ಕ್ರಿ.ಶ. ೧೪೦೦ ಈತನ ಕಾಲ. ಗದುಗಿನ ಕೋಳಿವಾಡ ಇವನ ಊರು. ಗದುಗಿನ ವೀರನಾರಯಣ ಈತನ ಇಷ್ಟ ದೇವರು. ನಾರಣಪ್ಪ ಎಂಬುದು ಈತನಿಗೆ ಮೊದಲಿದ್ದ ಹೆಸರು. ಭಾಮಿನಿ ಷಟ್ಪದಿಯ ಅತ್ಯುನ್ನತ ಶಿಖರ ಕುಮಾರವ್ಯಾಸ. ಹಾಗೆಯೇ ‘ಕರ್ಣಾಟ ಭಾರತ ಕಥಾಮಂಜರಿ‘ ಯೂ ಭಾಮಿನಿ ಷಟ್ಪದಿಯಲ್ಲಿ ರಚಿತವಾಗಿದೆ. ಇದು ೧೦ ಪರ್ವಗಳನ್ನು ಒಳಗೊಂಡಿದೆ. ಮೊದಲು ಐದು ಪರ್ವಗಳನ್ನು ‘ಆದಿ ಪಂಚಕ‘ ವೆಂದೂ, ಕೊನೆಯ ಐದು ಪರ್ವಗಳನ್ನು ‘ಯುದ್ಧ ಪಂಚಕ‘ ವೆಂದೂ ಕರೆಯಲಾಗಿದೆ. ಕುಮಾರವ್ಯಾಸ ಮಹಾಭಾರತದ ಕಥೆಯ ೧೦ ಪರ್ವಗಳನ್ನು ಕನ್ನಡಕ್ಕೆ ತಂದಿದ್ದಾನೆ.

ಕಾವ್ಯಾರಂಭದಲ್ಲಿ ತನ್ನ ಇಷ್ಟದೈವವನ್ನು ಸ್ಮರಿಸಿದ್ದಾನೆ. ವ್ಯಾಸರ ಇತಿಹಾಸ ಕಾವ್ಯವನ್ನು ಅನುಸರಿಸಿದ್ದರೂ ಕನ್ನಡದ ಪುರಾಣಕಾವ್ಯವಾಗಿ ಮಾರ್ಪಡಿಸಿದ್ದಾರೆ. ಈ ಕಾವ್ಯವನ್ನು ‘ ಕನ್ನಡ ಭಾರತ ‘ ವೀರಶೃಂಗಾರ ರಸಗಳ ಸನ್ನಿವೇಶಗಳನ್ನು ಯಥೇಚ್ಚವಾಗಿ ಒಳಗೊಂಡಿವೆ. ಆದಿಪರ್ವದಲ್ಲಿ ಬರುವ ಪಾಂಡುಮಾದ್ರಿಯರ ಕಡೆಗಾಲದ ಶೃಂಗಾರ ಸನ್ನಿವೇಶ ಮನೋಜ್ಞವಾಗಿದೆ.

ಇಲ್ಲಿನ ವಸಂತಾಗಮನದ ವರ್ಣನೆ ಅರ್ಥಗರ್ಬಿತವಾಗಿದ್ದು, ಧ್ವನಿಪೂರ್ಣವಾಗಿದೆ. ಇಷ್ಟೇ ಮಹೋನ್ನತ ಶೃಂಗಾರ ಸನ್ನಿವೇಶ, ಊರ್ವಶಿ ಅರ್ಜುನನ್ನು ಮೋಹಿಸಿದ ಸಂದರ್ಭ. ಮೇಲುನೋಟಕ್ಕೆ ಕುಮಾರವ್ಯಾಸ ಭಾರತ ಭಕ್ತಿಕಾವ್ಯದಂತೆ ತೋರಿದರೂ ಅದು ಸಂಪೂರ್ಣವಾಗಿ ಯುದ್ಧಗಳ ಕ್ಷೋಭೆಯಿಂದಲೇ ತುಂಬಿದೆ.

ಯುದ್ಧಪಂಚಕದ ಪರ್ವಗಳೆಲ್ಲ ವೀರರಸಕ್ಕೆ ಮೀಸಲಾಗಿವೆ. ಇವುಗಳಲ್ಲಿ ಬರುವ ಸುಪ್ರತೀಕಗಜದ ಯುದ್ಧ, ಅಬಿಮನ್ಯುವಿನ ಚಕ್ರವ್ಯೂಹಭೇದನ, ಕರ್ಣಾಜುನರ ಕಾಳಗ, ಬೀಮ ದುರ್ಯೋಧನರ ಯುದ್ಧ, ಬೀಷ್ಮ, ದ್ರೋಣರ ವೀರಾವೇಶದ ಹೋರಾಟ- ಈ ಸಂದರ್ಭಗಳಲ್ಲಿ ಬರುವ ಚಿತ್ರಣ, ಕುಮಾರವ್ಯಾಸನನ್ನು ಕನ್ನಡದ ಶ್ರೇಷ್ಠ ಕವಿಯನ್ನಾಗಿ ಮಾಡಿವೆ. ಹೀಗೆ ಮೂಲದಲ್ಲಿಲ್ಲದ ಸನ್ನಿವೇಶ, ಸಂದರ್ಭಗಳನ್ನು ಸೃಷ್ಟಿಮಾಡಿ ತನ್ನ ಪ್ರತಿಭಾ ಸಾಮರ್ಥ್ಯವನ್ನು ಮೆರೆದಿದ್ದಾನೆ.

ಕೃಷ್ಣನ ಭಕ್ತಿಭಾವ ಕಾವ್ಯದ ಮೂಲೆಮೂಲೆಯನ್ನೂ ಬೆಳಗುತ್ತದೆ. ಕಾವ್ಯಕ್ಕೆ ಕೃಷ್ಣನೇ ಸಾರಥಿಯಂತಿದ್ದಾನೆ. ಕೃಷ್ಣನ ಪಾತ್ರ ಚಿತ್ರಣಕ್ಕೆ ಕವಿ ತನ್ನ ಸಕಲ ಸಾಮರ್ಥ್ಯವನ್ನು ಮೆರೆದಿದ್ದಾನೆ. ಭಕ್ತಿಯೂ ಒಂದು ರಸ ಎನ್ನುವಷ್ಟರ ಮಟ್ಟಿಗೆ ದ್ರೌಪದಿ, ಅರ್ಜುನ, ಧರ್ಮರಾಯ, ಮುಂತಾದ ವ್ಯಕ್ತಿಗಳು ಜೀವಂತ ವ್ಯಕ್ತಿಗಳಾಗಿ ಗೋಚರಿಸುತ್ತಾರೆ.

ಕನ್ನಡ ಭಾಷೆಯ ಎಲ್ಲ ಅಂಶಗಳನ್ನು ತನ್ನ ಕಾವ್ಯದಲ್ಲಿ ಹಿಡಿದಿಟ್ಟಿದ್ದಾನೆ. ಅನ್ಯದೇಶ್ಯ, ದೇಶ್ಯ, ಗ್ರಾಮ್ಯ, ಸಂಸ್ಕೃತವನ್ನು ಒಳಗೊಂಡ ಎಲ್ಲ ಪದಗಳ ಬಳಕೆಯನ್ನು ಇಲ್ಲಿ ಕಾಣಬಹುದು. ಉಪಮೆ, ರೂಪಕಗಳ ಬಳಕೆಯೂ ಇದೆ. ಇದರಿಂದ ‘ರೂಪಕ ಸಾಮ್ರಾಜ್ಯ ಚಕ್ರವರ್ತಿ ಎಂಬ ಹೆಸರು ಬಂದಿದೆ. ಇಂತಹ ಸಾಧನೆಗಳಿಂದ ‘ ಕುಮಾರ ವ್ಯಾಸಯುಗ ಎಂದು ಗುರುತಿಸುವಷ್ಟರ ಮಟ್ಟಿಗೆ ಈತನ ಪ್ರಭಾವ ಕನ್ನಡ ಸಾಹಿತ್ಯದಲ್ಲಿ ಕಂಡುಬರುತ್ತದೆ.