ಮುಮ್ಮಡಿ ಸಿಂಗೆಯನಾಯಕ ಈ ಮನೆತನದ ಮೂಲಪುರುಷ. ಇವನು ಹೊಯ್ಸಳರ ಮೂರನೆ ನರಸಿಂಹ ಮತ್ತು ರಾಮನಾಥನ ಸಮಕಾಲೀನನಾಗಿದ್ದನು. ಹೊಯ್ಸಳ ರಾಜ್ಯದಲ್ಲಿ ರಾಜ್ಯ ಹಂಚಿಕೆಗಾಗಿ ಅಂತಃಕಲಹ ನಡೆಯುತ್ತಿತ್ತು. ಹೊಯ್ಸಳರು ತಮಿಳು ಪ್ರದೇಶದ ರಾಜಕಾರಣಕ್ಕೆ ಹೆಚ್ಚಿನ ಗಮನ ನೀಡಿದ್ದರು. ಹೀಗಾಗಿ ಉತ್ತರದ ಭಾಗಗಳೆಡೆಗೆ ಅಷ್ಟಾಗಿ ಗಮನ ನೀಡಲಿಲ್ಲ. ಅಲ್ಲದೆ ಆಗಾಗ್ಗೆ ದೇವಗಿರಿಯ ಸೇವುಣರ ದಾಳಿಯನ್ನು ಎದುರಿಸ ಬೇಕಾಗಿತ್ತು. ಇಂತಹ ಸಂದರ್ಭದಲ್ಲಿ ಮುಮ್ಮಡಿ ಸಿಂಗೆಯನಾಯಕನು ಹಂಪೆಯ ಪರಿಸರ ದಲ್ಲಿರುವ ಕುಮ್ಮಟವನ್ನು ಮುಖ್ಯ ಕೇಂದ್ರವನ್ನಾಗಿ ಮಾಡಿಕೊಂಡು, ಹೊಯ್ಸಳ ರಾಜ್ಯದ ಉತ್ತರದ ಗಡಿಭಾಗಗಳನ್ನು ವಶಮಾಡಿಕೊಂಡಂತೆ ಕಂಡುಬರುತ್ತದೆ. ಕುಮ್ಮಟದುರ್ಗವು ಗಿರಿದುರ್ಗವಾಗಿದ್ದು, ಇಂದಿನ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಗಡಿಭಾಗದಲ್ಲಿರುವ ಮುಕ್ಕುಂಪಿ ಗ್ರಾಮದ ದಕ್ಷಿಣಕ್ಕೆ ಒಂದು ಮೈಲಿ ಅಂತರದಲ್ಲಿದೆ. ಪರ್ವತಮಯವಾದ ಈ ಪ್ರದೇಶ ಪ್ರಾಕೃತಿಕವಾಗಿ ರಕ್ಷಣೆ ಪಡೆದಿದೆ. ಹೊಯ್ಸಳ ಮತ್ತು ಸೇವುಣ ರಾಜ್ಯಗಳ ನಡುವೆಯಿದ್ದ ಕುಮ್ಮಟವು ಸೇವುಣ ರಾಜ್ಯ ವಿಸ್ತರಣೆಗೆ ತಡೆಯಾಗಿತ್ತು. ಇದು ಸೇವುಣರಿಗೆ ಒಂದು ಸಮಸ್ಯೆ ಯಾಗಿತ್ತು. ಹೀಗಾಗಿ ಮುಮ್ಮಡಿ ಸಿಂಗೆಯನು ಹೆಚ್ಚಾಗಿ ಸೇವುಣರ ದಾಳಿಯನ್ನು ಎದುರಿಸ ಬೇಕಾಯಿತು.

ಮೊದಲಿಗೆ, ಮುಮ್ಮಡಿ ಸಿಂಗೆಯನ ರಾಜಧಾನಿ ಯಾವುದು ಎಂಬುದನ್ನು ಕುರಿತಂತೆ ಲಭ್ಯವಿರುವ ಮಾಹಿತಿಗಳನ್ನು ಈ ಮುಂದೆ ಪರಿಶೀಲಿಸಲಾಗುವುದು. ಸಿಂಗೆಯನು ಮೊದಲು ಹನೆಯದೆರೆಯಲ್ಲಿ ನೆಲಸಿ ಆಳ್ವಿಕೆ ನಡೆಸಿದನೆಂದು ಗಂಗಯ್ಯನ ‘ಚೆನ್ನರಾಮನ ಸಾಂಗತ್ಯ’ ತಿಳಿಸುತ್ತದೆ. ಇಂದಿನ ಮೊಳಕಾಲ್ಮೂರು ತಾಲ್ಲೂಕಿನ ಬ್ರಹ್ಮಗಿರಿ ಸಮೀಪದಲ್ಲಿ ಪಾಳುಬಿದ್ದಿರುವ ಹನೆಯ ಗ್ರಾಮವನ್ನು ಹನೆಯದೆರೆ ಎಂದು ಗುರುತಿಸಿದ್ದಾರೆ. ಹನೆಯದೆರೆ ಹೊಯ್ಸಳರ ಕಾಲದಿಂದಲೂ ಪ್ರಸಿದ್ಧವಾಗಿದ್ದು, ನಿಡಗಲ್ಲು ಚೋಳರ ರಾಜಧಾನಿಯಾಗಿತ್ತು. ಸಿ.ಎಸ್. ಪಾಟೀಲರು ತಮ್ಮ ಲೇಖನದಲ್ಲಿ ಹನೆಯವನ್ನು ಕುರಿತು ವಿವರವಾಗಿ ಚರ್ಚಿಸಿದ್ದಾರೆ (Patil 1991:192). ಆದರೆ ಹನೆಯದೆರೆ ಮುಮ್ಮಡಿ ಸಿಂಗೆಯನ ರಾಜಧಾನಿಯಾಗಿತ್ತು ಎಂದು ಹೇಳುವ ಯಾವುದೇ ಶಾಸನಾಧಾರವಿಲ್ಲ. ಆದರೆ ಹನೆಯದೆರೆ ಸಿಂಗೆಯನ ರಾಜ್ಯದಲ್ಲಿತ್ತೆಂದು ಹೇಳಬಹುದು. ಏಕೆಂದರೆ ಹನೆಯದೆರೆ ಸಿಂಗೆಯನ ವಶದಲ್ಲಿದ್ದ ದೊರವಾಡಿಗೆ ಸಮೀಪದಲ್ಲಿತ್ತು. ದೊರವಾಡಿ ಸಿಂಗೆಯನ ರಾಜ್ಯದಲ್ಲಿದ್ದ ಮತ್ತೊಂದು ಮುಖ್ಯ ಸ್ಥಳ. ಇದು ಕುರುಗೋಡು ನಾಡಿನಲ್ಲಿತ್ತು. ದೊರೆವಾಡಿಯನ್ನು ಇಂದಿನ ಸೊಂಡೂರು ತಾಲ್ಲೂಕಿನ ದರೋಜಿ ಎಂದು ಗುರುತಿಸಲಾಗಿದೆ (Patil 1991:193). ಕ್ರಿ.ಶ. ೧೨೮೦ರ ವೇಳೆಗಾಗಲೇ ದೊರವಾಡಿ ಮುಮ್ಮಡಿ ಸಿಂಗೆಯನ ವಶದಲ್ಲಿತ್ತು (EC VII : Channagiri 24). ಇದನ್ನು ದೊರೆವಾಡಿ ಮೇಲಿನ ಕ್ರಿ.ಶ.೧೨೮೦ ಮತ್ತು ೧೨೮೨ರ ಸೇವುಣರ ಆಕ್ರಮಣಗಳು ಪುಷ್ಟಿಕರಿಸುತ್ತವೆ. ಅಲ್ಲದೆ ದೊರೆವಾಡಿಯು ಸಿಂಗೆಯನ ಮುಖ್ಯ ಆಡಳಿತ ಕೇಂದ್ರವಾಗಿತ್ತೆಂದು ಸ್ಪಷ್ಟವಾಗುವುದು. ಈ ಯುದ್ಧಗಳಲ್ಲಿ ಗೆದ್ದ ಸಿಂಗೆಯನು ಮುಂದೆ ಕುಮ್ಮಟದುರ್ಗವನ್ನು ವಶಪಡಿಸಿಕೊಂಡು, ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡಿರಬೇಕು. ಮುಮ್ಮಡಿ ಸಿಂಗೆಯನು ಕುಮ್ಮಟವನ್ನು ರಾಜಧಾನಿಯಾಗಿ ಮಾಡಿಕೊಂಡು ದೊರೆವಾಡಿ ನಾಡನ್ನು ಆಳುತ್ತಿದ್ದನೆಂಬ ಆರ್.ಎಸ್. ಪಂಚಮುಖಿಯವರ ಅಭಿಪ್ರಾಯ ಸಮಂಜಸವಾಗಿದೆ (Patil 1991:193).

ಕುಮ್ಮಟದುರ್ಗ, ಕಲ್ಯಾಣ ಚಾಲುಕ್ಯರ ಕಾಲದ ಶಾಸನಗಳಲ್ಲಿ ಉಲ್ಲೇಖಗೊಂಡಿದೆ. ಹೊಯ್ಸಳ ವಿಷ್ಣುವರ್ಧನ ವಶಪಡಿಸಿಕೊಂಡ ಕೋಟೆಗಳಲ್ಲಿ ಕುಮ್ಮಟದುರ್ಗವು ಸಹ ಒಂದು. ಇಲ್ಲಿರುವ ಜೈನ ಬಸದಿ ಮತ್ತು ಜೈನರ ವೀರಗಲ್ಲುಗಳು, ಕುಮ್ಮಟದುರ್ಗವು ಮೊದಲಿಗೆ ಜೈನಧರ್ಮದ ನೆಲೆಯಾಗಿತ್ತೆಂಬ ಸೂಚನೆ ನೀಡುತ್ತವೆ. ಮುಮ್ಮಡಿ ಸಿಂಗೆಯನು ಕುಮ್ಮಟದುರ್ಗವನ್ನು ಆಕ್ರಮಿಸಿದ ಸಂದರ್ಭದಲ್ಲಿ ಇಲ್ಲಿನ ಜೈನಧರ್ಮ ಅವನತಿಗೊಂಡಿರ ಬಹುದು. ಕುಮಾರರಾಮನ ಸಾಂಗತ್ಯಗಳಲ್ಲೂ ಕುಮ್ಮಟದುರ್ಗವನ್ನು ವಿಧವಿಧವಾಗಿ ವರ್ಣಿಸಲಾಗಿದೆ. ವಿಜಯನಗರಕ್ಕೆ ಭೇಟಿ ನೀಡಿದ್ದ ನ್ಯೂನಿಜನು ಪ್ರಸ್ತಾಪಿಸಿರುವ ‘ಕ್ರಿನ್ಮಟ’ ಕುಮ್ಮಟವೆಂದು ಎಂ.ಎಚ್.ರಾಮಶರ್ಮ ಗುರುತಿಸುತ್ತಾರೆ. ಸಿ.ಎಸ್.ಪಾಟೀಲರು ಕುಮ್ಮಟ ದುರ್ಗವನ್ನು ಕುರಿತು ವಿವರವಾದ ಲೇಖನವನ್ನು ಪ್ರಕಟಿಸಿದ್ದಾರೆ (Patil : 1991: 199-215). ಹೀಗೆ ಕುಮ್ಮಟದುರ್ಗ ಕ್ರಿ.ಶ. ಸುಮಾರು ಹನ್ನೊಂದನೆಯ ಶತಮಾನದಿಂದಲೂ ಪ್ರಾಮುಖ್ಯತೆ ಪಡೆದ ಗಿರಿದುರ್ಗವಾಗಿದೆ. ಪ್ರಾಕೃತಿಕವಾಗಿ ರಕ್ಷಣೆ ಪಡೆದ ಇದು ಸಿಂಗೆಯನ ರಾಜಧಾನಿ ಯಾಗಿದ್ದು, ಮುಂದೆ ಈತನ ಮಗ ಕಂಪಿಲದೇವನ ಕಾಲಕ್ಕೂ ರಾಜಧಾನಿಯಾಗಿ ಮುಂದುವರಿ ಯುತ್ತದೆ.

ಹೊಯ್ಸಳರಿಗೂ ಮತ್ತು ಸೇವುಣರಿಗೂ ಮೊದಲಿನಿಂದಲೂ ಆಗಾಗ್ಗೆ ಕದನಗಳು ನಡೆಯುತ್ತಿದ್ದವು. ಈ ಎರಡೂ ರಾಜ್ಯಗಳ ನಡುವೆ ಇದ್ದ ಮುಮ್ಮಡಿ ಸಿಂಗೆಯನು ಸೇವುಣರ ರಾಜ್ಯ ವಿಸ್ತರಣೆಗೆ ಅಡ್ಡಿಯಾಗಿದ್ದನು. ಸೇವುಣರ ಮುಖ್ಯ ಗುರಿ, ಹೊಯ್ಸಳ ರಾಜ್ಯದ ಮೇಲೆ ದಾಳಿ ಮಾಡಿ ರಾಜ್ಯವಿಸ್ತರಣೆ ಮಾಡುವುದಾಗಿತ್ತು. ಇದಕ್ಕಾಗಿ ಸಿಂಗೆಯನನ್ನು ಬಗ್ಗುಬಡಿಯು ವುದು ಸೇವುಣರಿಗೆ ಅನಿವಾರ್ಯವಾಗಿತ್ತು. ಗಂಗಯ್ಯನ ‘ಚೆನ್ನರಾಮನ ಸಾಂಗತ್ಯ’ದಲ್ಲಿ ದೇವಗಿರಿಯಿಂದ ಬಂದ ಮುಮ್ಮಡಿ ಸಿಂಗೆಯನು ಹನೆಯದೆರೆಯಲ್ಲಿ ನೆಲಸಿದನೆಂದು ಉಲ್ಲೇಖವಿದೆ. ಸಾಂಗತ್ಯದ ಈ ಮಾಹಿತಿಯನ್ನು ನಂಬುವುದಾದರೆ, ದೇವಗಿರಿಯಿಂದ ಬಂದ ಮುಮ್ಮಡಿಸಿಂಗನು ಸೇವುಣರ ವಿರುದ್ಧ ತಿರುಗಿಬಿದ್ದು, ಆಗ ಈತನನ್ನು ಶಿಕ್ಷಿಸಲು ಸೇವುಣರ ದಾಳಿ ನಡೆದಿರಬಹುದೆ? ಆದರೂ ಸೇವುಣರ ದಾಳಿಗೆ ಇದು ಮುಖ್ಯ ಕಾರಣವಲ್ಲ. ಕಾರಣ ಏನೇ ಇದ್ದರೂ ಎರಡು ರಾಜ್ಯಗಳ ಗಡಿಭಾಗದಲ್ಲಿದ್ದ, ಮುಮ್ಮಡಿ ಸಿಂಗೆಯನು ಹೆಚ್ಚಾಗಿ ಸೇವುಣರ ದಾಳಿಯನ್ನು ಎದುರಿಸಬೇಕಾಯಿತು.

ಮುಮ್ಮಡಿ ಸಿಂಗೆಯನ ಹೆಸರನ್ನು ಮೊದಲ ಬಾರಿಗೆ ಹಿರೇಕೋಗಿಲೂರಿನ ಶಾಸನದಲ್ಲಿ ಕಾಣುತ್ತೇವೆ (EC VII : Channagiri 24). ಕ್ರಿ.ಶ. ೧೨೮೦ರಲ್ಲಿ ಸೇವುಣ ರಾಮಚಂದ್ರನ ಮಂತ್ರಿ ಮತ್ತು ರಾಯದಂಡನಾಥ ಚಾವುಂಡರಸನು ದೊರೆವಾಡಿಯಲ್ಲಿದ್ದ ಮುಮ್ಮಡಿ ಸಿಂಗೆಯನ ಮೇಲೆ ದಂಡೆತ್ತಿ ಬರುತ್ತಾನೆ. ಈ ಯುದ್ಧದಲ್ಲಿ ಚಾವುಂಡರಸ ಮಡಿದನು (ಅದೇ). ಸೇವುಣ ಸೈನ್ಯ ಏನನ್ನು ಸಾಧಿಸಲಾರದೆ ಬರಿಗೈಯಲ್ಲಿ ಹಿಂದಿರುಗಿತು. ಈ ಯುದ್ಧದಿಂದ ಸ್ಫೂರ್ತಿಗೊಂಡ ಮುಮ್ಮಡಿ ಸಿಂಗೆಯನು ರಾಜ್ಯವಿಸ್ತರಣೆಯಲ್ಲಿ ತೊಡಗಿದಂತೆ ಕಂಡುಬರುತ್ತದೆ. ಕ್ರಿ.ಶ. ೧೨೮೧ರಲ್ಲಿ ಹೊಯ್ಸಳ ರಾಜ್ಯದ ಬೆಮ್ಮತೂರಕಲ್ಲಿನ (ಚಿತ್ರದುರ್ಗ) ಮೇಲೆ ದಾಳಿ ಮಾಡುತ್ತಾನೆ (EC XI : Hiriyur 86). ಬೆಮ್ಮತೂರುಕಲ್ಲು, ಹೊಯ್ಸಳರ ಪ್ರಾಂತ್ಯಾಡಳಿತದ ಕೇಂದ್ರವಾಗಿತ್ತು. ಇದೇ ವರ್ಷ ಹೊಯ್ಸಳರ ಕಡೆಯ ಸಂಗಯ್ಯನಾಯಕನ ಮೇಲೆ ವೇತಂಡಕಲ್ಲು ಎಂಬಲ್ಲಿ ಯುದ್ಧ ಮಾಡುತ್ತಾನೆ (EC XI : Holalkere 37). ಈ ಯುದ್ಧಗಳ ಫಲಿತಾಂಶ ತಿಳಿಯುವುದಿಲ್ಲ. ಕ್ರಿ.ಶ. ೧೨೮೨-೮೩ರಲ್ಲಿ ಸೇವುಣಸೈನ್ಯ ಕೊಂಕಣ ಮಹಾಮಂಡಲೇಶ್ವರನಾದ ಕನ್ನರದೇವನ ನೇತೃತ್ವದಲ್ಲಿ ದೊರವಾಡಿಯ ಮೇಲೆ ದಾಳಿ ಮಾಡಿತು (MAR 1935:114-117). ಈ ಯುದ್ಧದಲ್ಲಿ ಸೇವುಣರ ಕಡೆಯ ಮಹಾಪ್ರಧಾನ ವನದೇವರಸ ಮಡಿಯುತ್ತಾನೆ. ಇವನು ಚಾವುಂಡರಸನ ದೊಡ್ಡಪ್ಪನ ಮಗ, ಶತ್ರುಗಳ ಬೆನ್ನಟ್ಟಿದ ಮುಮ್ಮಡಿಸಿಂಗ ನಾಗಾವಿಕಳಸಾಪುರದೆಡೆಯಲ್ಲಿ ಚಾವುಂಡರಸನ ಮೈದುನ ಗೋಪರಸನನ್ನು ಕೊಲ್ಲುತ್ತಾನೆ (EC VII : Channagiri, 23). ಇದು ದೇವಗಿರಿಯ ಸೇವುಣರಿಗಾದ ಎರಡನೆಯ ಸೋಲು. ಈ ಯುದ್ಧಗಳು ಮುಮ್ಮಡಿ ಸಿಂಗೆಯನ ಶೌರ್ಯಪ್ರತಾಪಗಳಿಗೆ ಕೈಗನ್ನಡಿಯಂತಿವೆ. ತನ್ನ ಸಾಮರ್ಥ್ಯದ ಅರಿವಿದ್ದ ಮುಮ್ಮಡಿ ಸಿಂಗೆಯನು ಇದೇ ಸಂದರ್ಭದಲ್ಲಿ ತುಂಗಭದ್ರಾ ನದಿ ದಾಟಿ ಕುಮ್ಮಟದುರ್ಗವನ್ನು ಹಿಡಿದು ರಾಜ್ಯಧಾನಿಯನ್ನಾಗಿ ಮಾಡಿಕೊಂಡಂತೆ ಕಂಡುಬರುತ್ತದೆ. ಏಕೆಂದರೆ ಕ್ರಿ.ಶ. ೧೨೮೨ರಲ್ಲಿ ಮೂರನೆ ಬಾರಿಗೆ ಸೇವುಣ ಸೈನ್ಯವು ಕುಮ್ಮಟದ ಮೇಲೆ ದಾಳಿ ಮಾಡುತ್ತದೆ (ARIE1935-36 : E-23). ಈ ಯುದ್ಧದಲ್ಲಿ ಮುಮ್ಮಡಿ ಸಿಂಗೆಯ ಸೋತು ಸೇವುಣರಿಗೆ ಸಾಮಂತನಾಗುತ್ತಾನೆ (Desai 1981: 244). ಇದರಿಂದ ಸೇವುಣರಿಗೆ ಅನುಕೂಲ ವಾಯಿತು. ಏಕೆಂದರೆ ಹೊಯ್ಸಳರ ವಿರುದ್ಧ ಹೋರಾಡಲು ಕುಮ್ಮಟದವರ ಸಹಾಯ ಅನಿವಾರ್ಯವಾಗಿತ್ತು. ಹಾಗಾಗಿ ಸೋತ ಮುಮ್ಮಡಿ ಸಿಂಗೆಯನಾಯಕನನ್ನು ಸಾಮಂತನನ್ನಾಗಿ ಮಾಡಿಕೊಂಡು ಗೌರವದಿಂದ ನಡೆಸಿಕೊಂಡರು. ಬಹುಶಃ ಈ ಗೌರವದ ಸ್ಮರಣೆಯಿಂದಲೆ ಮುಂದೆ ಕಂಪಿಲದೇವನು ಸೇವುಣರ ಪರವಾಗಿ ಹೊಯ್ಸಳರ ವಿರುದ್ಧ ಅನೇಕ ಯುದ್ಧಗಳಲ್ಲಿ ಭಾಗವಹಿಸಿದನೆಂದು ಗ್ರಹಿಸಬಹುದು. ಕ್ರಿ.ಶ. ೧೨೮೨ರ ನಂತರ ಈತನ ಹೆಸರು ನಮಗೆ ದೊರೆಯುವುದಿಲ್ಲ. ಈ ವೇಳೆಗೆ ಇವನ ರಾಜ್ಯ ಚಿತ್ರದುರ್ಗ, ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳ ಭಾಗಗಳನ್ನು ಒಳಗೊಂಡಿತ್ತು. ಮುಮ್ಮಡಿ ಸಿಂಗನು ತನ್ನ ಸ್ವತಂತ್ರ ಅಸ್ತಿತ್ವಕ್ಕಾಗಿ ಹೊಯ್ಸಳ ಮತ್ತು ಸೇವುಣರ ಬೃಹತ್ ಶಕ್ತಿಯ ವಿರುದ್ಧ ಹೋರಾಡಬೇಕಾಯಿತು. ಆದರೆ ಅಂತಿಮವಾಗಿ ಸೇವುಣರ ಸಾಮಂತನಾಗುತ್ತಾನೆ. ಆದರೂ ಮುಂದೆ ದೆಹಲಿ ಸುಲ್ತಾನರ ದಾಳಿಗಳನ್ನು ಪ್ರಬಲವಾಗಿ ಎದುರಿಸಿ ಹಿಮ್ಮೆಟ್ಟಿಸಿದ ವೀರಮನೆತನದ ಮೂಲಪುರುಷನೆಂಬ ಹೆಗ್ಗಳಿಕೆಗೆ ಪಾತ್ರನಾದನು.

ಮುಮ್ಮಡಿ ಸಿಂಗೆಯ ನಾಯಕನ ಹೆಂಡತಿ ಮಾದನಾಯಕಿತಿ. ಇವರು ತಮಗೆ ಹುಟ್ಟಿದ ಗಂಡುಮಗುವಿಗೆ ಕಂಪಿಲಿಯ ಸೋಮೇಶ್ವರನ ಹೆಸರಿನಲ್ಲಿ ಕಂಪಿಲದೇವನೆಂದು ಹೆಸರಿಡುತ್ತಾರೆ. ಕಂಪಿಲದೇವನಿಗೆ ಖಂಡೆಯರಾಯ ಎಂಬ ಇನ್ನೊಂದು ಹೆಸರಿತ್ತು. ಸ್ವಂತ ಪರಿಶ್ರಮದಿಂದ ರಾಜ್ಯಕಟ್ಟಿದ ಮುಮ್ಮಡಿ ಸಿಂಗೆಯನಾಯಕನು ಕ್ರಿ.ಶ. ೧೨೮೨ರಿಂದ ೧೩೦೦ ನಡುವೆ ತೀರಿಕೊಂಡಿರಬೇಕು. ಮುಮ್ಮಡಿ ಸಿಂಗೆಯನಾಯಕನು ಜೈನಧರ್ಮದ ವಿರೋಧಿಯಾಗಿದ್ದನು. ಲಂಡನ್ನಿನ ವಸ್ತು ಸಂಗ್ರಹಾಲಯದಲ್ಲಿರುವ ಪಾರ್ಶ್ವನಾಥ ಶಿಲ್ಪದ ಪೀಠದಲ್ಲಿರುವ ಕನ್ನಡ ಶಾಸನವು, ಮುಮುಡಿ ಸಿಂಗನ ಬಾಧೆಯಿಂದ ಎರಂಬರಗೆಯ ಜೈನಧರ್ಮ ಕೆಟ್ಟಿತೆಂದು ತಿಳಿಸುತ್ತದೆ (ಪಾಟೀಲ ೧೯೯೮: ೯೪). ಇವನು ಶೈವಪಂಥದಲ್ಲಿ ನಂಬಿಕೆಯುಳ್ಳವನಾಗಿದ್ದನು. ಹಾಗಾಗಿ ಕಂಪಿಲದೇವನು ಹಂಪಿಯ ಹೇಮಕೂಟದಲ್ಲಿ ತನ್ನ ತಂದೆ ಮುಮ್ಮಡಿ ಸಿಂಗೆಯನಾಯಕ, ತಾಯಿ ಮಾದನಾಯಕಿತಿ ಮತ್ತು ಪೆರುಮೆಯನಾಯಕರ ಹೆಸರಿನಲ್ಲಿ ಲಿಂಗಗಳನ್ನು ಪ್ರತಿಷ್ಠಾಪಿಸುತ್ತಾನೆ. ಮುಂದೆ ಅಧಿಕಾರಕ್ಕೆ ಬಂದ ಕಂಪಿಲದೇವನು ತಂದೆಯಿಂದ ಬಂದ ರಾಜ್ಯವನ್ನು ಮತ್ತಷ್ಟು ವಿಸ್ತರಿಸಿ ಸಮರ್ಥವಾಗಿ ಆಳಿದನು.