ಕನ್ನಡ ವಿಶ್ವವಿದ್ಯಾಲಯವು ನಾಡು-ನುಡಿಗೆ ಸಂಬಂಧಿಸಿದ ಸಂಶೋಧನೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಅಜ್ಞಾತ ಮತ್ತು ನಿರ್ಲಕ್ಷ್ಯಕ್ಕೊಳಗಾದ ಹತ್ತು ಹಲವು ಸಂಗತಿಗಳನ್ನು ಸಂಶೋಧಿಸಿ ಬೆಳಕಿಗೆ ತರುತ್ತಿರುವುದು ಹೆಮ್ಮೆಯ ಸಂಗತಿ. ಈ ನಿಟ್ಟಿನಲ್ಲಿ ಕನ್ನಡ ವಿಶ್ವವಿದ್ಯಾಲಯವು ‘ಕರ್ನಾಟಕದಲ್ಲಿ ಕುಮಾರರಾಮನ ಪಂಥ’ ಎಂಬ ಯೋಜನೆಯನ್ನು ಬಹುಶಿಸ್ತೀಯ ನೆಲೆಯಲ್ಲಿ ಕೈಗೊಳ್ಳಲು ಅವಕಾಶ ಮಾಡಿಕೊಟ್ಟಿತು. ಕಾರಣಾಂತರದಿಂದ ಈ ಯೋಜನೆಯು ಪ್ರಕಟವಾಗಲಿಲ್ಲ. ಇದರ ಅಂಗವಾಗಿ ರಚಿಸಿದ ಚರಿತ್ರೆ ಭಾಗವೆ ಪ್ರಸ್ತುತ ‘ಕುಮ್ಮಟದುರ್ಗದ ಅರಸರು’. ಇದನ್ನು ವಿಶ್ವವಿದ್ಯಾಲಯವು ಈಗ ಪ್ರಕಟಿಸುತ್ತಿರುವುದು ಸಂತಸದ ಸಂಗತಿ.

ಕರ್ನಾಟಕದ ಚರಿತ್ರೆಯನ್ನು ಕುರಿತ ಗ್ರಂಥಗಳಲ್ಲಿ ಕುಮ್ಮಟದುರ್ಗವನ್ನಾಳಿದ ಅರಸರನ್ನು ಕುರಿತು ಒಂದೆರಡು ವಾಕ್ಯಗಳಲ್ಲಿ ಮಾತ್ರ ಪ್ರಸ್ತಾಪಿಸಿರುವುದನ್ನು ಕಾಣುತ್ತೇವೆ. ಕುಮ್ಮಟದುರ್ಗದ ಮೇಲಿನ ದೆಹಲಿ ಸುಲ್ತಾನರ ನಾಲ್ಕು ದಾಳಿಗಳನ್ನು ದಿಟ್ಟತನದಿಂದ ಎದುರಿಸಿದ ಕೀರ್ತಿ ಈ ಪುಟ್ಟ ರಾಜ್ಯಕ್ಕೆ ಸಲ್ಲುತ್ತದೆ. ಸೇವುಣ ಮತ್ತು ಹೊಯ್ಸಳ ರಾಜ್ಯಗಳ ನಡುವೆ ಇದ್ದ ಕುಮ್ಮಟದುರ್ಗ ತಡೆ ರಾಜ್ಯವಾಗಿತ್ತು. ಕರ್ನಾಟಕದಲ್ಲಿ ಗೆರಿಲ್ಲಾ ಮಾದರಿಯ ಯುದ್ಥತಂತ್ರವನ್ನು ಅಳವಡಿಸಿಕೊಂಡ ಮೊದಲ ರಾಜ್ಯ ಎನ್ನಬಹುದು. ಈ ಮನೆತನದ ಕುಮಾರರಾಮ ಇಂದಿಗೂ ಜನಸಾಮಾನ್ಯರಿಂದ ಪೂಜಿತಗೊಳ್ಳುತ್ತಿದ್ದಾನೆ. ಅದರಲ್ಲೂ ಕೆಳವರ್ಗದ ಜನರ ಆರಾಧ್ಯ ದೈವವಾಗಿದ್ದಾನೆ. ಶೌರ್ಯ ಮತ್ತು ಆದರ್ಶಗಳ ಗಣಿಯಾಗಿರುವ ಕುಮಾರರಾಮ ಕರ್ನಾಟಕದ ಚರಿತ್ರೆ ಕಂಡ ಅಪರೂಪದ ವ್ಯಕ್ತಿತ್ವ. ಕುಮ್ಮಟ ರಾಜ್ಯದ ಪಥನಾನಂತರ ಅಂದರೆ ವಿಜಯನಗರ ಕಾಲದಲ್ಲಿ ಅಧಿಕಾರಿಗಳು ಮತ್ತು ಜನಸಾಮಾನ್ಯರು ಈತನ ಹೆಸರಿನಲ್ಲಿ ದೇವಾಲಯಗಳನ್ನು ನಿರ್ಮಿಸಿ ಆರಾಧಿಸಿದರು. ಇದರ ಪರಿಣಾಮವಾಗಿ ಆತನ ಹೆಸರಿನಲ್ಲಿ ಸಾಹಿತ್ಯ ಕೃತಿಗಳು ರಚನೆಗೊಂಡವು. ಅವು ಕುಮಾರರಾಮನ ಸಾಂಗತ್ಯಗಳೆಂದು ಸಾಹಿತ್ಯಲೋಕದಲ್ಲಿ ವಿಜೃಂಭಿಸಿವೆ. ಕರ್ನಾಟಕದ ಬೇರೆ ಯಾವುದೇ ಪ್ರಸಿದ್ಧ ರಾಜಮನೆತನದ ವ್ಯಕ್ತಿಗೆ ಈ ಬಗೆಯ ಗೌರವ ದೊರೆತಿಲ್ಲ. ಇದು ಗಮನಾರ್ಹ ಸಂಗತಿ. ಹೀಗಾಗಿ ಕುಮ್ಮಟದುರ್ಗದ ಅರಸರು ಕರ್ನಾಟಕದ ಇತಿಹಾಸದಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದಾರೆ. ಇತ್ತೀಚೆಗೆ ಡಾ. ಎಂ.ಎಂ. ಕಲಬುರ್ಗಿ ಅವರು ಕುಮಾರರಾಮನ ನಾಲ್ಕು ಅಪ್ರಕಟಿತ ಸಾಂಗತ್ಯ ಕಾವ್ಯಗಳನ್ನು ಪ್ರಕಟಿಸುವ ಮೂಲಕ ಕನ್ನಡದ ಸಾರಸ್ವತ ಲೋಕವನ್ನು ವಿಸ್ತರಿಸಿದ್ದಾರೆ. ಕುಮ್ಮಟದುರ್ಗ ಮತ್ತು ಅಲ್ಲಿನ ಅರಸರನ್ನು ಕುರಿತು ಎಂ.ಎಚ್. ರಾಮಶರ್ಮ, ಜಿ. ವರದರಾಜರಾವ್, ಹುಲ್ಲೂರು ಶ್ರೀನಿವಾಸ ಜೋಯಿಸರು, ಚೆನ್ನಬಸಪ್ಪ ಎಸ್ ಪಾಟೀಲ್ ಮೊದಲಾದ ಮಹನೀಯರು ಬಿಡಿ ಲೇಖನ ಮತ್ತು ಕೃತಿಗಳನ್ನು ರಚಿಸಿದ್ದಾರೆ. ಇತ್ತೀಚೆಗೆ ವಿಶ್ವವಿದ್ಯಾಲಯಗಳಲ್ಲಿ ಕುಮ್ಮಟದುರ್ಗದ ಅರಸರನ್ನು ಕುರಿತಂತೆ ಸಂಶೋಧನ ಅಧ್ಯಯನಗಳು ನಡೆಯುತ್ತಿವೆ. ಇವೆಲ್ಲವು ಮುಂದಿನ ಅಧ್ಯಯನ ಮತ್ತು ಸಂಶೋಧನೆಗಳಿಗೆ ಪ್ರಮುಖ ಆಕರಗಳಾಗಿವೆ. ಹಾಗಾಗಿ ಈ ಕುರಿತ ಎಲ್ಲ ಲೇಖಕ ಮಹಾಶಯರನ್ನು ಗೌರವದಿಂದ ನೆನೆಯುವುದು ಆದ್ಯ ಕರ್ತವ್ಯವೆಂದು ತಿಳಿಯುತ್ತೇನೆ.

ಪ್ರಸ್ತುತ ಕೃತಿ ರಚನೆಯಲ್ಲಿ ವಿದೇಶಿಯರ ಬರಹಗಳು, ದೇಸಿ ಸಾಹಿತ್ಯ ಕೃತಿಗಳು, ಕೈಫಿಯತ್ತುಗಳು, ಪುರಾತತ್ವ ಆಕರಗಳು ಮತ್ತು ಮೌಖಿಕ ಆಕರಗಳನ್ನು ಬಳಸಿಕೊಳ್ಳಲಾಗಿದೆ. ಈ ಮೂಲಕ ಕರ್ನಾಟಕದ ಚರಿತ್ರೆ ಅಧ್ಯಯನದ ಪಠ್ಯಗಳಲ್ಲಿ ಕುಮ್ಮಟದ ಅರಸರನ್ನು ಕುರಿತು ಸ್ವತಂತ್ರವಾದ ಅಧ್ಯಾಯವೊಂದು ಆರಂಭವಾಗಬೇಕೆನ್ನುವುದು ಪ್ರಸ್ತುತ ಕೃತಿ ರಚನೆಯ ಪ್ರಮುಖ ಆಶಯವಾಗಿದೆ.

ಈ ಯೋಜನೆಯಲ್ಲಿ ತೊಡಗಲು ಅವಕಾಶ ಮಾಡಿಕೊಟ್ಟವರು ಡಾ. ಪುರುಷೋತ್ತಮ ಬಿಳಿಮಲೆ. ಅವರು ನೀಡಿದ ಲಕಿಜಿತ್ಸಾಹ ಮತ್ತು ಸಹಕಾರವನ್ನು ತುಂಬು ಗೌರವದಿಂದ ನೆನೆಯುತ್ತೇನೆ. ಅದೇ ರೀತಿ ಡಾ. ಮಂಜುನಾಥ ಬೇವಿನಕಟ್ಟಿ ಮತ್ತು ಡಾ. ಶರಣ ಬಸಪ್ಪ ಕೋಲ್ಕಾರ ಅವರುಗಳು ಈ ಪ್ರಯತ್ನದಲ್ಲಿ ನೆರವಾಗಿದ್ದಾರೆ. ಅವರಿಗೆ ನನ್ನ ವಂದನೆಗಳು. ಇನ್ನು ವಿಭಾಗದ ಮುಖ್ಯಸ್ಥರಾದ ಡಾ. ವಾಸುದೇವ ಬಡಿಗೇರ ಹಾಗು ಸಹೋದ್ಯೋಗಿ ಮಿತ್ರರು ನೀಡಿದ ಸಹಕಾರವನ್ನು ಇಲ್ಲಿ ಸ್ಮರಿಸುತ್ತೇನೆ.

ಮುಖ್ಯವಾಗಿ ಪ್ರಸ್ತುತ ಕೃತಿ ಪ್ರಕಟಗೊಳ್ಳಲು ನಮ್ಮ ನೆಚ್ಚಿನ ಮಾನ್ಯ ಕುಲಪತಿಗಳಾದ ಡಾ.ಎ.ಮುರಿಗೆಪ್ಪ ಅವರು ಕಾರಣರಾಗಿದ್ದಾರೆ. ಅವರಿಗೆ ಗೌರವಪೂರ್ವಕವಾದ ವಂದನೆಗಳು. ಅದೇ ರೀತಿ ಕುಲಸಚಿವರಾದ ಡಾ. ಮಂಜುನಾಥ ಬೇವಿನಕಟ್ಟಿ ಅವರು ಸಹ ಆಸ್ಥೆಯಿಂದ ಸಹಕರಿಸಿದ್ದಾರೆ. ಅವರಿಗೂ ಪ್ರೀತಿಯ ವಂದನೆಗಳು. ಮಾನ್ಯ ವಿಶ್ರಾಂತ ಕುಲಪತಿಗಳಾದ ಡಾ. ಎಂ.ಎಂ. ಕಲಬುರ್ಗಿ ಅವರು ಹಸ್ತಪ್ರತಿಯನ್ನು ಪರಿಶೀಲಿಸಿ ಸೂಕ್ತ ಸಲಹೆ, ಸೂಚನೆಗಳನ್ನು ನೀಡಿದ್ದಾರೆ. ಅವರಿಗೆ ತುಂಬು ಹೃದಯದ ವಂದನೆಗಳು.

ಪ್ರಸ್ತುತ ಕೃತಿಯನ್ನು ಅಚ್ಚುಕಟ್ಟಾಗಿ ಪ್ರಕಟಿಸಿದ ಪ್ರಸಾರಾಂಗದ ನಿರ್ದೇಶಕರಾದ ಡಾ. ಎ. ಮೋಹನ ಕುಂಟಾರ್ ಅವರಿಗೆ ನನ್ನ ವಂದನೆಗಳು. ಕೃತಿ ವಿನ್ಯಾಸ ಮಾಡಿದ ಸಹಾಯಕ ನಿರ್ದೇಶಕರಾದ ಶ್ರೀ ಸುಜ್ಞಾನಮೂರ್ತಿ ಅವರ ಶ್ರಮವನ್ನು ನೆನೆಯುತ್ತೇನೆ. ಡಿ.ಟಿ.ಪಿ. ಕೆಲಸ ನಿರ್ವಹಿಸಿದ ಯಾಜಿ ಗ್ರಾಫಿಕ್ಸ್‌ನ ಶ್ರೀಮತಿ ಸವಿತಾ ಯಾಜಿ ಅವರಿಗೆ ತುಂಬು ವಂದನೆಗಳು.

ಸಿ. ಮಹದೇವ