s ದೀರ್ಘಾಯುಷಿ ಸುಖದಲ್ಲಿರಿ
ಲೋದಲ್ಲಿ ನೀವಾಗಿ ಇರ್ರೆಮ್ಮ
ತಾಯವರೆ ಲೋಕ           || ತಂದಾನ ||

ಅಬ್ಬಾಬ್ಬಾಬ್ಬಾ
ಏನಪ್ಪಾ ಎಷ್ಟ ದೇವ್ರ ನೆನಸಿದೆಪ್ಪಾ ನೀನು
ಒಂದು ದೇವ್ರುನ್ನ ನೋಡಿಲ್ಲ ನೋಡು
ನೀನು ನೆನಿಸಿದ ದೇವ್ರಲ್ಲಿ
ಸ್ವಾಮಿ ಭೂಮಿ ಮ್ಯಾಲ ಮಲಗೋದು
ಹಾಲು ಹಿಂಡುಕೋಂಬೋದು
ಊಟ ಮಾಡೋದು ನಿದ್ದೆ ಮಾಡೋದು
ಸ್ವಾಮಿ ನಮ್ಮ ಪಾಪ ಪರಿಹಾರ ಆಯ್ತು ಹತ್ತು ರೂಪಾಯಿದಾಗ
ನೀನು ಕೊಟ್ಟಿದಾಗ ನು ಪರವಾಗಿಲ್ಲ
ಋಣನೇ ಇಲ್ಲ
ಆಗ ಜೋಳಿಗೆನೋಡ ಕೈ ಮುರಿದೋಯ್ತು
ಕಂಬ್ಳಕಾಯಿ ಹೀರೆಕಾಯಿ
ಏನು ಜಗ್ಗಿ ಇಟ್ಟುಬಿಟ್ಟಾರಪ್ಪಾ
ಓಯಮ್ಮ ನಾನು ತಗಂಡು ಹೋಗಿ
ಆ ಮುದಿಕಿಗೆ ಕೊಡ್ತಿನಿ
ನನಗೇನು ಲಾಭ
ಐನೋರು ಮುದುಕಿಗೆ
ಛೇ ಎಳಕಂಡ್ಹೋತಿನಿ ಅಂತ

ಎಳಕಂಡೆ ಮಗ ಬರ್ತಾನಮ್ಮ
ಬಜಾರು ಒಳಗೆ ಇನ್ನು ಜೋಳಿಗೆಮ್ಮ || ತಂದಾನ ||

ಬಜಾರದಾಗ ಇದ್ದೋರು ಹೆಣ್ಣು ಗಂಡು
ಏಯಮ್ಮ ಬೇವೂರು ಐನೋರಿಗೆ
ಜೋಳಿಗ್ಯಾಗ ಸೇರು ಎರ್ಡು ಸೇರು ಐದಾವು
ಈತಗ ನೋಡೇ ಜ್ಯೋಳಿಗೇನ ಎಳಕಂಡ್ಹೋತಾನ
ಏ ಸ್ವಾಮಿ ಜೋಳಿಗೆ ತೂತು ಬದ್ದೈತೆ ಸ್ವಾಮಿ
ಇಲಿಚಿ ಹೊಡದೈತೊ ಏನೋ
ಸೋರ್ಹೋತಾವ ಬಿತ್ತಿಗ್ಯಾಂತ ಹೋಯಿತ್ಯಲ್ಲ ಸ್ವಾಮಿ
ಅಂದ್ರೆ ಏನಂತಾನ ಆ ಹುಡುಗ

ಈಗ ನಾನು ಇನ್ನು ನೋಡರಾ
ಬಿತ್ತಗ್ಯಾಂತ ನಾನು ಹೋಗ್ತಿನಿ
ಬೊಳುಕಾಂತ ನೀವಾಗಿ ಬರ್ರೆಮ್ಮಾ   || ತಂದಾನ ||

ದೇಶ ಲೋಕಕ ಬೆಳಿ ಇಲ್ಲಂದ್ರೆ
ಇನ್ನೊಂದು ದೇಶಗೆ ನಾನು ಹೋಗ್ತಿನಿ
ಇನ್ನೊಂದು ದೇಶ ಬೆಳೇಲಿಲ್ಲಂದ್ರೆ
ಇನ್ನೊಂದು ದೇಶಕ್ಕೆ ನಾನ್ಹೋಗ್ತಿನಿ
ಎರ್ಡು ಮನೆಯಾದ್ರೆ ಹೆಚ್ಚುವಾಯ್ತು

ಒಂದು ಮನ್ಯಾದ್ರೆ ಕಮ್ಮಿ ವಾಯ್ತುದು
ಲಕ್ಷಾಕಾರು ಬಿಕ್ಷಾ ಕಾರು
ಖಂಡುಗ ನೀವು ಬೆಳಸಿದವ್ರು
ಬೋಳಕಂಬೋದು ತಪ್ಪಾಂಗಿಲ್ಲ
ಬಾರಿಗೆ ತಂದುಕಂಡು ಬೊಳಕರ್ರೀ ಬೊಳಕರ್ರೀ
ಬೊಳಕರ್ರಿ ಬೊಳಕರ್ರೀ ನೀವು ಲೋಕಕ್ಕೆ        || ತಂದಾನ ||

ಅಂತ ಹುಡುಗ ಎಳಕಂಡು ಬಂದು ಬಿಟ್ಟ
ಆಗ ಮುದ್ಯಾಕೆ ಮನ್ಯಾಗ ತಂದಿಟ್ಟ ಜೋಳಿಗೆ
ಏಯಪ್ಪಾ ಏನಲೋ
ಮಡಪಾ ಎಲ್ಲಾ ಒಂದ್ರಾಗ ನೀಡಿಸಿಗ್ಯಂಡಿಯಿ
ಮತ್ತೆ ಶಿವರಾತ್ರಿ ಶಿವದಾನ
ಮತ್ತೆ ಒಂದೇ ಜೋಳಿಗೆ ಕೋಟ್ಟಿ
ಒಂದರಾಗ ನೀಡಿಸಿಕ್ಯಂಡಿನಿ
ಏಯಪ್ಪಾ ತ್ಯಾಪೆ ತ್ಯಾಪೆ ತ್ಯಾಪೆ ಹೊಲ್ದಾನಲಾ ನಿಮ್ಮಪ್ಪ
ನನಗೇನು ಗೊತ್ತು
ನಿನ್ನ ತ್ಯಾಪೆ ತೋರಿಸಿದ್ರೆ ನಾಣು ತ್ಯಾಪ್ಯಾಗ ಹಾಕ್ಯಂಡ ಬರ್ತಿದ್ದೆ
ಬರೆ ಒಂದೇ ಜೋಳಿಗೆ ತೋರಿಸಿದೆ
ಒಂದೇ ಇದರಾಗ ನೀಡಿಸಿಕ್ಯಂಡು ಬಂದೆ
ಮತ್ತೆ ಇವೇನು ಮಾಡಬೇಖು ಅಕ್ಕಿ ಗೋದಿ ಬೆಲ್ಲ
ಏನು ಮಾಡಬೇಕು ಹೆಸರು ಎಲ್ಲಾ ಹಲಸಂದಿ
ಏನಿಲ್ಲ ಒಂದು ಚರಿಗೆ ನೀರು ಹಾಕು
ಒಣಿಕೆ ತಗಂಡು ಕುಟ್ಟು
ನುಚ್ಚು ನುಚ್ಚು ಮಾಡು
ಹಿಟ್ಟು ಹಿಟ್ಟು ಮಾಡು
ಆಗ ಏನಿಲ್ಲ ಬೆಲ್ಲ ಹಾಕಿ ತಿರುವಿ ಉಂಡೆ ಕಟ್ಟು

ಆಗ ಶಿವರಾತ್ರಿ ಉಂಡೆ ಹ್ಯಾಂಗ ಬೇಸುಯವೋ
ತಿಂಗಳ ಇಟ್ರೆ ನೋಡಮ್ಮ ಹಳಿಸ್ಹೋಗೋದಿಲ್ಲಮ್ಮಾ      || ತಂದಾನ ||

ಯಪ್ಪಾ ಆಗ ಸೂಜಿ ದಾರ ತಗಂಡು
ಬಡ ಬಡ ಹೊಲ್ದು
ಮತ್ತೆ ಹೋಗಲೋ ಹೋಗಿದ್ದ ಮನಿಗೆ ಹೋಗು
ಅಂತ ಮತ್ತೆ ಬಂದ ಹುಡುಗ
ಆಗ ಇನ್ನ ಬಡಿಗೇರು ಆರು ಮಂದೀನ ಕುಂದ್ರಿಸ್ಯಾರ
ಇನ್ನೊಂದು ಐನೋರು ಬೇಕಲ್ಲ ನಮ್ಗೆ
ಏಳು ಮಂದಿ ಜಂಗಮರ ಕೂಟ ಜನಿವಾರ ಹಾಕ್ಸಿಕೊಬೇಕು
ಅರಿಸಿಣ ಗಂದ ಕಲಿಸಿ
ಅವ್ರು ಕೂಟ ಶಿವ ಶಿವ ಅಂತ ನಮ್ಮ ಕೊಳ್ಳಾಗ ಹಾಕಬೇಕು
ಏಳು ಮಂದಿ ಊಟಾ ಮಾಡಬೇಕು
ಅವ್ರು ಪಾದ ತೊಲಕಂಡು ನಾವು ಕುಡಿಬೇಕು
ಆಗ ಐದು ಆಣಿ ಕೈಯಾಗಿಟ್ಟು
ಅವ್ರ ಎಂಜಲನ್ನ ನಾವು ಊಟಾ ಮಾಡಬೇಕು
ಆಗ ನಮಗೆ ಮತ್ತೆ ಶಿವರಾತ್ರಿ ತನಕಿಲ್ಲ ಬಡಿಗೇರು
ಆಗ ಜಂಗಮಕೋಸರ ಬರುತಾರ
ಈ ಹುಡುಗ ಏನು ಮಾಡಿದ

ಆಗ ಹುಡುಗ ಬಂದು ಬಿಟ್ಟಾನಮ್ಮ
ಕುರುಬರ ಒಣೀ ಬಿಟ್ಟಾನ
ನಾಯಕರ ಓಣಿಗೆ ಬಂದಾನ            || ತಂದಾನ ||

ನಾಯಕರ ಓಣಿಗೆ ಬಂದಾ
ಆಗ ಕಂತಿ ಬಿಕ್ಷಾ ಶಿವರಾತ್ರಿ ಶಿವದಾನ ಅಂದ
ಅವ್ರು ಇವ್ರು ಬಂದ್ರು
ಏ ಸ್ವಾಮಿ ನಿಂದ್ಯಾವೂರ
ಆಕೊಂಪೆ ಈ ಕೊಂಪೆ ಅಂತೀರಿ ಇದೇ ಕೊಂಪೆ ಅಂದ
ಏಯಪ್ಪಾ ಮೂಗೀನ ಮ್ಯಾಲೆ ಸಿಟ್ಟೈತೆಲ್ಲೆಪ್ಪಾ ಸ್ವಾಮಿ
ನಕ್ಕಂತ ಧರ್ಮ ಇಸ್ಗಬೇಕ ಸ್ವಾಮಿ
ಯಾ ಕೊಂಪಿಲ್ಲ ಇದೇ ಕೊಂಪಿಯಂತಿಯಲ್ಲ
ಆಗ ಇಲಾಮಂತಾರ ಪಟ್ಣ ಇದು
ನನಗೇನು ಗೊತ್ತು ದೊಡ್ಡ ಊರಾದ್ರೆ
ಊರು ಊರು ಅಂತೀರಿ
ಹಳ್ಳಿ ಆದ್ರೆ
ಇನ್ನ ಹಳ್ಳಿ ಹಳ್ಳಿ ಅಂತೀರಿ
ಕ್ವೊಟೆ ಆದ್ರೆ ಕೋಟೆ ಕೋಟೆ ಅಂತೀರಿ
ಪ್ಯಾಟೆ ಆದ್ರೆ ಪ್ಯಾಟೆ ಪಾಟೆ ಅಂತೀರಿ
ಅದಕ್ಕೆ ಇನ್ನ ಕ್ವಾಟೆ ಅಲ್ಲ ಪ್ಯಾಟೆಯಲ್ಲ
ಇದು ಕೊಂಪೆ ಕೊಂಪೆ ಅಂತೀರಿ
ಸರಿ ಸ್ವಾಮಿ
ಯಾರ್ಮಗ
ನಿನ್ಗ ಕಣ್ಣಿಲ್ಲ ಐನೋರು ಈರಮ್ಮನ ಮಗ ಅಂದ
ಅಯ್ಯೋ ಇವ್ನೇ ನೋಡೇ
ಒಂದೇಟ ಬಡ್ಡಿದ್ದಿಗ ಈಟಿದ್ದ
ಹೋಗಿದ್ದ ಹತ್ತು ವರ್ಷ ತಂದಿ ತಿರುಗ್ಯಾಡಿ ಸತ್ಹೋದ

ಈಗ ದೊಡ್ಡೋನಾಗಿ ಬಂದಾನವೋ
ಬುದ್ಧಿಗ್ಯಾನ ತಿಳಕಂಡು ಬಂದಾನಮ್ಮಾ          || ತಂದಾನ ||

ಏ ಸ್ವಾಮಿ
ಬೇಸು ಹೋಗೀಯಿ ಬಿಡಪ್ಪಾ
ನಿಮ್ಮ ತಂದಿ ಸತ್ಹೋದ ಅಂತ
ಆಕೆ ಬರ್ತಾಳ ದವಡೆ ಹಿಂಡ್ತಾಳ
ಈಕೆ ಬರ್ತಾಳ ಕಿವಿ ಹಿಂಡ್ತಾಳ
ನೋಡಿದ
ಏ ಹೆಚ್ಚು ಕಮ್ಮಿ ತಿವ್ಯಂಗಿದ್ರೆ
ನೋಡು ಕೈಯಾನ ಗಂಟಿ
ಗಣಾ ಅನಬೇಕು ನಿಮ್ಮ ತಲ್ಯಾಗ
ಇಲ್ಲ ತಮ್ಮಾ ಬುದ್ಧಿ ನೀತಿ ಹೇಳ್ತಿವಿ
ಒಳ್ಳೇ ನೀತಿ ಹೇಳ್ತೀರಿ ಬಿಡಮ್ಮಾ
ದೂರ ನಿಂತುಕಂಡು ಹೇಳ್ತಾರ
ಬಾಯೀಲಿ ಹೇಳ್ತಾರ
ಕಿವಿ ಕೆಂಪ್ಗ ಹಿಂಡಿ ಹೇಳ್ತಾರೇನು
ಅಂದ್ರೆ
ಇಲ್ಲ ಸ್ವಾಮಿ ನಾವೇನು ಎಂಬೋದಿಲ್ಲ ಸ್ವಾಮಿ ತರ್ತಿಸ್ವಾಮಿ
ಮನ್ಯಾಕ ಬರ್ರಿ ಅಂದ
ಏ ಮನ್ಯಾಕ ಬರಾಲ್ಲ ಇಲ್ಲೇ ನಿಂತ್ಕೋತಿನಿ
ಇಲ್ಲೇ ಪಾದ ತೊಳ್ಕರೀ ಅಂದ
ಅವ್ರು ನೀರು ತಾಕ
ಮತ್ತ ಇನ್ನ ಮರದಾಗ ಅಕ್ಕಿ ಬ್ಯಾಳೆ
ಎಲ್ಲ ತಂದು ಪೂಜೆ ಮಾಡಬೇಕೆಲ್ಲಾ
ತರಾಕ ಹೋದ್ರು
ಮುದೇಕಿಗಿ ಒಯ್ದು ಒಯ್ದು ಯಾಕ ಹಾಕಬೇಕು ಅಂತ

ಗಣಗಣ ಗಣಗಣ ಬಡಕಂತೋತಾನ
ಓಣ್ಯಾಗಾಗಿ ಜಂಗಮ ನೋಡಮ್ಮಾ  
ಹುಡುಗನಾದ್ರು || ತಂದಾನ ||

ಧರ್ಮ ತಗಂಡು ಬಂದ್ರು
ಏ ಸ್ವಾಮಿ ಸ್ವಾಮಿ
ಸ್ವಾಮಿ ಇಲ್ಲ ಸೀಮಿ ಇಲ್ಲ
ಗಣಗಣ ಗಣ ಅಂದ್ಯೋತ ಹೋತಾನ
ಆಗ ನೋಡಿ ಬಿಟ್ರು
ಇವ್ರು ಬಡಿಗೇರು ಬಂದ್ರು
ಸ್ವಾಮಿ ಅಂತ ಬಾರ್ಲು ಬಿದ್ದು ಬಿಟ್ರು
ಏ ಎಲ್ಲೆಲ್ಲಿ ಹೋಳ್ಯಾಡಿ ಬಂದ್ರೋ
ನನ್ನ ಪಾದಕ ಬಿದ್ದು ಬಿಟ್ರಿ

ನಿನ್ನ ಕರ್ಮ ತಂದು ಪಾದಕ ಸುತ್ತೀರಲೋ
ಪಾದ ಬಿಡ್ರೀ ನೀವು ಎದ್ದೋಳಿರೀವಾಗ       || ತಂದಾನ ||

ಸ್ವಾಮೀ ಎಲ್ಲೆಲ್ಲಿ ಪಾಪ ತಂದಿಲ್ಲ
ಮೈತೊಳ್ಕೊಂಡೆ ಆಗ ಆರು ಮಂದಿ ಜಂಗಮರ್ನ
ಐನೋರು ಕಂರಕಂಡು ಬಂದು
ಮನ್ಯಾಗ ಕುಂದ್ರಸಿ ಬಿಟ್ಟೀವ್ರಿ
ಏಳು ಮಂದಿ ಕೂಟ ಹಾಕಿಸಿಕೊಬೇಕ್ರೀ ನಾವು
ಶಿವರಾತ್ರಿ ಜಾಗರಣ ಬಡಿಗೇರು ಬರುಬೇಕ್ರೀ
ನಿಮ್ಮ ಪಾದಕೆ ಶರಣು
ಏ ನಾನು ಬರೋದಿಲ್ಲ
ನೀವು ಬಡಿಗೇರಲ್ಲಾ
ನಾನು ಬರೋದಿಲ್ಲಾ
ನಿಮ್ಮ ಕೈಯಾಗ ಉಂಬೋದಿಲ್ಲ ನಾನು
ಏನಿಲ್ಲ ನಾನು ಹೇಳಿ ಕೊಡ್ತೀನೋಡು
ಐದು ದಾರ ಸುತ್ತುವರೇದು
ಅರಿಸಿಣ ಕಲ್ಸೋದು ಲೋಬಾನ ಹಾಕೋದು ಊದಿನ ಕಡ್ಡಿ ಹಚ್ಚೋದು
ಶಿವ ಶಿವಾ ಅಂತ ಕೊಳ್ಳಾಗ ಹಾಕ್ಯಂಬಾದು
ಏನಪ್ಪಾ ನಿಮ್ಮ ಪಾದ ತೊಳಕಂಬಾದು ನೀವೇ ಕುಡ್ಯೋದು
ಏನಪ್ಪಾ ನೀವೇ ಇಟ್ಟುಕಂಬೋದು
ಹುಡುಗುರು ಎಲ್ಲಾರು ತಿಂಬೋದು
ಹಾಂಗಲ್ಲ ಸ್ವಾಮಿ ನಿಮ್ಮ
ಕೈಲಿ ಬಿದ್ದಮ್ಯಾಲೆ
ಆಕಡಿಗೆ ಹರದೋದ್ರೆ
ಮತ್ತೆ ನಾವು ಶಿವ ಶಿವಾ ಅಂತ
ಗಂಟು ಹಕ್ಯಂಡ್ರೆ ಆಯ್ತು
ಈವಾಗ ನಿಮ್ಮ ಕೈಲಿ ಊಟ ಮಾಡ್ಸಿ ಖಲಿಸಬೇಕು
ವರ್ಷಕೊಂದುಸರ್ತಿ ಶಿವರಾತ್ರಿ ಜಾಗರಣೆ
ಹಾಂಗಾದ್ರೆ ನೀವು ಬಡೀಗೇರನ
ಬಡಿಗೇರೇ
ನೋಡು ಪಾತ್ರಗಿತ್ತಿ ಕೈಯಾಗ
ಐದೀರಂತೆ ನೀವೇನ
ನಾವೇ ಸ್ವಾಮಿ
ಮತ್ತೆ ಆಕೆ ಹೆಂಗಾದ್ರೆ ಗೆದಿತಾಳ
ಎಂಗಾದ್ರೆ ಸೋಲತಾಳ
ಸೋಲದು ಗೆಲ್ಲೋದು ಹೇಳಬೇಕು
ಮತ್ತೆ ಶಿವರಾತ್ರಿ ಜಾಗರಣ
ನೀವು ಒಂದು ನುಡಿಬಿಟ್ಟು ಹೇಳಿದ್ರೆ

ಹೊತ್ತು ಹುಟ್ಟೊತಿಗೆ ಎಗರಿಬಿದ್ದು ಸಾಯತ್ಯ್ರೋ
ಅಬದ್ದ ಹೇಳಿದ್ರೆ ಇನ್ನು ಉಳಿಯೋದಿಲ್ಲ           || ತಂದಾನ ||

ಇಲ್ರೀ ನಿಜದಲ್ಲೆ ಹೇಳ್ತಿವ್ರಿ ಹೊತ್ತೊತೈತಿ
ಮದ್ಯಾನ್ಹ ಒಳಗೆ ಇನ್ನ
ಜನಿವಾರ ಬೀಳುಬೇಕು
ಆಗ ಊಟ ಮಾಡ್ದ ಮ್ಯಾಲೆ ಹೆಳ್ತಿವಿ
ಹಾಂಗಲ್ಲ ಹೊಳೆದಾಗ ಗಂಗಮ್ಮ
ಹೊಳೆದಾಟಿ ಪಿಂಗಮ್ಮ ಅಂದ್ರೆ
ನಾನೇನು ಮಾಡ್ಲಿ
ಈವಾಗ ಒಳ್ಳೇ ಬಿಗಿ
ನನಗೆ ಗತಿಯಿಲ್ಲ ನಿಮಗ ಮತಿಯಿಲ್ಲ
ಈಗೇ ಹೇಳಬೇಕು ನೀವು
ಹಾಂಗಾದ್ರೆ ನಿಮ್ಗೆ ಜನಿವಾರು ಹಾಕ್ತಿನಿ
ಇಲ್ಲದ್ರೆ ಇಲ್ಲ
ಲೇ ಹೇಳಲೇ ತಮ್ಮಾ
ಕಂಬಾರ ಕಾಳ ನೋಡ್ದ
ಅಣ್ಣಾ ನೀನು ಹೇಳಣ್ಣಾ ಬಡಿಗೇರು ಶಿವ
ಇಲ್ಲ ನೀನೆ ಹೇಳಲೇ
ಇಲ್ರೀ ಗೆದ್ದದು ಬೇಕಾ ಸೋತದ್ದು ಬೇಕಾ
ಗೆದ್ದದ್ದು ಬೇಕು ಸೋತದ್ದು ಬೇಕು ಎರ್ಡು ಹೇಳಬೇಕು ಅಂದ
ಆಗ ಏನು ಮಾಡಿದ
ನಮ್ಮಂತಾ ಕಾಲ ಬಿದ್ದೋರಿಗ ಏನು ತಿಳೋದಿಲ್ಲ
ನಾವು ಹೋತಿವಿ
ಹೇ ಪಾತ್ರಗಿತ್ತಿ ನಾಳೆ
ನಮ್ಮಾರಾಗ ಆಟ ಐತಿ
ನಿನ್ನ ದುಡ್ಡ ಎಷ್ಟೈತೋ
ನಿನ್ನ ಸಂಬಳ ಎಷ್ಟೈತೋ
ತಗಂಡು ನಮ್ಮ ಹಿಂದೆ ಬರಬೇಕಾತೈತಿ ನಾಟಕಕ್ಕೆ
ಬರ್ರೀ ಅಂತ ಚೆರಿಗೆ ನೀರು ಕೊಡ್ತಾಳ
ಆಕೆ ಕೈಯಾಗ ಇಬ್ಬರು ಐದಾರ
ತೊಂಟಿಗಿತ್ತಿ ದಾಸಗಿತ್ತಿ
ನಾವು ಕಾಲುಮಕ ತೊಳಕಂತೀವಿ
ಬರೀ ಬಣ್ಣದ ವರಸಕ್ಕೆ ಅಂತಾ
ವರಸಕ್ಕೆ ಹೋಗಿಕುಂತುಗಂತಿವಿ
ವರುಷಗೆ ನಾಕ ಗೊಂಬೆಗಳು ನಾಕ ಮೂಲೆಗೆ
ಎರ್ಡ ಗೊಂಬೆ ಥೈ ಥೈ ಕುಣೀತಾವ
ಎರ್ಡ ಗೊಂಬೆಗಳು ಕಿಲಕಿಲ ನಗತಾವ
ಕರ್ಡಿ ಡೋಲು ಹೊಡಿತೈತಿ
ಮ್ಯಾಳ ಊದತೈತಿ ಹುಲಿರಾಜ
ಕೋತಿ ತಾತಾತಾ ಅಂತ ತಾಳ ಹೊಡಿತೈತಿ
ಬೆಕ್ಕು ನೋಡ್ರಿ ನೋಡ್ರಿ ಅಂತ ದೀಪ ತೆಲೆ ಮ್ಯಾಲೆ ಇಟುಗಂತೈತಿ
ಗಂಡಸರು ಮೀಸೆ ಎಡಗೈಗಿ
ಬಲಗಾಲಿಗೆ ಗೆಜ್ಜೆ ಕಟ್ತಾಳ
ಆಕೆ ಉಟ್ಟಿದ ಸೀರೆ ಉಚ್ಚಿ ಕೆಳಗೆ ಬಿದ್ದಂಗೆ ಮಾಡಿದ್ರೆ
ಜೀವಕ್ಕ ಅವನೇ ನನ್ನ ಜೀವದ ಗಂಡ ಅಂತಾಳ
ಏನ್ರೀ
ಈಗ ಬೇಸು ಆಡುವಾಗ
ಎಲೆ ಅಡಿಕೆ ಎಲ್ಲ ತಟ್ಟ್ಯಾಗ ತಂದಿಡ್ತಾರ
ಎಲೆ ಅಡಿಕೆ ಹಕ್ಯವಾಗ
ಬೇಸು ಆಟ ಆಡುವಾಗ
ಆಗ ಎಡಗಾಲು ತಂತಿ ಒಗ್ದು ಬಿಡ್ತಾಳ
ಹಗೆವು ಇರ್ತೈತಿ
ಆಗ ವರುಷ ಅಡೇಲಿ ಲಟಕ್ಸ್ ಬಾರ್ಲ ಬಿಳೋದೆ
ಆಕೇಳ್ಬೇಕು ಹೇಳಿದ ಮಾತು ಕೇಳ್ಬೇಕು
ಸಾಯೋತನಕ
ಅದರಾಗೆತೋದು ಅದರಾಗಿರೋದು
ಸರೆ ನಾವು ಸೋತೋದೇವು
ಆಕಿ ಇನ್ನ ಗೆಲ್ಲದು ಹೇಳ್ಬಿಡ್ರಿ
ಏನಿಲ್ಲ ನಾವು ತಿಳುವಳಿಕೆ ಇದ್ದವರು ಏನು ಮಾಡಬೇಕು ಅಂದ್ರೆ
ಎರ್ಡು ಅಸಿಟ್ಟು ಮಾಡ್ಸಿಕ್ಯಾಬೇಕು
ಮೂರು ಮೊಳ ಕೆಬ್ಬಿಣ ಹಾರೆ ಮಾಡ್ಸಿಕೋಬೇಕು
ಎರ್ಡು ಇಲಿಚಿ
ಒಂದು ಜೀವ ಇದ್ದದ್ದು ಒಂದು ಜೀವ ಇಲ್ದದ್ದು
ನಾಕ ಕಾಲ್ಗಿ ದಾರ ಕಟ್ಟುಬೇಕು
ಎರ್ಡು ಮಾವಿಳ ಹಣ್ಣು ಕೊಂಡ್ಕೋಬೇಕು
ಎರ್ಡು ಕೇಜಿ ಮಾಂಸ ತಗೋಬೇಕು
ಆಗ ಪಾತ್ರಿಗಿತ್ರಿ ಮನಿಗ ಹೋಗಬೇಕು
ಆಗ ಏ ಆಟ ಐತೆ ನಮ್ಮೂರಗ ನೀರು ಕೊಡು ಅಂದ್ರೆ
ನೀರ ತರ್ತಾವ ತೊಂಟಗಿತ್ತೀವು
ಅರ್ಧ ಚೆರಿಗ್ಯಾಗೆ ಕಾಲು ಮಕ ತೊಳಕಾಬೇಕು
ಆರ್ಧ ಚೆರಿಗೆ ವಾಪಾಸು ಕಳಿಸಿದ್ರೆ
ಅವ್ನು ಏಟಾಕ್ತಾನ ಅಂತ ಆಕೀಗೆ ಆಲೋಚನ
ಬರ್ರಿ ಹೊರ್ಷಕ್ಕ ಅಂತಾಳ
ನಾಕು ಮೂಲಿಗೆ ನಾಕು ಗೊಂಬೆ ಇರ್ತಾವಲ್ಲ
ಏ ನನ್ನ ನೋಡಿ ನಗುತೀರಾ ಅಂಬೋದು
ದೊಡ್ಡ ಕೋಲು ತಗಂಡು ತಲೆಗ ಹೊಡ್ದಬಿಡೋದು
ತಲೆ ಮ್ಯಾಲೆ ಬಡದ್ರೆ ಮುಗಳ್ಯಾಗ ತಂತೆಲ್ಲ ಹರದೊಗ್ತಾವ
ಆಗ ಏನ್ರೀ ಗೊಂಬೆಗಳು ಅಂಗ ಹೊಡೇಬಡೇತೀಯಾ
ನೋಡು ನನ್ನ ನೋಡಿ ಕುಣೀತಾವ ನೋಡು
ನನ್ನ ನೋಡಿ ನಗ್ತಾವ
ನಾನು ನಗ್ವೋನ ಅಂದು ಬಿಡು
ಆಗ ಏನ್ರೀ ಹಾಂಗ ಬಡಿಬಾರ್ದುರೀ ಅಂತಾಳ
ಹೊರಸಬಾರ್ಲು ಹಾಕು
ಏನ್ರೀ ತಿರುವಿ ಹಾಕ್ತಿ ಹೊರಸನಾ
ನಾವು ಎಲ್ಲಾರಿಗ ದೊಡ್ಡೋರು ನಾವು ಐನೋರು
ಎಲ್ಲಾರು ಕುಂತ ಹೊರುಸು ಮ್ಯಾಲೆ ನಾವು ಕುಂದ್ರೋದಿಲ್ಲ
ಅವರ್ನೆಲ್ಲ ಬಾರ್ಲು ಹಾಕೋದು ನಾವು ಮ್ಯಾಲೆ ಕುಂದ್ರೋದು
ಸರೆ ಬಿಡ್ರಿ ಅಂತಾಳ
ಏನ್ರೀ ಆಗ ತೊಂಟಿಗಿತ್ತಿ ಎಲೆ ಅಡಿಕೆ ತರ್ತಾಳ
ಏ ಎಲೆ ಅಡಿಕೆ ತರ್ತಾಳ
ಏ ಎಲೆ ಅಡಿಕೆ ತಂದಿ
ಇದ್ರ ಜತೆ ಏನು
ಏನು ಜತೆ ಸುಣ್ಣ ಅನ್ನು
ಸುಣ್ಣ ತರ್ತಾಳ
ತೊಂಟಿಗಿತ್ತಿ ಆದ್ರೆ ಗ್ವಾಡಿಗ ವರುಸ್ತಾಳ
ಆಗ ದಾಸಗಿತ್ತಿ ಆದ್ರೆ ಸೀರಿಗೆ ವರಿಸಿಗ್ಯಂತಾಳ
ಕೆಟ್ಟದವಳಿಗೆ ಕೆಟ್ಟ ಬುದ್ದಿ
ನೀಚ ಇದ್ದೋಳಿಗೆ ನೀಚ ಬುದ್ದಿ ಅಂತ
ಮೂರು ಮೊಳದ ಹಾರೆ ಕೋಲು
ನಡುವಿನ ಮ್ಯಾಲೆ ಒಂದೇಟ ಹಾಕು
ಟೊಂಕ ಮ್ಯಾಲೆ ಹಾಕಿದ್ರೆ ಟೊಂಕ ಮುರಿದು ಹೋತೈತಿ
ಆಕಿ ಹೋತಾಳ
ಇನ್ನೊಂದ ದಾಸಿ ಬರ್ತಾಳ
ಏನ್ರೀ ಆಗ ನನ್ನಾಟ ನೋಡ್ರೀ ಅಂತಾಳ
ಆಗ ನಿನ್ನಾಟ ಎಂಗೈತೋ ನೋಡ್ತೀನಿ ಅನ್ರಿ
ಬೇಸು ಆಡುವಾಗ
ಆಗ ಏ ನಿನ್ನ ಮೈಯೆಲ್ಲ ಕೈ ಎಲ್ಲಾ ಕಾಣುತೈತಿ
ನಿನ್ನ ಕಾಲು ತಿರುವೋದು ಕಾಣುವಲ್ದು
ಬೆಕ್ಕ ಮ್ಯಾಲ ದೀಪರೋಟು ಬೋಳ್ಳಿಟ್ಟು
ಬಲಗೈಲಿ ಹೆಚ್ಚು ಮಾಡು
ಜೋತಿನ ಅನು
ಅಯ್ಯೋ ನೋಡ್ರೀ ನಾನು ಸೋತವಳು ಅಲ್ಲ ಅಂತ
ಬೊಳ್ಳಿಟ್ಟು ಹೆಚ್ಚು ಮಾಡ್ತಾಳ
ಬೇಸು ಆಡುವಾಗ
ಆಗ ಬೊಳ್ಳಿಗೆ ಒಳ್ಳೇಣ್ಣೆ ಹತ್ತಿಕ್ಯಂಡಿರೈತಲ್ಲ
ಬಾಯಾಗಿಟ್ಟುಕೊಂತಾಳ ಬೊಳ್ಳು
ಹಾರೆಕೋಲು ತಗಂಡು
ಬಾಯಿ ಮ್ಯಾಲ ಹೀಮಗ ಅಂದು ಬಿಡು
ಹದ್ನಾರಹಲ್ಲ ಜಳಜಳ ಉದುರಿ ಬಿಡ್ತಾವ
ಬಾಯಿ ತುಂಬ ಬಟ್ಟೆ ಇಟ್ಟುಗಂಡು ಹೋಗ್ತಾಳ
ಪಾತ್ರಗಿತ್ತಿ ಬರ್ತಾಳ
ಇಬ್ರು ತೊಂಟಗಿತ್ತಿ ದಾಸಗಿತ್ತಿ ಇಬ್ಬರು
ಕೈಯಾಗಿದ್ದೋರು
ಸೋತು ಹೋಗಿಬಿಟ್ರು
ಆಕಿ ಬರ್ತಾಳ
ಪದ್ಯಕ್ಕ ನೂರು ರೂಪಾಯಿ ತಗಂತಾಳ
ಒಂದೇ ಮಾತಕ
ಏ ಪಾತ್ರಗಿತ್ತಿ ಆಟ ಆಡೋಳೆ
ನಾಳೆ ಸ್ವಾಮಾರ ನಮ್ಮಾರಗೈತಿ
ಚಾಂಪುರದಾಗ ಕರಕಂಡ್ಹೋಗಾಕಾ ಬಂದಿನಿ
ಇಲ್ರೀ ಈಸದಿನ ಥೆಳ್ಳಗ ಇದ್ದೆ
ನಿಮ್ಮ ಗಣಸುರ ಕೂಟ ಕೈ ಹಿಡ್ಕಂಡು ಆಡ್ತಿದ್ದೆ
ಈಗ ಮೈ ಬಂದುಬಿಟ್ಟೈತಿ ನನಗೆ
ಸುಮ್ನೆ ಮಾತಕ್ಕೆ ನೂರು ರೂಪಾಯಿ ಕೊಡ್ತಾರರೀ
ಒಂದು ಪದಕ್ಕೆ ಅಂದ್ಳು
ಪದಗಿದ ಬೇಕಿಲ್ಲ
ನೀನು ಗಂಡಸರ ಕೂಟ ಆಡೀಯಲ್ಲ
ಇಲ್ಲಿ ಯಾರೈದಾರ
ನಾನು ನೀನು ಇಬ್ಬರೇ ಅಲ್ಲ
ಇಲ್ಲೊಂದು ಆಡು ರೋಟಕಲ್ತಿರುವು ಅಷ್ಟೆ
ಏನಂತ ಗ್ವಾಡಿಗ ಬರ್ದು ಬಿಟ್ಟೀ ವೀಳಾಸ್ಹಾಕಿ ಅಂತ ಕೇಳು
ಇಲ್ರಿ ಈಗ ಗೌರ್ನಮೆಂಟು ಆರ್ಡರು ತಂದು ಬೋರ್ಡು ಹಾಕಿನಿ
ಏನಂತ ಹಾಕೀಯಿ
ಮೂರು ಗೇಣು ದೂರ ಇರಬೇಕು
ನನ್ನ ಜೀವದ ಸೀರಿ ಉಚ್ಚಿ ಕೆಳಗ ಬಿದ್ದಂಗಾದ್ರೆ
ಅವ್ನೇ ನನ್ನ ಜೀವದ ಗಂಡ ಅಂತ ಹಾಕೀನಿ
ಸರೆ ಆಗಲಿ ಅಂದು ಬಿಡು
ಬೇಸು ಆಡುವಾಗ
ಕರ್ಡಿಗ ಒಂದು ಹಸ್ಹಿಟ್ಟು ಹಾಕು
ಹೊಡಿಯೊ ಡೊಳ್ಳು ಕೆಳಗಿಡುತೈತಿ
ಹಸಿಟ್ಟು ತಿಂದುಕಾಂತ ಕುಂದ್ರುತೈತಿ
ಹುಲಿರಾಜಗ ಕೇಜಿ ಮಾಂಸ ಹಾಕು
ಉದೋ ಮ್ಯಾಳ ಕೆಳಗಿಡುತೈತಿ
ಮಾಂಸ ತಿನುಕಾಂತ ಇರತೈತಿ
ಕೋತಿಗೆ ಮಾವಿಳಹಣ್ಣು ಹಾಕು
ಒಡೆಯೋಳ ತಾಳ ಕೆಲಗಿಡುತೈತಿ
ಮಾವಿಳೆ ಹಣ್ಣು ತಿನಕ್ಕಂತ ಇರತೈತಿ
ಬೆಕ್ಕಿಗೆ ಸತ್ತಿದ್ದು ಇಲಚಿ ಬಿಸ್ಹಾಕು
ಆಗ ಬಕಣದಾಗಲಿದ್ದ
ಅದು ದೀಪ ಕೆಳಗಿಡುತೈತಿ
ಅವು ಬಾರಿಸಿದ್ರೆಲ್ಲಾ ಈಕಿಗ ಮ್ಯಾಳ ತಾಳ ಇದ್ರೆ ಕೈ ತಿರುವೋದು
ಮ್ಯಾಳ ತಾಳ ಇಲ್ದಿದ್ರೆ ಕೈ ಎಲ್ಲಿಂದ ತಿರುವುತಾಳ
ಏನೇ ಸೋತೇನೆ ಪಾತರಗಿತ್ತಿ
ಸೋತ್ತಿಲ್ಲಯ್ಯಾ ನೀಟು ಐನೋರೇ
ಆಡ್ತೀನಿ ನೋಡ್ರಿ ಅಂತಾಳ
ಜಲ್ದಿ ಆಡು ಅನ್ನು
ಮತ್ತೆ ತಿಂದ ಮ್ಯಾಲೆ ಆಕಿ ಬೇಡಿಕ್ಯಂತಾಳ
ಯಮ್ಮಾ ಈಗಿನ್ನ ಬಂದು ಬಿಟ್ಟಾನ
ಆತನ ಓಡ್ಸಿದಮ್ಯಾಲೆ ನಿಮ್ಗ ಕೇಳಿದಂಗ ಕೊಡ್ತೀನಮ್ಮ
ಬಾರಿಸ್ರಮ್ಮಾ ಅಂತಾಳ
ಏಯಮ್ಮಾ ಪುಣ್ಯಾತ್ಮ
ಯಾವುದೋ ತಂದ್ಹಾಕ್ಯಾನ
ನಮ್ಮಿಗೆ ಹೊಟ್ಟುಹಸಿವು ಆಗುತೈತಿ
ಯಮ್ಮಾ ನಿನ್ನ ಕೊಂಪ್ಯಾಗ ಒಂದು ಇಲಚಿ ಬರಂಗಿಲ್ಲ
ಒಂದು ಹಾವು ಬರಂಗಿಲ್ಲ ಅಂತ
ಇನ್ನ ತಿಂತಾವ ಬಡಬಡ
ಮತ್ತೆ ಬಾರಿಸುವಾಗ
ಆಗ ಎಲ್ಲಿರಿಗೆ ಮತ್ತೆ ಹಾಕು
ಜೀವ ಇದ್ದ ಇಲಿಚಿ ಎರ್ಡು ಕಾಲು ಕಟ್ಟಿರುತೀಯಲ್ಲಾ
ಆಗ ದಾರ ಬಿಚ್ಚಿ ಬಿಡು ಕೆಳಗ ಮ್ಯಾಕ ನಿಂತಿರ್ತಾಳ
ಆಕಿ ಮನಿಗೆ ತುಪ್ಪಾಹಾಕಿ
ತುಪ್ಪ ಬಳಕೋಬೋದು

ಆಕೆ ಕಡಿಗೆ ಇನ್ನ ತೋರಿಸಿ
ಬೆಕ್ಕು ಕಡಿಗೆ ಇನ್ನ ತೋರಿಸಿ
ಮುಂದೆ ಒಂದೆ ಬಿಟ್ಟೆ ಬೀಡಯ್ಯ
ಆ ಇಲಚೀನ ಇನ್ನ || ತಂದಾನ ||