ಕಲ್ಯಾಣದ ಚಾಲುಕ್ಯರ ಅವನತಿಯ ನಂತರ ಅವರ ಸಾಮ್ರಾಜ್ಯ ದ್ವಾರಸಮುದ್ರದ ಹೊಯ್ಸಳರು, ದೇವಗಿರಿಯ ಸೇವುಣರು ಮತ್ತು ವಾರಂಗಲ್ಲಿನ ಕಾಕತೀಯರ ನಡುವೆ ಹಂಚಿಹೋಯಿತು. ಹೊಯ್ಸಳರು ಉತ್ತರದ ಕಡೆಯಿಂದ ದೇವಗಿರಿ ಸೇವುಣರ ದಾಳಿಯನ್ನು ಎದುರಿಸಬೇಕಾಗಿತ್ತು. ಹೊಯ್ಸಳರ ಮೂರನೆಯ ನರಸಿಂಹನಿಗೂ ಮತ್ತು ರಾಮನಾಥನಿಗೂ ರಾಜ್ಯಹಂಚಿಕೆ ಸಂಬಂಧವಾಗಿ ಮೊದಲಿನಿಂದಲೂ ಅಂತಃಕಲಹ ನಡೆಯುತ್ತಿತ್ತು. ಹೀಗಾಗಿ ಹೊಯ್ಸಳರು ತಮ್ಮ ರಾಜ್ಯದ ಉತ್ತರ ಭಾಗದ ಗಡಿಗಳನ್ನು ಸಂರಕ್ಷಿಸುವಲ್ಲಿ ಅಸಮರ್ಥರಾದರು. ಇದು, ಸೇವುಣರು ಹೊಯ್ಸಳರ ರಾಜ್ಯದೊಳಗೆ ನುಗ್ಗಲು ಅವಕಾಶ ಕಲ್ಪಿಸಿತು (Desai 1981: 281). ಇಂತಹ ಸಮಯಾವಕಾಶವನ್ನು ಬಳಸಿಕೊಂಡು ಮುಮ್ಮಡಿ ಸಿಂಗೆಯನಾಯಕ ಎಂಬುವನು ಹಂಪೆಯ ಪರಿಸರದಲ್ಲಿದ್ದ ಕುಮ್ಮಟದುರ್ಗವನ್ನು ಹಿಡಿದು, ಸ್ವತಂತ್ರವಾಗಿ ಆಳಲು ಪ್ರಾರಂಭಿಸಿದನು. ಚರಿತ್ರೆಕಾರರು ಈ ಕುಮ್ಮಟರಾಜ್ಯವನ್ನು ತಡೆರಾಜ್ಯವೆಂದು ಕರೆದಿದ್ದಾರೆ. ಏಕೆಂದರೆ ಇದು ಹೊಯ್ಸಳ, ಸೇವುಣ ಮತ್ತು ಕಾಕತೀಯರ ರಾಜ್ಯಗಳ ನಡುವೆ ಇತ್ತು. ಪ್ರಸ್ತುತ ಅಧ್ಯಯನದಲ್ಲಿ ಕುಮ್ಮಟದುರ್ಗದಿಂದ ಆಳ್ವಿಕೆ ನಡೆಸಿದ ಮುಮ್ಮಡಿ ಸಿಂಗೆಯನಾಯಕ ಮತ್ತು ಇವನ ಉತ್ತರಾಧಿಕಾರಿಗಳನ್ನು ಕುಮ್ಮಟದ ಅರಸರೆಂದು ಕರೆಯುವ ಪ್ರಯತ್ನ ಮಾಡಲಾಗಿದೆ.

ಕುಮ್ಮಟದ ಅರಸರ ಮೂಲವನ್ನು ಕುರಿತಂತೆ ವಿದ್ವಾಂಸರಲ್ಲಿ ಬಹಳಷ್ಟು ಚರ್ಚೆ ನಡೆದಿದೆ. ಮೊದಲನೆಯದಾಗಿ, ಈ ವಂಶದ ಕುಮಾರರಾಮನನ್ನು ಕುರಿತು ರಚಿತಗೊಂಡ ಸಾಂಗತ್ಯಗಳು ಇವರು ಬೇಡರೆಂದು ತಿಳಿಸುತ್ತವೆ. ಕೈಫಿಯತ್ತುಗಳು ಬೇಡರಾಗಿರುವ ಇವರ ಅಡ್ಡಹೆಸರು ಮರುಳೆನವರು ಹಾಗೂ ಮುಮ್ಮಡಿ ಮನೆಯವರು ಎಂದು ತಿಳಿಸುತ್ತವೆ (ಕಲಬುರ್ಗಿ ೧೯೯೪: ೫೧೦, ೪೬೬). ಹುಲ್ಲೂರು ಶ್ರೀನಿವಾಸ ಜೋಯಿಸರು ಕುಮ್ಮಟದ ಅರಸರನ್ನು ಬೇಡರಲ್ಲಿ ಒಂದು ಬೆಡಗಾದ ‘ಪುವ್ವಲ’ ಕುಲಕ್ಕೆ ನಿರ್ದೇಶಿಸಿ, ಅವರನ್ನು ಪುವ್ವಲ ಅರಸರೆಂದು ಕರೆದಿದ್ದಾರೆ (ಲಕ್ಷ್ಮಣ್ ಮತ್ತು ಶ್ರೀನಿವಾಸ ೧೯೯೫: ೪೫೬). ಇನ್ನು ಸಮಕಾಲೀನ ದಾಖಲೆಗಳಾದ ಶಾಸನಗಳನ್ನು ಆಧಾರವಾಗಿಟ್ಟುಕೊಂಡು ಸೀತಾರಾಮ್ ಜಾಗೀರ್‌ದಾರರು ಮತ್ತು ಇತರರು ಇವರನ್ನು ಹೊಯ್ಸಳ ವಂಶದ ಒಂದು ಶಾಖೆಗೆ ಸೇರಿದವರೆಂದು ತಿಳಿಸುತ್ತಾರೆ (ವರದರಾಜರಾವ್ ೧೯೮೬: ಸಂ: ೧೬, ಸಂಚಿಕೆ: ೨-೩-೪). ಹೀಗೆ ಕುಮ್ಮಟದ ಅರಸರ ಮೂಲವನ್ನು ಕುರಿತಂತೆ ಬೇರೆ ಬೇರೆ ಹೇಳಿಕೆಗಳಿವೆ. ಈ ಮುಂದೆ ಇವುಗಳನ್ನು ಪರಿಶೀಲಿಸುವ ಪ್ರಯತ್ನ ಮಾಡಲಾಗಿದೆ.

ನಂಜುಂಡ ಕವಿಯ ‘ರಾಮನಾಥ ಚರಿತೆ’ ಎಂಬ ಸಾಂಗತ್ಯದಲ್ಲಿ ಮುಮ್ಮಡಿ ಸಿಂಗೆಯ ನಾಯಕನ ಮೂಲ ಕುರಿತಂತೆ ಒಂದು ಐತಿಹ್ಯವಿದೆ. ಇದರ ಪ್ರಕಾರ, ಸೇವುಣ ರಾಜಕುಮಾರ ನೊಬ್ಬ ಪುಳಿಂದ (ಬೇಡ) ಯುವತಿಯನ್ನು ಮದುವೆಯಾಗಿದ್ದರಿಂದ ಬಹಿಷ್ಕರಿಸಲ್ಪಟ್ಟು ಚಿತ್ರಕೂಟದುರ್ಗದ ದೊರೆಯನ್ನು ಆಶ್ರಯಿಸಿದನೆಂದು, ಈ (ಅರೆಸೇವುಣರ) ವಂಶದಲ್ಲಿ ಮುಮ್ಮಡಿ ಸಿಂಗೆಯನಾಯಕನ ಜನನವಾಯಿತೆಂದು ತಿಳಿದುಬರುತ್ತದೆ. ಇದಕ್ಕೆ ಯಾವುದೇ ಐತಿಹಾಸಿಕ ಆಧಾರವಿಲ್ಲವೆಂದು ಚರಿತ್ರೆಕಾರರು ತಿಳಿಸುತ್ತಾರೆ (ಅಭಿಶಂಕರ್ ೧೯೯೦: ೧೩೮). ಈ ಬಗೆಯ ಸಂಬಂಧದ ಕತೆಗಳು ಮಧ್ಯಕಾಲದ ಕರ್ನಾಟಕದಲ್ಲಿ ಕಂಡುಬರುತ್ತವೆ. ಈ ಸಂಬಂಧಗಳಲ್ಲಿ ಸಾಮಾನ್ಯವಾಗಿ ತಂದೆ ಮೇಲ್ವರ್ಗದವನಿದ್ದು, ತಾಯಿ ಕೆಳವರ್ಗದವಳಾಗಿರು ತ್ತಾಳೆ. ಇದೇ ರೀತಿಯ ಕತೆಯೊಂದು ವೀರಶೈವ ಪಂಥದ ಪಂಚಗಣಾಧೀಶ್ವರರಲ್ಲಿ ಒಬ್ಬರಾದ ಗೋಣಿಬಸವೇಶ್ವರರ ಹುಟ್ಟಿಗೆ ಸಂಬಂಧಿಸಿದೆ. ಕೊಟ್ಟೂರು ಬಸವೇಶ್ವರರ ಮತ್ತು ಬೇಡ ಸ್ತ್ರೀಯ ಸಂಪರ್ಕದಿಂದ ಗೋಣಿಬಸವೇಶ್ವರರು ಹುಟ್ಟಿದರೆಂದು ಹೇಳಲಾಗುತ್ತದೆ. ಹೀಗಾಗಿ ಈ ಕತೆಗಳು ಎಷ್ಟರಮಟ್ಟಿಗೆ ನಿಜ ಎಂದು ನಮ್ಮ ಮುಂದೆ ಪ್ರಶ್ನೆಯಾಗಿ ನಿಲ್ಲುತ್ತದೆ. ಇಲ್ಲಿ ಕುಮಾರರಾಮನನ್ನು ಕುರಿತು ರಚನೆಯಾದ ಕೆಲವು ಸಾಂಗತ್ಯಗಳ ಕಾಲವನ್ನು ಗಮನಿಸುವುದು ಬಹುಮುಖ್ಯ. ಈ ಆಧಾರಗಳನ್ನು ಮುಂದಿಟ್ಟುಕೊಂಡು ಹುಲ್ಲೂರು ಶ್ರೀನಿವಾಸ ಜೋಯಿಸರು ಕುಮ್ಮಟದ ಅರಸರನ್ನು ಪುವ್ವಲ ಅರಸರೆಂದು ಕರೆಯುವುದರ ಮೂಲಕ ಬೇಡರೆಂದು ಗುರುತಿಸುತ್ತಾರೆ (ಲಕ್ಷ್ಮಣ್ ತೆಲಗಾವಿ ಮತ್ತು ಶ್ರೀನಿವಾಸ ೧೯೯೫: ೪೫೬). ಅಲ್ಲದೆ ಚಿತ್ರದುರ್ಗದ ಪಾಳೆಯಗಾರರು ಕುಮಾರರಾಮನ ಕುಲಸ್ಥರೆಂದು, ಗುಡಿಕೋಟೆ, ಹರಪನಹಳ್ಳಿ ಮತ್ತು ತರೀಕೆರೆ ಪಾಳೆಯಗಾರರು ಕುಮಾರರಾಮನ ವಂಶೀಯರೆಂದು ಬರೆಯುತ್ತಾರೆ (ಅದೇ: ೧೦೩). ಕುಮ್ಮಟದ ಅರಸರು ಬೇಡರೆಂದು ಹೇಳುವುದು ಸಾಂಗತ್ಯಗಳ ರಚನೆ ಕಾಲದಿಂದ ಇಂದಿನವರೆಗೂ ನಡೆದುಬಂದಿವೆ. ಇನ್ನು ಕೈಫಿಯತ್ತುಗಳ ಹೇಳಿಕೆಯನ್ನು ಗಮನಿಸಿದರೆ, ಅಡ್ಡಹೆಸರು ಮರುಳೆನವರೆಂದು ತಿಳಿಸುತ್ತವೆ.

ಈಗ ಸಮಕಾಲೀನ ದಾಖಲೆಗಳಾದ ಶಾಸನಗಳನ್ನು ಪರಿಶೀಲಿಸುವುದಾದರೆ ಕುಮ್ಮಟ ದುರ್ಗದ ಕ್ರಿ.ಶ. ೧೩೧೫ರ ವೀರಗಲ್ಲು ಶಾಸನವೊಂದನ್ನು ಆಧರಿಸಿ ಜಿ. ವರದರಾಜರಾವ್, ಬಿ.ಆರ್.ತುಬಾಕಿ ಮತ್ತು ಸೀತಾರಾಮ ಜಾಗೀರ್‌ದಾರರು ಕುಮ್ಮಟದ ಅರಸರು ಹೊಯ್ಸಳ ವಂಶದ ಒಂದು ಶಾಖೆಗೆ ಸಂಬಂಧಪಟ್ಟವರೆಂದು ತಿಳಿಸುತ್ತಾರೆ (ವರದರಾಜರಾವ್ ೧೯೮೬: ಸಂಪುಟ ೧೬, ಸಂಚಿಕೆ ೨-೩-೪). ಸೀತಾರಾಮ ಜಾಗೀರ್‌ದಾರರು ಈ ಶಾಸನದ ಪಾಠವನ್ನು

‘‘ಸ್ವಸ್ತಿ ಶ್ರಿಮತು ಯಾದವ ನಾರಾಯಣಭುಜಭಳ ಪ (ರಾ)
ಕ್ರಮ ಪ್ರತಾಪ ಚಕ್ರವರ್ತಿ ಶ್ರೀಮನು ಮಹಾಮಂಡಲಿಕ ಹೊ
ಯ್ಯಸ (ಣ) ವೀರಕಂಪಿಲದೇವನು ಕುಮ್ಮಟದಲಿ…..’’

ಎಂದು ಓದಿದ್ದಾರೆ (ತುಬಾಕಿ ನಿಲೋಗಲ್ ೧೯೯೩ : ೧೨-೧೪). ಇದೇ ಶಾಸನವನ್ನು ಸಿ.ಎಸ್. ಪಾಟೀಲರು ತಮ್ಮ ‘‘ಕುಮ್ಮಟ’’ ಎಂಬ ಲೇಖನದಲ್ಲಿ

‘‘ಸ್ವಸ್ತಿ ಶ್ರೀಯಾದವ ನಾರಾಯಣ ಭುಜಭಳ ಮ
…..ಳ ಪ್ರತಾಪ ಚಕ್ರವರ್ತಿ ಶ್ರೀಮನುಮಹಾನಾಯಕಾಚಾ
ರ್ಯ್ಯ ಶ್ರೀ ವೀರ ಕಂಪಿಲದೇವನು ಕುಮ್ಮಟದಲಿ ರಾಜ್ಯೆಂಗೆಯು…….’’

ಎಂದು ಓದಿದ್ದಾರೆ (Patil, 1991: 211-12). ಇಲ್ಲಿ ಒಂದೇ ಶಾಸನವನ್ನು ಬೇರೆ, ಬೇರೆಯಾಗಿ ಓದಲಾಗಿದೆ. ಈ ಎರಡೂ ಓದುಗಳನ್ನು ಗಮನಿಸಿದಾಗ ಜಾಗೀರ್‌ದಾರರು ಓದಿದ ‘‘ಮಂಡಲಿಕ ಹೊಯ್ಯಸ (ಣ)’’ ಎಂಬುದನ್ನು ಸಿ.ಎಸ್.ಪಾಟೀಲರು ‘‘ನಾಯಕಾಚಾರ್ಯ್ಯ’’ ಎಂದು ಓದಿದ್ದಾರೆ. ಶಾಸನದಲ್ಲಿ ಈ ಅಕ್ಷರಗಳು ಸ್ಪಷ್ಟವಾಗಿ ಕಾಣಿಸುವುದಿಲ್ಲ. ಈ ವೀರಗಲ್ಲು ಶಾಸನದ ಸಮೀಪದಲ್ಲಿ ಮತ್ತೊಂದು ವೀರಗಲ್ಲು ಶಾಸನ ದೊರೆತಿದ್ದು ಅದನ್ನು ಸಿ.ಎಸ್. ಪಾಟೀಲ್ ಅವರು

‘‘ಸ್ವಸ್ತಿ ಶ್ರೀಮತು ನಾಯಕಾಚಾರ್ಯ್ಯ…..
(ಲ) ದೇವನು ಸುರತಾಣನ ದಳವ……’’

ಎಂದು ಓದಿದ್ದಾರೆ (Patil, 1991:213). ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಕುಮ್ಮಟದ ಕ್ರಿ.ಶ. ೧೩೧೫ರ ವೀರಗಲ್ಲು ಶಾಸನದ ಪಾಟೀಲರ ಓದನ್ನು ಎರಡನೇ ವೀರಗಲ್ಲು ಶಾಸನದ ಓದು ಸಮರ್ಥಿಸುತ್ತದೆ. ಅಲ್ಲದೆ ಸೀತಾರಾಮ ಜಾಗೀರ್‌ದಾರರು ಓದಿರುವ ಎಂಟು ಅಕ್ಷರಗಳನ್ನು ಕೊರೆಯಲು ಶಾಸನದ ಸಾಲಿನಲ್ಲಿ ಸ್ಥಳಾವಕಾಶವಿಲ್ಲ. ಬದಲಾಗಿ ಪಾಟೀಲರು ಓದಿರುವ ಐದು ಅಕ್ಷರಗಳನ್ನು ಮಾತ್ರ ಕೊರೆಯಲು ಸ್ಥಳಾವಕಾಶವಿದೆ. ಆದ್ದರಿಂದ ಸೀತಾರಾಮ ಜಾಗೀರ್‌ದಾರರು ಓದಿರುವ ಪಾಠಕ್ಕಿಂತ ಸಿ.ಎಸ್.ಪಾಟೀಲರ ಓದು ಹೆಚ್ಚು ಸಂಭವನೀಯ ವಾಗಿದೆ. ಕೂಡಲಿಯ ಕಲ್ಲುಮಠದ ಮುಂಭಾಗದಲ್ಲಿರುವ ವೀರಗಲ್ಲುಶಾಸನ ಬಲ್ಲಾಳನಿಗೂ ಮತ್ತು ಕಂಪಿಲನಿಗೂ ನಡೆದ ಸಿರುಗುಪ್ಪೆಯ ಕದನವನ್ನು ಉಲ್ಲೇಖಿಸುತ್ತದೆ (MAR 1923: 121). ಇದರಲ್ಲಿನ

‘‘ಶ್ರೀ ಮನ್ಮಹಾಮಾಂಡಲಿಕ ಖಂಡೆಯರಾಯ ಸಿವರ ಸ್ವಯಂಭು
ನಾಯಕಾಚಾರ್ಯನ ಮಲಜೆ…. ಲೆಗಂ ಗಂಡಗೋವ ಮೀಸೆಯರ
ಗಂಡ ಪಿಂಗಳರಾಯ ರಕ್ಕಪಾಲಕಿ ವೀರಕಂಪಿಲದೇವ…..’’

ಎಂಬ ಸಾಲುಗಳನ್ನು ಗಮನಿಸಿದಾಗ ಕಂಪಿಲದೇವನಿಗೆ ‘‘ಮಹಾಮಾಂಡಲಿಕ’’ ಮತ್ತು “ನಾಯಕಾಚಾರ್ಯ’’ ಎಂಬ ಎರಡು ಪದಗಳನ್ನು ಬಳಸಲಾಗಿದೆ. ಈ ಎರಡು ಪದಗಳು ಕಂಪಿಲನಿಗೆ ಅನ್ವಯಿಸುವುದರಿಂದಾಗಿ, ಕುಮ್ಮಟದ ವೀರಗಲ್ಲು ಶಾಸನದ ಅಸ್ಪಷ್ಟವಾದ ಅಕ್ಷರಗಳನ್ನು ಜಾಗೀರದಾರರು “ಮಹಾಮಂಡಲಿಕ ಹೊಯ್ಸಳ (ಣ)’’ ಎಂದು, ಸಿ.ಎಸ್. ಪಾಟೀಲರು “ನಾಯಕಾಚಾರ್ಯ’’ ಎಂದು ಓದಿದ್ದಾರೆ. ಕೂಡಲಿಯ ವೀರಗಲ್ಲು ಶಾಸನದಲ್ಲಿ ಕಂಪಿಲನ ಮತ್ತೊಂದು ಹೆಸರಾದ ಖಂಡೆಯರಾಯ ಎಂಬುದು ಉಲ್ಲೇಖವಾಗಿದೆ. ಆದರೆ ಇಲ್ಲಿ ಅವರು ಹೊಯ್ಸಳ ಶಾಖೆಗೆ ಸೇರಿದವರೆಂದು ಹೇಳುವ ಯಾವುದೇ ಸೂಚನೆ ಇಲ್ಲ. ಹೀಗಾಗಿ ಕುಮ್ಮಟದ ವೀರಗಲ್ಲು ಶಾಸನದಲ್ಲಿನ ಜಾಗೀರ್‌ದಾರರ ‘‘ಮಂಡಲಿಕ ಹೊಯ್ಯಸ (ಣ)’’ ಎಂಬ ಓದನ್ನು ಕೈಬಿಟ್ಟು, ಸಿ.ಎಸ್.ಪಾಟೀಲರ ‘‘ನಾಯಕಾಚಾರ್ಯ್ಯ’’ ಎಂಬ ಓದನ್ನು ಸ್ವೀಕರಿಸಬಹುದು.

ಕುಮ್ಮಟದ ಅರಸರು ಹೊಯ್ಸಳವಂಶದ ಒಂದು ಶಾಖೆಗೆ ಸೇರಿದವರೆಂಬ ಜಾಗೀರ್‌ದಾರರ ಹೇಳಿಕೆಯನ್ನು ಪರಿಶೀಲಿಸುವುದಾದರೆ, ಅವರು ತಮ್ಮ ಈ ವಾದಕ್ಕೆ ಸೊಂಡೂರು ತಾಲ್ಲೂಕಿನ ರಾಮಘಡದ ಕ್ರಿ.ಶ. ೧೩೨೩ರ ವೀರಗಲ್ಲು ಶಾಸನವನ್ನು ಬಳಸಿಕೊಂಡಿದ್ದಾರೆ. ಈ ಶಾಸನ ಹೊಯ್ಸಳರ ಮತ್ತು ಕುಮ್ಮಟದ ಅರಸರ ಸಂಬಂಧವನ್ನು ಕುರಿತು ಮಹತ್ವದ ಬೆಳಕು ಚೆಲ್ಲುತ್ತದೆ. ಶಾಸನತಜ್ಞ, ಜಿ.ಎಸ್.ಗಾಯಿಯವರ ನೆರವಿನಿಂದ ಜಿ. ವರದರಾಜರಾವ್ ಅವರು ಉಲ್ಲೇಖಿಸಿ ರುವುದನ್ನು ಸೀತಾರಾಮ ಜಾಗೀರದಾರರು ವಿದ್ವಾಂಸರ ಗಮನಕ್ಕೆ ತಂದಿದ್ದಾರೆ (ಅಭಿಶಂಕರ ೧೯೯೦ : ೧೩೮). ಈ ಶಾಸನದ

“ಶ್ರೀ ವೀರ ಕಂಪಿಲದೇವನ ಮೇಲೆ ಬಲ್ಲಾಳರಾಯನು (ದಂಡೆತ್ತಿ) ಬಂದಲ್ಲಿ
ಯಿಬ್ಬರು ದಾಯದ ದಂಡಿನೊಳಗೆ ದಂಡಿನ ಬಯಿಚಯ್ಯನು…’’

ಎಂಬ ಸಾಲುಗಳಲ್ಲಿನ ‘‘ಯಿಬ್ಬರು ದಾಯದ ದಂಡಿನೊಳಗೆ’’ ಎಂಬ ಪದಗಳು ಮುಖ್ಯವಾಗಿವೆ. ಅಂದರೆ ಕಂಪಿಲದೇವ ಮತ್ತು ಬಲ್ಲಾಳ ದಾಯಾದಿಗಳಾಗಿದ್ದರೆಂದು ತಿಳಿದುಬರುತ್ತದೆ. ಇಲ್ಲಿ ದಾಯಾದಿ ಎಂಬುದನ್ನು ಬಂಧುಗಳೆಂಬ ಅರ್ಥದಲ್ಲಿ ಬಳಸಿರಬಹುದೆ? ಮುಮ್ಮಡಿ ಸಿಂಗೆಯನಾಯಕ ಹೊಯ್ಸಳರ ಮೂರನೆ ನರಸಿಂಹನ ಸಮಕಾಲೀನ. ಸಿಂಗೆಯ ಹೆಸರಿನ ಅನೇಕ ಮಂದಿ ದಣ್ಣಾಯಕರು ಹೊಯ್ಸಳರ ಸೇವೆಯಲ್ಲಿದ್ದ ಬಗ್ಗೆ ಶಾಸನ ಆಧಾರಗಳಿವೆ (MAR. 1906-1909: EC V: AK 149). ಇಂತಹ ದಣ್ಣಾಯಕರು ರಾಜನ ನೇರ ಸಂಬಂಧಿಗಳಾಗಿರು ತ್ತಿದ್ದರು. ಇವರನ್ನು ಶಾಸನಗಳಲ್ಲಿ ‘‘ತಸ್ಯ ರಾಜಾನ್ವಯಸ್ಯ’’ ಎಂದಿದೆ (EC IX : Anekal 84, Hoskote 90). ಈ ಸಂಬಂಧಗಳು ಒಂದು ಸಾಮ್ರಾಜ್ಯದ ಬೆಳವಣಿಗೆಗೆ ಅನಿವಾರ್ಯವಾಗಿದ್ದವು. ಬಹುಶಃ ಕುಮ್ಮಟದ ಮುಮ್ಮಡಿ ಸಿಂಗೆಯನಾಯಕನು ಕ್ರಿ.ಶ. ೧೨೮೦ಕ್ಕೆ ಮುಂಚೆ ಹೊಯ್ಸಳ ರಾಜ್ಯದಲ್ಲಿ ದಂಡನಾಯಕನಾಗಿದ್ದು, ಅವರ ಸಂಬಂಧಿ ಯಾಗಿದ್ದಿರಬಹುದು (ಪಾಂಚಾಲಗಂಗನ ಚೆನ್ನರಾಮನ ಸಾಂಗತ್ಯದಲ್ಲಿ ಮುಮ್ಮಡಿ ಸಿಂಗನು ಮಲೆಪ್ರಾಂತ್ಯ ದೇಶದ ಸಾಮಂತ ಮನೆತನವೊಂದಕ್ಕೆ ಸೇರಿದವನೆಂದು ತಿಳಿದುಬರುತ್ತದೆ). ಇದೇ ಸಮಯದಲ್ಲಿ ಹೊಯ್ಸಳರ ಮೂರನೆ ನರಸಿಂಹನಿಗೂ ಮತ್ತು ರಾಮನಾಥನಿಗೂ ರಾಜ್ಯ ಹಂಚಿಕೆಯ ಸಂಬಂಧವಾಗಿ ಅಂತಃಕಲಹವಿತ್ತು ಮತ್ತು ರಾಜ್ಯದ ಉತ್ತರ ಗಡಿಯ ಕಡೆಯಿಂದ ದೇವಗಿರಿಯ ಸೇವುಣರ ದಾಳಿ ನಿರಂತರವಾಗಿ ನಡೆಯುತ್ತಿತ್ತು. ಬಹುಶಃ ಇಂತಹ ಒಂದು ಪರಿಸ್ಥಿತಿಯ ಲಾಭಪಡೆದ ಸಿಂಗೆಯನು ತನ್ನ ದಣ್ಣಾಯಕ ಹುದ್ದೆಯನ್ನು ತೊರೆದು, ಹೊಯ್ಸಳರ ಮತ್ತು ಸೇವುಣರ ಗಡಿಭಾಗದಲ್ಲಿ ಸ್ವತಂತ್ರವಾಗಿ ಆಳಲು ಪ್ರಾರಂಭಿಸಿರಬೇಕು. ಹೀಗೆ ದಣ್ಣಾಯಕ ಹುದ್ದೆಯನ್ನು ತ್ಯಜಿಸಿದ ನಂತರ ನಾಯಕನಾಗಿ ಉಳಿದುಕೊಂಡ ಸಿಂಗೆಯನು ಮುಂದೆ ಬಹುಶಃ ತನ್ನ ಮನೆತನದ ಹೆಸರಾದ ಮುಮ್ಮಡಿ ಎಂಬುದನ್ನು ಸೇರಿಸಿಕೊಂಡು ಮುಮ್ಮಡಿ ಸಿಂಗೆಯನಾಯಕ ಎನಿಸಿಕೊಂಡಿರಬೇಕು (ಕಲಬುರ್ಗಿ, ೧೯೯೪ : ೪೪೬).

ಕುಮ್ಮಟದ ವೀರಗಲ್ಲು ಶಾಸನದಲ್ಲಿ ಉಲ್ಲೇಖಿಸಿರುವ ‘‘ಮಹಾನಾಯಕಾಚಾರ್ಯ್ಯ’’ ಎಂಬ ಬಿರುದನ್ನು ವಿಜಯನಗರೋತ್ತರ ಕಾಲದ ಬೇಡನಾಯಕರು ಬಳಸಿಕೊಂಡಿದ್ದಾರೆ. ಇದನ್ನು ಆಧರಿಸಿ ಕೆಲವು ವಿದ್ವಾಂಸರು ಕುಮ್ಮಟದ ಅರಸರನ್ನು ಸಹ ಬೇಡರೆಂದು ಗುರುತಿಸುವಲ್ಲಿ ಆಸಕ್ತಿ ತೋರುತ್ತಾರೆ. ನಾಯಕ ಎಂಬುದಕ್ಕೆ ಬೇರೆ ಬೇರೆ ಅರ್ಥಗಳಿವೆ (ಕಿಟ್ಟಲ್ ಶಬ್ದಕೋಶ). ಅಂದರೆ ನಾಯಕ ಎಂಬುದು ಕಾಲ ಮತ್ತು ಸಂದರ್ಭಗಳ ಹಿನ್ನೆಲೆಯಲ್ಲಿ ಬೇರೆಬೇರೆ ಅರ್ಥಗಳನ್ನು ಪಡೆದುಕೊಳ್ಳುತ್ತದೆ. ಆದರೆ ಕೆಲವು ವಿದ್ವಾಂಸರು, ಅದನ್ನು ಒಂದು ಜಾತಿಯ ನೆಲೆಯಲ್ಲೇ ನೋಡುವ ಪ್ರಯತ್ನ ಮಾಡುತ್ತಿದ್ದಾರೆ. ಬಹುಶಃ ಕಂಪಿಲದೇವನು ಅಪಾರ ಸಂಖ್ಯೆಯ ಸಣ್ಣಪುಟ್ಟ ನಾಯಕರ ಬೆಂಬಲವನ್ನು ಹೊಂದಿದ್ದು, ‘‘ನಾಯಕಾಚಾರ್ಯ್ಯ’’ ಎಂಬ ಬಿರುದನ್ನು ಧರಿಸಿದಂತೆ ಕಂಡುಬರುತ್ತದೆ.

ಹೀಗೆ ಲಭ್ಯವಿರುವ ಮಾಹಿತಿಗಳನ್ನು ಮತ್ತು ಚಾರಿತ್ರಿಕ ಹಿನ್ನೆಲೆಗಳನ್ನು ಗಮನಿಸಿ ವಿಶ್ಲೇಷಿಸಿದಾಗ ಇವರನ್ನು ಕುಮ್ಮಟದ ಅರಸರೆಂದು ಕರೆದು, ಇವರು ಹೊಯ್ಸಳರ ಬಂಧು ಗಳಾಗಿದ್ದರೆಂದು ಹೇಳಬಹುದು. ಆದರೆ ವಿದ್ವಾಂಸರು ಅವರನ್ನು ಹೊಯ್ಸಳರ ದಾಯಾದಿಗಳು, ಸಾವುಣರ ವೈಂಶಿಕರು ಮತ್ತು ಬೇಡರು ವಿಭಿನ್ನವಾಗಿ ಗುರುತಿಸಿದ್ದಾರೆ. ಈ ಕುರಿತು ನಿರ್ಧರಿಸುವುದು ಕಷ್ಟಕರ. ಆದರೂ ಕುಮ್ಮಟದ ಅರಸರ ಮೂಲನೆಲೆಯನ್ನು ಹೊಯ್ಸಳ ರಾಜ್ಯದಲ್ಲೇ ಗುರುತಿಸಬಹುದಾಗಿದೆ.

ವಂಶಾವಳಿ

ಕುಮ್ಮಟದ ಅರಸರ ವಂಶಾವಳಿಯನ್ನು ಕುರಿತಂತೆ ಸಾಹಿತ್ಯ, ಕೈಫಿಯತ್ತು ಮತ್ತು ಶಾಸನಗಳು ಬೇರೆ ಬೇರೆ ಚಿತ್ರಗಳನ್ನು ನೀಡುತ್ತವೆ. ಹುಲ್ಲೂರು ಶ್ರೀನಿವಾಸ ಜೋಯಿಸರು ‘‘ಬಾಲಕುಮಾರ ರಾಮನ ಸಾಂಗತ್ಯ’’ವನ್ನು ಆಧರಿಸಿ ಕಾಮಗೇತಿ ವಂಶದ ಮೂಲಪುರುಷ ಕಸ್ತೂರಿನಾಯಕ. ಇವನ ನಂತರ ಇಬ್ಬರು ಶೂರರು ಆಳಿದರು. ನಾಲ್ಕನೆಯವನೇ ಹೆಬ್ಬುಲಿ ಮುಮ್ಮಡಿಸಿಂಗ. ಇವನ ಮಗ ಕಂಪಿಲರಾಯ, ಈತನ ಮಗ ಕುಮಾರರಾಮನೆಂದು ತಮ್ಮ ಲೇಖನದಲ್ಲಿ ತಿಳಿಸಿದ್ದಾರೆ (ಲಕ್ಷ್ಮಣ್ ತೆಲಗಾವಿ ಮತ್ತು ಶ್ರೀನಿವಾಸ ೧೯೯೫: ೫೭೫). ‘ಬಾಲಕುಮಾರರಾಮನ ಸಾಂಗತ್ಯ’ದಲ್ಲಿ ಕುಮ್ಮಟದ ಅರಸರನ್ನು ವಿಜಯನಗರೋತ್ತರ ಕಾಲದ ಬೇಡನಾಯಕರ ವಂಶದೊಂದಿಗೆ ಸಂಪರ್ಕಿಸುವ ಪ್ರಯತ್ನ ಸ್ಪಷ್ಟವಾಗಿ ಎದ್ದು ಕಾಣುತ್ತದೆ. ಇದರಿಂದಾಗಿ ಸಾಂಗತ್ಯ ಮೂಲದ ಈ ವಂಶಾವಳಿಯ ಚಿತ್ರ ನಂಬಲರ್ಹವಾಗಿಲ್ಲ. ಇನ್ನು ಸಾಂಗತ್ಯಗಳ ಬೆನ್ನಲ್ಲೆ ಹುಟ್ಟಿಕೊಂಡಂತೆ ಕಂಡುಬರುವ ಕೈಫಿಯತ್ತು ಮೂಲದ ವಂಶಾವಳಿಯ ಚಿತ್ರಗಳನ್ನು ಗಮನಿಸೋಣ.ಇತ್ತೀಚೆಗೆ ಪ್ರಕಟಗೊಂಡಿರುವ ಭಟ್ಟರಹಳ್ಳಿ ಕೈಫಿಯತ್ತು ಅಥವಾ ಕೊಮಾರ ರಾಮನ ಕೈಫಿಯತ್ತು (ಕಲಬುರ್ಗಿ ೧೯೯೪). ಈ ಕೆಳಕಂಡಂತೆ ವಂಶಾವಳಿಯ ಚಿತ್ರವನ್ನು ನೀಡುತ್ತದೆ.

ಖಂಡೆರಾಯ
(ಮೂಲಪುರುಷ)
|
ಖಂಡೆರಾಯ
|
ಮುತ್ತಿನ ಮುಮ್ಮಣಿರಾಯ
|
ನರಸಿಂಗರಾಯ
|
ಕೋವಿನ ತಿಮ್ಮನಾಯಕ
|
ಹೆಬ್ಬುಲಿ ಕಂಪಲಿರಾಯ
|
ಕೊಮಾರರಾಮ

ಈ ಮೇಲಿನ ವಂಶಾವಳಿ ಪಟ್ಟಿಯಲ್ಲಿ ಮುಮ್ಮಡಿ ಸಿಂಗೆಯನಾಯಕನ ಹೆಸರು ಕಂಡು ಬರುವುದಿಲ್ಲ ಹಾಗು ಇಲ್ಲಿ ಹೇಳಿರುವ ಹೆಸರುಗಳಲ್ಲಿ ಸಂಬಂಧವಾಗಲಿ, ಕ್ರಮವಾಗಲಿ ಕಾಣಬರುವುದಿಲ್ಲ. ಹೀಗಾಗಿ ಸಾಹಿತ್ಯ ಮತ್ತು ಕೈಫಿಯತ್ತು ಮೂಲದ ವಂಶಾವಳಿ ಚಿತ್ರಗಳು ಕುಮ್ಮಟದ ಅರಸರ ವಂಶಾವಳಿ ಕುರಿತಂತೆ ಸ್ಪಷ್ಟ ಚಿತ್ರವನ್ನು ನೀಡುವುದಿಲ್ಲ.

ಹಂಪಿಯ ಹೇಮಕೂಟದಲ್ಲಿರುವ ಶಾಸನವೊಂದು (ARIE 1934-45: B 353), ಕಂಪಿಲದೇವನು ತನ್ನ ತಂದೆ ಮುಮ್ಮಡಿ ಸಿಂಗೆಯನಾಯಕ, ತಾಯಿ ಮಾದನಾಯಕಿತಿ ಮತ್ತು ಪೆರುಮೆಯನಾಯಕ ಎಂಬುವರ ಹೆಸರಿನಲ್ಲಿ ಲಿಂಗಗಳನ್ನು ಪ್ರತಿಷ್ಠಾಪಿಸಿದನೆಂದು ತಿಳಿಸುತ್ತದೆ. ಹಾಗೆಯೆ ಸೊಂಡೂರು ತಾಲ್ಲೂಕಿನ ರಾಮಘಡದ ಶಾಸನ, ವೀರ ಗುಜಲಹರಿಹರದೇವಿಯ ಮಗನಾದ ರಾಮನಾಥವೊಡೆಯನ ನೆನಪಿಗೆ ಹೊಸಮಲೆದುರ್ಗ (ರಾಮಘಡ)ದಲ್ಲಿ ರಾಮನಾಥ ದೇವಾಲಯವನ್ನು ನಿರ್ಮಿಸಿದ ಸಂಗತಿಯನ್ನು ತಿಳಿಸುತ್ತದೆ. ಈ ಎರಡೂ ಶಾಸನಗಳನ್ನಾಧರಿಸಿ ಸಿ.ಎಸ್.ಪಾಟೀಲರು ಈ ಕೆಳಕಂಡಂತೆ ಕುಮ್ಮಟದ ಅರಸರ ವಂಶಾವಳಿಯ ಚಿತ್ರವನ್ನು ನೀಡುತ್ತಾರೆ (Patil1991: 191).

ಪೆರುಮೆಯ ನಾಯಕ (?)
|
ಮುಮ್ಮಡಿ ಸಿಂಗೆಯನಾಯಕ
(ಹೆಂಡತಿ-ಮಾದನಾಯಕಿತಿ)
|
ಖಂಡೆಯರಾಯ ಅಥವಾ ಕಂಪಿಲದೇವ
(ಹೆಂಡತಿ-ಗುಜಲ ಹರಿಹರದೇವಿ)
|
ಕುಮಾರ ರಾಮನಾಥ

ಇಲ್ಲಿ ಪೆರುಮೆಯ ನಾಯಕನನ್ನು ಮುಮ್ಮಡಿ ಸಿಂಗೆಯನಾಯಕನ ತಂದೆಯೆಂದು ಗ್ರಹಿಸಿ ಪ್ರಶ್ನಾರ್ಥಕ ಚಿಹ್ನೆಯನ್ನಿಡಲಾಗಿದೆ. ಆದರೆ ಪಾಟೀಲರ ಈ ಗ್ರಹಿಕೆಗೆ ಯಾವುದೇ ಆಧಾರಗಳಿಲ್ಲ. ಪೆರುಮೆಯನಾಯಕ ಮುಮ್ಮಡಿ ಸಿಂಗೆಯನಾಯಕನಿಗೆ ಸಹೋದರನಾಗಿರುವ ಸಾಧ್ಯತೆಯೂ ಇದೆ. ಏಕೆಂದರೆ ನಮ್ಮ ಪರಂಪರೆಯಲ್ಲಿ ತಂದೆಯಷ್ಟೇ ಸ್ಥಾನಮಾನವನ್ನು ಚಿಕ್ಕಪ್ಪನಿಗೆ ನೀಡಲಾಗುತ್ತದೆ. ಅಂದರೆ ಕಂಪಿಲದೇವನಿಗೆ ಪೆರುಮೆಯನಾಯಕ ಚಿಕ್ಕಪ್ಪನಾಗಿದ್ದು, ತಂದೆ-ತಾಯಿಯ ಜೊತೆಗೆ ಚಿಕ್ಕಪ್ಪನ ಹೆಸರಿನಲ್ಲೂ ಲಿಂಗ ಪ್ರತಿಷ್ಠಾಪನೆಯನ್ನು ಮಾಡಿರಬಹುದು. ಇಂತಹ ಉದಾಹರಣೆಯನ್ನು ಚರಿತ್ರೆಯಲ್ಲಿ ಕಾಣಬಹುದು. ಆದರೂ ಪೆರುಮೆಯನಾಯಕ ಮತ್ತು ಮುಮ್ಮಡಿ ಸಿಂಗೆಯನಾಯಕ ಇವರ ನಡುವಿನ ಸಂಬಂಧ ಸ್ಪಷ್ಟವಾಗುವುದಿಲ್ಲ. ಹೀಗಾಗಿ ಪೆರುಮೆಯ ನಾಯಕನ ಹೆಸರನ್ನು ಒಂದೆಡೆ ಇಟ್ಟು, ಕುಮ್ಮಟದ ಅರಸರ ವಂಶಾವಳಿ ಯನ್ನು ಹೇಳುವುದು ಹೆಚ್ಚು ಸೂಕ್ತ.

ಕುಮ್ಮಟದ ಅರಸರ ಮೂಲಪುರುಷ ಮುಮ್ಮಡಿ ಸಿಂಗೆಯನಾಯಕನೆಂದು ಸಮಕಾಲೀನ ಶಾಸನಾಧಾರಗಳು ಸ್ಪಷ್ಟವಾಗಿ ತಿಳಿಸುತ್ತವೆ. ಈ ವಂಶದಲ್ಲಿ ಮುಮ್ಮಡಿ ಸಿಂಗೆಯನಾಯಕ ಮತ್ತು ಆತನ ಹೆಂಡತಿ ಮಾದನಾಯಕಿತಿ, ಇವರ ಮಗ ಕಂಪಿಲದೇವ ಮತ್ತು ಆತನ ಹೆಂಡತಿ ಗುಜಲ ಹರಿಹರದೇವಿ ಹಾಗೂ ಇವರ ಮಗ ರಾಮನಾಥ ಇವರುಗಳನ್ನು ಸ್ಪಷ್ಟವಾಗಿ ಗುರುತಿಸಬಹುದು. ನಂಜುಂಡ ಕವಿಯ ರಾಮನಾಥ ಚರಿತೆ ಎಂಬ ಸಾಂಗತ್ಯ ಕೃತಿಯಿಂದ ಕಂಪಿಲದೇವನಿಗೆ ಮಾರವ್ವ ಮತ್ತು ಸಿಂಗಮ್ಮ ಎಂಬ ಹೆಣ್ಣುಮಕ್ಕಳಿದ್ದರೆಂದು ತಿಳಿದುಬರುತ್ತದೆ. ಮಾರವ್ವನ ಗಂಡನ ಹೆಸರು ಭಾವಸಂಗಮ. ಈತನನ್ನು ಗುರುತಿಸುವ ಪೋಷಕ ಆಧಾರಗಳು ಶಾಸನ ಮತ್ತು ಕೈಫಿಯತ್ತಿನಲ್ಲಿವೆ (ಮುಂದೆ ವಿವರಿಸಲಾಗುವುದು). ಇದರಿಂದಾಗಿ ಕಂಪಿಲದೇವನಿಗೆ ರಾಮನಾಥನಲ್ಲದೆ ಮಾರವ್ವ ಮತ್ತು ಸಿಂಗಮ್ಮ ಎಂಬ ಇಬ್ಬರು ಹೆಣ್ಣುಮಕ್ಕಳಿದ್ದರೆಂದು ಸ್ಪಷ್ಟವಾಗುವುದು. ಈ ಮೇಲಿನ ವಿವರಗಳಿಂದ ಅಂತಿಮವಾಗಿ ಕುಮ್ಮಟದ ಅರಸರ ವಂಶಾವಳಿಯನ್ನು ಈ ಕೆಳಕಂಡಂತೆ ನೀಡಬಹುದು.

ಮುಮ್ಮಡಿ ಸಿಂಗೆಯನಾಯಕ
(ಹೆಂಡತಿ-ಮಾದನಾಯಕಿತಿ)
|
ಕಂಪಿಲದೇವ ಅಥವಾ ಖಂಡೆಯರಾಯ
(ಹೆಂಡತಿ-ಗುಜಲ ಹರಿಹರದೇವಿ)
|                                   |                                   |
ಮಾರವ್ವ                     ಸಿಂಗಮ್ಮ                    ರಾಮನಾಥ
(ಗಂಡ-ಭಾವಸಂಗಮ)

ಅಂತಾಪುರ ಕೈಫಿಯತ್ತು ಮತ್ತು ದರೋಜಿ ಗ್ರಾಮದ ಕೈಫಿಯತ್ತುಗಳಲ್ಲಿ, ಕೊಮಾರರಾಮನ ವಂಶಸ್ಥನಾದ ಬೊಮ್ಮಂತರಾಜ ಮರಳನವರಿಗೆ ಏಳು ಮಕ್ಕಳಿದ್ದ ಸಂಗತಿ ತಿಳಿದುಬರುತ್ತದೆ. ಕೃಷ್ಣದೇವರಾಯನು ಈ ಬೊಮ್ಮಂತ ರಾಜನಿಗೆ ಕುತ್ತಾನೆ, ಸೊಂಡೂರು, ಜೆರಿಮಲ, ಬಾಣಾರಾವಿ, ವಡ್ಡುದರೋದಿ, ಗುಡೆಕೋಟೆ, ಉಜ್ಜನಿ ಪ್ರದೇಶಗಳನ್ನು ನೀಡಿದನೆಂದು ತಿಳಿದುಬರುತ್ತದೆ. ಬೊಮ್ಮಂತರಾಜ ಅಥವಾ ಭೂಮರಾಜನು ಈ ಏಳು ಪ್ರದೇಶಗಳಿಗೆ ತನ್ನ ಏಳು ಮಕ್ಕಳನ್ನು ನೇಮಿಸುತ್ತಾನೆ. ಈತನ ವಂಶಾವಳಿ ಈ ಕೆಳಕಂಡಂತಿದೆ. ಇದನ್ನು ಉತ್ತರ ವಂಶಾವಳಿ ಎನ್ನಲಾಗಿದೆ.

ಕೊಮಾರರಾಮ
(ಮೂಲಪುರುಷ)
|
ಬೊಮ್ಮಂತರಾಜ
(ಭೂಮರಾಜ)
|

ಹಿರೆಬೊಮ್ಮಂತ ರಾಜ ಬಿಸಾಳ ನಾಯಕ ರಾಜಪ್ಪ ನಾಯಕ ವೀರಪ್ಪ ನಾಯಕ ಇಮ್ಮಡಿ ನಾಯಕ ಮಲ್ಲಿಕಾರ್ಜುನ ನಾಯಕ ಚಿನ್ನಯ್ಯರಾಜು

ಇದನ್ನು ಒಪ್ಪುವುದು, ಬಿಡುವುದು ವಿದ್ವಾಂಸರಿಗೆ ಸೇರಿದ ವಿಷಯ. ಆದರೆ ಇದು ಕೈಫಿಯತ್ತು ಗಳಲ್ಲಿ ದಾಖಲಾಗಿರುವುದರಿಂದ ವಿಷಯ ಪರಿಶೀಲನೆಗೆ ಅಡ್ಡಿಯಿಲ್ಲ. ಇದೇ ರೀತಿ ವಿಜಯನಗರೋತ್ತರ ಕಾಲದ ಅನೇಕ ಪಾಳೆಯಗಾರ ಮನೆತನಗಳು ತಮ್ಮ ಮೂಲವನ್ನು ಕುಮ್ಮಟದ ಅರಸರೊಂದಿಗೆ ಗುರುತಿಸಿಕೊಳ್ಳುತ್ತಾರೆ. ವಿಜಯನಗರ ಮತ್ತು ಉತ್ತರ ಕಾಲದಲ್ಲಿ ರಚನೆಗೊಂಡ ಸಾಂಗತ್ಯಗಳು ಕುಮಾರರಾಮನ ಶೌರ್ಯವನ್ನು ವೈಭವಿಕರಿಸಿದವು. ಇಂತಹ ವೈಭವೀಕರಣದಿಂದ ಸೈನಿಕರಲ್ಲಿ ಸ್ಪೂರ್ತಿಯನ್ನು ಹೆಚ್ಚಿಸುವುದಾಗಿತ್ತು. ಶೌರ್ಯಸಾಹಸಗಳಿಗೆ ಹೆಸರಾದ ಕುಮಾರರಾಮ ಆಗಿನ ಯುದ್ಧನಿರತ ಪಾಳೆಯಗಾರರಿಗೆ ಆದರ್ಶ ವ್ಯಕ್ತಿಯಾಗಿ ಕಂಡನು. ಇದು ಅವನು ತಮ್ಮ ಮೂಲಪುರುಷನೆಂದು ಹೇಳಿಕೊಳ್ಳಲು ಕಾರಣವಾಯಿತು. ಹೀಗೆ ವಿಜಯನಗರ ಮತ್ತು ಉತ್ತರ ಕಾಲದ ಅನೇಕ ಪಾಳೆಯಗಾರರು ತಮ್ಮ ಮೂಲವನ್ನು ಕುಮ್ಮಟದ ಅರಸರೊಂದಿಗೆ ಗುರುತಿಸಿಕೊಳ್ಳುತ್ತಾರೆ.