ಆರು ತುಂಡಾಗಿ ಬಿದ್ಳು
ಜೀವೀ ಅಂತ ಕುಪ್ಪಳ್ಸಿ ಹಾರಿಬಿಟ್ಳು
ಆಗ ಕತ್ತರಸಿಗ್ಯಂಡು ಬಿದ್ದು ಬಿಟ್ಳು
ಆರು ತುಂಡು
ಅವು ಆರು ತುಂಡು ಇವು ಆರು ತುಂಡು
ಹನ್ನೆರ್ಡು ತುಂಡು ಬಿದ್ದು ಬಿಟ್ಟುವಪ್ಪ ಗುಡ್ಡ ಗುಡ್ಡ
ಹೆಂಚಿನಮ್ಯಾಲೆ ಬಿದ್ದಾವಪ್ಪಾ
ಆರ್ ಆರ್ ಹನ್ನೆರ್ಡು ತುಂಡು ಕೆಬ್ಬಿಣ್ದು
ಕೆಬ್ಬಿಣ ಮನ್ಯಾಗಲಿದ್ದ
ತಂದಿ ಬರಬೇಕಲ್ಲ ಬುತ್ತಿ ತಗಂಡು
ಏನಮ್ಮಾ ಮನಿ ದಾಸಿದವರೇ
ಬುತ್ತಿ ತಾವು ತಗೋಂಡ್ಹೋಗ್ರಿ
ಹಾಲು ಸಕ್ಕರಿ ಗೋದಿ ರೊಟ್ಟಿ
ತಗಂಡ್ಹೋಗಿ
ನನ ಮಗಳು ಇನ್ನ ಶ್ಯಾಮಗಂಧಿ
ತೊಟ್ಲು ಬಿಡಂದ್ರೆ
ದಿನಾ ಒಂದ ತೊಟ್ಲು ಬಿಡ್ತಾಳ
ತೊಟ್ಲುದಾಗಿಟ್ಕಂಡ್ರೆ ಮ್ಯಾಕೆಳ್ಕಂತಾಳ
ಆಕೆ ಊಟ ಮಾಡ್ತಾಳ ಮ್ಯಾಲೆ
ಕೊಟ್ಟು ಬರ್ಹೋಗ್ರಿ ಅಂದ ಬಂದ್ರು
ಏನಮ್ಮಾ ಶಾಮಗಂಧಿ
ಮೂರಂತಸ್ತ ಮನ್ಯಾಗಿರಾಕಿ
ತೊಟ್ಲ ಬಿಡು ಬುತ್ತಿ ತಂದೀವಿ ಜೀವಕ್ಕ
ಏನಪ್ಪಾ ಅಂತ ತೊಟ್ಲು ಬಿಡುತಿದ್ಳು ದಿನಾ
ಅವತ್ತು ಜೀವಿಲ್ಲಲ್ಲ
ಶಾಮಗಂಧಿ ಶಾಮಗಂಧಿ
ಶಾಮಗಂದಿಲ್ಲ ಪಾಮಗಂದಿಲ್ಲ
ಬುತ್ತಿ ತಗಂಡು ವಾಪ್ಪಾಸ ಬಂದ್ರು
ಏನ್ರೀ ಚಾವುಲರಾಜ
ಮೂರಂತಸ್ತ ಮನ್ಯಾಗಿರಾಕಿ
ಇನ್ನ ಇಳ್ಕೊಂಡು ಯಾವೋನಿಂದ್ಹೋಗ್ಯಾಳೋ
ನಿನ ಮಗಳು ಮೂರು ಸರ್ತಿಯಲ್ಲ
ಎಂಟುಸರ್ತಿ ಕೂಗ್ದರೆ ಇನ್ನ ಇಲ್ಲ ಮನ್ಯಾಗ
ಇಳೇ ಮನ್ಯಾಲ್ಲ ಏರಾ ಮನ್ಯಾಲ್ಲ
ಪಾಂಟಿಗಿಲ್ಲ ಫೀಂಟಿಗಿಲ್ಲ
ಈಗ ನಡ್ರೀ ನನ ಮಗಳು
ಯಾಕ ಮನ್ಯಾಗಿಲ್ಲಾಂತ
ನಿಚ್ಚಣ್ಣಿ ತಗಂಡು ಬಂದ್ರು
ಬಂದು ನಿಚ್ಚಣ್ಹಾಕಿ ಏರಿಬಿಟ್ರು
ಕೊಲ್ಲು ಮನೆಮ್ಯಾಕೇರಿದ್ರು
ಕೊಲ್ಲು ಮನೆ ಮ್ಯಾಕೆ ಬಂದು
ಹೆಂಚಿನ ಮ್ಯಾಲಿನ್ಮನಿಗೆ ಬಂದ್ರು

ಹೆಂಚಿನ ಮನಿದಾಗಮ್ಮಾ
ಆರಾರ ಹನ್ನೆರಡು || ತಂದಾನ ||

ತುಂಡಾಗಿ ಬಿದ್ದು ಬಿಟ್ಟಾಳಪ್ಪಾ ಕತ್ತಿರಿಸಿಗ್ಯಂಡು
ಆ ಹುಡುಗುರು ರ್ವಾಗಿಲ್ಲ ಜಡ್ಡಿಲ್ಲಾ
ವಂದೇಟಿಗೇ ಕತ್ತಿರಿಸಿಗ್ಯಂದು ಬಿದ್ದಾನಲ್ಲ
ಜೀವಿದೋನು ಮಕ ಕಾಣ್ದಂಗ ಕಾಣತೈತಪ್ಪಾ
ಮೇಘದಾಗ ವಜ್ರ ವಜ್ರ ಕಂಡಂಗ ಸತ್ತೋಂದು ಮಕಾ
ಥಳ ಥಳ ಥಳ ಥಳಾ
ಮಿಂಚು ಹೊಡಿತಾನ ಹುಡುಗಾ
ಮಗುಳು ಇನ್ನ ಕೆಡಿವಿಕೊಂಡು ಸತ್ರೇನಾ
ಮಗಳು ತೆಲಿಹಿಡ್ಕಂಡು ದುಃಖ ಮಾಡಾದಿಲ್ಲ
ಆ ಹುಡುಗನ್ನ ತೆಲ್ಹಿಡಕಂಡು ದುಃಖ ಮಾಡ್ತಾನ
ಯಾರೂ ಚಾವುಲ್ರಾಜ

ತಮ್ಮಾಯ್ಯಾ ತಾಯಿ ನಿನ್ನ ಹಡದಾಳಪ್ಪಾs
ತಮ್ಮಾಯ್ಯಾ ಊರು ಯತ್ತಾ ನಿಂದು ಹುಡುಗಾ
ಯ್ಯಾಊರು ಯತ್ತಾಗಪ್ಪಾ ನಿಂದು ಲೋಕಾ
ಯಾಪ್ಪಾ ಎಲ್ಲಿ ನೀನು ಜಲುಮ ಕಳಿಬಾರದೋs
ಎಲ್ಲಿ ಕಳಿಬಾರ್ದು ನನ್ನ ಮಗಳ ಮನ್ಯಾಗ ಕಳಿಬೇಕಂತ ಐತ್ಯಾನಿನ್ನ ಜೀವಾ
ಯಪ್ಪಾ ಪಾಪಿ ಮನ್ಯಾಗ ಜೀವ ಕಳಿದಿಯೆನೋs
ಕರ್ಮದ ಮನ್ಯಾಗ ಬಂದು ಜೀವ ಬಿಟ್ಯೇನಪ್ಪಾ ಹುಡುಗಾ || ತಂದಾನ ||

ಗುಡ್ಡ ರೀತಿ ದುಃಖ ಮಾಡ್ತನಪ್ಪ
ತಂದಿ ಚಾವುಲರಾಜ
ತಮ್ಮಾಯ್ಯಾ ದೇಶ ಯಾವ ಪಟ್ಣ
ಈಗ ನಿಮ್ಮ ತಾಯಿ ತಂದಿ
ಎಷ್ಟು ಗೋಳಾಡ್ತರೋ
ನೀನು ಎಲ್ಲಿ ಸಾಯಿ ಬಾರದ್ದು
ನನ್ನ ಕರ್ಮದ ಮನ್ಯಾಗ ಬಂದು
ಜೀವ ಬಿಡುಬೇಕಂತ ಐತ್ಯೇನೋ ನಿನ್ನ ಜೀವಕ
ಅಂತ ದುಃಖ ಮಾಡ್ತಾನ
ಆಗ ನೋಡ್ದರು ದೊಡ್ಡೋರು ಬುದ್ದಿವಂತ್ರು
ಹೇಯ್ ಯಂಥೋನೈಯಾ
ನೀನು ತೆಲಿಹಿಡ್ಕಂಡು ದುಃಖ ಮಾಡ್ತೀ
ನಿನ್ನ ತೆಲೆನ್ಹಾಡ
ನಿನ್ನ ತೆಲೆ ಹೋಗ್ತೈತಿ
ಏನಾಗ್ತದ
ಹೋಗಯ್ಯಾ ಯೇಸುಮಂದಿ ಕರದು
ನಿನ ಮಗಳು ಕೊಲ್ಲಬೇಕಂತ
ಇದ್ದರಂತ ನಿನ್ಹ್ನಿಡಕಂಡ್ಹೋಗಿ ಹಾಕ್ತಾರ
ಮತ್ತೆ ಹ್ಯಾಂಗ ಮಾಡ್ಬೇಕಪಾ
ಸ್ಟೀಲ್‌ಪೆಟ್ಟಿಗೆ ತಂದು ಪೆಟಗ್ಯಾಗ
ಆರಾರು ತುಂಡಿಟ್ಟು ಬಿಡು
ಕೈ ಚೀಲ ದಡೇವು ಚಂದ್ರಾಯುಧೆ
ಎಲ್ಲಾ ಇಟ್ಟು ಬಿಡು ಬೀಗ್ಹಾಕು
ಈಗ ಬಾಯಾಗ್ಹಾಕಿದ್ರೆ ಕೇಸೇ
ಹೂಳಿಕ್ಕಿದ್ರೆ ಕೇಸೇ
ಈಗಿನ್ನ ತಾವ ಸುಟ್ರೇ ಕೇಸೇ
ಮತ್ತೆ ಹ್ಯಾಂಗ ಮಾಡಬೇಕಲೆ
ಏನಿಲ್ಲಾ ಹೊಳಿದಂಡ್ಯಾಗ ವಗ್ಡು ಬಿಡ್ರಿ
ಪೆಟ್ಟಿಗಿನಾ
ಆಗ ಏಳೆದಂಡ್ಯಾಗ ವಗ್ದರೆ

ಹೊಡಕಂಡೆ ಹೋತೈತೋ ನೀರು ಮ್ಯಾಲೆ ಕೇಸಾಗಿ ನಡ್ಯದಿಲ್ಲ || ತಂದಾನ ||

ನೀರು ಮ್ಯಾಲೆ ವಡ್ಕಂಡ್ಹೋತ್ತ
ನಮ್ಗ ಕೇಸ್ ಸಿಗಾದಿಲ್ಲ ನಮ್ಮನ್ಹಿಡೇದಿಲ್ಲ
ನಮ್ಮನ್ನಿಡೇದಿಲ್ಲಾ ನಮ್ಮನ್ನ ಹಾಕಾದಿಲ್ಲಾ
ನಿನ್ನ ಹೊಲಾ ಮನಿ ಜೀವ
ಎಲ್ಲಾ ಉಳಿತೈತಿ ಅಂದ
ಸರೆ ಬಿಡಾಂತ
ಪೆಟ್ಟಿಗ್ಯಾಗಿಟ್ರಪ್ಪ
ಆಗ ಹೊತ್ಕಣ ಬಂದ್ರು
ಹೊಳಿದಂಡ್ಯಾಗ ವಗ್ಡು ಬಿಟ್ರು
ವಗ್ದೊತ್ತಿಗೆ ಇಬ್ರು ಜೀವ್ಹೊಗಿತ್ತಲ್ಲ
ಸತ್ತ ಹೆಣಗುಳು ಮ್ಯಾಲೆ ಬರೋದು
ಮುಣಗಂಗಿಲ್ಲ ನೀರದಾಗ
ಜೀವಿದ್ರೆ ತೂಕಿದ್ರೆ ಮುಣಗೋದು
ಆ ಪೆಟ್ಟಿಗಿ ನೀರಮ್ಯಾಲೆ ಬರ್ತೈತಪ ಪೆಟ್ಟಿಗಿ
ಆಗ ನಾಗಮುನೀಶ್ವರ ಏನು ಮಾಡಿ ಬಿಟ್ಟಾ
ನೀರ್ದಾಗ ಹನ್ನೆರುಡು ಗಂಟೆ
ಹರಿಯೋ ಜನ್ಮ ಗಂಗಾದೇವ್ತೆ
ಹರಿಯೋ ಜನ್ಮ ಗಂಗಾದೇವ್ತೆ ಅಂತ
ಹೊಳೆದಂಡ್ಯಾಗ ಆಗ ಮುಣ್ಗಿ ಮುಣ್ಗಿ
ತಲೇ ಬೊಗ್ಸಿ ಸ್ನಾನ ಮಾಡ್ತಿದ್ದ
ಮಾಡ್ತಿದ್ರೆ

ಪೆಟ್ಟಿಗೆ ಮ್ಯಾಲೆ ಬರೋದು
ಇನ್ನ ತೆಲಿಗೆ ತಟೈತೋ
ತೆಲಿಗೆ ತಟ್ಟಿದ ಮ್ಯಾಲಮ್ಮೋ || ತಂದಾನ ||

ಕಣ್ಣಿಲ್ ನೋಡ್ದ
ಆಗ ತೆಲಿಗಿ ಬಂದು ತಟ್ಟಿತೆ ನೀರು ಮ್ಯಾಲೆ
ಏಯಪ್ಪಾ
ಯೇಟುದೊಡ್ಡ ಸಾವುಕಾರ ಮನ್ಯಾಗ
ಬಡ್ಕೊಂಡ ಬಂದೈತೋ ಗಂಗಮ್ಮಾ
ಯೇಟು ದೊಡ್ಡ ಮನಿ ಕಿತ್ಕೊಂಡ ಬಂದೈತೋ
ಇದರಾಗ ಬೆಳ್ಳೈತೋ ಬಂಗಾರೈತೋ
ಏನೈತೋ ವಜ್ರಮಾಣಿಕ್ಯವು
ಪೆಟ್ಟಿಗೇ ಇಟ್ಟು ಚೆಂದ ಕಾಣ್ತೆತೈತೆ
ಇದರಾಗ ಏನೈದಾವೋ
ಎರಡು ಕೈಲ್ಹಿಡ್ಕಂಡ ದಡ್ಡಿಗಿ ತಂದ
ಪೆಟ್ಟೀಗಿನಾ
ಆಗ ಬೀಗ ಕಿತ್ತಿಬಿಟ್ಟಾ
ನೋಡ್ದರೇ ಆರಾರು ಹನ್ನೆರ್ಡು ತುಂಡು
ಇವ್ರು ಯಾರು ಹುಡುಗ
ಈ ಹುಡುಗಾ
ನಮ್ಮ ಶಿವುನು ಕೊಟ್ಟಿದ ಮಗಾ
ನಮ್ಮ ಶಿಶುವಾ
ನಾವು ಕೊಟ್ಟಿದ ಹುಡುಗನೆ
ಈಕಿ ಯಾರು ನಾಗೇಂದ್ರನ ವರದಲ್ಲಿ ಹುಟ್ಟಿದ ಶಾಮಗಂಧಿ
ಓಹೋ ಇವ್ರು ನಮ್ಮ ಭಕ್ತರೇ
ಕಣ್ಣಲ್ಲಿ ನೋಡಿ ಹೆಂಗ್ ಬಿಡ್ಲಿ
ನನ್ಗ ಕೈಗ ಸಿಕ್ಕಿ ಬಿಟ್ಟಾರ
ಈಗ ಸಿಗಲಾರ್ದಂಗನ್ನ ಇದ್ರೆ
ಹೆಂಗನ್ನ ಹಾಳಾಗ್ಹೋಗಲಂತಿದ್ದೆ
ಕೈಗಿ ಸಿಕ್ಕದವರ್ನ ಹೆಂಗ್ ಬಿಡಬೇಕು
ಇವ್ರಿಗೆ ಜೀವ ಕೊಟ್ಟೇ ಎಬ್ಸಸಬೇಕು
ಅಂತ ಆರು ತುಂಡು ಹೊರ್ಗ ತಗ್ದ
ಆಕಿಯ ಆರು ತುಂಡು ಲೈನಿಟ್ಟ ಬಿಟ್ಟು
ಈ ಹುಡುಗುನ್ನ ಆರು ತುಂಡು ಲೈನಿಟ್ಟ ಬಿಟ್ಟ
ವಿಭೂತಿ ನೀರು ಕಲ್ಸಿ
ಆಗ ಹೆಣ ಮ್ಯಾಲೆ ಆಗ ಉಗ್ಗಿ ಬಿಟ್ಟ
ಆರು ತುಂಡು ಹತ್ತಿಗ್ಯಂಡು ಬಿಟ್ಟು
ಆಗ ಸಮುದ್ರಲ್ಲಿ
ಜೀವ ಗಡ್ಡೀ ಅಂತ ಎಳಕೊಣ ಬಂದ
ಜೀವಗಡ್ಡೆ ಎಳಕಣ ಬಂದು
ಎಡಕ್ ಮೂಗು ಮುಚ್ಚಿದ
ಬಲಕ್ ಮೂಗಿನ್ಯಾಗಿಟ್ಟ

ಆಗ ಬಲಕ್ಕ ಮೂಗಿನ್ಯಾಗಲಿದ್ದ
ತೆಲಿಗೇರಿ ಬಿಟ್ಟೈತೊ
ಯಾಡಕ್ಕಲಿದ್ದ ಬಲಕ್ಕವಳ್ಯಾನ
ಅವ್ರು ಇಬ್ರು ಎದ್ದಾರೋ || ತಂದಾನ ||

ಜೀವ ತುಂಬಿಸಿದ
ಮೂಗಿನ್ಯಾಗಲಿದ್ದ ತೆಲಿಗೇರಿಸಿ ಬಿಟ್ಟ
ತೆಲೆ ಎಡಕಲಿದ್ದ ಬಲಕ್ಕು ಹೊಳ್ಸಿದ
ಆಗ ಇಬ್ರು ಎದ್ರು
ತೆಲಿಗೋಂದು ಪಾದ ಹಿಡ್ಕುಂಡ್ರು ಅವುಂದು
ಯಾರು ಶ್ಯಾಮಗಂಧಿ
ಆಗ ಹುಡುಗ ಇನ್ನ ಶರಬಂದರಾಜ
ಏನ್ರೀ ಹೇಗೋ ಜೀವ ಯಾಕುಳಿಸಿದ್ರಿ ನಮ್ಗೇ
ಆಗಿನ್ನ ಪರಮಾತ್ಮನೆ ಅಂದ್ರು
ನೋಡ್ರಪಾ ನನ್ಗ ಕಾಣಲಾರದಂಗ
ಹೋಗಿದ್ರೆ ಬೇಸಿತ್ತೂ
ನಮ್ಗ ಋಣಾ ಐತಿ ನಿನ್ನ ಲೋಕ ಇರಾಕ
ಇನ್ನ ಲೋಕ ಕಾಲ ಕಳೇದೈತಿ
ಅದಕೇ ಇನ್ನವರ ಪುಣ್ಯ ಮಾಡೀರಿ
ನನ ಕೈಗಿ ಸಿಕ್ಕೀರಿ
ನೋಡಪಾ ನಿಮ್ಗ ಜೀವ ಕೊಟ್ಟೇ ಎಬ್ಬಸಿನಿ
ಸತ್ತೋರು ಮತ್ತೆ
ಇನ್ನವರ ಜೀವದಲ್ಲಿ ಬೆಳಿಬೇಕಂದ್ರೆ
ಭೂಮಿ ಮ್ಯಾಲೇ
ಹುಟ್ಟಿ ಬರಬೇಕಂದ್ರೆ ಸಾದ್ಯವಿಲ್ಲ
ಈಗ ಜೀವು ಕೊಟ್ಟು ಎಬ್ಬಿಸಿನಿ
ಜೀವಕ್ಕಜೀವ ಕಳಿಬೇಕು
ನೀವು ಜೀವದಲ್ಲಿ ಕಲಿಬೆಕು
ಲೋಕದಾಗ ಅಷ್ಟೊತ್ತನಕ ಕಲ್ಯಾಂಗಿಲ್ಲ
ಈ ಪೆಟ್ಟಿಗ್ಯಾಗ ಕುಂತ್ಕೋರಿ
ಬೀಗ್ಹಾಕ್ತೀನಿ
ಮತ್ತೆ ಹೊಳದಂಡ್ಯಾಗ ವಗ್ದು ಬಿಡ್ತಿನಿ
ಅಂಬಿಗರು ಬರ್ತಾರ ಮಿನ್ಹಿಡ್ಯೋರು
ಬಲ್ಯಾಗ ಬೀಳ್ತಿರಿ
ಆಗ ಗಡ್ಡಿಗೆ ತೆಗಿತ್ಯಾರ
ಜೀವಕ್ಕ ಜೀವ ಬಿಡಬೇಕು
ಜೀವದಾಗ ಕಲಿಬೇಕು ನೀವು
ಬ್ಯಾಟೆ ತಂದು ಕಡಿತಾರ
ಅದೇ ವಂದು ಜೀವ ಕಳ್ದಂಗ
ಈಗಿನ್ನ ಅವ್ರ ಹಿಂದೆ ಹೋಗ್ರಿ
ಲೋಕದಾಗ ಕಲೀತಿರಪಾಂತ ಅಂದ
ಸರೆಬಿಡು ಅಂತ
ಸ್ವಾಮಿ ನಿನ ಮಾತಿಗಿ ಎದುರಾಡಾದಿಲ್ಲಂತ
ಆಗ ತಾತನ ಪಾದ ಮುಗ್ದು ಕುಂತ್ಕೊಂಡಾನ
ಏನಮ್ಮಾ ಆಗ ಶಾಮಗಂದಿ ನೀನು ಕುಂದ್ರು
ಸ್ವಾಮಿ ಜೀವಕೊಟ್ಟು
ಮತ್ತೆ ಪೆಟ್ಟಿಗ್ಯಾಗ ಕುಂದ್ರಬೇಕಾ ನಾವು
ಇಲ್ಲ ಸ್ವಾಮಿ ನನ್ನೂರಿಗೆ ನಾನು ಹೋತಿನಿ ಸ್ವಾಮಿ
ಗಣಸುರು ಹೋಗೋವರ್ ಕರದು
ಜೀವತೆಗ್ದ ಭ್ರಷ್ಟ ಹೆಣಸು ಕುಂದ್ರು ಅಂದ
ಕೇಳವೇ ತಾತನ ಮಾತು ಕೇಳ್ತೀಯಿ
ಇಲ್ಲದಿದ್ರೆ ಕಡದು ತುಂಡು ಮಾಡಲ್ಯಾ ಅಂದ
ಇಲ್ರೀ ನಿನ ಮಾತಿಗೆ ಎದುರಾಡಾದಿಲ್ರಿ
ಆಂತ ಆಗಿನ್ನ ತಾತಾನ ಪಾದ
ಆಗಿನ್ನ ಶರಬಂಧರಾಜ ಪಾದ ಮುಗ್ದು
ಕುಂತಕಂಡ್ಳಾಕೆ ಶಾಮಗಂದಿ
ಕುಂದ್ರೋತ್ತಿಗೆ ಆಗ ಬೀಗವತ್ತಿಬಿಟ್ಟ
ಆಗ ಸಮ್ರುದಾಗ ವಗ್ದ
ಅವಾಗ ಜೀವಿದ್ದಿಲ್ಲ ಪೆಟ್ಟಿಗಿಮ್ಯಾಲೆ ಬಂತು
ತೆಲೀಗೆ ತಟ್ತು ಸ್ನಾನ ಮಾಡವನಿಗೆ
ಇವಾಗ ತೂಕೈತಲ್ಲ ಜೀವ ತುಂಬಿಕ್ಯಂಡ್ಮೇಲೆ
ನೆಲಕ್ಕೇ ಕುಂತುಬಿಡ್ತು
ಆಗ ಇನ್ನ ಇಂಗ ದೊಬ್ಯೊತ್ತೀಗೆ
ನಿಲಕ್ಕೇ ಕುಂತು ಬಿಡ್ತದು ನಿರದಾಗ
ಮೊಣಕಾಲಷ್ಟು ನಿರ್ದಾಗ ಕುಂತು ಬಿಡ್ತದು
ಇವ್ರು ಟಂಕಬೈಯಿನಾ ನರಸ ಬೈಯಿನಾ ಕಮಲ ಬೈಯಿನಾ
ಚಿಕ್ಕ ತಿರುಪತಿ ದೊಡ ತಿರುಪತಿ ರಾಗತಿರುಪತಿ ದೇವಿ ತಿರುಪತಿ
ಅಂಬಿಗುರು ಮೀನ್ಹಿಡಿಯೋರು
ಲೇಯ್ ಇವತ್ತ ಆಯಿತವಾರ ರಜ
ರೋಡಿಗೆ ಮಣ್ಹೊರಾಕೋತಿದ್ವಿ
ಚಾವುಲ್‌ರಾಜ ರೋಡು ಮಾಡಸ್ತಾನ
ಊರಿಗೆ ದೊಡ್ಡೋವ್ನು
ಊರ ಬಡವರೆಲ್ಲ ಹೋರುತಿದ್ವಿ
ಬರೇ ಬ್ಯಾಳೇ ಕಾರ ತಿಂದು ಹೊಟ್ಟ್ಯಾಗ ಉರುಪಟ
ಲೇಯ್ ಮೀನ್ ತಂದು ಕಂಡು
ಬೇಸು ಗೋಧಿ ರೊಟ್ಟಿಮಾಡಿಕ್ಯಂಡು
ಮಸಾಲಿಮಿಸಾಲಿ ಹಾಕ್ಯಂಡು
ಕುತ್ಗಿಮಟ್ಟ ಊಟಾ ಮಾಡಾನು ಇವತ್ತ
ನಡ್ರೆಲೇ ಅಂತ ಬಲಿ ತಗಂಡ್ರು
ಬಲೇ ತಗಾಂಡು ಉಳ್ಳಾಗಡ್ಡೆ ಇಟ್ಟು
ಬುತ್ತಿ ಕಟ್ಟಿಗ್ಯಂಡ್ರು ಅವ್ರು
ಒಬ್ಬೋಬಬ್ನಿಗೆ ಏಳು ಮಂದಿ ಎಂಟುಮಂದಿ ಹುಟ್ಟ್ಯಾರ
ಏನ್ ಆರ್ಧಾರೊಟ್ಟಿ ಸಿಗ್ಹಾಂಗಿಲ್ಲ ಅವ್ರಿಗೆ
ಬಡತನಾ ಅಂಬಿಗರು
ಮೀನ್ಹಿಡಿಕ್ಯಾಬೇಕು ಮಾರಕಬೇಕು ತಿನಬೇಕು
ಹೊಳೆ ದಂಡಿಗೆ ಬಂದ್ರು
ಎಲ್ಲಿ ಬಲೆ ವಗ್ದ್ರೇನಾ
ಬರೇ ಶಂಕುಗುಳು ಗಂಟಿಗೂಳು ಬಡಕಂಡು ಬಂದಿದ್ವು
ಗಂಗಾಳ ಗುಂಡಾಲು ಕಪ್ಪೆ ತಾಬೇಲು ಏಡಿ ಬಿಳ್ತಾವ
ವಂದು ಮೀನನ್ನ ಬೀಳವಲ್ದು
ಲೇ ಮನ್ಯಾಗಿದ್ರೇನೆ ಕೈಕಾಲು ಆಡಿತಿದ್ವು ನೋಡಲೆ
ಇವತ್ತು ಆಯಿತ್ವಾರ
ಮೀನು ಮೀನಂತ ಬಂದ್ರೆಲೆ
ಯ್ಯಾ ಮೀನಿಲ್ಲಲೆ
ಬಾಲಲೇ ಚಿಕ್ಕ ತಮ್ಮ ತಿರುಪತಿ ಹೋಗಾನಂದ
ಆಗ ಎಲ್ಲ ಬಲಿಗುಳೆಲ್ಲ ವಣಿಗ್ಯಾಕಿದ್ರು
ಸ್ನಾನ ಮಾಡಿಕ್ಯಂಡ್ರು
ತಂದುಕಂಡ ಬುತ್ತಿ ಊಟ ಮಾಡಾಕ ನಿಂತು ಬಿಟ್ರು
ಚಿಕ್ಕತಿರುಪತಿ ಏನು ಮಾಡ್ದಾ
ಅಲ್ಲಿ ಕಾಳಿಂಗ ಮಡುಗೈತಿ
ಸುಳಿತಿರುಗಿ ಹೋತಾವ ನೀರು
ಆಗ ಹೊಳೆದಂಡ್ಯಾಗ
ಆಗ ಕಾಳಿಂಗ ಮಡುಗುನ್ಯಾಗ ಬಲೆ ವಗ್ದಾ
ಆ ಮಡುಗುನ್ಯಾಗೇ ಕುಂತೈತಿ ಪೆಟ್ಟಿಗೆ
ಆಗ ನೆಲಕ ಮುಟ್ಟಿತು
ಬಲೆ ಎಳಕೊಬೇಕಲ್ಲ ಹಗ್ಗ ಹಿಡ್ಕೊಂಡು
ಆಗ ಪಟ್ಟಿಗೆ ಅಡೆಯಲಿ ಬಲೆ ತೂರಿತು
ಆಗ ಬಲ್ಯಾಗ ಪೆಟ್ಗಿ ಕುಂತು ಬಿಡ್ತು
ದಾರದ ಬಲೆ
ಬಲೆ ಎಳಿಬೇಕಲ್ಲ
ಬಲೆ ಕಣ್ಣು ಪಟಪಟಾ ಪಟಪಟಾ ಅಂತಾವೆ

ಲೇಯ್ ಬರ್ರೆಲೇ ನನಮಕ್ಕಳೇ
ಲೋ ದೊಡ್ಡುಮೀನು ಬಿದೈತಲೇ
ಹರ್ದಹೋಯ್ತು ಹರ್ದುಹೋಯ್ತ
ಹೋತ್‌ಹೊತ್‌ಬಲೆಹೋತ ಬಲೆಹೋತ
ಇನ್ನ ಮೀನು ಹೋತೈತೊ
ಆಗ ಅಣ್ಣಾದವರು ನೋಡಿದ್ರು
ಲೇಯ್ ಬಿಡು ಬ್ಯಾಡೇಲೆ ಬಿಡುಬ್ಯಾಡೇಲೆ
ಬಾರ್ಲು ಬಿಳಲೆ ಮೀನು ಮ್ಯಾಲೆ ಬಾರ್ಲು ಬಿಳಲೆ ಬಾರ್ಲು ಬಿಳಲೇ
ಹೇಯ್ ಆರ್ಯಾಕಿದ ಬಲೆ ತಂದ್ರು || ತಂದಾನ ||