Categories
ಚಲನಚಿತ್ರ ರಾಜ್ಯೋತ್ಸವ 2003 ರಾಜ್ಯೋತ್ಸವ ಪ್ರಶಸ್ತಿ

ಕುಮಾರಿ ತಾರಾ

ಬೆಳ್ಳಿತೆರೆಯ ವರ್ಣಮಯ ಕಲಾಲೋಕದಲ್ಲಿ ವೈವಿಧ್ಯಪೂರ್ಣ ಪಾತ್ರಗಳನ್ನು ಅಭಿನಯಿಸಿ ಕಲಾ ರಸಿಕರ ಮನ ಗೆದ್ದಿರುವ ಮೋಹಕ ಚಿತ್ರ ತಾರೆ ಕುಮಾರಿ ತಾರಾ ಅವರು.
೧೯೮೬ರಲ್ಲಿ ಬಾಲನಟಿಯಾಗಿ ಸಿನಿಮಾ ಉದ್ಯಮವನ್ನು ಪ್ರವೇಶಿಸಿದ ತಾರಾ ಅವರು ಈವರೆಗೆ ಅಭಿನಯಿಸಿದ ಚಿತ್ರಗಳ ಸಂಖ್ಯೆ ೧೬೦. ‘ತುಳಸೀದಳ’ ದಿಂದ ಪ್ರಾರಂಭವಾದ ಅವರ ಕಲಾಜೀವನ `ನಿನಗಾಗಿ’ ಚಿತ್ರದವರೆಗೂ ಮುಂದುವರೆದಿದ್ದು ಇನ್ನೂ ಬೇಡಿಕೆಯಲ್ಲಿರುವುದೇ ಅವರ ಪ್ರತಿಭಾ ಸಂಪನ್ನತೆಗೆ ಸಾಕ್ಷಿಯಾಗಿದೆ. ಕನ್ನಡದ ಎಲ್ಲ ಶ್ರೇಷ್ಠ ನಟ, ನಟಿಯರೊಡನೆ ಅಭಿನಯಿಸಿದ ಹೆಮ್ಮೆ ಇವರದು. ದಕ್ಷಿಣ ಭಾರತದ ಇತರ ಭಾಷೆಗಳಲ್ಲಿಯೂ ಅಭಿನಯಿಸಿ ಒಳ್ಳೆಯ ಹೆಸರು ಗಳಿಸಿದ್ದಾರೆ.
‘ಸುಂದರ ಸ್ವಪ್ನಗಳು’, ‘ವಿಮೋಚನೆ’, ‘ಮುನ್ನುಡಿ’, ‘ಮತದಾನ’, ‘ಕಾನೂರು ಹೆಗ್ಗಡಿತಿ’ ಮೊದಲಾದವು ಇವರು ಅಭಿನಯಿಸಿದ ಕೆಲವು ಪ್ರಮುಖ ಚಲನಚಿತ್ರಗಳು, ಗಿರೀಶ್ ಕಾರ್ನಾಡ್, ನಾಗಾಭರಣ, ನಾಗತಿಹಳ್ಳಿ ಚಂದ್ರಶೇಖರ, ಕೆ. ಬಾಲಚಂದರ್, ಮಣಿರತ್ನಂ ಮುಂತಾದ ಗಣ್ಯ ನಿರ್ದೇಶಕರ ಚಿತ್ರಗಳಲ್ಲಿ ಅಭಿನಯಿಸಿದ ಕೀರ್ತಿ ಇವರದು.
‘ಕಾನೂರು ಹೆಗ್ಗಡಿತಿ’, ಚಿತ್ರದಲ್ಲಿನ ಇವರ ಅಭಿನಯಕ್ಕೆ ಅತ್ಯುತ್ತಮ ಅಭಿನೇತ್ರಿ ಪ್ರಶಸ್ತಿ ದೊರೆತಿದೆ. ಈ ಚಿತ್ರ ರಾಷ್ಟ್ರೀಯ ಅಂತರರಾಷ್ಟ್ರೀಯ, ಮಟ್ಟದಲ್ಲಿ ಪ್ರದರ್ಶನಗೊಂಡಿದೆ. ‘ಕ್ರಮ’ ಚಿತ್ರಕ್ಕೆ ಉತ್ತಮ ನಟಿ ಪ್ರಶಸ್ತಿ ‘ಮತದಾನ’ ಚಿತ್ರಕ್ಕೆ ಫಿಲಂಫೇರ್ ಪ್ರಶಸ್ತಿ, ‘ಮುನ್ನುಡಿ’ ಚಿತ್ರಕ್ಕೆ ಉತ್ತಮ ನಟಿ ಪ್ರಶಸ್ತಿ ‘ಮಾ ಇಂಟಿಕತಾ’ ಚಿತ್ರಕ್ಕೆ ಆಂಧ್ರ ಪ್ರದೇಶದ ನಂದಿ ಪ್ರಶಸ್ತಿ ಲಭಿಸಿದೆ. ‘ಕಾನೂರು ಹೆಗ್ಗಡತಿ’, ‘ಮತದಾನ’ ಹಾಗೂ ‘ಮುನ್ನುಡಿ’ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿಗಳು ಸಂದಿವೆ. ಕನ್ನಡದ ಮಣ್ಣಲ್ಲಿ ಅರಳಿ, ದಕ್ಷಿಣ ಭಾರತದಲ್ಲೆಡೆ ಜನಪ್ರಿಯರಾಗಿ ಸ್ವಯಂ ಪ್ರತಿಭೆಯಿಂದ ಕಲಾಕ್ಷಿತಿಜದಲ್ಲಿ ಮಿನುಗುತ್ತಿರುವ ಮಿಂಚು ಕಂಗಳ ಅತ್ಯುತ್ತಮ ಅಭಿನೇತ್ರಿ ಕುಮಾರಿ ತಾರಾ ಅವರು.