ಲೇ ಹೆಸರಿಟ್ಟು ಕರಿತಾವ
ಟಂಕಬೈಯಿನ ರುದ್ರಬೈಯಿನ
ನಿಂದ್ರಲೆ ಚಿಕ್ಕ ತಿರುಪತಿ ಅಂತಾನ
ಏಯಪ್ಪ ನಮ್ಮೂರ ದೆವ್ವಗಳಲೇ ಇವು
ಏನು ಮೊಣ ಕೈಯೆಲ್ಲ ಚಕಚಕ
ಹಲ್ಲೆಲ್ಲ ಝಳಝಳ
ಮೊಣಾಕಾಲೆಲ್ಲ ಪಿಚಿ ಪಿಚಿ
ಹಿಂದಕ ನೋಡ್ತಾರ
ಈಕಿ ಏನಂತ ಹೇಳಿದ್ಳು
ನೋಡ್ರಿ ಬಾಕ್ಲ ತೆರತಲೇ
ನಾವ್ ಓಡಿ ಹೋಗಬೇಕು ಅವ್ಹ್ರಿಂದೆ
ಹಂಗಾರ ನಮ್ಗೆ ಊರು ಸಿಗತೈತೆ
ಇಲ್ದಿದ್ರೆ ಸಿಗದಿಲ್ಲ
ನಾನು ಕೂದಲು ಬಿಟ್ಟಕ್ಯಂಡಿರ್ತಿನಿ
ಈಗ ನೀನೇನು ಕೈ ಚೀಲ ಚಂದ್ರಾಯುಧ ಹಿಡ್ಕೋ
ಅವ್ರ ಹಿಂದ ಓಡಿದ್ರೆ
ನಾವು ಊರಾಕ ಹೋತಿವಿ
ಇಲ್ಲಾಂದ್ರೆ ಇಲ್ಲ
ಲೋಕ ಕಲ್ಯಂಗಿಲ್ಲ ನಾವು
ಅಂಬೊತ್ತಿಗೆ ಇವ್ರು ಓಡೋಡಿ ಬರ್ತಾರಪ್ಪ
ಇವ್ರು ಮುಂದೆ ಹೋತಾರ
ಗಿಡ ಏರಿದವ್ನು ನೋಡಿದ

ಹಂಚಗ್ಯರ್ರೀ ಹಂಚಿಗ್ಯರ್ರೀ
ಈಗ ಹಣ ಗುಣ ಎಲ್ಲೈತೋ
ಇನ್ನ ಎಲ್ಲ ಹಾಳಾದ್ರೆ
s ಕುಪ್ಪಿಸಿ ಹಾರ್ಯಾನ
ಅವ್ನು ಮುಂಚ್ಯಾಗಿ ಬಂದಾನ           || ತಂದಾನ ||

ಕುಪ್ಪಳಿಸಿ ಹಾರಿ ಬಿಟ್ಟ ಗಿಡ್ದಾಗಲಿದ್ದ
ಆಗ ಊರಾಕ ಅವ್ರಿಗಿನ್ನ ಮುಂಚ್ಯಾಗ ಓಡಿಬಂದ
ಚಾವುಲರಾಜನತಲ್ಲಿಬಂದ
ಯಪ್ಪಾ ಹೆಣ್ಣು ಗಂಡು ಹೆಣ್ಣು ಗಂಡು ಅಂತಾನ
ಲೇ ಏನಲೇ
ಹೆಣ್ಣು ಗಂಡು ಹೆಣ್ಣು ಗಂಡು ಅಂತಾನ
ಅಲೇಲೇ ಮೀನು ಹಿಡಿಯಾಕ ಹೋಗ್ಯಾನ
ಇವ್ನಿಗೆ ದೆವ್ವ ಬಡಕಂಡೈತೆ ಅಂದ
ಏನಿಲ್ರೀ ಒಂದು ಪೆಟ್ಟಿಗೆ ಸಿಕ್ಕಿತ್ರೀ
ಸ್ಟೀಲ್ ಪೆಟ್ಟಿಗೆ
ಆ ಪೆಟ್ಟಿಗ್ಗೇ ನಮ್ಮಣ್ಣೋರ ಹಾಳಾಗಿ ಹೋಗ
ಗುಣನೋಡಿ ಹಣ ಸಿಕೈತೆ ಅಂತ
ಏನ ದೊಡ್ಡದು ಬ್ಯಾಟೆ ತಂದು ಕಡುದ್ರು
ಕೊಳ್ಳಾನ ಹೆಂಡ್ರ ತಾಳೆಲ್ಲಾ ಮಾರಿಬಿಟ್ರು
ಮೀನು ಹಿಡಕಂಡು ತಿಂಬಾಕ ಇಲ್ದಂಗ
ಬಲ್ಯಲ್ಲಾ ಮಾರಿಬಿಟ್ರು
ಏನು ಒಬ್ಬಳು ಕೂದಲು ಬಿಟಗಂಡು
ಹೆಣ್ಮಿಗ್ಳು ಓಡೋಡಿ ಬರ್ತಾಳ
ಎಲ್ಲಾ ಹೆಸರು ಹೇಳ್ತಾಳ್ರೀ
ಏನ ದೊಡ್ಡ ತಿರುಪತಿ
ಚಿಕ್ಕ ತಿರುಪತಿ
ಟೊಂಕಬೈಯಿನ ಅಂಬಿಗೋರೆ ಅಂತು
ಓಡೋಡಿ ಬರ್ತಾರ ಅವ್ರು
ಒಬ್ಬ ಹೆಣ್ಣು ಒಂದು ಗಂಡು
ಎಲ್ಲಿಗ್ಯನ್ನ ಬಂದ್ರಲೇ
ಆಗ್ಯೋಯ್ತು ನಿನ ಬಡಿಮಿಟ್ಟಿಲ್ಲ
ಆಗ ಬಿಳಿಜೋಳ
ಇನ್ನ ಆಗ ಹೊಲ ಇಲ್ಲ
ಅಲ್ಲಿಗ್ಯಾನ ಬಂತು
ಆಗ್ಯೋತು ಹೋಗ
ನಮ್ಮುರ ಉಳಿಯೋದಿಲ್ಲ
ಊರಾಗ ಹೊಕ್ಕಂಡ ಮ್ಯಾಲೇ
ಯಾವ ಮೂಲಿಗೆ ಹೊಕ್ಕಂಡ್ವೋ
ಯಾರ ಮನ್ಯಾಗ ಕುಂತ್ಕಂಡ್ವೋ
ಆಯ್ತು ಒಂದೋತ್ತಲಿದ್ದ

ಹೆಣ್ಣುಗಂಡು ಕೊಲ್ಲುತಾವ
ನಾವು ಊರಾಗ ಉಳ್ಯೋದಿಲ್ಲಾ      || ತಂದಾನ ||

ನಾವು ಸತ್ತೋತ್ತೀವಿ
ಲೇ ದೆವ್ವಗಳು ಇನ್ನು ಅಡಿವ್ಯಾಗಲಿದ್ದ
ಊರಾಗ ಹೊಕ್ಕಂಡ ಮ್ಯಾಲೆ
ನಮ್ಮ ಊರು ಉಳಿಯೋದಿಲ್ಲ
ಎದ್ದೇಳ್ರಿ ಊರೆಲ್ಲ ಅಂತ
ಆಗ ಬಲ್ಲೇವು ತಗಂಡು
ಕೊಡ್ಲಿಗಳು ಒಣಿಕೆಗಳು
ಆಗ ಬಂಡಿ ಇನ್ನ ಗಜಗಳು
ಗೂಟಗಳು ಎಲ್ಲಾ ಕಿತ್ತಿಗೈಂಡುಬಿಟ್ರಪ್ಪಾ
ಆಗ ಅಗಸೆತಲ್ಲಿ ಬರ್ತಾರಪ್ಪ ಅವ್ರು
ಇವ್ರೇನು ಮಾಡಿಬಿಟ್ರು
ಒಳ್ಳ್ಯಾಡಿಕ್ಯಾಂತ ಬಳ್ಳ್ಯಾಡಿಕ್ಯಾಂತ
ಬಂದು ಬಿಟ್ರಪ್ಪಾ
ಗುಡಿಸಲಿಯಲ್ಲಿ ತೂರಿಕ್ಯಂಡ್ರು
ಕೌದಿ ಮ್ಯಾಲೆ ಕೌದಿ ಹೊದಕಂಡ್ರು
ಗಡಗಡಗಡ ನಡುಗ್ತಾರ
ಆರು ಮಂದಿ ಆಗಗಗ ಬಂತು
ಇಲ್ಲಿಲಿಲ್ಲಿ ಬಂತು ಅಂದ್ರು
ಹೆಂಡ್ರು ನೋಡಿದ್ರು
ನಿಮ್ಗೇನ ಬಂದೈತಪ್ಪ ಹಣ ಸಿಕ್ಕೈತೆ
ದೊಡ್ಡಾದು ಈಟ ಪೆಟ್ಟಿಗೆ ಅಂದ್ರಿ
ಗುಡಿಸಿಲಿಗೆ ಬೆಂಕಿ ಹಚ್ಚಿ
ಹೊರಗ ಕುಂತ್ಕೊಳ್ರಿ ಅಂತ ಹೇಳ್ದ್ರಿ
ಈಗ ಗುಡಿಸಿಲಿ ಇದ್ದಿದ್ಗೆ
ಗುಡಿಸಿಲ್ಯಾಗೆ ತೂರಿಕ್ಯಂಡ್ರಿ
ನೀವು ಬಂದ ಮ್ಯಾಲೆ
ಹಚ್ಚಿಗ್ಯಾವಂತ್ರೆ ಅಂತ ನಾವು ಹೇಳ್ವಿವಿ
ಅವನಿಗೆ ಚಳಿಜ್ವರ ಬಂದೈತೆ
ಎಲ್ಲಿ ನೋಡಿದ್ರೆ ರಕ್ತ ಇಳಿತೈತೆ
ಇವ್ರು ಅಗಸೇತಲ್ಲಿ ಬಂದ್ರು
ನೋಡ್ರೀ ನಾವು ಊರಾಕ ಹೋದ್ರೆ
ತುಪಾಕಿ ಬಿಟ್ಟು ಕೊಲ್ಲಿ ಬಿಡ್ತಾರೆ
ಗುಂಡಗಳು ಬಿಟ್ಟು ನಮ್ಮ ಜೀವ ತೆಗಿತಾರೆ
ಈ ಜನ ಲೋಕಕ್ಕೆ ತಿಳ್ಯಂಗಿಲ್ಲ
ಅರ್ಥ ಮಾಡಿಕ್ಕ್ಯಂಬುದಿಲ್ಲ ಅವ್ರು
ಹೆಂಗಂದ್ರೆ ಸತ್ತವ್ರ ಲೋಕದಾಗ
ಮತ್ತೇ ಜೀವದಲ್ಲಿ ಎದ್ದು ಬರ್ತಾರ
ಬರಾದಿಲ್ಲ
ಜೀವ ಹೋದ ಮ್ಯಾಲೆ ಅತ್ತಾಗ ಕಡೆ
ಇವ್ರು ಸತ್ತವರು ಜೀವದಲ್ಲಿ ಬರಾದಿಲ್ಲ
ದೆವ್ವಗಳು ಆಗಿ ಓಡಿ ಬಂದಾವಂತ
ನಮ್ಮನ ಸುಟ್ಟು ಬೂದಿ ಮಾಡ್ತಾರ
ಮತ್ತೇ ಹ್ಯಾಂಗ ಮಾಡಬೇಕು
ಏನಿಲ್ಲ ಆಗಸಿ ಐತಲ್ಲ ಗ್ವಾಡಿ
ಎಡಕ್ಕ ಗ್ವಾಡಿಗ ಆನಿಕ್ಯಂಡು ನಾನಾ ನಿಂದ್ರಂತಿನಿ
ಬಲಕ್ಕ ಆಗಸಿಗೆ ಆನಿಕ್ಯಂಡು ನೀನು ನಿಂದ್ರು
ಯಾರನ್ನ ನೋಡಿದೋರು
ನಮ್ಮನ್ನು ಮಾತಾಡಿಸಿದ್ರೆ ಹೇಳೋಣ
ಗ್ವಾಡಿಗ ಹ್ಯಾಂಗ ಏಟ ಬಿಳ್ತದ
ಗ್ವಾಡಿ ಬಿದ್ದೋಗ್ತದಂತ ಅವ್ರುಏಟು ಬಿಡೋದಿಲ್ಲ
ಸರಿ ಬಿಡು ಅಂತ
ನೋಡಿಗೊಂತ ಅಗಸೆತಲ್ಲಿ ನಿಂತ್ರು
ಇವ್ರು ಇನ್ನ ಎಲ್ಲಿಗೆ ಬಂದ್ರು
ದೆವ್ವಗಳಂತ ಬಂದ್ರು
ಎಡಕಲಿದ್ದ ಬಲಕ್ಕ ನೋಡ್ದ
ಮಗಳ ಕಾಣ್ದಳು
ಯಾರಿಗೆ ಚಾವುಲರಾಜಗೆ
ಯಮ್ಮಾ ಆರು ತುಂಡು ಆಗಿದ್ದಿರಿ
ಆತ ಆರು ತುಂಡು
ನೀನು ಆರು ತುಂಡು ಆಗಿದ್ದೆ
ಪೆಟ್ಟಿಗ್ಯಾಗಿಟ್ಟು
ಹೊಳೆದಂಡ್ಯಾಗ ಒಗದು ಬಂದಿದ್ದೆ
ನೀವು ದೆವ್ವಗಳಾಗಿ ಬಂದಿರ್ಯಾ
ಈಗ ಜೀವದಲ್ಲಿ ಮತ್ತೇ ತಿರುಗಿ ವಾಪಾಸು ಬಂದ್ರ್ಯಾ

ಏನರ್ಥ ಆಗಲಿಲ್ಲ ನಮಗ್ಹೇಳ್ರಿ ನಮ್ಮ ತಾಯಿ
ಈಗ ನಿಮ್ಮನ್ನಾಗಿ ಸುಡುತಾರ
ಬೆಂಕಿಹಾಕಿ ನಮ್ಮ ತಾಯಿ                          ||ತಂದಾನ||

ನೀವು ಇನ್ನು ಹೇಳಬೇಕು
ಜೀವದಲ್ಲಿ ಎದ್ದು ಬಂದಿರ್ಯಾ
ಇಲ್ದಿದ್ರೆ ದೆವ್ವಗಳಾಗಿ ಬಂದ್ರ್ಯಾ
ನಿಮ್ಮನ ಇನ್ನ ಬಂದೂಕು ಟೂಪಾಕಲಿದ್ದ
ನಿಮ್ಮನ್ನ ಸುಟ್ಟು ಸುರುಮಂಡಲ
ಬೂದಿ ಮಾಡಿ ಬಿಡ್ತಾರ
ಯಪ್ಪಾ ನನ್ನ ಕೇಳಬ್ಯಾಡ
ಆತನ್ನ ಕೇಳು ಅಂದ
ಏನೋ ಹುಡುಗ
ನಿಂದು ಯಾವೂರು ಅಂತ ಕೇಳದ
ನಂದು ಚಾಂಪುರ ಪಟ್ಣ
ನಮ್ಮ ತಂದೆ ಕಾಂಭೋಜರಾಜ
ನಾವು ಹಾಲು ಕ್ರಿಷ್ಣ ಗೊಲ್ರು
ಈಗ ನನ್ನ ಹೆಸರು ಶರಬಂದರಾಜ
ನನ್ನ ತಂದೆಗೆ ಹುಣ್ಣು ಹುಟ್ಟೈತಿ
ಏಳು ಸಮುದ್ರದ ಆ ಕಡೆಗೆ
ಮೇಟೌಷಧಿಗೆ ಹೋತೀದ್ದಿನಿ ನಾನು
ಓಹೋ ಸರಿ
ಮತ್ತೇ ಹ್ಯಾಂಗ ನೀನು ಬಂದಿ
ಏನಿಲ್ರೀ
ನೀರು ಹೆಣ್ಣು ಮಕ್ಕಳ
ಸ್ನಾನ ಮಾಡಿದ ನೀರು
ತುಳಿಬಾರ್ದು
ಗಣ್ಮಕ್ಕಳು ಆಯುಸ ಮೂರು ತಿಂಗಳು ಕಡಿಮೆ ಅಂತ
ನಾನು ಎಗರಿಬಿಟ್ಟೆ
ಈಗ ಈ ಶಾಮಗಂಧಿ ಏನು ಮಾಡಿಬಿಟ್ಳು.
ಏನ್ರೀ ಅಕ್ಕ ತಂಗಿ ಹೆಣ್ಣುಮಕ್ಕಳಿಲ್ಲದ್ದಾಂಗ ಬೆಳಕಂಡವ್ನೆ
ನಿಂತು ಮಾತಾಡು ಅಂದ್ಳು
ನೀನ್ಯಾರು ಅಂತ ಕೇಳ್ದೆ
ಆಗ ಇನ್ನು ನಾನು ಶಾಮಗಂಧಿ
ಚಾವುಲರಾಜನ ಮಗಳು ಅಂದ್ಳು
ಮತ್ತೇ ಯಾಕ ನನ್ನ ಮಾತಾಡಿಸಿದೆ ಅಂತ ಕೇಳಿದೆ
ನೀನು ಎಲ್ಲಿಗೆ ಹೋತಿ ಅಂತ ಕೇಳಿದ್ಳು
ನಾನು ನನ್ನ ತಂದೆಗೆ ಹುಣ್ಣು ಹುಟ್ಟೈತೆ
ಮೇಟಿ ಔಷಧಿಗೆ
ಏಳು ಸಮುದ್ರದ ಆಕಡೆಗೆ ಹೋಗಿ ಬಿಡ್ತಿನಿ ಅಂದ
ಅಯ್ಯೋ ಏಳು ಸಮುದ್ರದಕಡೆಗೆ
ನಮ್ಮ ಅಕ್ಕ ಶಾಮಗಂಧಿ
ಈಗ ಜಾವುಲರಾಜನ ಮಗಳು ನಾನು
ಆಕಡಿಗೆ ನಮಕ್ಕ ಎದಿನಗಂಧಿ
ನಾನು ಶಾಮಗಂಧಿ ತಂಗಿ
ಅಕ್ಕನ ಮನ್ಯಾಗಿರೊ ಮದ್ದು
ನನ್ನ ಮನ್ಯಾಗ ಐತಿ
ಗಾಜಿನ ಬುಡ್ಡ್ಯಾಗ
ಥೈಥೈಥೈ ಕುಣಿತೈತೀ
ಏನ್ರೀ ಮನ್ಯಾಕ ಬರ್ರೀ
ಕೊಡ್ತಿನಿ ಅಂದ್ಳು
ಮನೆ ಸುತ್ತ ತಿರುಗಿದೆ ದಾರಿ ಸಿಗಲಿಲ್ಲ
ಆಗ ಇನ್ನು ಮನ್ಯಾಕ ಬರಾಕ
ದಾರಿ ಇಲ್ಲ ಅಂದೆ
ತೊಟ್ಲ ಬಿಡ್ತಿನಿ
ತೊಟ್ಲದಾಗ ಕುಂದ್ರು ಅಂದ್ಳು
ತೊಟ್ಲಾದಾಗ ಕುಂತಗಂಡೆ
ಅರ್ಧಕ್ಕ ಎಳದು ಬಿಟ್ಟು
ಕೈಯಾಗಳ ಸರಪಣಿ ಜಾರಿ ಬಿಟ್ತು
ಆಗ ಕಬ್ಬಿಣ ಕುಡುಗೋಲಿನ ಮ್ಯಾಲೆ ಬಿದ್ದು
ಕತ್ತರ್ಸಕ್ಯಂಡ ಬಿದ್ದು ಬಿಟ್ಟೆ
ನಾನು ಸತ್ತ ಮ್ಯಾಲೆ
ನಿನ್ನ ಮಗಳು ಸತ್ತಾಳ
ಆಗ ಪೆಟ್ಟಗ್ಯಾಗಿಟ್ಟು
ಹೊಳೆದಂಡ್ಯಾಗ ಒಗದ್ರೆ
ಆಗ ಸಾಂಭಶಿವ
ನೀರದಾಗ ಸ್ನಾನ ಮಾಡ್ತಿದ್ದ
ಆತನ ತಲೆಗೆ ಹೋಗಿ
ತಟ್ಟಿ ಬಿಟ್ಟಿವಿ ನಾವು
ಈಗ ಗಡ್ಡೆಗೆ ತಂದು ಜೀವ ಕೊಟ್ಟ
ನೋಡಪ್ಪಾ ನೀವು ಜೀವಕ್ಕ ಜೀವ ಕಲೀಬೇಕು
ನೀವು ಲೋಕ ಇನ್ನ ನೋಡಬೇಕು ಅಂತ
ಪೆಟ್ಟಗ್ಯಾಗ ಕುಂದ್ರ ಅಂದ್ರೆ
ಕುಂತಗಂಡ್ವಿ
ಮತ್ತೇ ಹೊಳೆ ದಂಡ್ಯಾಗ ಬಿಟ್ಟ
ಮೀನಗಾರೋರು ಬಲೆ ಒಡ್ದ್ರೆ
ಬಲ್ಯಾಗ ಬಿದ್ವಿ
ಜೀವಕ್ಕ ಜೀವ ಕಲೆಬೇಕು
ಜೀವದಾಗ ಕಲಿಬೇಕು ಅಂಬತ್ತಿಗೆ
ಬ್ಯಾಟಿ ಕಡದ್ರು
ಇವ್ರು ಹಿಂದೆ ಓಡದ್ರೆ ಊರ ಸಿಗತೈತಿ
ಲೋಕ ಕಲಿತಿವಿ
ಇಲ್ಲದಿದ್ರೆ ಕಲೆದಿಲ್ಲ ಅಂತ
ಆಗ ಇವ್ರಿಂದೆ ಓಡಿ ಬರದ್ರೆ
ದೆವ್ವಗಳು ಪಿಶಾಚಿಗಳು ಅಂತ
ಓಡೋಡಿ ಬಂದ್ರು
ಓ ಹಂಗಾರೆ ನೀವೇನು
ದೆವ್ವಗಳಲ್ಲ ಪೀಡೆಗಳಲ್ಲ
ಸತ್ತು ಜೀವದಲ್ಲಿ ಕೊಟ್ಟು ಕಳಿಸ್ಯಾನ ಪರಮಾತ್ಮ
ಸರಿ ಅಪ್ಪಾ ನೀವು ಜೀವ ಕಳಕಂಡಂಗೆಲ್ಲ
ಜೀವ ತುಂಬಿಸಿ ಕಳಸ್ಯಾನ
ನೀವು ದೇವ್ರಿದ್ದಂಗ
ಸತ್ತೋರು ಎದ್ದು ಬರಬೇಕಂದ್ರೆ ಸಾಮಾನ್ಯವಲ್ಲ
ಇಲ್ಲೇ ಇರ್ರೀ ಅಂತ
ಮ್ಯಾಳ ತಾಳ ತರಿಸಿ

ಆಗ ಕರಕಂಡು ನೋಡಣ್ಣ ಊರಾಕೆ ಬಂದಾರ
ಲೇ ಮನೀಗ ಕರಕಂಡು ಬಂದಾರ ಬಲಪಾದ ಇಟ್ಟಾರ ಮನ್ಯಾಕ ||ತಂದಾನ||

ಬಲಪಾದ ಇಟ್ಟು ಮನ್ಯಾಗ ಬಂದ್ರು
ಕೂಡ್ರಿ ಕುರ್ಚಿ ಮ್ಯಾಲ ಅಂದ್ರು
ಶರಬಂದರಾಜ ಕುಂತಗಂಡ
ಆಗ ಏನ್ರೀ ನೀನಾಗಿ ಬಂದಿದಿ
ನೋಡು ನಿನ್ನ ಕಾಲಾಗ
ನನ್ನ ಮಗಳು ಸತ್ತಾಳ
ಮಗಳು ಕಾಲಾಗ ನೀವು ಸತ್ತಿರಿ
ಜೀವಕ್ಕ ಜೀವ ಮತ್ತೇ ಬಂದಿರಿ
ಈಗ ಜೀವಕ್ಕೆ

ನಿಮ್ಗ ನಾನು ಮದ್ವೆ ಮಾಡುತಿನಿ
ಜೀವಕ್ಕೆ ನಾನೇ ಲಗ್ನ ಮಾಡುತಿನೀ
ಯಾವ ಮದ್ವೆ ಒಲ್ಲೆಪ್ಪ ಇನ್ನು ನನ್ನ ಜೀವಕ್ಕೆ ||ತಂದಾನ||

ಏನ್ರೀ ಚಾವುಲರಾಜ
ನನ್ನ ಜೀವಕ್ಕೆ ಯಾವ ಮದ್ವೆ ಬ್ಯಾಡ
ಯಪ್ಪ ಮತ್ತೇ ಜೀವಕ್ಕೆ ಇಬ್ರು ಬಂದ್ರಿ
ಇಬ್ರ ಜೀವಕ್ಕೆ ಮಾಡಬೇಕು ನಾನು
ಇಲ್ರೀ ಹೆಣ್ಮಕ್ಕಳು ಕಾಲಾಗ
ನಾನು ಜೀವ ಕಳಕಂಡಿನಿ
ಹೆಣ್ಮಕ್ಕಳ ತಂಟಿಬ್ಯಾಡ ಅಂದ
ಹಂಗಲ್ಲಪ್ಪಾ
ಈವಾಗ ಜೀವದಲ್ಲಿ ಬಂದಾಕಿ
ಹ್ಯಾಂಗ ಬಿಡ್ತಾಳ ನಿನ್ನ
ಜೀವಕ್ಕ ಮದ್ವೆ ಮಾಡ್ತಿನಿ ಅಂತ
ಆಗ ಹತ್ತು ಮಂದಿ ಮಾತಾಡಿ
ಮನೆ ಮುಂದೆ ಹಂದ್ರ ಹಾಕಿ
ಆ ಚಾವುಲರಾಜನ ಮನೆ ಮುಂದೆ

ಆಗ ಶಾಮಗಂಧಿ ಮದ್ವಿಯಣ್ಣ
ಬಣ್ಣದ ರಗ್ಗೇ ಇನ್ನು ಹಾಸ್ಯಾಣ್ಣಾ
ಬಣ್ಣದ ರಗ್ಗು ಹಾಸ್ಯಾರ ಸಾಸಿವೆ ಇನ್ನ ಹೊಯ್ದಾರ     ||ತಂದಾನ||

ಸಾಸಿವೆ ಹೊಯ್ದು
ಆಗ ಬೆಳ್ಳಿ ತಟ್ಟಾಗ
ತಾಳಿ ಮುತ್ತು ತಂದಿಟ್ಟರು
ಶಾನುಭೋಗರ್ನ ಕರಕಂಡು ಬಂದ್ರು
ಚಿರಂಜೀವ ವಿಷ್ಣು ಈಶ್ವರ ಆದಿಶಕ್ತಿ
ಅಂತ ಮಂತ್ರ ಹೇಳಿಸಿದರು
ಕೇಳಮ್ಮ ಇನ್ನ ಶಾಮಗಂಧಿ
ದಾರೀಲಿ ಹೋಗೋ ಗಣ್ಮಕ್ಕಳನ್ನ ಕರದು
ಜೀವ ಕಳಕಂಡು ಜೀವದಲ್ಲಿ ಬಂದು
ಜೀವಕ್ಕೆ ತಾಳಿ ಕಟ್ಟಿಕ್ಯಾಂಬಾಕೆ
ಎದ್ದೇಳಮ್ಮ ಇನ್ನ ಜೀವಕ್ಕ ಅಂಬೋತ್ತಿಗೆ
ಆಗ

ಆಯಮ್ಮವೊಂದೇ ಈಭೂತಿ ಹಚ್ಚಿದಾಳ
ಅಕ್ಕಿ ವಾಕ್ಯಾಳ ಶರಣು ಮಾಡಿದಾಳ
ಆಗ ಬಂದು ಇನ್ನು ಕುಂತಾಳಣ್ಣಾ                  ||ತಂದಾನ||

ಆಗ ಮಗ ಶರಬಂದರಾಜ ಎದ್ದು ಬಿಟ್ಟ
ಯಮ್ಮ ಸಿರಿದೇವಿ
ಸುಡುಗಾಡು ರುದ್ರಭೂಮಿದಾಗ
ಈಗ ನಿನ್ನ ಬಿಟ್ಟು
ನಾನು ಜೀವಕ್ಕ ಮದ್ವೆ
ಮಾಡಿಕ್ಯಂತಿ ತಾಯಿ

ತಾಯಿ ತಂದೆ ಇಲ್ಲದಂಗ ಲೋಕ ಲಗ್ನ ಆಗತೈತೆ ನನಗೆ
ಮಗ ತಾಯಿತಂದೆ ನೆನಸ್ಯಾನ
ಮೂಗ ಮುತ್ತ ಇಟ್ಟಾನ
ಹಾಲು ಕಡಗವಾಕ್ಯಾನ ಮಗ
s ತಾಳಿ ಒಂದು ಹಿಡದಾನ ದೇವೇಂದ್ರವಂತ ಕಟ್ಟ್ಯಾನ ಮಗ    || ತಂದಾನ ||

ದೇವೆಂದ್ರ ಅಂತ ತಾಳಿ ಕಟ್ಟಿದ
ಆಗ ಹಾಲು ತುಪ್ಪ ಕಲೆಸಿ ಕುಡಿಸಿದ್ರು
ಎಲೆ ಅಡಿಕೆ ತಿರುವಣ ಮಾಡಿದ್ರ
ಆಗ ಊರಾಗ ಮೆರವಣಿ ಮಾಡಿದ್ರು

ಆಗ ಒಂದು ದಿನವಲ್ಲಣ್ಣಾ
ಮೂರು ದಿನ ಮದ್ವೆ ಆಗ್ಯೋತು       || ತಂದಾನ ||

ಐದು ದಿನಕ್ಕೆ ಹಂದ್ರ ಕತ್ತಿ
ಗಂಗನ ಮಾಡ್ದ್ರು
ಆರು ದಿನದಲ್ಲಿ ನಿಂತು ಗಂಡು ಬಿಟ್ಟ
ಅದೇ ಊರಾಗ
ಆರು ದಿನದಲ್ಲಿ ಏನ್ ಅಂತಾನ ಮಾವ
ಈಗ ಚಾವುಲರಾಜ
ನಾನು ಹೋಗಿ ಬಿಡ್ತಿನಿ
ಒಂದೊಂದು ಊರಾಗ
ನಾಕ ದಿನ ಎಂಟ ದಿನ ಇದ್ರೆ
ನಮ್ಮಪ್ಪ ಬಾರ್ಲು ಬಿದ್ದವನು
ಬಾರ್ಲು ಗಂಜಿ ಕುಡಿತಾನ
ಮೇಟಿ ಔಷಧ ಯಾವಾಗ ತರ್ಬೇಕು
ಏಳು ಸಮುದ್ರ ಕಟಾದು
ತಂದಿ ಕಳಕಂಡ ಮ್ಯಾಲೆ
ಇಂಥ ಹೆಂಡ್ರು ಇನ್ನ ಜೀವಿದ್ರೆ
ಸಾವಿರ ಲಗ್ನ ಮಾಡಿಕ್ಯಾಬೋದು
ನಮ್ಮ ಜೀವದ ತಂದೆ ಹೋದ ಮ್ಯಾಲೆ
ಜೀವದ ತಂದಿ ಸಿಗದಿಲ್ಲ
ಸರ್ಯೇಪ್ಪ ಮತ್ತ ನಿನ್ನ ಹೆಣ್ತಿನ ಕರಕಂಡು ಹೋಗು
ಇಲ್ರೀ ನಾನು ಊರಿಗೆ ಹೋಗಂಗಿಲ್ಲ
ಏಳು ಸಮುದ್ರಕ್ಕ ಹೋತಿನಿ
ಮೇಟಿ ಔಷಧಕ್ಕ
ಆ ಕಾಲಕ ನಿನ್ನ ಮಗಳು ಮನ್ಯಾಗಿದ್ದಾಳಂತ
ಈ ಕಾಲಕ್ಕ ಉಳಿಸಕ್ಯಂಬಲಾರೆಯ
ಈಗ ತಿರುಗಿ ವಾಪಾಸು ಜೀವದಲ್ಲಿ ಬಂದ್ರೆ
ನಿನ್ನ ಮಗಳ್ನ ಕರಕಂಡು ಹೋತಿನಿ
ಇಲ್ದಿದ್ರೆ ಇಲ್ಲ
ಸರಿಬಿಡ್ರಿ ಹಂಗ ಆಗ್ಲಿ ಅಂದ
ಆಗ ಶಾಮಗಂಧಿ ಮುತ್ತಿನ ಸೆರಗ್ಹಾಸಿ
ಶರಣ್ರೀ ಜೀವದಲ್ಲಿ
ಹೋಗಿ ಬರ್ರೀ ಅಂದ್ಳು
ಆಗ ಅತ್ತೆ ಮಾವನ ಪಾದ ಮುಗಿದು
ಕೈ ಚೀಲ ಹಿಡಕಂಡು
ಆ ಮಗ ಇನ್ನ ತಾ ಜೀವಕ್ಕಾಗಿ ನಡ್ದ