ದಿನಾಂಕ ೧೬-೯-೧೯೬೩ ರಲ್ಲಿ ಧೀಮಂತ ಸಾಹಿತಿ ಡಾ. ಅ.ನ.ಕೃಷ್ಣರಾಯರ ಸಲಹೆಯಂತೆ ಕನ್ನಡ ಸಹೃದಯರ ಸಂಘ ಎನ್ನುವ ವೇದಿಕೆಯೊಂದು ಜನ್ಮ ತಾಳಿತು. ಆಧ್ಯಾತ್ಮಿಕ, ಸಾಂಸ್ಕೃತಿಕ, ಸಾಹಿತ್ಯಕ ಚಟುವಟಿಕೆಗಳು ನಿರಂತರ ನಡೆಯಬೇಕು ಎನ್ನುವುದು ಈ ವೇದಿಕೆಯ ಉದ್ದೇಶವಾಗಿತ್ತು. ಅಂದು ಆರಂಭವಾದ ಈ ವೇದಿಕೆಯ ಪ್ರತಿ ದಿನದ ಕಾರ್ಯಕ್ರಮಗಳು ಇಂದಿನವರೆಗೂ ಯಾವುದೇ ಕಠಿಣ ಸಂದರ್ಭದಲ್ಲೂ ನಿಂತಿಲ್ಲ ಎನ್ನುವುದು ವಿಶೇಷ. ೧೯-೫-೧೯೭೨ ರಲ್ಲಿ ಸಂಘದ ಸೋಗೆಗರಿ ಆವರಣಕ್ಕೆ ಬೆಂಕಿ ಬಿದ್ದು ಎಲ್ಲವೂ ಭಸ್ಮವಾದರೂ ಆ ಭಸ್ಮವನ್ನು ಶುಚಿಗೊಳಿಸಿ ಅಂದೂ ಕಾರ್ಯಕ್ರಮ ನಡೆಸಿದ ಸಾಹಸಿ ಸಂಸ್ಥೆ ಇದು. ಬೆಂಕಿಗಾಹುತಿಯಾದ ಸೋಗೆಗರಿ ಆವರಣದಲ್ಲಿ ಶ್ರೋತೃಗಳ ಸಹಕಾರದಿಂದ ಭವ್ಯ ಮಂಟಪವೊಂದು ನಿರ್ಮಾಣವಾಗಿ ’ಕುಮಾರವ್ಯಾಸ ಮಂಟಪ’ ಎಂದು ಹೆಸರಾಯಿತು. ಈಗ ಈ ಸಂಸ್ಥೆಯ ಸಲಹೆಗಾರರಾಗಿ ಪ್ರೊ. ಜಿ. ವೆಂಕಟಸುಬ್ಬಯ್ಯನವರು ಮಾರ್ಗದರ್ಶನ ಮಾಡುತ್ತಿದ್ದಾರೆ. ಸುಮಾರು ೧೪ ಸಾವಿರ ದಿನಗಳ ನಿರಂತರ ಕಾರ್ಯಕ್ರಮದಲ್ಲಿ ಸುಮಾರು ೪೦೦೦ ಕ್ಕೂ ಹೆಚ್ಚು ಸಾಹಿತಿ ಕಲಾವಿದರು ಭಾಗವಹಿಸಿದ್ದಾರೆ ಎಂಬುದೇ ಈ ಸಂಸ್ಥೆಯ ಹೆಗ್ಗಳಿಕೆ.

ಈವರೆಗೆ ಕುಮಾರವ್ಯಾಸ ಮಂಟಪದಲ್ಲಿ ಹಲವು ಬಾರಿ ಕುಮಾರವ್ಯಾಸ ಭಾರತ, ತೊರವೆ ರಾಮಾಯಣ, ಪಂಪ ಭಾರತ, ರನ್ನನ ಗದಾಯುದ್ಧ, ರಾಘವಾಂಕನ ಹರಿಶ್ಚಂದ್ರ ಕಾವ್ಯ, ಜೈಮಿನಿ ಭಾರತ ಮುಂತಾದ ಪ್ರಾಚೀನ ಕಾವ್ಯಗಳ ವಾಚನ – ವ್ಯಾಖ್ಯಾನಗಳು ನಡೆದಿವೆ. ಇವತ್ತಿಗೂ ಆಧ್ಯಾತ್ಮಾಸಕ್ತರು ಯಾರೇ ಆದರೂ ಯಾವುದೇ ಪೂರ್ವ ಮಾಹಿತಿಯಿಲ್ಲದೆ ಸಂಜೆ ಕುಮಾರವ್ಯಾಸ ಮಂಟಪಕ್ಕೆ ಬಂದರೆ ಅಲ್ಲಿ ಒಂದಿಲ್ಲೊಂದು ಕಾರ್ಯಕ್ರಮವನ್ನು ವೀಕ್ಷಿಸಬಹುದಾಗಿದೆ.

ಮಂಟಪದ ನಿಗಧಿತ ಕಾರ್ಯಕ್ರಮಗಳ ಜೊತೆಗೆ ವಾರ್ಷಿಕ ಒಂದು ವಾರಾವಧಿಯ ಕುಮಾರವ್ಯಾಸ ಜಯಂತಿ ಮತ್ತು ಪ್ರತಿಷ್ಠಾನದ ವಾರ್ಷಿಕೋತ್ಸವ ಬಹಳ ವಿಜೃಂಭಣೆಯಿಂದ ನಡೆಯುತ್ತದೆ. ಈ ಸಂದರ್ಭದಲ್ಲಿ ದಿನಪೂರ್ತಿ ಗಮಕ ವಾಚನ – ವ್ಯಾಖ್ಯಾನಗಳು ನಡೆಯುವುದಲ್ಲದೆ ಪ್ರತಿವರ್ಷ ಓರ್ವ ಹಿರಿಯ ಗಮಕಿಗಳನ್ನು ಆಹ್ವಾನಿಸಿ ಸನ್ಮಾನಿಸಲಾಗುತ್ತದೆ.

ಈ ಕ್ರಿಯಾಶೀಲ ಸಂಸ್ಥೆಗೆ ೨೦೦೭-೦೮ರ ಸಾಲಿನ ವಾರ್ಷಿಕ ಪ್ರಶಸ್ತಿಯನ್ನು ನೀಡಿ ಗೌರವಿಸಲು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಹೆಮ್ಮೆ ಪಡುತ್ತದೆ.