ಚಿತ್ರಗಿರಿ ಪಟ್ಣ ಬಿಟ್ಟಾನ
ಮೂರು ಗಾವುದ ಬಂದಾನ
ಎಳು ಸಮುದ್ರ ಬಂದಾವ    || ತಂದಾನ ||

ಸಮುದ್ರದ ಕಡೆಗೆ ನಿಂತಗಂಡು ನೋಡಿದ
ಕಣ್ಣಿಂದ ಎಲ್ಲಿಗೆ ನೋಡಿದ್ರು
ಅಲ್ಲಿಗೈದವಪ್ಪ ನೀರು
ಅಬ್ಬಾಬ್ಬಾ ಇಷ್ಟು ಸಮುದ್ರ
ನಾನು ಈಸ್ಲು ಹೊಡೇಬೇಕಂದ್ರೆ
ಯಾವಾಗ ಹೋಡಿಬೇಕು
ಸಾಧ್ಯ ಆಗೋದಿಲ್ಲ
ಏಳು ಸಮುದ್ರದಾಗ ಸ್ನಾನ ಮಾಡಿಕಂಡು
ಆಗ ಜಟಂಗಿ ಸ್ವಾಮಿತಲ್ಲಿ
ನಾಗ ಮುನೀಶ್ವರಗೆ ತಪ್ಪಸ ಕುಂತಲ್ಲಿ
ಆಗ ಇನ್ನ ಎರ್ಡು ತೂತಿಗೆ
ಎರ್ಡು ಗುಂಡುಕ್ಲಲ್ಲಿಟ್ಟ
ಒಂದು ತೂತಿಗೆ
ಮೊಣಕಾಲು ಆನಿಸಿದ
ಚ್ಯಾರಿ ಅಕ್ಕಿ ಹಾಕಿದ
ಮುಚ್ಚುಳ ನೀರು ಹಾಕಿದ
ಉರಿ ಹಚ್ಚುತ್ತಿದ್ದ
ಧನ ಧನ ಉರೀತಿದ್ರೆ
ಸುಮ್ನಿರುತೈತ್ತ ಮೊಣಕಾಲು
ಉರೀತೈತೆ ಅಂತ ಸರದ
ಅಕ್ಕಿಬ್ಯಾಳೆ ಎಲ್ಲ ಸೋರಿದ್ವು
ಒಲೆ ಎಲ್ಲಾ ಆರ್ಹೋತು
ಮತ್ತೇ ಮೊಣಕಾಲು ಆನಿಸಿದ
ಮತ್ತೇ ನೀರ್ಹಾಕಿದ
ಆಗ ಜಟಿಂಗ ಸ್ವಾಮಿತಲ್ಲಿ
ನಾಗಮುನೀಶ್ವರ
ತಪಸ್ಸಿಗೆ ಕುಂತವನು ನೋಡಿದ
ನಾನು ತಪಸ್ಸಿಲ್ಲದಿದ್ರೆ ಆಗೇತು
ಇವ್ನ ಕಷ್ಟ ನೋಡಲಾರೆನಪ್ಪ
ಅಂತ ಹಿಂದಕ ತಿರುಗಿದ
ಲೇ ಹುಡುಗ
ಯಾವೂರಲೇ ನಿಂದು
ಬುದ್ದೈತಾ ಬುದ್ದಿಲ್ಲ
ಹೆಂಗಸೇಳೈತಾ ಗಂಡಸು ಹೇಳೈತಾ
ಮೂರು ತೂತು ಹೊಡದು
ಯಾವೋನನ್ನ ಅಡಿಗೆ ಮಾಡ್ತಾನ ಲೇ
ಭೋಲೋಕದಾಗ
ಏ ಮೂರು ತೂತು ಒಡೆದು
ಮೂರು ದಿವಸ ಒದ್ಯಾಡಿದ್ರೆ
ಅಡಿಗೆ ಆಗೋದಿಲ್ಲ
ಮೂರು ತೂತಿಗೆ ಬಟ್ಟೆ ಇಡು
ಮೂರು ಗುಂಡುಕಲ್ಲಿಡು
ಬೀಡಿ ಸೇದ ಒಳಗೆ
ಆಗಿ ಬಡ್ತೈತೆ ಅಡಿಗೆ ಅಂದ

ಗಡಿಕೆ ಬಿಸಾಕಿನ್ನ ಬಂದಾನ
ಹುಡುಗ ಬಂದು ಪಾದವಿಡಿದಾನಮ್ಮಾ           || ತಂದಾನ ||

ತಾತನ ಪಾದ ಹಿಡಿದ ಬಿಟ್ಟ
ಗಡಿಗೆ ಬಿಸಾಕಿ ಬಂದು
ಏಯಪ್ಪಾ ಮಾತಿಡಿದ್ದೆ ಸರ್ವ ತಪ್ಪಾಯ್ತು
ಪಾದ ಹಿಡ್ಕೊಂಡೆ ಏನೋ ತಮ್ಮ
ಏನಿಲ್ರೀ
ಮತ್ತೇ ನೀನು ಮಾತಾಡಿದೆ
ನಿನ್ನ ಪಾದಕ್ಕ ಬಿದ್ದೆ
ಅಯ್ಯ ನನ್ನ ಪಾದಕ್ಕ ಬಿದ್ರೆ
ನಾನೇನು ಮಾಡ್ಲಿ
ಏನಿಲ್ಲ
ನಂದು ಚಾಂಪುರ ಪಟ್ಣ
ನನ್ನ ತಂದೆ ಕಾಂಭೋಜರಾಜ
ಹಾಲು ಗೊಲ್ರು ನಾವು
ನಮ್ಮ ಹೆಸರು ಶರಬಂದರಾಜ
ನನ್ನ ತಂದೆಗೆ ಹುಣ್ಣು ಹುಟ್ಟೈತೆ
ಬೆನ್ನಡಾಲ
ಈಗ ಲೋಕೆಲ್ಲ ತಿರುಗಿದ್ರೆ
ನಮ್ಮಪ್ಪನ ಹಣ್ಣು ಬೇಸಾಗಿಲ್ಲ
ಆಗ ಔಷಧ ಸಿಗ್ಲಿಲ್ಲ
ಈ ಏಳು ಸಮುದ್ರದ ಆಕಡಿಗೆ
ಬಕಾಸುರನ ತಂಗಿ
ಮಹಿರಾಮನ ಮಗಳು
ಹನ್ನೆರ್ಡು ಕೈ ಆದಿಶಕ್ತಿ
ಕೈ ಚೀಲದಾಗ ತಲೆ ಅಡೇಲಿ
ಗಾಜಿನ ಬುಡ್ಡಿ ಮದ್ದು ಐತಂತೆ
ತಾತ ಆ ಮದ್ದು ತಂದು ಹಾಕಿದ್ರೆ
ಹುಣ್ಣು ಬೇಸಾಗುತೈತಂತೆ
ನಮ್ಮ ತಂದೆಗೆ
ಇಲ್ಲದ್ರೆ ಇಲ್ಲಂತೆ
ಆರು ತಿಂಗಳು ನಡೆದು ಬಂದಿನಿ ನಾನು
ಏನ್ರೀ
ಈಗ ಸಮುದ್ರ ನೋಡಿ
ಎದೆ ಬಿದ್ದು ಬಿಟ್ಟೀನಿ ನಾನು
ಈ ಸಮುದ್ರ ತಟ್ಟಾಯಿಲಾರ್ದ
ನೀನು ತಪಸ್ಸಿಗೆ ಕುಂತುವ್ನ
ಸುಮ್ನೇ ಮಾತಾಡಿದ್ರೆ
ನೀನು ಮಾತಾಡಂಗಿಲ್ಲ ಅಂತಾ
ಈಗ ಮೂರು ತೂತು ಹೊಡೆದು ಗಡಿಗಿಗೆ
ನಾನು ಒದ್ದಾಡುತಿದ್ರೆ
ನನ್ನ ಕಷ್ಟ ನೋಡಲಾರದೆ ಹಿಂದಕ್ಕ ತಿರುಗಿ ನೋಡ್ತಾನ
ಮಾತಾಡುವಾಗ
ಪಾದಕ ಬೀಳೋನು ಅಂತ
ಮಾಡಿನೋ ಸ್ವಾಮಿ
ಓಹೋ ಸರ್ಯಪ್ಪ
ಮತ್ತೇ ಇವಾಗ ಏನು ಮಾಡ್ತೀಯಿ
ಏನಿಲ್ಲ ತಾತ ಈಗ ಔಷಧ ತರಬೇಕು
ನಾನು ಹ್ಯಾಂಗ ಹೋಗ್ಲಿ ಸ್ವಾಮಿ
ನಾನು ಎದೆ ಬಿದ್ದೀನಿ
ಅಯ್ಯೋ ತಮ್ಮ
ಆಕೆ ತಲೆ ಅಡೇಲಿ ಕೈ ಚೀಲದಾಗ
ಗಾಜಿನ ಬುಡ್ಡಿ ಮದ್ದು ತರಾಕ ಹೋತೀಯಾ
ನಮ್ಮಂತೋರ ಕೈಲಿ ಆಗಲಿಲ್ಲ
ನಿನ್ನ ಕೈಲಿ ಏನು ಆತೈತಪಾ
ಕಾಲ ಸರಕ್ಕ ಅಂದ್ರೆ ತಿಳವರ್ಕಿ
ಈಗ ಹನ್ನೆರ್ಡಕ್ಕೆ ಹನ್ನೆರ್ಡ ತುಂಡು ಮಾಡ್ತಾಳ ಆಕಿ
ಆಕೆ ಮನ್ಯಾಕ ಹೋಗಾಕಿಲ್ಲ
ಕರ್ಡಿ ಹುಲಿ ರಾಕ್ಷಾಸಿಗಳು
ಆಗ ಗಂಡಿರುವಿ ಕೆಂಪಿರುವಿ
ಒಂದೊಂದು ಹೆಗ್ಗಣ ದಪ್ಪ ಐದಾವ
ತಮ್ಮಾ ನೀನು ಹೋಗಾಕ ಆಗೋದಿಲ್ಲ ಅಂದ
ತಾತಾ ಮತ್ತ ಏನು ಮಾಡಬೇಕು ಅಂದ
ಹಿಂದಕ್ಕ ಹೋಗಪ್ಪ ಅಂದ
ತಾತಾ ಆರು ತಿಂಗಳು ಊರಬಿಟ್ಟು
ದಾರಿ ನಡೆದೋನು
ಈವಾಗ ನಾನು
ಏಳು ಸಮುದ್ರ ನೋಡಿ ಹಿಂದಕ್ ಹೋಗ್ಲಾ
ಸ್ವಾಮಿ ಹೋಗೋದಿಲ್ಲ

ಅಪ್ಣೆ ಆದ್ರೆ ಕೊಡಾರಿ ಕಡಕಂಡು ಸಾಯ್ತೀನಿ
s ನಿನ್ನ ಪಾದ ಬಿಡೋದಿಲ್ಲ ನಾನು ಜೀವ ಬಿಡತೀನಿ     || ತಂದಾನ ||

ನಿನ್ನ ಪಾದ ಹಿಡಕಂಡು
ಜೀವ ಬಿಟ್ಟು ಬಿಡ್ತಿನಂದ
ಏಯಪ್ಪಾ ನನ್ನ ಪಾದ ಹಿಡಕಂಡು ಜೀವ ಬಿಟ್ರೆ
ನನಗೆ ಪಾಪ ಬರೋದಿಲ್ಲ ನಿಂದು
ನನಗ ಪಾಪ ಸುತ್ತಿಕೊಂಡು
ನನ್ನ ಕಾಳು ಕೈ ಹೋದ್ರೆ
ನಾನೇನು ಮಾಡ್ಲಿ
ಮತ್ತೇ ನಾನೇನು ಮಾಡ್ಲಿ ಶಿವ
ತಮ್ಮ ಇಷ್ಟುದೂರ ಬಂದಿಯಾ
ನಾನ್ಹೇಳಿದಂಗ ಕೇಳಿದ್ರೆ
ನಿನಗೆ ಔಷಧಿ ಸಿಗತೈತೆ
ಇಲ್ದಿದ್ರೆ ಇಲ್ಲ
ಅದೇನು ತಾತ
ನೋಡು ನಾನ್ಹೇಳೋದೆ ತಡ
ಅಡಿಕೆ ಕಡಿಯೋ ಟೆಮಿನಾಗೆ ಬರಬೇಕು ನೀನು
ತಾತ ನಿನ್ನ ಭಕ್ತಿ ಇದ್ರೆ
ನನ್ನ ಬಲ ತೋರಿಸಿಗ್ಯಂಡು ಬರ್ತೀನಿ ಅಂದ
ಇಗೋ ನನ್ನ ಪಾದಕ ತೊಟ್ಟಗ್ಯಂಬೋವು
ಬೆಳ್ಳಿಪಾದಗಳು ಪಾದಕ ಕೊಡ್ತೀನಿ
ಜೈ ಅಂದ್ರೆ ಮೂರೋ ಮೇಘದಾಗ
ಹೋತೈತೆ ಮ್ಯಾಲೆ
ಸಮುದ್ರ ತಟಾಯೋಕೆ ಸಾಧ್ಯವಾಗೋದಿಲ್ಲ
ಮೂರೇ ಮೇಘದಾಗ ಹೋಗಿ
ಏಳು ಸಮುದ್ರಾದ ಕಡೆ ಇಳಕೋ
ಈಗ ಆಲದ ಗಿಡದಾಗ ಬಚ್ಚಿಕ್ಕೋ
ಬೆಳ್ಳಿಪಾದಗಳು
ಅಲ್ಲಿಗೆ ಒಳಪಟ್ಟಿರ್ತೈತೆ
ಆಗ ಆರಂಡಿ ಕರ್ಡಿ
ಕರ್ಡಿದಲ್ಲಿ ಬಣ್ಣದ ಮನಿ
ಆಗ ಹೋಗಿ ಬಿಡು
ಸಾವಿರ ಲಕ್ಷ ಮೃಗಗಳು
ಬಾಯಿ ತೆರ್ಕಂಡು ಬರ್ತಾವ
ಮೂರು ಕೊಲ್ಲು ಕೊಡ್ತಿನಿ
ಮಂತ್ರಿಸಿ ಒಗದು ಬಿಡು
ಎಡಕ್ಕ ಎಡಕ್ಕೆ ಹೊಳ್ತಾವ
ಬಲಕ್ಕ ಬಲಕ್ಕೆ ಹೊಳ್ತಾವ
ಬೊಗಸೆ ಅಡ್ಡ್ಯಾಲ ದಾರಿ ಬಿಟ್ಟು ಬಿಡ್ತಾವ
ಆಗ ಮನ್ಯಾಕ ಹೋಗು
ಈಗ ಮೂರು ತಿಂಗಳು ನಿದ್ದೆ ಆಗೈತಿ
ಮೂರು ತಿಂಗಳ ನಿದ್ದೆ ಐದಾಳ ಹೆಣ್ಣು ಮಗಳು
ಒಳ್ಳೆ ನಿದ್ದೆ ಮ್ಯಾಲೆ ಇದಾಳ
ಆಗ ಬೆಳ್ಳಿ ಬಟ್ಟಲು
ವರಸು ಮ್ಯಾಲೆ ಇಟಗಂಡು ಇರ್ತಾಳ ತಲೆತಲ್ಲಿ
ಮಾತಾಡ ಅಡಿಕೆ ನಗೋ ಎಲೆ
ಓಡ್ಯಾಡೋ ಕಾಂಚು
ಸುಗೂರು ಸುಣ್ಣ
ಎಲೆ ಅಡಿಕೆ ಹಾಕ್ಯಂಡು
ವರಸು ಸುತ್ತ ಉಗುಳಿ ಬಿಡು
ಎದೆ ಮ್ಯಾಲೆ ಎಡಗಾಲಿಡು
ಒಂದು ಬೊಗಸೆ ಅಡ್ಡಾಲು ಪತ್ರ ತಗೋ
ಗರ್ ಗರ್ ಗರ್ ಪತ್ರ ಬರಿ
ಕೇಳವ್ವೆ ಕಳ್ಳ ಅನಬಾರ್ದು
ನೀನಿನ್ನ ಗೊಲ್ಲರವನು
ಕಳ್ಳತನ ಒಯ್ದೀಯಿ ಅನಬಾರ್ದು
ಲುಚ್ಯ ಅನಬಾರ್ದು
ನೀನು ರೋಷದ ಹೆಣಮಗಳಾದ್ರೆ
ಈಗ ನಂದು ಚಾಂಪುರ ಪಟ್ಣ
ನನ್ನತಂದೆ ಕಾಂಭೋಜರಾಜ
ನಾಣು ಗೊಲ್ಲರವ್ನು ಶರಬಂದರಾಜ
ಈಗ ನಿನ್ನ ಎಬ್ಬಿಸಬೇಕಂದ್ರೆ
ಗಂಟೆ ಹೊತ್ತ ಯುದ್ಧಾಗ್ತೈತೆ
ಗಂಟೆ ಒಳಗೆ ಸಾಯಂಗೆ ಐದಾನೆ ನಮ್ಮಪ್ಪ
ಬಾರ್ಲು ಬಿದ್ದು ಬಾರ್ಲು ಗಂಜಿ ಕುಡಿತಾನೆ
ಲೋಕೌಷಧಿ ಹಾಕಿದ್ರೆ ಬೇಸಾಗಿಲ್ಲ
ಈ ನಿನ್ನ ಔಷಧಿ ಹಾಕಿದ್ರೆ ಬೇಸಾಗುತೈತಂತೆ
ಅದ್ಕೆ ಇನ್ನ ಕಾಡಿನ್ಯಾಗ ಐದೀಯ
ಈಗ ನಿದ್ದಿದವ್ಳು
ಭಿನ್ನ ಮಾಡಬಾರದಂತ
ನಾನು ಔಷಧ ತಗಂಡು ಹೋತಿನಿ
ಕಳ್ಳ ಅನಬಾರ್ದು
ಬರೋಳಾದ್ರೆ
ನನ್ನ ಊರಿಗೆ ಬಂದು
ನನ್ನ ಮ್ಯಾಲೆ ಯುದ್ಧ ಮಾಡಿ
ನಾನ ತಂದ ಔಷಧ ತರಬೇಕು
ಇಲ್ದಿದ್ರೆ ನಿನ್ನ ಮನ್ಯಾಗ ಬಿದ್ದಿರು ಅಂತ
ಪತ್ರ ಬರೆದು
ಮುತ್ತಿನ ಸೆರಗಿಗ ಗಂಟು ಹಾಕು
ಎಡಗೈ ಅಂಬೋದು
ತಲೆ ಅಡೇಲಿ ತೂರಿಸಿ ಬಿಡು
ತೆಲ್ಯಾಗ ಕೂದ್ಲು ಮಿಸಕ್ಯಾಡಬಾರ್ದು
ಕಾಲ ಸರಕ್ ಅಂದ್ರೆ ತಿಳವಳಿಕೆ ಆಕಿಗಿ
ಆಗ ಇನ್ನ ಕೈ ಚೀಲದಾಗ ಕೈ ತೂರಿಸಿ
ಆಗ ಮದ್ದು ಮೆಲ್ಲಕ ಎಳಕಂಡು ಬಿಡು
ಗಾಜಿನ ಬುಡ್ಡೆ
ಎಳಕಂಡು
ಆಗ ಕೈ ಚೀಲದಾಗ ಹಾಕ್ಯಂಡು
ಶಲ್ಯದಾಗ ಹಾಕ್ಕೊಂಡು
ನಡುವೇಗೆ ಕಟ್ಟು
ಸಾವಿರ ಲಕ್ಷ್ಯ ಮೃಗ
ಕೆಡಿಕ್ಯಂತ ಕೆಡಿಕ್ಯಾಂತ ಓಡಿ ಬಾ
ಬೆಳ್ಳಿ ಪಾದಗೊಳು
ಪಾದಕ್ಕ ತೊಟ್ಟಿಗ್ಯಂಡು ಜೈ ಅಂತ
ಹೋಗು ಸಮುದ್ರದ ಕಡಿಗೆ ಅಂದ
ನನ್ನ ಮಠದ ತಲ್ಲಿ ಬಂದು ಇಳಿದು ಬಿಡು
ನಂತಲ್ಲಿ ಬಂದು ಉಳಕಂಡ್ರೆ
ನಿನಗೆ ನೋಡಪ್ಪಾ ಜೀವ ಉಳೀತೈತೆ
ಇಲ್ದಿದ್ರೆ ಉಳಿಯೋದಿಲ್ಲ
ತಾತ ನಿನ್ನ ಸತ್ಯವಿದ್ರೆ
ನಾನು ಬಲ ತೋರಿಸಿ ಬರ್ತಿನಿ
ನೋಡಪ್ಪಾ ನಾನು ಹೇಳಿದ್ದು ತಡ
ನೀನು ಅಡಕೆ ಕಡಿಯೋ ಟೈಮೀನಾಗೆ
ಬರಬೇಕು ನೋಡು
ಎಷ್ಟು ಹುಷಾರಾಗಿರ್ತೀಯೋ
ನೋಡು ಅಂದ
ಇಲ್ರೀ
ನಾನು ಗೊಲ್ರ ಕುಲದಾಗ ಹುಟ್ಟಿದವ್ನು
ಎಷ್ಟು ಹುಷಾರಾಗಿದೀನಿ
ಅಂಬೋದನ್ನ ನೋಡವಂತ್ರೀ
ಅಷ್ಟಾಗ್ಲಪ್ಪಾ ಅಂದ

ತಾತನ ಪಾದ ಮುಗಿದು ಬಿಟ್ಟಾನಾ
ತಾತ ಕೊಟ್ಟ ಪಾದಕ ಕೈಚೀಲದಲ್ಲಿ ವಿಟ್ಟಾನಮ್ಮಾ
ಗೊಲ್ರ ಹುಡುಗ ನೋಡ      || ತಂದಾನ ||

ತಾತ ಕೊಟ್ಟಿದ್ದು ಕೈಚೀಲದಾಗಿಟ್ಟು
ಬೆಳ್ಳಿ ಪಾದಕೋಲು
ಪಾದಕ ತೊಡ್ಕೋಂಡ
ಪಾದಕ ತೊಡ್ಕೋಂಡು
ಆಗ ಏಳು ಸಮುದ್ರದ ಮ್ಯಾಲೆದ್ದ
ಹ್ಯಾಂಗ ಬರ್ತಾನಪ್ಪ
ಏಳು ಮನುಷೋರು ಮ್ಯಾಗ

11_80_KMKM-KUH

ಅಣ್ಣ ಮೂರು ಮೇಘಾದಾಗಣ್ಣ
ತೋಥಡಿ ಏಳು ಸಮುದ್ರಾದಾಕಡೆಗೆ
ಜೈ ಮೇಘ ಹೊಂಟಾನ
ಮೇಘದಾಗ ಎದ್ದಾನೆ
ಏಳು ಸಮುದ್ರ ತಟಾದು     || ತಂದಾನ ||