Categories
ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಕುಮಾರಿ ವಿಜಯಲಕ್ಷ್ಮಿ ಬಿದರಿ

ಭಾರತೀಯ ಆಡಳಿತ ಸೇವಾ ಪರೀಕ್ಷೆಯಲ್ಲಿ ಇಡೀ ಭಾರತ ದೇಶಕ್ಕೆ ಪ್ರಥಮ ಬ್ಯಾಂಕ್ ಪಡೆದು ಅಪ್ರತಿಮ ಸಾಧನೆ ಮಾಡಿರುವ ಕರ್ನಾಟಕದ ಹೆಮ್ಮೆಯ ಪುತ್ರಿ ಕುಮಾರಿ ವಿಜಯಲಕ್ಷ್ಮಿ ಬಿದರಿ ಅವರು.

ವಿಜಯಲಕ್ಷ್ಮಿ ಬಿದರಿ ಅವರು ಗುಲ್ಬರ್ಗಾದಲ್ಲಿ ೧೯೭೭ರಲ್ಲಿ ಜನಿಸಿದ್ದಾರೆ. ಮಂಡ್ಯ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಬಳ್ಳಾರಿ, ಧಾರವಾಡ ಹಾಗೂ ಬೆಂಗಳೂರಿನ ವಿವಿಧ ವಿದ್ಯಾಸಂಸ್ಥೆಗಳಲ್ಲಿ ಶಿಕ್ಷಣವನ್ನು ಪಡೆದಿರುವ ವಿಜಯಲಕ್ಷ್ಮಿ ಅವರು ಪ್ರಾಥಮಿಕ ಹಂತದಿಂದಲೂ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿನಿ. ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿ.ಇ. ಪದವೀಧರೆಯಾಗಿರುವ ಕುಮಾರಿ ಬಿದರಿಯವರು ೧೯೯೯ರ ನಾಗರೀಕ ಸೇವಾ ಪರೀಕ್ಷೆಯಲ್ಲಿ ೧೦೭ನೆಯ ಸ್ಥಾನ ಪಡೆದು ಭಾರತೀಯ ಉತ್ಪಾದನಾ ಶುಲ್ಕ ಮತ್ತು ಸೀಮಾ ಶುಲ್ಕ ಸೇವೆಗೆ ಆಯ್ಕೆಯಾದರು. ಫರೀದಾಬಾದ್‌ ನಲ್ಲಿ ವಿಶೇಷ ತರಬೇತಿ ಪಡೆದರು.

ಕನ್ನಡ ಸಾಹಿತ್ಯ, ಅಂತರಾಷ್ಟ್ರೀಯ ಸಂಬಂಧಗಳು ಮತ್ತು ರಾಜಕೀಯ ಶಾಸ್ತ್ರಗಳನ್ನು ಐಚ್ಛಿಕ ವಿಷಯಗಳನ್ನಾಗಿ ತೆಗೆದುಕೊಂಡು ೨೦೦೦ನೇ ಇಸವಿಯ ನಾಗರಿಕ ಸೇವಾ ಪರೀಕ್ಷೆಯಲ್ಲಿ ಇಡೀ ಹಿಂದೂಸ್ಥಾನಕ್ಕೆ ಪ್ರಪ್ರಥಮ ಸ್ಥಾನ ಪಡೆದು ಕನ್ನಡಿಗರೆಲ್ಲರಿಗೂ ರೋಮಾಂಚನ ಉಂಟು ಮಾಡಿದರು. ಕಳೆದ ೫ ವರ್ಷಗಳಲ್ಲಿ ಕರ್ನಾಟಕಕ್ಕೆ ಈ ಕೀರ್ತಿಯನ್ನು ಗಳಿಸಿ ಕೊಟ್ಟಿರುವ ಮೊಟ್ಟ ಮೊದಲ ಕನ್ನಡ ಕುವರಿ ಕುಮಾರಿ ವಿಜಯಲಕ್ಷ್ಮಿ ಬಿದರಿ.

ವೀಣಾವಾದನ, ಈಜು, ಸಾಹಿತ್ಯವಾಚನ ವಿಜಯಲಕ್ಷ್ಮಿಯವರ ಹವ್ಯಾಸಗಳು.