ಒಂದು ಕೃತಿ ಏಕಕಾಲಕ್ಕೆ ಜನಪ್ರಿಯವೂ ಶ್ರೇಷ್ಠವೂ ಆಗಿರಲು ಸಾಧ್ಯವೆ ಎಂಬ ಸಂಶಯಕ್ಕೆ ಸವಾಲಿನಂತೆ ನಿಲ್ಲುವ ಕಾವ್ಯ, ಬಹುಶಃ ಕುಮಾರವ್ಯಾಸ ಭಾರತವೊಂದೇ ಎಂದು ಹೇಳಬಹುದು. ವ್ಯಾಸಭಾರತವನ್ನು ಕಾವ್ಯ ವಸ್ತುವನ್ನಾಗಿ ಮಾಡಿಕೊಂಡು ಕನ್ನಡದಲ್ಲಿ ಕೃತಿರಚನೆಗೆ ತೊಡಗಿದ ಗದುಗಿನ ನಾರಣಪ್ಪ, ತನ್ನನ್ನು ‘ಕುಮಾರವ್ಯಾಸ’ನೆಂದು ಕರೆದುಕೊಳ್ಳುವುದರ ಮೂಲಕ ತಾನು ಮಹರ್ಷಿ ವ್ಯಾಸರ ‘ಕುಮಾರ’ನೆಂಬ ನಿಲುವಿನಲ್ಲಿ ನಿಂತು, ಪರಂಪರೆಯನ್ನು ‘ತಂದೆ-ಮಗ’ನ ಸಂಬಂಧದ ಪರಿಭಾಷೆಯಲ್ಲಿ ವ್ಯಾಖ್ಯಾನಿಸಿದ್ದಾನೆ. ವ್ಯಾಸರು ಆಗಲೇ ನಿರ್ಮಿಸಿರುವ ಮಹಾಭಾರತದ ಕಥಾ ಸಂಪತ್ತಿಗೆ ತಾನು ಒಬ್ಬ ಮಗನಂತೆ ಹಕ್ಕುದಾರನಾಗಿ, ಆತನು ಹಾಕಿಕೊಟ್ಟ ಮಾರ್ಗದಲ್ಲಿ ಅಪ್ಪನಿಗೆ ತಕ್ಕ ಮಗನಾಗಿ, ಆ ಸಂಪತ್ತನ್ನು ಉಳಿಸಿ, ಬಳಸಿ, ಬೆಳೆಸಿಕೊಂಡು ಹೋಗುವುದು ತನ್ನ ಕರ್ತವ್ಯವಾಗಿದೆ ಎನ್ನುವ ಭಾವನೆಯೊಂದು ‘ಕುಮಾರವ್ಯಾಸ’ ಎನ್ನುವ ಅಂಕಿತದ ಮೂಲಕ ಸೂಚಿತವಾಗಿದೆ. ಅಷ್ಟೇ ಅಲ್ಲ, ‘ದುರಿತಕುಲಗಿರಿವಜ್ರ ದಂಡ’ನಾದ ‘ವೇದವಾಸ್ಯ ಗುರುರಾಯ’ನು ಈ ಕವಿಗೆ ‘ತರಳನನು ತನ್ನವನೆನುತ ಪತಿಕರಿಸಿ ಮಗನೆಂದೊಲಿದು ವರವನಿತ್ತನು’ (೧-೧೧). ಹೀಗೆ ವ್ಯಾಸರ ವಾತ್ಸಲ್ಯ ಕೃಪೆಗೆ ಪಾತ್ರನಾದವನು ತಾನೆಂಬ ಶ್ರದ್ಧೆ ಕುಮಾರವ್ಯಾಸನಿಗೆ. ಕುಮಾರವ್ಯಾಸನಿಗಿಂತಲೂ ಹಿಂದೆ ಮತ್ತು ಭಾರತೀಯ ಪರಿಸರದಲ್ಲಿಯೇ ಮೊಟ್ಟಮೊದಲಿಗೆ, ವ್ಯಾಸಭಾರತ ಕಥಾವಸ್ತುವನ್ನು ಕನ್ನಡಕ್ಕೆ ತಂದ ಪಂಪನಿಗೆ ವ್ಯಾಸಭಾರತ ಕಥಾಪರಂಪರೆ ಕಂಡ ರೀತಿಯೆ ಬೇರೆ. ಪಂಪನ ದೃಷ್ಟಿಗೆ ವ್ಯಾಸಭಾರತ ‘ವ್ಯಾಸಮುನೀಂದ್ರ ರುಂದ್ರ ವಚನಾಮೃತವಾರ್ಧಿ.’ ಅದೊಂದು ವಿಸ್ತಾರವಾದ ವಚನಾಮೃತ ಸಮುದ್ರ ‘ಈ ಮಹಾಸಮುದ್ರವನ್ನು ತಾನು ಈಜಿ ದಾಟಿಬಿಡುತ್ತೇನೆ, ನಾನೂ ಒಬ್ಬ ವ್ಯಾಸನೇ ಎಂಬ ಗರ್ವ ನನಗೇನೂ ಇಲ್ಲ’ (ಪಂ. ಭಾ. ೧-೧೩) ಎಂಬ ವಿನಯವನ್ನು ಪ್ರಕಟಿಸಿದರೂ, ಪಂಪನ ಪಾಲಿಗೆ ಅದು ಒಂದು ದೊಡ್ಡ ಸವಾಲಿನಂತೆ ತೋರಿತೆಂಬುದು ನಿಜವಾದ  ಮಾತಾಗಿದೆ. ಪಂಪನಿಗೆ ವ್ಯಾಸಭಾರತ ತಾನು ಎದುರಿಸಬೇಕಾದ ಸಾಗರೋತ್ತರಣ ಸಾಹಸದಂತೆ ತೋರಿದರೆ, ಕುಮಾರವ್ಯಾಸನಿಗೆ ಅದು ವ್ಯಾಸರೇ ‘ಮಗ ನೆಂದೊಲಿದು ವರವನಿತ್ತ’ ಹಾಗೂ ಪಿತ್ರಾರ್ಜಿತವಾಗಿ ತನಗೆ ದತ್ತವಾದ ಮಹಾ ಸಂಪತ್ತಿನಂತೆ ತೋರುತ್ತದೆ. ಈ ಎರಡು ಪ್ರತೀಕಗಳು ವ್ಯಾಸಭಾರತ ಪಂರಪರೆಗೆ ಕನ್ನಡದ ಇಬ್ಬರು  ಮಹಾಕವಿಗಳು ತೋರಿದ ವಿಭಿನ್ನ ಪ್ರತಿಕ್ರಿಯೆಗಳಂತೆ ತೋರುತ್ತವೆ.

ಕುಮಾರವ್ಯಾಸ ಕರ್ನಾಟಕದ ಭಕ್ತಿಪಂಥವೊಂದರ ಪ್ರಮುಖ ಕವಿಯಾಗಿದ್ದಾನೆ. ಭಕ್ತಿಸಾಹಿತ್ಯದ ಬಹುಮುಖ್ಯವಾದ ಒಂದು ಲಕ್ಷಣವೆಂದರೆ, ಕವಿ ಮೂಲತಃ ತನ್ನನ್ನು ತಾನು ಸಾಧಕ ಭಾವದಲ್ಲಿ ನಿಲ್ಲಿಸಿಕೊಳ್ಳುವುದು ಮತ್ತು ತನ್ನ ವ್ಯಕ್ತಿತ್ವ ತನ್ನ ಇಷ್ಟ ದೈವದ ಒಂದು ಉಪಕರಣ ಅಥವಾ ಮಾಧ್ಯಮ ಎಂದು ಭಾವಿಸುವುದು. ಕನ್ನಡದ ವೀರಶೈವ ಭಕ್ತಿ ಚಳುವಳಿಯ ಸಂದರ್ಭದಲ್ಲಿ ಕಾಣಿಸಿಕೊಂಡ ಬಸವಣ್ಣನವರ ವ್ಯಕ್ತಿತ್ವವಾಗಲೀ, ಅನಂತರದ ಕವಿ ಹರಿಹರನ ವ್ಯಕ್ತಿತ್ವವಾಗಲಿ ಇದೇ ಬಗೆಯದು. ವೀರಶೈವ ಭಕ್ತಿ ಚಳುವಳಿಯ ನಂತರ ಕರ್ನಾಟಕದಲ್ಲಿ ಪ್ರವರ್ಧಮಾನಕ್ಕೆ ಬಂದ ಭಾಗವತ ಸಂಪ್ರದಾಯದ ಕುಮಾರವ್ಯಾಸ ಮತ್ತು ಅದರ ಪರಿಣಾಮವಾದ ಹರಿಭಕ್ತಿ ಚಳುವಳಿಯ ದಾಸಶ್ರೇಷ್ಠರೂ ಈ ಭಕ್ತಿಸಾಹಿತ್ಯವನ್ನು ಕನ್ನಡದಲ್ಲಿ ಮುಂದುವರಿಸಿದರು. ಅದರಲ್ಲಿಯೂ ಕುಮಾರವ್ಯಾಸನಲ್ಲಿ ಕಾಣುವ ಉತ್ಕಟವಾದ ಕೃಷ್ಣಭಕ್ತಿ, ಅವನು ಬರೆದ ‘ಕರ್ನಾಟಕ ಭಾರತ ಕಥಾಮಂಜರಿ’ (ಕುಮಾರವ್ಯಾಸ ಭಾರತ ಅಥವಾ ಗದುಗಿನ ಭಾರತ)ಯಂಥ ಮಹಾಕಾವ್ಯದಲ್ಲಿ ಹೆದ್ದೊರೆಯಾಗಿ ಪ್ರವಹಿಸಿದೆ. ಈ ಹಿನ್ನೆಲೆಯಿಂದ ಹೇಳಬಹುದಾದರೆ, ಸಂಸ್ಕೃತದ ವ್ಯಾಸಭಾರತ ಕನ್ನಡದಲ್ಲಿ ‘ಕೃಷ್ಣಕಥೆ’ಯಾಗಿ ಮಾರ್ಪಟ್ಟಿತು. ‘ತಿಳಿಯ ಹೇಳುವೆ ಕೃಷ್ಣಕಥೆಯನ್ನು ಇಳೆಯ ಜಾಣರು ಮೆಚ್ಚುವಂತಿರೆ’ (೧-೧೩) ಎಂಬ ಮಾತಿನಲ್ಲಿ ಇದು ಸೂಚಿತವಾಗಿದೆ. ಹೀಗೆ, ನಾಯಕ ಯಾರೆಂದು ನಿರ್ದಿಷ್ಟವಾಗಿ ಗುರುತಿಸಲು ಅಸಾಧ್ಯವಾದ ವ್ಯಾಸಮಹಾಭಾರತದ ಕಥಾವಸ್ತುವನ್ನು ‘ಕೃಷ್ಣ ಕೇಂದ್ರಿತ’ ಚೌಕಟ್ಟಿಗೆ ತಂದದ್ದು ಕುಮಾರವ್ಯಾಸನ ವಿಶಿಷ್ಟತೆಯಾಗಿದೆ; ಮತ್ತು ಇದೇ ರೀತಿ ಮಹಾಭಾರತ ಕಥಾವಸ್ತುವನ್ನು, ‘ಅರ್ಜುನಕೇಂದ್ರಿತ’ ಚೌಕಟ್ಟಿಗೆ ತಂದವನು ಪಂಪ ಎಂಬುದನ್ನು ನೆನೆದರೆ, ಕನ್ನಡದ ಇಬ್ಬರು ಮಹಾಕವಿಗಳಾದ ಪಂಪ ಕುಮಾರವ್ಯಾಸರು ಮೂಲಭಾರತಕ್ಕೆ ತಮ್ಮ ಕಾಲ-ದೇಶ-ಪರಿಸರಗಳಲ್ಲಿ ಕೊಟ್ಟ ರೂಪ ಎಂಥದೆಂಬುದು ಸ್ಪಷ್ಟವಾಗುತ್ತದೆ. ಆದರೆ ವೈದಿಕ ಪರಂಪರೆಯವನೇ ಆದ ಕುಮಾರವ್ಯಾಸ ಅದೇ ಪರಂಪರೆಯ ವ್ಯಾಸಭಾರತದ ಕಥಾವಸ್ತುವನ್ನು ತನಗೆ ದತ್ತವಾದ ಪಿತ್ರಾರ್ಜಿತವಾದ ಸಂಪತ್ತೆಂಬಂತೆ ಭಾವಿಸುತ್ತ ತಾನು ಆ ವ್ಯಾಸರ ಮಗನೆಂದು ಕರೆದುಕೊಳ್ಳುವುದು ಸಹಜವಾದಷ್ಟು, ಧರ್ಮದಲ್ಲಿ ಜೈನನಾದ ಪಂಪನಿಗೆ ಸಹಜವಾಗಲಿಲ್ಲ. ಹೀಗಾಗಿ ಪಂಪನು ವ್ಯಾಸರ ಮೇಲಿನ ಗೌರವದಿಂದಲೋ ಅಥವಾ ತನ್ನ ಕಾಲದ ಲೋಕ ಜೀವನದ ಅಭಿವ್ಯಕ್ತಿಗೆ ಮಹಾಭಾರತದಂಥ ಕಥಾವಸ್ತು ಸರಿಯಾದ ‘ವಸ್ತು ಪ್ರತಿರೂಪ’  (objective correlative)ವಾಗಿ ಒದಗಬಲ್ಲದೆಂದೋ, ಅವನು ಅದನ್ನೊಂದು ಸಾಗರೋತ್ತರಣದಂಥ ಸವಾಲೆಂದು ಒಪ್ಪಿಕೊಂಡಂತೆ ತೋರುತ್ತದೆ. ಈ ಕಾರಣದಿಂದಲೇ ಪಂಪನ ‘ಅರ್ಜುನ ಕೇಂದ್ರಿತ’ವಾದ ಕಥಾ ನಿರೂಪಣೆ, ‘ವಿಕ್ರಮಾರ್ಜುನ ವಿಜಯ’ವಾಯಿತು. ಅಷ್ಟೇ ಅಲ್ಲ ಅರಿಕೇಸರಿಯ ಅಸ್ಥಾನದ ಪಂಡಿತರು, ಹೇಳುವುದಾದರೆ- ಮಹಾಭಾರತದ ಕತೆಯನ್ನು- ಪಂಪನೇ ಹೇಳಬೇಕೆಂದು ಒಂದೇ ಸಮನೆ ಒತ್ತಾಯ ಮಾಡಿದ್ದರಿಂದ ಮತ್ತು ಗುಣಾರ್ಣವನಾದ ಅರಿಕೇಸರಿಯ ಒಳ್ಳೆಯತನ ಪಂಪನ ಮನಸ್ಸನ್ನು ಸೂರೆಗೊಂಡಿದ್ದರಿಂದ, ಪಂಪನು ಮೂಲಭಾರತದ ಕಥಾವಸ್ತುವನ್ನು ತನ್ನ ಕಾಲದ ಲೌಕಿಕವನ್ನು ಅಥವಾ ಸಮಕಾಲೀನ ಬದುಕನ್ನು ಚಿತ್ರಿಸಲು ಬಳಸಿಕೊಂಡು ‘ಬೆಳಗುವೆನಿಲ್ಲಿ ಲೌಕಿಕಮಂ’ ಎಂದು ತನ್ನ ಕಾವ್ಯೋದ್ದೇಶವನ್ನು ಘೋಷಿಸಿಕೊಂಡಿದ್ದಾನೆ. ಆದರೆ ಕುಮಾರವ್ಯಾಸನಿಗೆ ಇದೇ ಕಥಾವಸ್ತು ‘ಪಂಚಮವೇದ’. ಶ್ರೀ ಮುಕುಂದನ ದಿವ್ಯ ನಾಮಸ್ಮರಣೆಗೆ ಒಂದು ಸದವಕಾಶ. ಈ ದೃಷ್ಟಿಯಿಂದ ಭಾಗವತ ಸಂಪ್ರದಾಯದ ಉತ್ಕರ್ಷ ಕಾಲದಲ್ಲಿ ಬಂದ ಕುಮಾರವ್ಯಾಸನ ಪಾಲಿಗೆ, ಮಹಾಭಾರತ, ಗದುಗಿನ ವೀರನಾರಾಯಣನ ಮತ್ತೊಂದು ರೂಪವಾದ ಶ್ರೀಕೃಷ್ಣನ ಮಹಿಮಾತಿಶಯಗಳ ಕೀರ್ತನಕ್ಕೆ ಒಂದು ಮಾಧ್ಯಮದಂತೆ ಒದಗಿದೆ. ಇದರಿಂದ ಆತ ‘ವೀರನಾರಾಯಣನೆ ಕವಿ, ಲಿಪಿಕಾರ ಕುಮಾರವ್ಯಾಸ’ ಎಂಬ ಶ್ರದ್ಧೆಯಿಂದ ‘ದೇವಸ್ಥಾನ’ದಲ್ಲಿ ಕೂತು ಕೃತಿ ರಚನೆ ಮಾಡಿದವನು. ಹೀಗೆ ಮಹಾಭಾರತದ ಕಥಾವಸ್ತು ಪಂಪನ ಕಾಲದಲ್ಲಿ ‘ಆಸ್ಥಾನ’ದಲ್ಲಿ ನಿರ್ವಹಣೆಗೊಂಡರೆ, ಕುಮಾರವ್ಯಾಸನ ಕಾಲದಲ್ಲಿ ‘ದೇವಸ್ಥಾನ’ದಲ್ಲಿ ನಿರ್ವಹಣೆಗೊಂಡಿತು. ಮೊದಲನೆಯದು ಒಂದು ಕಾಲದ ಲೌಕಿಕವನ್ನು ಬೆಳಗುವ, ಪಂಡಿತ ಮಂಡಲಿಗೆ ಪ್ರಿಯವಾಗುವ ‘ಕಲಿತವರ ಕಲ್ಪವೃಕ್ಷ’ವಾದರೆ, ಎರಡನೆಯದು ಅಲೌಕಿಕವಾಗಿ ಬೆಳಗುವ, ವೀರ ನಾರಾಯಣನ ಸನ್ನಿಧಿಯ ‘ದೇವಸ್ಥಾನ ಪ್ರತಿಭೆ’ಯಿಂದ ಮೂಡಿ ‘ಕಲಿಯದವರಿಗೂ ಕಾಮಧೇನು’ವಾದ ಕೃತಿ. ಹೀಗಾಗಿ ಕನ್ನಡ ಜನ ಈ ಎರಡೂ ಭಾರತಗಳಲ್ಲಿ  ಒಂದನ್ನು ತುಂಬ ಗೌರವದಿಂದ ಕಾಣುತ್ತಾರೆ; ಮತ್ತೊಂದನ್ನು ತುಂಬ ಪ್ರೀತಿಯಿಂದ ತಮ್ಮ ಎದೆಗೊತ್ತಿಕೊಳ್ಳುತ್ತಾರೆ. ಆದರೆ ಈ ಎರಡೂ ವ್ಯಾಸಭಾರತ ಪರಂಪರೆಗೆ ಸೇರಿದ ಕೃತಿಗಳಾಗಿವೆ ಎಂಬುದನ್ನು ಮರೆಯಬಾರದು. ಮತ್ತು ವ್ಯಾಸ ಭಾರತವನ್ನು ಹೀಗೆ ಕನ್ನಡದಲ್ಲಿ ಮುಂದುವರಿಸುವ ಈ ಕೃತಿಗಳಲ್ಲಿ ಪಂಪನದು ವ್ಯಾಸ ಭಾರತ ಕಥಾವಸ್ತುವಿನ ‘ಪ್ರತಿಸೃಷ್ಟಿ’ಯಾದರೆ, ಕುಮಾರ ವ್ಯಾಸನದು ‘ಅನುಸೃಷ್ಟಿ’ ಎಂದು ಕರೆಯಬಹುದು.

ಪಂಪನದು ಯಾಕೆ ‘ಪ್ರತಿಸೃಷ್ಟಿ’ ಎಂದರೆ, ಅದು ಕುಮಾರವ್ಯಾಸನಂತೆ, ಮಹಾ ಭಾರತವನ್ನು ಪಿತ್ರಾರ್ಜಿತವಾಗಿ ತನಗೆ ದತ್ತವಾದ ಸಂಪತ್ತೆಂಬಂತೆ, ಅದನ್ನು ಉಳಿಸಿ, ಬಳಸಿ, ಬೆಳಸುವ ಉದ್ದೇಶಕ್ಕೆ- ಎಂದರೆ, ಮೂಲಭಾರತವನ್ನು ಅದರ ಯಥಾವತ್ತಾದ ಸ್ವರೂಪದೊಂದಿಗೆ ಕನ್ನಡ ಜನಕ್ಕೆ ತಿಳಿಯುವಂತೆ ಹೇಳಬೇಕೆಂಬ ಉದ್ದೇಶಕ್ಕೆ- ಬದ್ಧವಾದದ್ದಲ್ಲ. ಅದರ ಬದಲು ಆ ಕಥಾವಸ್ತುವನ್ನು ತನ್ನ ಸಮಕಾಲೀನತೆಯಲ್ಲಿ ಇರಿಸಿ, ಹತ್ತನೇ ಶತಮಾನದ  ಅನುಭವಗಳನ್ನು ಶೋಧಿಸಬೇಕೆಂಬುದು ಮತ್ತು ತನ್ನ ಕಾಲದ ಲೌಕಿಕವನ್ನು ಅಥವಾ ಲೋಕ ಜೀವನವನ್ನು ಉಜ್ವಲವಾಗಿ ಕಾಣುವಂತೆ ಚಿತ್ರಿಸಬೇಕು ಎನ್ನುವುದು ಪಂಪನ ಉದ್ದೇಶವಾಗಿತ್ತು. ಇದರಿಂದಾಗಿ ಅಷ್ಟು ದೊಡ್ಡ ಕತೆಯನ್ನು ‘ಕತೆಯ ಮೆಯ್ಗಿಡಲೀಯದೆ’, ತನಗೆ ಉಚಿತವಾದ ಬದಲಾವಣೆಗಳನ್ನು ಮಾಡಿಕೊಂಡು, ಮೂಲದ ‘ರಾಷ್ಟ್ರೀಯ’ ಕಾವ್ಯವಸ್ತು, ತನ್ನ ಪ್ರತಿಭೆಯೊಳಗೆ ಸಾಕಷ್ಟು ‘ಉಪರಾಷ್ಟ್ರೀಯ’ ವಿಶಿಷ್ಟತೆಯನ್ನು ಪಡೆದುಕೊಳ್ಳುವಂತೆ ಪಂಪನು ನಿರ್ವಹಿಸಿದ್ದಾನೆ. ಹೀಗೆ ಪಂಪನ ವ್ಯಕ್ತಿ ಪ್ರತಿಭೆಯೊಳಗೆ, ಪರಂಪರಾಗತವಾದ ಕಥಾವಸ್ತು ಸಾಕಷ್ಟು ‘ಪ್ರತಿಸೃಷ್ಟಿ’ಯ ಅಂಶಗಳನ್ನು ಒಳಗೊಳ್ಳುವ ‘ವಿಕ್ರಮಾರ್ಜುನ ವಿಜಯ’ವಾಗಿದೆ. ಆದರೆ ಕುಮಾರವ್ಯಾಸ ಭಾರತದಲ್ಲಿ ಈ ಬಗೆಯ ‘ಪ್ರತಿಸೃಷ್ಟಿ’ಯ ಅಂಶಗಳು ತೀರಾ ಕಡಮೆ. ಆತ ಒಂದರ್ಥದಲ್ಲಿ ಮೂಲಭಾರತವನ್ನು ಸಮಸ್ತ ಘಟನೆಗಳೊಂದಿಗೆ, ಅದರ ಕತೆ, ಉಪಕತೆ, ಉಪಾಖ್ಯಾನಗಳ ಸಹಿತ- ಸಮಗ್ರವಾಗಿ ಕನ್ನಡಕ್ಕೆ ತಂದವನು. ಆದರೆ ಹಾಗೆ ತಂದೂ ಕೂಡ ಆತ ಮೂಲ ಕತೆಯ ಕೇವಲ ವಕ್ತಾರನಾಗದೆ, ಕನ್ನಡದಲ್ಲಿ ಅದೊಂದು ‘ಅನುಸೃಷ್ಟಿ’ ಎಂದೆನ್ನಿಸುವ ಕಥಾ ಸಂವಿಧಾನವನ್ನು ನಿರ್ಮಿಸಿದ್ದಾನೆ. ಕೃಷ್ಣ ಕೇಂದ್ರಿತ ಕಥಾ ನಿರ್ವಹಣೆಯ ಮೂಲಕ ಭಾಗವತ ಪರಂಪರೆಯನ್ನು ವ್ಯಾಖ್ಯಾನಿಸಿದ್ದಾನೆ. ತನ್ನ ಕಾವ್ಯದ ಫಲಶೃತಿಯನ್ನು ಹೇಳುವಾಗ ‘ವೇದಪಾರಾಯಣದ ಫಲ’ ತನ್ನ ಭಕ್ತಿ ಕಾವ್ಯದ ಮೂಲಕ ಎಲ್ಲರಿಗೂ ದೊರೆಯಲಿ ಎನ್ನುವ ಉದಾರ ವೈದಿಕ ಧಾರ್ಮಿಕ ನಿಲುವೊಂದು ಇಲ್ಲಿ ಕಾಣಿಸಿಕೊಂಡಿದೆ ಎನ್ನುವುದು ಗುರುತಿಸಬೇಕಾದ ಸಂಗತಿಯಾಗಿದೆ. ಮುಂದೆ ಬಂದ ಹರಿದಾಸ ಚಳುವಳಿಯ ನಿಲುವು ಕೂಡಾ, ವೇದ ವೇದಾಂತದ ಸಾರವೆಲ್ಲವೂ ಭಕ್ತಿಯ ಮೂಲಮಾನದಲ್ಲಿ ಜನಸಾಮಾನ್ಯರ ಬದುಕಿಗೆ ಸಲ್ಲುವಂತಾಗಬೇಕು ಎನ್ನುವುದೇ ಆಗಿದೆ. ಅಷ್ಟೇ ಅಲ್ಲ ಕುಮಾರವ್ಯಾಸನಲ್ಲಿ ಕಂಡುಬರುವ ಕೃಷ್ಣ ಪರವಾದ ಭಕ್ತಿಯ ಉತ್ಕಟತೆ ಹಾಗೂ ಸ್ತುತಿ, ಪ್ರಶಂಸೆ ಇತ್ಯಾದಿಗಳು ಹರಿದಾಸರ ಕೀರ್ತನೆಗಳಿಗೆ ಒಂದು ಬಗೆಯ ಪ್ರೇರಣೆ ಹಾಗೂ ಮಾದರಿಗಳನ್ನು ಒದಗಿಸಿದಂತೆ ಕಾಣುತ್ತದೆ.[1]

ಮಹಾಭಾರತದ ಕಥಾವಸ್ತುವನ್ನು ತಕ್ಕ ಜವಾಬ್ದಾರಿಯಿಂದ ಮತ್ತು ಗೌರವದಿಂದ ಕನ್ನಡದಲ್ಲಿ ಕೃತಿ ಮಾಡಿದ ಪಂಪ ಕುಮಾರವ್ಯಾಸ ಇಬ್ಬರೂ ಕನ್ನಡಿಗರಿಗೆ ಮುಖ್ಯರಾದ ಕವಿಗಳು. ಆದರೆ ಕನ್ನಡ ವಿಮರ್ಶೆ, ‘ಬೆಳಗುವೆನಿಲ್ಲಿ ಲೌಕಿಕಮಂ ಅಲ್ಲಿ ಜಿನಾಗಮಮಂ’ ಎಂದು ಪಂಪನು ಹೇಳಿರುವ ಮಾತನ್ನು ಗಟ್ಟಿಯಾಗಿ ಹಿಡಿದು, ಪಂಪನ ಪ್ರತಿಭೆ ಲೌಕಿಕ ಮತ್ತು ಆಗಮಿಕ ಎಂದು ಎರಡು ಕವಲಾಗಿ ಒಡೆದದ್ದರಿಂದ, ಹಾಗೂ ಈ ಹೇಳಿಕೆ ಪಂಪ ಭಾರತ ಕೇವಲ ಲೌಕಿಕ ಕಾವ್ಯವೆಂಬುದನ್ನು ದೃಢಪಡಿಸುವುದರಿಂದ, ಈ ಬಗೆಯಾದ ಯಾವ ಇಬ್ಬಂದಿತನವೂ ಇಲ್ಲದ ಅಖಂಡ ಪ್ರತಿಭೆಯಿಂದ ನಿರ್ಮಿತಿಯಾದ ಕುಮಾರವ್ಯಾಸ ಭಾರತವು, ಪಂಪನ ಲೌಕಿಕ ಕೃತಿಗಿಂತ ಮಹತ್ವದ್ದಾಗಿದೆ ಎಂಬ ನಿಲುವನ್ನು ತಾಳಿದೆ. ನಮ್ಮ ಮಟ್ಟಿಗೆ ಹೇಳುವುದಾದರೆ, ಕನ್ನಡ ವಿಮರ್ಶೆ ಈ ನಿಲುವನ್ನೂ, ಅದಕ್ಕೆ ಕಾರಣವಾದ ಅಭಿಪ್ರಾಯವನ್ನೂ ಮತ್ತೆ ಪುನರ್ ವಿಮರ್ಶೆಗೆ ಗುರಿಪಡಿಸುವುದು ಆಗತ್ಯವಾಗಿದೆ ಎಂದು ಅನ್ನಿಸುತ್ತದೆ. ಯಾಕೆಂದರೆ, ‘ಬೆಳಗುವೆನಿಲ್ಲಿ ಲೌಕಿಕಮನ್’ ಎಂಬ ಪಂಪನ ಮಾತು, ವಿಕ್ರಮಾರ್ಜುನ ವಿಜಯವನ್ನು ಬರೆಯುವಲ್ಲಿ ಪಂಪನ ಪ್ರಧಾನ ದೃಷ್ಟಿಕೋನ ಯಾವುದಿತ್ತು ಎಂಬುದನ್ನು ಸೂಚಿಸುತ್ತದೆಯೇ ಹೊರತು, ಮೂಲ ಮಹಾಭಾರತವಾಗಲೀ, ಅಥವಾ ವಿಕ್ರಮಾರ್ಜುನ ವಿಜಯವಾಗಲೀ, ಕೇವಲ ಲೌಕಿಕ ಕಾವ್ಯ ಎಂದು ಅರ್ಥವಾಗುವುದಿಲ್ಲ ಮತ್ತು ಯಾವುದೇ ಕೃತಿ ನಿಜವಾಗಿಯೂ ಮಹತ್ವದ್ದಾಗುವುದು, ಅದು ಲೌಕಿಕವೋ ಆಗಮಿಕವೋ ಎನ್ನುವ ಮೂಲಮಾನದಿಂದ ಅಲ್ಲ, ಕವಿ ಒಂದು ವಸ್ತುವನ್ನು ನಿರ್ವಹಿಸಿರುವ ಕ್ರಮದಿಂದ. ಪಂಪನ ಪ್ರತಿಭೆ ಲೌಕಿಕ ಆಗಮಿಕ ಎಂದು ಕವಲೊಡೆದದ್ದಕ್ಕೆ ಅವನದೇ ಆದ ವಯ್ಯಕ್ತಿಕ ಕಾರಣಗಳಿವೆ ಎಂಬುದನ್ನು ಮರೆಯಬಾರದು. ಹಾಗೆಯೆ ಆ ಎರಡೂ ಒಂದೇ ಆಗಿ ಸಂಯೋಜನೆಗೊಂಡಿದ್ದರೆ ಅವನ ಕಾವ್ಯನಿರ್ಮಿತಿ ಇನ್ನೂ ಘನವಾಗುತ್ತಿತ್ತೆಂದೂ, ಹಾಗಾಗದೆ ಇರುವುದರಿಂದ ‘ಲೌಕಿಕ-ಆಗಮಿಕ’ ಗಳೆರಡನ್ನೂ ಒಗ್ಗೂಡಿಸಿಕೊಂಡ ಕುಮಾರವ್ಯಾಸನ ಕೃತಿಗಿಂತ ಪಂಪಭಾರತ ಶ್ರೇಷ್ಠವಾಗಿಲ್ಲವೆಂದೂ ವಿಮರ್ಶೆಯ ನೆಲೆಯಲ್ಲಿ ಮಾತನಾಡುವುದು ಸಮರ್ಪಕವೆಂದು ನಮಗೆ ತೋರುವುದಿಲ್ಲ. ನಾವು ಗಮನಿಸಬೇಕಾದದ್ದು ‘ಪಂಪಭಾರತ’ ಹಾಗೂ ‘ಕುಮಾರವ್ಯಾಸ ಭಾರತ’ -ಈ ಎರಡೂ ಮೂಲಭಾರತದ ಕಥಾವಸ್ತುವನ್ನು ಗ್ರಹಿಸಿದ ಹಾಗೂ ಕನ್ನಡದಲ್ಲಿ ನಿರೂಪಿಸಿದ ಪರಿಯನ್ನು. ಹಾಗೆ ನೋಡಿದರೆ ವ್ಯಾಸಭಾರತವನ್ನು ಬಹು ಮಟ್ಟಿಗೆ ಸಮಗ್ರವಾಗಿ ನಿರೂಪಿಸಿದ ಕುಮಾರವ್ಯಾಸ ಭಾರತದಂಥ ಅನುಸರಣ ಕೃತಿಗಳು ಇತರ ಭಾರತೀಯ ಭಾಷೆಗಳಲ್ಲಿ ಇರಬಹುದು; ಆದರೆ ವಿಕ್ರಮಾರ್ಜುನ ವಿಜಯದಂತೆ ಮಹಾಭಾರತದ ಕತೆಯನ್ನು ‘ಸಮಸ್ತ’ ತಂತ್ರದಲ್ಲಿ ಅಳವಡಿಸಿ ಅದು ಬೇರೊಂದು ಪ್ರತಿಸೃಷ್ಟಿಯೋ ಎಂಬಂತೆ ತೋರುವ ಕೃತಿಗಳು, ಇತರ ಯಾವುದೇ ಭಾರತೀಯ ಭಾಷೆಗಳಲ್ಲಿ ಬಹುಶಃ ಇರಲಾರವೆಂದೇ ನಮ್ಮ ತಿಳಿವಳಿಕೆ. ಅರ್ಜುನನನ್ನು ಅರಿಕೇಸರಿಯೊಂದಿಗೆ ಸಮೀಕರಿಸಿ ಕತೆ ಹೇಳುವ ಪಂಪನಿಗೆ ಒದಗಿದಂಥ ಇಕ್ಕಟ್ಟುಗಳೂ, ಅನೌಚಿತ್ಯಗಳೂ ಶ್ರೀ ಕೃಷ್ಣ ಭಕ್ತಿಯ ಆವೇಶದಿಂದ ಕತೆ ಹೇಳುವ ಕುಮಾರವ್ಯಾಸನಲ್ಲಿ ತಕ್ಕ ಪ್ರಮಾಣದಲ್ಲಿಯಾದರೂ ಇಲ್ಲದೆ ಇಲ್ಲ. ಕೃಷ್ಣನ ರಾಯಭಾರದ ಸಂದರ್ಭವನ್ನು ಪಂಪ ಕುಮಾರವ್ಯಾಸರಿಬ್ಬರೂ ನಿರ್ವಹಿಸಿರುವ ಕ್ರಮವನ್ನು ತೌಲನಿಕವಾಗಿ ನೋಡಬಹುದು. ಪಂಪನದು ಒಂದು ಸಂಸ್ಕೃತಿಯ ಸಂದರ್ಭದ ಗಂಭೀರವಾದ ರಾಜತಾಂತ್ರಿಕ ವ್ಯವಹಾರದಂತೆ ತೋರಿದರೆ, ಕುಮಾರವ್ಯಾಸನದು ಅಗ್ಗದ ಜನಪ್ರಿಯತೆಯ ದೊಂಬರಾಟದಂತೆ ತೋರುತ್ತದೆ. ಶಿಶುಪಾಲ ವಧೆಯ ಸಂದರ್ಭದಲ್ಲಿ, ಅರ್ಘ್ಯವೆತ್ತಿದ ತಟ್ಟೆಯನ್ನೆ ಚಕ್ರದಂತೆ ಶ್ರೀಕೃಷ್ಣನು ಬಳಸಿ ಶಿಶುಪಾಲನನ್ನು ಕೊಂದನೆಂಬಂತೆ ಪಂಪನು ಚಿತ್ರಿಸಿರುವ ರೀತಿಯು, ಕುಮಾರವ್ಯಾಸನು ಇದೇ ಸಂದರ್ಭವನ್ನು ಚಿತ್ರಿಸಿರುವ ಕ್ರಮಕ್ಕಿಂತ ಹೆಚ್ಚು ಪ್ರತಿಭಾಪೂರ್ಣವೂ, ಕಲಾತ್ಮಕವೂ ಆಗಿದೆ. ಮತ್ತು ಪಂಪನಿಗಿರುವ ವೈಚಾರಿಕತೆಗೆ ಹೋಲಿಸಿದರೆ, ಕುಮಾರವ್ಯಾಸ ಎಷ್ಟೋ ವೇಳೆ ಪರಂಪರಾಗತವಾದ ಅವಿಚಾರಿತ ಸಂಗತಿಗಳನ್ನು- ಉದಾಹರಣೆಗೆ ವರ್ಣಾಶ್ರಮ, ಜಾತಿಪದ್ಧತಿ ಇತ್ಯಾದಿಗಳನ್ನು- ಯಾವ ಚರ್ಚೆ ಅಥವಾ ಚಿಕಿತ್ಸೆಗೂ ಒಳಪಡಿಸದೆ ಮಂಡಿಸುವ ಕ್ರಮವು ದಂಗುಬಡಿಸುವಂಥದಾಗಿದೆ. ಕುಮಾರ ವ್ಯಾಸನ ಕೃಷ್ಣ ಭಕ್ತಿಯ ಆವೇಶ ಕತೆಯೊಳಗಿನ ಎಷ್ಟೋ ಸನ್ನಿವೇಶಗಳನ್ನೂ ಹಾಗೂ ಪಾತ್ರಗಳನ್ನೂ, ಕೃಷ್ಣನ ಮಹಿಮಾತಿಶಯದ ಪ್ರದರ್ಶನಕ್ಕೆ, ಹಲವು ವೇಳೆ ಕೇವಲ ಮಾಧ್ಯಮವನ್ನಾಗಿ ಮಾಡಿಬಿಡುತ್ತದೆ. ಆದರೆ ಕಿರಾತಾರ್ಜುನೀಯ, ಅರ್ಜುನ-ಊರ್ವಶೀ ಪ್ರಸಂಗದಂಥ ಸಂದರ್ಭಗಳಲ್ಲಿ ಕುಮಾರವ್ಯಾಸನ ಪ್ರತಿಭೆ ಏರುವ ಎತ್ತರಕ್ಕೆ ಹೋಲಿಸಿದರೆ, ಇದೇ ಸಂದರ್ಭಗಳ ನಿರ್ವಹಣೆ ಪಂಪನಲ್ಲಿ ತೀರಾ ಕುಬ್ಜವೂ, ಸಪ್ಪೆಯೂ ಆಗಿ ತೋರುತ್ತದೆ. ಸಾರಾಂಶವೇನೆಂದರೆ, ಇಬ್ಬರಲ್ಲಿಯೂ ಪ್ರತಿಭೆಯ ಏರಿಳಿತಗಳಿವೆ ಎಂಬುದನ್ನೂ, ಅವರಿಬ್ಬರೂ ಮಹಾಭಾರತದ ಕಥಾವಸ್ತುವನ್ನು ಗ್ರಹಿಸಿ ನಿರ್ವಹಿಸಿದ ಕಾಲ-ದೇಶ- ಪರಿಸರಗಳೂ ಬೇರೆ ಬೇರೆಯೆ ಎಂಬುದನ್ನೂ ನಾವು ಗಣನೆಗೆ ತೆಗೆದುಕೊಳ್ಳಬೇಕಾಗಿದೆ.

ಆದರೆ ಒಂದು ಮಾತ್ರ ನಿಜ: ಅದೆಂದರೆ, ಕೃಷ್ಣನಂಥ ದಿವ್ಯ ಮಾನುಷ ಸತ್ವವನ್ನು ತನ್ನ ಕಥಾನಾಯಕನನ್ನಾಗಿ ಮಾಡಿಕೊಂಡು ಮಹಾಭಾರತವನ್ನು ನಿರ್ವಹಿಸಿದ ಕುಮಾರವ್ಯಾಸನಿಗೆ ಇರುವ ಅನುಕೂಲ ಹಾಗೂ ಸ್ವಾತಂತ್ರ್ಯಗಳು, ಅರ್ಜುನನಂಥ, ಅದೂ ಅರಿಕೇಸರಿಯೊಂದಿಗೆ ಸಮೀಕೃತವಾದ ಅರ್ಜುನನಂಥ ಪಾತ್ರವನ್ನು, ಕಾವ್ಯದ ಕೇಂದ್ರವನ್ನಾಗಿ ಮಾಡಿಕೊಂಡು ‘ವಿಕ್ರಮಾರ್ಜುನ ವಿಜಯ’ವನ್ನು ಬರೆದ ಪಂಪನಿಗೆ ಇಲ್ಲ. ಎಷ್ಟಾದರೂ ಅರ್ಜುನ, ಅಥವಾ ಅವನೊಳಗೆ ಮರೆಮಾಡಿಕೊಂಡ ಅರಿಕೇಸರಿ- ಮನುಷ್ಯ, ಉದಾತ್ತನಾದ ಮನುಷ್ಯ, ಮಹಾವೀರನಾದ ಮನುಷ್ಯ. ಆದರೆ ಕುಮಾರವ್ಯಾಸನ ಕೃಷ್ಣ ಮನುಷ್ಯನಂತೆ ತೋರುವ, ಅತಿ ಮಾನುಷ ಚೈತನ್ಯ. ಕೃಷ್ಣನಂಥ ಅತಿಮಾನುಷ ಸತ್ವ, ಮಾನುಷ ಅತಿಮಾನುಷ ಅದ್ಭುತ ಅಲೌಕಿಕ ಇತ್ಯಾದಿ ನೆಲೆಗಳಲ್ಲಿ ವ್ಯವಹರಿಸುವುದು ತೀರಾ ಸಹಜವಾಗಿದೆ. ಒಮ್ಮೆಮ್ಮೆ ಅತಿರಂಜಿತವೆಂಬಂತೆ ತೋರಿದರೂ, ಹಲವು ನೆಲೆಗಳಲ್ಲಿ ಏಕಕಾಲಕ್ಕೆ ಸಂಚರಿಸಬಲ್ಲ ಈ ಪಾತ್ರದ ನಡವಳಿಕೆ ಅಸಹಜವೆಂದೇನೂ ಅನ್ನಿಸುವುದಿಲ್ಲ. ಆದರೆ ಆರಿಕೇಸರಿಯಾದ ಪಂಪನ ಅರ್ಜುನನಿಗೆ ಈ ಆಯಾಮಗಳಿಲ್ಲ. ಆತ ಒಂದು ಮಿತಿಯಲ್ಲಿ, ಆ ಮಿತಿಯ ಅತ್ಯುನ್ನತ ನೆಲೆಗಳಿಗೆ ಏರಿದರೂ, ಮಾನುಷಮಿತಿಯ ಚೌಕಟ್ಟಿನೊಳಗೇ ವ್ಯವಹರಿಸಬೇಕಾಗುತ್ತದೆ. ಅದನ್ನು ಅತಿಕ್ರಮಿಸಿ ಅರಿಕೇಸರಿಯ ಮೇಲಿನ ‘ಅಳ್ತಿ’ಯಿಂದ ಕವಿ ಈ ಪಾತ್ರವನ್ನು ಎಲ್ಲೆಲ್ಲಿ ಅಲೌಕಿಕ ಸ್ತರಗಳಿಗೆ ಏರಿಸಲು ಪ್ರಯತ್ನಪಟ್ಟಿದ್ದಾನೆಯೋ ಅಂಥ ಕಡೆ, ಪಂಪನ ನಿರ್ವಹಣೆ ಸಮತೂಕವನ್ನೂ ಔಚಿತ್ಯವನ್ನೂ ಕಳೆದುಕೊಳ್ಳುತ್ತದೆ.[2] ಆದರೆ ಕುಮಾರವ್ಯಾಸನ ಕೃಷ್ಣನ ಪಾತ್ರಕ್ಕೆ, ಈ ಬಗೆಯ ಯಾವ ಬಿಕ್ಕಟ್ಟುಗಳೂ ಒದಗುವುದಿಲ್ಲ. ಯಾಕೆಂದರೆ ಆ ಪಾತ್ರದ ಆಯಾಮವೇ ಅಂಥದು. ಏಕ ಕಾಲಕ್ಕೆ ಅನೇಕ ನೆಲೆಗಳಲ್ಲಿ ವ್ಯವಹರಿಸುವ ಅತಿಮಾನುಷ ಸತ್ವ ಅದು.

ಕುಮಾರವ್ಯಾಸನದು ಭಕ್ತಿ ಕಾವ್ಯ. ಭಕ್ತನ ನಿಲುವು ಎಂದರೆ ಭಗವಂತನ ಪಾರಮ್ಯವನ್ನು ಒಪ್ಪಿಕೊಳ್ಳುವುದು; ಆತನ ಬಗ್ಗೆ ಪ್ರೀತಿ, ಶ್ರದ್ಧೆ ಹಾಗೂ ಸಮರ್ಪಣ ಭಾವಗಳನ್ನು ಬೆಳೆಯಿಸಿಕೊಳ್ಳುವುದು. ಕುಮಾರವ್ಯಾಸ ಭಾರತದಲ್ಲಿ ಬಹುತೇಕ ಎಲ್ಲರೂ ಕೃಷ್ಣ ಪಾರಮ್ಯವನ್ನು ಒಪ್ಪಿಕೊಂಡವರು. ಹೀಗಾಗಿ ಕಥಾಸಂದರ್ಭದಲ್ಲಿ ಕೃಷ್ಣನ ಅಸ್ತಿತ್ವವೇ ಅತ್ಯಂತ ಮಹತ್ವದ ಗಮನವನ್ನು ಸೆಳೆದುಕೊಳ್ಳುತ್ತದೆ. ಕೃಷ್ಣನ ಆಗಮನವೇ ಒಂದು ಸಂಭ್ರಮದ ಸಂಗತಿ ಇಲ್ಲ್ಲಿ: ಕೃಷ್ಣ ಬಂದನೆಂದರೆ ಸುರರು ನಭದಲ್ಲಿ ನೆರೆಯುತ್ತಾರೆ; ಋಷಿ ಮುನಿಗಳು ಆತನ ದರ್ಶನಕ್ಕೆ ಸಂದಣಿಸುತ್ತಾರೆ; ಪಾಂಡವರು ಪುಲಕಗೊಳ್ಳುತ್ತಾರೆ; ಸಾಲದೆಂಬಂತೆ ಕವಿ ತಾನೇ ಪ್ರತ್ಯೇಕವಾಗಿ ಹಿನ್ನೆಲೆಯಲ್ಲಿ ನಿಂತು ಕೃಷ್ಣ ಸ್ತೋತ್ರದ ಹೊಳೆ ಹರಿಸುತ್ತಾನೆ. ಕುಮಾರವ್ಯಾಸನ ಪಾತ್ರಗಳೂ ಅಷ್ಟೆ. ಅವರೆಲ್ಲರೂ ಕೃಷ್ಣನ ಪಾರಮ್ಯವನ್ನು ಒಪ್ಪಿಕೊಂಡವರೇ. ಭೀಷ್ಮಾಚಾರ್ಯರೆ, ‘ಹೇಳುವೆನು ಶ್ರೀ ಕೃಷ್ಣಲೀಲಾ ಪರಮ ಚರಿತವನು’ ಎಂದು ರಾಜಸೂಯ ಯಾಗದ ಸಂದರ್ಭದಲ್ಲಿ ಪರಮಾತ್ಮನಾದ ಶ್ರೀಕೃಷ್ಣನ ಲೀಲಾವಿನೋದಗಳನ್ನು ಬಣ್ಣಿಸುತ್ತಾರೆ. ಅರ್ಜುನನ ಪಾಲಿಗೆ ಕೃಷ್ಣನು ಸಖ, ಸಾರಥಿ; ದ್ರೌಪದಿಗೆ ಆಪತ್ತಿಗೆ ಒದಗುವ ನಂಟ, ರಕ್ಷಕ. ತನ್ನ ನಿಜವಾದ ಅಂತರಂಗವನ್ನು, ಅಂದರೆ ಸಂಧಿಯ ನೆವದಲ್ಲಿ, ಸಮರವೇ ನಿಶ್ಚಿತವಾಗುವಂತೆ ಏರ್ಪಡಿಸಿ ಕೌರವ ಕುಲವನ್ನು ನಾಶಮಾಡುವ ತನ್ನ ಉದ್ದೇಶವನ್ನು ಆತ ಹೇಳಿದ್ದು ಅವಳೊಬ್ಬಳಿಗೇ. ಧರ್ಮರಾಯನಿಗೆ ಆತ ನೆನೆದೊಡನೆ ಬರುವ ಲಕ್ಷ್ಮೀಕಾಂತ. ಸಹದೇವ ಕೂಡ ‘ದೇವ ನಿಮ್ಮಡಿಯಂಘ್ರಿ ಕಮಲವನಾವ ನೆನೆವನು ಅವಂಗೆ’ ಜನನ ಮರಣಗಳ ಬಾಧೆ ಇಲ್ಲವೆಂದೇ ನಂಬಿದವನು. ಕೃಪ, ದ್ರೋಣ, ಕರ್ಣಾದಿಗಳಿಗೂ ಕೃಷ್ಣನ ವಿಚಾರದಲ್ಲಿ ಅಭಿಮಾನ ಪ್ರೀತಿಗೌರವ. ಕೃಷಭಕ್ತಿ ಕುಮಾರವ್ಯಾಸನಲ್ಲಿ ಯಾವ ಅತಿರೇಕಕ್ಕೆ ಹೋಗುತ್ತದೆ ಯೆಂದರೆ, ತುಂಬಿದ ಸಭೆಯಲ್ಲಿ ದುಶ್ಯಾಸನನಿಂದ ದ್ರೌಪದಿಯ ವಸ್ತ್ರಾಪಹರಣದಂಥ ದೌರ್ಜನ್ಯ ನಡೆಯುತ್ತಿದ್ದರೂ, ಭೀಷ್ಮ ದ್ರೋಣಾದಿಗಳಂಥ ವಿವೇಕಿಗಳೂ ಯಾವ ಮನುಷ್ಯ ಸಹಜವಾದ ಪ್ರತಿಕ್ರಿಯೆಯನ್ನೂ ವ್ಯಕ್ತಪಡಿಸದೆ, ದ್ರೌಪದಿಯ ಮಾನ ಸಂರಕ್ಷಣೆಯ ಸಂಪೂರ್ಣ ಜವಾಬ್ದಾರಿಯನ್ನು ಶ್ರೀಕೃಷ್ಣನ ವಸ್ತ್ರಪ್ರದಾನ ಪವಾಡಕ್ಕೆ ಒಪ್ಪಿಸಲೆಂದೇ ಕಾದು ಕುಳಿತ ಮೂಕ ಪ್ರೇಕ್ಷಕರಂತೆ ತೋರುತ್ತಾರೆ! ಆದರೆ ಈ ಪಾತ್ರ ಸಮುದಾಯದಲ್ಲಿ ಕೃಷ್ಣನನ್ನು ಕುರಿತು ಭೀಮನ ನಿಲುವೊಂದು ಮಾತ್ರ ಬೇರೆಯ ರೀತಿಯದಾಗಿದೆ. ಅವನಿಗೆ ಕೃಷ್ಣನ ಬಗ್ಗೆ ಅಭಿಮಾನ ಗೌರವಗಳಿದ್ದರೂ, ಆತ ಉಳಿದವರ ಹಾಗೆ ‘ಅಧೀನತೆ’ಯನ್ನಾಗಲೀ, ಕೃಷ್ಣನ ನಿಯಂತ್ರಣವನ್ನಾಗಲೀ ಒಪ್ಪಿಕೊಂಡಂತೆ ತೋರುವುದಿಲ್ಲ. ಈ ದೃಷ್ಟಿಯಿಂದ ಕುಮಾರವ್ಯಾಸನ ಭೀಮ ನಿಜವಾದ ಅರ್ಥದಲ್ಲಿ ಪುರುಷಕಾರದ ಪ್ರತೀಕದಂತೆ ತೋರುತ್ತಾನೆ. ಈ ಸರಣಿಯಲ್ಲಿ ದುರ್ಯೋಧನನು ಒಂದು ಹಂತದವರೆಗೆ ಪುರುಷಕಾರವನ್ನು ಮೆರೆಯುವಂತೆ ತೋರಿದರೂ, ಕೃಷ್ಣನ ಅತಿಮಾನುಷ ಶಕ್ತಿ ಪ್ರತಾಪಗಳನ್ನು ಬಲ್ಲವನಾದರೂ, ಆತನೂ ತನ್ನ ಗೂಢಾತ್‌ಗೂಢತಮವಾದ ಅಂತರಂಗದಲ್ಲಿ ಕೃಷ್ಣನ ದೈವತ್ವವನ್ನೂ ಆತನ ಅವತಾರದ ಉದ್ದೇಶಗಳನ್ನೂ ತಿಳಿದ ಅನುಭಾವಿಕ ಹೊಳಹುಗಳನ್ನು ಅನುಭವಿಸಿದವನಾಗಿದ್ದ ಮತ್ತು ಕೃಷ್ಣನನ್ನು ಕೆಣಕಿ ಕೈವಲ್ಯವನ್ನು ಪಡೆಯುವ ವಿಚಾರವೂ ಆತನಲ್ಲಿತ್ತು ಎಂಬಂತೆ ಕುಮಾರವ್ಯಾಸನು ಚಿತ್ರಿಸಿರುವುದು ಒಂದು ತೊಡಕಿನ ಸಂಗತಿಯಾಗಿದೆ. ಯಾಕೆಂದರೆ, ಕುಮಾರವ್ಯಾಸನು ಚಿತ್ರಿಸಿರುವಂತೆ ಬಹುತೇಕ ಪ್ರಧಾನ ಪಾತ್ರಗಳೆಲ್ಲ ಕೃಷ್ಣಭಕ್ತರು. ವಿದುರ, ದ್ರೌಪದಿ, ಧರ್ಮರಾಜ, ಭೀಷ್ಮ, ದ್ರೋಣ ಇತ್ಯಾದಿಯಾದವರೆಲ್ಲರೂ ಕೃಷ್ಣ ಸಾಕ್ಷಾತ್ ದೇವರೆಂದೇ ಭಾವಿಸಿದವರು. ತಾವೆಲ್ಲ ಭಗವಂತ ಕೃಷ್ಣನ ಲೀಲಾವಿನೋದ ನಾಟಕದಲ್ಲಿ ~ತ್ರಧಾರಿಗಳು ಎಂದು ತಿಳಿದವರು. ಆ ನಂಬಿಕೆಯನ್ನು ಸಂದರ್ಭಾನುಸಾರವಾಗಿ ಹೇಳಿಕೊಳ್ಳುವುದು ಅವರಿಗೆ ಸಹಜವಾದದ್ದು. ಆದರೆ ಮೊದಲಿನಿಂದಲೂ ‘ಪ್ರತಿನಾಯಕ’ನಂತೆ ಪಾಂಡವರನ್ನೂ, ಪಾಂಡವ ಪಕ್ಷಪಾತಿಯಾದ ಶ್ರೀಕೃಷ್ಣನನ್ನೂ, ವಿರೋಧಿಸಿಕೊಂಡು ಬಂದ ದುರ್ಯೋಧನನು, ‘ಯುದ್ಧ ಬೇಡ, ಸಂಧಿಗೆ ಒಡಬಂಡು’ ಎಂದು ಬುದ್ಧಿ ಹೇಳಿದ ತನ್ನ ತಂದೆಯಾದ ಧೃತರಾಷ್ಟ್ರನಿಗೆ-

ಮರುಳುಗಳಲಾ ಬೊಪ್ಪನವರೀ
ಮುರಹರನು ಹರಿಯೆಂದು ಮುನ್ನದ
ನರಿದಿಹೆನು(ಉ.ಪ.೬-೨೦)
ಭಾರ ಹೆಚ್ಚಿ ದೊಡೊರಲಿ ಭೂಮೀ
ನಾರಿ ಬಿನ್ನಹ ಮಾಡಿದೊಡೆ ದೈ
ತ್ಯಾರಿ ಬಿಜಯಂಗೈದನವನಿಗೆ ಮನುಜ ವೇಷದಲಿ        (ಉ.ಪ.೬-೨೧)

ಇಂಥ ಅವತಾರಿಯಾದ ಶ್ರೀಕೃಷ್ಣನು ‘ಅರ್ಜುನನ ಕೈಯಲಿ ಕೌರವರ ಕೊಲಿಸುವನು ನಾವಿನ್ನಂಜಲೇಕೆ’ ಎನ್ನುತ್ತಾನೆ. ಅಷ್ಟೆ ಅಲ್ಲ, ವೇದಾಂತಿಯಂತೆ-

ಕಾವನಾತನು ಕೊಲುವನಾತನು
ಸಾವೆನಾತನ ಕೈಯ್ಯ ಬಾಯಲಿ (ಉ.ಪ.೬- ೨೨)

ಎಂದು ಘೋಷಿಸುತ್ತಾನೆ. ಹಾಗೆಯೆ ಕೃಷ್ಣ ನಿಜದಲ್ಲಿ ಯಾರೆಂಬುದನ್ನು ಬಲ್ಲವನಂತೆ-

‘ಈತನಂತರ್ಯಾಮಿ ಜೀವ
ವ್ರಾತದಲಿ, ಜನಜನಿತವಿದು, ಜಗ
ವೀತನಾಜ್ಞೆ ಯೊಳೊಲೆವುದು   (ಉ.ಪ. ೧೦-೬೯)’

ಎಂದು ಕೃಷ್ಣನ ಅಂತರ್ಯಾಮಿತ್ವವನ್ನು ವ್ಯಾಖ್ಯಾನಿಸುತ್ತಾನೆ. ಈತ ಅಂತರ್ಯಾ ಮಿಯಾಗಿರುವುದರಿಂದಲೇ-

‘ಎನ್ನ ಹೃದಯದೊಳಿರ್ದು ಮುರಿವನು
ಗನ್ನದಲಿ ಸಂಧಿಯನು’   (ಉ.ಪ.೧೦-೭೧)
ಹಳಚುವುವು ಹಾಹೆಗಳು ಸೂತ್ರವ
ನಲುಗಿದೊಡೆ ತತ್ಪುಣ್ಯ ಪಾಪಾ
ವಳಿಗಳಾ ಹಾಹೆಗಳಿಗುಂಟೆ? ಸೂತ್ರಧರನಿರಲು  (ಉ.ಪ. ೧೦-೭೨)

ಅದ ಕಾರಣ-

ಮಣಿದು ಬದುಕುವನಲ್ಲ, ಹಗೆಯಲಿ
ಸೆಣಸಿ ಬಿಡುವವನಲ್ಲ……………
…………….. ಕೃಷ್ಣನ
ಕೆಣಕಿದಲ್ಲದೆ ವಹಿಲದಲಿ ಕೈವಲ್ಯವಿಲ್ಲ    (ಉ.ಪ. ೧೦-೭೫)

ಕೃಷ್ಣನ ಅವತಾರದ ಉದ್ದೇಶವನ್ನೂ, ಅವನು ಕೇವಲ ಸೂತ್ರಧಾರ ತಾವೆಲ್ಲರೂ ಸೂತ್ರದ ಬೊಂಬೆಗಳು ಎಂಬುದನ್ನೂ, ಕೃಷ್ಣನೇ ತನ್ನ ಹೃದಯದೊಳಗೆ ಇದ್ದುಕೊಂಡು, ಕೌರವರ ನಾಶಕ್ಕಾಗಿಯೇ ಸಂಧಿಯನ್ನು ಮುರಿದಿರುವುದರಿಂದ, ಆತನ ಕೈಯಲ್ಲಿ ಸಾಯುವುದೇ ತನ್ನ ಮುಕ್ತಿಯ ಮಾರ್ಗ ಎಂಬುದನ್ನೂ- ಬಲ್ಲ ಮಹಾ ಅನುಭಾವಿಯ ಹಾಗೆ ದುರ್ಯೋಧನನು ಮಾತನಾಡುವುದು ಎಷ್ಟು ಸಮಂಜಸ? ಕುಮಾರವ್ಯಾಸನ ಕೃಷ್ಣಭಕ್ತಿಗೆ ದುರ್ಯೋಧನನ ಪಾತ್ರವೇ ಹೀಗೆ ನೈವೇದ್ಯವಾದ ಮೇಲೆ, ಒಟ್ಟು ಕಥಾಸಂವಿಧಾನದಲ್ಲಿ ಆ ಪಾತ್ರದ ಸಮತೂಕ ಎಲ್ಲಿ ಉಳಿಯಿತು? ಪುರುಷಕಾರದ ಹಾಗೂ ಛಲದ ಪ್ರತೀಕವಾದ ಕೌರವನೇ ವೇದಾಂತಿಯಂತೆ, ಮಾತನಾಡುವ ರೀತಿಯನ್ನು ಸಹೃದಯರು ಹೇಗೆ ಗ್ರಹಿಸಬೇಕೆಂಬುದೇ ತಿಳಿಯದಾಗಿದೆ. ಕೌರವನಿಗೆ ಇದ್ದಕ್ಕಿದ್ದ ಹಾಗೆ ಜ್ಞಾನೋದಯವಾಗಿ, ಆತ ಮಹಾ ಸಂತನಂತೆ ಮಾತನಾಡುವುದು ಶ್ರೀಕೃಷ್ಣನು ಸಂಧಿಗೆ ಬಂದ ಹಾಗೂ ಸಂಧಿಯು ಮುರಿದ ಉದ್ಯೋಗ ಪರ್ವದ ಈ ಒಂದು ಸಂದರ್ಭದಲ್ಲಿ ಮಾತ್ರ; ಇದಕ್ಕೆ ಹಿಂದೆಯೂ ಅಲ್ಲ, ಮುಂದೆಯೂ ಅಲ್ಲ. ಹಾಗಾದರೆ ಕೌರವನ ತತ್ವಜ್ಞಾನದ ಈ ಕೆಲವು ಮಾತುಗಳನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು? ಕೌರವನ ಮನಸ್ಸನ್ನು ಆವರಿಸಿದ್ದ ಮಾಯೆ ಹರಿದ ಒಂದು ಅಪೂರ್ವವಾದ ಕ್ಷಣದಲ್ಲಿ, ಆ ಯುಗದ ಉದ್ದೇಶವನ್ನೂ ಹಾಗೂ ಪರಮಾತ್ಮನ ಸಂಕಲ್ಪವನ್ನೂ ನುಡಿಯುವ ಕಾರಣಿಕನಂತೆ ದುರ್ಯೋಧನನು ನಡೆದುಕೊಂಡನೆಂದು ಭಾವಿಸಬೇಕೆ? ಅಥವಾ ಕೃಷ್ಣನ ಪರವಾಗಿ ತನ್ನ ತಂದೆಯಾದ ಧೃತರಾಷ್ಟ್ರನ ಮನಸ್ಸಿನಲ್ಲಿದ್ದ ಭಾವನೆಗಳನ್ನು ವ್ಯಂಗ್ಯವಾಗಿ ಅಡಿ ಮೂದಲಿಸುತ್ತಿದ್ದಾನೆ ಎಂದು ಭಾವಿಸಬೇಕೆ? ಅಥವಾ ಜನಮನದಲ್ಲಿ ಕೃಷ್ಣನ ಅವತಾರ ತತ್ವವನ್ನು ಕುರಿತು ಪ್ರಚಲಿತವಾದ ಭಾವನೆಗಳಿಗೆ ದನಿಗೊಡುತ್ತಿದ್ದಾನೆಂದು ತಿಳಿಯಬೇಕೆ? ಹೇಳುವುದು ಕಷ್ಟ. ಒಟ್ಟಿನಲ್ಲಿ ಕೃಷ್ಣಭಕ್ತಿ ಯಾವ ವಿವೇಚನೆಯೂ ಇಲ್ಲದೆ ಎಲ್ಲ ಪಾತ್ರಗಳನ್ನೂ ಆವರಿಸಿಕೊಂಡುಬಿಡುತ್ತದೆ ಎಂಬುದಂತೂ ನಿಜ.

ಎಲ್ಲಕ್ಕಿಂತ ಮುಖ್ಯವಾಗಿ ಕುಮಾರವ್ಯಾಸ ಭಾರತದಲ್ಲಿ ವ್ಯಕ್ತಿ ಸಂಕಲ್ಪ (Individual will) ಮತ್ತು ಲೋಕಸಂಕಲR (Universal will)gಳ ಮುಖಾ ಮುಖಿ ಹಾಗೂ ಅವುಗಳ ಪರಸ್ಪರ ಸಂಬಂಧದ ಶೋಧನೆ ನಡೆದಿದೆ ಎಂದು ನಮಗೆ ತೋರುತ್ತದೆ. ಕೃಷ್ಣ ವಿಶ್ವಸಂಕಲ್ಪದ ಪ್ರತೀಕ. ಆದ್ದರಿಂದಲೇ ಆತ ಉಳಿದ ಪಾತ್ರಗಳ ಹಾಗೆ, ಲೋಕದ ಸುಖ ದುಃಖಾದಿಗಳಿಗೆ ಒಳಗಾಗುವುದಿಲ್ಲ. ಇನ್ನಿತರ ಪಾತ್ರಗಳೆಲ್ಲವೂ ವಿಧಿ-ಕರ್ಮ-ದೈವಗಳಿಂದ ನಿಯಂತ್ರಿತ- ವಾದವುಗಳು. ‘ವಿಧಿ’ ಎನ್ನುವುದು ಆಯಾ ಪಾತ್ರಗಳು ಹೋಗಿ ತಲುಪಬೇಕಾದ ಪೂರ್ವನಿಶ್ಚಿತವಾದ ಗುರಿ. ಅದು Destiny. ಈ ವಿಧಿಯೊಂದಿಗೆ ಅವರವರ ‘ಕರ್ಮ’ ಚಾಲಕ ಶಕ್ತಿಯಂತೆ ವರ್ತಿಸುತ್ತ, ಅವರವರು ಎಲ್ಲೆಲ್ಲಿಗೆ ಸಲ್ಲಬೇಕೋ, ಅಲ್ಲಲ್ಲಿಗೆ ಒಯ್ಯುತ್ತದೆ. ‘ಕರ್ಮ’ ಹಲವು ವೇಳೆ ಪೂರ್ವಜನ್ಮದ ಸಂಸ್ಕಾರಗಳ ರೂಪವಾಗಿ ವಾಸ್ತವದಲ್ಲಿ ಕಾಣಿಸಿಕೊಳ್ಳುವ ಪರಿಣಾಮವಾಗಿರುವಂತೆಯೇ, ಅಂದಂದಿನ ‘ಕರ್ಮ’ ಅಂದಂದೇ ಮುಂದೆ ‘ವಿಧಿ’ಯ ಸಂಕಲ್ಪವಾಗಿಯೂ ಕಾಣಿಸಿಕೊಳ್ಳುತ್ತದೆ. ಕೌರವರು ಪಾಂಡವರ ಬಗ್ಗೆ ಎಳೆಯಂದಿನಲ್ಲಿಯೇ ಬೆಳೆಯಿಸಿಕೊಂಡ ವೈರ, ಮುಂದೆ ಬದ್ಧ ದ್ವೇಷವಾಗುವುದು; ರಾಜಸೂಯ ಯಾಗ ಕೌರವನ ಅಸೂಯೆಯನ್ನು ಕೆರಳಿಸುವುದು; ಅದೇ ಸಂದರ್ಭದಲ್ಲಿ ಕೃತಕ ಸಭಾ ಮಂಟಪದಲ್ಲಿ ಕಾಲು ಜಾರಿ ಬಿದ್ದ ದುರ‍್ಯೋಧನನನ್ನು ಕಂಡು ದ್ರೌಪದಿಯು ನಕ್ಕ ನಗೆ, ಮುಂದೆ ಪಾಂಚಾಲಿಯ ಅವಮಾನಕ್ಕೆ ನಾಂದಿಯಾಗುವುದು; ಮೊದಲ ಜೂಜಿನಲ್ಲಿ ಸೋತು, ಧೃತರಾಷ್ಟ್ರನ ಕೃಪೆಯಿಂದ ಸೋತದ್ದನ್ನು ಹಿಂದಕ್ಕೆ ಪಡೆದು ಎಚ್ಚರ ಗೊಂಡ ಧರ್ಮರಾಯ, ಕೂಡಲೇ ನಿರ್ಣಾಯಕವಾದ ಜೂಜಿಗೆ ಮನಸ್ಸು ಮಾಡುವುದು;[3] ವಸ್ತ್ರಾಪಹರಣದಂಥ ದೌರ್ಜನ್ಯಕ್ಕೆ ಕೈ ಹಾಕಿದ ದುಶ್ಯಾಸನ ಕುರುಕ್ಷೇತ್ರದಲ್ಲಿ ಭೀಮನಿಂದ ದುರ್ಗತಿಗೆ ಈಡಾಗುವುದು ಮತ್ತು ಕೌರವನು ಭೀಮನ ಗದಾಘಾತದಿಂದ ತೊಡೆ ಮುರಿದು ಸಾಯುವುದು; ಕರ್ತವ್ಯದ ಹಾಗೂ ಜೋಳದ ಪಾಳಿಯ ನೆವದಲ್ಲಿ ಕೌರವನ ಜತೆಗೆ ನಿಂತ ಭೀಷ್ಮ ದ್ರೋಣಾದಿಗಳೂ ಕುರುಕ್ಷೇತ್ರದ ಸಮರಾಗ್ನಿಗೆ ಆಹುತಿಯಾಗುವುದು- ಹೀಗೆ ವ್ಯಕ್ತಿಗಳು ಮರಿಗೆ ಮರಿಯಿಕ್ಕುವ ಕರ್ಮಾನುಸಾರವಾಗಿ, ತಮ್ಮ ತಮ್ಮ ‘ವಿಧಿ’ಗೆ ಗುರಿಯಾಗುತ್ತಾರೆ. ಇನ್ನು ‘ದೈವ’. ಮೂರ್ತರೂಪದಲ್ಲಿ ದೈವವೂ, ಅಮೂರ್ತ ರೂಪದಲ್ಲಿ ವಿಶ್ವಸಂಕಲ್ಪವೂ ಏಕಕಾಲಕ್ಕೇ ಆಗಿರುವ ಶ್ರೀಕೃಷ್ಣಶಕ್ತಿ ಎಲ್ಲವನ್ನೂ ನಿಯಂತ್ರಿಸುತ್ತದೆ. ಶ್ರೀಕೃಷ್ಣನು ಈ ಅರ್ಥದಲ್ಲಿ, ಕುಮಾರವ್ಯಾಸ ಭಾರತದಲ್ಲಿ ಸರ್ವತಂತ್ರ ಸ್ವತಂತ್ರನಾಗಿದ್ದು ಎಲ್ಲವನ್ನೂ ನಿಯಂತ್ರಿಸುತ್ತಾನೆ ಎಂದ ಮಾತ್ರಕ್ಕೆ, ಅವನು ಆಯಾ ಪಾತ್ರಗಳ ವ್ಯಕ್ತಿ ಸಂಕಲ್ಪಕ್ಕೆ ಇರುವ ಸ್ವಾತಂತ್ರ್ಯವನ್ನು ಮೊಟಕುಗೊಳಿಸುತ್ತಾನೆ ಎಂದು ತಿಳಿಯಬಾರದು. ಜೀವಿಗಳಿಗೆ ಇಚ್ಛೆಯ ಸ್ವಾತಂತ್ರ್ಯವನ್ನು ಕೊಟ್ಟೂ, ಅದು ‘ವಿಶ್ವ ಸಂಕಲ್ಪ’ಕ್ಕೆ ವಿರೋಧಿಯಾಗದಂತೆ ನೋಡಿಕೊಳ್ಳುತ್ತಾನೆ. ಈ ದೃಷ್ಟಿಯಿಂದ ಕುಮಾರವ್ಯಾಸನ ಶ್ರೀಕೃಷ್ಣ ದಿವ್ಯಮಾನುಷ ಸತ್ವದ ಮೂರ್ತಿಯಾಗಿದ್ದಾನೆ. ಆದುದರಿಂದಲೆ ಆತನ ವ್ಯವಹಾರ ಎಲ್ಲೂ ಮನುಷ್ಯತ್ವದ ಸ್ವಾಯತ್ತತೆ ಹಾಗೂ ವಿಕಾಸಕ್ಕೆ ಮಾರಕವಾಗುವುದಿಲ್ಲ. ಆತನ ನಡವಳಿಕೆ ಮನುಷ್ಯತ್ವದ ಮರ್ಯಾದೆಯನ್ನು ಉಲ್ಲಂಘಿಸುವುದಿಲ್ಲ; ಅದರ ಬದಲು ಆತನ ದೈವಿಕತೆ ಮನುಷ್ಯತ್ವಕ್ಕೆ ಘನತೆಯನ್ನೂ ಸ್ವಾತಂತ್ರ್ಯವನ್ನೂ ನೀಡಿ, ವಿಶ್ವ ಸಂಕಲ್ಪವನ್ನು ಪೂರೈಸುವ ಸಾಧನದಂತೆ ವರ್ತಿಸುತ್ತದೆ. ಕುಮಾರವ್ಯಾಸನ ಮಹತ್ತು ಇರುವುದು ಈ ಒಂದು ‘ದರ್ಶನ’ದಲ್ಲಿ.

(೧೯೯೨)

* * *


[1] ನೋಡಿ: ಸಭಾಪರ್ವ: ಸಂಧಿ-೯; ಪದ್ಯ ೩ ರಿಂದ ೩೨ ರವರೆಗೆ, ಮತ್ತು ಸಂಧಿ ೧೪; ಪದ್ಯ ೧೧೧ ರಿಂದ ೧೨೯.

[2] ವಿವರಗಳಿಗೆ ನೋಡಿ : ಇದೇ ಕೃತಿಯಲ್ಲಿ ಪು. ೧೧, ೧೨ ಮತ್ತು ೧೩.

[3] ಅಖಿಳ ನೃಪ ಸಂಹಾರ ಬೀಜದ ಕರ್ಮಫಲ ಸಂಸ್ಕಾರ, ಅಳ್ಳೆಯನಿರಿದುನೂಕಿತು (ಜೂಜಾಟಕ್ಕೆ) ಧರ್ಮನಂದನನ (ಸಭಾಪರ್ವ ೧೩-೪೧)