ಕುಪ್ಪಳಿಸಿ ಹಾರಿದ
ಬೆಳ್ಳಿ ಪಾದಗಳು
ಆಲದ ಗಿಡದಾಗ ಇಟ್ಟ
ಆಗ ಮೂರು ಹೊಲ ಬಿಟ್ಟು ಬಂದ
ಕರ್ಡಿ ಎತ್ತಗ ನೋಡಿದ್ರು ಗಿಡಗಳೇ
ಆ ಕಾಡಿನಾಗ ಬಣ್ಣದ ಮನಿಗಿ ಬಂದ
ಒಂದೊಂದು ಗಂಡಿರುವೆ
ಒಂದೊಂದು ಕೆಂಪಿರುವೆ
ಹೆಗ್ಗಣದಪ್ಪ ಐದಾವ ಇಲಚಿದಪ್ಪ
ಬಾಯಿ ತೆರೆಕಂಡು ಬಂದ್ವಪ್ಪ
ಕೆಂಪು ಕೋತಿ
ಕೆರೆ ಕೋತಿ
ಆಗ ರಾಕ್ಷಸಿಗಳು ಕರ್ಡಿಗಳು
ನೋಡಿದಾ
ತಾತ ಜೀವ ಕೊಟ್ಟಾ ತಾತ
ಎಲ್ಲೈದೀಯಿ ಅಂತ
ಮೂರು ಕಲ್ಲು ಮಂತ್ರಿಸಿ ಕೊಟ್ಟಿದ್ದು
ಒಗದು ಬಿಟ್ಟಿ
ಎಡಕ್ಕ ಎಡಕ್ಕೆ ಹೊಳ್ಳಿದ್ವು
ಬಲಕ್ಕ ಬಲಕ್ಕೆ ಹೊಳ್ಳಿ ಬಿಟ್ಟು
ದಾರಿ ಬಿಟ್ಟು ಬಿಟ್ಟುವು
ಬಾಕ್ಲ ಎಷ್ಟು ಅಗಲ ಐತೋ
ಅಷ್ಟಗಲ ದಾರಿ ಬಿಟ್ಟು ಬಿಟ್ಟುವು
ಮಗನ ಹೆದ್ರೀಕೆ ಇಲ್ಲದಾಂಗ
ಮನ್ಯಾಕ ಬಂದ
ಎರ್ಡು ಬಾಕ್ಲ ತಟಾದು ಬಂದ್ರೆ
ಆಗ ಬೆಳ್ಳಿ ವರಸಿನ ಮ್ಯಾಲೆ
ಬೆಳ್ಳಿ ಬಟ್ಲ
ತಲೇತಲ್ಲಿ ಎಲೆ ಅಡಿಕೆ ಉಗುಳೋದು
ನೋಡಿದ ಹುಡುಗ

ಎಷ್ಟು ದರಬಾರು ನಿನಗೆ ನಡೀತೈತಲೇ
ಹನ್ನೆರ್ಡ ಕೈ ಆದಿಶಕ್ತಿ ನೀನು
ಮೂರು ನಾಮ ಗೊಲೊಲರವ್ನು ಬಂದಿನಲೇ
ಮೂರು ನಾಮ ನಿನಗ್ಹಚ್ಚಿ ಹೋತಿನಲೇ || ತಂದಾನ ||

ಭೂಮಿ ಮ್ಯಾಲೆ ಹುಟ್ಟಿದ
ಹೆಣುಮಗಳಿಗೆ ಇಷ್ಟು ದರ್ಬಾರು ಇದ್ರೆ
ನಾನು ಗೊಲ್ಲರ ಕ್ರಿಷ್ಣ
ಮೂರು ನಾಮ ಹಚ್ಚಿ ಹೋತಿನಿ
ಅಂತ ಎನ್ಮಾಡಿದ
ಈಗ ಮಾತಾಡೋ ಅಡಿಕೆ
ನಗೋ ಎಲೆ ಓಡ್ಯಾಡೊ ಕಾಂಚು
ಅಡಿಕೆ ಹಾಕ್ಯಂಡು
ಉಗುಳು ಬಿಟ್ಟ
ಈಗ ಎದೆ ಮ್ಯಾಲೆ ಎಡಗಾಲಿಇಟ್ಟು
ಊರು ಹೆಸರು
ತಾಯಿ ತಂದಿ ಹೆಸರು
ಗರ್ಗರ್ ಗರ ಪತ್ರ ಬರೆದ
ಮುತ್ತೀನ ಸೆರಗಿನಾಗ ಗಂಟು ಹಾಕಿದ
ತಲೆ ಕೂದಲು ಮಿಸುಗ್ಯಾಡಲಾರ್ದೆ
ಎಡಗೈಲಿ ತೂರಿಸಿ
ಗಾಜಿನ ಬುಡ್ಡೆ ಮದ್ದು ಗಂಡಂತು
ಸೆಲ್ಲೇದಾನ ಹಾಕ್ಕಂಡು
ನಡುವಿಗೆ ಕಟ್ಟಿಗಂಡು
ಈಕೀಗೆ ಓದು ಬರ್ತೈತೋ ಇಲ್ಲೋ
ಸಂಪೂರ್ಣ ನಿದ್ದಿ ಮಾಡ್ತಾಳ
ಗಣಸುರ ಬರೊ ತಿಳುವಳಿಗಕೆ ಇಲ್ಲ
ಹೆಂಗ್ಸಲ್ಲ ಕತ್ತೆರೀತಿ ನಿದ್ದೆ ಮಾಡ್ತಾಳ
ಅಂತ ಆಗ ಮಸಿ ಲೈಟು ಹಚ್ಚಿದ್ರೆ
ಮಸಿ ತಗಂಡು ಮೂರು ನಾಮ ಇಟ್ಟ
ಗೊಲ್ಲವ್ನು ನಾನೇ ಇಟ್ಹೋಗಿನಿ ಅಂತ
ಗೊಲ್ರು ತಿಟ್ರಪ್ಪ
ಭೋ ತಂಟಿಗೊಲ್ಲರು
ಕ್ರಿಷ್ಣ ಗೊಲ್ಲರು
ಆಗ ಎರ್ಡು ಮೀಸೆ ಇಟ್ಟ
ಹುಡುಗ ಏನ್ಮಾಡಿದ
ಮನಿ ಹೊರಗ ಬಂದ
ರಾಕ್ಷಾಸಿಗಳು ಕೋತಿಗಳು
ಅಡ್ಡ ಬಂದು ಬಿಟ್ಟುವು

s ಮೃಗ ಕಣ್ಣಿಲಿ ನೋಡ್ಯಾನ
ಎಡಗೈಲಿ ಬಲಗೈಲಿ
s ಗಡ್ಗಡ್ಗಡ್ತಿರಗಸ್ಯಾನ
ತೋಥಡಿ ಜಾಡ್ಸಿ ಬಂದು ಕಡಿತಾನ
ನೂರು ತಲೆ ಸಾಪಾಣ್ಣ
ಕಡಿಕ್ಯಾಂತ ಕಡಿಕ್ಯಾಂತ     || ತಂದಾನ ||

ಓಡಿ ಬಂದ
ಕಡಿಕ್ಯಂತ ಕಡಿಕ್ಯಂತ ಓಡಿ ಬಂದ
ಬೆಳ್ಳಿ ಪಾದಾಗಳು ತೊಟ್ಟ

ಜೈ ಮೂರು ಮೇಘ ಅಂದ
ಮೂರು ಮೇಘ ಎದೈತೋ || ತಂದಾನ ||

ಎಳು ಸಮುದ್ರದೀಕಡೆ ಇಳಿದ
ತಾತಾ ಬಂದೆ
ಅಯ್ಯೋ ಬಂದಪ್ಪ
ಬಂದೆ ತಾತ
ಓಯಪ್ಪಾ ಅಡಿಕ್ಯನ ಕಡೀಲಿಲ್ಲ
ಯಾವಾಗ ಬಂದೆ
ತಾತ ನಿನ್ನ ಭಕ್ತಿ ಇದ್ರೆ
ನಾನು ಬಲ ತೋರಿಸೇನು ತಾತ
ಕುಂದ್ರಪ್ಪಾ ಇನ್ನ ಗೆದ್ದುಕಂಡು ಬಂದೆಲ್ಲ
ಕುಂದ್ರು ಅಂದ
ಕುಂದ್ರಿಸಿಗ್ಯಂಡ
ಆಗ ಎದಿನಗಂಧಿ ಮದ್ದಿದ್ರೆ ನಿದ್ದೆ
ಮದಿಲ್ಲದಿದ್ರೆ ನಿದ್ದಿಲ್ಲಪ್ಪಾ ಆಕೀಗೆ
ಮದ್ದೇ ಇರಬೇಕು
ಜೀವಕ್ಕ ನಿದ್ದೆ ಆಗಬೇಕು
ಯಾವಾಗ ತಲೆ ಅಡೇಲಿದ್ದ ಮದು ಹೋಗೈತೋ

ಎಡಕ್ಲಿದ್ದ ಬಲಕ್ಕ ಹೊಳ್ಳಾಳಮ್ಮಾ
ಆದಿಶಕ್ತಿ ಎದ್ದು ಬೀಳ್ತಾಳ     || ತಂದಾನ ||

ಕಾಡಿನಾಗಿದ್ದಾಕೆ
ಎದ್ದುಬಿಟ್ಟು
ನಿದ್ದೆ ಕಣ್ಣಿಲಿ
ಮೂರು ತಿಂಗಳು ನಿದ್ದೆ ಆಗೈತಿ
ಮೂರು ತಿಂಗಳು ನಿದ್ದೆ ಐತಿ
ಒಳ್ಳೆ ನಿದ್ದಿದಾಗ ಐದಾಳ
ಕಣ್ಣು ಮುಚ್ಚಿ ಕಣ್ಣು ತೆರಕಂತ
ಮುವತ್ತಾರು ಗಂಟೆ ಬಿಸಿನೀರು ಇರ್ತಾವ
ಬಿಸಿ ನೀರು ತೊಳಕಂಡ್ಳು
ಕಣ್ಣು ಮುಚ್ಚಿಕ್ಯಂತ
ಗೋಡೆ ಕನ್ನಡಿ ನೋಡಕ್ಕಂಡ್ಳು
ನೋಡಿಕ್ಯಂಡ್ರೆ
ಮೂರು ನಾಮ ಇಟ್ಟಾರ
ಎರ್ಡು ಮೀಸೆ ಇಟ್ಟಾರ
ಅಬ್ಬಬ್ಬಾ ಇದೇನು
ನಾನು ಹಚ್ಚಿಕ್ಯಂಡಿಲ್ಲವೇ
ಅಂತ್ಹೇಳಿ ಮುತ್ತಿನ ಸೆರಗು ನೋಡಿದ್ಳು
ಮೊಣಕೈಗೆ ತಟ್ಟುತೈತೆ
ಗಂಟು ಹಾಕಿ ಹೋಗ್ಯಾನ
ಪತ್ರ ನೋಡಿಕೊಂಡು
ಪಟಪಟ ಓದಿಕ್ಯಂಡ್ಳು
ಕೈ ಚೀಲದಾನ ಗಾಜಿನ ಬುಡ್ಡೆ ಒಯ್ದಾನ
ಹೊರಸ್ ಸುತ್ತ ಉಗುಳಿ ಹೋಗ್ಯಾನ
ಹೊರ್ಗ ನೋಡಿದ್ರೆ
ಸಾವಿರ ಲಕ್ಷ ಮುರ್ಗಗಳು ಕಡ್ದು ಹೋಗ್ಯಾನ
ಅವ್ನು ಭೀಮ ಅರ್ಜುನ
ಸತ್ಯಲೋಕ ಪಾಂಡವರು
ಬಂದು ಹೋಗಿರಬಹುದಾ
ನನ್ನ ಹಾಳು ಮಾಡಾಕ
ಎಷ್ಟು ಎಚ್ಚರಿಕೆ ಇಲ್ಲದಂಗ
ನಿದ್ದೆ ಮಾಡೀನಿ
ಹೆಣ್ಣಲ್ಲ ನಾಣು
ಕತ್ತೆ ನಿದ್ದೆ ಮಾಡಿನಿ
ಹೆಂಗ್ಸರಾಗಿ ಹುಟ್ಟಿದ ಮ್ಯಾಲೆ
ಒಂದ ಕಣ್ಣಿಲಿ
ನಿದ್ದಿ ಒಂದ ಕಣ್ಣೀಲಿ ತಿಳಿವರಿಕೀ
ಕಾಲ ಸ್ರರಕ್ ಅಂದ್ರ ತಿಳಿವರಿಕಿ ಇರಬೇಕು
ಕೆಳವೋ ಮೂರು ನಾಮ ಗೊಲ್ಲರವ್ನೆ
ನೀನು ಪಾತಾಳ ಲೋಕಕ್ಕೆ ಹೋದ್ರು
ನಿನ್ನ ಬಿಡೋದಿಲ್ಲ
ನಿನ್ನ ರಕ್ತ ಕುಡಿಲಿದ್ರೆ
ನಾನು ಆದಿ ಶಕ್ತಿಯಲ್ಲ
ಎದಿನಗಂಧೀ ನಾನು ಕಾಡಿನಾಗಿದ್ದಾಕಿ
ಮೇಟಿ ಔಷಧದವಳಲ್ಲ ಅಂತ
ವ್ರತ ತಗದು ಬಿಟ್ಳು
ಬೆಳ್ಳಿ ಪಾದುಕ್ಯಾಗ ಗಂಟೆಗೆ
ಒಂದು ಗಾವುದ ಹೋತೈತೆ
ಇದು ಗಂಟೆಗೆ ಮೂರು ಗಾವುದ ಹೋತೈತೆ
ಪಾಲಕೆ ಇದ್ದಂಗೆ ಇರ್ತೈತಪ್ಪಾ
ರಥ ತಗದು
ರಥದ ಮ್ಯಾಗೆ ಕುಂತಗಂಡ್ಲಪ್ಪಾ
ಹನ್ನೆರ್ಡು ಕೈಲಿ ಹನ್ನೆರ್ಡು ಬಾಣ ಹಿಡಿದ್ಳು ಆಕೆ
ಭೀಮನ ಗದ
ಗಜಸೂರು ಬಲ್ಲೆವು
ಆಗ ನೀಲುಗಂಡು
ಒತ್ತುಗುಂಡು
ಜವಾರು ಗುಂಡು
ಮೈದುಳು ಗುಂಡು ತೆಗ್ದಬಿಟ್ಳು
ಅರವತ್ತಾರು ಗುಂಡು ತೆಕ್ಕಂಡ್ಳು
ಹನ್ನೆರ್ಡು ಕೈಲಿ ಹಿಡಕಂಡ್ಳು
ಕೇಳಲೇ ರಾಕ್ಷಾಸಿ
ಬಾರೆ ತ
ಎರ್ಡು ಕೈ ಇಲ್ದವಳು
ಕಡಿಕ್ಯಂಡು ಹೋಗಿ ಬಿಟ್ಟಾನಪ್ಪ
ಆ ರಾಕ್ಷಾಸೇನ ಕರಕಂಡು
ರಥದಲ್ಲಿ ಕುಂದ್ರಿಸಿ

ಜೈ ಮೂರು ಮೇಘಂದ್ಳು
ಏಳು ಸಮುದ್ರ ತಟಾದು
ಹುಡುಗ ನೊಂದು ತಟಾದು
ಒಂದು ಗಾವುದ ಮುಂದೆ ಹೋಗ್ಯಾಳ
ಚಿತ್ರಗಿರಿ ದಾರ್ಯಾಗ        || ತಂದಾನ ||

ರಥ ಇಳಿಸಿ ಬಿಟ್ಳು
ಏಳ ಸಮುದ್ರ ತಟಾದು
ಹುಡುಗನ ತಟಾದು
ಒಂದು ಗಾವುದ ಮುಂದ್ಹೋಗಿ
ರಥ ಇಳಿಸಿಬಟ್ಟು ಆಕಿ
ಈ ಹುಡುಗ ಏಳು ಸಮುದ್ರದಲ್ಲಿ ಐದಾನ
ಜಟಿಂಗ ಸ್ವಾಮಿ ಮಠದಾಗ
ಕೇಳವ್ವೆ ರಾಕ್ಷಾಸಿ
ಬಂಡಿ ದಾರೀಲಿ ಬರ್ತಾನೋ
ಕಾಲು ದಾರೀಲಿ ಬರ್ತಾನೋ
ಬಂಡಿ ದಾರೀಗೆ ನಾನು ಕಾಯ್ತೀನಿ
ಕಾಲು ದಾರಿಗೆ ನೀನು ಕಾಯಿ
ಕೇಳವ್ವೆ ರಾಕ್ಷಾಸಿ
ಹೆಣ್ಮಗಳು ಆಗಿ ಬರ್ಲಿ
ದಾರಿ ಬಿಡಬ್ಯಾಡ
ಗಣ್ಮಗ್ಯಾಗಿ ಬರ್ಲಿ
ದಾರಿ ಬಿಡಬ್ಯಾಡ
ಒಂದು ಮುದುಕಾಗಿ ಬರ್ಲಿ
ದಾರಿ ಬಿಡಬ್ಯಾಡ
ಗೊಲ್ರು ಮೂರು ನಾಮ ಇಟ್ಟಾರ
ಮೂರು ಅವತಾರದವ್ನು
ಆಗ ಮಾಯಿಕೃಷ್ಣ
ಮಾಯವಾಗಿ ಹೋತಾನೋ ಏನೋ
ನೀನು ಕಾಯಿಕ್ಯಂಡು ಇರು ಅಂತ
ಕಾಲುದಾರಿ ಕಾಯೋಕೆ ಇಟ್ಳು
ಆಕೆ ರಥ ಮ್ಯಾಲೆ
ಬಂಡಿ ದಾರಿ ಅಗಲಾಗಿ ಕುಂತಗಂಡ್ಳು
ಈ ಹುಡುಗಿನ್ನ ಸಮುದ್ರತಲ್ಲಿ ಐದಾನ
ತಾತ ಔಷದೇನು ತಗಂಡು ಬಂದೆ
ನಮ್ಮಪ್ಪ ಸತ್ತೋಗುತಾನೆ
ಆಗೋ ಈಗೋ
ಇಲ್ಲಿಗೆ ಆರು ತಿಂಗಳು ಮಿಕ್ಕಿ ಮೀರಿತು
ನಾನು ಊರು ಬಿಟ್ಟು
ತಾತ ನಮ್ಮ ತಂದಿ ಹೊಂಟ್ಹೋದಮೇಲೆ
ಮೇಟಿ ಔಷಧ ತಗಂಡು ಹೋಗಿ
ನಾನೇನು ಮಾಡಲಿ
ಈಗ ಹೊತೀನಿ
ಅಪ್ಪಣೆ ಕೊಡು ತಾತ ಅಂದ
ಅಯ್ಯೋ ಎಲ್ಲಿ ಹೋತೀಯಪ್ಪಾ
ನನ್ನ ಊರಿಗೆ ತಾತ
ಅಯ್ಯ ನಿನ್ನ ಊರೀಗೆ ಹೋಗೋಡಸ್ತಾಳ್ಯ
ಏದಿನಗಂಧಿ
ನಿನಗಿಂತ ಮುಂಚ್ಯಾಗ
ಆಗ್ಲೇ ದಾರಿ ಕಾಯ್ತಾಳ ಹೋಗು
ಮತ್ತೇ ಹ್ಯಾಂಗ ತಾತ
ನೋಡಪ್ಪಾ ಆಕೆ ತಲೆ ಅಡೇಲಿ ಹೋಗಿ
ಆಕಿ ಮನ್ಯಾಕ ಹೋಗಿ ಜೀವದಲ್ಲಿ ಇನ್ನ
ಔಷಧ ತಂದೀಯಂತೆ ಮೇಟೌಷಧ
ಈಗ ಕೊನೆ ಸೆರಗು ತಟಾದು ಹೋಗಲಾರ್ಯಾ
ಇಗೋ ನಾನು ಹೇಳಿದಂಗ ಕೇಳು
ಆಗ ಅದೇನು ಹೇಳು ತಾತ ಅಂದ
ಆರವತ್ತಾರು ಬಾಣ ಕೊಟ್ಟು ಬಿಡ್ತಿನಿ
ಆಕೀಗೆ ಹನ್ನೆರ್ಡು ಕೈ ನಿನಗ ಎರ್ಡ ಕೈ
ಅರವತ್ತಾರು ಬಾಣ ಒಂದೇ ಬಾರಿ ಒಗದು ಬಿಡು
ಆಕೆ ಮ್ಯಾಲೆ ಬರ್ತಾವ
ಆಗ ಇನ್ನು ಅರವತ್ತಾರು ಬಾಣಕ್ಕೆ
ಹೆದ್ರಿ ಬಿಡಬೇಕಲ್ಲ
ಅಂತ ಮ್ಯಾಕ ನೋಡ್ತಾಳ
ಆಗ ಮೂರ್ಛೇ ಬಾಣ ಎದಿಗೆ ಬಿಡು
ಬಿಡೋ ಹೊತ್ತಿಗೆ ಮೂರ್ಛೆ ಆಗಿ ನಿಂತು ಬಿಡ್ತಾಳ
ಆಕೆಗೆ ಬಾಣ ಒಂದು ತಟ್ಟಲಾರ್ದ
ಎರ್ಡು ಕೈಲಿ ಹಿಡಕಂಡು ಹಿಡಕಂಡು ಹಾಕಬೇಕು
ಹಾಕಿ ಆಗ ನಾನು ಕೊಟ್ಟ ಆಧಾರ ಉಗ್ಗಿ ಬಿಡು
ಹನ್ನೆರ್ಡು ಕೈದಾಗ ಎರ್ಡೇ ಕೈ ಉಳಿತಾವ
ಎಲ್ಲ ಉಚ್ಚಿ ಉಚ್ಚಿ ನೆಲಕ್ಕ ಬಿದ್ದುಬಿಳ್ತಾವ
ಬಿದ್ದುಮ್ಯಾಲೆ
ಸೋತಿನ್ರೀ
ನನ್ನ ಪಾದಕ್ಕ ಶರಣು ಅಂತ
ಪಾದ ಹಿಡಕಂತಾಳ
ನೋಡ್ರೀ
ಮದ್ದಿದ್ರೆ ನಿದ್ದೆ
ಮದಿಲ್ಲದಿದ್ರೆ ನಿದ್ದೆ ಇಲ್ರೀ
ಆಗ ನನ್ನ ಮೃಗಗಳೆಲ್ಲ ಹಾಳು ಮಾಡಿ ಬಿಟ್ಟಿ
ಏನ್ರೀ ಕೃಷ್ಣಗೊಲ್ರ ಶರಬಂದರಾಜ
ನಿಮ್ಮ ಪಾದಕ್ಕೆ ಶರಣು
ನಡ್ರಿ ನಿನ್ನ್ಹಿಂದೆ ಬರ್ತಿನಿ
ಕೇಳವ್ವೆ ನೀನು ನನಗೆ ಬೇಕಿಲ್ಲ
ಈಗ ಲೋಕ ಏನಂತಾ ಸರ್ತಿ ಕಟ್ಟಿ
ಮದ್ದು ಬೇಕಾಗೈತೆ ನೀನು ನನಗೆ ಬೇಕಿಲ್ಲ
ಇಲ್ರೀ ಈಗ ಮದ್ದು ಒಯ್ಯಬೇಕು
ನೀ ನನ್ನ ಯುದ್ಧ ಮಾಡಿ
ಇಲ್ದಿದ್ರೆ ನಾನನ್ನ ನಿನ್ನ ಮದ್ದು ತಗಂಡು ಬರ್ತಿನಿ
ಓಹೋ ಅಂಗೈತ್ಯಾ ಜೀವಕ್ಕೆ
ಈಗ ತಾವ ಕುಲದಲ್ಲಿ ನನ್ನ ಬಿಡೋದಿಲ್ವಾ
ಏನ್ರೀ ಈ ಹೆಣ್ಮಕ್ಕಳಿಗೆ
ಅಂಜಿಕೊಂಡು ಓಡಿ ಹೋಗಾಂಗ್ರಿದೆ
ತಿರುವಿ ಹಾಕ್ಯಂಡು ಹೋಗು ದಾರಿ
ನಿಮ್ಮ ತಾಯಿ ತಂದಿಗ ಸರೀಗೆ ಹುಟ್ಟಿದ್ರೆ
ಜೀವದಲ್ಲಿ ಗೋಲ್ರವ್ನ ಆದ್ರೆ ಹೆಸರ್ಹೇಳ್ರೀ ಅಂದ
ಕೇಳವ್ವೆ ಕಾಡಿನಾಕ ಹೋಗಿ
ಬಕಾಸುರನ ತಂಗಿ ಏದಿನ ಗಂಧಿ ತಲೆ ಅಡೇಲಿರುವ
ಗಾಜಿನ ಬುಡ್ಡಿ ಮದ್ದು ಒಯ್ತಿದ್ದಿರಿ
ಈಗ ಬೆಳೆ ಹುಡುಗ್ರ ತಲೆ ಬಡೆವ್ಯೇಳ
ಹೋಗೊ ದಾರಿಗೆ ಅಡ್ಡಾ ಕುಂತಾಳ
ಎದ್ದೋಳು ದಾರಿ ಬಿಡು ಅಂದ
ಕೇಳಯ್ಯ
ನೀನು ಕುಲದಲ್ಲಿ ಹಾಲು ಗೊಲ್ಲರವ್ನು

ಕಳತನ ಒಯವ್ನೆ
ಯುದ್ಧಕ್ಕಾಗಿ ನಿಂದ್ರಯ್ಯ
ನಿನ್ನ ಯುದ್ಧ ಮಾಡೋತನಕ
ನಿನ್ನ ನಾಣು ಬಿಡೋದಿಲ್ಲ    || ತಂದಾನ ||