ಏ ಪಾತ್ರಿಗಿತ್ತಿ
ಚೆರಿಗೆ ನೀರು ಕೊಡು ಅಂದ
ಆಗ ತ್ವಂಟಿಗಿತ್ತಿ ದಾಸಿಗಿತ್ತಿ ನೋಡಿದ್ಳು
ಯಮ್ಮ ಮೂರು ನಾಮದವನು ಬಂದಾನಮ್ಮ

ಯಮ್ಮಾ ಮೂವರಿಗೆ ಮೂರು ನಾಮ ಇಡುತಾನಮ್ಮ
ಮದ್ವೆ ಮಾಡೋಕೆ ತಯಾರು ಬಂದಾನಮ್ಮ   || ತಂದಾನ ||

ಲೇ ನೀರು ಕೊಡೋ ಹೋಗು
ನೀರುದಾಗೆ ನಾನು ಖೂನು ಹಿಡಿತೀನಿ ಹೋಗು ಅಂದ
ಆಗ ನೀರು ಹಿಡಕಂಡು ತಗೋ ಮಾವ ಗೋಲ್ರದವ್ನೆ ಅಂದ್ಳು

ಬಂದೀನಿ ಸೋಸೆ ನಿಮ್ಮನ ಕರಕಂಡು
ಹೋಗಲಿಕ್ಕೆ ನಾನಾಗಿ ಬಂದೀನಿ ಸೊಸೆ         || ತಂದಾನ ||

ಅರ್ಧ ಚರಿಗೆದಾಗ ಕಾಲ ಮುಖ ತೋಳ್ದ
ಅಯ್ಯೋ ತ್ವಂಟಗಿತ್ತಿ ಅಂದ
ಇಲ್ರೀ ಎಲ್ಲರೂ ಲೋಕದಾಗ ಬಂದ್ರೆ ನಮ್ಮನ ಕರೆಯಾಕ
ಎರ್ಡೆರ್ಡು ಚರಿಗೆ ಮೂರು ಮೂರು ಚರಿಗೆ ತೊಳಕಂತಾರ
ಏನು ಜಗ್ಗಿ ಐದಾವ್ರೀ ನೀರಿಗೇನು ಯಸ್ನ ಮಾಡಬೇಡ
ಈಗ ಎಲ್ಲಾ ತೊಳಕರ್ರೀ
ಛೀ ಬೊಗಸೆ ಮಕಕ್ಕ ಬೊಗಸೆ ನೀರು
ಚ್ಯಾರಿ ಕೈಗೆ ಚ್ಯಾರೇ ನೀರು
ಆಗ ಚ್ಯಾರ ಪಾದಕ್ಕ ಚ್ಯಾರೆ ನೀರು
ಬುದ್ಧಿಯಿಂದ ತೊಳಿಬೇಖು
ಏಷ್ಟು ತೊಳಿದರೇನು ಅದೇ ತೊಗಲು
ಏನನ್ನ ಕೆಂಪಾಗಾತೀವ್ಯಾ ನಾವು ಅಂದ
ನೀರು ತಗಂಡು ಬಂದ್ಳು
ಯಮ್ಮಾ ಪಾತ್ರಗಿತ್ತಿ ಅರ್ಧ ಚರಿಗೆ ತೊಳಕಂಡ
ಅರ್ಧಚರಿಗೆ ಹಿಂದಕ್ಕೆ ಹಾಕಿದ
ಯಮ್ಮಾ ಎಂಗ ಮಾಡಬೇಕೆ
ಕಂಡೋರಿಗೆ ಸೆರಗು ಹಾಸೋರು
ಕಂಡೋರು ಕರಕಂಬೋರು
ಈಗ ಆತ ಹೊರಗ ನಿಂತಗಂಡ್ರೆ ಹ್ಯಾಂಗ ನಾವು
ಯಮ್ಮಾ ಪರಮಾತ್ಮ ಬರೆದೋಟಾಗ್ಲಿ

ಕರ್ರೆಯಮ್ಮಾ ನೀವು ಹೊರಸು ಮ್ಯಾಕಯಮ್ಮಾ
ಪರಮಾತ್ಮ ಬರದೋಟುವಾಗ್ಲಮ್ಮಾ || ತಂದಾನ ||

ಬರ್ರಿ ಬಣ್ಣದ ಹೊರಸಕ್ಕೆ ಅಂತ
ಹೊರುಷಗೆ ಬಂದ ನೋಡಿದ
ಆಗ ದೊಡ್ಡು ಕೆಬ್ಬಿಣ ಹಾರೆ ಕೋಲುತಗಂಡು
ನಾಕ ಗೊಂಬಿಗೊಳ ತೆಲಿಮ್ಯಾಲ
ಪಟಪಟಪಟ ತಲಿ ಬಡಿದ
ಮುಗುಳ್ಯಾಘ ತಂತೆ ಪಟಪಟ ಹರದ್ವು
ಏನ್‌ಈ ಗೊಂಬೆಗಳು ಏನು ಹಾಂಗ ಹೊಡೆಬಡಿತೀಯಿ
ಇಲ್ಲ ನನ್ನ ನೋಡಿ ನಗುತಾವ ನೋಡು
ನಾ ನಗೋನ ನಾನು ಓಡ್ಯಾಡೋನ
ಅದಕ್ಕೆ ಸಿಟ್ಟುಬಂತು ಹೊಡೆ ಬಡೆದೆ
ವರಸು ಬಾರ್ಲ ಹಾಕ್ಯಂಡ
ಏನ್ರೀ ವರಸು ಬಾರ್ಲು ಹಾಕ್ತಿ
ನೋಡು ನಾವು ಗೊಲ್ರು ಮ್ಯಾಕ ಹಚ್ಚೀವಿ ನಾವುಗಳು
ಅದಕ್ಕೆ ಎಲ್ಲರ್ಗಿ ನಾವ ಬಾರ್ಲು ಹಾಕಿ
ಮ್ಯಾಕ ಕುಂದ್ರುತೀವಿ ಅಂದ
ಸರಿ ಬಿಡ್ರಿ ಅಂದ್ಳು
ಏ ತ್ವಂಟಿಗಿತ್ತಿ ಎಲೆ ಅಡಿಕೆ ತಗೊಂಡು ಬಾ ಅಂದ
ಎಲೆ ಅಡಿಕೆ ತಟ್ರ್ಯಾಗ ಇಟ್ಟುಕಂಡು ಬಂದು
ಆಗ ಸುಣ್ಣ ಮಾರ್ತಾ ಬಂದಾಳ
ಲೇ ಇದ್ರ ಜೋತೆ ಜೋಡು ನೋಡು ಅದ
ಏನ್ರೀ ಅಂದ್ಳು
ಆಗ ಸುಣ್ಣ ತಗಂಡು ಬಾ ಬಂದ
ಆಕಿ ಗಡಿಗ್ಯಾಗ ಕೈಇಟ್ಟು ಕೈತುಂಬ ತಗಂಡ್ಳು
ತಂದು ತಟ್ಟ್ಯಾಗ ಇಟ್ಳು
ಹುಡುಗನ್ಹಾಡ ಮೇಘದಾಗ ವಜ್ರ ಕಂಡಂಗ ಕಾಣ್ತಾನ
ಆತನ ಕಡಿಗೆ ನೋಡಿಕ್ಯಾಂತ ಮರ್ತು

ಸೀರಿದ್ಯಾಗೆ ವರ್ಸಗ್ಯಂತಾಳಮ್ಮಾ
ತ್ವಂಟಿಗಿತೀನೆ ಇನ್ನು ನೋಡಿಯಮ್ಮ || ತಂದಾನ ||

ಹುಡುಗ ನೋಡಿದ
ಕೆಟ್ಟದೋರಿಗೆ ಕೆಟ್ಟು ಬುದ್ದಿ
ನೀತಿ ಇದೋರಿಗೆ ನೀತಿ ಬುದ್ದಿ
ತ್ವಂಟಿಗಿತ್ತಿ ಅಂತ

ದೊಡ್ಡು ಕೋಲುವ ಟೊಂಕ ಮ್ಯಾಲೆ ಹಾಕಿದ
ಟೊಂಕೊಂಬೋದು ಪುಟಕ್ನ ಮುರಿದೋಯ್ತು   || ತಂದಾನ ||

ಅಬ್ಬಾ ಸತ್ತೆ ಅಂತ ಬಂದು ಬಿಟ್ಳು
ಆಗ ಇನ್ನ ದಾಸಿ ನೋಡಿ ಬಿಟ್ಳು
ಏನೇ ತ್ವಂಟಿಗಿತ್ತಿ
ಏಯಮ್ಮಾ ಆತನ ಓಡಿಸಿ ಹಗೇದಾಗ ಹಾಕಿ
ತಡಿಕೆ ಮುಚ್ಚಿ ಎಷ್ಟು ವಗಾಲ್ ಮಾಡಿಕ್ಯಾಂತ ಬರ್ತೀಯೆ
ಟೊಂಕ ಬೇಸಿ ನಡಿಕ್ಯಂತ ಬರಬಾರ್ದ

ಇನ್ನೆಲ್ಲಿಯೋ ಟೊಂಕ ಐತಿ ನನಗೆ
ಪೂಜೆ ಮಾಡೋನು ನನಗೆ ಬಂದಾನಮ್ಮಾ
ಕೀಲು ನೋಡಿ ಕೀಲಾಗಿ ತಗಸೆನಮ್ಮಾ          || ತಂದಾನ ||

ಯಮ್ಮಾ ನನ್ನ ಸೀರಿಗೆ ನಾನು ಒರಸಿಕೊಂಡ್ರೆ
ಆತಗೆನಾತಮ್ಮ
ಹೊರಸು ಮ್ಯಾಲೆ ಕುಂತಾತ
ನನ್ನ ಸುಣ್ಣ ನನ್ನ ಸೀರಿಗೆ ಒರ್ಸಿಕ್ಯಂತಿದ್ದೆ
ಯಮ್ಮಾ ಕೆಬ್ಬಿಣದು ಮಾಡ್ಸಿಕ್ಯಂಡು ಬಂದಾನೆ
ನನ್ನ ನಡುವಿ ಮ್ಯಾಲೆ ಹಿಂಗ ಅಂದು ಬಿಟ್ಟಾ ಟೊಂಕ ಮ್ಯಾಲ
ಟೊಂಕ ಪುಟ್ಟಕ್ನ್ ಅಂದು ಬಿಟ್ತು
ನೀನಾಗಿ ಟೊಂಕ ಮುರುಕಂಡು ಬಂದೀ ಆತನ ಕೂಟ
ನಾನು ಹೋಗಿ ಬಾಯಾಗ್ನ ಹೆಲ್ಲೆಲ್ಲಾ ಕಳೆದು ಬರ್ತೀನಿ
ಕಳೆದು ಬರ್ತೀಯೋ ನೀನು ಕಳಕಂಡು ಬರ್ತೀಯೋ
ಹ್ಯಾಂಗ ಐತೋ ನಿನ್ನ ಅದೃಷ್ಟ ಹೋಗು ಅಂದ್ಳು
ಏನ್ರೀ ಆಗ ಗೊಲ್ರುದವ್ನೆ
ನಾನು ಆಟ ಆಡ್ತೀನರ್ರೀ
ಅಬ್ಬಾ ನೀನು ಆಟ ಆಡ್ತೀಯಾ
ಮತ್ತೇ ನೀನು ಆಟ ಆಡಿದ್ರೆ
ಕರಕಂಡ್ಹೋತೇನಲ್ಲಾ
ಆಗ ನಮ್ಮ ಪಾತ್ರಗಿತ್ತಿಗೆ
ನಮ್ಮ ಗೌಡಸಾನಿಗೆ ಮೈ ಬಂದೈತೆ
ನಾವೇ ಆಡೋದು
ಸರೆ ಆಡು ಮತ್ತೆ ಅಂದ
ಎಡಗಾಲಿಗೆ ಗೆಜ್ಜೆ ಕಟ್ಟಿದ್ಳು
ಕರ್ಡಿನೋಡು

ಧಿಂತೈ ಧಿಂತೈ ಮದ್ದಲೆ ಹೊಡಿತದೆ
ಹುಲಿರಾಜ ತೂತೂ ಮ್ಯಾಳ ಇನ್ನು ಊತದ
ಕೋತಿ ತಾತಾ ತಾಳ ತಾತಾ ತಾಳ ಹೊಡಿತದ
ಬೆಕ್ಕು ತಲೆ ಮ್ಯಾಲೆ ದೀಪ ಹಿಡಿತದ
ದಿಗಾ ತತೈ ತತ್ ತಜಣಂತಾತಾ
ತಾತಾ ತಕ್ ಧಿಗ್ ಥೈ ದಜ್ಜಾಣಾ
ಆಗ ಕಾಲು ತಿರುವುತಾಳಣ್ಣಾ ಇನ್ನ
ಕೈ ತಿರುವುತಾಳ ಅವಳುವಾಗಿ ಯಣ್ಣಾ          || ತಂದಾನ ||

ಬೇಸು ತಿರುವಾಗ
ಲೇ ಎಲ್ಲಾ ಕಾಣುತೈತೆ
ನಿನ್ನ ಕಾಲು ಕಾಣುವಲ್ಡು

ಆಗ ಒಂದು ಲೋಕದಾಗ ಯಣ್ಣಾ     || ತಂದಾನ ||

ಏ ಆಗ ತೊಂಟಗಿತ್ತಿ
ಎಲ್ಲ ಕಾಣತೈತಿ ನಿನ್ನ ಕಾಳು ತಿರುವುದು ಕಾಣದಿಲ್ಲ
ಆಗ ಬೊಳ್ಳಿಟು ಹೆಚ್ಚು ಮಾಡಂದ
ಆಗ ದೀಪ ಮ್ಯಾಲೆ ಬೊಳ್ಳಿಟ್ಟು
ಜ್ಯೋತಿ ಹೆಚ್ಚು ಮಾಡಿ ಬಿಟ್ಳು
ಆಗ ಬಾಯಾಗ ಇಟ್ಕೊಂಡ್ಳು ಬೊಳ್ಳು
ಕೆಟ್ಟದೊಳಿಗಿ ಕೆಟ್ಟ ಬುದ್ಧಿ
ನೀತಿ ಇದ್ಹೊಳಿಗಿ ನೀತಿ ಬುದ್ದಿ ಅಂತ
ದೊಡ್ಡ ಕೆಬ್ಬಿಣ ಹಾರೆಕೋಲು ತಕ್ಕೊಂಡು ಬಾಯಿ ಮ್ಯಾಲ
ಒಂದೇಟ ಹಾಕಿದ

ಹದ್ನಾರ ಹಲ್ಲು ಝಳ ಝಳ ಆಗ್ಯಾವೆ || ತಂದಾನ ||

ಆಗಿನ ದಾಸಗಿತ್ತಿ ಬಾಯಿ ತುಂಬ
ಬಟ್ಟೆ ಮುಚ್ಚಕಂಡು ಬಂದ್ಳು
ಆಗ ನೋಡಿಬಿಟ್ಟು ತೊಂಟಗಿತ್ತಿ
ಏನೇ ದಾಸಿದವಳೇ
ಏಯಮ್ಮ
ಆತನಿಗೆ ಓಡ್ಸಿ ಹಗ್ಯಾದಾಗ್ಹಾಕಿ
ಆಗ ಬಾಯ್ತುಂಬ ಬಟ್ಟೆಮುಚ್ಚಕೊಂಡ ಬರ್ತಿಯಲ್ಲ
ಏಯಮ್ಮ ಬಟ್ಟೆ ತಗಿಯೇ ಅಂದ್ರೆ

ಮಕ್ಕಂ ಮಕ್ಕಂ ಅಂದು ಬಿಡ್ತಾಳಲ್ಲಾ
ಹದ್ನಾರ ಹಲ್ಲಲ್ಲಿ ಒಂದ ಹಲ್ಲ ಇಲ್ಲಣ್ಣಾ  || ತಂದಾನ ||

ಏಯಮ್ಮ ಅಕ್ಕಿ ಕಾಳ ಇದದಂಗಿದ್ದವಲ್ಲೆ
ಬಾಯ್ತುಂಬ ಬೆಳ್ಳಗಿದ್ದವು
ಯಾಮ್ಮಾ ಹ್ಯಾಂಗಮಾಡ್ದಿ
ನೀನೆನಂದೆ
ಅಮ್ಮ ಸೂಟಿ ನೋಡಿ ಎಟ್ಹಾಕ್ತಾನ ಅಂದ್ರೆ
ಅಯ್ಯಯ್ಯೋ ನೀನಾಗಿ ಟೊಂಕ ಕಳಕಂಡು ಬಂದ್ದಿದ್ದಿ ತೊಂಟಗಿತ್ತಿ
ನಾನು ದಾಸೀದವಳ್ಹೋಗಿ
ಬಾಯಾಗಿರ ಹಲ್ಲೆಲ್ಲ ಕಳೆದು ಬರ್ತೀನಿ ಅಂದಿ

ಹಲ್ಲೆಲ್ಲ ಕಳಕೊಂಡು ಬಂದಿಯೇನೇ
ಜಳ ಜಳ ಮಾಡಿಕೊಂಡು ನೀನು ಬಂದಿಬಿಡೇ  || ತಂದಾನ ||

ಯಾಮ್ಮಾ ಪಾತರಗಿತ್ತಿ
ತೊಂಟಗಿತ್ತಿ ದಾಸಗಿತ್ತಿ
ನಾವ್ ಸೋತ ಬಿಟ್ಟಿವಿ

ನಿನ್ನಷ್ಟವೊ ಗೊಲ್ರವ್ನ ಇಷ್ಟಾಮ್ಮ
ಯಮ್ಮಾ ದೊಡ್ಡೊರು ಬಂದರ ಸಾಧ್ಯವಿಲ್ಲ ತಾಯಿ        || ತಂದಾನ ||

ಯಮ್ಮಾ ಹ್ಯಾಂಗೆ ಮಾಡಬೇಕು
ಲೋಕೆಲ್ಲಾ ಹೆಸರಾದಾಕಿ
ಈಗಿನ್ನು ಸೂಟಿನೋಡಿ ಎಟ್ಹಾಕೋನು ಬಂದಾನಂತ
ಪಾತರಗಿತ್ತಿ ಬಂದು ಬಿಟ್ಳು
ಯಮ್ಮಾ ಆಗ ಏನಂದುಳು
ಈಗ ಹೋಗಿ ಬರ್ತೀನೇ ತಾಯಿ
ಹೋಗಿ ಬಾರಮ್ಮ ಪಾತರಗಿತ್ತಿ
ಆಗ ಹುಣಿಸಿ ತೊಪ್ಪಲು ಸೀರಿ
ರಾಗಿ ತೊಪ್ಪಲ ಕುಬುಸ
ಚಂದಪ್ಪನ ಕುಂಕುಮ
ಎಡಗೈಯಿಗೆ ಇನ್ನವರ ಗಂಡಸರ ಮೀಸೆ ಕಟ್ಟಿದ
ಅಕಿ ಪದ್ಯ ಓದ್ತಾಳ
ಲೇ ಕರ್ಡಿ
ಈಗ ಹುಲಿ
ಕೋತಿ
ಆಗಿನ್ನು ಕೇಳಮ್ಮ ಬೆಕ್ಕು
ತಲಿಮ್ಯಾಲೆ ದೀಪ ಇಟ್ಟು ಬೇಸ್ ನೋಡು
ಅಷ್ಟಾಗ್ಲಿ ತಾಯಿ

ಆಗ ಪದ್ಯವು ಏನು ಓದ್ತಾಳಮ್ಮಾ
ದಿಗತೈ ತಜ್ಜುಣು ತಾ ತಾ ತತಾ
ತಾ ತಾ ತತಾ ತತ್ಯೆಯ ತೈತಜ್ಞಣಾ
ಆಕಿ ಒಂದೇಣೆ ಪದ್ಯ ಓದ್ಯಾಳಮ್ಮಾ   || ತಂದಾನ ||

ನೋಡಿದ
ಹೇ ಇಂಥಾ ಪದ್ಯಕ್ಕೆ
ನನಗೆ ಬೇಕಿಲ್ಲ
ಮತ್ತೆ ಇನ್ನೇನ್ರಿ
ಏನಿಲ್ಲ ನೀನು ಕಾಲು ತಿರುವೋದು
ಕೈ ತಿರುವೋದು
ನಿನ ರೋಟು ಇನ್ನ ಆಟ ಆಡಬೇಕು ಅಂದ
ಇಲ್ಲಿ ಜೀವದಲ್ಲಿ ನನ್ನ ಮಾತು ಕೇಳ್ರೀ
ಈಷ್ಟ್‌ದಿನ ತೆಳ್ಳಗಿದೆ
ಗಂಡುಸುರು ಕೂಟ ಬೇಸು ಕುಣಿದೆ
ಈವಾಗ ಮೈ ಬಂದೈತಿ
ಮೈ ತಿರುವೊಲ್ದು ನನಗೆ
ಏನ್ರೀ ಸಾಧ್ಯವಿಲ್ರಿ
ಇದೇ ಒಂದು ಪದ್ಯಕ್ಕೆ
ನೂರು ರೂಪಾಯಿ ಕೊಡ್ತಾರ್ರಿ ಅಂದ್ಳು
ಹೇ ಪದ್ಯಗಿದ್ಯ ಬೇಕಿಲ್ಲ
ಹತ್ತು ಮಂದ್ಯಾಗ ಹಾಡಿಯ ಇಲ್ಲ
ಇಲ್ಲಿ ಯಾರು ನೋಡ್ತಾರ
ನಾನು ನೀನು ಇಬ್ರೇ ಅಲ್ಲಾ
ಇಲ್ರಿ ನೀನು ಹಾಡಿಯೇ ತೀರಬೇಕು
ಎಷ್ಟು ಕೇಳ್ತಿ ಕೇಳು ನೀನು
ಇಲ್ಲ ನಾನು ಹಾಡೋದಿಲ್ಲಂದ್ರೆ
ಹಾಡಂತೀರಿ
ಇಲ್ಲ ಹಾಡೇ ತೀರ್ಬೇಕು ಅಂದ
ಮತ್ತೆ ಹೋಗುಬಿಟ್ಳು ಆಕಿ
ಎಡಗಾಲಿಗೆ ಗೆಜ್ಜೆ ಕಟ್ಟಳು
ಆಗ ಏನಂತ ಕುಣಕಂತ ಬರ್ತಾಳ ಅಂದ್ರೆ
ಲೇ ಬಾಳ ಹುಷಾರಂತ

ಆಗ ಒಂದೇ ಕುಣಿತಾಳನ್ಣ
ದಿಗಾ ತೈತ ತಜ್ಜಣುತಾ ಎನ್ನುತಾ
ತಾ ತಾ ತತಾ ದಿಗತೈ ತಾ ತಜ್ಜಣ
ಆಕಿ ಒಂದನೇ ಇನ್ನೂ ಹಾಡುತ್ತಾಳ   || ತಂದಾನ ||

ಆಡುವಾಗ
ಕರಡಿಗೆ ಹಸಿಹಿಟ್ಟು ಹಾಕಿದ
ಡೋಳು ಕೆಳಗಿಡ್ತು
ಹುಲಿರಾಜಗೆ ಕೇಜಿ ಮಾಸ ಹಾಕ್ದ
ಮ್ಯಾಳ ಕೆಳಗಿಡ್ತು
ಆಗ ಏನು ಮಾಡ್ದ
ಮಾವಿನ ಹಣ್ಣು ಕೋತಿಗೆ ಕೊಟ್ಟ
ಅದು ತಾಳ ಕೆಳಗಿಡ್ತು
ಆಗ ಸತ್ತೋಗಿದ್ದ ಇಲಚಿ ಬೆಕ್ಕ ಮುಂದೆ ಒಗದು ಬಿಟ್ಟ
ಅದು ದೀಪ ಕೆಳಗಿಡ್ತು
ತಿನ್ನಕಾಂತ ಕುಂತುಗಂಡುವು
ಏನೇ ನಿನ್ನ ಆಟ ಆಡು ಅಂದಾ
ಇಲ್ರಿ ಆಗ ಆಡ್ತಿನಿ
ಸೋತಿಯೇನು
ಸೋತಿಲ್ರಿ
ಮತ್ತ ಏನು ಈನ್ನವ್ರುತಾ ಬೋಡ್ರು ಹಾಕಿದ್ದಿ
ಬೇಸು ಅಂದ ಗ್ವಾಡಿಗ
ಇಲ್ರಿ ಮೂರುಗೇಣು ದೂರ ಇರಬೇಕು
ನನ್ನ ಜೀವದ ಸೀರೆ ಉಚ್ಚಿ ಕೆಳಗೆ ಬಿಲ್ಸಿದವ್ನು
ಅವನೇ ನನ್ನ ಜೀವದ ಗಂಡ
ಅಂತ ಬೋಡ್ರು ಹಾಕಿದ್ದೀನಿ ಅಂದ್ಳು
ಸರಿ ಜಲ್ದಿ ಆಗಲಿ ಅಂದ
ಯಮ್ಮಾ ಕರ್ಡಿ
ಸಜ್ಜಿ ಹಸಿಟ್ಟು ಏನು ಬೇಸಿರ್ತೆ
ನಾಗ ಅಮಾಸೆ ಬರ್ತೈತಿ ಬೇಸು ಕಡ್ಲೆ ಕುಟ್ಹಾಕುತಿನಿ
ಏಯಮ್ಮ ಯಾವಾಗ್ಹಾಕ್ತಿಯಮ್ಮ ನೀನು
ಕಾರ್ಫುಡಿ ಕಲ್ಸಾಕ್ತಿ
ಪುಣ್ಯಾತ್ಮ ಪಾಪ ಛಜ್ಜಿ ಹಸಿ ಹಿಟ್ಹಾಕ್ಯಾನ
ಕೇಳವೋ ಕೋತಿ
ಮಾವಳೆಹಣ್ಣು ಯಾಕ ತಿಂತಿಯಪ್ಪ ಉಳ್ಳುಗಿರ್ತಾವೆ
ಬಾಳೆಹಣ್ಣು ತರ್ತಿನಿ
ಮೊನ್ನೆ ತಂದ್ಕಂಡೆಮ್ಮ ನೀನೆ ತಿಂದೆ
ತೊಗಲೂ ಇನ್ನವರತಾ ಎಮ್ಮೆ ಬಾಯಿಗೆ ಕೊಟ್ಟಿ
ಯಾವುದೋ ಮಾವ್ಳೆ ಹಣ್ಣೋ ಪಾವ್ಳಹಣ್ಣೋ
ಪುಣ್ಯಾತ್ಮ ತಂದು ಕೊಟ್ಟಾನ
ಏನೋ ಹುಲಿರಾಜ
ಸತ್ತಿದು ಮಾಂಸ ಯಾಕ ತಿಂತಿಯಪ್ಪಾ
ಬೇಸು ಕೋಳಿಮರಿ ಕೊಯ್ದು ಇಡ್ತಿನಿ
ಏಯಮ್ಮ ಯಾವತ್ತಮ್ಮ
ಅವತ್ತು ಕೋಳಿಮರಿ ತಂದ್ಕಂಡ್ಯಮ್ಮ ಮಾಡ್ಕಂಡೇ
ಎಲುಬಾನ ಹಾಕ್ತಾಳೇನೋ
ಊದಿ ಊದಿ ಹೊಟ್ಟೆ ಊದೈತೆಂತ
ನಾಯಿಮುಂದೆ ಒಗ್ದಿಯಮ್ಮ
ಹೇತಿಕ್ಕಪ್ಪ ಅಂತಾ
ಪುಣ್ಯಾತ್ಮ ತಂದ್ಹಾಕ್ಯಾನ
ಕೇಳವೋ ಆಗ ಬೆಕ್ಕು
ಅಪ್ಪಾ ದೀಪಬೇಸು ತೋರ್ಸಪ್ಪ
ಸತ್ತಿದ್ದ ಯಾಕೆ ತಿಂತಿ
ಏಯಮ್ಮ ನಿನ್ನ ಕೊಂಪ್ಯಾಗ
ಒಂದು ಇಚಲಿ ಬರ್ತೈತ್ಯಾ
ಒಂದು ಹಾವು ಬರ್ತೈತ್ಯಾ
ನನಗೆ ಹೋಳಿಗೆ ತುಪ್ಪ ತಿಂದಾಂಗಾಗೈತಿ
ಅಯ್ಯೋ ಯಂಗಾನ
ಯಾವೂರೋನೋ ಬಂದಾನಾ
ಇವುನ್ನ ಓಡಿಸಿದ ಮ್ಯಾಲೆ
ನೀವು ಕೇಳಿದೆಲ್ಲ ತಂದ್ಕೊಡ್ತಿನಿ
ಏಯಮ್ಮ ಬಡಬಡ ತಿಂಬುತ್ತಿವಿ ಅಂತಾ
ಬಡಬಡ ತಿಂದ್ವು

ಮತ್ತೇ ಅವು ಡೋಳು ಹೋಡಿತಾವಣ್ಣಾ
ಮ್ಯಾಳ ಊದ್ತಾವ ತಾಳ ಹೋಡಿತಾವಾಣ್ಣಾ
ಬೇಸು ಬಾರಿಸುವಾಗ ನೋಡ್ಯಾನ
ಮತ್ತೇ ಎಲ್ಲರಿಗೂ ಒಗೆದು ಬಿಟ್ಟಾನ
ಜೀವಿದ್ದ ಇಲಚಿ ಕೈಲಿ ಹಿಡಿದಾನ
ಕೆಳಗ ಮ್ಯಾಕ ನಿಂತಾಳಮ್ಮ
ಪಾತರಗಿತ್ತಿ ಇನ್ನ ಎದರಾಗಿ
ಆಗ ಒಂದು ಹೆಗ್ಗಿಲಿ
ನೋಡಲೇ ಬೆಕ್ಕು ಕಳಕಂತೀವಿ
ಪಾರತಗಿತ್ತಿ ಮುಂದೂಕ ಇಲಚಿ ಬಿಟ್ಟು ಬಿಟ್ಟಾನೆ           || ತಂದಾನ ||