ಧಾರವಾಡದ ಉಜ್ವಲ ನೃತ್ಯಾಲಯದ ನಿರ್ದೇಶಕಿ ಶ್ರೀಮತಿ ಕುಮುದಿನಿ ರಾವ್ ಪಂದನಲ್ಲೂರು ಭರತನಾಟ್ಯ ಶೈಲಿಯಲ್ಲಿ ಶಿಕ್ಷಣ ಪಡೆದದ್ದು ಬೆಂಗಳೂರಿನ ಪ್ರೊ. ಯು. ಎಸ್. ಕೃಷ್ಣರಾವ್ ಅವರಲ್ಲಿ. ನಂತರ ಧಾರವಾಡದ ಶ್ರೀ ಉಮೇಶ್ ಪೆರಂಜಾಲ ಅವರಿಂದಲೂ ಮಾರ್ಗದರ್ಶನ ಪಡೆದ ಕುಮುದಿನಿಯವರು ಕಥಕ್ ಪದ್ಧತಿಯನ್ನು ಗುರು ಕೃಷ್ಣಕುಮಾರ್ ಅವರಲ್ಲಿ ಅಭ್ಯಾಸ ಮಾಡಿದರು. ಕುಮುದಿನಿಯವರ ತವರುಮನೆ ಮತ್ತು ಗಂಡನ ಮನೆ ಎರಡೂ ಕಲಾವಿದರಿಂದಲೇ ತುಂಬಿ ತುಳುಕುವ ಕುಟುಂಬಗಳು.

ಅಖಿಲ ಭಾರತ ಗಂಧರ್ವ ಮಹಾ ವಿದ್ಯಾಲಯದಿಂದ ನೃತ್ಯ ಅಲಂಕಾರ ಪದವಿ ಪಡೆದಿರುವ ಕುಮುದಿನಿಯವರು ಮೈಸೂರು ದಸರಾ ಕಾರ್ಯಕ್ರಮವೂ ಸೇರಿದಂತೆ ಹಲವು ಪ್ರತಿಷ್ಠಿತ ವೇದಿಕೆಗಳಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. ೧೯೬೫-೧೯೭೪ರವರಗೆ ದಾಂಡೇಲಿ ಎಜುಕೇಶನ್ ಸೊಸೈಟಿಯಲ್ಲಿ ನೃತ್ಯ ಶಿಕ್ಷಕಿಯಾಗಿ ಕೆಲಸ ಮಾಡಿರುವ ಕುಮುದಿನಿಯವರು ಕಿತ್ತೂರು ರಾಣಿ ಚೆನ್ನಮ್ಮ ಸ್ಕೂಲಿನಲ್ಲೂ ಭರತನಾಟ್ಯ ಮತ್ತು ಕಥಕ್ ಶೈಲಿಗಳಲ್ಲಿ ಆಸಕ್ತರಿಗೆ ತರಬೇತಿ ನೀಡಿದ್ದಾರೆ. ದೇಶದ ಹಲವು ಭಾಗಗಳಲ್ಲಿ ಕುಮುದಿನಿಯವರ ಶಿಷ್ಯರು ಕಲಾವಿದರಾಗಿ ಮತ್ತು ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ.

ಏಳು ಶಾಸ್ತ್ರೀಯ ನೃತ್ಯ ಪದ್ಧತಿಗಳನ್ನು ಅಳವಡಿಸಿ ಸಂಯೋಜಿಸಿದ್ದ ನಾಟ್ಯ ಶಾಸ್ತ್ರದ ಉಗಮ ಕುರಿತಾದ ರೂಪಕವೂ ಸೇರಿದಂತೆ ಕುಮುದಿನಿಯವರು ಗೀತ ರಾಮಾಯಣ, ಡಿವಿಜಿಯವರ ಅಂತಃಪುರ ಗೀತೆಗಳು, ಅಷ್ಟಲಕ್ಷ್ಮಿ, ಋತುಚಕ್ರ, ಅಷ್ಟನಾಯಿಕಾ ಮುಂತಾದ ವಿಭಿನ್ನ ನೃತ್ಯ ರೂಪಕಗಳನ್ನು ಸಂಯೋಜಿಸಿದ್ದಾರೆ.

ಮೈಸೂರಿನ ಭಾರತೀಯ ನೃತ್ಯಕಲಾ ಪರಿಷತ್, ಹುಬ್ಬಳ್ಳಿಯ ಹಾನಗಲ್ ಮ್ಯೂಸಿಕ್ ಫೌಂಡೇಷನ್ ಮುಂತಾದ ಸಂಸ್ಥೆಗಳು ಕುಮುದಿನಿಯವರಿಗೆ ’ನೃತ್ಯಕಲಾಸಿಂಧು’ ಬಿರುದು ನೀಡಿ ಗೌರವಿಸಿದೆ. ಅಭಿಜಾತ ಕಲಾವಿದೆ ಶ್ರೀಮತಿ ಕುಮುದಿನಿ ರಾವ್ ಅವರನ್ನು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ತನ್ನ ೨೦೦೭-೦೮ರ ಸಾಲಿನ ವಾರ್ಷಿಕ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.