ಕನ್ನಡನಾಡು ವಿಸ್ತಾರವಾದದ್ದು ಇಲ್ಲಿ ಆಳಿದ ಅರಸರು, ಬಾಳೀದ ಜನರು ಕನ್ನಡನಾಡಿಗೆ ಕೀರ್ತಿ ತಂದಿದ್ದಾರೆ. ಕನ್ನಡ ನಾಡಿನಲ್ಲಿ ಇರುವಷ್ಟು ವೈವಿಧ್ಯ ಇನ್ನೊಂದು ಕಡೆಗಿಲ್ಲ. ವೈವಿಧ್ಯ ಇದ್ದೂ ಸಹಭಾವದಿಂದ ಬಾಳುವ ಪ್ರಯತ್ನ ಮಾಡಿದ್ದಾರೆ. ಸಹಜೀವನದ, ಸಮನ್ವಯ ದೃಷ್ಟಿಯ ಮಹತ್ವವನ್ನು ಕನ್ನಡ ನಾಡಿನ ಮಹಾಕವಿಗಳು ಕಾಲಕಾಲಕ್ಕೆ ಸಾರುತ್ತ ಬಂದಿದ್ದಾರೆ.

ರಾಮಾಯಣ ಮತ್ತು ಮಹಾಭಾರತ ಇವು ಭಾರತದ ಅಜರಾಮರ ಕಾವ್ಯಗಳು. ಒಂದು ಕಾವ್ಯ, ಮತ್ತೊಂದು ಇತಿಹಾಸ. ರಾಮನಾಥ ಉಜ್ವಲವಾದ ಚಾರಿತ್ಯ್ರಕ್ಕೂ ಅಪವಾದ ತಪ್ಪಲಿಲ್ಲ. ಅಪವಾದ ರಹಿತ ಜೀವನವನ್ನು ಸಾಗಿಸುವುದು ಮಹಾಕಷ್ಟ ಎಂಬ ವಿಚಾರವನ್ನು ರಾಮಾಯಣ ಮಹಾಕಾವ್ಯವು ಬಿತ್ತರಿಸಿದೆ. ಸಹೋದರರ ದ್ರೋಹಶಾಸನದ ಕಥೆಯನ್ನು ನಾವು ಮಹಾಭಾರತದಲ್ಲಿ ಕಾಣುತ್ತೇವೆ.

ಆದಿಕವಿ ಪಂಪನ “ವಿಕ್ರಮಾರ್ಜುನ ವಿಜಯ”, ರನ್ನನ “ಸಾಹಸಭೀಮ ವಿಜಯ”, ಅರ್ಜುನನ “ಕರ್ಣಾಟ ಭಾರತ ಕಥಾಮಂಜರಿ”, ತಿಮ್ಮಣ್ಣ ಕವಿಯ “ಕೃಷ್ಣರಾಜ ಭಾರತ”, ಚಾಟುವಿಠ್ಠಲನ “ಭಾರತ”, ಕನಕದಾಸನ “ನಳಚರಿತ್ರೆ”, ಸಾಳ್ವನ “ಸಾಳ್ವಭಾರತ”, ಲಕ್ಮೀಶನ “ಜೈಮಿನಿ ಭಾರತ”, ಗೋಪಕವಿಯ “ಚಿತ್ರಭಾರತ” ಮೊದಲಾದವುಗಳೆಲ್ಲ ಮಹಾಭಾರತ ಸಮುದ್ರಮಂಥನದಿಂದ ಕವಿಗಳಿಗೆ ದೊರೆತ ಮಹಾರತ್ನಗಳು!

ಕುಮಾರವ್ಯಾಸನ ಸ್ಥಳಕಾಲ

ಯಾರು ರಚಿಸಿದ ಭಾರತವಾದರೂ ಅದಕ್ಕೆ ಮೂಲ ಆಕರ ಮಹಾಭಾರತವೇ. ಅರ್ಜುನ ಭಾರತದಲ್ಲಿ ಒಂದೆರಡು ಕಡೆ ಜೈಮಿನಿ ಭಾರತದ ಕಥೆಗಳೂ ಸೇರಿಕೊಂಡಿವೆ ಎಂದು ವಿಮರ್ಶಕರ ಅಭಿಪ್ರಾಯ. ಅರ್ಜುನನ ಕಣ್ಣ ಮುಂದೆ ಇದ್ದ ವ್ಯಾಸಭಾರತದಲ್ಲಿಯೆ ಆ ಕಥೆಗಳು ಸೇರಿಕೊಂಡಿರಲೂಬಹುದು. ಏನೇ ಇರಲಿ ಅರ್ಜುನನು ವ್ಯಾಸಭಾರತವನ್ನು ಚೆನ್ನಾಗಿ ಅಭ್ಯಸಿಸಿ, ಅದನ್ನು ಅನುವಾದಿಸದೇ ತನ್ನದೇ ಆದ ಒಂದು ಸ್ವತಂತ್ರ ಕೃತಿಯನ್ನು ಕನ್ನಡಕ್ಕೆ ನೀಡಿ ಉಪಕಾರ ಮಾಡಿದ್ದಾನೆ.

ಕುಮಾರವ್ಯಾಸನು ಮಹಾಕವಿ ಎಂಬುದರ ಬಗ್ಗೆ ಭಿನ್ನಾಭಿಪ್ರಾಯವಿಲ್ಲ. ಇಂಥ ಮಹಾಕವಿ ಜನಿಸಿದ ಊರು, ಅವನ ತಂದೆ – ತಾಯಿ, ಅವನ ಲೌಕಿಕ ಜೀವನ ತಿಳಿದುಕೊಳ್ಳುವ ಕುತುಹಲ ಸಹಜ. ಅನೇಕ ಸಲ ಸಾಹಿತ್ಯ ನಿರ್ಮಿತಿಗೆ ಲೌಕಿಕ ಜೀವನವು ಪ್ರೇರಣೆ ಕೊಡುತ್ತದೆ. ಅರ್ಜುನ ಲೌಕಿಕ ಜೀವನದಲ್ಲಿ ವೀರಭಕ್ತ. ಆದುದರಿಂದ ಅವನು ಸೃಷ್ಟಿಸಿದ ಭಾರತವೂ ಭಕ್ತಿರಸ ಪ್ರಧಾನವಾದ ಕಾವ್ಯವಾಗಿದೆ.

ಧಾರವಾಡ ಜಿಲ್ಲೆಯಲ್ಲಿ ಗದಗು ಎಂಬುದು ತಾಲೂಕು. ಆ ಗದಗಿನ ಪಶ್ಚಿಮಕ್ಕೆ ನಾಲ್ಕು ಹರದಾರಿ ಹೋದರೆ ಪಂಪನ ಅಣ್ಣಿಗೇರಿ. ಅಲ್ಲಿಂದ ಪಶ್ಚಿಮಕ್ಕೆ ಒಂದು ಹರದಾರಿ ಭದ್ರಾಪುರ. ಇಲ್ಲಿಂದ ದಕ್ಷಿಣಕ್ಕೆ ಹೋದರೆ ಕೋಳಿವಾಡ – ಕೋಳಿಂಗನಪುರ ಸಿಗುತ್ತದೆ.

ಕೋಳಿವಾಡ ಶಾನಭೋಗರ ಮೂಲಪುರುಷ ಸಂಗಮರಸಯ್ಯ. ಸಂಗಮರಸಯ್ಯನ ಮಗ ಚಿನ್ನದ ಕೈಮಾಧವರಸಯ್ಯ. ಇವನ ಮೊಮ್ಮಗ ಲಕ್ಕರಸ. ಇವನಿಗೆ ಬಹಳ ದಿವಸ ಮಕ್ಕಳಾಗಲಿಲ್ಲ. ಈತನು ಗದುಗಿನ ಶ್ರೀ ವೀರನಾರಾಯಣಸ್ವಾಮಿಯಲ್ಲಿ “ನನಗೆ ಪುತ್ರ ಸಂತಾನವಾದರೆ, ನಿನ್ನ ಹೆಸರನ್ನಿಟ್ಟು, ನಿನ್ನನ್ನೇ ಕುಲದೇವರೆಂದು ಆರಾಧಿಸುವೆ” ಎಂದು ಬೇಡಿಕೊಂಡನು. ಗದುಗಿನ ವೀರನಾರಾಯಣನ ವರಪ್ರಸಾದದಿಂದ ಜನಿಸಿದ ಜ್ಯೇಷ್ಠ ಪುತ್ರನಿಗೆ ವೀರನಾರಾಯಣ ಎಂದೇ ನಾಮಕರಣ ಮಾಡಲಾಯಿತು. ಕೃಷ್ಣರಸ, ಶಂಕರಸ, ತಿರಮಲರಸ ಮತ್ತು ಅಶ್ವತ್ಥರಸ ಎಂದು ವೀರನಾರಾಯಣನ ಸಹೋದರರು. ಅಶ್ವತ್ಥರಸ ಸಂತತಿ ನಿಂತುಹೋಗಿ ಉಳಿದ ನಾಲ್ಕು ಜನರ ಸಂತತಿಯ ಜನರು ಕೋಳಿವಾಡದಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿದೆ. ಈ ವಂಶಜರಯ ೧೯೫೬ ರಿಂದ ಅರ್ಜುನ ಸ್ಮಾರಕ ಸಂಸ್ಥೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ.

ಈ ವೀರನಾರಾಯಣನೇ ಗದುಗಿನ ವೀರ ನಾರಾಯಣ ಸ್ವಾಮಿಯ ಭಕ್ತಾಗ್ರಣಿಯಾಗಿ ಗದುಗಿನಲ್ಲಿಯೇ ನೆಲಸಿದವನು. ವೀರನಾರಾಯಣನ ಉತ್ಸವಾದಿ ಸೇವೆಯನ್ನು ವಿಜೃಂಭಣೆಯಿಂದ ಮಾಡುತ್ತ ಕೋಳಿವಾಡದ ಲಕ್ಕರಸನ ಮಗ ವೀರನಾರಾಯಣನು ಗದುಗಿನ ಅಚ್ಚುಮೆಚ್ಚಿನ ನಾರಣಪ್ಪನಾದ ಎಂದು ಐತಿಹ್ಯ. ವೀರನಾರಾಯಣನ ಸೇವಾ ಪುಣ್ಯ ಫಲದಿಂದ ನಾರಣಪ್ಪನಿಗೆ ಸ್ವಪ್ನದೃಷ್ಟಾಂತವಾಯಿತು. ಆ ಪ್ರಕಾರ ಒಬ್ಬ ಶ್ರೀಮಂತರ ಮನೆಯ ಭೋಜನ ಸಮಾರಂಭದ ಕಾಲಕ್ಕೆ ಚಿರಂಜೀವಿಯಾಗಿ ಸಂಚರಿಸುತ್ತಿರುವ ಅಶ್ವತ್ಥಾಮಚಾರ್ಯರ ಭೇಟಿಯಾಯಿತು. ಅವರಿಂದ ಮಹಾಭಾರತ ಕಥೆಯ ಬೋಧ ನಾರಣಪ್ಪನಿಗೆ ಆಯಿತು. ಅಂದಿನಿಂದ ಪ್ರತಿ ಚಿವಸ ನಾರಣಪ್ಪನು ವೀರನಾರಾಯಣನ ಪೂಜೆಯನ್ನು ಒದ್ದೆಯ ಪಂಚೆ ಧರಿಸಿಯೇ ಮಾಡಿ, ಅಲ್ಲಿಯೇ ಒಂದು ಕಂಬದ ಬಳಿ ಕುಳಿತು ಆವೇಶದಿಂದ ಕನ್ನಡ ಭಾರತವನ್ನು ರಚಿಸಿದನು. ಒದ್ದೆಯ ಪಂಚೆ ಆರುವವರೆಗೆ ವೀರನಾರಾಯಣನ ಆವೇಶ ಕವಿಯಲ್ಲಿ ಇರುತ್ತಿತ್ತು ಎಂದು ಒಂದು ದಂತಕಥೆ. “ವೀರನಾರಾಯಣನೆ ಕವಿ, ಲಿಪಿಕಾರ ಕುಮಾರವ್ಯಾಸ” ಎಂಬ ನಾರಣಪ್ಪನ ಉಕ್ತಿಯ ಮೂಲಕ ಮೇಲಿನ ದಂತಕಥೆಯಲ್ಲಿ ಸತ್ಯಾಂಶ ಇರಬೇಕು ಎಂದು ತೋರುತ್ತದೆ.

ಮಹಾಭಾರತವನ್ನು ರಚಿಸಿದ ಮೇಲೆ ನಾರಣಪ್ಪ “ಕುಮಾರವ್ಯಾಸ” ನೆಂದೂ ಅವನು ರಚಿಸಿದ ಭಾರತ “ದುಗಿನ ಭಾರತ” ಎಂದೂ ಪ್ರಚಾರ ನಡೆದುಬಂದಿದೆ. ಗದುಗಿನ ಭಾರತ ರಚನೆಯಾದ ವೀರನಾರಾಯಣ ಸ್ವಾಮಿಯ ಗುಡಿಯೊಳಗಿನ ಕಂಬವೂ ಪೂಜ್ಯವಾಗಿದೆ, ಪವಿತ್ರವಾಗಿದೆ, ದರ್ಶನೀಯವಾಗಿದೆ.

ಕುಮಾರವ್ಯಾಸನ ಕಾಲ ಮತ್ತು ಮತ ನಿರ್ಣಯಿಸುವುದು ಕಷ್ಟ. ಅವನು ಹದಿನೈದನೆಯ ಶತಮಾನದ ಕವಿ ಎಂದು ಒಪ್ಪುವುದರಲ್ಲಿ ಯಾವ ಆತಂಕವೂ ಇಲ್ಲ.

ಕುಮಾರವ್ಯಾಸನು ಅದ್ವೈತಿಯಾದ ಸ್ಮಾರ್ತ ಬ್ರಾಹ್ಮಣ, ಹರಿಭಕ್ತನಿರತ, ಹೀಗಿದ್ದೂ ಹರಿಹರದಲ್ಲಿ ಭೇದವೆಣಿಸಿದ ಭಾಗವತ ಸಂಪ್ರದಾಯಿ. “ಬಣಗುಕವಿಗಳ ಲೆಕ್ಕಿಪನೆ, ಸಾಕೆಣಿಸದಿರು ಶುಕರೂಪನಲ್ಲವೆ, ಕುಣಿಸಿ ನಗನೇ ಕವಿ ಅರ್ಜುನನುಳಿದವರ” ಎಂಬ ಉಕ್ತಿಯಲ್ಲಿ ಕುಮಾರ ವ್ಯಾಸನ ಭಾರತವು ಭಗವತ ದೃಷ್ಟಿಯಿಂದ (ಶುಕರೂಪ) ಬರೆದ ಕಾವ್ಯ ಎಂಬ ವಿಚಾರವು ಸ್ಪಷ್ಟವಾಗಿದೆ. ಅರ್ಜುನನ ಭಾರತವು ಜೈನ, ವೀರಶೈವ, ಬ್ರಾಹ್ಮಣ ಮೊದಲಾದ ಎಲ್ಲ ಪಂಗಡದವರಿಂದಲೂ ಮನ್ನಣೆ ಪಡೆದಿದೆ. ಇದಕ್ಕೆ ಕಾರಣ ಅದು ಕನ್ನಡನಾಡಿನ ಮಹಾಕಾವ್ಯ. ಪಂಪ, ರನ್ನ ಬಸವಣ್ಣ, ಹರಿಹರ, ಪುರಂದರದಾಡ, ಕನಕದಾಸ, ಲಕ್ಷ್ಮೀಶ, ರತ್ನಾಕರ, ಮುದ್ದಣ ಮೊದಲಾದ ಕನ್ನಡ ರತ್ನಗಳು ಯಾವ ಕಾಲದವೇ ಇರಲಿ. ಯಾವ ಮತದವೇ ಇರಲಿ ಆ ವಿಷಯ ಮುಖ್ಯವಲ್ಲ. ಅವರು ಕನ್ನಡನಾಡಿಗೆ ಚಿರಂತನವಾದ ಕೀರ್ತಿಯನ್ನು ತಂದು ಕೊಟ್ಟಿದ್ದಾರೆ. ಅವರ ಕಾವ್ಯಗಳೆಂದರೆ ಕನ್ನಡ ನಾಡಿನ ಕೀರ್ತಿಪತಾಕೆಗಳು, ಆದುದರಿಂದ ಕುಮಾರವ್ಯಾಸನು ಜನಿಸಿದ ಸ್ಥಳ ಕನ್ನಡನಾಡಿನ ಪುಣ್ಯ ಸ್ಥಳ; ಕುಮಾರವ್ಯಾಸನ ಕಾಲ ಕನ್ನಡ ಜನತೆಯ ಪುಣ್ಯಕಾಲ ಮತ್ತು ಅರ್ಜುನನ ಮತ ಕೃಷ್ಣಮತ.

ಅಶ್ವತ್ಥಾಮಾಚಾರ್ಯರಿಂದ ಮಹಾಭಾರತದ ಕಥೆಯ ಬೋಧ ನಾರಣಪ್ಪನಿಗೆ ಆಯಿತು

ಕವಿ ಅಶಾಶ್ವತ. ಅವನು ರಚಿಸಿದ ಕಾವ್ಯ ಶಾಶ್ವತ. ಕುಮಾರವ್ಯಾಸನು ಸುಮಾರು ೧೭೫ ಸಂಧಿಗಳ, ದಶಪರ್ವದ ಮಹಾಭಾರತವನ್ನು ಕನ್ನಡಗರಿಗೆ ನೀಡಿದ್ದಾನೆ. ಕ್ರಿ.ಶ. ೧೫೦೯ ರಿಂದ ೧೫೨೯ ರವರೆಗೆ ಆಳಿದ ಕರ್ನಾಟಕ ಚಕ್ರವರ್ತಿ ವಿಜಯನಗರದ ಕೃಷ್ಣ ದೇವರಾಯನ ಮೇಲೆ ಕುಮಾರವ್ಯಾಸನ ಭಾರತದ ಪ್ರಭಾವವಾಯಿತು. ಅದರಿಂದ ಅವನು ತನ್ನ ಆಸ್ಥಾನ ಕವಿಯಾದ ತಿಮ್ಮಣ್ಣ ಕವಿಗೆ ಭಾರತದ ಇನ್ನುಳಿದ ಎಂಟು ಪರ್ವಗಳನ್ನು ಜಗಮೆಚ್ಚುವಂತೆ ಕನ್ನಡದಲ್ಲಿ ರಚಿಸು ಎಂದು ಅಜ್ಞಾಪಿಸಿದನು. ಕುಮಾರವ್ಯಾಸನ ದಶಪರ್ವಗಳನ್ನು ಓದಿದಾಗ ಅದು ಅಪೂರ್ಣ ಎಂದು ಎನಿಸುವುದಿಲ್ಲ. ಹತ್ತನೆಯ ಪರ್ವದ ಫಲಶ್ರುತಿಯನ್ನು ಓದಿದಾಗ, ಕುಮಾರವ್ಯಾಸನು ಹತ್ತು ಪರ್ವಗಳಲ್ಲಿಯೇ ತನ್ನ ಭಾರತ ರಚನೆಯನ್ನು ಮುಗಿಸುವುದೆಂದು ನಿರ್ಣಯಿಸಿದ್ದನೆಂದು ಮನವರಿಕೆಯಾಗುತ್ತದೆ. ಅರ್ಜುನನು “ಐರಾವತ” ಎಂಬ ೮ ಸಂಧಿಯ ಇನ್ನೊಂದು ಚಿಕ್ಕ ಕಾವ್ಯ ರಚಿಸಿದ್ದನು ಎಂದು ಕೆಲವರ ಅಭಿಪ್ರಾಯ.

ಭಾನಿಮಿ ಷಟ್ಟದಿ ಕಾವ್ಯಗಳಿಗೆಲ್ಲ ಕುಮಾರವ್ಯಾಸನ ಭಾರತವೇ ಗುರು.

ಸ್ವರೂಪ

ಕುಮಾರವ್ಯಾಸ ಭಾರತದಲ್ಲಿ ಹತ್ತು ಪರ್ವಗಳಿವೆ. ಆದಿಪರ್ವ, ಸಭಾಪರ್ವ, ಅರಣ್ಯಪರ್ವ, ವಿರಾಟಪರ್ವ, ಉದ್ಯೋಗಪರ್ವ, ಭೀಷ್ಮಪರ್ವ, ದ್ರೋಣಪರ್ವ, ಕರ್ಣಪರ್ವ, ಶಲ್ಯಪರ್ವ ಮತ್ತು ಗದಾಪರ್ವ ಎಂದು ಹೆಸರು. ಪ್ರತಿ ಪರ್ವಗಳಲ್ಲಿ ಅನುಕ್ರಮವಾಗಿ ಆದಿಪರ್ವ – ೩೭ ಸಂಧಿ, ಸಭಾಪರ್ವ – ೧೭ ಸಂಧಿ, ಅರಣ್ಯ ಪರ್ವ – ೨೬ ಸಂಧಿ, ವಿರಾಟಪರ್ವ – ೧೧ ಸಂಧಿ, ಉದ್ಯೋಗ ಪರ್ವ – ೧೨ ಸಂಧಿ, ಭೀಷ್ಮಪರ್ವ – ೧೦ ಸಂಧಿ, ದ್ರೋಣಪರ್ವ – ೧೯ ಸಂಧಿ, ಕರ್ಣಪರ್ವ – ೨೭ ಸಂಧಿ ಶಲ್ಯಪರ್ವ – ೩ ಸಂಧಿ ಮತ್ತು ಗದಾಪರ್ವ – ೧೩ ಸಂಧಿ ಎಂದು ಸುಮಾರಾಗಿ ಹೇಳಬಹುದು. ಪ್ರತಿಯೊಂದು ಸಂಧಿಯಲ್ಲಿ ಇಂತಿಷ್ಟೇ ಪದ್ಯ ಎಂದು ಹೇಳುವುದು ಅಸಾಧ್ಯ. ಸಂಧಿ ಸಂಖ್ಯೆಯಲ್ಲಿಯೂ ಹೆಚ್ಚು ಕಡಿಮೆ ಇರುವುದನ್ನು ಕಾಣಬಹುದು. ಇದಕ್ಕೆ ಕಾರಣ, ಕುಮಾರವ್ಯಾಸ ಭಾರತವು ಅತಿಪ್ರಚಾರ ಹೊಂದಿದ ಕಾವ್ಯ. ಅದರ ಹಸ್ತಪ್ರತಿಗಳು, ತಾಡೋಲೆ ಪ್ರತಿಗಳು ಕನ್ನಡ ನಾಡಿನ ತುಂಬಾ ಹರಡಿವೆ. ಪ್ರತಿಕಾರ ಕೈವಾಡದಿಂದ ಸಂಧಿ ಸಂಖ್ಯೆ, ಪದ್ಯ ಸಂಖ್ಯೆಗಳಲ್ಲಿ ಹೆಚ್ಚು ಕಡಿಮೆ ಆಗಿದೆ. ಅತ್ಯಂತ ವಿಸ್ತಾರವಾದದ್ದು ಆದಿಪರ್ವ ಮತ್ತು ಅತ್ಯಂತ ಚಿಕ್ಕದು ಶಲ್ಯಪರ್ವ ಎಂಬುದು ನಿಶ್ಚಿತ.

ಮಹಾಭಾರತದ ಕಥೆ ಭಾರತೀಯರಿಗೆ ಅಪರಿಚಿತವೇನಲ್ಲ. ಪ್ರಚಾರದಲ್ಲಿರುವ ಅನೇಕ ಕಥೆಗಳು ಮಹಾಭಾರತದೊಳಗಿನವು ಎಂಬುದು ಕೆಲವರಿಗೆ ಗೊತ್ತಿರುವುದಿಲ್ಲ ಅಷ್ಟೆ. ಕೌರವರು, ಪಾಂಡವರು, ವ್ಯಾಸ, ಕೃಷ್ಠ, ಗಾಂಧಾರಿ, ಕುಂತಿ, ಬಕ, ಘಟೋತ್ಯಚ, ಜರಾಸಂಧ, ಶಿಶುಪಾಲ, ನಳ, ದಮಯಂತಿ ಇತ್ಯಾದಿ ಅನೇಕ ಹೆಸರು, ಕಥೆ ಜನರ ಆಡುಮಾತಿನಲ್ಲಿ ಸೇರಿ ನಾಣ್ನುಡಿಯ ಪಟ್ಟಕ್ಕೇರಿವೆ.

ಶ್ರೀ ಕೃಷ್ಣನ ಕಥೆ

“ಶ್ರೀವನಿತೆಯರಸನೆ, ವಿಮಲ ರಾ
ಜೀವಪೀಠನ ಪಿತನೆ, ಜಗಕತಿ
ಪಾವನನೆ, ಸನಕಾದಿಸಜ್ಜನನಿಕರ ದಾತಾರ
ರಾವಣಾಸುರಮಥನ, ಶ್ರವಣ ಸು
ಧಾವಿನೂತನ ಕಥನ ಕಾರಣ,
ಕಾವುದಾನತ ಜನವ ಗದುಗಿನ ವೀರನಾರಾಯಣ”

– ಎಂಬ ಪ್ರಾರ್ಥನೆಯೊಂದಿಗೆ ಕುಮಾರವ್ಯಾಸನು ತನ್ನ ಭಾರತವನ್ನು ಪ್ರಾರಂಭಿಸಿದ್ದಾನೆ. ಅನಂತರ ಶಿವ, ಗಣಪತಿ, ಸರಸ್ವತಿ, ಶಕ್ತಿ ಸ್ತುತಿ ಮಾಡಿ, ತನ್ನ ಕಾವ್ಯದ ರೀತಿ ಮತ್ತು ಮಹತ್ವವನ್ನು ವರ್ಣಿಸಿದ್ದಾನೆ. “ಹಲವು ಜನ್ಮದ ಪಾಪರಾಶಿಯನ್ನು ತೊಳೆವ ಜಲದಂತೆ ಇದ್ದ, ಪಂಚಮ ಶ್ರುತಿಗೆ ಸಮಾನವಾಗಿದ್ದ ಮಹಾಭಾರತದೊಳಗಿನ ಶ್ರೀ ಕೃಷ್ಣ ಕಥೆಯನ್ನು ಜಾಣರು ಮೆಚ್ಚುವಂತೆ ಹೇಳುತ್ತೇನೆ” ಎಂದಿದ್ದಾನೆ ಕವಿ. ಹತ್ತೂ ಪರ್ವಗಳಲ್ಲಿ ಶ್ರೀ ಕೃಷ್ಣನ ದೇವಲೀಲೆಯನ್ನು ವಿಸ್ರತಿಸುವುದೇ ಅರ್ಜುನನ ಪ್ರತಿಜ್ಞೆ, ಹತ್ತೂ ಪರ್ವಗಳ ಕಥಾನಕವನ್ನು ವಿಸ್ತಾರವಾಗಿ ಹೇಳುವುದು ಇಲ್ಲಿ ಅಸಾಧ್ಯ. ಶ್ರೀಕೃಷ್ಣನು ಮಾನವ ರೂಪದಲ್ಲಿ ಅವತರಿಸಿ, ಅರ್ಜುನನ ಗೆಳೆಯನಾಗಿ, ದುಷ್ಟ ಸಂಹಾರ ಮತ್ತು ಶಿಷ್ಟಪರಿಪಾಲನೆಯನ್ನು ಮಾಡುವಲ್ಲಿ ತನ್ನ ದೈವಿಕತೆಯನ್ನು ಹೇಗೆ ಪಾಂಡವರ ಅನುಭೂತಿಗೆ ತಂದುಕೊಡುತ್ತಾನೆ ಎಂಬುದನ್ನು ಕೆಲವು ಪ್ರಸಂಗಗಳಲ್ಲಿ ನೋಡೋಣ.

ದೇವಸಂಕಲ್ಪ

ಆದಿಪರ್ವದಲ್ಲಿ ಸನಕಾದಿ ಮುನಿಗಳು ತಮ್ಮ ಶಿಷ್ಯನೊಂದಿಗೆ ಶ್ರೀಮನ್ನಾರಾಯಣನ ದರ್ಶನಕ್ಕಾಗಿ ಹೋಗುತ್ತಾರೆ. ಆಗ ದ್ವಾರಪಾಲಕರಾದ ಜನ ಮತ್ತು ವಿಜಯರು ಅವರನ್ನು ತಡೆಯುತ್ತಾರೆ. ಅವರು ಸಿಟ್ಟಿಗೆದ್ದು, “ನೀವು ಭೂಲೋಕದಲ್ಲಿ ಜನಿಸಿರಿ” ಎಂದು ಶಾಪ ಕೊಡುತ್ತಾರೆ. ಈ ಶಾಪದ ವಿಷಯ ಜಯ-ವಿಜುಯರು ನಾರಾಯಣನಿಗೆ ಹೇಳಿದಾಗ, ಅವನು, “ಮುನಿಗಳ ಶಾಪ ಸುಳ್ಳಾಗದು. ನೀವು ನನ್ನ ಸ್ನೇಹಿತರಾಗಿ ಏಳು ಜನ್ಮ ಭೂಭಾಗದಲ್ಲಿ ಜನಿಸುವಿರೋ ಅಥವಾ ನನ್ನ ವೈರಿಗಳಾಗಿ ಮೂರು ಜನ್ಮ ಭೂಲೋಕದಲ್ಲಿ ಜೀವನವನ್ನು ಅನುಭವಿಸಿ ನನ್ನಡೆಗೆ ಬರುವಿರೋ! ಎಂದು ಕೇಳುತ್ತಾನೆ. ಮೂರು ಜನ್ಮ ವಿರೋಧಿಗಳಾಗಿ ಜನಿಸಲು ಒಪ್ಪಿ ಹಿರಣ್ಯಾಕ್ಷ – ಹಿರಣ್ಯಕಶ್ಯಪು, ರಾವಣ – ಕುಂಭಕರ್ಣ ಮತ್ತು ಶಿಶುಪಾಲ – ವಕ್ರದಂತರಾಗಿ ಭೂಲೋಕದಲ್ಲಿ ಅವರು ಜನಿಸುತ್ತಾರೆ. ಆಗ ನಾರಾಯಣನು ನರಸಿಂಹನಾಗಿ ಹಿರಣ್ಯಕಶ್ಯಪುವಿನ ಸಂಹಾರ ಮಾಡಿ, ಅನಂತರ ರಾಮನಾಗಿ ರಾವಣಾಸುರನ ವಧೆಯನ್ನು ಮಾಡಿದ್ದಾನೆ. ಈಗ ಅವನು ಶ್ರೀ ಕೃಷ್ಣನ ಶಿಶುಪಾಲನ ವಧೆಯನ್ನು ಮಾಡಲಿದ್ದಾನೆ ಇದು ನಾರಾಯಣನ ಸಂಕಲ್ಪ. ಈ ಸಂಕಲ್ಪ ಪೂರ್ಣವಾಗುವ ಕಾಲ ಮಹಾಭಾರತದ ಕಾಲ.

ಈ ದೇವ ಸಂಕಲ್ಪದಂತೆ ದೇವಕಾರ್ಯ ಪ್ರಾರಂಭವಾಗುತ್ತದೆ.

ಆದಿಪರ್ವವು ಕೌರವ ಪಾಂಡವಾದಿಗಳ ಜನನ, ಬಾಲ್ಯ ಪೌರುಷ, ವಿವಾಹ ಮೊದಲಾದ ಸಂದರ್ಭಗಳ ವರ್ಣನೆಗೆ ಮೀಸಲಾಗಿದೆ. ಇಲ್ಲಿ ಬರುವ ಅನೇಕರ ಜನ್ಮಕ್ಕೆ ವರ ಮತ್ತು ದೇವಲೋಕದ ಜನರು ಭೂಲೋಕಕ್ಕೆ ಬರಬೇಕಾದರೆ ವರ, ಶಾಪ, ಉಃಶ್ಯಾಪಗಳೇ ಸೇತುವೆ. ಆ ಪ್ರಕಾರ ಪರಮಾತ್ಮನು (ನಾರಾಯಣನು) ತನ್ನ ಯುಗಕಾರ್ಯಕ್ಕೆ ಬೇಕಾದವರನ್ನೆಲ್ಲ ಭೂಲೋಕಕ್ಕೆ ತಂದಿದ್ದಾನೆ. ಪಾಂಡವರು, ಕೌರವರು ದ್ರೌಪದಿ ಎಲ್ಲ ಹುಟ್ಟಿ ಬೆಳೆಯುತ್ತಿದ್ದಾರೆ.

ಕರುಣಾಜಲಧಿಯೇ ಕೈಗಾಯಬೇಕು

ಸಭಾಪರ್ವದಲ್ಲಿ ಶ್ರೀಕೃಷ್ಣನ ಸಹಾಯದಿಂದ ಪಾಂಡವರು ರಾಜಸೂಯ ಯಾಗ ಮಾಡುತ್ತಾರೆ. ಅನಂತರ ಅಸೂಯೆಯಿಂದ ಬೆಂದ ದುರ್ಯೋಧನನು ಧರ್ಮರಾಯನನ್ನು ಪಗಡೆಯಾಟಕ್ಕೆ ಕರೆಯುತ್ತಾನೆ. ಧರ್ಮರಾಯನು ದ್ರೌಪದಿಯನ್ನೂ ಒಡ್ಡಿ ಸೋಲುತ್ತಾನೆ. ಈ ನಿಮಿತ್ತವಾಗಿ ಉನ್ಮತ್ತ ಪಿಶಾಚಿಗಳಾದ ದುಶ್ಯಾಸನ, ದುರ್ಯೋಧನ, ಕರ್ಣರು ಪಾಂಡವರ ಅಪಮಾನ ಮತ್ತು ದ್ರೌಪದಿಯ ಮಾನಭಂಗ ಮಾಡಲು ಮುನ್ನುಗ್ಗುತ್ತಾರೆ. ಧರ್ಮರಾಯನು ಶ್ರೀಕೃಷ್ಣನನ್ನೇ ನಂಬಿದ್ದಾನೆ. ಅರ್ಜುನ ಭೀಮಾದಿಗಳು ಧರ್ಮರಾಯನ ಆಜ್ಞೆಯಲ್ಲಿದ್ದಾರೆ. ಇಂಥ ಕಾಲಕ್ಕೆ ದುಶ್ಯಾಸನನು ದ್ರೌಪದಿಯ ಮುಡಿಗೆ  ಕೈ ಹಾಕುತ್ತಾನೆ. ಅವಳ ಸೀರೆ ಸೆಳೆಯುವಲ್ಲಿ ಕೌರವರೆಲ್ಲ ಆನಂದಪಡುತ್ತಾರೆ. ಈ ಪ್ರಸಂಗವು ಕರುಣರಸದಿಂದ ತುಂಬಿದೆ. ದ್ರೌಪದಿ ದೊರೆಯುವುದಿಲ್ಲ. ಆಗ ಅವಳು ಶ್ರೀಕೃಷ್ಣ ಪರಮಾತ್ಮನನ್ನೇ ನಂಬಿ ಅವನಿಗೆ ಮೊರೆ ಇಡುತ್ತಾಳೆ. ಸೀರೆಗೆ ಹಿಡಿದ ಎರಡೂ ಕೈಗಳನ್ನು ಬಿಟ್ಟು,

“ಹೊಲಬುದಪ್ಪಿದ ಹುಲ್ಲೆ ಬೇಡನ
ಬಲೆಗೆ ಬಿದ್ದಂತಾದೆನೈ ಬಲು
ಹಳುವದಲಿ ತಾಯ್ಬಿಸುಟ ಶಿಶು ತಾನಾದೆನೆಲೆ ಹರಿಯೆ
ಕೊಲುವವೈ ಕಾಗೆಗಳ ಕಾಟ ಕೋ
ಗಿಲೆಯ ಮರಿಯನು ಕೃಷ್ಣ ಕರುಣಾ

ಜಲಧೀಯೇ ಕೈಗಾಯಬೇಕೆಂದೊರಲಿದಳು ತರಳೆ” – ಎಂದಿದ್ದಾನೆ ಅರ್ಜುನ. ಅವಳ ವ್ಯಥೆಯ ಕೂಗನ್ನು ಕೇಳಿ ಸತ್ಯಾಭಾಮೆಯ ಹತ್ತಿರ ಇದ್ದ ಶ್ರೀಕೃಷ್ಣನು ಅಲ್ಲಿಂದಲೇ ಮೂರು ಸಲ “ಅಕ್ಷಯ” ಎಂದನು. ದ್ರೌಪದಿಯ ವಸ್ತ್ರವು ಅಕ್ಷಯವಾಯಿತು.

ಅರಣ್ಯಪರ್ವದಲ್ಲಿ ಪಾಂಡವರು ಸೋತು ವನವಾಸಕ್ಕೆ ಹೋದ ಸುದ್ದಿಯನ್ನು ಕೇಳಿ ಶ್ರೀಕೃಷ್ಣನು ಕಾಮ್ಯಕವನದಲ್ಲಿ ಪಾಂಡವರನ್ನು ಕಾಣುತ್ತಾನೆ. ದ್ರೌಪದಿಯ ಕೃಷ್ಣಸ್ತುತಿಗೆ ಕೃಷ್ಣನು ತಲೆದೊಗಿ “ಭೀಮಾರ್ಜುನ ನಕುಲ ಸಹದೇವರು ಜೂಜಿನ ಸಭೆಯಲ್ಲಿ ಮಾಡಿದ ಪ್ರತಿಜ್ಞೆಗಳನ್ನೆಲ್ಲ ನಡೆಸಿಕೊಡುವ ಭಾರ ತನ್ನದು” ಎಂದು ದ್ರೌಪದಿಗೆ ವಚನ ಕೊಡುತ್ತಾನೆ.

ವನವಾಸದ ಕೊನೆಕೊನೆಗೆ ದುರ್ಯೋಧನನು ಮಾರಣ ಹೋಮ ಮಾಡಿ ಕನಕ ಎಂಬ ಬ್ರಾಹ್ಮಣನ ಮುಖಾಂತರ ಒಂದು ಭೂತವನ್ನು ಸೃಷ್ಟಿಸುತ್ತಾನೆ. ವನವಾಸದಲ್ಲಿದ್ದ ಪಾಂಡವರನ್ನು ಸಂಹರಿಸಲು ಆ ಭೂತಕ್ಕೆ ದುರ್ಯೋಧನನು ಆಜ್ಞಾಪಿಸಿದನು. ಇದನ್ನು ಅರಿತ ಶ್ರೀಕೃಷ್ಣನು ಯಮನನ್ನು ಕರೆದು, ದುರ್ಯೋಧನ ಸೃಷ್ಟಿಸಿದ ಭೂತವು ಸತ್ತವರನ್ನು ಮುಟ್ಟುವುದಿಲ್ಲ. ವಿಷಕೊಳದೊಳಗೆ ನಿಂತವರನ್ನು ಕೊಲ್ಲುವುದಿಲ್ಲ, ಧರ್ಮಸಾರದ ಚರ್ಚೆ ಮಾಡುವವರನ್ನು ಕೊಲ್ಲದೇ, ತನ್ನನ್ನು ಸೃಷ್ಟಿ ಮಾಡಿದ ಕನಕನನ್ನೇ ಮುರಿದು ಅಗ್ನಿಕುಂಡದಲ್ಲಿ ಅಡಗುವುದು. ಆದುದರಿಂದ ನೀನು ಒಂದು ವಿಷಸರೋವರವನ್ನು ಮಾಡಿ. ಅದೃಶ್ಯವಾಗಿ ಅದನ್ನು ಕಾಯುತ್ತಿರು. ಭೀಮ, ಅರ್ಜುನ, ಸಕುಲ, ಸಹದೇವ ಆ ವಿಷ ಸರೋವರದ ನೀರನ್ನು ಕುಡಿದು ಸಾಯುವಂತೆ ನಾನು ಮಾಡುತ್ತೇನೆ. ನೀನು, ವಿಷ ಸರೋವರದಲ್ಲಿದ್ದ ಧರ್ಮನೊಂದಿಗೆ ಧರ್ಮ ಚರ್ಚೆ ನಡೆಸು” ಎಂದು ಆಜ್ಞಾಪಿಸುತ್ತಾನೆ. ಶ್ರೀಕೃಷ್ಣನ ಆದೇಶದಂತೆ ಎಲ್ಲವೂ ನಡೆದು ದುರ್ಯೋದನ ಸೃಷ್ಟಿಸಿದ ಭೂತ ಅಗ್ನಿಕುಂಡದಲ್ಲಿ ಅಡಗುತ್ತದೆ. ಧರ್ಮರಾಯಮು ಯಮನನ್ನು ಧರ್ಮ ವಿಚಾರದ ಚರ್ಚೆಯಲ್ಲಿ ಗೆಲ್ಲುತ್ತಾನೆ. ಇದರಿಂದ ತೃಪ್ತನಾದ ಯಮನು ಧರ್ಮನ ಇಚ್ಚೆಯಂತೆ ಮೊದಲು ಸಹದೇವ, ಅನಂತರ ನಕುಲ, ಭೀಮ, ಅರ್ಜುನರನ್ನು ಸಜೀವ ಮಾಡಿ, “ಒಂದು ವರ್ಷದ ಅಜ್ಞಾತವಾಸದಲ್ಲಿ ನಿಮ್ಮನ್ನು ಯಾರೂ ಪಾಂಡವರೆಂದು ಗುರುತಿಸದಿರಲಿ” ಎಂದು ಹರಸುತ್ತಾನೆ.

ವೀರನಾರಾಯಣನ ದೇವಸ್ಥಾನದಲ್ಲಿ ಕುಳಿತು ಕನ್ನಡ ಭಾರತವನ್ನು ರಚಿಸಿದನು

ಕಾವನೈ ನಿಮ್ಮೃವರನು

ಅರಣ್ಯ ಪರ್ವದೊಳಗಿನ ಇನ್ನೊಂದು ಸಂದರ್ಭ ದೂರ್ವಾಸ ಮುನಿಗಳಿಗೆ ಸಂಬಂಧಿಸಿದ್ದು. ದೂರ್ವಾಸ ಮುನಿಗಳಿಗೆ ಸಂಬಂಧಿಸಿದ್ದು. ದೂರ್ವಾಸರು ಮಹಾ ಕೋಪಿಷ್ಠರು. ಇವರಿಂದಲಾದರೂ ಪಾಂಡವರನ್ನು ಕಾಡಬೇಕು, ಶಾಪ ಕೊಡಿಸಬೇಕು ಎಂಬ ಇಚ್ಚೆಯಿಂದ ದುರ್ಯೋಧನನು, ಹಸ್ತಿವಾವತಿಗೆ ಬಂದ ದುರ್ವಾಸ ಮುನಿಗಳನ್ನು ಸತ್ಕರಿಸುತ್ತಾನೆ. ಇದರ ಪರಿಣಾಮವಾಗಿ ದೂರ್ವಾಸರು ಅರಣ್ಯಕ್ಕೆ ಹೋಗಿ ದ್ರೌಪದಿಯ ಊಟವಾದ ಮೇಲೆ ಎಂಬತ್ತೆಂಟು ಸಾವಿರ ಶಿಷ್ಟರೊಂದಿಗೆ ಧರ್ಮರಾಯನಲ್ಲಿಗೆ ಹೋಗಿ ಊಟ ಪಡೆಯಬೇಕು ಎಂದು ಆಪೇಕ್ಷಿಸುತ್ತಾರೆ. ಧರ್ಮರಾಯನು ದೂರ್ವಾಸರ ಪರಿವಾರಕ್ಕೆ ಊಟ್ಟಕ್ಕೆ ಬರಲು ಹೇಳುತ್ತಾನೆ. ಅವರೆಲ್ಲರೂ ಯಮುನಾ ನದಿಗೆ ಅನುಷ್ಠಾನಕ್ಕೆ ಹೋದಾಗ, ಧರ್ಮರಾಯನಿಗೆ ಗಂಭೀರ ಪರಿಸ್ಥಿಯ ಅರಿವು ಆಗುತ್ತದೆ. ದ್ರೌಪದಿಯ ಊಟವಾಗಿದೆ. ಅಕ್ಷಯ ಪಾತ್ರೆ ತೆರವು ಆಗಿದೆ. ದೂರ್ವಾಸ ಪರಿವಾರಕ್ಕೆ ಊಟದ ಆಮಂತ್ರಣ ಕೊಟ್ಟು ಆಗಿದೆ. ಆಗ ಧೌಮ್ಯರ ಮಂತ್ರೋಪದೇಶದಂತೆ ದ್ರೌಪದಿ ಕೃಷ್ಣನು ಸ್ತುತಿ ಪ್ರಾರಂಭಿಸುತ್ತಾಳೆ. ಭಕ್ತರಕ್ಷಾವ್ಯಸನಿ ಶ್ರೀಕೃಷ್ಣನು ದ್ವಾರಕೆಯಿಂದ ಅರಣ್ಯಕ್ಕೆ ಧಾವಿಸಿ ಬಂದು ಪರಿಸ್ಥಿತಿಯನ್ನು ತಿಳೀದುಕೊಳ್ಳುತ್ತಾನೆ. ದ್ರೌಪದಿಯಿಂದ ಅಕ್ಷಯ ಪಾತ್ರಯನ್ನು ತರಿಸಿ ಅದರೊಳಗಿನ ಅನ್ನದ ಅಗಳು ತಿಂದು ತೃಪ್ತಿ ಪಡೆಯುತ್ತಾನೆ. ಶ್ರೀಕೃಷ್ಣನಿಗಾದ ಈ ತೃಪ್ತಿ ಯಮುನಾ ನದಿಯ ದಂಡೆಯ ಮೇಲಿದ್ದ ದೂರ್ವಾಸ ಪರಿವಾರಕ್ಕೂ ತೃಪ್ತಿಯನ್ನುಂಟು ಮಾಡುತ್ತದೆ – ಬೇರಿಗೆ ಮುಟ್ಟಿದ ನೀರು ಶಾಖೋಪಶಾಖೆಗೂ ಮುಟ್ಟುವಂತೆ. ಸಂತೃಪ್ತರಾದ ದೂರ್ವಾಸರು ಪರಿವಾರದೊಂದಿಗೆ ಶ್ರೀ ಕೃಷ್ಣ ದರ್ಶನವನ್ನು ಪಡೆದು ಪಾಂಡವರನ್ನೆಲ್ಲ ಹರಸುವುದನ್ನು,

“ಮೈ ವಶವ ಮಾಡಿದರಲೇ ಪರ
ದೈವವನು ಕುರುಕುಲದ ಬೇರನು
ಕೊಯ್ವನೀ ಹರಿ ಬಳಿಸಲಿಸಿ ಭೀಮಾರ್ಜುನಾಸ್ತ್ರಾದಲಿ
ಕಾವನೈ ನಿಮ್ಮೈವರನು ಕೈ
ಗಾವನೇ ವರರಾಜ್ಯ ಲಕುಮಿಯ
ಕೈವಿಡಿದ ಸಂಕಲ್ಪ ಸಿದ್ಧಿಪುದೆಂದನಾ ಮುನಿಪ”

– ಎಂದು ಅರ್ಜುನನು ವರ್ಣಿಸಿದ್ದಾನೆ.

ವಿರಾಟಪರ್ವದಲ್ಲಿ ಪಾಂಡವರಿಗೆ ಬರಬಹುದಾದ ಕಷ್ಟಗಳ ಪರಿಹಾರದ ಸಕಲ ಸಿದ್ಧತೆಗಳನ್ನು ಶ್ರೀಕೃಷ್ಣನು ಅರಣ್ಯ ಪರ್ವದಲ್ಲಿಯೇ ಮಾಡಿದ್ದಾನೆ. ಇದರ ಅರಿವು ಪಾಂಡವರಿಗಿದೆ. ದುರ್ಯೋಧನಾದಿ ಕೌರವರಿಗಿಲ್ಲ. ದೈವಿಕದ ಮಹಿಮೆ ಭಕ್ತರಿಗೆ ಕಾಣುತ್ತದೆ, ದುಷ್ಟರಿಗೆ ಕಾಣುವುದಿಲ್ಲ. ದೈವಬಲವಿಲ್ಲದ ದುರ್ಯೊಧನನು ಶ್ರೀ ಕೃಷ್ಣ ಮಹಿಮೆಯನ್ನು ಅರಿತುಕೊಳ್ಳದೆ ಮುಂದೆ ಸಾಗಿದ್ದಾನೆ.

ಹಾಸ್ಯರಸಘಟ್ಟಿ

ವಿರಾಟಪರ್ವದಲ್ಲಿ ಪಾಂಡವರೂ ದ್ರೌಪದಿಯೂ ವೇಷ ಮರೆಸಿಕೊಂಡು ವಿರಾಟರಾಜನ ಅರಮನೆಯನ್ನು ಸೇರುತ್ತಾರೆ.

ಪಾಂಡವರ ಅಜ್ಞಾತವಾಸ ಕಾಲದಲ್ಲಿ ದುರ್ಯೋಧನನಿಗೆ ಅವರು ವಿರಾಟ ನಗರದಲ್ಲಿದ್ದಾರೆಂದು ಸಂಶಯ ಬರುತ್ತದೆ. ವಿರಾಟನು ಊರಿನಲ್ಲಿಲ್ಲದಾದ ದುರ್ಯೋಧನಾದಿಗಳು ದಾಳಿ ಮಾಡಿ ಗೋಗ್ರಹಣ ಮಾಡುತ್ತಾರೆ. ಈ ಕಾಲಕ್ಕೆ ಅರಮನೆಯ ನಾಟ್ಯಶಾಲೆಯಲ್ಲಿ ಮಾತಿನ ಭೂಪ ಉತ್ತರಕುಮಾರನಿರುತ್ತಾನೆ. ಇವನೇ ರಾಜಕಾರ್ಯವನ್ನು ನೋಡುವವನು. ಆದುದರಿಂದ ಗೋರಕ್ಷಣೆಯ ಭಾರ ಇವನ ಮೇಲೆ ಬೀಳುತ್ತದೆ. ಇದು ಅರ್ಜುನ ಭಾರತದೊಳಗಿನ ಹಾಸ್ಯರಸದ ರಸಘಟ್ಟಿಯ ಪ್ರಸಂಗ. ಭೀಷ್ಮ ಭೀಮಾರ್ಜುನರ ಶೌರ್ಯವನ್ನು ಎಷ್ಟು ಸೊಗಸಾಗಿ ಅರ್ಜುನ ನಿರೂಪಿಸುತ್ತಾನೆಯೋ ಅಷ್ಟೇ ಸೊಗಸಾಗಿ ಉತ್ತರನ ಹೇಡಿತನವನ್ನೂ ನಿರೂಪಿಸುತ್ತಾನೆ. ಕೌರವರು ಗೋವುಗಳನ್ನು ಹಿಡಿದರೆಂದು ಕೇಳಿ, ಹೆಂಗಸರ ಮುಂದೆ ಪೌರುಷ ಕೊಚ್ಚುತ್ತಾನೆ ಉತ್ತರ, “ಕೌರವನಕಟ ಮರುಳಾದ”, ನನ್ನನ್ನು ಕೆಣುಕುವುದೆಂದರೆ ಯಮನ ಮೀಸೆಯನ್ನು ಮುರಿದಂತೆ, ಮೃತ್ಯುವಿನ ಮೇಲುದವನ್ನು ಸೆಳೆದಂತೆ, ಇನ್ನು ದುರ್ಯೋಧನ ರಾಜನಾಗಿರಲು ಸಾಧ್ಯವೇ ಎನ್ನುತ್ತಾನೆ; ತನ್ನೊಡನೆ ಯುದ್ಧ ಮಾಡುವವರು ಯಾರು, ಕೆಲವರು ದ್ರೋಣರಂತೆ ಬ್ರಾಹ್ಮಣರು, ಕೆಲವರು ಭೀಷ್ಮರಂತೆ ಮುದುಕರು, ಇನ್ನು ಕೆಲವರು ಕರ್ಣನಂತೆ ಕೆಳಗಿನ ಕುಲದವರು. ಅಯ್ಯೋ ನನಗೆ ಸಮನಾದ ವೀರರನ್ನೇ ಕಾಣೆ ಎಂದು ಹಲುಬುತ್ತಾನೆ.

ಬೃಹನ್ನಳೆ ವೇಷದ ಅರ್ಜುನ ಅವನಿಗೆ ಸಾರಥಿಯಾಗುತ್ತಾನೆ. ಕೌರವರ ಸೈನ್ಯ ಕಾನುತ್ತಲೇ ಉತ್ತರ ನಡುಗುತ್ತಾನೆ. “ಹಸಿದ ಮಾರಿಯ ಮಂದೆಯಲಿ ಕುರಿ ನುಸುಳಿದಂತಾದೆನು ಬೃಹನ್ನಳೆ” ಎಂದು ಉದ್ಗಾರ ತೆಗೆದು, ಹಿಂದಕ್ಕೆ ನಡೆ ಎನ್ನುತ್ತಾನೆ. ಅರ್ಜುನ ರಥವನ್ನು ಮುಂದಕ್ಕೆ ನಡೆಸಲು ರಥದಿಂದ ಜಿಗಿದು ಓಡುತ್ತಾನೆ. ಅರ್ಜುನ ಬೆನ್ನಟ್ಟಿ ಹಿಡಿದಾಗ, “ಮೃತ್ಯುವೂ ಸಾರಥಿಯೂ ಪಾಪಿಯ ನೆತ್ತಣಿಂದಲೆ ಮಾಡಿಕೊಂಡೆ” ಎಂದು ಹಲುಬುತ್ತಾನೆ. “ಸಾರಥಿ ಕಳುಹುಕಳೆಯೈ. ನಿನ್ನ ಬಸಿರಲಿ ಮರಳಿ ಬಂದವನು” ಎಂದು ಹಲುಬುತ್ತಾನೆ. “ನೀನು ಜೀವಗಳ್ಳನೇ”? ಎಂದು ಮೂದಲಿಸಿದರೆ “ಜೀವಗಳ್ಳರಿಗಾವು ಗುರುಗಳು” ಎಂದು ಉತ್ತರ ಹೇಳುತ್ತಾನೆ. “ಯುದ್ಧದಲ್ಲಿ ಸತ್ತರೆ ವೀರ ಸ್ವರ್ಗ ಸೇರಿ ಇಂದ್ರನಾಗುವೆ” ಎಂದರೆ “ನನಗೆ ಸ್ವರ್ಗ ಬೇಡ, ಇಂದ್ರ ಪದವಿ ಬೇಡ, ನನ್ನ ಅರಮನೆಯೇ ಸಾಕು” ಎಂದು ಹಲ್ಲು ಕಿರಿಯುತ್ತಾನೆ.

ಲೆಕ್ಕಾಚಾರದ ಪ್ರಕಾರ ಅಜ್ಞಾತವಾಸದ ಅವಧಿ ಮುಗಿದಿದ್ದರಿಂದ, ಅರ್ಜುನನು ಬನ್ನೀಮರದಲ್ಲಿಯ ಅಸ್ತ್ರಗಳನ್ನು ಪಡೆದು ಕೌರವರನ್ನು ಸೋಲಿಸಿ, ಗೋಗಳ ರಕ್ಷಣೆ ಮಾಡಿ, ವಿಜಯೋತ್ಸಾಹದಲ್ಲಿ ವಿರಾಟನಗರಕ್ಕೆ ಮರಳುತ್ತಾನೆ. ಈ ಸಂದರ್ಭದಲ್ಲಿ ಭೀಷ್ಮರು ದುರ್ಯೋಧನನಿಗೆ ಹೇಳುತ್ತಾರೆ: “ಪಾಂಡವರ ಅಜ್ಞಾತವಾಸ ಮುಗಿದುಹೋಗಿದೆ. ನಿನ್ನಿನ ಹಗಲು ನಿನ್ನದಿತ್ತು. ಇಂದಿನ ಹಗಲು ಅವರದು.” ಇಲ್ಲಿಯೂ ದುರ್ಯೋಧನನಿಗೆ ಸೋಲೇ ಆಯಿತು.

ದೇಹಿ ನೀನು. ನಾವೆಲ್ಲ ನಿನ್ನ ದೇಹ

ದೇವರ ದೇವರೊಡೆಯರು

ಅರಣ್ಯಪರ್ವದಲ್ಲಿ ದೂರ್ವಾಸರು ಪಾಂಡವರಿಗೆ ಕೊಟ್ಟ ವರವೇ ವಿರಾಟಪರ್ವದಲ್ಲಿ ಫಲಿಸಿದೆ. ಶ್ರೀಕೃಷ್ಣನು ಭೀಮನ ಮುಖಾಂತರ ಕೀಚಕ ಸಂಹಾರ ಮಾಡಿಸಿ, ಅರ್ಜುನ ಮುಖಾಂತರ ದುರ್ಯೋಧನನನ್ನು ಸೋಲಿಸಿ ತನ್ನ ದೈವಿಕತೆಯನ್ನು ಪ್ರಕಟಪಡಿಸುತ್ತಾನೆ. ಶ್ರೀಕೃಷ್ಣನ ಬೆಂಬಲದಿಂದಲೇ ತಮಗೆ ಈ ಪ್ರಸಂಗದಲ್ಲಿ ಜಯವಾಯಿತು ಎಂದು ಧರ್ಮರಾಯನ ಶ್ರದ್ಧೆ. ಹೀಗಿದ್ದೂ ಶ್ರೀಕೃಷ್ಣನು ಮಾನವನಂತೆ, “ಧರ್ಮನೇ, ಅರ್ಜುನನೊಬ್ಬನೆ ದುರ್ಯೋಧನಾದಿ ಕೌರವರನ್ನೆಲ್ಲ ಹೇಗೆ ಗೆದ್ದನು ವಿವರಿಸು” ಎಂದು ಕೇಳುತ್ತಾನೆ. ಆಗ ಧರ್ಮನು ಕೊಟ್ಟ ಉತ್ತರ ಇದು: “ನಾವು ಗೊಂಬೆಗಳು. ಗೊಂಬೆಗಳಿಗೆ ಗರ್ವ ಎಲ್ಲಿಯದು? ಮಾನವರಿಗೆ ನಿನ್ನ ಸಹಾಯವೇ ಸಾಮರ್ಥ್ಯ. ಯಂತ್ರಿ ನೀನು; ದೇಹಿ ನೀನು; ನಾವೆಲ್ಲ ನಿನ್ನ ದೇಹ. ಹೀಗಿರುವಾಗ ಹೊಗಳಿಹೊಗಳಿ ನಮ್ಮನ್ನೇಕೆ ನಾಚಿಸುವೆ?”

ಉದ್ಯೋಗಪರ್ವದಲ್ಲಿ ದುರ್ಯೋಧನನು ಪ್ರಕಟವಾಗಿಯೇ ಪಾಂಡವರೊಂದಿಗೆ ಯುದ್ಧ ಮಾಡುವುದಾಗಿ ನಿಶ್ಚಯಿಸುತ್ತಾನೆ. ಇದಕ್ಕೆ ಶ್ರೀಕೃಷ್ಣನ ಸಹಾಯ ಬೇಡಲು ದ್ವಾರಕೆಗೆ ಹೋಗುತ್ತಾನೆ. ಈ ವಿಷಯ ತಿಳಿದುಕೊಂಡು ಅರ್ಜುನನೂ ದ್ವಾರಕೆಗೆ ಬರುತ್ತಾನೆ. ಶ್ರೀಕೃಸ್ಣನು, “ನಾನೊಬ್ಬನೇ ಒಂದು ಕಡೆಗೆ, ಯಾದವ ಸೈನ್ಯ ಇನ್ನೊಂದು ಕಡೆಗೆ. ಇದರಲ್ಲಿ ನಿಮಗೆ ಏನು ಬೇಕೋ ಅದನ್ನು ಆರಿಸಿಕೊಳ್ಳಿರಿ” ಎನ್ನುತ್ತಾನೆ. ಭಗವದ್ಭಕ್ತನಾದ ಅರ್ಜುನ ಶ್ರೀಕೃಷ್ಣನನ್ನೇ ಆರಿಸಿಕೊಳ್ಳುತ್ತಾನೆ. ದೇವಲೀಲೆಯನ್ನು ಅರಿಯದ ದುರ್ಯೋಧನನು ಯಾದವ ಸೈನ್ಯವನ್ನೇ ಬಯಸುತ್ತಾನೆ. ಇದೇ ಕಾಲಕ್ಕೆ ಶ್ರೀಕೃಷ್ಣನು ಪೂತನಿ, ಶಕಟಾಸುರ, ಹಯ, ವತ್ಸ, ಧೇನುಕ, ವೃಷಭ, ಭುಜಂಗ, ಮದ್ದಾನೆ, ಮಲ್ಲ, ಕಂಸ, ಜರಾಸಂಧ, ವಕ್ರದಂತ ಮೊದಲಾದ ಅನೇಕರ ಸಂಹಾರ ಕಥೆಗಳನ್ನು ಸೂಚಿಸಿ, “ನಾವೀಗ ಮುಪ್ಪಿನವರು, ಯೌವನದ ಬಲ ಈಗಿಲ್ಲ, ಉಂಡಾಡಿಭಟ್ಟರು, ಶಸ್ತ್ರ ಹಿಡಿಯುವುದಿಲ್ಲ ಹೋಗು” ಎಂದು ವಚನ ಕೊಡುತ್ತಾನೆ. ದೇವರು ಸಂಹಾರವನ್ನು ನಿರ್ಣಯಿಸಿದರೆ ಅವನಿಗೆ ಶಸ್ತ್ರಾಸ್ತ್ರ ಏಕಬೇಕು ಎಂಬುದು ಶ್ರೀಕೃಷ್ಣನ ಅಭಿಪ್ರಾಯ. ಆದರೆ ಶ್ರೀಕೃಷ್ಣವಚನದ ಅರ್ಥವನ್ನು ತಿಳಿಯದ ದುರ್ಯೋಧನ ಸುಖದಿಂದ ಹಸ್ತಿನಾವತಿಗೆ ಮರಳುತ್ತಾನೆ.

ಅರ್ಜುನ ಶ್ರೀಕೃಷ್ಣನ ವೀರಭಕ್ತ. ಶ್ರೀಕೃಷ್ಣನೇ ಸಾರಥಿಯಾಗಿಬಿಟ್ಟರೆ ತನ್ನನ್ನು ಕೊಲ್ಲುವುದು ಅಸಾಧ್ಯ ಎಂದು ಅರಿತ ಅರ್ಜುನ.

“ದೇವ ಮಾತ್ರವೆ ನೀವು ದೇವರ
ದೇವರೊಡೆಯರು ಹೊಗಳುವರೆ ವೇ
ದಾವಳಿಗಳಳವಲ್ಲ ಸಾಕಾಮಾತದಂತಿರಲಿ
ನಾವು ಭಕುತರು, ಭಕುತಭೃತ್ಯರು
ನೀವು ಸಾರಥಿಯಾಗಿ ಭೃತ್ಯನ
ಕಾವುದೆಂದರ್ಜುನನು ಹಣೆ ಚಾಚಿದನು ಹರಿಪದಕೆ,

– ಎಂದು ಅರ್ಜುನ ವರ್ಣಿಸಿದ್ದಾನೆ.

ಯುದ್ಧವನ್ನೇ ನಿಶ್ಚಯಿಸಿ ಬರುವೆ

ಯುದ್ಧ ಮಾಡಬೇಕೆ ಬೇಡವೆ? ಎಂಬ ವಿಚಾರವಾಗಿ ಚರ್ಚಿಸಲು ಅರ್ಜುನನೊಂದಿಗೆ ಶ್ರೀಕೃಷ್ಣನು ಧರ್ಮರಾಯನಿದ್ದೆಡೆಗೆ ಬಂದನು. ಧರ್ಮ, ಭೀಮ, ನಕುಲ-ಸಹದೇವರು ಸಂಧಿಯ ಮಾತನಾಡಿದ್ದನ್ನು ಕೇಳಿ ಶ್ರೀ ಕೃಷ್ಣನು ದ್ರೌಪದಿಯನ್ನು ಕರೆಸುವನು. ಕೌರವರಿಂದ ಐದು ಊರುಗಳನ್ನು ಆಪೇಕ್ಷಿಸಿ, ಅವುಗಳನ್ನು ಬೇಡಲು ಶ್ರೀಕೃಷ್ಣನನ್ನು ಹಸ್ತಿನಾವತಿಗೆ ಕಳಿಸುವ ವಿಷಯವನ್ನು ತಿಳಿದ ದ್ರೌಪದಿ ಉರಿದೇಳುವಳು. ಭೀಮನನ್ನು ಹೀಯಾಳಿಸಿ, “ನನ್ನ ಮಕ್ಕಳು ಘಟೋತ್ಕಚ, ಅಭಿಮನ್ಯು, ದ್ರುಪದ ಮತ್ತು ಮೂರಕ್ಷೋಹಿಣಿ ಸೈನ್ಯವೇ ಸಾಕು ಕೌರವರನ್ನು ಗೆಲ್ಲಲು. ದುಶ್ಯಾಸನನ ರಕ್ತವನ್ನು ಕುಡಿದು ಕುರಕುಲವನ್ನು ಸುಡುವರು” ಎನ್ನುತ್ತಾಳೆ. ಈ ಮಾತುಗಳಿಂದ ಪ್ರಜ್ವಲಿತನಾದ ಭೀಮನು, “ನಿನ್ನೀ ಸುರಿವ ಕಂಬನಿಗಳಿಗೆ ಸಾವಿರ ಪಟ್ಟು ಕಂಬನಿಗಳನ್ನು ಶತ್ರುಗಳ ಹೆಂಡಿರ ಕಣ್ಣುಗಳಿಂದ ಹೊರಹೊಮ್ಮಿಸುವೆ” ಎಂದು ಪ್ರತಿಜ್ಞಾ ಬದ್ಧನಾಗುತ್ತಾನೆ. ದ್ರೌಪದಿಯ ಕಷ್ಟ ಪಾಂಡವರಿಗೆಲ್ಲ ಅರಿವಾಗುವಂತೆ ಮಾಡಿ ಶ್ರೀಕೃಷ್ಣನು ಹಸ್ತಿನಾವತಿಗೆ ಹೊರಡುವಾಗ, “ನಾನು ಸಂಧಿಯ ನೆಪ ಮಾಡಿಕೊಂಡು ಕೌರವರ ಭಾವವನ್ನು ಕಲಕಿ, ಅವರ ಕೋಪವನ್ನು ಹೆಚ್ಚು ಮಾಡಿ, ಸಂಧಿಯನ್ನು ಮುರಿದು, ಯುದ್ಧವನ್ನೇ ನಿಶ್ಚಯಿಸಿ ಬರುವೆ” ಎಂದು ದ್ರೌಪದಿಗೆ ವಚನ ಕೊಡುತ್ತಾನೆ.

ಈ ವಚನದ ಪ್ರಕಾರ ಶ್ರೀಕೃಷ್ಣನು ಹಸ್ತಿವಾವತಿಗೆ ಬಂದು, ದುರ್ಯೋಧನನ ಸಿಟ್ಟು ಬೆಳೆಯುವಂತೆ ಮಾಡಿ, ಅವನು ದೃತರಾಷ್ಟ್ರ, ಭೀಷ್ಮ, ದ್ರೋಣ ಮೊದಲಾದವರ ಮಾತುಗಳನ್ನು ಕೇಳಿದಂತೆ ಮಾಡುತ್ತಾನೆ. ಕೊನೆಗೆ, “ಎಷ್ಟು ಹೇಳಿದರೂ ದುರ್ಯೋಧನನು ಸಂಧಿಗೆ ಒಪ್ಪುತ್ತಿಲ್ಲವಲ್ಲ! ಇನ್ನು ಅವನ ಸತಿಯ ಕಿವಿಯೋಲೆಗಳು ಸ್ಥಿರವಿಲ್ಲ” ಎಂಬ ಮಾತಿನಿಂದ ದುರ್ಯೋಧನನ ಮರಣವನ್ನು ಶ್ರೀಕೃಷ್ಣನು ಸೂಚಿಸುತ್ತಾನೆ.

ಹಸ್ತಿನಾವತಿಯಿಂದ ಮರಳುವಾಗ ಶ್ರೀಕೃಷ್ಣನು ಕರ್ಣನನ್ನು ಕರೆದು, ಅವನ ಜನನದ ಗುಟ್ಟನ್ನು ತಿಳಿಸಿ, ಅವನನ್ನು ಭೇದಿಸಿಬಿಡುತ್ತಾನೆ. ಕುಂತಿಯು ಕರ್ಣನಿಂದ, “ಪಾಂಡವರೈವರ ತಲೆ ಕಾಯುವೆನು. ತೊಟ್ಟಬಾಣ ತೊಡುವುದಿಲ್ಲ” ಎಂಬ ಎರಡು ವಚನಗಳನ್ನು ಪಡೆಯುವಂತೆ ಶ್ರೀಕೃಷ್ಣನೇ ವ್ಯವಸ್ಥೆ ಮಾಡುತ್ತಾನೆ. ವಿದುರನಿಗೆ ಅಪಮಾನವಾಗುವಂತೆ ದುರ್ಯೋಧನನು ಓಲಗದಲ್ಲಿ ಮಾತನಾಡಿದ್ದರಿಂದ ವಿದುರನೂ, “ಕಲಿಭೀಮನು ನಿನ್ನ ತೊಡೆ ಮುರಿಯುವಾಗ ನಿನ್ನನ್ನು ರಕ್ಷಿಸಲು ಇಟ್ಟ ಈ ಬಿಲ್ಲನ್ನು ಇದೋ ಮುರಿಯುವೆ, ಎಂದು ಗುಡುಗಾಡಿ ಬಿಲ್ಲನ್ನು ಮುರಿಯುವುದು ಆಗಿಹೋಗಿದೆ.

ಉದ್ಯೋಗಪರ್ವದಲ್ಲಿ ಯುದ್ಧವನ್ನು ನಿಶ್ಚಯ ಮಾಡುವದೇ ದೈವಸಂಕಲ್ಪ. ಅದರ ಪ್ರಕಾರ ದುರ್ಯೋಧನನು, ರಣಮಹೋತ್ಸವವೇ ನನ್ನ ಮತ. ಕೈ ದಣಿಯುವಂತೆ ಹೋರಾಡುವೆ. ಕೃಷ್ಣನನ್ನು ಕೆಣಕದೆ ನನಗೆ ಬೇಗನೆ ಕೈವಲ್ಯ ಸಿಗಲಾರದು” ಎಂದು ತನ್ನ ಕೈವಲ್ಯ ಆಪೇಕ್ಷೆಯನ್ನು ಪ್ರಕಟಪಡಿಸುತ್ತಾನೆ. ಇಲ್ಲಿ ದುರ್ಯೋಧನನ ಕೃಷ್ಣಭಕ್ತಿಯೂ ಗುಪ್ತವಾಗಿ ವ್ಯಕ್ತವಾದಂತೆ ತೋರುತ್ತದೆ.

ಮಹಾಭಾರತ ಯುದ್ಧ

ಅರ್ಜುನನಿಗೆ ಭಾಋತದ ಎರಡನೆಯ ಭಾಗ ಯುದ್ಧ ಪಂಚಕ. ಭೀಷ್ಮ ಪರ್ವದಲ್ಲಿ ಭೀಷ್ಮನ ಸಾವು, ದ್ರೋಣಪರ್ವದಲ್ಲಿ ದ್ರೋಣನ ಸಾವು, ಕರ್ಣಪರ್ವದಲ್ಲಿ ಕರ್ಣನ ಸಾವು, ಶಲ್ಯಪರ್ವದಲ್ಲಿ ಶಲ್ಯನ ಸಾವು, ಕೊನೆಗೆ ಗದಾಪರ್ವದಲ್ಲಿ ದುರ್ಯೋಧನನ ಸಾವೇ ದೇವಸಂಕಲ್ಪ.

ಅರ್ಜುನನಿಗೆ ಯುದ್ಧ ಮಾಡುವ ಉತ್ಸಾಹವೇ ಇಲ್ಲ. ಇಂಥವನಿಗೆ ಶ್ರೀಕೃಷ್ಣನು. “ನಿನ್ನ ಎದುರಿಗೆ ಇರುವ ಸೈನ್ಯ ಸತ್ತಂತಾಗಿದೆ. ಇಂಥ ಕಾರ್ಯವನ್ನು ಮಾಡುವವನು ನೀನಲ್ಲ. ಭಗವಂತನು ಆ ಕಾರ್ಯ ಮಾಡುತ್ತಾನೆ. ಅವನು ಈಗಾಗಲೇ ಈ ಸೈನ್‌ಉವನ್ನು ಕೊಂದುಬಿಟ್ಟಿದ್ದಾನೆ. ಅವನು ಈಗಾಗಲೇ ಈ ಸೈನ್ಯವನ್ನು ಕೊಂದುಬಿಟ್ಟಿದ್ದಾನೆ. ನೀನು ನಿಮಿತ್ತ ಮಾತ್ರನು ಎಂದು ಮೊದಲಾಗಿ ಭಗವದ್ಗೀತೆಯನ್ನೇ ಅರ್ಜುನನಿಗೆ ಉಪದೇಶಿಸುತ್ತಾನೆ. ಕೊನೆಗೆ ಅರ್ಜುನನಿಗೆ ದಿವ್ಯ ನೇತ್ರ ಕೊಟ್ಟು ವಿಶ್ವರೂಪವನ್ನು ತೋರಿಸುತ್ತಾನೆ. ಇದರಿಂದ ಚೈತನ್ಯ ಪಡೆದ ಅರ್ಜುನನು ಯುದ್ಧಕ್ಕೆ ಅಣಿಯಾಗುವನು.

ಮಹಾಭಾರದ ಯುದ್ಧವನ್ನು ರೋಮಾಂಚನವಾಗುವಂತೆ ಬಿತ್ತರಿಸಿದ್ದಾನೆ ಕವಿ. ಇದರುದ್ದಕ್ಕೂ ಕಾಣುವುದು ಶ್ರೀಕೃಷ್ಣ ಹೇಗೆ ಪಾಂಡವರ ಕವಚವಾಗಿ ನಿಂತ ಎಂಬುದು.

ಭೀಷ್ಮನು ಘನಘೋರ ಕಾಳಗವನ್ನು ಮಾಡಿ ತನ್ನ ಯುದ್ಧ ಕೌಶಲ್ಯದಿಂದ ಅರ್ಜುನನನ್ನು ನಡುಗುವಂತೆ ಮಾಡಿದನು. ಇಷ್ಟೇ ಅಲ್ಲ, “ಶಸ್ತ್ರವನ್ನು ಧರಿಸುವುದಿಲ್ಲ” ಎಂದು ವಚನ ಕೊಟ್ಟ ಶ್ರೀಕೃಷ್ಣನು ಸಿಟ್ಟಿನ ಭರದಲ್ಲಿ ಶಸ್ತ್ರ ಧರಿಸುವಂತೆ ಭೀಷ್ಮನು ಯುದ್ಧ ಮಾಡುತ್ತಾನೆ. ಭೀಷ್ಮನು ಶ್ರೇಷ್ಠ ಕೃಷ್ಣ ಭಕ್ತ. ಇಂತವರನ್ನು ಗೆಲ್ಲುವುದು ಯಾರಿಂದಲೂ ಸಾಧ್ಯವಿಲ್ಲ ಎಂದು ಅರ್ಜುನನಿಗೆ ಮನವರಿಗೆ ಮಾಡಿ ಕೊಡುವದೇ ಶ್ರೀಕೃಷ್ಣನ ಉದ್ದೇಶ. ಭೀಷ್ಮನು ಶ್ರೀಕೃಷ್ಣನ ಸುದರ್ಶನ ಚಕ್ರವನ್ನು ಭಕ್ತಿಯಿಂದಲೇ ಗೆಲ್ಲುತ್ತಾನೆ.

ಕೊನೆಗೆ ಭೀಷ್ಮನ ಹೇಳಿಕೆಯ ಪ್ರಕಾರ ಶಿಖಂಡಿಯನ್ನು ಎದುರು ಮಾಡಿ ಅರ್ಜುನನಿಂದ ಭೀಷ್ಮನನ್ನು ಶ್ರೀಕೃಷ್ಣನು ಹೊಡಿಸುತ್ತಾನೆ. ಭಗವಂತನೇ ಸೃಷ್ಟಿ, ಸ್ಥಿತಿ, ಲಯಕ್ಕೆ ಕಾರಣ ಎಂಬುದು ಭಕ್ತನಿಗೆ ಒಪ್ಪಿಗೆಯಾಗಬೇಕಾದರೆ, ಭಗವಂತನೇ ತಾನಾಗಿ ಭಕ್ತನನ್ನು ಮಹಾ ಕಷ್ಟಕ್ಕೆ ಗುರಿ ಮಾಡಿ, ತೊಳಲಾಡುವಂತೆ ಮಾಡಿ, ಅಸಹಾಯಕನಾಗುವಂತೆ ಮಾಡಿ, ನಿರಾಧಾರನಾಗುವಂತೆ ಮಾಡಿ, ಕೊನೆಗೆ ಕೃಪಾಪ್ರಸಾದದಿಂದ ಕಾಪಡುತ್ತಾನೆ. ಭಗವಂತರ ಈ ಲೀಲಾವಿಲಾಸವೇ ಯುದ್ಧಪಂಚಕದಲ್ಲಿ ಪ್ರಕಟವಾಗುತ್ತದೆ.

ಮತ್ತೊಂದು ಪ್ರಸಂಗ. ಅಭಿಮನ್ಯುವಿನ ಮರಣದ ಸುದ್ದಿ ಕೇಳಿ ದುಃಖತಪ್ತನಾದ ಅರ್ಜುನನು ಪ್ರತಿಜ್ಞೆ ಮಾಡುತ್ತಾನೆ. “ಅಭಿಮನ್ಯುವನ್ನು ಕೊಂದ ಸೈಂಧವನನ್ನು ಸೂರ್ಯಸ್ತ್ರ ಆಗುವುದರಲ್ಲಿ ಕೊಲ್ಲುವೆ” ಎಂದು. ಸೈಂಧವನನ್ನು ಕೊಲ್ಲುವುದು ಅಷ್ಟು ಸುಲಭವಲ್ಲ. ಸೈಂದನನ್ನು ಕಾಪಾಡಬೇಕು ಎಂದು ದ್ರೋಣರಿಗೆ ದುರ್ಯೋಧನನು ಕೇಳಿಕೊಂಡಿದ್ದಾನೆ. ಶ್ರೀಕೃಷ್ಣನು ಅರ್ಜುನನಿಗೆ ದ್ರೋಣರಿಗೆ ನಮಸ್ಕಾರ ಮಾಡಿ ಮೆಚ್ಚುಗೆ ಪಡೆಯಲು ಬೋಧಿಸುತ್ತಾನೆ. ರಣಾಂಗಣದಲ್ಲಿ ಅರ್ಜುನನು ದ್ರೋಣರಿಗೆ ನಮಸ್ಕರಿಸಿದ್ದರಿಂದ ದ್ರೋಣರು ಹರ್ಷಚಿತ್ತ ಉಳ್ಳವರಾಗುತ್ತಾರೆ. ಈ ಹರ್ಷದ ಭರದಲ್ಲಿ “ನನ್ನ ಪ್ರಿಯ ಶಿಷ್ಯನೇ ಹೋಗು, ಸೈಂಧವನನ್ನು ಸಂಹರಿಸು” ಎಂಬ ಆಶೀರ್ವಾದವನ್ನು ಅರ್ಜುನನಿಗೆ ದ್ರೋಣರು ಕೊಟ್ಟು ಬಿಡುತ್ತಾರೆ. ಶ್ರೀಕೃಷ್ಣನು ಸೂರ್ಯನಿಗೆ ತನ್ನ ಚಕ್ರವನ್ನು ಅಡ್ಡ ಹಿಡಿದು ಕತ್ತಲಾಗುವಂತೆ ಮಾಡುತ್ತಾನೆ. ನಿಜವಾದ ಕತ್ತಲು ಎಂದು ಭ್ರಮಿಸಿ, ಅರ್ಜುನನು ಅಗ್ನಿ ಪ್ರವೇಶ ಮಾಡುವುದನ್ನು ನೋಡಲಯ ದುರ್ಯೋಧನ ಮತ್ತು ಸೈಂಧವ ಬರುತ್ತಾರೆ. ಆಗ ಶ್ರೀಕೃಷ್ಣನ ಹೇಳಿಕೆಯ ಪ್ರಕಾರ ಅರ್ಜುನನು ಸೈಂಧವನನ್ನು ಕೊಲ್ಲುತ್ತಾನೆ. ಶ್ರೀಕೃಷ್ಣ ಚಕ್ರವನ್ನು ಹಿಂತೆಗೆದುಕೊಂಡಿದ್ದರಿಂದ ಸೂರ್ಯ ಪ್ರಕಾಶ ಎಲ್ಲರಿಗೂ ಕಾಣುತ್ತದೆ. ಅರ್ಜುನನ ಪ್ರತಿಜ್ಞೆ ಸಫಲವಾಗುತ್ತದೆ.

ಫಲಶ್ರುತಿ

ಯುದ್ಧ ಮುಗಿಯುತ್ತದೆ. ಪಾಂಡವರು ಉಳಿದರೂ ಅವರ ಮಕ್ಕಳು, ಸ್ನೇಹಿತರು ಎಲ್ಲ ನಾಶವಾಗಿದ್ದಾರೆ. ಧರ್ಮರಾಯ, ಗಾಂಧಾರಿ. ಕುಂತಿ ಮೊದಲಾದವರನ್ನು ರಣಾಂಗಣದಲ್ಲಿ ಅಡ್ಡಾಡಿಸಿ ಅವರ ಶೋಕವು ಹೊರಹೊಮ್ಮಿ ಹೋಗುವಂತೆ ಮಾಡಿ, ಧರ್ಮರಾಜನ ಪಟ್ಟಾಭಿಷೇಕ ಮಾಡಿಸಿ ಶ್ರೀಕೃಷ್ಣನು ತಾನು “ಪಾಂಡವಜೀವಿ” ಎಂಬ ಪ್ರತಿಜ್ಞೆಯನ್ನು ಪೂರ್ಣ ಮಾಡುತ್ತಾನೆ. ಭೀಮ ಯುವರಾಜ, ಅರ್ಜುನ ಸೇನಾಪತಿ, ನಕುಲ-ಸಹದೇವ ವರಕುಮಾರರಾಗಿ ಶೋಭಿಸುತ್ತಾರೆ. ಪಾಂಡವರನ್ನು ಸಂತೈಸಿ ಶ್ರೀಕೃಷ್ಣನು ದ್ವಾರಕೆಗೆ ಮರಳುತ್ತಾನೆ. ಮಹಾಕವಿ ಅರ್ಜುನನು ತನ್ನ ಹತ್ತೂ ಪರ್ವಗಳಲ್ಲಿ ಪದುಮನಾಭನ ಮಹಿಮೆಯನ್ನು ಹಾಡಿ,

“ವೇದಪಾರಾಯಣದ ಫಲ ಗಂ
ಗಾದಿ ತೀರ್ಥಸ್ನಾನ ಫಲ, ಕೃ
ಚ್ಚ್ರಾದಿ ತಪಸಿನ ಫಲವು ಜ್ಯೋತಿಷ್ಟೋಮಯಾಗಫಲ
ಮೇದಿನಿಯನೊಲಿದಿತ್ತಫಲ, ವ
ಸ್ತ್ರಾದಿ ಕನ್ಯಾದಾನ ಫಲವಹು
ದಾದರಿಸಿ ಭಾರತದೊಳೊಂದಕ್ಷರವ ಕೇಳ್ದರಿಗೆ”

– ಎಂಬ ಫಲಶ್ರುತಿಯೊಂದಿಗೆ ತನ್ನ ಭಾರತ ಕಥೆಯನ್ನು ಮುಗಿಸುತ್ತಾನೆ.

ಭಗವದ್ ಲೀಲಾ ವಿಲಾಸ

ಅರ್ಜುನನು ಬರೆದ ಭಾರತದ ಒಂದು ಸಕ್ಕರೆಯ ಹಳಕನ್ನು ನಿಮ್ಮ ಮುಂದೆ ಇಟ್ಟಿದ್ದೇವಷ್ಟೆ. ಅದರೊಳಗಿನ ಎಲ್ಲ ವಿವರಗಳನ್ನು ಹೇಳುವುದು. ಈ ಪುಸ್ತಿಕೆಯ ಉದ್ದೇಶವಲ್ಲ. ಕಾವ್ಯದುದ್ದಕ್ಕೂ ಶ್ರೀಕೃಷ್ಣ ಮಹಿಮೆಯನ್ನು ತೋರಿಸುತ್ತ ಹೋದ ಅರ್ಜುನನು ಪುರುಷಾಮೃಗ ಪ್ರಸಂಗ ಮತ್ತು ಕಿರಾತಾರ್ಜುನೀಯ ಮೊದಲಾದ ಪ್ರಸಂಗಗಳಲ್ಲಿ ಶಿವ ಮಹಿಮೆಯನ್ನು ವರ್ಣಿಸಿದ್ದಾನೆ. ಅರ್ಜುನನು ಕರ್ಣ ಸಂಹಾರಕ್ಕಾಗಿ ಉಪಯೋಗಿಸುವ ಅಂಜನಾಸ್ತ್ರ ಅವನು ಶಿವ-ಪಾರ್ವತಿಯರಿಂದ ಪಡೆದಿದ್ದು. ಶಿವನೇ ಇರಲಿ, ಯಾವುದೇ ದೇವರಿರಲೆ ಅವನು ಪ್ರಸ್ತುತ ಕಾವ್ಯದ ಮಟ್ಟಿಗೆ ಶ್ರೀಕೃಷ್ಣ ಎಲ್ಲ ದೇವರು ಒಂದೇ, ನಾಮ ಬೇರೆ ಬೇರೆ ಎಂಬುದು ಶುಕಭಾಗವತ ದೃಷ್ಟಿ. ಈ ದೃಷ್ಟಿ ಅರ್ಜುನನಿಗೆ ಸಮ್ಮತವಾಗಿರುವ ದೃಷ್ಟಿ.

ಪಂಪನ “ವಿಕ್ರಮಾರ್ಜುನ ವಿಜಯ” ದಂತೆ ಕುಮಾರ ವ್ಯಾಸನ ಕಾವ್ಯವು ಲೌಕಿಕ ಕಾವ್ಯವಲ್ಲ. ಅರ್ಜುನನಿಗೆ ಯಾವ ಅರಸನನ್ನೂ ಪರ್ಯಾಯವಾಗಿ ಹೊಗಳಬೇಕಾಗಿಲ್ಲ. ಅರ್ಜುನನು ನಿತ್ಯಜೀವನದಲ್ಲಿ ಗದುಗಿನ ವೀರನಾರಾಯಣನ ಪೂಜಾರಿ, ಭಕ್ತ. ಅವನ ಅಂತರಂಗದಲ್ಲಿ ಯಾವಗಲೂ ಮಿಂಚಾಡುತ್ತಿರುವುದು ಶ್ರೀಕೃಷ್ಣನ ಭಗವದ್ ಲೀಲೆ. ಹೀಗಾಗಿ ಅವನು ರಚಿಸಿದ ಭಾರತವು ಭಗವದ್ ಲೀಲಾ ವಿಲಾಸಕ್ಕೆ ಜಾತಿ ಮತಗಳ ವಿಲೇಪವಿಲ್ಲ. ಅದೊಂದು ನಿಸರ್ಗ ನಿರ್ಮಿತ ಸುಗಂಧಪುಷ್ಪ. ಈ ಪುಷ್ಪದ ಸುವಾಸನೆಯೇ ಅರ್ಜುನನ ಭಾರತಕ್ಕೆ ಬಂದಿರುವುದರಿಂದ ಅದು ಕನ್ನಡಿಗರೆಲ್ಲರಿಗೂ ಗ್ರಾಹ್ಯವಾಗಿದೆ, ಪೂಜ್ಯವಾಗಿದೆ.

ಪಂಪನ ಕಾವ್ಯಕ್ಕೆ ಅರ್ಜುನ, ರನ್ನನ ಕಾವ್ಯಕ್ಕೆ ಭೀಮ ನಾಯಕರಾಗಿರುವಂತೆ ವ್ಯಾಸರ ಕಾವ್ಯಕ್ಕೆ ಶ್ರೀಕೃಷ್ಣನೇ ನಾಯಕ ಮತ್ತು ಅರ್ಜುನನ ಕಾವ್ಯಕ್ಕೆ ಶ್ರೀಕೃಷ್ಣ ಆಜ್ಞಾಪಾಲಕನಾದ ಧರ್ಮರಾಯನೇ ನಾಯಕ. ಧರ್ಮ ಜೀವನ ನಿಷ್ಠೆಯಿಂದ ಶ್ರೀಕೃಷ್ಣನ ಚಾರಿತ್ಯ್ರ ಪೂರ್ಣಚಂದ್ರವಾಗಿದೆ. ಇಂಥ ಈ ಶ್ರೀಕೃಷ್ಣ ಚಾರಿತ್ಯ್ರದ ಮರ್ಮವನ್ನು ಅರ್ಜುನನೂ ತನ್ನ ಜೀವನಾಭೂತಿಯಲ್ಲಿ ಗುರುತಿಸಿರಲು ಸಾಕು.

ಅದ್ಭುತ ಕಥಾ ನಿರೂಪಣೆ

ಅರ್ಜುನ ಕಥೆಯನ್ನು ಹೇಳುವ ರೀತಿ ಅದ್ಭುತ. ಎಲ್ಲ ಕಣ್ಣೆದುರಿಗೆ ನಡೆದಂತೆ ಭಾಸವಾಗುತ್ತದೆ. ಅವನ ಪಾತ್ರಗಳು, ಶಕ್ತಿಯ ಮೂರ್ತಿಗಳು ಜೀವಂತ. ಅವರ ನಗು, ಅಳು, ಆಟೋಪ ನಮಗೆ ಕೇಳಿಸುತ್ತದೆ; ಅವರ ಸಂತೋಷ, ದುಃಖ, ಕೋಪ ಕಣ್ಣಿಗೆ ಕಾಣಿಸುತ್ತದೆ. ಅಭಿಮನ್ಯು ಸತ್ತ ಎಂಗ ಸುದ್ದಿ ಕೇಳಿದರೆ ಅರ್ಜುನನಿಗೆ ಎಷ್ಟು ಕೋಪ ಬರುತ್ತದೋ ಎಂದು ಮೃತ್ಯುದೇವತೆಗೇ ಹೆದರಿಕೆಯಾಯಿತಂತೆ – “ಮೃತ್ಯು ಮೊರೆಹೊಕ್ಕಳು ಮಹೇಶ್ವರನ”. ಕಪ್ಪಗಿನ ಬೆಟ್ಟದ ಗಾತ್ರದ ರಾಕ್ಷಸ ಘಟೋತ್ಕಚನ ಹಲ್ಲಿ ಕಂಡರೆ “ಕಾರಿರುಳ ಪಟ್ಟಣಕೆ ಚಂದ್ರನ ತೋರಣವ ಬಿಗಿದಂತೆ.” ಶ್ರೀಕೃಷ್ಣ ಹೀಗೆ ಬಂದನಂತೆ:

ಸಿರಿಮೊಗದ ಕಿರುಬೆಮರ ತೇಜಿಯ
ಖುರಪುಟದ ಕೆಂದೂಳಿ ಸೋಂಕಿದ
ಸಿರಿ ಮುಡಿಯ ಕುಡಿಮೀಸೆಯಲಿ ಕೆಂಪಡರ್ದ
ರೇಣುಗಳ
ಖರ ಮರೀಚಿಯ ಜಳಕೆ ಬಾಡಿದ
ತರುಣ ತುಲಸೀದಂಡೆಯೊಪ್ಪುವ
ಗರುವ ದೇವ…..

ಇನ್ನೊಂದೆಡೆ “ಮರಿಮಿಂಚುಗಳು ಮುಗಿಲುಗಿಳಿವಂತೆ” ಶ್ರೀಕೃಷ್ಣ ಇಳಿದ ಎನ್ನುತ್ತಾನೆ ಕವಿ. ತನಗೆ ಅಪಮಾನವಾದರೂ ಸುಮ್ಮನಿರುವ ಪತಿಗಳಿಗೆ ದ್ರೌಪದಿ ಹೇಳುತ್ತಾಳೆ:

ಕಾಲನನು ಕೆರಳಿದರೆ ಮುರಿವ
ಚ್ಚಾಳುತನದವರೆನ್ನನೊಬ್ಬಳ
ನಾಳಲಾರಿರಿ ಪಾಪಿಗಳಿರಪಕೀರ್ತಿಗಳುಕಿರಲಾ!
ತೋಳಹೊರೆ ನಿಮಗೇಕೆ ಭೂಮೀ
ಪಾಲವಂಶದೊಳುದಿಸಲೇತಕೆ
ಕೊಳುಗೇಡಿಂಗೊಡಲ ಹೊರವಿರಿ……

ರೂಪಕ ಚಕ್ರವರ್ತಿ

ಮಹಾಕವಿ ಅರ್ಜುನನು “ರೂಪಕ ಸಾಮ್ರಾಜ್ಯದ ಚಕ್ರವರ್ತಿ” ಎಂಬ ಮನ್ನಣೆಯನ್ನು ಪಡೆದಿದ್ದಾನೆ. ಅವನ ಕಾವ್ಯಭಾಷೆ ರೂಪಕನಿಷ್ಠ. “ರೋಷಜ್ವಾಲೆ”, ಮಾತಿನ ಗಾಳಿ, “ಕಾರುಣ್ಯ ವರ್ಷ”, “ಕೌರವರು – ಕಾಗೆ”, “ದ್ರೌಪದಿ-ಕೋಗಿಲೆ”, ನಾರಾಯಣಾಸ್ತ್ರ – ಸುರಧೇನು”, “ಕಲ್ಪವೃಕ್ಷ”, “ಧರ್ಮ-ಯಮಧರ್ಮ”, “ಭೀಮ-ಯಮ”, “ಅರ್ಜುನ-ಇಂದ್ರ”, “ಕರ್ಣ-ಸೂರ್ಯ” ಮೊದಲಾಗಿ ಅರ್ಜುನನ ಪಾತ್ರ, ಸನ್ನಿವೇಶ, ವರ್ಣನೆ ಎಲ್ಲವೂ ರೂಪಕ, ರೂಪಕಮಾಲೆ.

ಈ ರೂಪಕ ಚಕ್ರವರ್ತಿ ರಚಿಸಿದ ಕನ್ನಡ ಭಾರತದ ಉದ್ಯೋಗ ಮತ್ತು ಭೀಷ್ಮ ಪರ್ವಗಳು ಮಹಾರಾಷ್ಟ್ರದ ಚಂದ್ರಾತ್ಮಜರುದ್ರ ಎಂಬ ಕವಿಗೆ ಮರಾಠಿಯಲ್ಲಿ ಭಾರತವನ್ನು ಬರೆಯುವ ಪ್ರೇರಣೆ ಕೊಟ್ಟವು ಎಂಬುದು ಒಂದು ಹೆಮ್ಮೆಯ ವಿಷಯ. ಯಾವುದೇ ಒಂದು ದೇಶದ, ಭಾಷೆಯ ಕೀರ್ತಿಯನ್ನು ದಿಗ್ದೇಶಕ್ಕೆ ಹಬ್ಬಿಸಲು ಒಂದು ಮಹಾಕಾವ್ಯ ಸಾಕು. ಮೋರೋಪಂತರ ಮರಾಠಿ ಭಾರತಮ ನನ್ನಯ್ಯ ಕವಿಯ ತೆಲುಗು ಭಾರತ, ತುಲಸೀದಾಸರ ಹಿಂದಿ ರಾಮಾಯಣ ಹೇಗೋ ಹಾಗೆ ಕುಮಾರವ್ಯಾಸನ ಕರ್ಣಾಟ ಭಾರತ ಕಥಾಮಂಜರಿ (ಗದುಗಿನ ಭಾರತ) ಕರ್ನಾಟಕದ ಜನತೆಯ ನಿತ್ಯಪಾರಾಯಣದ ಗ್ರಂಥವಾಗಿದೆ.

ಸಾಂಕೇತಿಕ ಕಾವ್ಯ

ಅರ್ಜುನನ ಭಾರತವು ಒಂದು ಸಾಂಕೇತಿಕ ಕಾವ್ಯ. ಜಗತ್ತನಲ್ಲಿ ನೂರಾರು ದುಷ್ಟರು ದುರ್ಯೋಧನ, ಕರ್ಣ, ಶಕುನಿ, ಕೀಚಕ ಮೊದಲಾದ ಮಾನವರೂಪಗಳು ಅದೃಶ್ಯ ಮತ್ತು ದೃಶ್ಯ ದಾನವರು ಕಾಡುತ್ತಿರಬಹುದು. ಅವರನ್ನೆಲ್ಲ ಸಂಹರಿಸಲು ಪಾಂಡವರಂಥ ಐದು ಜನ, ಶ್ರೀಕೃಷ್ಣನಂಥ ಒಬ್ಬ ಮಾರ್ಗದರ್ಶಕನಿದ್ದರೆ ಸಾಕು. ದುಷ್ಟರು ಎಂದರೆ ಅವರಲ್ಲಿ ಗುಣವೇ ಇರುವುದಿಲ್ಲ ಎಂದು ಅರ್ಥವಿಲ್ಲ. ಅವರಿಗೆ ಶೌರ್ಯದ, ಹಣದ, ನಡತೆಯ, ತನ್ನತನದ ಮದೋನ್ಮತ್ತತೆ ಮತ್ತು ಪೌರುಷದ ಅಹಂಕಾರವಿರುತ್ತದೆ. ಇಂಥವರು ತಮ್ಮ ಅಧಿಕಾರ ಮತ್ತು ಪೌರುಷದ, ಆಪ್ತವೈದ್ಯ ಬಲದಿಂದ ಭೀಷ್ಮ, ದ್ರೋಣ ಮೊದಲಾದ ದೈವನಿಷ್ಠ ಉಳ್ಳವರನ್ನು ತಮ್ಮ ಅಧೀನಪಡಿಸಿಕೊಂಡಿರುತ್ತಾರೆ. ಕೌರವರಲ್ಲಿ ಪೌರುಷದ ಕೊರತೆ ಇರಲಿಲ್ಲ. ವೀರರಿಗೆ ಬೇಕಾಗುವ ಎಲ್ಲ ಹುಣಾನುಕೂಲತೆ ಅವರಿಗಿತ್ತು. ಆದರೆ ಅವರ ವೀರತ್ವವು ವೈರ ಮತ್ತು ದ್ವೇ ಎಂಬ ಸ್ಥಾಯಿಯಿಂದ ಪೋಷಿತವಾಗಿತ್ತು. ವೈರಕ್ಕೆ ಮರಣವೇ ಮುಕ್ತಿ, ಹೀಗಾಗಿ ಅವರು ವೀರತ್ವವು ವೈರ ಮತ್ತು ದ್ವೇಷ ಎಂಬ ಸ್ಥಾಯಿಯಿಂದ ಪೋಷಿತವಾಗಿತ್ತು. ವೈರಕ್ಕೆ ಮರಣವೇ ಮುಕ್ತಿ, ಹೀಗಾಗಿ ಅವರು ದೈವಭಕ್ತಿ ನಿಷ್ಠರಾದ, ಪೌರುಷ ಪ್ರಾಬಳ್ಯವುಳ್ಳ ಪಾಂಡವರನ್ನು ಕಾಡಿ, ತಾವೇ ಹಾಳಾದರು. ಪೌರುಸಕ್ಕೆ ಯಾವಾಗಲೂ ದೈವದ ಬೆಂಬಲ ಬೇಕೇಬೇಕು. ಕೌರವನಿಗೆ ದೈವದ ಬೆಂಬಲವಿಲ್ಲ ಎಂಬ ಮಾತು ಧೃತರಾಷ್ಟ್ರ, ಭೀಷ್ಮ, ದ್ರೋಣ, ಕರ್ಣ, ಅಶ್ವತ್ಥಾಮ, ಕೃಪಾಚಾರ್ಯ ಎಲ್ಲರೂ ಮನಗಂಡಿದ್ದರೂ ಅನೇಕ ಸಲ ಈ ವಿಷಯವಾಗಿ ದುರ್ಯೋಧನನಿಗೆ ಉಪದೇಶಿಸಿದ್ದರೂ ಇವರ ಉಪದೇಶಕ್ಕೆ ಕಿವಿಗೊಡುವ ಇಚ್ಛೆ ದುರ್ಯೋಧನನಿಗೆ ಇರಲಿಲ್ಲ. ಇಂಥವನಿಗೆ ಬೆಂಬಲ ಕೊಡುವುದು ತಪ್ಪು ಎಂದು ಭೀಷ್ಮ, ದ್ರೋಣರಿಗೆ ಗೊತ್ತಿದ್ದರೂ ದೇವಕಾರ್ಯಕ್ಕೆ ಸಹಾಯ ಮಾಡುವ ದೈವ ನಿಯೋಜನೆಯ ಪ್ರಕಾರ ಅವರಿಬ್ಬರಿಗೂ ಕೌರವರ ಕಡೆಯಿಂದ ಹೋರಾಡುತ್ತಾರೆ. ಆದರೆ ತಾವೇ ತಮ್ಮ ಮರಣದ ಗುಟ್ಟನ್ನು ಪಾಂಡವರಿಗೆ ಹೇಳಿ ಕೊಡುತ್ತಾರೆ.

ಭಾರತದ ಕಥೆಯ ತುಂಬಾ ಶಾಪ, ವರ, ಅಶುಭ ಸೂಚನೆ, ಶುಭಸೂಚನೆ, ಮಾಟ, ಕಾಟ, ಪೌರುಷ ಮತ್ತು ದೈವ ಇವುಗಳ ಚಿತ್ರಣ ಬಂದಿದೆ. ಭಾರತೀಯ ಜೀವನಕ್ಕೆ ಇಂದಿಗೂ ಇವು ಯಾವುವೂ ಹೊಸವಲ್ಲ. ಭಾರತೀಯರು ದೈವ ವಿರೋಧಿಗಲಾಗಬಾರದು, ವಿರೋಧ ಮಾಡುವುದರಿಂದ ಅವನತಿಯೇ ಹೊರತು ಉನ್ನತಿಯಲ್ಲ ಎಂಬ ಅನೇಕ ಸಂದೇಶಗಳನ್ನು ಮಹಾಭಾರತ ಪ್ರೇರಣೆಯಿಂದ ಬರೆದ ಕಾವ್ಯಗಳು ಇಂದಿಗೂ ಸಾರುತ್ತಿವೆ. ಈ ಕಾವ್ಯಗಳ ಪರಿಣಾಮವು ಭಾರತೀಯರ ಹೃದಯ ಸಿಂಹಾಸನವನ್ನು ಎಂದು ಏರುವುವೋ ಆದಿವಸವೇ ಧರ್ಮಪಟ್ಟಾಭಿಷೇಕ ಮತ್ತು ಕೃತಯುಗದ ಆರಂಭ. “ಅದು ಆಗುವುದು ಎಂದು” ಎಂದು ಕೇಳಿದರೆ ಅದಕ್ಕೆ ಉತ್ತರ “ಈಶ ಸಂಕಲ್ಪವಿದ್ದಂತೆ ಆಗುತ್ತದೆ” ಎಂದೇ ಹೇಳಬೇಕಾಗುತ್ತದೆ. ಅಲ್ಲಿಯವರೆಗೂ ಅರ್ಜುನನಂಥ ಕವಿಗಳು, ಅವರ ಕಾವ್ಯಗಳು ತಮ್ಮ ಕಾರ್ಯವನ್ನು ಮಾಡುತ್ತ ಕಾಲಕಾಲದ ಜನಾಂಗವನ್ನು ಎಚ್ಚರಿಸುತ್ತಾರೆ ಎಂಬುದು ಸತ್ಯ. ನಾಲ್ಕುನೂರು ವರ್ಷಗಳ ಏಕೆ, ಹದಿನೈದು ನೂರು ವರ್ಷಗಳ ಹಿಂದಿನ ಕವಿಗಳೂ ಕಾವ್ಯಗಳೂ ಇಂದಿನ ಜನಾಂಗಕ್ಕೆ ಬೇಕಾಗಿವೆ ಎಂಬುದೇ ಮೇಲಿನ ಮಾತಿಗೆ ಸಾಕ್ಷಿ.