ಕುಪ್ಪೆ ಬಿದ್ದು ಬಿಟ್ಟು
ಒಂದೇಟಿಗೆ ಎರ್ಡು ತಲೆ ಹೋದವು
ಕತ್ತ್ರಿಸಿಗ್ಯಂಡು ಬಿದ್ದು ಬಿಟ್ಟು
ಆಗ ರಾಕ್ಷಸಿಗಳು ಏನಂತಾವ
ಮಗಳಾ ಚಿತ್ರಾಂಗಿ

ನಿನ್ನ ಜೋಪಾನ ಮಾಡಿದ್ರೆ
ಜೀವ ಕಳೆದ್ಯಾ ಮಗಳಾ     || ತಂದಾನ ||

ಮಗಳಾ ಈಸು ದಿನ ಜೋಪಾನ ಮಾಡಿದಿವಮ್ಮಾ
ನಿನ್ನ ಜೀವ ಬೆಳಸಿದ್ರೆ
ನಮ್ಮ ಜೀವ ಕಳದೆ

ಹೋತಿವಿ ಮಗಳ ಅಂತ ಜೀವ ಬಿಟ್ಟಾರಮ್ಮಾ  || ತಂದಾನ ||

ಅಂಗ ದುಃಖ ಮಾಡಿ
ಮಗಳಾ ಅಂತ ಜೀವ ಬಿಟ್ಟು ಬಿಟ್ರು

ಒಂದೇಟಿಗೆ ಎರ್ಡು ತಲೆ
ಕತ್ತ್ರಿಸಿಗ್ಯಂಡು ಬಿದ್ದು ಬಿಟ್ಟು ಅಪ್ಪ
ಆಗ ಇನ್ನ ನೋಡಿದಳು ಮಗಳು
ನೋಡಿದ್ಯಾ ಈ ತಾಯಿ ತಂದಿ ಇದ್ದುದ್ದಿಗೆ
ನಾನು ಹದ್ನೆಂಟು ವರ್ಷದಾಗ ನೆರ್ತು ಬಿಟ್ಟೀನಿ
ನೆರ್ತು ಎರ್ಡು ತಿಂಗಳಾತು
ಒಬ್ಬ ಗಣ್ಮಗ ಬಂದಿಲ್ಲ ಈ ಊರಿಗೆ
ಅಯಯ್ಯಪ್ಪ ಚಿತ್ರಗಿರಿ ಪಟ್ನ
ಚಿತ್ರ ಚಿತ್ರ ಮಾಡಿ ಬಿಡ್ತಾರ
ಎರ್ಡು ರಾಕ್ಷಾಸಿ ಸೇರಿಕ್ಯಂಡಾವಂತ ಆ ಊರಾಗ
ಅಂತ ಒಬ್ರು ಬಂದಿಲ್ಲ
ಯಾ ಕಾಡು ಬಿದ್ದು ಬಂದಾನೋ ಈತ
ಏನ್ರೀ ನೀನೇನು ಕಾಡು ಬಿದ್ದು ಬಂದೀ
ಕಾಡಿನಾಗಿದ್ದ ರಾಕ್ಷಸಿಗಳನ್ನ ಕೊಲ್ಲಿ ಬಿಟ್ಟೀಯಿ
ನೀನು ಕೊಲ್ತಿಯಿ ಹೋಗಿ ಬಿಡ್ತಿಯ
ಈ ಊರಾಗ ನನ್ನ ನೋಡೋನ್ಯಾವನು
ಯಾರನೈದಾರ ಈ ಊರಾಗ
ಎಲ್ಲಾರನ್ನ ತಿಂದ ಬಿಟ್ಟಾವ ಅವು
ನನ್ನೋಬ್ಬಾಕೀನ ಜ್ವಾಪನ ಮಾಡ್ಯಾವ ಅವು
ಮತ್ತೇ ಅವ್ರು ಕೈಯಾಗ
ನಾನು ದೊಡ್ಡಾಕೆ ಆಗಿನಿ
ಈಗ ನೀನು ಬಿಡ್ತಿ ಹೋಗ್ತಿ
ನನ್ನ ನೋಡೋನು ಯಾವನು
ಹೆಣ್ಮಗಳು ಚಿತ್ರಿಗಿರಿ ಪಟ್ಣಾನ
ಚಿಂತ್ರಾಗಿ ರಾಜ್ಯ ವಾಳ್ತಾಳಂತೆ
ಹೆಣ್ಮಗಳಿಗೆ ಯಾಕ ಕೊಡಾನ ರಾಜ್ಯವು
ಅವ್ಳೆಷ್ಟು ಪರಾಕ್ರ ಇರಬಹುದು
ಅವಳ್ನ ಕಡದು ಅವಳ ಪಟ್ಣ ಗೆಲ್ಲಬೇಕಂತ

ದುಷ್ಟ ಗಂಡಸರು ಬಂದು ಭಂಗ ಮಾಡ್ತಾರಪ್ಪೋ
ಗಣ್ಮಕ್ಳು ಭಂಗ ಮಾಡಿ ಬಿಡ್ತಾರ ನನ್ನ
ಅಯ್ಯಾ ಗಂಡಸರು ಹೆಂಗಸರಿಗೆ ಸಮ ಅಲ್ಲವಣ್ಣಾ
ಗಂಡಮಕ್ಳಿಗೆ ಇನ್ನ ಹೆಣ್ಮಕ್ಳು ಏನು ಯುದ್ಧ ಮಾಡ್ಬೇಕ್ರಿ    || ತಂದಾನ ||

ಎನ್ರೀ
ಗಣ್ಮಕ್ಕಳ ಕೂಟ ಯುದ್ಧ ಮಾಡಾಕ
ನನ್ನ ಕೈಲಿ ಆಗೋದಿಲ್ಲರೀ
ಈಡಾಗೋದಿಲ್ಲ ಜೋಡಾಗೋದಿಲ್ಲ
ಏನ್ರೀ ನಿನ್ನ ಪಾದಕ ಶರಣು ಅಂತ
ದುಃಖ ಮಾಡಿದ್ಳು
ಬೇಸು ಆಲೋಚನೆ ಮಾಡಿದ ಹುಡುಗ
ಖರೇವೆ ಪಾಪ
ಇವ್ರ ತಾಯಿ ತಂದೆ ಇದ್ರೆ
ಇಪ್ಪತಳ್ಳಿ ಆರವತ್ತೂರು
ಗಡಗಡ ಅಂಜಿ ಬಿಟ್ಟಾರ
ಪಾಪ ಯಾವುದೋ ಒಂದು ಹುಡುಗಿನ
ತಗೊಂಡು ಜೋಪಾನ ಮಾಡಿಕ್ಯಂಡಾವ
ಇವಾಗ ಅವ್ರು ತಾಯಿ ತಂದೆನ ಕೊಲ್ಲಿಬಿಟ್ಟೆ
ಈಗ ಒಬ್ಬರಿಲ್ಲ ಊರಾಗ
ಚಿತ್ರಗಿರಿ ಪಟ್ಣದಾಗ
ಈಕೀನ ಬಿಟ್ಟು ಹೋಗಿ ಬಿಡ್ತಿನಿ
ಆಗ ನೋಡೋರು ಯಾರು
ಯಾವಳೋ ಹೆಣ್ಮಗಳು ಐದಾಳಂತ
ಯಾವೋನು ಬಂದು ಭಂಗ ಮಾಡುತಾನೋ
ಮಾವ್ನು* ಬಂದು ಕಡಿತಾನೋ
ಆಗ ಅವ್ಳು ಊರು
ನಾವು ಗೆಲೀಬೇಕು ಅಂತ
ಛೇ ನಾನಾಗಿ ಈ ಅಮ್ಮನ
ಕೆಡಿಸಿದಂಗ ಆತೈತೆ
ನಾನಾಗಿ ಜೀವ ಕಳೆದಂಗ ಆಗತೈತಿ
ನೋಡಮ್ಮಾ ನಿಮ್ಮ ತಾಯಿ ತಂದಿ ಜೀವ ಕಳೆದಿನಿ

ನಿನ್ನ ಜೀವಗೆ ನನ್ನ ಜೀವ ಐತೋ
ಯಾರು ಬಂದು ನಿನ್ನ ಕಡಿತಾರಮ್ಮ
ಯಾವೋನು ಬಂದು ಕೈ ಹಿಡಿಯೋನಮ್ಮಾ
ಯಾವೋನು ಬಂದು ಸೆರಗು ಎಳಿಯೋನಮ್ಮಾ           || ತಂದಾನ ||

ಏನಮ್ಮಾ ಚಿತ್ರಾಂಗಿ
ನಿನ್ನ ಸೆರಗಳೆಯವನ್ಯಾವನು
ನಿನ್ನ ಕಡಿಯವನ್ಯಾವನು
ಕೈ ಹಿಡಿಯವನ್ಯಾವನು
ನಿನ್ನ ಜೀವಕ್ಕ ನನ್ನ ಜೀವ ಐತೆ ಅಂದ್ರೆ
ನೋಡ್ರೀ ಮಾತಿಗೆಲ್ಲ ಗಂಡಲ್ಲ
ಮಾತಿಗೆಲ್ಲ ಹೇಣ್ತಿ ಅಲ್ಲ
ಆಗ ಹತ್ತು ಮಂದಿ ಹಡದ್ರುನು
ಹೇಣ್ತೀನ ಬಿಟ್ಟು ಹೋಗಿ ಬಿಟ್ಟಾರ
ಈಗ ಜೀವಕ್ಕೆ
ಕೇಳವ್ವೆ ಮಾಡು ಅಂದ್ರೆ
ಸತ್ತೇವು ಮಾಡ್ತಿನಿ ನಾನು
ಎಲ್ಲ ಭಸ್ಮ ಮಾಡಂದರ ಮಾಡ್ತಿನಿ
ಎಲೆ ಭಸ್ಮ ಮಾಡಂದ್ರೆ
ಹಂತಾವೆಲ್ಲ ನಡೆದಿಲ್ಲ ಸ್ವಾಮಿ
ಈಗ ಜೀವಕ್ಕೆ
ನನ್ನ ಜೀವ ಉಳಿಸಗಿದ್ರೆ

ಜೀವಕ್ಕ ತಾಳಿ ಕಟ್ಟಬೇಕು
ನೀನು ಗಂಡವಾತೀಯೋ ನನಗೆ
ಮಾತಿಗೇಣ್ತಿ ಆತಿನಿ
ಸುಳ್ಳು ಮಾತು ಇವೆಲ್ಲ       || ತಂದಾನ ||

ಜೀವಕ್ಕ ಇರಾಂಗಿದ್ರೆ
ಜೀವಕ್ಕೆ ತಾಳಿ ಕಟ್ಟಿದ್ರೆ
ನೀನು ಗಂಡ
ನಾನು ಹೇಣ್ತಿ ಆತಿನಿ
ಈ ಮಾತುಗಳೆಲ್ಲ ಸುಳ್ಳೆ
ಭಾಮಾ ಇಲ್ಲಿ ಲಗ್ನ ಮಾಡಿಕ್ಯಾಂಬಾಕ
ತಾಳಿ ಕಟ್ಟಾಕ ಯಾರೈದಾರ ಊರಾಗ
ನಾನೀನು ಇಬ್ರೆ ಮಾಡಿಕ್ಯಂಬಾನ
ಲೋಕೆಲ್ಲ ನೋಡಬೇಕಲ್ಲ
ಆಗ ಏಸು ಮಂದಿ ಕೈಲಿ
ನಮ್ಮ ತಲೆ ಮೇಲೆ ಅಕ್ಕಿ ಬ್ಯಾಳೆ ಬೀಳ್ತಾವೋ
ಆಸು ವರ್ಷ ನಾವು ಸುಖವಾಗಿ ಇರ್ತಿವಿ
ಕಾಲ ಕಳಿತೀವಿ
ಮತ್ತೆ ನೋಡ್ರೀ
ಇಲ್ಲಿದ್ದ ಮನುಷ್ಯೇನ ಎಲ್ಲಿಂದ ತರ್ಬೇಕು
ಹಂಗಲ್ಲ
ಈಗ ಬಾಷೇ ಕೋಡೊದೊಂದೆ
ಮಾತು ಕಳಯೋದೊಂದೆ
ಜೀವ ಬಿಡೊದೊಂದೆ
ತಾಳಿ ಕಟ್ಟಿದ ಹೆಣ್ತಿನ್ನ ಬಿಟ್ಟು ಬಿಡ್ತಾರ
ಮಾತು ಕೊಟ್ಟಿದ ಹೆಣ್ತಿನ ಬಿಡೋದಿಲ್ಲ
ಇಗೋ ನಿನ್ನ ಜೀವಕ್ಕ ನನ್ನ ಜೀವ ಐತೆ
ಏನು ಎದೆ ಬೀಳಬ್ಯಾಡ ಅಂತ

ಕೈ ವಳಗೆ ಕೈ ಹಾಕ್ಯಾನಮ್ಮಾ
ಆಗ ಅವಳಿಗೆ ಭಾಷೆ ಕೊಟ್ಟಾನಮ್ಮ
ಗೊಲ್ರ ಹುಡುಗ ಶರಬಂದ ಲೋಕದಾಗ ಇನ್ನಾಗಿ          || ತಂದಾನ ||

ಕೇಳವ್ವೆ ಚಿತ್ರಾಂಗಿ
ಅರ್ಜೆಂಟು ಹೋಗಿ ಬರ್ತೀನಿ ನಾನು
ಏಳು ಸಮುದ್ರದಾ ಕಡೆಗೆ
ಏಷ್ಟು ದೂರೈತಿ
ನಿಮ್ಮ ಚಿತ್ರಗಿರಿ ಪಟ್ಣಕ್ಕ
ನೋಡ್ರಿ
ಮೂರೇ ಗಾವುದ್ ಐತಿ
ಏಳು ಸಮುದ್ರ
ಹಾಲು ಸಮುದ್ರ
ನೀಲಿ ಸಮುದ್ರ
ಸೀನೀರ ಸಮುದ್ರ
ಮತ್ಸ್ಯ ಸಮುದ್ರ
ಮಹಿಂದ್ರ ಸಮುದ್ರ
ಮಸುರ ಸಮುದ್ರ
ಆಮೇಲೆ ಹೊಂಡ ನೀರ ಸಮುದ್ರ
ಏಳು ಸಮುದ್ರದ ಕಡೆಗೆ
ಹನ್ನೆರ್ಡು ಕೈಯಿ ಆದಿಶಕ್ತಿ ಎದಿನಗಂಧಿ
ಮಾತಾಡ ಅಡಿಕೆ
ನಗೋ ಎಲೆ
ಓಡ್ಯಾಡೋ ಕಾಂಚು
ಸುಗೂರು ಸುಣ್ಣ
ಬೆಂಕಿ ತಿಂದ
ಪಕ್ಷಿ ರಕ್ತ ಕೂಟ ತಯಾರು ಮಾಡೈತಿ
ಮೇಟಿ ಔಷಧ
ಶನಿ ಮಹಾತ್ಮ
ಲೋಕೆಲ್ಲ ಸಾಯಂಗೈತೆ ಔಷಧ
ಭೂಮ್ಯಾಗ ಬಿದ್ರೆ
ಪಾತಾಳ ಲೋಕಕ್ಕೆ ಹೋಗಿ ಬಿಡ್ತೈತೆ
ಬಳ್ಳಿಟ್ರೆ ಹಂಗೆ ಉರಕಂಡು ಹೋತೈತೆ
ಅಂಥಾ ಔಷಧ ರ್ರೀ
ಆಗ ಮೂರು ತಿಂಗಳು ಊಟ
ಆರು ತಿಂಗಳು ನಿದ್ದೆ ಆಕೀಗೆ
ಆಕಿ ಕಾಯಾಕ ಆರಂಡಿದಾಗ ಐದಾಳಾಕಿ
ಕಾಡಿನಾಗೆ ಐದಾಳಾಕಿ
ಆಕಿ ಏನು ಜೋಪಾನ ಮಾಡ್ಯಾಳಂದ್ರೆ
ನರಪ್ರಾಣಿ ಒಬ್ರು ಹೋಗಂಗಿಲ್ಲ
ದುಷ್ಟರು ಯಾರು ಗಂಡಸ್ರು ಹೆಂಗಸ್ರು
ಆಕೀನ ಮನೆ ಕಾಯೋದು ಅಂದ್ರೆ
ಒಂದೊಂದು ಕರ್ಡಿ ಐತೆ
ಒಂದೊಂದು ಮಣಸ್ಯಾನ ಉದ್ದ
ಹುಲಿ ಕೆಂಪು ಕೋತಿ, ಕರೆ ಕೋತಿ
ಕೆಂಪಿರುವಿ, ಗಂಡಿರುವಿ
ಕಾಯ್ತಾವ ಆಕೆ ಮನೆ
ಈಗ ದಿನಾಲೂ ಹತ್ತು ಆಕಳು ಕೊಯ್ದು
ಮಾಂಸ ಉಗ್ಗಿ ಬಿಡ್ತಾಳ
ಏನ್ರೀ
ಈಗ ಬೆಳ್ಳಿ ಬಟ್ಲದಾಗ
ಎಲೆ ಅಡಿಕೆ ಉಗುಳೋದು ಆಕೆ
ಆಗ ಬೆಳ್ಳಿ ವರಸುವು
ಹನ್ನೆರ್ಡ ಕೈ ಆಕಿಗೆ ಇರೋದು
ಸರಿ ಆಕೆ ಎದ್ರಾಗಲಿದ್ದ ಹುಟ್ಟ್ಯಾಳ
ಲೋಕಕ್ಕೆ ಅಂತ ಕೇಳ್ದ
ಈ ಚಿತ್ರಾಂಗಿನ
ಈಕೆ ರಾಕ್ಷಾಸಿ ಕೈಯಾಗ ಬೆಳಕಂಡಾಕಿ ಅಲ್ಲ
ಆಗ ನೋಡ್ರಿ
ಆಗ ಬಿಳೆ ಕರಕಾಂಚ ಗರ್ಭದಾಗಂದ್ರೆ
ಹಾಳಗದ್ದ ಇದ್ದಂಗ ಇರ್ತಾವ
ಕುರಿ ಎತ್ತ್ರ ಇರ್ತಾವ
ಅದರ ಬಾಯಿ
ಬಾಯಿ ಗುದ್ದಲಿ ಆಗಿ ಇರ್ತೈತೆ
ರೆಕ್ಕೆ ಒಂದೊಂದು ಮರ ಅಡ್ಡಾಲು
ಬಕಾಸುರನ ತಂಗಿ
ಮಹಿರಾಮನ ಮಗಳು
ಅವಳು ಬಾಯಿಕೂಟ ಗುದ್ದಿಬಿಟ್ರೆ
ಹಂಗೆ ತೂತು ಬೀಳಬೇಕು
ಕೊಲ್ಲು ಕೊಲ್ಲು ಹಂಗೆ ಒಲ್ಳಾಡಿ ಬೀಳಬೇಕು
ಓಹೋ ಸರೆ
ಹಂಗಾದ್ರೆ ನಾನು ಹೋಗಿ ಬರ್ತಿನಿ
ಏಳು ಸಮುದ್ರಾ ಕಡೆಗೆ
ಇಲ್ರೀ ನೀನು ಸುಮ್ನೇ ಹೋಗಾಂಗಿಲ್ಲ
ಏಳು ಸಮುದ್ರಾ ಕಡೆಗೆ
ಎಲ್ಲಿ ಗ್ಯನ್ನ ಈಸ್ಲು ಹೊಡಿತಿಯ
ಏಳು ಸಮುದ್ರ
ತಟಾದು ಹೋಗಬೇಕಂದ್ರೆ ಸಾಮನ್ಯವಾ
ಕಡೇಲಿ ಕಡೇಲಿ ಸಮುದ್ರ ಇದ್ರೆ
ಹ್ಯಾಂಗಾದ್ರೆನು ತಟಾದು ಹೋಗಬಹುದು
ಈ ಸಮುದ್ರಾಗಲಿದ್ದ
ಆ ಸಮುದ್ರಕ್ಕೆ ಈಸ್ಲು ಹೊಡದು
ಗಡ್ಡೆ ಮ್ಯಾಗ ನಿಂದ್ರಬಹುದು
ಗಡ್ಡಿಲ್ಲ ಪಡ್ಡಿಲ್ಲ
ಏಳು ಸಮುದ್ರದ ನೀರು
ಏಕ ಕಲತಗಂಡು ಹರೀತವ
ಎಲ್ಲಿಗೆನ್ನ ಈಸ್ಲು ಹೊಡೀತಿಯಿ
ಏಳು ಸಮುದ್ರದ ನೀರು
ಮತ್ತೇ ಹ್ಯಾಂಗ ಮಾಡಬೇಕು ಅಂದ
ಏಳು ಸಮುದ್ರದ ದಂಡೀಲಿ
ಜಟಂಗಿ ಸ್ವಾಮೀದು ಮಠ ಐತೆ
ಆಗ ನಾಗ ಮುನೀಶ್ವರ
ತಪಸ್ಸಿಗೆ ನಿಂತಾನ
ನೀನು ಏಳು ಸಮುದ್ರದಾಗ ಸ್ನಾನ ಮಾಡಿಕೊ
ಹೊಸ ಗಡಿಗೆ
ಮೂರು ತೂತು ಹೊಡ್ದು ಕೊಡ್ತಿನಿ
ನೋಡ್ರೀ ಜೀವ ಉಳಿಯೋದು ಹೇಳ್ತಿನಿ
ನಾನು ಕಳೆಯೋದು ಹೇಳೋದಿಲ್ಲ
ಆಗ ಇನ್ನ ಮಾಡಿದಿಲ್ಲ ಮಾಡಿಕೊಡು ಅಂದ
ಹೊಸ ಮುಚ್ಚೋಳ ಕೊಡ್ತಿನಿ
ಈಗ ಮೂರು ಚ್ಯಾರಿ ಅಕ್ಕಿಬ್ಯಾಳೆ
ಕೈಚೀಲದಾಗ ಹಾಕ್ತಿನಿ
ಕೈ ಚೀಲದಾಗೆ ಹೊಸ ಗಡಿಗೆ ಇಡ್ತಿನಿ
ಮೂರು ತೂತು ಒಡದು
ಆಗ ಮುಚ್ಚಳು ಇಡ್ತಿನಿ
ತಗಂಡು ಹೋಗು
ಸ್ನಾನ ಮಾಡು
ದೇವ್ರು ಮುಂದೆ ಏನು ಮಾಡು
ಎರ್ಡು ತೂತಿಗೆ
ಎಲ್ಡು ಗುಂಡುಕಲ್ಲಿಕ್ಕು
ಒಂದು ತೂತಿಗೆ ಮೊಣಕಾಲು ಅನಿಸು
ಮುಚ್ಚುಳಾಗ ನೀರು ತಂದಿದ್ದು
ನೀರ್ಹಾಕು
ಆಗ ಚ್ಯಾರೆ ಅಕ್ಕಿ ಹಾಕು
ಒಲೆ ಊದಿ ಬಿಡು
ಮೊಣಕಾಲೂರುದುವಾಗ ಹಿಂದಕೆಳ್ಕೋ
ಆಗ ತೂತಿನಿಂದ ಗಡಿಗ್ಯಾಗಿನ
ನೀರೆಲ್ಲ ಕೆಳಗಿಳಿತಾವ
ಒಲೆ ಆರಿ ಹೋತೈತಿ
ಮತ್ತೇ ಇನ್ನ ಎರ್ಡು ತೂತಿಗೆ
ಎರ್ಡು ಗುಂಡುಕಲ್ಲಿಡು
ಒಂದು ತೂತಿಗೆ ಮೊಣಕಾಲಿಡು
ಮತ್ತೇ ಚ್ಯಾರಿ ಅಕ್ಕಿ ಹಾಕಿ
ಹೀಂಗೇ ಒದ್ದ್ಯಾಡಿಕ್ಯಾಂತ ಇರು
ಆತ ತಪಸ್ಸು ಬಿಡಬೇಕಲ್ಲ
ತಪಸ್ಸು ಬಿಟ್ಟು ನಿನ್ನ ಮಾತಾಡು ಅಂದ್ರ
ಯಾರು ಮಾತಾಡ್ತಾರ
ನಿನ್ನ ಕಷ್ಟ ನೋಡಿ ತಪಸ್ಸು ಬಿಡ್ತಾನ
ಜಟಂಗಿ ಸ್ವಾಮಿಗೆ
ನಾಗ ಮುನೀಶ್ವರ ತಪಸ್ಸು ಕುಂತವ್ನು
ತಪಸ್ಸು ಬಿಟ್ಟು ನಿನ್ನ ಮಾತಾಡ್ತಾನ
ಈ ಗಡಿಗೆ ಬಿಸ್ಹಾಕು
ಆತನ ಪಾದ ಹಿಡಕೋ
ಆತ ಹೋಗು ಅಂದ್ರೆ ಹೋಗು
ಬ್ಯಾಡ ಅಂದ್ರೆ
ಹಿಂದಕ ಬರ್ರೀ ಅಂತ ಹೇಳ್ದಳು
ಸರಿ ಬಿಡು
ಈಗ ಜನ್ಮ ಉಳೀತೈತಿ
ಕೊಲ್ಲುತಾರ ಹೆಣ್ಮಕ್ಕಳೇ
ಹೆಣ್ಮಕ್ಕಳೇ ಉಳಿಸ್ತಾರ
ಭಾಮ ಚಿತ್ರಾಂಗಿ

ಈಗ ನೀನು ಹೇಳಿದಂಗಾಲೆ ನಾನು ಲೋಕ ನಾನ ಮಾಡೇನು    || ತಂದಾನ ||

ಆಗ ಬಂದು ಪಾದ ಮುಗ್ದು
ಕೈಚೀಲ ಕೊಟ್ಟು ತಗಂಡು ನಡ್ದ