ಒಹೋ ನಮ್ಮಣೋರು
ತಂದಿ ಒಬ್ನೆ ತಾಯೋರು ಏಳು ಮಂದಿ
ಎಲ್ಲಾ ನಮ್ಮಪ್ಪಗೇ ಹುಟ್ಟೀವಲ್ಲ
ನಾವೇನು ಕಡೆಲಿ ಹುಟ್ಟಿಲ್ಲ
ಇಗೋ ಪಾತ್ರಗಿತ್ತಿಂದ ಮೂರು ಗೇಣು
ದೂರ ಇರಬೇಕಂತೆ ಗಣ್ಮಗ
ಉಟ್ಟ ಸೀರೆ ಉಚ್ಚಿ ಕೆಳ್ಗ ಬಿದ್ದಂಗ ಮಾಡಿದೋನು
ಅವ್ನೇ ನನ್ನ ಜೀವನ ಗಂಡ ಅಂತ ಬೊರ್ಡ ಹಾಕ್ಯಾಳ
ನಮ್ಮಣ್ಣೋರ್ನು ಹಗೆದಾಗ ಹಾಕ್ಯಾಳಂತೆ

ಅವಳ್ಹೆಂತ ಹೆಂಗಸೇನು ನಾನು ನೋಡಿ ಹೋಗೇನು
ಯಮ್ಮಾ ಬೆನ್ನು ಹಿಂದೆ ಹುಟ್ಟದವ್ನು
ನಾನು ತಮ್ಮ ಐದೀನಿ ಲೋಕ         || ತಂದಾನ ||

ಬೆನ್ನ್ಹಿಂದೆ ಹುಟ್ಟಿದ ತಮ್ಮ
ಎಂಜಲ್ಹಾಲು ಕುಡಿದ ತಮ್ಮನಾ
ಅಣ್ಣನವುರನ್ನ ಹ್ಯಾಂಗ ಬಿಟ್ಟೋಗ್ಲಿ ನಾನು
ಈಗ ಅಣ್ಣಾವ್ರನ್ನ ಕರಕಂಡು
ಆರುಮಂದಿ ಅಣ್ತಂಬ್ರು ಕಲ್ತು ಹೋತಿವಿ ಅಂತ
ಏನು ಮಾಡಿದ ಶರಬಂಧರಾಜ
ಆಗ ಇಲಾಮಂತರ ಪಟ್ಣಕ ಬಂದ
ಡೆರೆ ಹೊಡ್ದ ಗೂಡಾರ್ಹಾಕ್ದ
ಐದು ಮಂದಿ ಹೆಂಡ್ರು
ತಾವು ಕುಂತಗಂಡ
ಕಣ್ಣೀರು ಉದುರುಸ್ತಾನ ಮಗ
ನೆನಿಸಿಗ್ಯಂಡ
ಏನಂತ ನೆನಿಸಿಗ್ಯಂಡ
ಅವ್ಳು ಮೂರು ಗೇಣು ದೂರ ಇರಬೇಕಂತೆ
ಹೆಣ್ಮಗಳು ಉಟ್ಟಿದ ಸೀರೆ ಉಚ್ಚಿ ಕೆಳಗೆ ಬಿದ್ದಂಗ
ಏನು ಮಂತ್ರ ಕಲಿಬೇಕು ನಾನು
ಏನು ಉಪಾಯ ಮಾಡಿದ್ರೆ
ಹೆಣ್ಮಕ್ಕಳು ಸೀರೆ ಉಚ್ಚಿ ಬೀಳತೈತಿ
ಒಂದು ಮುಟ್ಟು ಬಾರ್ದು
ಅಂಟೂಬಾರ್ದು
ಹ್ಯಾಂಗ ಉಚ್ಚಿ ಬೀಳತೈತಿ ಹೆಣ್ಮಕ್ಕಳು ಉಟ್ಟಿದ ಸೀರೆ
ಆಕಿ ಸೋತಂಗ
ಸೀರೆ ಉಚ್ಚಿ ಕೆಳಗೆ ಬಿದ್ರೆನೋ ಸೊತಂಗ
ನಮ್ಮಣ್ಣೋರು ಬಿಡು ಅಂದ್ರೆ ಬಿಡ್ತಾಳೆ
ಸಮ್ನೆ ಹ್ಯಾಂಗ ಬಿಡ್ತಾಳೆ ಆಕೆ
ನಮ್ಮೋಣ್ಣೋರು ಬರೋದು ಬೇಕು ನನಗೆ
ಆಕೇನು ನನ್ಗ ಬೇಕಿಲ್ಲ ಅಂತ
ಆಲೋಚನೆ ಮಾಡಿದ ಹುಡುಗ
ಆಗ ಕಣ್ಣೀರು ಉದುರುಸ್ತಿದ್ರೆ
ಐದು ಮಂದಿ ಹೆಣ್ಮಕ್ಕಳು ನೋಡಿದ್ರು
ಏನ್ರೀ ಗೆಲಿಲಾರ್ದ ಗೆದ್ದು ಕಂಡು ಬಂದು ಬಿಟ್ಟೆ
ನಮ್ನ ಕರಕಂಡು ಬಂದೆ
ನಮ್ಗೆ ಅನ್ನಿಲ್ಲ ನೀರಿಲ್ಲ
ಏನ್ರೀ ಆಗ ಗುಡಾರ ಹೊಡ್ದೆ ಗುಡಾರದಾಗ ಕೊಡಿಸ್ದೆ
ಏನು ಆಲೋಚನೆ ಮಾಡ್ತೀಯಿ ಅಂದ್ರು
ಕೇಳವ್ವೇ ಏನನ್ನ ಕಷ್ಟ ಬಂದ್ರೆ ಗಂಡಸರಿಗೆ ಯೆಸ್ನ
ಹೆಂಗಸರಿಗೆ ಏನು ಅಂದ
ನೋಡ್ರೀ ಎಡಗೈ ಹೆಂಗಸ್ರು ಬಲಗೈ ಗಂಡುಸ್ರು
ನಿಮ್ಗಿದ್ದ ವ್ಯಸ್ನ ನಮಗೂ ರೋಟ ಇರ್ತೈತ್ರೀ ಅಂದ್ರು
ಇವೂರಾಗ ಪಾತ್ರಗಿತ್ತಿ ಐದಾಳಂತೆ
ಹ್ಯಾಂಗಾರ ಸೋಲ್ತಾಳ
ಸೀರೆ ಉಚ್ಚಿ ಕೆಳಗೆ ಬೀದಂಗ ಮಾಡಬೇಕಂತೆ
ಏನು ಮಂತ್ರ ಕಲಿಬೇಕು
ಅಂತ ಆಲೋಚನೆ ಮಾಡ್ತಾನಿ
ಈವೂರು ಸುದ್ದೆಲ್ಲಾ ಯಾರಿಗೆ ಗೊತ್ತು
ಇಲಾಮಂತರ ಪಟ್ಣದ್ದು
ಆಗ ಭೂಪತಿರಾಜನ ಮಗಳಿಗ ತಿಳುವರಿಕೆ
ಈ ಇಲಾಮಂತ್ರ ಪಟ್ಣದೆಲ್ಲ ಸುತ್ತ ನಾಲ್ಕು ಹಳ್ಳಿಗ ಗೊತ್ತು
ಆಗ ಏನ್ರೀ
ಏನು ಚಿಂತೆ ಮಾಡಬ್ಯಾಡ
ಈ ಊರಾಗ ಯಾರೈದಾರ ಅಂದ್ರೆ
ಬಡಿಗೇರು
ಬಡಿಗೇರು ಶಿವ
ಕಂಬಾರು ಕಾಳ
ಅವ್ರಿಬ್ಬರು ಅಣ್ಣ ತಮ್ಮಾರು ಬಡಿಗೇರು
ಮುವತ್ತಾರು ಗಂಟೆ ಪಾತ್ರಗಿತ್ತಿ ಮನ್ಯಾಗೆ ಇರ್ತಾರೆ
ಅವ್ರಿಗ ಹೆಂಡ್ರು ಮಕ್ಕಳಿಗೆ ಆಕೆ ಬಟ್ಟೆ ನೋಡು ತರೋದು
ಆಗ ಅಕ್ಕಿ ಬ್ಯಾಳೆ ಆಕಿ ಇಸ್ಕೊಡೋದು
ಅವ್ರು ಕೈಯಾಗೆ ಐದಾರ
ಹೇಳಿದ್ರೆ ಕೆಲಸ ಮಾಡ್ತಾರ
ಈಗ ಅವ್ರುನ ಹಿಡಕಂಡ್ರೆ

ಪಾತ್ರಗಿತ್ತಿ ಸದ್ದಿ ಹೇಳುತ್ತಾರೆ
ಸೋತದ್ದು ಗೆದ್ದದ್ದು ಎಲ್ಲಾ ಹೇಳುತಾರ
ಇಲ್ದಿದ್ರೆ ತಿಳುವಳಿಕೆ ಇಲ್ಲಯ್ಯ            || ತಂದಾನ ||

ಕೇಳೋದಿಲ್ಲ ಅಂದ
ಮತ್ತೆ ಹ್ಯಾಂಗ ಹೋಗ್ಲಿ
ಬಡಿಗೇರು ಮನೆಗೆ ಅಂತ ಕೇಳ್ದ
ಬಡಿಗೇರು ಮನೆಗೆ ಹ್ಯಾಂಗ ಹೋಗೊದಂದ್ರೆ
ನೋಡ್ರೀ ಮುಂಜಾನೆ ಎದ್ರೆ
ಶಿವರಾತ್ರಿ ಜಾಗರಣೆ ಬರ್ತೈತೆ
ಅವ್ರು ವರ್ಷಕ್ಕೊಂದು ಸರ್ತಿ
ಬಡಿಗೇರು ಅಂದ್ರೆ ಜನಿವಾರದವ್ರು
ಆಗಿನ್ನ ಅವ್ರ ಕುಲದಲ್ಲಿ ಲಿಂಗಿಲ್ಲ
ಆಗ ಏಳು ಮಂದಿ ಜಂಗಮರಿಗೆ ಊಟ ಮಾಡ್ಸಿ
ಶಿವರಾತ್ರಿ ದಿವ್ಸ
ಐದು ದಾರ ಸುತ್ತರಿಸಿ
ಅರಿಸಿಣ ಕಲಿಸಿ
ಶಿವಶಿವ ಅಂತ ಹಾಕ್ಯಂತಾರ ಜನಿವಾರ
ಆಗ ನಿನ್ನ ಊಟ ಮಾಡಕ ಕರೆ ಕಳಿಸುತ್ತಾರ
ಅಲ್ಲಿ ಹಿಡಕಂಡ್ರೆ ಬಿಗಿ
ಬಡಿಗೇರು ಸೋತದ್ದು ಗೆದ್ದದ್ದು ಎಲ್ಲ ಕಂಪ್ಲಿಟ ಹೇಳ್ತಾರ ನಿನಗೆ
ಸೆರ್ರಿವೇ
ಕುಲದಲ್ಲಿ ಗೊಲ್ರು
ಲಿಂಗಪ್ಪ ಇಲ್ಲ ಗಂಟೆಪ್ಪಿಲ್ಲ ಶಂಕ್ರಪ್ಪ ಇಲ್ಲ
ಇವು ವೋಸು ಎಲ್ಲಿ ಬರ್ತಾವ
ಐನೋರಾಗಿ ಹೋಗಬೇಕಲ್ಲ
ಇಲ್ದಿದ್ರೆ ಬಡಿಗೇರ ಹ್ಯಾಂಗ ಕರಿತಾರ
ಹೋಗಯ್ಯ ರೊಕ್ಕ ಕಾಂಚಣ ಇದ್ರೆ
ರಾಜರ ಮಾಗಳನ್ನ ನೋಡಿ ಬರಬಹುದಂತೆ
ಈಗ ಬಜಾರುಗೆ ಹೋಗು
ಬೇಕಾದ ಅಂಗಡಿಗುಳಾಗ ಮಾರ್ತಾರೆ
ಅರೆ ಬೇಸು ಹೇಳಿಕೊಟ್ರಿ ಅಂದ
ಜವಳಿ ತಿಪ್ಪಣ್ಣನ ಅಂಗಡಿಗೆ ಬಂದ
ಕೆಂಪು ದೋತ್ರ ಕೊಣಕಂಡ
ಕಾಯಿ ರುದ್ರಾಕ್ಷಿ ಟೋಪಿ ಕೊಣಕೊಂಡ
ಮೂರು ಅಣೆ ಕೊಟ್ಟು ಗಂಟೆ ಕೊಣಕಂಡ
ನಾಲ್ಕು ಆಣೆ ಕೊಟ್ಟು ಶಂಕು ತಗಂಡ
ಪಾವ್ಲಿ ಕೊಟ್ಟು ರುದ್ರಾಕ್ಷಿ ತಗಂಡ
ರೂಪಾಯಿ ಕೊಟ್ಟು ಬೆಳ್ಳಿ ಲಿಂಗ ತಗಂಡ
ಆಗ ಆಣೆ ಕೊಟ್ಟು ವಿಭೂತಿ ತಗಂಡ
ಆಗ ಅರ್ದಾಣೆ ಕೊಟ್ಟು ಕಾಡಿಗೆ ತಗಂಡ ಕಣ್ಣಿಗಿ ಹಚ್ಚೊದು
ಆಗ ಬಂದ
ಬಂದು ಏನು ಮಾಡಿಗ
ಇನ್ನ ಬಿದರೇರುತಲ್ಲಿ ಬಂದ
ಯಾರು ತಲ್ಲಿಗೆ
ಕೊರಚುರುತಲ್ಲಿಗೆ
ಒಂದು ಬಿದುರು ಕಟ್ಟಿಗೆ ಕೊಣಕಂಡ
ಕೈ ಯಾಗ ಹಿಡಕಂಬಾಕ
ನಾಲ್ಕು ಕೆಂಪು ಮೂಲೆ ಬಟ್ಟೆ
ಜೋಳಿಗೆ ಗಂಟು ಹಾಕಿದಂಗ ಹಾಕಿದ
ಆಗ ಹೆಂಡ್ರತಲ್ಲಿ ಬಂದ
ಐದು ಮಂದಿ ಹೆಂಡ್ರು ನಗಂಗ
ಕುಲದಲ್ಲಿ ಇವ್ನು ಗೊಲ್ಲರವ್ನು
ಆಗ ಸರಿಗ ಐನೋರುಗೆ ಹುಟ್ಟಿರವ್ನು ವೇಷ ಹಾಕಾಂಗಿಲ್ಲ

ಹುಡುಗ ನೋಡು ಹೆಂಗ ಒಪ್ಪುತ್ತಾನೆ
ಆಗ ಐದು ಮಂದಿ ಹೆಂಡ್ರುತಲ್ಲಿ
ಕಾವಿ ಧೋತ್ರ ಹುಡುಗ ಹುಟ್ಟ್ಯಾನ
ಕಾವಿ ಅಂಗೇನೆ ಹುಡುಗ ತೊಟ್ಯಾನ
ರುದ್ರಾಕ್ಷಿನೇ ಟೋಪಿ ಇಟ್ಟಾನ
ಶಿವ ಅಂತ ವಿಭೂತಿ ಹಚ್ಚ್ಯಾನ
ಶಿವ ಶಿವ ಅಂತ ಲಿಂಗವಾಕ್ಯಾನ
ಎಡಗೈಗೆ ಜೋಳಿಗೆ ಹಾಕ್ಯಾನ
ಎಡಗೈಲೆ ಕೋಲು ಹಿಡಿದಾನ
ಆಗ ಒಂದು ಕೈಲಿ ಶಂಖು ಗಂಟೀನ ಬಲಗೈಲಿ ಹಿಡಿದಾನ
ತೋಥಡಿ ಐದು ಮಂದಿ ಹೆಣ್ಮಕ್ಕಳುನಾಡಾ ಗಂಡನ್ನ ನೋಡಿ
ಕಿಲಕಿಲ ನಗುತಾವ್ರಾ ಹೆಂಗ್ಸುರನ್ಹಾಡ        || ತಂದಾನ ||

ಐದು ಮಂದಿ ಹೆಣ್ಮಕ್ಕಳು ನಕ್ಕಮ್ಯಾಲೆ
ಈತಗ ಸಿಟ್ಟು ಬಂತು
ಕೇಳವ್ವೇ ನಿಮ್ಗೆ ನಗಂಗ ಆಗೈತಿ
ನನಗೆ ಜೀವ ಹೋಗಂಗೆ ಆಗೈತಿ
ಇಲ್ರೀ ನಾವು ನಿನ್ನ ವೇಷ ನೋಡಿ
ಐನೋರ್ಗ ಹುಟ್ಟಿದವ್ನು ಹಾಕಂಗಗಿಲ್ಲ
ಕುಲದಲ್ಲಿ ಗೊಲ್ರರವ್ನು
ಎಷ್ಟು ಚೆಂದ ಐನೋರ್ಹೋಟ್ಯಾಗ ಹುಟ್ಟಿ ಬೆಳದಂಗ ಐದೀಯ ಅಂತ
ನಿನ್ನ ನೋಡಿ ನಕ್ಕ ಬಿಟ್ಟಿವಿ
ಸರ್ವ ತಪ್ಪು ಆಗೈತ್ರಿ ಅದ್ರು
ಆಗ ಏನು ಮಾಡಿದ
ಈಗ ಹೆಂಗ ಬರ್ತಾನಪ್ಪಾ ಊರಾಕ

ಆರು ಮಂದಿ ಹೆಂಡ್ರ ಬಿಟ್ಟಾನಮ್ಮಾ
ಆಗ ಊರಾಕ ಇನ್ನ ಬರತಾನಮ್ಮಾ
ಐನೋರ ಮನಿಗೆ ಆತ ಬಂದಾನಮ್ಮಾ
ಆಗ ಅವ್ವಾ ಅವ್ವಾ ಐದಿಯೇನವ್ವಾ
ಯಪ್ಪಾ ನೀವು ಯಾರು ಬಂದಿರಲೋ
ಯವ್ವಾ ನಾನು ಮಡಪಯ್ಯ ಬಂದಿನಿ || ತಂದಾನ ||

ಯಪ್ಪಾ ಏಸ್‌ದಿನ ಮ್ಯಾಲ ಬಂದೆಲ್ಲೋ
ನಿನು ಸತ್ತಿ ಅಂತ ತಿಳಿಕಂಡಿದ್ದೆ
ನಿಮ್ಮಪ್ಪ ದೇಶಲ್ಲ ತಿರುಗಿ ಸತ್ಹೋದ್ನಪ್ಪಾ
ಸತ್ಹೋಗಿ ಮೂರು ತಿಂಗಳಾಯ್ತು
ಯಮ್ಮಾ ಬಡ್ದಂಗೆಲ್ಲಾ ಯಾರು ಬಡ್ಡಗೋತಾರಮ್ಮಾ
ಅದಕ್ಕಾಗೆ ನಾನು ದೇಶ ಹೋಗಿದ್ದೆ
ದಾರ್ಯಾಗ ಒಬ್ಬ ಗುರುವು ಬಂದ
ಯಾಕ ಹೊತಿಯಲ್ಲೋ ನನ್ಹಿಂದೆ ಬಾ ಅಂದ
ತಾತನ ಹಿಂದೆ ಹೋಗಿ ಬಿಟ್ಟೆ
ಆಗ ನನಗೇನಂತ ಹೇಳ್ದ ತಾತ
ನಿಮ್ಮಮ್ಮ ಒಂಬತ್ತ ತಿಂಗಾಳ ಹೊಟ್ಯಾಗ
ಇಟ್ಕೊಂಡು ಹಡದಾಳ ನಿನ್ನ
ಆಗ ಬೆಳಸ್ಯಾಳ ಹಾಲಕೊಟ್ಟು
ಸತ್ತಾಳ ಅಂದ ಮೇಲೆ ಹೋಗಬೇಕಲೋ ಅಂದ
ಗುರು ಹೋಗಂದ ನಾನು ಬಂದಮ್ಮ
ಅಯ್ಯೋ ನೀನು ಸತ್ತಿಲ್ಲ ಬಿಡಮ್ಮ ಬೇಸಿದ್ದಿ
ನಮ್ಮಪ್ಪ ಸತ್ತನಂದ್ರೆ ಬರ್ತಿದ್ದಿಲ್ಲ
ನಮ್ಮಮ್ಮ ಸತ್ತಿನಂದಿದಕ್ಕೆ ನಾ ಬಂದೆ
ಅಯ್ಯೋ ಮಗನಾ ತಂದಿ ಹೆಚ್ಚಪ್ಪಾ ತಾಯಿ ಕಮ್ಮಿ
ಹಂಗಾಲಮ್ಮ ತಂದೆ ಏನು ತಂದೆ ಹೆಚ್ಚಲ್ಲ ನನ್ಗೆ
ತಾಯಿ ಸಲುವಿದಾಕಿ ಹಡದಾಕಿ ಅಂಬೊತ್ತಿಗೆ
ನೀರು ಕಾಸಿ ಹಾಕಿದ್ಳು ಉಂಬಾಕಿಟ್ಟು
ನಿದ್ದಿ ಮಾಡಿದ ಊಟಮಾಡಿ
ಮಂಜಾಲೆದ್ದ
ಎದ್ದೊತ್ತಿಗೆ
ಯಪ್ಪಾ ಊರಾಗ ಹೋಗಲೊ
ಶಿವರಾತ್ರಿ ಜಾಗರಣ ಅಂದ್ಳು ಜೋಳಗಿ ಕೊಟ್ಳು
ಹ್ಯಾಂಗ್ಹೋಗೆಲೆಮ್ಮ ಅಂದ
ಗಣಂಗಳಾಗಿ ಹೋಗು
ಕುಂತಿ ಭೀಕ್ಷಾ ಅನ್ನು
ಜೋಳ್ಗಿ ಹಾಕ್ಯಂಡ
ಕುರುಬುರ ಮನಿಗೆ ಹೊಂಟ

ಹುಡುಗ ಒಂದೆ ಇನ್ನ ಬರುತಾನೆ
ಎಲ್ಲಿಗವಾಗಿ ಲೋಕ ಹೊಂಟಾನ
ಆಗ ಕುರುಬೂರಿಗೇರಿಗ್ಯಮ್ಮಾ
ಕುರುಬರಗೇರಿಗೆ ಬಂದ      || ತಂದಾನ ||

ಹಾಲುಮತ ಕುರುಬರು ತಲ್ಲಿಗೆ ಬಂದಾನಪ್ಪಾ
ಹಾಲು ಗೊಲ್ಲರವ್ನು
ಆಗ ಕುರುಬರಗೇರಿಗೆ ಬಂದು
ಒಣ್ಯಾಗ ನಿಂತುಗಂಡು
ಗಣಗಣ ಗಂಟೆ ಬಡಿದ
ಬೊಂಬೊಂ ಶಂಖು ಊದಿದ
ಕುಂತಿ ಬಿಕ್ಷಾ ಶಿವರಾತ್ರಿ ಶಿವದಾನ ಅಂದ
ಅಂಬೋತಿಗೆ ಆ ಮನ್ಯಾಕಿ ಈ ಮನ್ಯಾಕಿ ಬಂದ್ರು
ಸ್ವಾಮಿ ನಿಮ್ದು ಯಾವುದು
ಸ್ವಾಮಿ ನಿಮ್ದುಯಾವೂರು ಅಂದ
ಅಬ್ಬಾ ವೂರಯಾವೂರ
ಅಂತಾರಲ್ಲಾ ಇವ್ರು

ಯಾಕೊಂಪೆಲ್ಲ ಇದೇ ಕೊಂಪೆನಮ್ದು || ತಂದಾನ ||

ಇದೇ ಕೊಂಪೆ ಅಂತ
ಏಯಪ್ಪಾ ಯಾರ ಮಗಯ್ಯ
ಯಾರ್ಮಗ ಇದ್ದೂರು ಐನೋರು
ಈರಮ್ಮನ ಮಗ ಮಡಪ
ಓಹೋ ಸ್ವಾಮಿ ಇಷ್ಟು ದಿನ
ನಿಮ್ಮಪ್ಪ ಬಡಿದಿದಿಗೆ
ಹತ್ತು ವರ್ಷ ಹೋಗಿದ್ದೆ
ನಿಮ್ಮಪ್ಪ ತಿರುಗಿ ತಿರುಗಿ ಸತ್ಹೋಗಿ ಬಿಟ್ಟಾ
ಆಗ ಇವತ್ತು ಬಂದೀಯೇನ್ರೀ ನೀನು
ಒಳ್ಳೇಯೊವ್ನು ಬೀಡಪ್ಪಾ
ತಾಯಿ ತಂದಿಗೆ ಕೂಳು ಹಾಕೋನು

ಎತಂವ್ನಲೋ ತಂದಿ ಬಿಟ್ಟು ಹೋದೆ
ಇಂತವ್ನೆಲೇ ತಾಯೀನ ಸಲುವೋದು
ಆಕಿ ಬರುತಾಳ ಕಿವಿ ಹಿಂಡುತಾಳ
ಈಕೆ ಬರುತಾಳ ದವುಡೆ ಹಿಂಡತಾಳ
ಗೊಲ್ರ ಹುಡುಗನ  || ತಂದಾನ ||

ನೋಡಿದಾ ಏನಮ್ಮಾ ಹಾಲುಮನೆತನದ ಕುರುಬರೆ
ಈಗ ನೀಡಂಗಿದ್ರೆ ಸುಮ್ನೆ ನೀಡ್ರಿ
ಇಲ್ದಿದ್ರೆ ಹೋಗು ಅಂದು ಬಿಡ್ರಿ
ಶಿವರಾತ್ರಿ ಜಾಗರಣೆ
ಹೋಗು ಅಂದ ಮನಿಗೆ
ಮೂರು ಸಾರ್ತಿ ಹೋತಿನಿ
ಏನಮ್ಮಾ ನೀವು ತಿಳ್ಕೊಬ್ಯಾಡ್ರಿ
ಹಂಗಲಪ್ಪಾ ಸಿಟ್ಟಲ್ಲ
ನೋಡೊ ನಿನ್ನ ಬಡಿದಿದ್ದಕ್ಕೆ
ಹತ್ತುವರ್ಷ ಹೋಗಿಬಿಟ್ಟೆ
ನಿಮ್ಮಪ್ಪಾ ತಿರುಗಿ ತಿರುಗಿ ಯೆಸ್ನ ಬಿದ್ದು ಸತ್ತು ಹೋದ
ಇಂತವ್ನೈನಪ್ಪಾ ನೀನು ಓಡ್ಹೋಗೋನು
ತಾಯಿ ತಂದಿನ ಜ್ವಾಪನ ಮಾಡೋನ
ನೀತಿ ಹೇಳ್ತಿವ್ಯಪ್ಪಾ ಬುದ್ಧಿಗ್ಯಾನ ಹೇಳ್ತಿವಿ
ಏ ಒಳ್ಳೆ ನೀತಿ ಹೇಳ್ತಿರಿ ಬಿಡಮ್ಮ ನೀವು
ಆಗ ಸುಮ್ನೆ ಹೇಳ್ತಾರಾ
ಕಿವಿ ಕೆಂಪಗ ಹಿಂಡಿ ಹೇಳ್ತಾರೇನು
ನೀತಿ ಹೇಳೋರು
ಆಗ ದವಡೆಗೆ ಉರಿ ತಿರುವಿ ಹೇಳ್ತಾರೇನು

ಬೇಸು ಹೇಳ್ತೀರಿ ನೀವು ನೋಡೀರಮ್ಮಾ
ಆಗ ಬರ್ರಿ ಸ್ವಾಮಿ ಒಳಕ ನೀವು        || ತಂದಾನ ||

ಸ್ವಾಮಿ ಬರ್ರಿ ಬೇವೂರೋರು ನೀಡಿಸಿಗ್ಯಂಡು ಹೋದ್ರೆ
ನಮ್ಗೇನು ಲಾಭ ಇಲ್ಲ
ಇದೋರೋರು ನೀಡಿಸಿಗ್ಯಂಡ್ರೆ
ಯಾಗಂದ್ರೆ ಸತ್ರೆ ಇದ್ರೆ ದೇವ್ರ ಕಾರ್ಯಗೆ ಬಂದ್ರೆ
ಆಗ ಭಿನ್ನ ತೀರಸಾಕ ಬರ್ತೀರಿ ಅಂತ
ಮನ್ಯಾಗ ಕರದ್ರು
ಆಗ ಪಾದ ಇಡ್ರೀ ಗಂಗಾಳದಾಗ ಅಂದ್ರು
ತಟ್ಟ್ಯಾಗ ಪಾದ ಇಟ್ಟು
ಪಾದ ತೊಳಕಂಡ್ರು
ನೀರು ಕುಡೀತಿದ್ರೆ ಏನಂತಾನ ಹುಡುಗ

ಆಗ ಗೊಲ್ಲರು ನೀರು ಎಲ್ಲಿ ಸಿಗಬೇಕು
ಪಾದ ತೊಳಕಂಡು ನೀರು ಕುಡದರಣ್ಣಾ
ಐನೋರಂತ ತೊಳಕಂಡರಣ್ಣಾ
ಮಡ್ಡು ಕುರುಬೂರು       || ತಂದಾನ ||

ಮಡ್ಡು ಕುರುಬುರು ಅವ್ರು
ಆಗ ಐನೋರಂತ ತಿಳ್ಕೊಂಡಾರ ಅವ್ರು
ಈ ಹುಡುಗ ಏನಂತಾನ
ಪಾಪ ಎಲ್ಲಿ ಸಿಗಬೇಕು ಗೊಲ್ಲರ ಪಾದ
ತೊಳ್ಕಂಡು ತೊಳ್ಕಂಡು ಕುಡ್ರಿ ಅಂದ
ಆಗ ಕುಡ್ದು ಬಿಟ್ರು
ಏನು ಎಳ್ಳು ಹೆಸ್ರು ಗೋಧಿ ಬೆಲ್ಲ
ಕುಂಬ್ಳಕಾಯಿ ಹಿರಿಕಾಯಿ ಬೆಂಡೆಕಾಯಿ ತಂದ್ರು
ಸ್ವಾಮಿ
ಹಿಡ್ರಿ ಶಿವರಾತ್ರಿ ಶಿವದಾನ ಅಂದ್ರು
ಏ ಹಾಂಗಲ್ಲ ಆಗ ಒಂದೇ ಜೋಳಿಗ್ಯಾಗ ನೀಡ್ರಿ ಅಂದ
ಇಲ್ರಿ ಎಲ್ಲ ಒಂದ್ರಾಗ
ಎಲ್ಲ ಒಂದ್ರಾಗ ಶಿವರಾತ್ರಿ ಏಕ ಅಂದ
ಜೋಳಿಗ್ಯಾಗ ನೀಡ್ಸಿಕ್ಯಂಡ
ಸ್ವಾಮಿ ನಿಮ್ಮ ಪಾದ ಕೊಡ್ರಿ
ತೊಳಕಂಡು ಕುಡ್ತಿನಿ
ಆಗ ತಾವು ಕೂಡ್ದರೆ
ಈಗ ಸ್ವಾಮಿ ನಿನ್ನ ಪಾದಕ ಶರಣು ಮಾಡಬೇಕು
ಏ ಹಾಂಗಲ್ಲ ಹತ್ತು ರೂಪಾಯಿ ಇಡಬೇಕು
ನನ್ನ ಪಾದ ಹಿಡ್ಕೋಬೇಕು
ಇಲ್ರೀ ಬಡತಾನ್ರೀ
ನಾವು ಹಾಲು ಕುರುಬರು
ನಿಮ್ಮ ಪಾದಕ ಶರಣು ಮಾಡ್ತಿವಿ
ಆಗ ಐದು ರೂಪಾಯಿ ಕೊಡ್ತಿವಿ
ಎರ್ಡು ಪಾದ ಕೊಡ್ರಿ
ಏ ನೀವ್ ಪಾಪ ಮಾಡಿದೆಲ್ಲ
ನಮ್ಮ ಪಾದಕ್ಕ ಸುತ್ತಿಕ್ಯಂಡು ಪಾದೋದುವು
ನಾವು ಹ್ಯಾಂಗ ಹೋಗೋದು ದೇವ್ರ ಮಠಕ
ಒಂದು ಪಾದ ಹೋದ್ರೆ ಒಂದು ಪಾದ ಇದ್ರೆ
ಕುಂಟಿಕ್ಯಂತ ಕುಂಟಿಕ್ಯಂತ ಹೋತಿನಿ ದೇವರ ಮಠಕ್ಕ
ನೀವು ಪಾದ ಇನ್ನ ಪಾಪ ಕೊಟ್ಟಿದ್ದು
ದೇವ್ರಿಗೀಟೂ ದೇವ್ರಿಗೀಟೂ ಬಿಟ್ಟೋತಿನಿ
ಇಲ್ರೀ ಎರ್ಡ ಕಾಲು ನನಗೆ ಕರ್ಮ ಸುತ್ತಿಕ್ಯಂಡು ಹೋದ್ರೆ ಹೋಗ್ಲಿ
ಹತ್ತು ರೂಪಾಯಿ ಕೊಟ್ಟು ಪಾದ ಹಿಡ್ಕೊರಿ
ಸ್ವಾಮಿ ಅಷ್ಟೆ ಆಗ್ಲಿ ಅಂತ
ಹತ್ತು ರೂಪಾಯಿ ಕೊಟ್ಟು ಎರ್ಡು ಪಾದ ಹಿಡಕಂಡ್ರು
ಸರಿ ಐನೋರಿಗ್ಹುದೋರು ದೇವರ್ನ ನೆನಸಂಗಿಲ್ಲ
ನೋಡ್ರಮ್ಮ ಹಾಲು ಕುರುಬರೇ
ನಮ್ಮಪ್ಪ ಬಡಿದಿದ್ದಿಗೆ
ಒಂದು ಗುರುವುನ ಹಿಂದೆ ಹೋಗಿದ್ದೆ
ದೇವರೆಲ್ಲಾ ತೋರಿಸಿ ಬಿಟ್ಟಾನಾ
ನೋಡಿದ್ದವೆಲ್ಲ ನೆನಸ್ತಿನಿ ನಿಮ್ಮ ಮನ್ಯಾಗ
ಯಾದೇವರನ್ನ ನಿಮ್ಮ ಮನ್ಯಾಗಿರ್ಲಿ
ಯಾದೇವುರ್ನ ನನ್ಹಿಂದೆ ಬರ್ಲಿ
ಯಪ್ಪಾ ನಾವು ನೋಡಿಲ್ಲ ಹಾಲು ಕುರುಬರು
ನಾವು ದಡ್ಡರು
ನೀನು ನೋಡಿಬಂದವ್ನು
ಕಿವಿಲೆನ್ನ ಕೇಳ್ತಿವಿ ಸ್ವಾಮಿ ಕಣ್ಣೀಲಿ ನೋಡ್ಲಿದ್ದರೆ ಆಗ್ಯೋತು
ನೆನಸು ಅಂದ್ರ
ಸರೀ ಐನೋರಿಗೆ ಹುಟ್ಟಿದವ್ನು ನೆನಸಂಗಿಲ್ಲ
ಎಷ್ಟು ಚೆಲುವಿ ನೆನಸ್ತಾನ

ಭೂಮಿ ಮ್ಯಾಲೆ ನೀವು ಹುಟ್ಟೀರಿ
ಭೂತಾಯೀನೇ ಕಾಪಾಡಲಿ
ದನ ಕರ ತಣ್ಣಗ ಇರ್ಲಿ
ನೀವು ಮಾಡಿದ ಪಾಪವೆಲ್ಲ
ನನ್ನ ಜೀವಕ ನೀವೆ ಬಿಡ್ರಿ
ನಾನು ಹೋಗಿನೆ ಶಿವನಿಗ ಕೊಡ್ತಿನಿ
ಶಿವುನು ಹೋಗಿ ಪರಮಾತ್ಮಗ ಕೊಡತಾನ
ಪರಮಾತ್ಮ ಪಾಪ ಪರಾರಿ ಮಾಡಂವ
ಮ್ಯಾಲಾದ್ರೆ ನಿಮ್ಗೆ || ತಂದಾನ ||