ಚಾವುಲರಾಜ ಪಟ್ಣಬಿಟ್ಟಾನ
ಒಂದು ಗಾವುದವಲ್ಲಮ್ಮ
ಎಲ್ದು ಗಾವುದವಲ್ಲಮ್ಮ
ಹನ್ನೇರಡು ಗಾವುದ ತಲೂಪಿದ ನೋಡ
ಚಿತ್ರಗಿರಿ ಪಟ್ಲ       || ತಂದಾನ ||

ಚಿತ್ರಗಿರಿ ಪಟ್ನಕ್ಕ ಬಂದ
ಆ ಚಿತ್ರಿಗಿರ್ಯಾಗ ಹ್ಯಾಂಗ ನಡ್ದೈತಂದ್ರೆ
ಲೋಕದಾಗ
ಈಗ ಜೀವಕ್ಕಾಗಿ ಹೊಸದು ಕಟ್ಟ್ಯಾರಪ್ಪಾ
ತೆಗ್ಗಿನ್ಯಾಗಿದ್ರೆ ಹಳ್ಳಬಂದು ಬಡಕಂಡ್ಹೋಗ್ತೈತಂತ
ಬಗಡಿ ಮ್ಯಾಲೆ ಕಿತ್ತಿ ಕಟ್ಟಿದ್ದಾರೆ
ಊರೆಲ್ಲ ಕಟ್ಟಿದ ಮ್ಯಾಲೆ
ಆಗ ದೇವ್ರು ಮಠಗಳು ಕಟ್ಟ್ಯಾರ
ದೇವ್ರು ಮಠಗಳು ಕಟ್ಟಿದ ಮ್ಯಾಲೆ
ಅವ್ರು ಊರಾಕ ಬಂದ್ರು
ಆಗ ಊರಾಗ ಬಂದು
ಮೂರೇ ದಿನಕ್ಕೆ
ಆರಂಡಿದಾಗಿರುವ ಎರ್ಡು ರಾಕ್ಷಾಸಿಗಳು
ಊರಾಕ ಬಂದ್ವು

ಊರಾಗ ಹೊಕ್ಕಂಡ್ವು
ಜೀವದಾಗ ನೋಡಣ್ಣ
ಜನಲೋಕ ಮಂದಿನೇ
ಹೇಯಮ್ಮೋ ಮೂವರು ನಾಲಾರು ಹಡಕಂಡು
ಗುಟರ್ನಂಗೆ ತಿಂಬೋದು
ಊರು ಹಾಳು ಮಾಡ್ಯಾವು || ತಂದಾನ ||

ರಾಕ್ಷಾಸಿಗಳು
ಹೆಣ್ಣು ಗಂಡು ಊರಾಕ ಬಂದ್ವು
ಏಳೆಂಟು ಮಂದೀನ
ಹಿಡಕಂಬೋದು ತಿಂಬೋದು
ಆಗ ಊರು ಕಟ್ಟಿದ ಮೂರೇ ದಿವ್ಸಕ್ಕೆ
ತೆಗ್ಗಿನ್ಯಾಗ ಇದ್ದ್ರ ಬಳಕಂಡು ಹೋಗ್ತೈತಂತ
ನಾರಾಳ್ಯಾಗಂತ ಬುಗಡಿಮ್ಯಾಲೆ ಕಟ್ಟ್ಯಾರ ಊರು
ಆಗ ಎಲ್ಲಾರು ಊಟ ಮಾಡಿದ ಮ್ಯಾಲೆ
ಒಬ್ಬ ಶಾನುಭೋಗರಾಕೆ ಇದ್ಳು
ಯಮ್ಮ ಈಗ ಇದೇ ಚೊಚ್ಚಳು ನಾನು ಗರ್ಭತಾಯಿ
ಹೆಣ್ಣೈತೋ ನನ್ನ ಹೊಟ್ಟ್ಯಾಗ ಗಂಡೈತೋ
ಯಮ್ಮಾ ರಾಕ್ಷಷಿಗಳ
ನನನ್ನೊಬ್ಬಾಕೇನ ಬಿಟ್ಟು ಬಿಡ್ರಮ್ಮ ಅಂತ ಕೇಳ್ದುಳು
ಇಷ್ಟು ಮಂದೀನ ಊಟ ಮಾಡಿ
ನಿನ್ನ ಒಬ್ಬಾಕೇನ ಬಿಡಬೇಕ ನಾವು ಊರಾಗ
ಛೇ ಛೇ ಛೇ ನಿನ್ನ ಬಿಡೋದಿಲ್ಲಂತ
ಎಡಗೈ ಉಗುರು ಹಾಕಿ
ಹೆಟ್ಟೆಗೆ ಪರ್ರಂತ ತಿವ್ದುಬಿಟ್ಟು
ಆಗ ಹೆಣಮಗಳು ಬೆಳ್ಳಗ
ಕ್ಯಾವ್ ಕ್ಯಾವ್ ಅಂತ ಅರಸ್ತೈತೆ
ಆ ಯಮ್ಮನ ಬಾಯಾಗಿಟ್ಟುಕಂಡವು ರಾಕ್ಷಸಿಗಳು
ಈ ಮಗಳುನ ಹ್ಯಾಂಗ ಜೋಪಾನ ಮಾಡಾದು ನಾವು
ಅವಳ್ನೇನು ಕೊಲ್ಲಿ ಬಿಟ್ಟಿ
ಆ ಯಮ್ಮ ಸತ್ತ್ಹೋದ್ಳು
ಹೊಟ್ಟೆಗೆ ಇರೋ ಕೂಸು ಹೊರಗ ತಗಿದ್ವಿ
ಈಕೂಸನ ಏನು ಮಾಡಬೇಕು
ನಾವೇ ಜ್ವಾಪಾನ ಮಾಡಬೇಕು ಅಂತ
ದನ ಕರ ಹಣ ಗುಣ
ಜಗ್ಗೈತಪ್ಪಾ ಊರಾಗ
ಆ ಗಂಡು ರಾಕ್ಷಸಿ ಏನು ಮಾಡಾದು
ದನ ಮೇಸಿಗ್ಯಂಡು ಬರಾದು
ಕಟ್ಹಾಕೋದು ಮೇವ್ಹಾಕೋದು ಹಾಲ್ದಿಂಡೋದು
ಮನೀಗ ತಂದು ಕೋಡೋದು
ಆಗ ಅಗಸಿ ಕಾಯೋದು
ಈಗ ಎರ್ಡು ಪಲ್ಲ ಜ್ವಾಳ
ನುಚ್ಚ್ಯೊಡ್ಯೋದು
ಎರ್ಡೇ ಮುದ್ದೆ ಮಾಡಾದು
ಆಗ ತಲೆಗೋಂದು ಮುದ್ದೆ
ಬಾಯಾಗಿಟ್ಕೊಂಬೋದು
ತಲೀಗೆರ್ಡು ಕೊಡ ನೀರು ಕುಡಿಯೊಂದು
ಈ ಹೆಣ್ಣು ರಾಕ್ಷಸಿ ಏನು ಮಾಡಾದು
ಹಾಲು ಕಾಸಾದು
ಈಗ ಮಗಳಿಗೆ ನೀರ ಹಾಕೋದು
ಹಾಲು ಕುಡಿಸೋದು
ತೊಟ್ಲದಾಗ ಹಾಕಿ ತೂಗೋದು
ಆ ಮಗಳಿಗೆ ನೀರ ಹಾಕೋದು
ಒಂಬತ್ತನೇ ದಿನಕ್ಕೆ ಅವ್ರೇ ತೊಟ್ಲದ್ಹಾಕಿ
ಏನಂತ ಹೆಸರಿಡ್ತಾವೆ ರಾಕ್ಷಸಿಗಳು
ಆ ಮಗಳು ರಾಕ್ಷಸೇನ ಜ್ವಾಪಾನ ಮಡ್ತಾನ
ಈಗ ಹೊಟ್ಟ್ಯಾಗಿರುವ ಪಿಂಡಾನ ಜ್ವಾಪಾನ ಮಾಡಿದವ್ರು
ಚಿತ್ರಗಿರಿ ಪಟ್ನದಾಗ

ನಿನ್ನ ಹೆಸರೇ ಚಿತ್ರಾಂಗಿ ಲೋಕ್ಹೆಸರು ಇಟ್ಟಾರೆ || ತಂದಾನ ||

ಚಿತ್ರಾಂಗಿ ಅಂಗ ಹೆಸರಿಟ್ಟಾರ
ಆಗ ಮಗಳ್ನ ಬೇಸು ಜೋಪಾನ ಮಾಡಿದ್ರು
ಹದ್ನೆಂಟು ವರ್ಷದಾಗೆ ನೆರ್ತು ಬಿಟ್ಳು ಮಗಳು
ಮಗಳು ನೆರ್ತ ಮ್ಯಾಲೆ
ಯಮ್ಮಾ ದಿನಾಲು ಮುದ್ದೆ ತಿಂದು ತಿಂದು ಸಾಕಾಗೈತೆ
ನಾ ಹೋಗಿ ಬರ್ತೀಮ್ಮ
ಆರಂಡಿಗಂತ ಹೋಗಿಬಿಟ್ರು
ಆಯಮ್ಮ ಹುಟ್ಟಿದಾಗಲಿದ್ದ ಗಣ್ಮಕ್ಕಳನ್ನೇ ನೋಡಿಲ್ಲ
ಊರಾಗ ಯಾರನ್ನ ಬರ್ತಿದ್ರೆ ಹೋತಿದ್ರೆ ನೋಡ್ತಾಳ
ಇವ್ರೇ ಎಲ್ಲಾ ತಾಯಿ ತಂದೆ ಅಂತ
ತಿಳಕಂಡು ಬಿಟ್ಟಾಳೆ ಆಕೆ
ಒಂದು ಕರ್ರನ ಕಾಗೆ ಅಡ್ಡಾಡಂಗಿಲ್ಲ ಆ ಊರಿಗೆ
ಅಯ್ಯಯಪ್ಪ ರಾಕ್ಷಾಸಿಗಳು
ಆಗ ಚಿತ್ರಗಿರಿ ಪಟ್ಲ
ಒಲ್ಲೆವಪ್ಪೋ
ನಮ್ಮನ ಚಿತ್ರ ಚಿತ್ರ ಮಾಡಿ ಬಿಡ್ತಾವ ಅಂತ
ಒಬ್ರು ಬರೋದಿಲ್ಲ
ಮಗ್ಳು ಒಳ್ಳೇನೆರ್ತು ಬಿಟ್ಟು
ಆಗ ತಾಯಿ ತಂದೆ ಅಡವಿಗೆ ಹೋದ್ರು
ಅವ್ರು ಬರೊತ್ತಿಗೆ
ಈ ಯಮ್ಮ ಸ್ನಾನ ಮಾಡಿಕ್ಯಂಡು
ಅಡಿಗೆ ಮಾಡಿಕ್ಯಂಡು
ಊಟ ಮಾಡಿ
ಒಂದು ಬುಟ್ಟಿ ತುಂಬ ಕಡ್ಡಿ ಪುಡಿ ಇಕ್ಕೊಂದು
ಒಂದು ಬುಟ್ಟಿತುಂಬ ಎಲೆ ಅಡಿಕೆ ಇಡೋದು
ಗಡಿಗಿ ತುಂಬ ಸುಣ್ಣ ಇಡೋದು
ಅವ್ರು ಬರೋದು ಎಲೆ ಅಡಿಕೆ ಹಕ್ಯಂಬೋದು
ಕಡ್ಡಿಪುಡಿ ಬಾಯಿಗ ಉಗ್ಗೋದು
ಮಗಳಾ ಚಿತ್ರಾಂಗಿ
ನಿನ್ನ ಜಲ್ಮ ಉಳಿಸಿದ್ಗೆ
ನಮ್ಗ ಜೀವ ತುಂಬ ಬಾಯಿತುಂಬ
ಕೆಂಪಗ ಮಾಡಿದೆಮ್ಮ ಮಗ್ಳೇ ಅಂಬೋದು
ಮುದ್ದುಕೊಡೋದು
ಆ ರಾಕ್ಷಸಿಗಳು
ಜೋಪಾನ ಮಾಡಿಕ್ಯಂಡಾವ ಆ ಯಮ್ಮಾನ
ವರುಷ ಆಡೇಲಿ ತಾಯಿ ಮಲಗ್ತಾಳೆ
ವರುಷ ಮ್ಯಾಲೆ ಮಗಳು
ಗಂಡು ರಾಕ್ಷಸಿ ಅಗಸಿ ಕಾಯೋದು
ಆ ಊರೋರು ಸುದ್ದಿ ಯಾರಿಗೆ ಗೊತ್ತು
ರಾಕ್ಷಸಿಗಳ ಪಟ್ಣ ಅಂತ ಗೊತ್ತಿಲ್ಲ
ಈ ಹುಡುಗುಗ
ಒಳ್ಳೇ ಮಧ್ಯಾಹ್ನದಾಗ ಬಂದ
ಒಬ್ಬರು ಊರಾಗಿಲ್ಲಪ್ಪ
ಇದೇನು ದೆವ್ವಗಳ ಊರಾ
ಪೀಡೆ ಊರಾ
ಪಿಶಾಚಿ ಊರಾ
ಹೊಸಾದು ಮಾಳಗಿ ಮ್ಯಾಲ
ಮಾಳಿಗೆ ಐದಾವ ಅಂತ
ಊರ ಮುಂದೆ ಇಳೇ ಬಾಯಿ
ಆಲದ ಗಿಡ
ಬಾಯಾಗಿಳಕಂಡ
ಕಾಲು ಮಕ ತೊಳಕಂಡ
ಐದು ಬೊಗಸೆ ನೀರು ಕುಡಿದ
ಆಲದಗಿಡದ ಕೆಳಗ ಬಂದು ಕುಂತ್ಕೋಡ
ಆಗಸಿ ಕಡೆಗೇ ನೋಡಿಕ್ಯಾಂತ ಕುಂತಗಂಡ
ಬಡಗ್ನ ಊರಾಕ ಹೋದೆ
ದೆವ್ವಗಳು ಗಿವುಗಳು ಆದ್ಯಾವೇನೋ
ಈ ಊರಾಗ
ಒಂದನಾಯಿ ಬೋಗಳೋದಿಲ್ಲ
ಕೋಳಿ ಕೂಗದಿಲ್ಲ ಒಬ್ಬರು ಬರಾಂಗಿಲ್ಲ
ಜನಸಂಖ್ಯೆ ಐದಾರೋ ಇಲ್ಲೋ
ಈ ಪಟ್ಣ ದಾಗ
ಹಾಳಾಗ ಹೋಗ್ಯಾರೋ
ಏನು ಬರುತೈತೋ ನೋಡಬೇಕಂತ
ಆಗ ನೋಡಿಕ್ಯಾಂತ ಕುಂತಗಂಡ
ಆಕೆ ಅಡಿಗೆ ಮಾಡಿದಳು
ಸ್ನಾನ ಮಾಡಿದಳು
ದೇವರ ಪೂಜೆ ಮಾಡಾಕ ಚ್ಯಾರೆ ನೀರಿಲ್ಲ
ರಾಗಿ ಕೊಡ ತಗಂಡು ಚಿತ್ರಾಂಗಿ
ಅಗಸ್ಯಾಗ್ಲಿದ್ದ ಹೊರಗ ಬಂದ್ಳು
ಆಗ ಬಾಯಿತಲ್ಲಿಗ ಬಂದು
ಯಾವತ್ತು ನೋಡಿಲ್ಲ ಗಣ್ಮಗನ
ಹುಟ್ಟಿದಾಗಲಿದ್ದ ನೋಡಿಲ್ಲ
ಕೊಡ ಕೆಳಗಿಟ್ಟು
ಒಂದು ಪಾದ ಎರ್ಡು ಕೈ ಜೋಡಿಸಿದ್ಳು
ಎರ್ಡು ಕಣ್ಣಿಗ ಥಳಕ್ ಅಂದದ
ಎನ್ರೀ ನೀವೇನು ದೇವ ಪರಮಾತ್ಮನಾ
ಕೃಷ್ಣನಾ ಅರ್ಜುನ ಭೀಮನ
ಯಾರ್ರಿ ನೀವು ಅಂತ ಕೇಳಿದ್ಳು
ಕೇಳವ್ವೆ
ನನಗ್ಯಾಕ ಕೈ ಮುಗಿತೀಯ
ನಾನೇನು ದೇವ್ರ ದಿಂಡ್ರಾ
ಈಗ ನಿನ್ನಂಥ ಜೀವನೇ ನಂದು
ನಾನು ಲೋಕ ಹುಟ್ಟಿ
ಲೋಕ ಬೆಳ್ದಿನಿ
ನಾನೇನು ಪರಮಾತ್ಮ ಅಲ್ಲ ದೇವರಲ್ಲ
ಏನ್ರೀ ನಿಂದು ಯಾವುರ್ರೀ ಅಂತ ಕೇಳಿದ್ಳು
ನಂದು ಚಾಂಪುರ ಪಟ್ಣ
ನಮ್ಮ ತಂದಿ ಗೊಲ್ರು ಹಾಲಗೊಲ್ರು
ನಮ್ಮ ತಂದಿ ಕಾಂಭೋಜರಾಜ
ನನ್ಹೆಸ್ರು ಶರಬಂದರಾಜ
ನಮ್ಮ ತಂದಿಗಿ ಹುಣ್ಣು ಹುಟ್ಟೈತಿ
ಮೇಟಿ ಔಷಧ ತರಾಕ
ಏಳು ಸಮುದ್ರಗ ಹೊಂಟಿನಿ
ಓ ಹೋ ನೀನ್ಯಾರು
ನೋಡ್ರೀ ಚಿತ್ರಗಿರಿ ಪಟ್ಣದಾಗ
ನನ್ಹೆಸರು ಚಿತ್ರಾಂಗಿ ಅಂತಾರ್ರೀ
ಮತ್ತೇ ಯಾಕ ಒಬ್ಬರಿಲ್ಲಲ್ಲ ಅಂತ ಕೇಳಿದ
ನಮ್ಮಮ್ಮ ನಮ್ಮಪ್ಪ
ಎರ್ಡು ಪಲ್ಲ ಜೋಳ ಬೀಸಿ
ಎರ್ಡೇ ಮುದ್ದೆ ಮಾಡ್ತಾರ
ತೆಲಿಗೊಂದು ಮುದ್ದೆ ತಿಂತಾರ
ತೆಲಿಗೆರ್ಡು ಕೊಡ ನೀರು ಕುಡಿತಾರೆ
ದಿನಾಲು ಮನ್ಯಾಗ ಇದ್ದು ಇದ್ದು
ಬ್ಯಾಸರ್ಕಿ ಬಂದೈತಂತಾ
ಇವತ್ತು ಹೋಗಿ ಬಿಟ್ಟಾರ
ಆರಂಡಿಗೆ ಅಂದ್ಳು
ಆಗ ಅರ್ಥ ಮಾಡಿಕ್ಯಂಡ ಹುಡುಗ
ಅಲೆಲೆಲೆಲೇ
ರಾಕ್ಷಸಿಗಳು ಊರಾಗ್ ಹೊಕ್ಕಂಡು
ಊರ ಜನಸಂಖ್ಯೆನೆಲ್ಲ ನಾಶನ ಮಾಡಿಬಿಟ್ಟಾವ
ಇವ್ಳುದು ಯಾರ ಬಣ್ಣ ಐತೆಂದ್ರೆ
ಶಾನುಭಾಗರ ಬಣ್ಣ ಐತೆ
ಎಂಗೆಂಗೋ ಈ ಯಮ್ಮನ ಹೊಟ್ಟೆ ತಿವಿಸಿ
ಹೊಟ್ಟ್ಯಾಗಿರೋ ಕೂಸನ್ನ ತಗಂಡು
ಜ್ವಾಪಾನ ಮಾಡಿಕ್ಯಂಡಾವ ಅವು
ಏನಮ್ಮಾ ನಾನು ದಾರಿತಪ್ಪಿ ಬಂದೀನಿ
ಮತ್ತೇ ಏಳು ಸಮುದ್ರದ ದಾರಿ
ಎಲ್ಲಿಗೆ ಹೋತೈತೆ
ತೋರಿಸು ಅಮ್ಮ ಅಂದ
ಏನ್ರೀ ಈಗ ಇಲ್ಲಿಗ ಹದನಾರು ಗಾವುದ ಬಂದಿ
ಹೊಟ್ಟೆ ಹಸುಕೊಂಡು ನೀರಡಿಕೆಯಾಗಿ
ಬರೇ ಹೊಟ್ಟಿಲಿ ನೀರು ಕುಡಿದು ಕುಂತೀಯಲ್ಲ
ಬರ್ರೀ ಅಡಿಗೆ ಮಾಡಿನಿ ದೇವ್ರು ಪೂಜೆ ಮಾಡಿ
ಈಗ ನೀನುಂಡ ಮ್ಯಲ
ನಾನೂಟ ಮಾಡ್ತಿನಿ
ಇಬ್ರು ಊಟ ಮಾಡೋಣ ಬರ್ರಿ ಅಂದ್ಳು
ಇಲ್ಲಮ್ಮ ನಾನು ಊಟ ಮಾಡೋದಿಲ್ಲ ಅಂದ
ಛೀ ಅನ್ನ ಹಸುವು ಆಗ್ತೈತಂದಾಗ
ಒಲ್ಲೇ ಅನಬಾರ್ದುರೀ
ಬರ್ರೀ ಅಂತ ಅಂದ್ಳು
ಛೀ ಅನ್ನಅಂದ್ರೆ
ಇನ್ನವ್ರು ಬಾ ಅಂತ ಆ ಯಮ್ಮ ಕರಿತಾಳ
ವಲ್ಲೇ ಅಂತ ನಾನಂತಿನಿ
ಹೆಣ್ಮಕ್ಕಳು ಕರದಾಗ
ನಾನು ಹೋಗಬಾರ್ದಾ ಅಂತ

ನಡ್ಯಮ್ಮ ಬರುತೀನಿ ನಿನ್ಹ್ನಿಂದೆ ನಾನಮ್ಮ       || ತಂದಾನ ||

ಆಗ ಹಿಂದೆ ಶರಬಂಧರಾಜ
ಮುಂದೆ ಆಯಮ್ಮ ಬಂದ್ಳು ಚಿತ್ರಾಂಗಿ
ಕೂಡ್ರಿ ಕುರ್ಚಿಮ್ಯಾಲೆ ಅಂದ್ಳು
ಆಗ ಮನ್ಯಾಗ ಬಂದ
ಕುರ್ಚಿ ಮ್ಯಾಲೆ ಕುಂತಗಂಡ
ಆಯಮ್ಮ ತುಂಬಿದ ಕೊಡಪಾನ
ದೇವ್ರುತಲ್ಲಿ ತಕ್ಕೋಡ್ಹೋದ್ಳು
ದೇವ್ರು ಪೂಜೆ ಮಾಡಿ ಬಿಟ್ಟು
ಬೆಳ್ಳಿ ಬಟ್ಲದಾಗ ಬಿಳಿ ಅನ್ನ ಇಟಕೊಂಡು
ಹಚ್ಚನ ತೊಗೆ ಹಾಕ್ಯಂಡು
ಆಗ ತುಪ್ಪ ಹಾಕ್ಯಂಡು
ಮೊಸರು ಹಾಕ್ಯಂಡು ಬಂದು ಮುಂದಿಟ್ಟು
ಊಟ ಮಾಡ್ರೀ
ಏನ್ರೀ ನೀವೂ ಊಟ ಮಾಡ್ರೀ
ಗಂಡಸರ ಊಟ ಮಾಡಿದ ಮ್ಯಾಲೆ
ಹೆಂಗಸೂರು ಊಟ ರೀ
ನಿಮ್ಮೂಟ ಮುಂದ್ರಿ
ನಮ್ಮೂಟ ಹಿಂದ್ರಿ ಅಂದ್ಳು
ಸರಿ ಬಿಡು ಅಂತ
ಆಗ ಆತ ಮೂರೇ ತುತ್ತು ಊಟ ಮಾಡಿದ
ಅರ್ಧಹೊಟ್ಟೆ ಇರ್ಲಿಕ್ಕೆ ವಲ್ಲೆ ಅಂದ
ಏನ್ರೀ ನೀವು ಏಣು ಅಂದ್ಕೋಬ್ಯಾಡ್ರಿ
ಜಗ್ಗಿ ಊಟ ಮಾಡ್ರಿ ಅಂದ್ಳು
ಇಲ್ಲಮ್ಮ ಜಗ್ಗಿ
ಗೇಣೈತಿ ಹೊಟ್ಟೆ
ಗೇಣು ಹೊಟ್ಟಿಗೆ ಚರಿಗಿ ನೀರು
ಹಿಡ್ಕಿ ಅನ್ನ ಸಾಕು
ಚೀಲ ತುಂಬ್ಹೋಯ್ತು
ಇನ್ನ ಎಲ್ಲಿ ಬಚ್ಚಿಕಲ್ರಿ ನಾನು ಅಂದ
ಸರಿಬಿಡು
ಆಕಿ ಮಾಡಿಕ್ಯಂಡಿದ್ದು ಪಾವು ಅಕ್ಕಿ
ಹಿಡ್ಕಿ ಅನ್ನ ಐತಿ
ಆದೀಟ ಇಟಗಂಡು
ಆಗ ಬಾಕಿಲ ಹೊಸ್ತಲ ಮ್ಯಾಲೆ ಕುಂತ್ಕೊಂಡು
ಈ ಹುಡುಗನ ಕಡೆಗೆ ಮಕಾಮಾಡಿ ಊಟ ಮಡ್ತಾಳ
ಈ ಹುಡುಗೇನು
ಆಗ ಶರಬಂದರಾಜ
ಆಯಮ್ಮನ ಕಡಿಗೆ
ಚಿತ್ರಾಂಗಿ ಕಡಿಗೆ
ಊಟಾ ಮಾಡೋದು ನೋಡ್ತಾನ
ಈ ರಾಕ್ಷಸಿಗಳು ಆರಂಡಿಗೋಗ್ಯಾವಲ್ಲ
ಬಿಸಿಲಿಗೆ ನೀರಡಿಕೆ ಆಗೈತಿ
ನೀರು ಎಲ್ಲೆಲ್ಲಿಲ್ಲಾ ಅಡಿವ್ಯಾಗ
ಆಗ ಬಂದು ಬಿಟ್ಟು
ಬಾಯಾಗಿಳಿದುಕೊಂಡು ನೀರುಕುಡಿದು
ಒಳ್ಳೆ ಮದ್ಯಾಹ್ನದಾಗ ಬಂದು ಬಿಟ್ಟು ಮನಿಗೆ
ಬಜಾರಾದಾಗ ಬರಬೇಕಲ್ಲ
ಬಜಾರಾದಾಗ ಐತಿ ಮನಿ
ಆಗ ಬೇಸು ಎದುರಾಗಿ ಕುಂತಾಳ ಅಗಸಿಗೆ
ಆಗ ನೋಡಿ ಬಿಟ್ಳು ಚಿತ್ರಾಂಗಿ
ಏನ್ರೀ ನೋಡ್ರೀ ನನ್ನ ತಾಯಿ ತಂದೆ ಅವ್ರೇರೀ
ಅವ್ರು ಹೊಟ್ಟ್ಯಾಗೇ ನಾನ ಹುಟ್ಟಿದ್ದು ಅಂದ್ಳು
ಹಿಂದಕ್ಕೆ ನೋಡಿದ
ಬರ್ತಾವೆ ರಾಕ್ಷಾಸಿಗಳು
ನನ್ನ ಬಿಡ್ತಾವ
ಈ ಊರೇ ಹಾಳು ಮಾಡ್ಯಾವ
ನನ್ನ ಬಿಡ್ತಾವ ಬಿಡಾದಿಲ್ಲ
ನೋಡಮ್ಮಾ ನಾನು ಇಷ್ಟೋತ್ತಿಗೆ
ಏಳು ಸಮುದ್ರಕ್ಕೆ ಹೋಗ್ತಿದ್ದೆ
ಏಳು ಸಮುದ್ರಕ ಹೋಗವ್ನ
ನೀನು ಕರಕಂಡು ಬಂದೆ
ಉಂಬಾಕೇನ ಜಲ್ಮಕೇನ ಅನ್ನ ಇಟ್ಟೆ
ಈಗ ಜೀವ ಕಳಿತಿಯೇ
ನನ್ನ ಜೀವ ಕಳಿತೀಯಲ್ಲಮ್ಮಾ ಅಂತ ಕೇಳ್ದ
ಇಲ್ರೀ ನನ್ನ ಜೀವ ಕಳಕಂಡು
ನಿನ್ನ ಜೀವ ಉಳಿಸ್ತೀನಿ
ಏನು ವ್ಯಸವ ಮಾಡಬ್ಯಾಡ್ರಿ
ಕಂಬಕ್ಕ ಆನಿಕ್ಯರ್ರೀ ಅಂದ್ಳು
ಆಕೆ ನೋಡು
ಗಣ್ಮಕ್ಕಳ ಜೀವ ಉಳಿಸಾಕಿ
ಎನ್ರೀ
ಏನು ಎದಿ ಬೀಳಬ್ಯಾಡ್ರಿ ಅಂತ
ಕಂಬಕ್ಕ ಆನಿಕ್ಯಂಡಮೇಲೆ
ಮೂರು ಉಪಿನಳ್ಳ ತಗಂಡು
ಮಂತ್ರಿಸಿ ಒಗ್ದು ಬಿಟ್ಳು ಆತನ ಮ್ಯಾಲೆ
ಆಗ ಹಲ್ಲ್ಯಾಗಿ ಕಂಬಕ್ಕತ್ತಿಕ್ಯಂಡು ಬಿಟ್ಟ
ಈಕಿ ಏನ್ಮಾಡಿ ಬಿಟ್ಳು
ಜಮಖಾನೆ ಹೊದ್ದುಕಂಡು
ಹೊರಸು ಮ್ಯಾಲೆ ಮಕ್ಯಂಡ್ಳು
ಎಲ್ಡು ರಾಕ್ಷಸಿ ಬಂದ್ವು ತಾಯಿತಂದೆ
ಏನಮ್ಮಾ ಮಗಳಾ
ಜಮಖಾನ ಹೊದುಕಂಡು ಮಕ್ಕಂಡೀಯ
ನಮಗೆ ಎಲೆ ಅಡಿಕೆ ಕೊಡು ಅಮ್ಮ ಅಂತ ಕೇಳಿದ್ವು
ಯಮ್ಮಾ ಎಲೆ ಅಡಿಕೆ ಕೊಡು ಅಂತ ಕೆಳ್ತೀರಿ
ನೀವು ಹೋದಾಗಲಿದ್ದ
ನನಗೆ ಹೊಟ್ಟೆ ಬ್ಯಾನೆ ಸೂಲೆಬ್ಯಾನಿ
ನನ್ನ ಎಬ್ಬಿಸೋರಿಲ್ಲ
ಮಾತಾಡೋರಿಲ್ಲ
ನೀರ ಕಾಸಿ ಹಾಕೋರಿಲ್ಲ
ಇನ್ನು ನೀವೇನ ತಂದೆ ಸತ್ರೆ ನೀನು ನೋಡ್ತಿಯ
ನೀನ್ ಸತ್ರೆ ತಂದೆ ನೋಡ್ತಾನ
ನೀವಿಬ್ರು ಒಬ್ಬರಿಗೋಬ್ಬರು ನೋಡ್ತಿರಿ
ಯಮ್ಮಾ ತಾನು ಒಬ್ಬಾಕಿ
ದುಃಖ ಮಾಡಿಮಾಡಿ ಸಾಕಾಯ್ತು ಅಂದ್ಳು
ಅಂಬೋತ್ತಿಗೆ ಗಂಡು ರಾಕ್ಷಸಿ ನೋಡಿತು
ಲೇ ಮಗಳಿಗೆ ಹೊಟ್ಟೆನೋಯ್ತತಿ ಅಂತೆ
ತುಪ್ಪೆಲ್ಲ ಕರಗಿ ಹೋದ ಮ್ಯಾಲೆ ತಿಂದ್ರೆ
ಬಾಯಿಗೆ ಏನು ರುಚಿ ಕಾಣತೈತೆ
ಏನೇ ಬೇಸು ನಾವು ಜೋಪಾನ ಮಾಡಿವಿ
ಅಪ್ಪಣೆ ಕೊಡು
ಆಗ ತಲಿಗೀಟು ಊಟಾ ಮಾಡಾಣ ಮಗಳ್ನ ಅಂತ ಕೇಳ್ದ
ಯಾರು
ಗಂಡ
ಆಗ ಹೆಣ್ತಿ ನೋಡಿದ್ಳು
ಏನ್ರೀ ಎಂಥ ನಿನ್ನ ಗುಣ ಐತ್ರೀ
ಹೊಟ್ಟೆ ಮ್ಯಾಲೆ ಉಗುರು ಹಾಕಿ
ಹೊಟ್ಟೆಗಿರೋ ಕೂಸು ತಗಂಡು
ಹಾಲು ಹಾಕಿ ನೀರು ಹಾಕಿ ಬೆಳೆಸಿಕೊಂಡವರು
ಸತ್ರೆ ಬೀಸಾಕಾಣ
ನಮ್ಮ ಜೀವಕ್ಕ ಊಟ ಮಾಡಬಾರ್ದು
ಈಗ ನನ್ನ ಮಗಳ್ನ
ನಾಣು ಕೇಳಿಕ್ಯಂತೇನ್ರಿ ಅಂದ್ಳು
ಕೇಳ ಮತ್ತೆ ಅಂದ
ಯಮ್ಮಾ ಮಗಳ ನಮ್ಮಂಗ ಜೋಡು ಜೊತೆ ಮಾಡಾನ ಅಂದ್ರೆ
ಈ ಚಿತ್ರಗಿರಿ ಪಟ್ಣಕ್ಕ ಯಾರು ಬರಂಗಿಲ್ಲಮ್ಮ
ನಮ್ಮನ್ನು ನೋಡಿ
ಹೇದ್ರಿಕ್ಯಂಡು ಓಡಿ ಹೋತಾರ
ಆಗ ನಾವು ಬಿಗಿದಲ್ಲಿ ಓಡಿದ್ರೆ
ಬಕ್ ಬರ್ಲ ಬಿದ್ದು ಸತ್ತೋಗ್ತಾರ
ನಾವು ಬಾಯಗಿಟ್ಟುಕಂತಿವಿ ಬರ್ತಿವಿ
ನಮ್ಮನ್ನು ನೋಡಿ ಬಿಗುದಲ್ಲಿ ನಿಂದ್ರೋ
ಗಣ್ಯಗ ಯಾರಿಲ್ಲ ತಾಯಿ
ನಾವು ಏನು ಮಾಡಾನ ಅಂದ್ಳು
ಯಮ್ಮಾ ನಿಮ್ಮನ್ನು ನೋಡಿ
ಯಾರು ಬರ್ತಾರ ಈ ಪಟ್ಣಕ್ಕ
ಮಗಳ್ನೇ ತಿಂಬೋನಂಬೋರು
ಇನ್ನ ರಾಯು ಬರ್ತಿದ್ದಾರು
ನಿಮ್ಮ ಪಟ್ಣಕ್ಕೆ ಯಾರು ಬರದಿಲ್ಲ
ಕೇಳವ್ವೆ ತಾಯಿ
ಈಗ ಜೀವಕ್ಕಾಗಿ
ಯಾರೂ ಬರಾಂಗಿಲ್ಲ ನೀವು ಮಾಡಂಗಿಲ್ಲ
ಅಯ್ಯೋ ಮಾಡ್ತಿವಮ್ಮ
ಈಗ ಎನ್ ಮಾಡಬೇಕು ಮಗಳಾ
ಈಗಿನ್ನ ಯಾರನ್ನ ಬಂದಿದ್ರೆ ಹೇಳಮ್ಮ ಅಂದ್ಳು
ಈಗ ಯಾರನ್ನ ಬಂದ್ರೇನು
ಈಗ ನೀನನ್ನ ಬಚ್ಚಿಕ್ಕೀ ಏನು
ತೋರ್ಸು ಅಮ್ಮ ಅಂದ್ಳು
ನೋಡಮ್ಮ ಬಚ್ಚಿಟ್ಟೀನಿ
ನಾನು ತೋರಿಸಿದ್ರೆ
ನೀವು ಬಾಯಾಗಿಟ್ಟುಕಂತಿರಿ
ನನ್ನೇ ತಿಂಬೋರು
ಇನ್ನು ನಾನು ಬಚ್ಚಿಟ್ಟೋರನ್ನ ಬಿಡ್ತೀರ್ಯಾ
ಬಿಡಂಗಿಲ್ಲ
ನೀವು ಬಾಯಾಗಿಟ್ಟಕೊಂತಿರಿ
ನೀವು ಎತ್ತಾಗೆನ್ನ ಮನೆ ಬಿಟ್ಟು ಹೋದ ಮ್ಯಾಲೆ
ಈಗ ಜೀವ ಬಿಟ್ಟು ಜೀವ
ನಾವು ಇಬ್ರು ಹೋಗಿ ಬಿಡ್ತಿವಿಯಾ ಅಂದ್ಳು
ಹಾಂಗಲ್ಲಮ್ಮಾ
ಹಾಂಗ ಹೋದ್ರೆ ಲೋಕ ನಡ್ಯಂಗಿಲ್ಲ
ನಾವು ಎಂಥ ದುಷ್ಟ ತಂದೆಯವರಾಗಲಿ
ಎಷ್ಟು ಕರ್ಮ ತಾಯಿ ಆಗಲಿ
ನಿನಗೆ ಮದ್ವೆ ಮಾಡ್ತಿವಿ ಅಂದ್ರು
ನನಗೆ ಭಾಷೆ ಕೊಡಬೇಕು ನೀವು ಹಂಗಾರೆ
ಏನು ಭಾಷೆ ಕೊಡಬೇಕಮ್ಮ ಮಗಳೆ
ಅಂತ ಕೇಳ್ದಳು ಚಿತ್ರಾಂಗಿಗಿ
ನನ್ನ ಕೈಯಾಗ ಕೈಹಾಕ್ಬೇಕು
ಯಂತವ್ನೆ ಆಗ್ಲಿ
ಕುರ್ಡಾಗ್ಲಿ ಕುಂಟಾಗ್ಲಿ ರೋಗಿಯಾಗಲಿ
ನನಗೆ ಪಾಲಿಗೆ ಬಂದದ್ದು ಪರಿಯಾಣ
ಜೀವ ಕಲ್ತವ್ನು ನಿನ್ಗ ಮಾಡ್ತಿವಿ
ಈಗ ನೀವು ಮಾಡೋದಿಲ್ಲ ಅಂದ್ರೆ
ನಾನು ತೋರಿಸೊದಿಲ್ಲ
ಯಮ್ಮಾ ನನ್ಗ ಪಾಲಿಗೆ ಬಂದಿದ್ದು ಪಾರಿಣಾಮ
ಕುರುಡಾಗ್ಲಿ ಕುಂಟಾಗ್ಲಿ
ಈವೊತ್ತು ಮಾಡಿಕ್ಯಂಡರೆ ನಾಳೆಯೇ ಸಾಯಲಿ
ಈಗಿನ್ನ ಮಾಡ್ತಿನಂದ್ರೆ
ನಾನ ತೋರಿಸ್ತಿನಿ ಅಂದ್ಳು
ಅಷ್ಟೇ ಆಗಲಿ ಅಮ್ಮಾ ಮಗಳೆ ಅಂತ
ಕೈಯಾಗ ಕೈ ಹಾಕಿದ್ದು
ಹಚ್ಚನ ಎಲೆ ಮ್ಯಾಲೆ ಕೈ ಹಾಕಿದ್ರು
ಆಗ ಮೂರು ಕಲ್ಲು ತಗೊಂಡು
ಮೂರು ನಿಂಬೆಣ್ಣು ತಗೊಂಡು
ಫಳ ಫಳ ಮಂತ್ರಿಸಿ
ಕಂಬಕ್ಕ ಒಗದು ಬಿಟ್ಟು
ಹಲ್ಲಿ ಮಾಡಿ ಕಂಬಕ ಬಿಟ್ಟಿದಾಕಿ
ಆಗ ಕಂಬದ ಬಗಲಾಗ
ನೆಟ್ಟಿಗ ನಿಂತಗಂಡ
ಯಾರು ಗೊಲ್ರ ಹುಡ್ಗ ಶರಬಂದರಾಜ
ಆಗ ರಾಕ್ಷಿಸಿಗಳು ನೋಡಿಬಿಟ್ಟು
ಎರ್ಡು ಕಣ್ಣಿಗೆ ಥಳಕ್ ಅಂದ
ಆಹಾ ಈ ಹುಡುಗ
ಇಷ್ಟು ಚೆಂದ ಕಾಣ್ತಾನ ಕಣ್ಣಿಗೆ
ಇನ್ನ ಮೈ ಉಂಡ್ರ ಎಷ್ಟು ಬಲ ಬರಬೋದು ನಮ್ಗ
ಕಣ್ಣಿಗ ನೀಟಾಗಿ ಕಾಣ್ತಾನಲ್ಲ
ಹೊಟ್ಟಿಗೆ ಉಂಡ್ರೆ
ಎಷ್ಟು ಬಲ ಶಕ್ತಿ ಬರಬಹುದು ನಮ್ಗ
ಅಮ್ಮಾ ಮಗಳಾ ಚಿತ್ರಾಂಗಿ
ಕುಂತ್ಕಂಡೆ ಜತಿ ಇಲ್ಲ
ನಿಂತ್ಕಂಡ್ರೆ ನಿನಗೆ ಜೋಡಲ್ಲ
ತೆಳ್ಳಗ ಗಾಳಿ ಪಟ ಇದ್ದಾಂಗ ಇದಾನ
ಗಾಳಿ ಬಂದ್ರೆ
ಬಡಕಂಡ್ಹೋಗ್ತಾನ ಅವ್ನು
ಜ್ವರ ಬಂದ್ರೆ
ಕುಣಿ ಮುಂಚ್ಯಾಗ ತಯಾರ ಮಾಡ್ರಿ ಅಂತಾನ
ಬೆಳ್ಳಗ ಐದಾನ ಬಿಳಿಕೋತಿ ಇದ್ದಂಗ
ಈಟು ದಪ್ಪ ಇರಬೇಕು
ಕುಂಬ್ಳಕಾಯಿ ಇದ್ದಂಗ
ಅವ್ನು ಎಂಟುದಿವ್ಸ ಅನ್ನ ಬಿಟ್ರೂನು
ಹ್ಯಾಂಗಿದ್ದ ಮನುಷ್ಯ ಹಾಂಗೇ ಇರಬೇಕು
ಮಗಳಾ ಕುಂತ್ರೇ ಜೋಡಲ್ಲ
ನಿಂತ್ರೆ ಜತೆ ಇಲ್ಲ
ಜತಿ ಇದ್ರೆ ಬೇಸು
ಈಗ ಅವ್ನ ಬಾಯಗಿಟ್ಟುಕಂತಿವಿ
ಈಗ ಲೋಕ ಹೋಗಿ
ಎಲ್ಲೆನ್ನ ಹುಡುಕ್ಯಾಡಿ
ಅವನನ್ನು ಹೊತ್ಕಂಡು ಬರ್ತಿವಿ
ನಿನಗೆ ಲಗ್ನ ಮಾಡ್ತಿವಿ
ಅಂತ ಕೇಳಿದವು ರಾಕ್ಷಾಸಿಗಳು
ಯಮ್ಮಾ ಪಾಲಿಗೆ ಬಂದದ್ದು ಪರ್ಯಾಣ
ಕುರ್ಡ ಆಗ್ಲಿ ಕುಂಟ ಆಗ್ಲಿ
ಈಗ ತಾಳಿ ಕಟ್ಟಿ
ಇನ್ನ ಸ್ವಲ್ಪೋತ್ತಿಗೆ ಜೀವ ಬಿಡ್ಲಿ ಆತ
ಆತೇ ಬೇಕು ನನಗೆ
ಇಲ್ಲಮ್ಮಾ ಬೇಸಿಲ್ಲ
ಅಂಬೊತ್ತಿಗೆ ಅಪ್ಪಣೆ ಕೊಡು
ನಾವು ಊಟ ಮಾಡ್ತಿವಿ ಅಂದ್ರು
ಊಟ ಮಾಡ್ತಾರಂತೆ ಇವ್ರು
ನನಗೇನು ಮಾಡೋದಿಲ್ಲಂತೆ
ಅವರ ಜೀವಕ್ಕ ಊಟ ಮಾಡ್ತಾರಂತೆ ಇವ್ರು
ನನ್ನ ಜೀವಕ್ಕ ತಾಳಿ ಕಟ್ಟೋದಿಲ್ಲ
ಏನ್ರೀ ನಿಮ್ಮ ತಾಯಿ ತಂದೆ
ನನ್ನ ಹ್ಯಾಂಗ ಬೆಳಿಸ್ಯಾರೋ ಹ್ಯಾಂಗಿಲ್ಲೋ
ಇವ್ರೇನೆ ನಾನು ಯಮ್ಮಾ ಯಪ್ಪಾ ಅಂಬೋದು
ಈ ಚಿತ್ರಗಿರಿ ಪಟ್ನದಾಗೆ
ಆಗ ಇವರಿಷ್ಟ
ನಮ್ಮ ತಾಯಿ ತಂದೆ ಇಷ್ಟ
ನಿನ್ನಿಷ್ಟ ಅಂತ ಕೇಳಿದ್ಳು
ಸರಿ
ನಿಮ್ಮ ತಾಯಿಗ ಇನ್ನ ಒಪ್ಪಿಸಿಯ
ನಿಮ್ಮ ತಂದಿತಾಯಿಗ ನನ್ಗ ಒಪ್ಪಿಸಿಯಿ
ಸರೆ ನೀನು ರೂಮಿನ್ಯಾಗ ಕುಂತ್ಕೊ ಅಂದ
ಆಗ ರೂಮಿನ್ಯಾಗ ಹೊದ್ಳು ಚಿತ್ರಾಂಗಿ
ಆಗ ಹೊರಗ ಬಂದಿದ್ವು
ವರಸತಲ್ಲಿ ಕುಂತಿದ್ವು
ಕಂಬ ಬಗಲಾಗ ನಿಂತಿದ್ದ ಶರಬಂದರಾಜ

ಆಗ ಚಂದ್ರಾಯುಧ ಹಿಡಿದಾನ
ಇನ್ನು ಆಗ ಏನು ಮಾಡಿದ
ಆಗ ಏಳು ದಡೇವು
ತೋಥಡಿ ಚಂದ್ರಾಯುಧ ಹಿಡಿದ
ಎರ್ಡು ರಾಕ್ಷಾಸಿಗಳು
ಏs ಚಪ್ಪನಂಗ ಕಡಿದಾ
ಒಂದೇಟಿಗೆ ಎರ್ಡು ತುಂಡು ಆಗ್ಯಾವ || ತಂದಾನ ||