇಕು
ಇವನ್ನೆ ಜಲ್ಮ ಕಲಿಬೇಕೂ
ಮುಂದುಕು ದಾರಿ ಬಿಡಬಾರದು || ತಂದಾನ ||

ಅಂತ ಶ್ಯಾಮಗಂಧಿ
ಏನ್ರೀ ಅಕ್ಕತಂಗೇರು ಇಲ್ಲದ್ಹಂಗ ಹುಟ್ಟಿ ಬೆಳಕಂಡವನೇ
ಹೆಣು ಮಕ್ಕಳು ಇನ್ನ ಕನಿಕರ ಎಲ್ಲದಂಗ ಹೋಗವ್ನೇ

ಹೆಣ್ಸರ ಮ್ಯಾಲೆ ದಯಪಟ್ಟೂ
ನಿಂತು ಮಾತನಾಡಯ್ಯಾ
ಕುಂತು ಮಾತನಾಡಯ್ಯಾ
ಹೆಣ್ಸುರು ಕೂಟ || ತಂದಾನ ||

ಅಬಾ ಹೆಣುಮಕ್ಕಳು ಇಲ್ಲದ್ನಂಗ ಹುಟ್ಟೀನಂತೆ
ಅಕ್ಕ ತಂಗೇರಿಲ್ಲದಂಗ ಬೆಳಕಂಡೀನಂತೆ
ಹೆಣುಮಕ್ಕಳ ಮ್ಯಾಲೆ ದಯಪಟ್ಟು
ನಿಂತು ಕುಂತು ಮಾತಾಡಬೇಕಂತೆ
ಅಂತ ನಿಂತಕಂಡ

ಯಾವೊಳವ್ನೆ ಮ್ಯಾಳಿಗ್ಮೇಲೆ
ನಿನ್ನೆ ಹೆಸರು ನನಗೇಳೋ
ಏನ್ರೀ ನಿನ್ಹೆಸರೂ ನನಗೇಳೂ || ತಂದಾನ ||

ಹೇಯ್ ಯಾವೋಳು ಮ್ಯಾಳಿಗೆ ಮ್ಯಾಲೆ
ನಿನ್ಹೆಸುರು ನನಗ್ಹೇಳು
ಇಲ್ರಿ ನಿನ್ಹೆಸುರು ನನಗ್ಹೇಳು ಅಂದ್ಳು
ಇಲ್ಲಾ ನಿನ್ಹೆಸುರು ಹೇಳ್ಬೇಕು ಅಂದ್ಳು
ಈಗ ನಾವು ಛತ್ರಿಯ ಕುಲ
ನಮ್ಮ ತಂದಿ ಚಾವುಲರಾಜ
ಚಾವುಲರಾಜನ ಮಗಳು ನಾ ಶ್ಯಾಮಗಂಧಿ
ಓಹೋ ಕೇಳವೇ ಛತ್ರಿಯ ಕುಲದವಳೇ
ನೀ ಇನ್ನ ಶ್ಯಾಮಗಂಧಿ
ನಂದು ಚಾಂಪುರ ಪಟ್ಣ
ಚಾಂಪುರ ಪಟ್ಣದಾಗ
ನಮ್ಮ ತಂದಿ ಕಾಂಭೋಜರಾಜ
ನಾವು ಹಾಲು ಗೊಲ್ರು
ನನ್ಹೆಸರು ಶರಬಂದರಾಜ
ನಾವು ಗೊಲ್ರು ಕುಲ್ದಾಗ
ನಮ್ಮಪ್ಪಗೆ ಬೆನ್ನಿಗೆ ಹುಣ್ಣು ಆಗೈತಿ
ಏಳು ಸಮುದ್ರ ಆಕಡಿಗೆ
ಮೇಟೌಷದ್ದ ತರಾಗ ಹೋತಿನಿ ನಾನು
ಓಹೋ
ಏನ್ರೀ
ಮೇಟೌಷದ್ದ ತರಾಕ ಹೋತಿಯಾ
ಯಾರತಲ್ಲಿಗೇ
ಹನ್ನೆರ್ಡು ಕೈ ಆದಿಶಕ್ತಿ ಎದಿನಗಂಧಿ ತಲ್ಲಿಗೆ
ಅಯ್ಯೋ ಯಾರ್ರೀ
ಎದಿನಗಂಧಿ ಅಂದ್ರೆ ನಮಕ್ಕ
ಏಳು ಸಮುದ್ದ ಆಕಡಿಗೆ ನಮ್ಮಕ್ಕ
ಏಳು ಸಮ್ರುದ್ದ ಈ ಕಡಿಗೆ
ನಾನು ಶ್ಯಾಮಗಂಧಿ ತಂಗಿ
ಗಾಜ್ನ ಬುಡ್ಡು ಮದ್ದು ಥೈಥೈಥೈ ಕುಣೀತೈತಿ
ಬೊಳ್ಳಿಟ್ರೆ ಉರೀತೈತಿ ಭೂಮಿಮ್ಯಾಲೆ ಬಿದ್ರೆ ತೂತು ಬೇಳ್ತೈತಿ
ಕೈಚಿಲ್ದಾಗ ಗಾಜ್ನಬುಡ್ಡು ತಲೆ ಅಡೆಯಲ್ಲಿ
ನಮಗೆ ಮದ್ದಿದ್ರೆ ನಿದ್ದಿ
ಮದ್ದಿಲ್ದದಿದ್ರೆ ನಿದ್ದಿ ಬರಾದಿಲ್ಲ
ಏನ್ರೀ ಆಕಿ ಅಕ್ಕ ನಾನು ತಂಗಿ
ಆಕಡಿಗೆ ಆಕಿ ಆದಾಳ ಈಕಡಿಗೆ ನಾನಿದ್ದಿನಿ || ತಂದಾನ ||

ಬಾರಯ್ಯ ಮನ್ಯಾಕ ಅವುಷದ್ದ ಕೊಡ್ತೀನಿ
ಏಳು ಸಮ್ರುದ್ದಾಗೋತಿಯೋ ಯಾಕ್ಹೋತಿ ನೀನಾಗಿ || ತಂದಾನ ||

ಏಳು ಸಮ್ರುದ್ದ ತಟಾದು ಯಾಕ್ಹೋತಿ
ಬ್ಯಾಡ ಬಾ ಇಲ್ಲಿಗೆ
ನನ್ನ ಮನ್ಯಾಕ ಬಾ
ನಿನ್ಗೆ ಆವಷದ್ದ ಕೊಡ್ತೀನಂದ್ಳು
ಅಬಾ
ಆಕೆ ಅಕ್ಕಂತೆ ಈಕೆ ತಂಗ್ಯಂತೆ
ಈಕೆ ಇನ್ನವರ ಮನ್ಯಾಗೈತಂತೆ ಅವುಷದ್ದ
ಮೇಟೌಷದ್ದ ಐತಂತೆ
ಪರಮಾತ್ಮಾ
ಈಕಿನಲ್ಲಿ ಇದ್ರೆ ನನ್ಗೆ ಕೊಟ್ರೆ
ನಾಳೆ ಹೋಗಿಬಿಡ್ತಿನಿ ಊರಿಗೆ
ಅಂತ ಮನೀ ಸುತ್ತ ತಿರುಗಿದ ಮನ್ಯಾಕ ಹೋಗಾಕ
ಬಾ ಅಂದ್ಳು ಮನ್ಯಾಕ
ಮನಿ ಸುತ್ತ ತಿರಿವಿದ್ರೆ
ಆ ಮನಿಗೆ ಬೆಂಕಿ ಹಚ್ಚಿ ಬೇಲಿ ಬಡಿಯಾ
ಬಾಕ್ಲಿಲ್ಲ ಪಾಂಟಗಿಲ್ಲ
ಮಾಳ್ಗಿ ಮ್ಯಾಲೆ ಮಾಳ್ಗಿ
ಮಾಳ್ಗಿ ಮ್ಯಾಲೆಮಾಳ್ಗಿ
ರೂಮ್ ಮ್ಯಾಲೆ ರೂಮೈತಪಾ
ನಿಚ್ಚಣ್ಹಾಕಬೇಕು ಮನಿ ಎರಬೇಕು
ನಿಚ್ಚಣ್ಹಾಕಬೇಕು ಮನಿ ಇಳಿಬೇಕು
ಪಾಂಟಿಗಿಲ್ಲ ಫೀಟಿಗಿಲ್ಲ
ಹೇಯ್ ಶ್ಯಾಮಗಂಧಿ
ನಿನ ಮನಿಗೆ ಬೆಂಕ್ಯಚ್ಚಾ
ಆಗ ಪಾಂಟಿಗಿಲ್ಲ ಫೀಂಟಿಗಿಲ್ಲ
ಹೆಂಗ ಬರ್ಲಿ ಮಾಳಿಗೇರಿ ಅಂತ ಕೇಳ್ದ
ಇಲ್ರೀ ನಿಚ್ಚಣಿಲ್ಲೇನ್ರಿ ಅಂದ್ಳು
ನಿಚ್ಚಗಿಲ್ಲ ಪಚ್ಚಣಿಲ್ಲಂದ
ನೋಡ್ರೀ ನಾನು ಕುಂದ್ರೋ ತೊಟ್ಲ ಬಿಡ್ತೀನಿ
ತೊಟ್ಲದಾಗ ಕುಂತ್ಕೊ
ಮ್ಯಾಕ ಎಳಕಂತೀನಿ ಅಂದ್ಳು
ಎಷ್ಟು ಪರಾಕ್ರ ಹೆಣುಮಗಳಾಗ್ಲಿ
ವಯಸುದಲ್ಲಿ ಎಷ್ಟು ದೊಡವಳಾಗ್ಲಿ
ಗಣುಸುರಿಗೆ ತಡ್ಯೆಂಗಿಲ್ಲ
ಹೆಣುಸುರಿಗೆ ಇನ್ನ ಗಣುಸುರಿಗೆ ಈಡಾಗಂಗಿಲ್ಲ
ಕೇಳವೇ
ನನ್ನ ಎಳಿಯಾಕ ತೊಟ್ಲದಾಗ ಕುಂತ್ರೆ
ನೀನ್ನ ಎಳಿಯಾಕ ಕೈಲಾಗಾದಿಲ್ಲ
ಅದೇ ಗಾಜ್ನ ಬುಡ್ದಿ ಮದ್ದು ತೊಟ್ಲದಾಗಿಟ್ಟು

ಕೆಳಗಾ ನೀನು ಬಿಡಾಲೇ
ತಗಂಡು ನಾನು ಹೋತಿನಿ
ಭೋಪುಣ್ಯ ಬರುತೈತೋ
ನಿನ್ಗೇ ಕೈಯತೀ ಮುಗಿತಿನಿ
ನಮ್ಮ ತಂದಿ ಬೇಸಾತನಾ || ತಂದಾನ ||

ನಿನ್ಗ ಶರಣು ಮಾಡ್ತಿನಿ
ಅಬಾ ಆಗ ತೊಟ್ಲದಾಗ ಇಡಬೇಕಂತೇ
ಗಾಜ್ನಬುಡ್ಡು ಮದ್ದು ಮೇಟೌಷದ್ದ
ಬಿಡಬೇಕಂತೆ ನನ್ಗ ಕೈಮುಗಿತ್ಯಾನ
ಏನ್ರೀ ನನಗ್ಯಾಕ ಕೈಮುಗೀತಿರಿ
ನಿನ್ಗೇ ಕೈಮುಗಿತೀನ್ರೀ
ಸರ್ರೀ ಗಾಜ್ನ ಬುಡ್ಡು ತೊಟ್ಲುದಾಗಿಟ್ಟು ಬಿಡುವಾಗ
ಕೈಯಾಗ ಸರಪಣ ಜರಕ್ಕ್ನ ಜಾರಕಂಡೊಯ್ತು
ಆಗ ಕತ್ತಿಕೆಬ್ಬಿಣ ಮನಿ
ಉಕ್ಕನಮನಿ ಹೆಂಚಿನ ಮನಿ ಬಳೇಸೂರು ಮಾಳ್ಗಿ ಬಿದ್ರೆ
ಗಾಜ್ನ ಬುಡ್ದು ವಡ್ದೋಗ್ತಾವ
ಭಗ್ಗಂತ ಮೊದ್ದು ವಡ್ದೋಗ್ವಾಗ

ಮನಿ ನಂದು ಸುಟ್ಟೋತ್ತಾ
ಇನ್ನ ಧಗ ಧಗ ಉರಿತೈತೋ
ಬೂದಿಯಾಗಿ ಹಾಳಾತಿರಿ || ತಂದಾನ ||

ಧಗ ಧಗ ಉರಿದೋಗ್ತಾ
ನಾನು ಬೂದ್ಯಾಗೋತಿನಿ
ಮತ್ತ ಹೆಂಗ ಅಂದ
ಇಲ್ರೀ ತೊಟ್ಲದಾಗ ಕುಂತ್ಕೊ
ನಾನ್ ಎಳಿತಿನಿ
ಬಡುಗ್ಗನ ಕೈಯಾಗ ಸರಪನ ಜಾರಿಕಂಡರೇನ
ನೀನು ಲಾಗುವೊಡಿಯವನು ಕುಪ್ಪಳ್ಸಿ ಎಗರಿಬಿಡ್ತಿ
ನಿನ್ನ ಜೀವ ಉಳಿತೈತಿ ಅವುಷದ್ದ ಉಳಿತೈತಿ
ನಾನು ಉಳಿತಿನಿ ನನ ಮನಿ ಉಳೀತೈತಿ
ಹೆಂಗುಸುರಿಗೆ ಎಷ್ಟು ಮಾತೈತ್ನೋಡು
ಗಣಸುರು ಕೈಯಾಗ ಹೆಣಸುರೇ ಸಾಯೋದು ಅನ್ಬೇಕ
ಈಗ ಜೀವದಲ್ಲಿ
ಈಗ ಅಷ್ಟು ಪರಾಕ್ರ ಗಂಡುಮಗ
ಹೆಣುಮಗಳ ಕೈಯೀಗೆ ಸಿಕ್ಕ ಬಿಟ್ಟ
ಮದ್ದಿಲ್ಲ ಪದ್ದಿಲ್ಲ
ನಮ್ಮಪ್ಪ ಬರೋತನ್ಕ ಈತ್ಗ ಮನ್ಯಾಗ ಕುಂದ್ರಿಸಿಕೋಬೇಕು
ನಮ್ಮಪ್ಪ ಬಂದಮ್ಯಾಲೆ ನಮ್ಮಪ್ನ ಹಿಡ್ಕಂಡು
ಈತನ ಜೀವ್ಗ ನಾನು ತಾಳಿ ಕಟ್ಟಿಸಿಗೋಬೇಕಂತ ಆಕಿ
ಕೆಳಗಿದ್ದೋನು ಯೇಟೊತ್ತು ನಿಂದ್ರತಾನ
ಕುಂತಗಂಡ್ರಲ್ಲ ಶಾಂತಾಗೋದು
ತಾಸ್ಹೋತ್ತು ಕುಂತಗೋಬೇಕ
ಅಂತ ಆಗ ಏನು ಮಾಡಿಬಿಟ್ಳು
ಬಾಮಾ ಈ ಕಾಲಕ್ಕೆ ನಾನೇ ಇಲಿಚಾದೆ
ನೀನೇ ಬೆಕ್ಕಾದೆ

ಬಾಮ್ ಬೆಕ್ಕ್ ಕೈಗಿ ಸಿಕ್ಕೀನಿ
ಹೆಣ್ಸರ ಕೈ ಸಿಕ್ಕೀನಿ
ಧರ್ಮನ್ನ ಪಾಪಾಗ್ಲಿ
ನೀನೆ ತಾಯಿ ನೀನಾಗಿ
ಹೆಂಗನ್ನ ಮಾಡಾಲೆ || ತಂದಾನ ||

ಜಲ್ಮ ದಾಗ
ನೀನೇ ತಾಯಿ ನೀನೆ ತಂದಿ
ನಿನ್ನ ಕೈಗಸಿಕ್ಕಿನಿ
ಏನನ್ನ ಮಾಡು
ಏನ ಪರಿವಿಲ್ರೀ
ನಿನ್ ಜೀವಕ್ಕ ನನ್ ಜೀವೈತಿ
ನನ್‌ಜೀವ ಕಳ್ಕಂಡು ನಿನ್‌ಜೀವ ಉಳಿಸ್ತಿನಿ
ಏನ್ ಪರಿವಿಲ್ಲಾ
ಅದರಗ್ಹೇನು ಯಸನ ಬ್ಯಾಡ
ಅಂಬೋತ್ತಿಗೆ ಆಗ ತೊಟ್ಲ ಬಿಟ್ಳು
ಹೆಂಚಿನ ಮನಿ
ಹೆಂಚಿನ ಮನೀಮ್ಯಾಲೆ ಕೆಬ್ಬಿಣ ಮನಿ
ಕೆಬ್ಬಿಣ ಮನಿ ಮ್ಯಾಲೆ ಬಳೇಸೂರು ಮಾಳಿಗೆ
ಬಳೇಸೂರು ಮ್ಯಾಳಿಗೆ ಮ್ಯಾಲೆ
ಸಿಮಂಟು ರೂಮನ್ಯಾಗ ಆಕಿರೋದು
ಆಗ ಮಗ ಏನ್ ಮಾಡ್ದ
ತೊಟ್ಲಕ್ಕ ಕೈಮುಗ
ಕೈಚೀಲ ಚಂದ್ರಾಯುಧ ತೊಟ್ಲದಾಗಿಟ್ಟುಕೊಂಡು

ಮಗ ತೊಟ್ಲದಾಗೆ ಕುಂತಾನ
ಎಳಿಯ ಭಾಮ ಕುಂತೀನಿ || ತಂದಾನ ||

ಎಳೀ ಕುಂತಿನಂದ
ಎಳಿ ಕುಂತಿನಂಬತ್ತಿಗೆ
ಆಗ ಹೆಂಚಿನ ಮ್ಯಾಕೆಳದ್ಳು
ಕೆಬ್ಬಿಣ ಮನಿ ಮ್ಯಾಕ ಎಳ್ಕಂಡ್ಳು
ಎಳಕಂಡವಳು ಹಾಂಗೆ ಎಳದಿದ್ರೆ ಬೇಸಿತ್ತು
ಗಣಮಗ ಕುಂತ್ರೆ ವಜ ಬರಬೇಕು
ಸರಪನ ಕೈಯಾಗಾ
ತೊಟ್ಲದಾಗ ಕುಂತವ್ನು
ಅವುರ ಬರುತೈತಿ
ಕುಂತಾನೊ ಇಲ್ಲಂತ

ನಿಂದ್ರಿಸಿ ಬೊಗ್ಗಿ ನೋಡ್ಯಾಳೆ
ಬೊಗ್ಗಿ ನೋಡುವೊತ್ತಿಗೆ
ಯಾರ್ಡು ಕಣ್ಣ ಥಳಕ್ ಅಂದಾವ
ವಜ್ರ ಕಂಡ್ಹಂಗ ಆಗ್ಯಾದೆ || ತಂದಾನ ||

ಆ ಗಂಡಮಗ ನೋಡೋ ಹೊತ್ತಿಗೆ
ವಜ್ರ ಕಂಡಂಗಾಯ್ತು
ಹಂಗೆ ಕಣ್ಮುಚ್ಚಿ
ಸರಪನ ಬಿಟ್ಟು ಬಾರಲುಬಿದ್ಳು
ಮೂರ್ಚೆ ಹೋಗ್ಬಿದ್ಳು
ಮೂರ್ಚೆಗಂಡು ಬಿದ್ದೋತ್ತಿಗೆ

ತೊಟ್ಲ ಇನ್ನ ನೋಡಣ್ಣಾ
ಕತ್ರಿ ಕೆಬ್ಬಿಣ ಮನಿ ಮ್ಯಾಲೇ
ಬಾಕ್ಕ ಬಾರ್ಲ ಬಿದ್ದು ಬಿಟ್ಟೈತೋ
ಕಾತ್ತರಸಿಕ್ಯಂಡು ಮ್ಯಾಗ ಬಿದ್ದಾನೆ
ಆರು ತುಂಡುವಾಗ್ಯಾವ || ತಂದಾನ ||

ಆರು ಮೊಂಡಾಗಿ ಬಿದ್ವು
ಕೆಬ್ಬಣ ಮನೀ ಮ್ಯಾಲೆ
ಬಾರ್ಲ ಬಿದ್ದು ಬಿಡ್ತು ತೊಟ್ಲ
ಸರಪನ ಬಿಡೋತ್ತಿಗೆ ಮ್ಯಾಲಿದ್ದ ಬಾರ್ಲ ಬಿದು ಬಿಡ್ತು
ಕತ್ತರಸಗ್ಯಂಡು ಹೋದ
ಆರು ತುಂಡಾಗಿ ಬಿದ್ದ
ಯಾವಾಗೆಗರ್ತಿ ಬಾರ್ಲ ತಿರುವಿನಿ ಬಿದ್ದಾಗ
ಆಗ ತಾಸತ್ತಿಗೆ ಈಕೆ ಎದ್ದು ಬಿಟ್ಳು
ನೋಡ್ದ್ಯಾ
ಹೆಣುಸ್ಸಾಗಿ ಹುಟ್ಟೋ ಬದುಲು
ದಾರ್ಯಾಗ ಗಿಡಾಗಿ ನಿಂತಗಂಬೋದು ಒಳ್ಳೇದು
ಅಷ್ಟು ಪರಾಕ್ರ ಗಣಮಗನ್ನ ಕರೆ ಕಳ್ಸಿ
ಹೆಣುಸುರು ಕೈಯಾಗಲ್ಲ ಗಣುಸುರು ಸಾಯೋದು
ಸಾವೇ ಇನ್ನ ರಾಕ್ಷಾಸುಗುಳು ಕೊಲ್ಲಿಬಿಟ್ಟೀವಲ್ಲ
ಹುಲಿ ಜೀವ ತಗಿದಿನಲ್ಲ
ಆತ ಸತ್ತ ಮ್ಯಾಲೆ ನಾನ್ಯಾಕಿರಬೇಕು
ಈಗ ಇನ್ನ ಬಿಡ್ತಾರ ಗವರ್ ಮೆಂಟು
ಇನ್ನವರ ಪೋಲಿಸ್‌ವರು
ಹೇಯ್ ನೀನು ಮದುವಿಲ್ದಂಗ ಮನ್ಯಾಗಿದ್ದು
ನೀನು ಸ್ನಾನ ಮಾಡ್ದ ನೀರು ಯಾವೋನು ಲಾಗ ಹೊಡಿತಾನೋ
ಯಾವಾಗ ಮಾಡಿಕ್ಯಾಬೇಕು ನೀನು
ಬಂದ ಗಣಮಕ್ಕಳ್ನಲ್ಲ ಕರದು
ಏಸ್ ಮಂದೀನ ಕೊಲ್ಲಬೇಕಂತ
ಅಧೀಯಂತ ನನ್ನ ಹಿಡಕಂಡು ಹೋತಾರ
ಛೀ
ಆತ್ನ ಜೀವೋದ ಮ್ಯಾಲೆ
ನನ್ನ ಜೀವ ಯಾಕಿರಬೇಕಂತ
ನಾನು ಬಿದ್ದು ಸಾಯ್ತೀನಂತಾ

ಉಟ್ಟಿದ್ ಸೀರಿ ಕಾಸ್ಯಾಕಿ
ಮುತ್ತಿನ ಸೆರುಗು ನಡುವಿ ಸುತ್ತಿ
ಜೀವಂತ ಬಿದ್ದಾಳಾ
ತೋಥಢಿ ತನು ಕತ್ತರಿಸಿ ಬಿದ್ದಾಳ
ಆರು ತುಂಡು ವಾಗೈತೋ || ತಂದಾನ ||