ತಂದಾನ ತಂದಾನ ತಾನತಾನ ತಂದಾನ
ಆನೆಗೊಂದಿ ನೋಡಣ್ಣ ಇನ್ನೂ ಜಟಂಗೀಶ್ವರಾ ||ತಂದಾನ||

ಆ ಜಟಂಗಿ ಸ್ವಾಮಿ ಮಠಕ್ಕ ಬಂದು
ಒಂದು ಪಾದ ಎರ್ಡು ಕೈ ಜೋಡ್ಸಿ
ಆಗಿನ್ನವರುತಾವು ಕೈ ಜೋಡಿಸಿ
ಸ್ವಾಮಿ
ದುಷ್ಟಲೋಕದಾಗ ಹುಟ್ಟಿವಿ
ಕರ್ಮಲೋಕದಾಗ ಬೆಳೆದಿವಿ
ನೀನು ನನ್ನ ಒಳಗಿದ್ದ ಈಶ್ವರ
ಆಗ ಪ್ರತ್ಯೇಕ್ಷ ಆಗಿ
ದುಷ್ಟರ ಕಣ್ಣಿಗೆ ಕಾಣಬೇಕೋ ಸ್ವಾಮಿ
ನಿನ್ನ ನೋಡಬೇಕಂತ ಬಂದಿವಿ
ಓಹೋ
ಅಪ್ಪಾ
ಈಗಿನ್ನವರ ಲೋಕದಾಗ
ಆಗಿನ್ನವರ ಆನೆಗುಂದಿ ಕಂಪ್ಲಿ ಪಟ್ಣದಾಗ
ನೀನು ಈಶ್ವರ ಥೇರುಮಾಡಿ
ಎಳೆವಂತನಾದರೆ
ನಿನಗಿನ್ನವರ ಜೀವದಲ್ಲಾಗಿ

ಆಗ ಮಕ್ಳ ಫಲಪ್ಪ ನಿನಗಾಗಿ ಕೊಟ್ಟೇನ
s ಇಲ್ಲದಿದ್ರೆ ನೋಡಪ್ಪ ನನ್ಗ ಸಾಧ್ಯವಾಗದಿಲ್ಲಾಪ್ಪ ||ತಂದಾನ||

ಸ್ವಾಮಿ
ನಿನ್ನ ಭಕ್ತಿ ಹಂಗೆ ಇರಲಿ
ಈಗಿನ್ವರ ಆನೆಗೊಂದಿ ಕಂಪ್ಲಿದಾಗ
ಲೋಕೆಲ್ಲ ಇನ್ನ ಥೇರು
ಕೊಲ್ಲು ಥೇರು ಎಳಿಸ್ತಿವಿ
ನೀನು ಎಲ್ಲಾದ್ನೂ
ಕಾಪಾಡಿಕೊಂಡು ಬರ್ಬೇಕು ಸ್ವಾಮಿ
ಆಗಿನ್ನ ನೋಡ್ದ ಜಟಿಂಗೀಶ್ವರ
ಓಹೋಹೋ ಅಂತಾ
ಒಂದು ಪಾದ ಎರ್ಡು ಕೈಜೋಡ್ಸಿ ನಿಂತಕಂಡ್ರೆ

ಬಾಳೆಹಣ್ಣು ನೋಡಣ್ಣಾ ಗಗನಕ್ಕೆ ಹಾರೈತೋ
ತೋಥಡಿ ಬಾಳೆಹಣ್ಣು ನೋಡಣ್ಣಾ ಬೊಗಸ್ಯಾಗ ಬಿದೈತೋ
s ಕೊಟ್ಟಿನ್ಹೋಗೋ ಲೋಕಕ್ಕೆ ನಿನ್ನ ಆನೆಗೊಂದಿ ಕಂಪೇಲಿ ||ತಂದಾನ||

ಯಪ್ಪಾ ದುಷ್ಟಲೋಕ ಕರ್ಮಲೋಕ ಹುಟ್ಟಿದ್ದಿಗೆ
ನನ್ನ ಜೀವಕ್ಕ ಆನಂದ ಆಗಿದ್ದಿಗೆ
ನಿಗೇನಂದ್ರ ಬಾಳೆಹಣ್ಣು ಕೊಟ್ಟಿನಿ
ಈಗ ತಗೊಂಡು ಹೋಗು
ಲೋಕಗೆ ಬಲವಂತನ ಕೊಟ್ಟಿನ್ಹೋಗೋ ಜೀವದಲಿ
ಓಹೋ ಅಷ್ಟೇಸಾಕು ಸ್ವಾಮಿ
ನಿನ್ನಿಷ್ಟ ನನಮ್ಯಾಲಿರ್ಲಿ ಅಂತ

ಆಗ ಕೈಚೀಲ ವಿಟ್ಟಾನ ಬಾಳೆಹಣ್ಣು ನೋಡ್ಯಾನ
s ತಾನು ಮನಿಗೆ ಬಂದಾನ ತಿನ್ಸುವಾಕಂತ್ಹೇಳಿ ||ತಂದಾನ||

ಕೇಳವೇ ಹರಿಯಾಳದೇವಿ
ನನ್ನ ಭಕ್ತಿ ನೋಡಿ
ಕೊಲ್ಲು ಒಳಗಿದ್ದ ದೇವ್ರು
ಐದ್ನೋ ಇಲ್ಲೋ ಅಂತ
ನಾನು ತಪಸ್ಸ ನಿಂತ್ರೆ
ಪ್ರತ್ಯೇಕ್ಷವಾಗಿ
ನನ್ಗೆ ಬಾಳೆಹಣ್ಣು
ಬೊಗಸ್ಯಾಗ ಹಾಕ್ಯಾನ
ಈಗ ಜೀವದವ್ಳಿಗಿ ಕೊಡು ಅಂತ ಕೊಟ್ಟಾನ

ತೊಗೊವಲೇ ನೀನಾಗಿ ಹರಿಯಾಳದೇವಿ ನೀನಾಗಿ
s ತಿನ್ನೊ ಬಾಳೆ ಹಣ್ಣಣ್ಣಾ ಇನ್ನ ಕೈಯಾಗಿಟ್ಟಾನೆ ||ತಂದಾನ||

ಹರಿಯಾಳದೇವಿ ನೋಡುಬಿಟ್ಳು
ಅಯ್ಯೋ ಪರಮಾತ್ಮ
ಒಟ್ಟಿಲಿಂದ ತಿಂದ್ರೆ
ಹೊಟ್ಟೆನೊಯ್ತಿತಿ ಅಂತ
ಮ್ಯಾಗಳ ವಟ್ಟ ಸುಲಿದು ಬಿಟ್ಳು
ಬಾಳೆಹಣ್ಣಿಗೆ ಆಗಿನವ್ರು ತಾವಾಗಿ ಕೆಳಗ್ಹಾಕುವಾಗ
ಕೆಳಗ ಕಸ ಬಳ್ಯಾಕಿ
ಅಡ್ಗಿ ಮಾಡಾಕಿ
ಯಮ್ಮಾ ದೇವ್ರು ಕೊಟ್ಟಿದ್ದ ಫಲವು ಬಿಸ್ಯಾಕಬ್ಯಾಡ್

ನನ್ನ ಬೊಗಸ್ಯಾಗ ಒಗಿಯಮ್ಮ ನನ್ನ ಉಡಿಯಾಗ ಒಗಿಯಮ್ಮ
ತೋss ಉಡಿಯಾಗ ಒಗದಾಳ ಚಿನ್ನುಮಾಯಿ ತಾಯಮ್ಮಗೆ ಮನಿದಾಸಿಗೆ ||ತಂದಾನ||

ಉಡಿಯೊಳಗೆ ಒಗದ್ರೆ…..
ಸ್ವಾಮಿ ಜಂಟಿಗೀಶ್ವರ ಅಂತ
ಗರ್ಭಕ್ಕ ಊಟ ಮಾಡಿ ಬಿಟ್ಳು
ಅಚ್ಚೇರು ಬಂಗಾರ ಬಿದ್ಹಾಂಗಾಯ್ತು
ಜೀವಕ್ಕಾಗಿ ಬಾಳೆವಣ್ಣು
ಆಗಿನ್ನವರ ಮನಿದಾಸಿ ನೋಡಿಬಿಟ್ಳು
ಯಮ್ಮಾ ನನ್ಗೆ ಅಪ್ಪೆಕೊಡು
ನಾನೂ ಊಟಮಾಡ್ತಿನಿ
ಯಮ್ಮಾ ಊಟಮಾಡು
ಜಂಟಿಗೇಶ್ವರ ಅಂತ
ಗರ್ಭಕ್ಕ ಊಟ ಮಾಡು
ಸ್ವಾಮಿ ಜಟಿಂಗ ಸ್ವಾಮಿ ನೋಡ್ದ
ಅಲೆಲೆಲೆಲೆಲೆಲೇ
ಜೀವದಲ್ಲಿ ಒಬ್ನಿಗ ಕೊಟ್ರೆ ಒಂದ ಜೀವಕ್ಕ ಕೊಟ್ರೆ
ಎರ‍್ಡ ಜೀವ ಮಾಡಿಬಿಟ್ರಲ್ಲ ಇವ್ರು
ಎರಡು ಜೀವ ನಾನು ಬರಿಬೇಕಾತೈತಂತ
ಆಗಿನ್ನವ್ರು ಎರ‍್ಡು ಜೀವ ಬರ‍್ದು ಬಿಟ್ಟ
ಇಬ್ಬರೂ ಗರ್ಭವತಿ ಆಗಿಬಿಟ್ರು
ಈಗ ದೊಡ್ಡವ್ರು ಗುರುವು
ದೈವ ಬುದ್ಧಿ ಜ್ಞಾನ ತಿಳಿದವ್ರು
ಏನ್ರಿ ಇಪ್ಪತ್ಹಳ್ಳಿ ಅರವತ್ತೂರು
ರಾಜ್ಯತನ ಮಾಡವ್ನು
ರಾಜ ಕಚೇರಿದ ರಾಜಾವಾಗ್ಯಾನಿಲ್ರಿ ಇವ್ನು
ನಿನಗೇನ್ರಿ ಆಗ ಗರ್ಭವತಿ ಮಾಡಿ
ಮನ್ಯಾಗಿದ್ದಾಕಿ ತಾಯಿ ಸಮಾನ
ಛೀ ಛೀ ಛೀ ಪಾಪ ಪಾಪ
ಇಂಥಾ ಮಾತುಗಳು ನುಡಿಬ್ಯಾಡ್ರಿ
ಈ ಲೋಕದಾಗ
ನಾನು ಪಾಪ ಕಾಣೆ ಧರ್ಮ ಕಾಣೆ
ಈಗ ಆ ಅಮ್ಮನ್ನ ಕೇಳೋಣಪ್ಪ ನಾವು ತಾಯಿನ್ನ
ಅಮ್ಮಾ ಮನಿದಾಸಿ
ಈಗ ಯಂಗಮ್ಮ ಗರ್ಭವತಿ ಆಗಿದಿ
ಓಹೋ
ಅಪ್ಪಾ ಬಾಳೆಹಣ್ಣು ಇನ್ನು ದೇವ್ರು ಕೊಟ್ಟಿದ್ದು
ಈಗ ಮ್ಯಾಗಲ ಒಟ್ಟ ಸುಲಿದು ಬಿಸ್ಹಾಕಿದ್ರೆ
ಬಿಸ್ಹಾಕಬ್ಯಾಡ ಅಂತ ನನ್ನ ಉಡಿ ಒಡ್ಡಿದ್ದಿಗೆ
ಹರಿಯಾಳದೇವಿ ನನ್ನ ಉಡಿಯಾಗ ಹಾಕಿದ್ದಿಗೆ
ಆಗ ಬಾಳೆಹಣ್ಣು ತೊಗಲು ತಿಂದಿದ್ದುಗೆ
ಈಗಿನ್ನ ಗರ್ಭವತಿ ಆಗಿನಪ್ಪ
ಓಹೋ ಈ ಒಂದು ಬಾಳೆಹಣ್ಣಾಗ
ಇಬ್ರು ಬಸುರಾಗ್ಯಾರ
ಆಗ ದೇವ್ರು ಕೊಟ್ಟಿದ್ದ ಫಲವು
ಯಾರೂ ಅಂಬಾಕಾಗಂಗಿಲ್ಲ ಅಂತಾ

ಒಂದು ತಿಂಗಳಾಗೈತೊ ಎರಡು ತಿಂಗಳಾಗೈತೋ
ಏsssss ಮೂರು ತಿಂಗಳಾಗೈತೊ ನಾಲ್ಕು ತಿಂಗಳಾಗೈತೋ
ಒಂಬತ್ತು ತಿಂಗಳಾ ಇನ್ನ ಆಗೈತೊ ||ತಂದಾನ||