ಆರು ಅಡಿಗಳಿಗಿಂತಲೂ ಎತ್ತರವಾಗಿದ್ದು, ಎತ್ತರಕ್ಕೆ ತಕ್ಕಂತೆ ದಷ್ಟಪುಷ್ಟವಾಗಿದ್ದು, ಮನ್ಮಥನಂತೆ ಸ್ಫುರದ್ರೂಪಿಯಾಗಿದ್ದು ಆ ಯುವಕ ಮೇಲಕ್ಕೇಳುತ್ತಲೂ ಸಕ್ಷಾತ್ ಸೂರ್ಯದೇವನೇ ಮೂಡಲಲ್ಲಿ ಎದ್ದು ಬಂದಂತೆ ಭಾಸವಾಯಿತು.

ಪುವ್ವಲ ವಂಶದ ಪರಾಕ್ರಮಿ

ಆತನ ಹೆಸರು ಕುಮಾರರಾಮ; ಪುವ್ವಲ ವಂಶದ ದೊರೆ ಕಂಪಿಲರಾಯನ ವೀರ ಕುವರ.

ಬೆನ್ನ ಹಿಂದೆ ಇಳಿಬಿದ್ದಿದ್ದ ಬತ್ತಳಿಕೆಯನ್ನು ಸರಿಪಡಿಸಿಕೊಂಡು, ಎಡಗೈಯಲ್ಲಿದ್ದ ಬಿಲ್ಲಿನ ಮೇಲೆ ಮಮತೆಯಿಂದ ಕೈಯಾಡಿಸುತ್ತ, ತನ್ನ ಸುತ್ತಲೂ ನೆರೆದಿದ್ದ ನಮ ವಯಸ್ಸಿನ ಸಹಚರರನ್ನು ಮಾರ್ಮಿಕವಾಗಿ ದಿಟ್ಟಿಸಿ ನೋಡಿದ ಕುಮಾರರಾಮ.

ಕುಂತಳ ರಾಜ್ಯ ರಾಜಧಾನಿ ಹೊಸಮಲೆ ದುರ್ಗದ ಕಾವಲು ಬತೇರಿಯ ಮೇಲೆ ನಿಂತುಕೊಂಡು ಹರದಾರಿ ಹರದಾರಿಗಳ ದೂರದವರೆಗೂ ಹರಡಿದ್ದ ನಮ್ಮ ನಾಡನ್ನು ವೀಕ್ಷಿಸುತ್ತ ಕುಮಾರರಾಮ ಹೇಳಿದ:

“ಶತ್ರುಗಳ ದಂಡು ಈ ಕಡೆಗೇ ಬರುತ್ತಿದ್ದಂತಿದೆ ಕಾಟಣ್ಣಯ್ಯ”.

ಗಗನಕ್ಕೇರುತ್ತಿದ್ದ ದೂಳಿನ ಬೆಟ್ಟವನ್ನು ಕಂಡಾಗಲೇ ಅವರೆಲ್ಲರಿಗೂ ಅನ್ನಿಸಿದ್ದಿತು – ವೈರಿಸೈನ್ಯ ಬರುತ್ತಿದೆ ಎಂದು.

“ಬರಲಿ ಬರಲಿ. ನಮ್ಮ ಖಡ್ಗಗಳಿಗೂ ದಾಹವಾಗಿದೆ. ಶತ್ರುಗಳ ನೆತ್ತರು ಕುಡಿದು ಅವುಗಳ ದಾಹವಾರಲಿ!” ಎಂದ ಕಾಟಣ್ಣ ಅವನು ಕುಮಾರ ರಾಮನ ಅಣ್ಣ; ಕಂಪಿಲರಾಯನಿಗೆ ಇನ್ನೊಬ್ಬ ರಾನಿಯಲ್ಲಿ ಜನಿಸಿದ ರಾಜಕುವರ.

ಒರೆಯಲ್ಲಿನ ಕತ್ತಿಯನ್ನು ಮಿಂಚಿನ ವೇಗದಿಂದ ಸೆಳೆದು ಝಳಪಿಸುತ್ತ ವೀರಘೋಷ ಮಾಡಿದ ಹರಿಹರ, ಕುಮಾರರಾಮನ ಪ್ರೀತಿಯ ಶಿಷ್ಯ. ಯುವಕರೆಲ್ಲರೂ ಅದಕ್ಕೆ ಧ್ವನಿಗೂಡಿಸಿದರು. ಅವರ ಆ ವೀರಘೋಷ ದುರ್ಗದ ಕೋಟೆ ಕೊತ್ತಳಗಳಲ್ಲೆಲ್ಲ ಧುಮು-ಧುಮಿಸಿ ಅಲ್ಲಿನ ನಾಗರೀಕರನ್ನೂ ಹುರಿದುಂಬಿಸಿತು.

ಕುಂತಳದ ವೀರಶ್ರೀ

ಹರಿಹರ, ಆತನ ತಮ್ಮ ಬುಕ್ಕಣ್ಣ ಕುಮಾರ ರಾಮನ ತಂಗಿಯ ಗಂಡ ಸಂಗಮದೇವ, ಕಂಪಿಲ ರಾಯನ ಇನ್ನೊಬ್ಬ ಪುತ್ರ ಭೈರವದೇವ, ಕಾಟಣ್ಣ ಮತ್ತು ಕುಮಾರರಾಮ; ಈ ಆರು ಜನ ತರುಣರದೊಂದು ಪ್ರಚಂಡ ಶಕ್ತಿ ಆ ರಾಜ್ಯದಲ್ಲಿ ಅವರನ್ನೆದುರಿಸಿ ಸೋಲಿಸುವ ಶೂರರು ದಕ್ಷಿಣ ಭಾರತದಲ್ಲಿಯೇ ಯಾರೂ ಇರಲಿಲ್ಲ.

ಮಹಾಭಾರತದ ಅರ್ಜುನನಂತೆ ವೀರಾಧಿವೀರ ಎನಿಸಿಕೊಂಡಿದ್ದ ಕುಮಾರರಾಮನೇ ಆ ಗುಂಪಿನ ನಾಯಕ. ಆತನಹರಿತವಾದ ಕತ್ತಿಗೂ, ತೀಕ್ಷ್ಣವಾದ ಬಾಣಗಳಿಗೂ ಬಲಿಯಾಗಿ ಅಸುನೀಗಿದ ಶತ್ರುಗಳಿಗೆ ಲೆಕ್ಕವಿರಲಿಲ್ಲ.

ವೀರಪ್ರತಿಜ್ಞೆ

ಅದು ಹದಿನಾಲ್ಕನೆಯ ಶತಮಾನದ ಆರಂಭ ಕಾಲ. ವಿಜಯನಗರ ಸಾಮ್ರಾಜ್ಯವಿನ್ನೂ ಉದಯಿಸಿರಲಿಲ್ಲ. ಅಂತಃಕಲಹಗಳಿಂದಾಗಿ, ರಾಜರಾಜರುಗಳ ದ್ವೇಷಾಸೂಯೆಗಳಿಂದಾಗಿ ನಾಡು ಛಿದ್ರಛಿದ್ರವಾಗಿದ್ದಿತು, ಕಾಕತೇಯರು ಸೇವುಣರನ್ನೂ, ಸೇವಣರು ಹೊಯ್ಸಳರನ್ನೂ, ಪಾಂಡ್ಯರು ಚೋಳರನ್ನೂ, ಚೋಳರು ಪಾಂಡ್ಯರನ್ನು ನಿರ್ಮೂಲಗೊಳಿಸಲು ಪ್ರಯತ್ನಿಸುತ್ತಿದ್ದರು. ಇಬ್ಬರ ಜಗಳ ಮೂರನೆಯವನಿಗೆ ಲಾಭ. ಉತ್ತರದ ಕಡೆಯಿಂದ ಮುಸ್ಲಿಮರು ದಂಡೆತ್ತಿ ಬಂದು, ಹಿಂದು ರಾಜರುಗಳ ಪರಸ್ಪರ ದ್ವೇಷಾಸೂಯೆಗಳ ದುರ್ಲಾಭ ಪಡೆದು, ಒಬ್ಬೊಬ್ಬರನ್ನೇ ಸೋಲಿಸುತ್ತಲಿದ್ದರು. ಮಲ್ಲಿಕ್ ಕಾಫರ್ ಎಂಬ ಸೇನಾಪತಿಯಂತೂ ಸುಂಟರಗಾಳಿಯಂತೆ ಬಂದೆರಗಿ, ಸೇವುಣರನ್ನೂ ಕಾಕತೇಯರನ್ನೂ, ಹೊಯ್ಸಳರನ್ನೂ ಸದೆಬಡಿದು ರಾಮೇಶ್ವರದವರೆಗೂ ನುಗ್ಗಿ ಕೋಲಾಹಲವೆಬ್ಬಿಸಿದ.

ಕುಂತಳ ರಾಜ್ಯದ ಕಂಪಿಲರಾಯ ಸೇವುಣರ ಮಾಂಡಲಿಕನಾಗಿದ್ದ. ಸೇವುಣರು ಮಲ್ಲಿಕ್ ಕಾಫರನಿಗೆ ಸೋತರೂ ಕಂಪಿರಾಯ ಮಾತ್ರ ಸೋಲೊಪ್ಪಿಕೊಳ್ಳಲಿಲ್ಲ. ಮಲೆಗಳಲ್ಲೂ ಗಿರಿಗಳಲ್ಲೂ ದಟ್ಟಡವಿಗಳಲ್ಲೂ ವಾಸಿಸುತ್ತ ಹುಲಿ, ಸಿಂಹಗಳಂತೆ ಹೆಮ್ಮೆಯಿಂದ ಜೀವಿಸುವ ಬೇಡರ ಜನಾಂಗದ ದೊರೆ ಕಂಪಿಲರಾಯ. ಬಲಕ್ಕೆ ತಾನು ತಲೆ ಬಾಗುವುದಿಲ್ಲ ಎಂದು ತೀರ್ಮಾನಿಸಿದ. ತಮ್ಮ ರಾಜ್ಯದ ಸ್ವಾತಂತ್ರ್ಯವನ್ನು ಕಾದುಕೊಳ್ಳಲು ಆತ ನಿರ್ಧರಿಸಿದ.

“ಪ್ರಾಣ ಹೋದರೂ ಚಿಂತೆ ಇಲ್ಲ. ಆ ದುರುಳ ಮಲ್ಲಿಕ್ ಕಾಫರನಿಗೆ ಶರಣಾಗುವಂತಿಲ್ಲ” ಎಂದು ಕುಮಾರ ರಾಮನೂ ಅವನ ಸಂಗಡಿಗರೂ ಘೋಷಿಸಿ, ತುಂಬಿದ ದರ್ಬಾರಿನಲ್ಲಿ ಕಂಪಿಲ ದೊರೆಯಿಂದ ವೀಳಯ ಸ್ವೀಕರಿಸಿ ಶತ್ರುಗಳನ್ನೆದುರಿಸಲು ಸನ್ನದ್ದರಾದರು.

ವಿಜಯ ಮತ್ತು ಸಿರಿ

ಹೊಸಮಲೆದುರ್ಗ, ಕುಮ್ಮಟದುರ್ಗ, ಕಾಟಣದುರ್ಗಗಳಿಗೆ ಮುತ್ತಿಗೆ ಹಾಕಿ ಎರಡು – ಮೂರು ತಿಂಗಳುಗಳ ಕಾಲ ಛಲದಿಂದ ಹೋರಾಡಿದರೂ ಮಲ್ಲಿಕ್ ಕಾಫ್ರನಿಗೆ ಯಶ ಲಭಿಸಲಿಲ್ಲ. ದುರ್ಗಗಳಿಂದ ಬಂದು ಬೀಳುತ್ತಿದ್ದ ಕಲ್ಲುಗುಂಡು, ಬೆಂಕಿ, ಬಾಣಗಳಿಂದಾಗಿ ಪ್ರತಿ ದಿನವೂ ಅವನ ಸಹಸ್ರಾರು ಸೈನಿಕರು ಧರೆಗುರುಳುತ್ತಿದ್ದರು. ದುರ್ಗಗಳ ಗೋಡೆಗಳು ಅಭೇದ್ಯವಾಗಿದ್ದುದರಿಂದ ಮಲ್ಲಿಕ್ ಕಾಫರ್ ಅಸಹಾಯಕನಂತೆ ಕೈ ಹಿಸುಕಿಕೊಳ್ಳುತ್ತ ಸುಮ್ಮನಿರಬೇಕಾಯಿತು. ಇದ್ದಕ್ಕಿದ್ದಂತೆ ಒಂದು ರಾತ್ರಿಯಲ್ಲಿ ಮೂರೂ ದುರ್ಗಗಳಿಂದ ಕುಂತಳ ಸೈನಿಕರು ಹೊರಬಂದು, ಗಾಢ ನಿದ್ರೆಯಲ್ಲಿದ್ದ ವೈರಗಳ ಮೇಲೆರಗಿ, ಕೈಗೆ ಸಿಕ್ಕಿದವರನ್ನೆಲ್ಲ ತರಿದು ಹಾಕಿ ನೆತ್ತರಿನ ಹೊಳೆ ಹರಿಸಿದರು. ಆ ಭಯಂಕರ ದಾಳಿಯಲ್ಲಿ ಬದುಕಿ ಉಳಿದವರು ಹಾದಿ ಸಿಕ್ಕಿದತ್ತ ಓಡಿಹೋದರು. ಹತ್ತಾರು ಗಾಯಗಳಿಂದ ನರಳುತ್ತಿದ್ದ ಸೇನಾಪತಿ ಮಲ್ಲಿಕ್ ಕಾಫರನೂ ಕುದುರೆಯೇರಿ ಪಲಾಯನ ಮಾಡಿ ಜೀವ ಉಳಿಸಿಕೊಳ್ಳಬೇಕಾಯಿತು.

ಶತ್ರುಗಳ ಸೈನ್ಯದ ಲಕ್ಷಗಟ್ಟಲೆ ಶಸ್ತ್ರಾಸ್ತ್ರಗಳೂ, ಗುಡಾರಗಳೂ, ಕುದುರೆಗಳೂ, ಆನೆಗಳೂ, ಒಂಟೆಗಳೂ, ಆಹಾರ ಸಾಮಗ್ರಿಗಳೂ, ಚಿನ್ನ – ಬೆಳ್ಳಿ, ಮುತ್ತು – ರತ್ನಗಳೂ ಕುಂತಳ ರಾಜನ ವಶವಾದವು. ಅವರಿಗೆ ವಿಜಯವೂ ಲಭಿಸಿತು. ಸಿರಿಯೂ ಲಭಿಸಿತು!

ತಾಯಿ ಹರಿಯಾಲದೇವಿ

ಶತ್ರುಗಳನ್ನು ಹೊಡೆದೋಡಿಸಿ, ಕುಂತಳ ರಾಜ್ಯದ ಗಡಿಯಾಚೆ ಸಾಗಿಸಿ, ಕುಮಾರರಾಮನೂ ಅವನ ಸಂಗಡಿಗರೂ ರಾಜಧಾನಿಗೆ ಹಿಂತಿರುಗಿ ಬಂದರು. ತಂದೆ ಕಂಪಿಲರಾಯನ ಚರಣ ಕಮಲಗಳಿಗೆರಗಿ, ಹರಕೆ ಪಡೆದು, ಕುಮಾರರಾಮ ತನ್ನ ಮಾತೃಶ್ರೀ ಹರಿಯಾಲದೇವಿಯ ಅರಮನೆಗೆ ತೆರಳಿದ.

ಕಂಪಿಲರಾಯನ ಪಟ್ಟದರಿಸಿ ಹರಿಯಾಲದೇವಿಗೆ ಆಗ ಐವತ್ತು ವರ್ಷ ವಯಸ್ಸಿರಬಹುದು. ಮದುವೆಯಾಗಿ ಹತ್ತಿಪ್ಪತ್ತು ವರ್ಷ ಕಳೆದರೂ ಆಕೆಗೆ ಮಕ್ಕಳಾಗಿರಲಿಲ್ಲ. ಅನಂತರ ತನ್ನ ಕುಲದೇವತೆಯಾದಿ ಜಟ್ಟಂಗಿ ರಾಮೇಶ್ವರನನ್ನು ಆರಾಧಿಸಿ ಕುಮಾರರಾಮನನ್ನು ಪಡೆದಿದ್ದಳು. ಅಲೌಕಿಕ ರೂಪವಂತನಾಗಿದ್ದ ರಾಮ ಬೆಳೆದು, ಅಂಗ ಸಾಧನೆಯಲ್ಲೂ ಶಸ್ತ್ರಾಸ್ತ್ರ ವಿದ್ಯೆಗಳಲ್ಲೂ ಪಳಗಿದೆ. ಮಲ್ಲ ಯುದ್ಧದಲ್ಲೂ ಕತ್ತಿವರಸೆಯಲ್ಲೂ ಶರಸಂಧಾನದಲ್ಲೂ ಇನ್ನಿತರರೆಲ್ಲರನ್ನೂ ಹಿಂದೆ ಹಾಕಿದ. ವೈರಿಗಳನ್ನು ಸದೆಬಡಿದು ಆಧುನಿಕ ಅರ್ಜುನನೆಂಬ ಹೆಸರು ಗಳಿಸಿದ. ತನ್ನ ಮಗ ಇಡಿಯ ಭಾರತವನ್ನೆಲ್ಲ ನಡುಗಿಸಿದ್ದ ಮಲ್ಲಕ್ ಕಾಫರ ನಂಥ ಕೇಡಿಗನನ್ನೂ ಹೊಡೆ ದೋಡಿಸಿದುದನ್ನು ಕಂಡು ಆ ತಾಯಿ ಅಭಿಮಾನದಿಂದ ನಲಿಯುತ್ತಿದ್ದಳು.

ಧಾವಿಸಿ ಬಂದು ಅಡಿಗಳಿಗೆರಗಿದ ವೀರ ಕುಮಾರರನ್ನು ಹಿಡಿದೆತ್ತಿ, ನೆತ್ತಿಯನ್ನು ಮೂಸಿ ನೋಡಿ, ಆರತಿ ಬೆಳಗಿ, ದೃಷ್ಟಿ ಪರಿಹಾರಕ್ಕಾಗಿ ವೀಳದೆಲೆಯನ್ನು ನಿವಾಳಿಸಿ ಆಸನದಲ್ಲಿ ಕುಳ್ಳಿರಿಸಿದಳು ತಾಯಿ. ಆಕೆಯ ಕಣ್ಣುಗಳಿಂದ ಆನಂದಾಶ್ರುಗಳುದುರುತ್ತಿದ್ದವು.

ಪರದಾರ ಸೋದರ

“ಏಕಮ್ಮಾ ಕಣ್ಣೀರು?” ಎಂದ ಕುಮಾರರಾಮ.

“ಕಂದಾ, ನಿನ್ನ ಈ ಸುಂದರ ರೂಪೇ ನಿನಗೆಲ್ಲಿ ಮುಳ್ಳುವಾಗುತ್ತದೋ ಎಂಬ ಅಂಜಿಕೆ ನನಗೆ. ಎರಡೂ ಮೂರು ವರ್ಷಗಳ ಹಿಂದೆ ಜಟ್ಟಂಗಿ ರಾಮೇಶ್ವರ – ನನ್ನ ಆರಾಧ್ಯ ದೇವರು – ಕನಸಿನಲ್ಲಿ ದರ್ಶನ ಕೊಟ್ಟರು. ಕುಮಾರರಾಮ ಅಸಹಾಯ ಶೂರ. ಆದರೆ ಮದನ ನಂತಿರುವ ಅವನ ರೂಪಿನಿಂದ ಅವನಿಗೆ ಕೇಡಾದೀತು. ಪರನಾರಿಯರು ಅವನ ಬಗೆಗೆ ಮೋಹಗೊಂಡು ಅವನ ಜೀವನವನ್ನು ಹಾಳು ಮಾಡುವರು” ಎಂದು ಅಪ್ಪಣೆ ಕೊಟ್ಟರು ದೇವರು. ಅಂದಿನಿಂದ ನನಗೆ ಅದೇ ಚಿಂತೆ. ಕೆಟ್ಟ ಹೆಂಗಸರಿಂದ ನಿನ್ನನ್ನು ಕಾಪಾಡಲು ಒಂದೇ ಉಪಾಯವಿದೆ. ನವರತ್ನಖಚಿತವಾದ ಒಂದು ಕಡಗವನ್ನು ಮಾಡಿಸಿ, ಅದರ ಮೇಲೆ “ಪರದಾರ ಸೋದರ ರಾಮ” ಎಂಬ ಅಂಕಿತ ಬರೆಸಿ, ದೇವರ ಮುಂದಿಟ್ಟು ಪೂಜೆ ಮಾಡುತ್ತ ಬಂದಿದ್ದೇನೆ” ಎಂದು ಹೇಳಿ ಆ ಬಿರುದಿನ ಪೆಂಡೆಯವನ್ನು ತಂದು ಮಗನ ಎಡಗಾಲಿಗೆ ತೊಡಿಸಿದಳು ಹರಿಯಾಲದೇವಿ.

“ಇನ್ನು ಚಿಂತಿಸಬೇಡಿ ಅನ್ನ. ನಿಮ್ಮ ಪಾದಸಾಕ್ಷಿಯಾಗಿ ಪರನಾರಿಯರಿಗೆ ಕಿಂಚಿತ್ತೂ ಸಲುಗೆ ಕೊಡುವುದಿಲ್ಲ. ನೀವೇ ನನಗೆ ವಿವಾಹ ಮಾಡಿದ ರಾಮಲಾದೇವಿ, ಕಾಮಲಾದೇವಿ, ಸೋಮಲಾದೇವಿ, ಭೂಮಲಾದೇವಿ ಮತ್ತು ತಿಮ್ಮಲಾದೇವಿ ಇವರ ಹೊರತು ಇನ್ನಿತರ ಸ್ರೀಯರೆಲ್ಲರೂ ನಿಮ್ಮಂತೆಯೇ ನನ್ನ ಹೆತ್ತ ತಾಯಂದಿರೆಂದು ನಂಬಿ ನಡೆಯುತ್ತೇನೆ” ಎಂದು ವಚನವಿತ್ತು. ಮಾತೃದೇವತೆಯನ್ನು ಸಂತೈಸಿದ ಕುಮಾರರಾಮ.

 

"ನೀನೆ ನನಗೆ ಮದುವೆ ಮಾಡಿದ ಹೆಂಡತಿಯರಲ್ಲದೆ ಉಳಿದ ಹೆಂಗಸರೆಲ್ಲ ನನಗೆ ತಾಯಿಯರು"

ನವಲಕ್ಕು ತೆಲುಗರ ಗಂಡ

ದಕ್ಷಿಣ ಭಾರತದ ಅನೇಕ ಅರಸರನ್ನು ಸೋಲಿಸಿ ಮುಸ್ಲಿಮರ ಸೈನ್ಯವನ್ನು ಹೊಡೆದೋಡಿಸಿದ ಕುಮಾರ ರಾಮನಿಗೆ ಅನೇಕಾನೇಕ ಬಿರುದುಗಳಿರುವುದು ಸಹನವಾಗಿದ್ದಿತು. “ನವಲಕ್ಕು ತೆಲುಗರ ಗಂಡ” ಎಂಬುದು ಆ ಬಿರುದುಗಳಲ್ಲೊಂದು. ಆ ಬಿರುದಿನ ವಿಚಾರ ಕೇಳಿ ತೆಲುಗರಿಗೆ ಸಿಟ್ಟು ಬರುವದೂ ಸಹಜವಾಗಿದ್ದಿತು. ಓರುಗಲ್ಲಿನ ತೆಲಗು ಭೂಪತಿ ಪ್ರತಾಪರುದ್ರನಂತೂ ಕೆರಳಿ ಕೆಂಡ ದಂತಾಗಿದ್ದ. ಕುಮಾರರಾಮನನ್ನು ಮುಗಿಸಿ ಬಿಡಲು ನಿರ್ಧರಿಸಿದ. ದಿಲ್ಲಿಯ ಸುಲ್ತಾನನ ಅಧಿಪತ್ಯವನ್ನೊಪ್ಪಿಕೊಂಡು ಆತನಿಗೆ ಕಪ್ಪಕಾಣಿಕೆ ಸಲ್ಲಿಸುತ್ತಿದ್ದ ಪ್ರತಾಪರುದ್ರ, ಕುಮಾರರಾಮನೆಂಬ ಮುಳ್ಳನ್ನು ಕಿತ್ತೆಸೆಯದಿದ್ದರೆ ದಿಲ್ಲಿಯ ಸಿಂಹಾಸನಕ್ಕೂ ಅಪಾಯವಾಗುವುದೆಂದು ಸುಲ್ತಾನನಿಗೆ ತಿಳಿಸಿದ.

ಸುಲ್ತಾನ ಹಿರಿಹಿರಿ ಹಿಗ್ಗಿದ. ಇಂಥ ಸಂದರ್ಭಗಳಿಗಾಗಿಯೇ ಆತ ಕಾದಿರುತ್ತಿದ. ಪರಸ್ಪರರನ್ನು ದ್ವೇಷಿಸುತ್ತಿದ್ದ ರಾಜರುಗಳನ್ನೆಲ್ಲ ಮುಗಿಸಿ, ಅಖಂಡ ಭರತಖಂಡದ ಏಕಮೇವಾದ್ವಿತಿಯ ಚಕ್ರವರ್ತಿಯಾಗುವ ಮಹತ್ವಾಕಾಂಕ್ಷೆ ಸುಲ್ತಾನನದು.

ದಳವಾಯಿಯ ಸಲಹೆ

ಪ್ರತಾಪರುದ್ರನ ಹತ್ತಿರ ದೇವಿಸೆಟ್ಟಿ ಲಿಂಗಣ್ಣ ಎಂಬ ಶೂರವೀರ ಸಜ್ಜನ ದಳವಾಯಿಯಿದ್ದ. ಕುಮಾರರಾಮನ ಸದ್ಗುಣಗಳನ್ನೂ ಸ್ವಾತಂತ್ರ್ಯ ಪ್ರೇಮವನ್ನೂ ದೇಶಾಭಿಮಾನವನ್ನೂ ಆತ ಬಹುವಾಗಿ ಮೆಚ್ಚಿಕೊಂಡಿದ್ದ. ತಮ್ಮ ಅರಸು ಪ್ರತಾಪರುದ್ರ ಕುಮಾರರರಾಮನ ವಿರುದ್ಧ ಕತ್ತಿ ಕಟ್ಟುತ್ತಿದ್ದುದು ಲಿಂಗಣ್ಣನಿಗೆ ಸರಿಯೆನಿಸಿರಲಿಲ್ಲ.

“ಪ್ರಭುಗಳ ಹಿತಕ್ಕಾಗಿ ನಾನು ಒಂದು ಸಲಹೆ ಮಾಡಬಯಸುತ್ತೇನೆ. ಕುಂತಳದ ಕುಮಾರರಾಮನು ನಮಗೆ ವೈರಿಯಲ್ಲ. ನಮ್ಮ ರಾಜ್ಯವನ್ನು ಕಬಳಿಸುವ ದುರಾಲೋಚನೆಯೂ ಅವನಿಗಿಲ್ಲ. ಅವನು ವಿರೋಧಿಸುವುದು ದಿಲ್ಲಿಯ ಸುಲ್ತಾನನ ಕ್ರೌರ್ಯ, ಅತ್ಯಾಚಾರ, ಅನಾಚಾರಗಳನ್ನು ಮಾತ್ರ. ಆದ್ದರಿಂದ ನಾವು ಕುಮಾರರಾಮನ ವಿರುದ್ಧವಾಗಿ ಏನನ್ನೂ ಮಾಡಬಾರದು. ಅವನೊಡನೆ ಸ್ನೇಹದಿಂದಿರಬೇಕು. ಅದರಲ್ಲಿಯೇ ಈ ರಾಜ್ಯದ ಕಲ್ಯಾಣವಿದೆ”.

ದಳವಾಯಿ ಲಿಂಗಣ್ಣನ ಈ ಹಿತವಚನ ದೊರೆಗೆ ಹಿಡಿಸಲಿಲ್ಲ. ಆದರೂ ಆತ ತನ್ನ ಅಸಮಾಧಾನವನ್ನು ಬಹಿರಂಗವಾಇ ಪ್ರಕಟಿಸಲಿಲ್ಲ. ಕುಟಿಲತಂತ್ರದಿಂದಲೇ ಕುಮಾರರಾಮನನ್ನು ಮುಗಿಸಬೇಕೆಂದು ಮನಸ್ಸಿನಲ್ಲಿಯೇ ನಿರ್ಧರಿಸಿದ. ಲಿಂಗಣ್ಣನನ್ನು ಕುರಿತು.

“ನೀವು ಹೇಳುವಂತೆಯೇ ಆಗಲಿ ದಳವಾಯಿಗಳೇ. ಕುಮಾರರಾಮನಿಗೂ ನಮಗೂ ನೀವೇ ಸ್ನೇಹವುಂಟು ಮಾಡಿ. ಹೇಗೊ ಸದ್ಯದಲ್ಲಿಯೇ ವಿಜಯದಶಮಿಯ ಉತ್ಸವ ನಡೆಯಬೇಕು. ಈ ಉತ್ಸವಕ್ಕೆ ಕುಮಾರರಾಮನನ್ನು ಕರೆದು ತನ್ನಿ” ಎಂದು ಹೇಳಿದ.

ಸರಳ ಮನಸ್ಸಿನ ದಳವಾಯಿಗೆ ದೊರೆಯ ಕಪಟ ತಿಳಿಯಲಿಲ್ಲ. ವಿಜಯದಶಮಿಯ ಉತ್ಸವಕ್ಕೆ ಕುಮಾರ ರಾಮನನ್ನು ಆಮಂತ್ರಿಸಲೆಂದು ಉಚಿತವಾದ ಉಡುಗೊರೆಗಳ ಸಮೇತ ಆತ ಕುಂತಳಕ್ಕೆ ಪಯಣ ಬೆಳಸಿದ.

ಕುಂತಳದ ರಾಜಧಾನಿಯಲ್ಲಿ ಲಿಂಗಣ್ಣನನ್ನು ಅತ್ಯಂತ ಆದರದಿಂದಲೂ, ಗೌರವದಿಂದಲೂ, ಬರಮಾಡಿಕೊಳ್ಳಲಾಯಿತು. ಓರುಗಲ್ಲಿನ ದೊರೆಯ ಆಮಂತ್ರಣದ ವಿಚಾರ ತಿಳಿದಾಗ ಕಂಪಿಲರಾಯ ಚಿಂತನೆಗೊಳಗಾದ. ಕುಂತಳದ ಏಳಿಗೆಯ ಬಗೆಗೂ ರಾಮನಾಥನ ಕೀರ್ತಿಯ ಬಗೆಗೂ ಪ್ರತಾಪರುದ್ರನಿಗಿದ್ದ ಅಸೂಯೆಯೂ ಅಸಮಾಧಾನವೂ ಎಲ್ಲರಿಗೂ ವಿದಿತವಾಗಿದ್ದಿತು. ಅಂಥ ವೈರಿಯನ್ನು ಮರುಳಾಗಿ ರಾಮನಾಥನನ್ನು ಉತ್ಷವಕ್ಕೆ ಹೇಗೆ ಕಳುಹಿಸುವುದು? ನಂಬಿಸಿ,  ಬರಮಾಡಿಕೊಂಡು ಘಾತ ಮಾಡುವದೇ ಪ್ರತಾಪರುದ್ರನ ಆಶಯವೆಂಬುದರಲ್ಲಿ ಅನುಮಾನ ಇರಲಿಲ್ಲ.

ಪೌರುಷಕ್ಕೆ ಆಹ್ವಾನ

ರಾಯಭಾರಿ ಲಿಂಗಣ್ಣನನ್ನು ಬಿಡಾರದ ಮನೆಗೆ ಕಳಿಸಿ, ಅರಮನೆಯಲ್ಲಿ ಆಪ್ತಾಲೋಚನೆಯ ಸಭೆ ಸೇರಿಸಿದ ಕಂಪಿಲರಾಯ. ವಯೋವೃದ್ಧನೂ, ಅನುಭವ ವೃದ್ಧನೂ ಆದ ಪ್ರಧಾನಿ ಬೈಚಪ್ಪನಾಯಕನನ್ನು ಕರೆಸಿದ. ಉತ್ಸವಕ್ಕೆ ಹೋಗುವುದರ ಬಗೆಗೆ ಬಹಳ ಕಾಲ ಚರ್ಚೆ ನಡೆದ ಬಳಿಕ ಪ್ರಧಾನಿ ಬೈಚಪ್ಪನಾಯಕ ಹೇಳಿದ: “ಓರುಗಲ್ಲಿನ ದೊರೆಯ ಈ ಆಮಂತ್ರಣವೆಂದರೆ ಕುಂತಳದ ಪೌರುಷಕ್ಕೇ ಒಂದು ಆಹ್ವಾನ, ಒಂದು ಸವಾಲು. ಗಂಡಾಂತರವುಂಟು ನಿಜ, ಹಾಗೆಂದು ನಾವು ಹಿಂಜರಿಯಬಾರದು. ರಾಜಕುಮಾರರು ಅಗತ್ಯವಾಗಿಯೂ ಉತ್ಸವಕ್ಕೆ ಹೋಗಲಿ. ಜೊತೆಯಲ್ಲಿಯೇ ಸ್ವಸಂರಕ್ಷಣೆಗೆ ಅವಶ್ಯವಿರುವ ಸಿದ್ಧತೆಯನ್ನು ಮಾಡೋಣ”.

ಮಾತಂಗಿ

ದಸರೆ ಸಮೀಪಿಸುತ್ತಲೂ ಕಾಟಣ್ಣ ಸಂಗಮದೇವ, ಹರಿಹರ, ಬುಕ್ಕಣ್ಣ ಮೊದಲಾದ ವೀರರು ಗುಪ್ತ ರೀತಿ ಯಿಂದ ದಂಡು ತೆಗೆದುಕೊಂಡು ಓರುಗಲ್ಲಿನ ಗಡಿಯ ಹತ್ತಿರ ಅಲ್ಲಲ್ಲಿ ತಳವೂರಿದರು. ಕುಮಾರ ರಾಮ ಮಿತ ಪರಿವಾರದೊಡನೆ ಓರುಗಲ್ಲಿಗೆ ಬಂದ. ಆಗಸೆಯ ಬಾಗಿಲಲ್ಲಿ ಆತನನ್ನು ಸಮಸ್ತ ಗೌರವದಿಂದ ಸ್ವಾಗತಿಸಿದ ಲಿಂಗಣ್ಣ. ರಾಜಧಾನಿಯ ಬೀದಿಗಳಲ್ಲಿ ಅವರು ಮೆರವಣಿಗೆ ಹೊರಟಿದ್ದಂತೆ, ಓರುಗಲ್ಲಿನ ಸ್ತ್ರೀ-ಪುರುಷರೂ ಮಕ್ಕಳು-ಮರಿಗಳೂ ಕಣ್ಣರಳಿಸಿ ನೋಡಿದರು. ಕರ್ನಾಟಕದ ಈ ಪ್ರಖ್ಯಾತ ವೀರನನ್ನೂ, ಆತನ ರಾಜಗಾಂಭೀರ್ಯವನ್ನೂ, ಸುಂದರ ರೂಪವನ್ನೂ ಕಂಡು ಹಿರಿಹಿರಿ ಹಿಗ್ಗಿ ಹೊಗಳಿದರು. ಅರಮನೆಯ ಮಹಾದ್ವಾರದಲ್ಲಿ ಕಾದಿದ್ದ ಪ್ರತಾಪರುದ್ರ ದೊರೆ ಕುಮಾರರಾಮನನ್ನು ಅಪ್ಪಿಕೊಂಡು, ಕುಶಲ ವಿಚಾರಿಸಿ, ರಾಚೋಚಿತ ಮರ್ಯಾದೆಗಳಿಂದ ಓಲಗಕ್ಕೆ ಕರೆದೊಯ್ದ. ರಾತ್ರಿಯಾಗುತ್ತಲೂ ರಾಮನಾಥ ತನಗಾಗಿ ಸಜ್ಜುಗೊಳಿಸಲ್ಪಟ್ಟ ಬಿಡಾರಕ್ಕೆ ತೆರಳಿದ.

ಯಾವುದಾದರೂ ಉಪಾಯದಿಂದ ಕುಮಾರರಾಮನನ್ನು ಪೇಚಿಗೆ ಸಿಲುಕಿಸಿ ಅವನ ಕೀರ್ತಿಗೆ ಕಳಂಕ ಸವರಲು ಸಿದ್ಧನಾಗಿದ್ದ ಪ್ರತಾಪರುದ್ರ. “ಪರದಾರ ಸೋದರ” ನೆಂಬ ಬಿರುದು ಕುಮಾರರಾಮನಿಗಿದ್ದುದು ರುದ್ರನಿಗೂ ಗೊತ್ತಿದ್ದಿತು. ಎಂತಲೇ ರಾಮನ ವ್ರತವನ್ನು ಮುರಿದು ಫಜೀತಿ ಮಾಡಲೆಂದು ತನ್ನ ಸಾಕುಮಗಳಾದ ಮಾಥಂಗಿ ಯನ್ನು ಕಳಿಸಿದ. ಆ ಕಾಲದಲ್ಲಿ ಪ್ರತಿಯೊಬ್ಬ ದೊರೆಯ ಹತ್ತಿರವೂ ಇಂಥ ಕೆಟ್ಟಕೆಲಸಗಳಿಗಾಗಿಯೇ ಮೀಸಲಾಗಿದ್ದ ಯುವತಿಯರಿರುತ್ತಿದ್ದರು.

ಮಾತಂಗಿ ಇಪ್ಪತ್ತರ ತುಂಬು ಜವ್ವನೆ. ರಂಭೆ-ಊರ್ವಶಿಯರನ್ನೂ ನಾಚಿಸುವಂತಹ ಲಾವಣ್ಯವತಿ. ಕುಮಾರರಾಮನ ಸೌಂದರ್ಯದ ಬಗೆಗೂ ಶೌರ್ಯ ಧೈರ್ಯಗಳ ಬಗೆಗೂ ಅವಳು ಸಾಕಷ್ಟು ಕೇಳಿದ್ದಳು; ಅವನನ್ನೇ ವರಿಸಬೇಕೆಂದು ತನ್ನಲ್ಲಿಯೇ ನಿರ್ಧರಿಸಿದ್ದಳು.

ಮಾತಂಗಿಯ ರೂಪು, ಯೌವನ, ವೈಯಾರ, ಮೋಹಕ ಮಾತು, ಮುಗುಳುನಗೆ ಯಾವುದರಿಂದಲೂ ಕೊಂಚವೂ ಚಂಚಲನಾಗಲಿಲ್ಲ ಕುಮಾರರಾಮ.

“ಪರನಾರಿಯರೆಲ್ಲರೂ ನನಗೆ ತಾಯಿ ಸಮಾನರು ಮಾತಂಗಿ. ದಯವಿಟ್ಟು ನನ್ನನ್ನು ಕ್ಷಮಿಸು” ಎಂದು ವಿನಯದಿಂದಲೇ ಹೇಳಿದ ಕುಮಾರರಾಮ.

“ನೀನೆ ನನ್ನ ವತಿ ರಾಮನಾಥಾ. ನೀನಿಲ್ಲದೆ ನಾನು ಜೀವಿಸಲಾರೆ!” ಎನ್ನುತ್ತ ಆತನ ಕಾಲು ಹಿಡಿದಳು ಮಾತಂಗಿ.

ಆಗಲೂ ಕುಮಾರರಾಮ ವಿಚಲಿತನಾಗಲಿಲ್ಲ. ಉಪಾಯದಿಂದ ತನ್ನ ಕಾಲು ಬಿಡಿಸಿಕೊಂಡು, ಬಲವಂತದಿಂದಲೇ ಅವಳನ್ನು ಹೊರಕ್ಕೆ ಕಳಿಸಿದ.

ತುಳಿಸಿಕೊಂಡ ನಾಗಿಣಿಯಂತೆ ಫೂತ್ಕರಿಸುತ್ತ ಪ್ರತಾಪರುದ್ರನ ಬಳಿಗೆ ಹೋಗಿ ಕೆಂಡ ಕಾರಿದಳು ಮಾತಂಗಿ.

“ಆ ಸೊಕ್ಕಿನ ಬೇಡನಿಗೆ ತಕ್ಕದ್ದು ಮಾಡೋಣ. ಸುಮ್ಮನಿರು ಮಗಳೇ!” ಎಂದು ಮಾತಂಗಿಯನ್ನು ಸಂತೈಸಿದ ಪ್ರತಾಪರುದ್ರ.

ಮಾರನೆಯ ರಾತ್ರಿ ಕುಮಾರರಾಮನ ಬಿಡಾರದ ಸುತ್ತಲೂ ಪ್ರತಾಪರುದ್ರನ ಸೈನಿಕರು ಕಾವಲು ನಿಂತರು. ಕುಂತಳದ ಪಹರೆಯವರು ಬಂಧಿಸಿದರು. ಈ ವಿಚಾರ ದಳವಾಯಿ ಲಿಂಗಣ್ಣನಿಗೆ ತಿಳಿಯಲು ತಡವಾಗಲಿಲ್ಲ.. ತನ್ನನ್ನು ನಂಬಿ ಬಂದ ಕುಮಾರರಿಗೆ ಇಲ್ಲಿ ಈ ರೀತಿ ಮೊಸವಾಯಿತಲ್ಲಾ ಎಂದು ಕಳವಳಗೊಂಡು ಆತ ಅದೇ ರಾತ್ರಿ ತನ್ನ ಕುಟುಂಬದವರನ್ನು ದೂರದ ಊರಿಗೆ ಕಳುಹಿಸಿದ, ಅನಂತರ ತಾನೂ ಕುದುರೆಯೇರಿ ಓರುಗಲ್ಲಿನ ಗಡಿ ದಾಟಿ ಬಂದ. ಅಲ್ಲಿ ಕಾದುಕೊಂಡಿದ್ದ ಕಾಟಣ್ಣನಿಗೆ ಆ ಸಮಾಚಾರ ತಿಳಿಯುತ್ತಲೂ ಆತನೂ ಅವನ ಸೈನಿಕರು ವೇಷ ಬದಲಿಸಿಕೊಂಡು ಓರುಗಲ್ಲಿಗೆ ಬಂದು , ಒಂದು ರಾತ್ರಿಯಲ್ಲಿ ರಾಮನ ಬಿಡಾರದ ಮೇಲೆ ದಾಳಿ ಮಾಡಿ, ಕಾಕತೇಯ ದಂಡಾಳು ಗಳನ್ನು ಕೊಂದು ರಾಮನನ್ನು ಮುಕ್ತಗೊಳಿಸಿದರು.

ಸಾರ್ಥಿಕವಾದ ಬಿರುದು

ಕುಮಾರರಾಮ ತಪ್ಪಿಸಿಕೊಂಡ ಸಮಾಚಾರ ತಿಳಿಯುತ್ತಲೂ ಪ್ರತಾಪರುದ್ರ ಕಿಡಿಕಿಡಿಯಾಗಿ, ಮುಂಗೈ ಕಚ್ಚಿಕೊಂಡು ತನ್ನ ಮಗ ಎಪ್ಪಟಿರಾಯನನ್ನು ಕರೆಸಿ, “ಆ ಅಡವಿಯ ನರಿಯನ್ನು ಹಿಡಿದುಕೊಂಡು ಬಾ!” ಎಂದು ಆಜ್ಞೆ ಮಾಡಿದ.

 

ಕುಮಾರರಾಮನು ಮಹಾ ಪರಾಕ್ರಮದಿಂದ ಹೋರಾಡಿದ

ಅವರ ಹತ್ತಿರ ಬೊಲ್ಲ ಎಂಬ ಹೆಸರಿನ ಅದ್ಭುತವಾದ ಕುದುರೆಯಿದ್ದಿತು. ಕಾಳಗದ ಕಣದಲ್ಲಿ ಅದನ್ನೇರಿ ಹೋದವರಿಗೆ ಸೋಲಾಗುವುದು ಶಕ್ಯವೇ ಇರಲಿಲ್ಲ. ಎಪ್ಪಟಿರಾಯ ಬೊಲ್ಲನನ್ನು ತರಿಸಿದ, ಪೂಜಿಸಿದ, ಅದರ ಮೈಗೆ ಗಂಧ ತೀಡಿದ, ಹಣೆಗೆ ಹೂವೇರಿಸಿದ, ನಮಸ್ಕರಿಸಿದ. ಅನಂತರ ನಯವಾಗಿ ಅದರ ಬೆನ್ನು ತಟ್ಟಿ ಮೇಲೇರಿ ಕುಳಿತು ಸುಸಜ್ಜಿತ ಸೈನ್ಯದೊಡನೆ ರಾಮನನ್ನು ಹಿಡಿದು ತರಲು ಹೊರಟ.

ಆತ ಬಹುದೂರ ಪಯಣಿಸಬೇಕಾದ ಅಗತ್ಯವೂ ಇರಲಿಲ್ಲ. ಓರುಗಲ್ಲಿನ ಹೊರವಲಯದಲ್ಲಿಯೇ ತನ್ನ ಸೈನ್ಯದೊಡನೆ ಕಾದಿದ್ದ ಕುಮಾರರಾಮ. ಬಾಣಗಳು ಹಾರಾಡಿದವು, ಕತ್ತಿಗಳು ತಾಕಲಾಡಿದವು. ಎರಡೂ ಕಡೆಯವರೂ ಕಲಿತನದಿಂದ ಕಾದಿದರು. ರಣರಂಗದಲ್ಲಿ ಮಿಂಚಿನ ವೇಗದಿಂದ ಸಂಚರಿಸುತ್ತಿದ್ದ ಬೊಲ್ಲನನ್ನು ಕಂಡು ಕುಂತಳದ ಸೈನಿಕರು ಭಯಭೀತರಾದರು. ಕೊನೆಗೆ ರಾಮನೇ ಮುನ್ನುಗ್ಗಿ ಎಪ್ಪಟಿರಾಯನನ್ನಿರಿದು ಕೆಳಗೆ ಬೀಳಿಸಿದ. ಅನಂತರ ಬೊಲ್ಲನ ಕಡಿವಾಣವನ್ನೆಳೆದು ಅದನ್ನು ನಿಲ್ಲಿಸಿದ. ಕುಮಾರರಾಮನ ಪ್ರತಾಪವನ್ನು ಬೊಲ್ಲನೂ ಮೆಚ್ಚಿಕೊಂಡಂತೆ ಕಾಣಿಸಿತು; ಅದು ತನ್ನ ಮುಂಗಾಲುಗಳನ್ನೆತ್ತಿ ಮೇಲೆ ನೆಗೆದು, ರಾಮನಿಗೆ ನಮಸ್ಕರಿಸಿದಂತೆ ಮಾಡಿತು. ಕುಮಾರರಾಮ ತನ್ನ ಕುದುರೆಯಿಂದಿಳಿದು ಬೊಲ್ಲನಿಗೆ ನಮಸ್ಕರಿಸಿದ. ಅದು ಅವನನ್ನೊಮ್ಮೆ ನಿಟ್ಟಿಸಿ ನೋಡಿ ಅವನಿಗೆ ಒಲಿದು ನಿಂತಿತು. ಒಡನೆಯೇ ಕುಮಾರರಾಮ ಬೊಲ್ಲನ ಮೇಲೇರಿ ಕುಳಿತ. ಅಗ್ನಿವಾಯುಗಳ ಮಿಲನವಾದಂತಾಯಿತು. ರಾಮನ ದಂಡು ಜಯಜಯಕಾರ ಮಾಡಿತು. ಯಮದೂತನಂತೆ ಮುನ್ನುಗ್ಗಿ ಬರುತ್ತಿದ್ದ ಬೊಲ್ಲನನ್ನೂ ಅದರ ಮೇಲೆ ಪೌರುಷದ ಮೂರ್ತಿಯಾಗಿ ಕುಳಿತಿದ್ದ ಕುಮಾರರಾಮನನ್ನೂ ಕಂಡು, ಅವನ ಖಡ್ಗದ ಠಣತ್ಕಾರವನ್ನು ಕೇಳಿ, “ಘಾತವಾಯ್ತಪ್ಪೋ!” ಎಂದು ಬೊಬ್ಬಿರಿಯುತ್ತ ಕಾಕತೇಯ ಸೈನ್ಯ ಪಲಾಯನ ಹೇಳಿತು.

“ನವಲಕ್ಕು ತೆಲುಗರ ಗಂಡ” ಎಂಬ ತನ್ನ ಬಿರುದನ್ನು ಸಾರ್ಥಕಗೊಳಿಸಿಕೊಂಡು ವಿಜಯಿಯಾಗಿ ಬಂದ ರಾಮನನ್ನು ಕುಂತಳದ ಜನರೆಲ್ಲರೂ ಹೆಮ್ಮೆಯಿಂದ ಸ್ವಾಗತಿಸಿದರು. ಒಂದು ವಾರದವರೆಗೂ ವಿಜೃಂಭಣೆಯಿಂದ ನಡೆಯಿತು ವಿಜಯೋತ್ಸವ.

ಶಹಜಾತಿ ಬಾಬಮಿ

ತನ್ನ ರಾಜ್ಯದಲ್ಲಿಯೇ ತನಗೆ ಸೋಲಾದರೂ ಸಹ ಪ್ರತಾಪರುದ್ರನಿಗೆ ತಿಳವಳಿಕೆ ಬರಲಿಲ್ಲ. ಕುಮಾರರಾಮನ ಬಗೆಗೂ ಕುಂತಳ ರಾಜ್ಯದ ಬಗೆಗೂ ಅವನ ದ್ವೇಷ ನೂರ್ಮಡಿಯಾಯಿತು. ರಾಮನನ್ನು ಕೊನೆಗಾಣಿಸದೆ ವಿರಮಿಸುವುದಿಲ್ಲವೆಂದು ಪಣತೊಟ್ಟು, ಪುನಃ ದಿಲ್ಲಿಯ ಸುಲ್ತಾನನಿಗೆ ಅರಿಕೆ ಮಾಡಿಕೊಂಡ.

ಆಗ ದಿಲ್ಲಿಯಾಳುತ್ತಿದ್ದವನು ಮಹಮ್ಮದ ಬಿನ್ ತುಗಲಕ್. ಆತನ ಸೇನಾಪತಿಗಳಲ್ಲೆಲ್ಲ ವಿಶೇಷ ಪ್ರಸಿದ್ಧ ಪಡೆದಿದ್ದವನು ನೇಮಿಖಾನ. ದಕ್ಷಿಣದ ಭಾರತದ ಮೇಲೆ ಧಾಳಿ ಮಾಡಿ, ಕಾಕತೇಯರು, ಸೇವುಣರು, ಹೊಯ್ಸಳರೇ ಮೊದಲಾದವರಿಂದ ಕಪ್ಪುಕಾಣಿಕೆ ದೊರಕಿಸಿದ್ದವನು ನೇಮಿಖಾನನೇ.

ತುಗಲಕನಿಗೆ ಬಾಬಮಿ ಎಂಗ ಮಗಳಿದ್ದಳು. ಅವಳು ಅತ್ಯಂತ ಚೆಲುವೆಯೂ, ಗುಣವತಿಯೂ ಆಗಿದ್ದಳು. ಬಾಬಮಿಯ ಮೇಲೆ ಸುಲ್ತಾನನ ಪ್ರೀತಿ – ವಾತ್ಸಲ್ಯ ಬಹಳ. ಕುಮಾರರಾಮನ ರೂಪದ ಬಗೆಗೂ ಶೌರ್ಯ – ಧೈರ್ಯಗಳ ಬಗೆಗೂ ಸಮರ ಪಟುತ್ವದ ಬಗೆಗೂ ಅನೇಕರಿಂದ ಕೇಳಿ ತಿಳಿದು ಅವನಲ್ಲಿ ಅನುರಕ್ತಳಾಗಿದ್ದಳು ಬಾಬಮಿ. ದಕ್ಷಿಣ ದೇಶಕ್ಕೆ ಹೋಗಿ ಬಂದಿದ್ದ ಸುಲ್ತಾನರ ಗೂಢಾಚಾರರ ಮೂಲಕ ರಾಮನದೊಂದು ಭಾವದಿತ್ರವೂ ಅವಳಿಗೆ ದೊರೆಕಿದ್ದಿತು. ಅದನ್ನು ನೋಡಿದ ಮೇಲಂತೂ ಅವಳ ನಿರ್ಧಾರ ಗಟ್ಟಿಯಾಯಿತು. ತಾನು ವಿವಾಹವಾಗುವುದಾದರೆ ರಾಮನನ್ನೇ ಆಗುವುದು; ಅದಾಗದಿದ್ದರೆ ಅವಿವಾಹಿತೆಯಾಗಿಯೇ ಉಳಿಯುವುದು ಎಂದು ಸಂಕಲ್ಪ ಮಾಡಿಕೊಂಡು ಆ ಪ್ರಕಾರ ಸುಲ್ತಾನನಿಗೂ ತಿಳಿಸಿದಳು.

ಈ ಮಾತನ್ನು ಕೇಳಿ ಹೌಹಾರಿದ ಸುಲ್ತಾನ, ಅದು ಸಾದ್ಯವೇ ಇಲ್ಲ ಎಂದು ತಿಳುವಳಿಕೆ ಹೇಳಿದ. ಮುದ್ದಿನ ಮಗಳು ಕೇಳಲಿಲ್ಲ. ರಾಮನ ಧ್ಯಾನದಲ್ಲಿ ಅನ್ನ ನೀರನ್ನೂ ತೊರೆದಳು. ಅವಳು ತನ್ನ ಹಟ ತ್ಯಜಿಸುವುದಿಲ್ಲವೆಂದು ಮನವರಿಕೆಯಾಗುತ್ತಲೂ ಸುಲ್ತಾನನೇ ಬಾಬಮಿಯನ್ನು ಸಂತೈಸಿದ. ರಾಮನನ್ನು ದಿಲ್ಲಿಗೇ ಕರೆಸಿಕೊಂಡು ಅವಳೊಡನೆ ಮದುವೆ ಮಾಡಿಸುವುದಾಗಿ ವಚನ ಕೊಟ್ಟ.

ಸುಲ್ತಾನನ ಫರ್ಮಾನ್

ರಾಯಭಾರಿಯ ಮೂಲಕ ಕಂಪಿಲರಾಯನಿಗೆ ಫರ್ಮಾನ್ ಹೋಯಿತು. “ನಿಮ್ಮ ರಾಮನನ್ನು ನಮ್ಮ ಪ್ರೀತಿಯ ಪುತ್ರಿ ಬಾಬಮಿ ಮೆಚ್ಚಿಕೊಂಡಿದ್ದಾಳೆ. ಅವನನ್ನು ನಮ್ಮ ಅಳಿಯನನ್ನಾಗಿ ಮಾಡಿಕೊಳ್ಳಲು ನಮಗೂ ಆಸೆ. ತಕ್ಷಣವೇ ರಾಮನನನ್‌ಉ ದಿಲ್ಲಿಗೆ ಕಳುಹಿಸುವುದು. ಈ ಸಂಬಂಧ ನಿಮಗೆ ಒಪ್ಪಿತವಾಗದಿದ್ದರೆ ನಾವು ಕಳುಹಿಸುವ ಪಾದುಕೆಗಳಿಗೆ ಚಿನ್ನ ಅರ್ಪಿಸಿ ವಂದಿಸುವುದು” ಎಂದು ಅದರಲ್ಲಿ ಬರೆದಿತ್ತು.

ಫರ್ಮಾನನ್ನು ಓದಿಸಿಕೊಳ್ಳುತ್ತಲೂ ಕಂಪಿಲರಾಯನ ಮುಖ ಕಳೆಗುಂದಿತು. ಓರುಗಲ್ಲಿನವರ ಪೀಡೆ ತೊಲಗುತ್ತಲೂ ಈಗ ದಿಲ್ಲಿಯವರ ಉಪಟಳಕ್ಕಾರಂಭವಾಯಿತಲ್ಲ ಎಂದು ಚಿಂತಿಸುತ್ತ, ಆಸ್ಥಾನದಲ್ಲಿ ಉಪಸ್ಥತನಿದ್ದ ಕುಮಾರನತ್ತ ನೋಡಿದ ಕಂಪಿಲರಾಯ.

ಆಗ ಕುಮಾರರಾಮ ತಂಬು ಗಾಂಭೀರ್ಯದಿಂದ ಹೇಳಿದ: “ದಿಲ್ಲಿಯ ರಾಯಭಾರಿಗಳು ನಮ್ಮನ್ನು ಕ್ಷಮಿಸಲಿ. ಸುಲ್ತಾನರ ಆಜ್ಞೆಯಂತೆ ವರ್ತಿಸಲು ನನಗಂತೂ ಶಕ್ಯವಿಲ್ಲ. ನಾನು ಈಗಾಗಲೇ ಮದುವೆಯಾಗಿರುವ ಹೆಂಡತಿಯರನ್ನು ಬಿಟ್ಟು ಉಳಿದ ಹೆಂಗಸರೆಲ್ಲ ನನ್ನ ಸಹೋದರಿಯರೆಂದು ಪ್ರತಿಜ್ಞೆ ಮಾಡಿದ್ದೇನೆ. ನಾನು ಇನ್ನೊಬ್ಬ ಸ್ತ್ರೀಯನ್ನು ವರಿಸುವಂತೆಯೇ ಇಲ್ಲ.”

“ಹಾಗಾದರೆ…. ಸುಲ್ತಾನರಿಗೆ ತಮ್ಮ ಉತ್ತರವೇನು?” ಎಂದು ರಾಯಭಾರಿ.

“ಉತ್ತರವೇ? ತಮ್ಮ ಪಾದುಕೆಗಳಿಗೆ ವಂದಿಸಿ, ಹೊನ್ನು ಸುರಿಯಬೇಕೆಂದೂ ಅವರು ಅಪ್ಪಣ ಮಾಡಿದ್ದಾರೆ, ಅಲ್ಲವೆ? ಎಲ್ಲಿ ಆ ಪಾದುಕೆಗಳು?” ಎಂದ ಕುಮಾರರಾಮ. ಆ ಪಾದುಕೆಗಳನ್ನು ಮೆಟ್ಟಿಕೊಂಡು ನಡೆದಾಡತೊಡಗಿದ ರಾಮ.

“ಸಾಕ್ಷಾತ್ ಮೃತ್ಯುವನ್ನೇ ನೀವು ಕೆಣಕುತ್ತಿದ್ದೀರಿ. ನಿಮಗಾಗಲಿ, ನಿಮ್ಮ ರಾಜ್ಯಕ್ಕಾಗಲಿ ಒಳ್ಳೆಯದಾಗುವುದಿಲ್ಲ” ಎಂದು ಹೇಳಿ ರಾಯಭಾರಿ ಹೊರಟುಹೋದ.

ತನ್ನ ಫರ್ಮಾನಿಗೂ ಪಾದುಕೆಗಳಿಗೂ ಕುಂತಳದ ರಾಜಧಾನಿಯಲ್ಲಿ ಲಭಿಸಿದ ದುರ್ಗತಿಯನ್ನು ಕೇಳಿ ಕ್ರೋಧದಿಂದ ಕನಲಿದ ಸುಲ್ತಾನ. ಒಡನೆಯೇ ನೇಮಿಖಾನನನ್ನು ಕರೆಸಿ, ಕುಂತಳದ ಸೊಕ್ಕು ಮುರಿದು, ರಾಮನನ್ನು ಹೆಡ ಮುರಿ ಬಿಗಿದು ದಿಲ್ಲಿಗೆ ಎಳೆತರಬೇಕೆಂದು ಕಟ್ಟಪ್ಪಣೆ ವಿಧಿಸಿ ಕಳುಹಿಸಿದ.

ಹೊಯ್ಸಳರ ಗರ್ವಭಂಗ
ಕುಂತಳದ ಏಳಿಗೆಯನ್ನು ಸಹಿಸದ ಹುಳಿಹೇರಿನ ಮರುಭೂಪಾಲ ಆಗಾಗ ಕಿರುಕುಳ ಕೊಡುತ್ತಲಿದ್ದ. ರಾಮನ ಆದೇಶದಂತೆ ಬುಕ್ಕಣ್ಣ ದಂಡು ತೆಗೆದುಕೊಂಡು ಹೋಗಿ ಮರುಭೂಪಾಲನನ್ನು ಸೋಲಿಸಿ ಕಪ್ಪ ವಸೂಲು ಮಾಡಿಕೊಂಡು ಬಂದ. ತನ್ನ ಮಾಂಡಲಿಕನಾದ ಮಾರನನ್ನು ಕುಂತಳದವರು ಸೋಲಿಸಿದ ಸಮಾಚಾರ ತಿಳಿಯುತ್ತಲೂ ಹೊಯ್ಸಳ ಬಲ್ಲಾಳರಾಯನ ಸಿಟ್ಟು ನೆತ್ತಿಗೇರಿತು. ಕುಂತಳದವರ ಸೊಕ್ಕು ಮುರಿಯೋಣವೆಂದುಕೊಂಡು ಆತ ದಂಡೆತ್ತಿ ಬಂದ. ಕುಮ್ಮಟದುರ್ಗದ ಸಮೀಪದಲ್ಲಿದ್ದ ಮೈದಾನದಲ್ಲಿದ್ದ ಯುದ್ಧ ಪ್ರಾರಂಭವಾಯಿತು. ಗಾಳಿಯಲ್ಲಿಯೇ ಧಾವಿಸುವಂತೆ ಚಲಿಸುತ್ತಿದ್ದ ಬೊಲ್ಲನನ್ನೇರಿ ರಾಮ ಅವತರಿಸಿದ. ಕುಂತಳದ ಸೈನ್ಯದಲ್ಲಿ ವಿದ್ಯುತ್ ಸಂಚಾರವಾದಂತಾಯಿತು. ಅವರು ನೂರ್ಮಡಿ ಉತ್ಸಾಹದಿಂದ ವೈರಿಗಳನ್ನು ತರಿದು ಹಾಕತೊಡಗಿದರು. ಇಪ್ಪತ್ತು ಸಾವಿರ ಸೈನಿಕರನ್ನೂ ಲಕ್ಷಾಂತರ ಹೊನ್ನು ಬೆಲೆ ಬಾಳುವ ಸಾಮಗ್ರಿಗಳನ್ನೂ ಕಳೆದುಕೊಂಡು ಬಲ್ಲಾಳರಾಯ ಪಲಾಯನ ಮಾಡಿದ. ಆದರೆ ಆತ ಸುಮ್ಮನೆ ಕುಳಿತಿರಲಿಲ್ಲ; ಕುಮಾರರಾಮನನ್ನು ನಾಶಗೊಳಿಸಲು ದಿಲ್ಲಿಯ ಸುಲ್ತಾನನಿಗೆ ಬಿನ್ನವಿಸಿಕೊಂಡ.

ಬಾದುರಖಾನನ ಪ್ರಕರಣ

ತುಗಲಕನ ಸೋದರಳಿಯ ಬಾದುರಖಾನ್ ಸಾಗರ ಪ್ರಾಂತದ ರಾಜ್ಯಪಾಲನಾಗಿದ್ದ. ಕುಮಾರರಾಮನ ಬಗೆಗೆ ಬಾದುರಖಾನನಿಗೆ ತುಂಬ ಮೆಚ್ಚುಗೆ. ಪಿಸುಣರ ಮಾತು ಕೇಳಿ ರಾಮನ ವಿರುದ್ಧ ಯುದ್ಧ ಹೂಡುವುದು ಸರಿಯಲ್ಲ ವೆಂದು ಆತ ತನ್ನ ಮಾವನಾದ ಸುಲ್ತಾನನಿಗೆ ಸಲಹೆ ಮಾಡಿದ. ಆದರೆ ತನ್ನ ಪಾದುಕೆಗಳಿಗಾದ ಅಪಮಾನದಿಂದ ರೋಷಗೊಂಡಿದ್ದ ಸುಲ್ತಾನ ಆ ಸಲಹೆಗೆ ಕಿವಿಗೊಡಲಿಲ್ಲ. ಅಷ್ಟು ಮಾತ್ರವಲ್ಲ, ಸೋದರಳಿಯನ ಬಗೆಗೇ ಸಂಶಯಗೊಂಡು ಅವನನ್ನು ಕೊಲ್ಲಿಸಲು ಆಜ್ಞೆ ಮಾಡಿದ. ಅದರ ಸುಳಿವು ತಿಳಿಯುತ್ತಲೂ ಬಾದುರಖಾನ್ ತಲೆಮರೆಸಿಕೊಂಡು ದಿಲ್ಲಿಯಿಂದ ಹೊರಟುಬಂದ. ನಾಡಿನ ಯಾವ ರಾಜನೂ ಅವನಿಗೆ ಆಶ್ರಯ ನೀಡಲಿಲ್ಲ. ಕೊನೆಗೆ ಕುಂತಳಕ್ಕೆ ಬಂದು ರಾಮನಿಗೆ ಶರಣುಹೋದ. ರಾಮ ಅವನಿಗೆ ಅಭಯವಚನ ನೀಡಿದ.

ಆ ಸಮಾಚಾರ ತಿಳಿಯುತ್ತಲೂ ತುಗಲಕ್ ಮಹಮ್ಮದ್ ಇನ್ನಷ್ಟು ಕಿಡಿಕಿಡಿಯಾದ. ಕುಂತಳವನ್ನು ಸುಟ್ಟು ಬೂದಿ ಮಾಡಬೇಕೆಂದು ನೇಮಿಖಾನನಿಗೆ ಫರ್ಮಾನ್ ಹೋಯಿತು.

ಭಯಂಕರ ಯುದ್ಧ

ದಿಲ್ಲಿಯ ಸೇನಾಪತಿಗಳೂ ಬಲ್ಲಾಳರಾಯ, ಪ್ರತಾಪರುದ್ರ, ಮಾರಭೂಪ ಮೊದಲಾದ ದಕ್ಷಿಣದ ದೊರೆಗಳೂ ತಮ್ಮ ತಮ್ಮ ಸೈನ್ಯಗಳ ಸಮೇತವಾಗಿ ಕುಮ್ಮಟದುರ್ಗಕ್ಕೆ ಮುತ್ತಿಗೆ ಹಾಕಿದರು. ಐದು ಲಕ್ಷಕ್ಕಿಂತಲೂ ಹೆಚ್ಚು ಸೈನಿಕರಿದ್ದ ಆ ಸೈನ್ಯದ ಪಾಳಯಗಳು ಬಲು ದೂರದವರೆಗೆ ಪಸರಿಸಿ, ಒಂದು ಪುಟ್ಟ ಸಮುದ್ರದಂತೆಯೇ ಕಾಣುತ್ತಿತ್ತು.

ಕುಂತಳದ ಸೈನ್ಯವೂ ಸಣ್ಣದೇನೂ ಆಗಿರಲಿಲ್ಲ. ತಮ್ಮ ತಾಯಿನಾಡಿನ ರಕ್ಷಣೆಗಾಗಿ ಬೇಡರು, ಒಡ್ಡರು, ಕುರುಬರು, ಕ್ಷತ್ರಿಯರು, ಒಕ್ಕಲಿಗರು, ನೇಕಾರರು, ಕುಂಬಾರರು, ಕಮ್ಮಾರರು, ತಳವಾರರು ಎಲ್ಲರೂ ತಮ್ಮ ತಮ್ಮ ಕೆಲಸಗಳನ್ನು ತ್ಯಜಿಸಿ ರಾಮನ ಸೈನ್ಯ ಸೇರಿಕೊಂಡರು. ಕುಮಾರ ರಾಮನಂಥ ಮೂಲೋಕದ ಗಂಡನ ನೇತೃತ್ವದಲ್ಲಿ ಕಾದಾಡುವುದೇ ಒಂದು ಹೆಮ್ಮೆಯ ಸಂಗತಿಯೆಂದು ಅವರೆಲ್ಲರೂ ತಿಳಿದಿದ್ದರು.

ತನ್ನ ಸೈನ್ಯದಲ್ಲಿ ಎಂಟು ವಿಭಾಗಗಳನ್ನು ಮಾಡಿ, ಒಂದೊಂದು ದಿಕ್ಕಿಗೆ ಕಳುಹಿಸಿದ ಕುಮಾರರಾಮ, ಕಾಡುಗಳಲ್ಲಿ ಕಣಿವೆಗಳಲ್ಲಿ ದಾರಿಯ ತಿರುವುಗಳಲ್ಲಿ ಇಳುಕಲುಗಳಲ್ಲಿ, ಹಳ್ಳ-ಕೊಳ್ಳಗಳಲ್ಲಿ ಅವಿತುಕೊಂಡಿದ್ದು, ವೈರಿಗಳು ಎಚ್ಚರ ತಪ್ಪಿದಾಗಲೆಲ್ಲ ಮಿಂಚಿನ ದಾಳಿ ಮಾಡಿ ಅವರನ್ನು ಬಲಿಹಾಕಬೇಕೆಂದು ಸೂಚನೆ ಕೊಟ್ಟ. ವೈರಿಗಳ ಸಂಖ್ಯೆ ತಮ್ಮ ದಂಡಿನ ಸಂಖ್ಯೆಗಿಂತ ಹತ್ತು ಪಾಲು ಅಧಿಕವಾಗಿದ್ದುದರಿಂದ, ಗೆಲುವು ಸಾಧಿಸಲು ಇಂಥ ಯುದ್ಧ ತಂತ್ರ ಅಗತ್ಯವಾಗಿತ್ತು.

ಆ ತಂತ್ರವನ್ನು ಕುಶಲದಿಂದ ಬಳಸಿಕೊಂಡು, ಮುಂಗಾರು ಮಿಂಚಿನಂತೆ ವೈರಿಗಳ ಮೇಲೆರಗಿ ಅವರನ್ನು ಕತ್ತರಿಸಿ ಹಾಕಿದರು ಕುಂತಳದ ವೀರರು. ಕುಮಾರರಾಮ ಬೊಲ್ಲನನ್ನೇರಿ ನಡುರಾತ್ರಿಯಲ್ಲಿ ನೇಮಿಖಾನನ ಪಾಳಯದ ಮೇಲೆ ಬಿದ್ದು ಶತ್ರುಗಳನ್ನು ಚೂರು ಚೂರು ಮಾಡಿದ. ಆ ಭಯಂಕರ ಆಘಾತವನ್ನು ತಡೆದುಕೊಳ್ಳಲಾರದೆ ದೆಹಲಿಯ ಸೈನ್ಯದ ಅಧಿಕಾರಿಗಳು ಜೀವ ಉಳಿಸಿಕೊಂಡು ಓಡಿ ಹೋದರು. ಕಾಟಣ್ಣ – ಬುಕ್ಕಣ್ಣರಿಂದ ಏಟು ತಿಂದು ಬಲ್ಲಾಳರಾಯ, ಪ್ರತಾಪರುದ್ರ ಮೊದಲಾದವರೂ ಪಲಾಯನ ಮಾಡಿದರು.

ಶುಲದ ಹಬ್ಬ

ಕುಂತಳನಾಡು ಮತ್ತೆ ವಿಜಯೋತ್ಸವವನ್ನಾಚರಿಸಿತು. ಕುಮಾರರಾಮನ ಕೀರ್ತಿ ಅಖಂಡ ಭಾರತದಲ್ಲೆಲ್ಲ ಪಸರಿಸಿತು. ಅದೇ ಸಂತಸದ ಸಮಯದಲ್ಲಿಯೇ ರಾಮನಿಗೆ ಯುವರಾಜ್ಯಾಭಿಷೇಕವೂ ನಡೆಯಿತು. ನಾಶವಾಗಿದ್ದ ದೇವಾಲಯಗಳನ್ನು ಪುನಃ ನಿರ್ಮಿಸಲಾಯಿತು. ಕೆರೆ – ಕಾಲುವೆ – ಬಾವಿಗಳನ್ನು ಕಟ್ಟಿಸಿ ಪ್ರಜೆಗಳಿಗೆ ಅನುಕೂಲ ಮಾಡಿಕೊಡಲಾಯಿತು.

ಕುಂತಳದವರು ವಿಜೃಂಭಣೆಯಿಂದ ಆಚರಿಸುವ ಶೂಲದ ಹಬ್ಬ ಸಮೀಪಿಸಿತು. ಆ ಹಬ್ಬದಲ್ಲಿ ಭಾಗವಹಿಸಲು ಅನೇಕ ರಾಜರನ್ನೂ, ಪಾಲೆಯಗಾರರನ್ನೂ ಗೌಡರನ್ನೂ ಆಮಂತ್ರಿಸಲಾಯಿತು. ಅವರೆಲ್ಲರೂ ತಮ್ಮ ತಮ್ಮ ಶೂಲಗಳನ್ನು ಅಲಂಕರಿಸಿ ಪೂಜಿಸಲು ಅಣಿಯಾದರು. ಅರಮನೆಯ ವಿಶಾಲವಾದ ಅಂಗಳದಲ್ಲಿ ಉತ್ಸವ ನಡೆಯಿತು. ಕಂಪಿಲ ದೊರೆ ತನ್ನ ಉಚ್ಚಾಸನದಲ್ಲೂ, ರಾಮನೂ, ಇನ್ನಿತರ ರಾಜಕುಮಾರರೂ, ಆಮಂತ್ರಿತ ದೊರೆಗಳೂ ಉಚಿತವಾದ ಆಸನಗಳಲ್ಲೂ ಮಂಡಿಸಿದರು. ಅಂತಃಪುರವಾಸಿನಿಯರು ವೇದಿಕೆಯ ಹಿಂಭಾಗದಲ್ಲಿ ಪರದೆಯ ಮರೆಯಲ್ಲಿ ಕುಳಿತುಕೊಂಡರು. ಕಂಪಿಲ ರಾಯನ ಕಿರಿಯ ಹೆಂಡತಿ ರತ್ನಾಜಿಯೂ ತನ್ನ ಸಖಿ ಸಂಗಿಯೊಡನೆ ಹೊರಗೆ ಬಂದು ತನ್ನ ಪ್ರಾಸಾದದ ಮೊಗಸಾಲೆಯಲ್ಲಿ ಕುಳಿತಳು.

ರತ್ನಾಜಿಗೆ ಇನ್ನೂ ಚಿಕ್ಕ ವಯಸ್ಸು. ೨೬-೨೭ ಇರಬಹುದು, ಅಷ್ಟೆ. ಅವಳ ಅಲೌಕಿಕ ರೂಪಕ್ಕೆ ಮರುಳಾಗಿ ದೊರೆ ಆಕೆಯನ್ನು ವರಿಸಿದ್ದ. ತನ್ನ ತಂದೆಯ ವಯಸ್ಸಿನ ಕಂಪಿಲರಾಯನನ್ನು ಮದುವೆಯಾಗಲು ರತ್ನಾಜಿಗೆ ಕೊಂಚವೂ ಮನಸ್ಸಿರಲಿಲ್ಲ. ಪಟ್ಟೆ ರಾಣಿಯಾಗಿ, ಆ ಸಂಪದ್ಭರಿತ ರಾಜ್ಯದ ಒಡತಿಯಾಗಬಹುದೆಂಬ ಒಂದು ಆಸೆಯಿಟ್ಟುಕೊಂಡು ಮದುವೆಗೆ ಸಮ್ಮತಿಸಿದ್ದಳು. ಆದರೆ, ಹೊಸಮಲೆ ದುರ್ಗಕ್ಕೆ ಬಂದ ಮೇಲೂ ಅವಳ ಮಹತ್ವಾಕಾಂಕ್ಷೆ ಈಡೇರಲಿಲ್ಲ. ಹರಿಯಾಲದೇವಿ ಅಲಂಕರಿಸಿದ್ದ ಪಟ್ಟ ಮಹಿಷಿಯ ಸ್ಥಾನ ರತ್ನಾಜಿಗೆ ಲಭಿಸಿರಲಿಲ್ಲ. ಅದರಿಂದಾಗಿ ಆಕೆ ಮನಸ್ಸಿನಲ್ಲಿಯೇ ಧುಮು ಧುಮಿಸುತ್ತಿದ್ದಳು.

ರತ್ನಾಜಿಯ ಉನ್ಮಾದ

ಉತ್ಸವದ ವೇದಿಕೆಯ ಮೇಲೂ ಅಂಗಳದಲ್ಲೂ ನೆರೆದಿದ್ದ ರಾಜಕುಮಾರನನ್ನು ತನ್ನ ಒಡತಿಗೆ ತೋರಿಸುತ್ತ ಅವರ ಹೆಸರು – ದೆಸೆ ವಿವರಿಸತೊಡಗಿದಳು ಸಂಗಿ. ಅಣ್ಣ ಭೈರವದೇವ, ಕಾಟಣ್ಣ, ಸಂಗಮದೇವ, ಹರಿಹರರಾಯ, ಬುಕ್ಕಣ್ಣ, ಸಾಯಿದೇವ, ಮಾಯಿದೇವ, ಗಂಗರಾಜ ಮೊದಲಾದವರನ್ನು ತೋರಿಸಿದುದಾದ ಮೇಲೆ, ಸಡಗರದಲ್ಲಿ ನಿಧಾನವಾಗಿ ಅಡಿಯಿಡುತ್ತ ಬರುತ್ತಿದ್ದ. ಸರ್ವಾಂಗ ಸುಂದರನಾದ ಯುವಕನೊಬ್ಬನನ್ನು ಕಂಡು ರತ್ನಾಜಿ ಮೂಕವಿಸ್ಮಿತಳಾದಳು. ಅವಳ ಹೃದಯದ ಮಿಡಿತ ಕೊಂಚಕಾಲ ನಿಂತಂತಾಯಿತು.

“ಅವನಾರಮ್ಮ ಸಂಗೀ? ಆ ಮನ್ಮಥನಂಥ ಪುರುಷ?”

“ನೀವು ನೋಡಿಲ್ಲವೇ ಅವರನ್ನು? ಅವರೇ ಅಲ್ಲವೇ ನಮ್ಮ ಯುವರಾಜರು? ಹರಿಯಾಲ ಮಹಾರಾಣಿಯವರ ಕುಮಾರರಾಮರು? ದಿಲ್ಲಿಯ ಸುಲ್ತಾನನಿಗೂ ಮಣ್ಣು ತಿನ್ನಿಸಿದ ಮಹಾವೀರರು?

ಆತ ತನ್ನ ಮಲಮಗನೆಂಬುದು ಗೊತ್ತಾದ ಮೇಲೂ ರತ್ನಾಜಿಯ ಮೋಹವಿಳಿಯಲಿಲ್ಲ. “ನಾನೆಂಥಾ ದುರ್ದೈವಿಯೇ ಸಂಗೀ!? ಇಂಥ  ಸುಂದರನ ಕೈ ಹಿಡಿಯುವ ಬದಲು ಮುದುಕನಾಗಿರುವ ಇವನ ತಂದೆಯ ಮಡದಿಯಾದೆನಲ್ಲ!” ಎಂದು ಹಲುಬಿದಳು. ಕಣ್ಣೆವೆಗಳನ್ನು ಪಿಳು ಕಿಸದೆ ರಾಮನನ್ನು ನೋಡಿಯೇ ನೋಡಿದಳು. “ಇದು ತಪ್ಪು” – ವಿವೇಕ ಬೋಧಿಸಲು ಪ್ರಯತ್ನಿಸಿ ಸಂಗಿಯೂ ವಿಫಲಳಾದಳು. ರಾಮನ ಪ್ರೀತಿ ಇಲ್ಲದೆ ತಾನು ಜೀವಿಸುವುದೇ ಅಶಕ್ಯವೆಂದ ರತ್ನಾಜಿ ಮತ್ತೇ ಮತ್ತೆ ಹೇಳಿ, ಅವನನ್ನು ಭೆಟ್ಟಿ ಮಾಡಿಸುವಂತೆ ಸಂಗಿಯನ್ನು ಬೇಡಿಕೊಂಡಳು. ಸಂಗಿಗೆ ಬೇರೆ ದಾರಿಯೇ ಉಳಿಯಲಿಲ್ಲ.

ಅಲ್ಲೊಂದು ಬೇಟೆ; ಇಲ್ಲೊಂದು ಬೇಟೆ!

ಅರಣ್ಯದಲ್ಲಿನ ಆನೆಗಳಿಂದಲೂ ಹಂದಿಗಳಿಂದಲೂ ರೈತರ ಬೆಳೆಗಳಿಗೆ ನಷ್ಟವಾಗುತ್ತಿದ್ದ ವರದಿ ಬಂದುದರಿಂದ, ಷಿಕಾರಿಯೆಂದರೆ ಜನ್ಮತಃ ಪ್ರೀತಿಯಿದ್ದ ಕಂಪಿಲರಾಯ ವಿತ ಪರಿವಾರದೊಡನೆ ಬೇಟೆಯಾಡಲು ಹೊರಟು ಹೋದ. ರಾಮನಿಗೂ ಅಷ್ಟೇ, ಬೇಟೆಯೆಂದರೆ ಬಲು ಇಷ್ಟ. ಆದರೆ, ಕುಂತಳಕ್ಕೆ ಸುತ್ತಲೂ ವೈರಿಗಳು. ದೊರೆ ರಾಜಧಾನಿ ಯಲ್ಲಿ ಇಲ್ಲದಿದ್ದಾಗ ಯುವರಾಜನಾದರೂ ಇರಲೇ ಬೇಕಾದುದು ಅಗತ್ಯವಾಗಿದ್ದಿತು. ಎಂತಲೇ ಆತ ಕುಮ್ಮಟದುರ್ಗದಲ್ಲಿಯೇ ಉಳಿದುಕೊಂಡ.

ಶೂಲದ ಹಬ್ಬಕ್ಕೆ ದಯಮಾಡಿಸಿದ್ದ ಸ್ನೇಹಿತರಾದ ದೊರೆ ಮಕ್ಕಳನೇಕರು ಇನ್ನೂ ರಾಜಧಾನಿಯಲ್ಲಿಯೇ ಇದ್ದರು. ಅವರ ಮನರಂಜನೆಗಾಗಿ ಚೆಂಡಾಟವಾಡಬೇಕೆಂಬ ಮನಸ್ಸಾಯಿತು ಕಾಟಣ್ಣ-ಭೈರವರಿಗೆ. ಮುಮ್ಮಡಿ ಸಿಂಗನ ಕಾಲದ ಮುತ್ತಿನ ಚೆಂಡು ಮಹಾರಾಣಿ ಹರಿಯಾಲ ದೇವಿಯವರ ಹತ್ತಿರ ಇದ್ದುದು ಕಾಟಣ್ಣನಿಗೆ ತಿಳಿದಿದ್ದಿತು. ಅದನ್ನೇ ತೆಗೆದುಕೊಂಡು ಆಡಿದರೆ ಎಲ್ಲರಿಗೂ ಪರಮ ಸಂತೋಷವಾಗುವುದೆಂದು ಹೇಳಿ, ತಾಯಿಯಿಂದ ಅದನ್ನು ತೆಗೆದುಕೊಂಡು ಬರಲು ರಾಮನನ್ನೇ ಕಳಿಸಿದರು.

“ಬೇಡ ಮಗೂ, ಆ ಚೆಂಡಿನ ಸಹವಾಸ!” ಎಂದಳು ತಾಯಿ ಹರಿಯಾಲದೇವಿ.

“ಏಕಮ್ಮ? ಏಕೆ ಬೇಡ?”

“ನಿಮ್ಮ ಹಿರಿಯರು ಮುಮ್ಮಡಿ ಸಿಂಗರು ಹಿಂದೊಮ್ಮೆ ಚೆಂಡಾಟವಾಡುತ್ತಿದ್ದಾಗ ವೈರಿಗಳು ದುರ್ಗಕ್ಕೆ ಮುತ್ತಿಗೆ ಹಾಕಿದ್ದರು. ದುರ್ಗವೇ ಕೈಬಿಟ್ಟುಹೋಗುವ ಪ್ರಸಂಗ ಬಂದಿತ್ತು. ದೇಶವನ್ನಾಳುವ ದೊರೆಗಳಿಗೆ ಇಂಥ ವ್ಯಸನ ಗಳಿರಬಾರದು ರಾಮಯ್ಯ. ಅಲ್ಲದೆ ನಿನ್ನಂಥ ಚೆಲುವರು ಚೆಂಡಾಟ ಆಡುತ್ತಿದ್ದಾಗ ಯಾವಳಾದರೊಬ್ಬ ಮೋಹಿನಿ ನಿನಗೆ ಮರುಳಾಗಿ ಘಾತವಾಗುವ ಸಂಭವವೂ ಉಂಟು. ಚೆಂಡು ಕೊಡಲಾರೆ ರಾಮಯ್ಯ.”

“ಆ ಭಯ ಬೇಡ ಅವ್ವಾ. ಯಾವ ಮೋಹಿನಿಯೂ ನನಗೇನೂ ಮಾಡಳು. ಪರನಾರೀ ಸೋದರ ನಾನು!” ಎಂದೆಲ್ಲ ಹೇಳೀತಾಯಿಯನ್ನು ಒಪ್ಪಿಸಿ, ಮುತ್ತಿನ ಚೆಂಡನ್ನು ತೆಗೆದುಕೊಂಡು ಹೊರಟ ರಾಮ.

ಚೆಂಡಾಟ ನಡೆದಿದ್ದ ಬಯಲಕಿನ ಪಕ್ಕದಲ್ಲಿಯೇ ರತ್ನಾಜಿಯ ಅರಮನೆ. ತುಂಬ ಉತ್ಸಾಹದಿಂದ ಆಟ ಪ್ರಾರಂಭವಾಯಿತು. ಚೆಂಡು ಅಲ್ಲಿಂದಿಲ್ಲಿಗೆ ಪುಟಿಯುತ್ತ, ಎತ್ತರಕ್ಕೆ ಹಾರುತ್ತ, ಆಟ ನೋಡುತ್ತ ಮೈಮರೆತಿದ್ದ ರತ್ನಾಜಿಯ ಬಳಿಗೆ ಬಂದು ಬಿದ್ದಿತು. ಅವಳು, “ಬಲೆಗೆ ಬಿತ್ತು ಬೇಟೆ!” ಎಂದು ಹಿಗ್ಗಿ ಹರ್ಷಿಸುತ್ತ ಚೆಂಡನ್ನು ಅಡಗಿಸಿಟ್ಟಳು.

ದೊರೆಯ ಅವಿವೇಕ

ತಾಯಿ ಹರಿಯಾಲದೇವಿಯ ಮಾತು ನೆನಪಿಗೆ ಬಂದು ರಾಮನ ಎದೆ ನಡುಗಿತು. ರತ್ನಾಜಿಯ ಅಂಗಳ ದಿಂದ ಚೆಂಡನ್ನು ತೆಗೆದುಕೊಂಡು ಬರುವುದೊಂದು ಸಮಸ್ಯೆಯೇ ಆಯಿತು. ಕಂಪಿಲರಾಯ ಇಲ್ಲದಿದ್ದಾಗ ರಾಣಿವಾಸದಲ್ಲಿ ಅಡಿಯಿಡುವುದು ಅನುಚಿತ, ಅಪರಾಧ. ಮುಂದೆ?

ಆದರೂ ಗಟ್ಟಿ ಮನಸ್ಸು ಮಾಡಿ ಕಾಟಣ್ಣನೇ ಹೋಗಿ ಚೆಂಡಿಗಾಗಿ ಕೇಳಿದ. “ಯುವರಾಜನೇ ಬಂದು ತೆಗೆದು ಕೊಂಡು ಹೋಗಲಿ” ಎಂದಳು ರತ್ನಾಜಿ. ಸರಿ, ರಾಮನೇ ಹೋಗಬೇಕಾಯಿತು. ಅವನು ಹತ್ತಿರ ಬರುತ್ತಲೂ ಅವಳ ಮನಸ್ಸು ತೀರ ಕೆಟ್ಟಿತು. ಅವನನ್ನು ಬಗೆಬಗೆಯಾಗಿ ಉಪಚರಿಸಿದಳು. ತನ್ನ ಮನಸ್ಸನ್ನು ತೃಪ್ತಿಪಡಿಸಿದರೆ ಚೆಂಡು ಕೊಡುವುದಾಗಿ ಹೇಳಿದಳು.

“ಅಮ್ಮ, ನೀನು ತನ್ನ ಮಲತಾಯಿ, ಇಂಥ ಮಾತು ಆಡಬಾರದು. ಇಂಥ ಆಸೆ ಪಡಬಾರದು, ಇದು ಅಕ್ಷಮ್ಯವಾದ ಅಪರಾಧ” ಎಂದು ಹೇಳಿ ಅಲ್ಲಿ ನಿಲ್ಲದೆ ಹೊರಟು ಹೋದ ಕುಮಾರರಾಮ. ಹತಾಶಳಾದ, ತಿರಸ್ಕೃತಳಾದ, ಅವಮಾನಿತಳಾದ ರತ್ನಾಜಿ ರಾಮನನ್ನು ಕೊಲ್ಲಿಸಿಯೇ ತೀರುವುದಾಗಿ ಮನಸ್ಸಿನಲ್ಲಿಯೇ ನಿರ್ಧರಿಸಿದಳು.

ಬೇಟೆಯಿಂದ ದೊರೆ ಹಿಂತಿರುಗಿ ಬರುತ್ತಲೂ ರಾಮನ ವಿರುದ್ಧವಾಗಿ ದೂರಿಕೊಂಡಳು. ಚೆಂಡು ತೆಗೆದುಕೊಂಡು ಹೋಗುವ ನಿಮಿತ್ತದಿಂದ ಅರಮನೆಗೆ ಬಂದು ರಾಮ ತನ್ನನ್ನು ಹಿಡಿದು ಎಳೆದು ಹಿಂಸಿಸಿದುದಾಗಿಯೂ ತನ್ನ ಆಕ್ರೋಶ ಕೇಳಿ ಸಂಗಿ ಓಡಿ ಬಂದುದರಿಂದ ತನ್ನ ಅಪಮಾನವಾಗುಗುದು ತಪ್ಪಿತೆಂದೂ ಹೇಳಿದಳು. ದೊರೆ ಸಂಗಿಯನ್ನು ಕರೆಸಿ ಕೇಳಿದಾಗ ಅವಳೂ ರತ್ನಾಜಿಯಂತೆಯೇ ವರದಿಯೊಪ್ಪಿಸಿದಳು. ಸರಿ, ವೃದ್ಧ ದೊರೆ ಪೂರ್ವಾಪರ ವಿಚಾರ ಮಾಡದೆ, ಬೈಚಪ್ಪನಾಯಕನನ್ನು ಕರೆಸಿ ರಾಮನ ತಲೆ ಕಡಿಯುವಂತೆ ಆಜ್ಞೆ ವಿಧಿಸಿದ.

 

"ನೀವು ಇಂಥ ಮಾತನ್ನು ಆಡಬಾರದು"

ಬೈಚಪ್ಪನಾಯಕ ರತ್ನಾಜಿಯ ಕಥೆಯನ್ನು ನಂಬಲಿಲ್ಲ.

ದೊರೆಗೆ ವಿವೇಕ ಹೇಳಿ ನೋಡಿದ ಬೈಚಪ್ಪನಾಯಕ. ಸಿಟ್ಟಿನಿಂದ ಹುಚ್ಚನಂತಾಗಿದ್ದ ದೊರೆಗೆ ಅದು ಹಿಡಿಸಲಿಲ್ಲ. ಸರಿ, ರಾಜಾಜ್ಞೆಯನ್ನಂತೂ ನಡೆಸಲೇಬೇಕಷ್ಟೆ? ಪ್ರಧಾನಿ ರಾಮನನ್ನೂ ಅವನ ಸಂಗಡಿಗರನ್ನೂ ಒಂದು ಗುಪ್ತಸ್ಥಾನದಲ್ಲಿರಿಸಿದ. ರಾಮನಂತೆಯೇ ಮುಖಮುದ್ರೆಯಿದ್ದ ಕಳ್ಳ ಬಂಟನೊಬ್ಬನ ಶಿರಚ್ಛೇದನ ಮಾಡಿಸಿ ಆ ತಲೆಯನ್ನು ತರಿಸಿ ದೊರೆಗೂ, ರತ್ನಾಜಿಗೂ ತೋರಿಸಿದ.

ಮೃತ್ಯುರೂಪಿ ಮಾತಂಗಿ

ರಾಮನ ಸಾವಿನ ವಾರ್ತೆ ಎಲ್ಲೆಡೆಗೂ ಹರಡಿತು. ಕುಂತಳದ ಪ್ರಜೆಗಳೆಲ್ಲರೂ ರಾಜನನ್ನು ಶಪಿಸಿದರು. ರಾಜ್ಯದ ವೈರಿಗಳು ಮಾತ್ರ ಹರ್ಷದಿಂದ ಬೀಗಿದರು. ನೇಮಿಖಾನನ ನೇತೃತ್ವದಲ್ಲಿ ಮತ್ತೆ ಸುಲ್ತಾನನ ಸೈನ್ಯವೂ ಸುತ್ತಲಿನ ಹಿಂದೂರಾಜರ ಸೈನ್ನಗಳೂ ಕುಮ್ಮಟಕ್ಕೆ ಮುತ್ತಿಗೆ ಹಾಕಿದವು.

ಕಂಪಿಲರಾಯನ ಸೈನಿಕರಿಗೆ ಮೊದಲಿನ ಆತ್ಮ ವಿಶ್ವಾಸವಿಲ್ಲ. ಹೋರಾಟದ ಉತ್ಸಾಹವಿಲ್ಲ. ಕುಮಾರ ರಾಮನಿಲ್ಲದೆ ಅವರಿಗೆ ತೋಳೂಗಳೇ ಮೇಲೆ ಏಳದಂತಾಗಿತ್ತು.

ಒಂದೆರಡು ದಿನಗಳಲ್ಲಿಯೇ ಕುಂತಳದ ಸೈನ್ಯ ಧೈರ್ಯ ಕಳೆದುಕೊಂಡಿತು. ರಾಮನಿಲ್ಲದೆ ವೈರಿಗಳನ್ನು ಸೋಲಿಸುವುದು ಅಶಕ್ಯವೆಂದು ಮನವರಿಗೆ ಆಗುತ್ತಲೂ ಕಂಪಿಲರಾಯ ಪಶ್ಚಾತ್ತಾಪದಿಂದ ಕೊರಗತೊಡಗಿದ. ಹೆಂಡತಿಯ ಮಾತು ಕೇಳಿ ಸಿಟ್ಟಿನ ಕೈಯಲ್ಲಿ ಬುದ್ಧಿ ಕೊಟ್ಟು ರಾಮನನ್ನು ಕೊಲ್ಲಿಸಿದುದು ಮಹಾ ಅವಿವೇಕವಾಯಿತೆಂದು ಅವನಿಗನ್ನಿಸತೊಡಗಿತು.

ಸಂಗಮದೇವ ಕಾಲಗದಲ್ಲಿ ಹತನಾದ. ವೈರಿ ಸೈನ್ಯ ಮೇಲೇರಿ ಬರತೊಡಗಿತು. ಇನ್ನು ತಡಮಾಡುವುದು ತರವಲ್ಲವೆಂದುಕೊಂಡು ಬೈಚಪ್ಪನಾಯಕ ಧಾವಿಸಿ ಹೋಗಿ ರಾಮನನ್ನು ಕರೆತಂದ. ಬೊಲ್ಲನನ್ನೇರಿ, ಕತ್ತಿ ಝಳಪಿಸುತ್ತ ಕುಮಾರರಾಮ ಪ್ರಕಟವಾಗುತ್ತಲೂ ಕುಂತಳದ ಸೈನಿಕರಲ್ಲಿ ನವೋತ್ಸಾಹ ಮೂಡಿತು. ಕುಮಾರರಾಮನೂ ಅವನ ಸಂಗಡಿಗರೂ ಸಹ ಮಹಾಪರಾಕ್ರಮದಿಂದ ಹೋರಾಡಿ ವೈರಿಗಳನ್ನು ಪುನಃ ಹೊಡೆದೋಡಿಸಿದರು.

ಕುಮಾರರಾಮ ರಣಭೂಮಿಗೆ ಬಂದ ಸಂಗತಿ ಕಂಪಿಲರಾಯನಿಗೆ ತಿಳಿಯಿತು. ಅವನು ತನ್ನ ಕಿವಿಗಳನ್ನು ನಂಬಲಾರದಾದ.

ಬೈಚಪ್ಪನಾಯಕ ದೊರೆಗೆ ಬಿನ್ನವಿಸಿದ, “ಪ್ರಭುಗಳೇ, ತಮ್ಮ ಅಪ್ಪಣೆಯನ್ನು ನಾನು ಮೀರಿದೆ. ಯುವರಾಜರನ್ನು ಬಚ್ಚಿಟ್ಟೆ. ಕ್ಷಮಿಸಬೇಕು”.

ರಾಜನಿಗೆ ಸಂತೋಷದಿಂದ ಕಣ್ತುಂಬ ನೀರು ಉಕ್ಕಿತು.

ಬೈಚಪ್ಪನಾಯಕ ನಡೆದ ನಿಜಸಂಗತಿಯನ್ನು ಅರಿಕೆ ಮಾಡಿದ. ರಾಣಿ ರತ್ನಾಜಿಯ ಮೋಸವನ್ನು ವಿವರಿಸಿದ.

ವಿಜಯೀವೀರ ರಾಮ ಬಂದು ತಂದೆಯ ಚರಣಗಳಿಗೆರಗುತ್ತಲೂ ದೊರೆ ಅವನನ್ನೆತ್ತಿ ಅಪ್ಪಿಕೊಂಡ. ರಾಮ ಪುನಃ ಪ್ರಕಟವಾದ ಸಮಾಚಾರ ತಿಳಿಯುತ್ತಲೂ ರತ್ನಾಜಿ ವಿಷ ಕುಡಿದು ಅಸು ನೀಗಿದಳು.

ಕುಮ್ಮಟದಿಂದ ತುಸು ದೂರ ಹೋಗಿದ್ದ ವೈರಿಗಳು ಮತ್ತೆ ಒಟ್ಟುಗೂಡಿ ಸುಸಜ್ಜಿತರಾಗಿ, ಅದೇ ತಾನೇ ಅಲ್ಲಿಗೆ ಬಂದಿದ್ದ ಮಾತಂಗಿಯನ್ನು ಮುಂದೆ ಮಾಡಿಕೊಂಡು ಮತ್ತೆ ದುರ್ಗದ ಮೇಲೇರಿ ಬಂದರು. ಆಗಲೂ ಸಹಾ ರಾಮನೂ ಅವನ ಸಂಗಡಿಗರೂ ವೀರಾವೇಶದಿಂದ ಕಾದಾಡಿದರು. ಆದರೆ, ಆನೆಯ ಮೇಲೆ ಕುಳಿತು ಬರುತ್ತಿದ್ದ ಮಾತಂಗಿಯನ್ನು ಎದುರಿಸುವುದು ಮಾತ್ರ ಕಠಿಣವಾಯಿತು. ಹೆಣ್ಣಿನ ಮೇಲೆ ಬಾಣ ಬಿಡುವುದು ಹೇಗೆ? ಅವಳನ್ನು ಕೊಲ್ಲುವುದು ಹೇಗೆ?

ಆತ ಅಸಹಾಯ ಶೂರನಾಗಿ ನಿಂತಿದ್ದುದನ್ನು ಕಂಡು, ಆತನನ್ನು ಕೊಲ್ಲುವುದಾಗಿ ಮೊದಲೇ ಪ್ರತಿಜ್ಞೆ ಮಾಡಿದ್ದ ಮಾತಂಗಿ, ನಿಷ್ಠುರತೆಯಿಂದ ಅವನ ಮೇಲೆ ಬಾಣ ಪ್ರಯೋಗಿಸಿದಳು.

“ರಾಮ ರಾಮಾ!” ಎನ್ನುತ್ತ ಧರೆಗುರುಳಿದ ಕುಮಾರ ರಾಮ. ರಾಮೇಶ್ವರನ ಅನುಗ್ರಹದಿಂದ ಅವತರಿಸಿದ ಆ ಅಮರಜೀವ ರಾಮನಲ್ಲಿಯೇ ಲೀನವಾಯಿತು.

ಮಾತಂಗಿಯ ಇನ್ನೊಂದು ಬಾಣಕ್ಕೆ ಬೊಲ್ಲ ಆಹುತಿಯಾಯಿತು. ಕಂಪಿಲರಾಯ ಹೋರಾಡುತ್ತಾ ಹೋರಾಡುತ್ತಾ ಮಡಿದ. ರಾಣೀವಾಸದವರು ಅಗ್ನಿಪ್ರವೇಶ ಮಾಡಿದರು.

ಮುಗಿಯಿತು ಇಲ್ಲಿಗೆ ಕುಮ್ಮಟದುರ್ಗದ ವೀರ ಕಥೆ; ಕುಮಾರರಾಮನ ಅದ್ಭುತ ಕಥೆ.

ಈಗಲೂ ರಾಯಚೂರು ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಸಮೀಪದಲ್ಲಿರುವ ಕುಮ್ಮಟದುರ್ಗದಲ್ಲಿ ವೈಶಾಖ ಪೂರ್ಣಿಮೆಯ ದಿನ ಕುಮಾರರಾಮನ ಜಾತ್ರೆ ನಡೆಯುತ್ತದೆ.

ಕನ್ನಡಿಗರ ಮನೆ – ಮನೆಗಳಲ್ಲಿ, ಲಾವಣಿಗಳಲ್ಲಿ, ನಾಟಕಗಳಲ್ಲಿ, ಬಯಲಾಟಗಳಲ್ಲಿ, ಹಂತಿಯ ಹಾಡುಗಳಲ್ಲಿ, ಕೋಲಾಟದ ಪದಗಳಲ್ಲಿ, ಸ್ವಾತಂತ್ರ್ಯ ಪ್ರೇಮಿಗಳ, ಸ್ವಾಭಿಮಾನಿಗಳ, ಸಜ್ಜನರ ಹೃದಯಗಳಲ್ಲಿ – ಶಾಶ್ವತ ಸ್ಥಾನ ಪಡೆದಿದ್ದಾನೆ ಕಡುಗಲಿ ಕುಮಾರರಾಮ.