ಕಂಪಿಲದೇವ ತನ್ನ ತಂದೆ ಮುಮ್ಮಡಿ ಸಿಂಗೆಯನಾಯಕನ ಮರಣಾನಂತರ ಕುಮ್ಮಟ ರಾಜ್ಯದ ಅಧಿಕಾರ ವಹಿಸುತ್ತಾನೆ. ತಂದೆಯಂತೆ ಕಂಪಿಲದೇವನು ಸಹ ದೇವಗಿರಿ ಸೇವುಣರ ಸಾಮಂತನಾಗಿ ಮುಂದುವರಿಯುತ್ತಾನೆ. ಈ ಅವಧಿಯಲ್ಲಿ ಹೊಯ್ಸಳರೊಡನೆ ಹೆಚ್ಚಿನ ಯುದ್ಧಗಳನ್ನು ಮಾಡುತ್ತಾನೆ. ಈತ ಕಂಪಿಲಿ ಸೋಮೇಶ್ವರದೇವರ ವರಪ್ರಸಾದದಿಂದ ಹುಟ್ಟಲಾಗಿ ಕಂಪಿಲದೇವನೆಂಬ ಹೆಸರು ಪಡೆದನೆಂದು ಹೇಳಲಾಗಿದೆ. ಕಂಪಿಲದೇವನ ಮತ್ತೊಂದು ಹೆಸರು ಖಂಡೆಯರಾಯ. ಈ ಎರಡೂ ಹೆಸರುಗಳು ಕಂಪಿಲಿ ಸೋಮೇಶ್ವರನಿಗೆ ಸಂಬಂಧಿಸಿವೆ. ಕಲ್ಯಾಣ ಚಾಲುಕ್ಯರ ಕಾಲದಿಂದಲೂ ಕಂಪಿಲಿ ಪ್ರಮುಖ ಪಟ್ಟಣ. ಸೋಮೇಶ್ವರ ಈ ಪಟ್ಟಣದ ಮುಖ್ಯ ದೇವರು. ಇವನನ್ನು ಕಂಪಿಲದೇವನೆಂದು ಸಹ ಕರೆಯಲಾಗುತ್ತದೆ. ಹಾಗೆಯೇ ಕತ್ತಿಯನ್ನು ಹಿಡಿದು ರೌದ್ರಭಾವವನ್ನು ವ್ಯಕ್ತಪಡಿಸುವ ಸೋಮೇಶ್ವರನನ್ನು ಖಂಡೆಯರಾಯ ಎಂದು ಸಹ ಕರೆಯಲಾಗಿದೆ. ಹೀಗಾಗಿ ಮುಮ್ಮಡಿ ಸಿಂಗೆಯನು ತನ್ನ ಮಗನಿಗೆ, ಕಂಪಿಲಿ ಸೋಮೇಶ್ವರದೇವರಿಗೆ ಸಂಬಂಧಿಸಿದ ಕಂಪಿಲದೇವ ಮತ್ತು ಖಂಡೆಯರಾಯ ಎಂಬ ಎರಡೂ ಹೆಸರುಗಳನ್ನು ಇಟ್ಟಿರಬಹುದು. ಕೂಡಲಿಯ ವೀರಗಲ್ಲು ಶಾಸನವೊಂದರಲ್ಲಿ ಬಿರುದಾವಳಿಗಳನ್ನು ಹೇಳುವಾಗ ಮೇಲಿನ ಎರಡೂ ಹೆಸರುಗಳನ್ನು ಉಲ್ಲೇಖಿಸಲಾಗಿದೆ (MAR 1923, No.121). ಹರಿಹರ ಶಾಸನದಲ್ಲಿ ಮುಮ್ಮಡಿ ಸಿಂಗೆಯನಾಯಕನ ಮಗ ಖಂಡೆಯರಾಯ ಎಂದಿದೆ (EC XI, Davanagera 26). ಹೀಗೆ ಕಂಪಿಲದೇವನಿಗೆ ಖಂಡೆಯರಾಯ ಎಂಬ ಇನ್ನೊಂದು ಹೆಸರಿತ್ತೆಂದು ಸ್ಪಷ್ಟವಾಗುತ್ತದೆ.

ಕಂಪಿಲದೇವನನ್ನು ಶಾಸನಗಳಲ್ಲಿ ವೀರ ಕಂಪಿಲದೇವನೆಂದು, ಸಾಂಗತ್ಯಗಳಲ್ಲಿ ಕಂಪಿಲರಾಯನೆಂದು ಕರೆಯಲಾಗಿದೆ. ಆ ಕಾಲದ ಮುಸ್ಲಿಂ ಬರಹಗಾರರು ಕಂಬಿಲದರಾಯ ಎಂದು ಕರೆದಿದ್ದು, ಅದನ್ನು ಕಂಪಿಲದ ರಾಜ ಎಂದು ಇಂಗ್ಲೀಷಿಗೆ ಅನುವಾದ ಮಾಡಿದರು. ಈ ಅನುವಾದವನ್ನು ನಂಬಿ ಕಂಪಿಲಿಯು ಕಂಪಿಲದೇವನ ರಾಜಧಾನಿ ಎಂದು ತಿಳಿಯಲಾಗಿತ್ತು. ಆದರೆ ಕಂಪಿಲಿಯು ರಾಜಧಾನಿಯಾಗಿತ್ತು ಎಂದು ಹೇಳುವ ಯಾವುದೇ ಆಧಾರಗಳಿಲ್ಲ. ಕುಮಾರರಾಮನ ಸಾಂಗತ್ಯಗಳು ಕುಮ್ಮಟದುರ್ಗ ಮತ್ತು ಹೊಸಮಲೆದುರ್ಗಗಳೆರಡು ಕಂಪಿಲರಾಯನ ರಾಜಧಾನಿಗಳಾಗಿದ್ದವೆಂದು ತಿಳಿಸುತ್ತವೆ. ಕಂಪಿಲನ ತಂದೆ ಮುಮ್ಮಡಿ ಸಿಂಗೆಯನ ಕಾಲದಲ್ಲೇ ಕುಮ್ಮಟದುರ್ಗ ರಾಜಧಾನಿಯಾಗಿತ್ತೆಂಬುದನ್ನು ಹಿಂದಿನ ಅಧ್ಯಾಯದಲ್ಲಿ ವಿವರಿಸಲಾಗಿದೆ. ಅಲ್ಲದೆ ಕುಮ್ಮಟದುರ್ಗದಲ್ಲಿ ದೊರೆತ ಎರಡೂ ವೀರಗಲ್ಲು ಶಾಸನಗಳು ಕಂಪಿಲದೇವ ಕುಮ್ಮಟದಿಂದ ರಾಜ್ಯವಾಳುತ್ತಿದ್ದನೆಂದು ಸ್ಪಷ್ಟಪಡಿಸಿವೆ (Patil 1991: 190). ಹಾಗೆಯೆ ಸಾಂಗತ್ಯ ಮತ್ತು ಶಾಸನಗಳಲ್ಲಿನ ಮಾಹಿತಿಗಳನ್ನಾಧರಿಸಿ ಇಂದಿನ ಸೊಂಡೂರು ತಾಲ್ಲೂಕಿನ ರಾಮಘಡವು ಹೊಸಮಲೆದುರ್ಗವೆಂದು, ಇದು ಕಂಪಿಲದೇವನ ಮತ್ತೊಂದು ರಾಜಧಾನಿಯೆಂದು ವಿದ್ವಾಂಸರು ಗುರುತಿಸಿದ್ದಾರೆ (Patil 1991 :192-193). ಹೀಗೆ ಕಂಪಿಲನು ರಕ್ಷಣಾ ದೃಷ್ಟಿಯಿಂದ ಸೊಂಡೂರು ಅರಣ್ಯಪ್ರದೇಶದಲ್ಲಿ ಹೊಸದಾಗಿ ಗಿರಿದುರ್ಗವನ್ನು ನಿರ್ಮಿಸಿ ಅದನ್ನು ಹೊಸಮಲೆದುರ್ಗವೆಂದು ಕರೆದು, ತನ್ನ ಮತ್ತೊಂದು ರಾಜಧಾನಿಯನ್ನಾಗಿ ಮಾಡಿಕೊಂಡಿದ್ದನೆಂದು ಹೇಳಬಹುದು. ಆದರೂ ಕುಮ್ಮಟದುರ್ಗವು ಮುಖ್ಯ ರಾಜಧಾನಿಯಾಗಿತ್ತು. ಹೊಸಮಲೆಯ ರಾಮನಾಥವೊಡೆಯನ (ಕುಮಾರರಾಮ) ನೆನಪಿಗೆ ರಾಮಘಡದಲ್ಲಿ ಕಟ್ಟಿಸಿದ ರಾಮನಾಥ ದೇವಾಲಯದಿಂದಾಗಿ ಹೊಸಮಲೆದುರ್ಗ ನಂತರದ ಕಾಲದಲ್ಲಿ ರಾಮಘಡವೆಂಬ ಹೆಸರನ್ನು ಪಡೆಯಿತು.

ಕಂಪಿಲದೇವನು ಸೇವುಣರ ರಾಮಚಂದ್ರ ಮತ್ತು ಹೊಯ್ಸಳರ ಮೂರನೆಯ ಬಲ್ಲಾಳನ ಸಮಕಾಲೀನನಾಗಿದ್ದ. ಸೇವುಣರ ಸಾಮಂತನಾಗಿದ್ದ ಇವನು, ಹೊಯ್ಸಳರ ವಿರುದ್ಧ ಅನೇಕ ಯುದ್ಧಗಳನ್ನು ಮಾಡುತ್ತಾನೆ. ಕಂಪಿಲದೇವನು ಖಂಡೆಯರಾಯನೆಂಬ ಹೆಸರಿನಿಂದ ಮೊದಲ ಬಾರಿಗೆ ಕ್ರಿ.ಶ. ೧೩೦೦ರ ಹರಿಹರ ಶಾಸನದಲ್ಲಿ ಕಾಣಿಸಿಕೊಳ್ಳುತ್ತಾನೆ. ಕಂಪಿಲದೇವನು, ಹರಿಹರದ ಬ್ರಾಹ್ಮಣರಿಗೆ ಈ ಮೊದಲು ಸೇವುಣದೊರೆ ಕೃಷ್ಣಕಂದರನು ನೀಡಿದ್ದ ಹರಿಹರ ದತ್ತಿಯನ್ನು ನವೀಕರಿಸುತ್ತಾನೆ (EC XI, Davanagere 26). ಇದರಿಂದ ಕಂಪಿಲದೇವನು ಸೇವುಣರಿಗೆ ಸಾಮಂತನಾಗಿದ್ದು, ಕ್ರಿ.ಶ. ೧೩೦೦ರ ವೇಳೆಗೆ ಚಿತ್ರದುರ್ಗ ಜಿಲ್ಲೆಯ ಕೆಲವು ಭಾಗಗಳನ್ನು ಆಳುತ್ತಿದ್ದನೆಂದು ತಿಳಿದುಬರುತ್ತದೆ.

ಕ್ರಿ.ಶ. ೧೩೦೩ರಲ್ಲಿ ಬೆಮ್ಮತ್ತೂರುದುರ್ಗ (ಚಿತ್ರದುರ್ಗ)ದ ಪ್ರಾಂತ್ಯಾಧಿಕಾರಿಯಾಗಿ ಹೊಯ್ಸಳರ ಸೋಮೆಯ ದಂಡನಾಯಕ ಆಡಳಿತ ನಡೆಸುತ್ತಿದ್ದನು. ಇವನು ಹೊಯ್ಸಳ ಮೂರನೆಯ ಬಲ್ಲಾಳನ ಮೈದುನ. ಇದೇ ವರ್ಷ ಕಂಪಿಲದೇವನು ಸೇವುಣರ ಸೈನ್ಯದ ನಾಯಕತ್ವ ವಹಿಸಿ ಹೊಳಲ್ಕೆರೆಯ ಮೇಲೆ ದಾಳಿ ಮಾಡುತ್ತಾನೆ (EC XV, Holenarasipura 83). ಸೋಮೆಯ ದಂಡನಾಯಕನು ಕಂಪಿಲನ ದಾಳಿಯನ್ನು ಎದುರಿಸಿ ಯುದ್ಧ ಮಾಡುತ್ತಾನೆ. ಇದೇ ಘಟನೆಯನ್ನು ಚಿಟ್ಟನಹಳ್ಳಿ ಶಾಸನವು ಪ್ರಸ್ತಾಪಿಸಿದೆ (EC VI, Krishnarajapet 100). ಜೇನುಕಲ್ಲಿನ ಕ್ರಿ.ಶ. ೧೩೦೩ರ ಶಾಸನವು ಸಹ ಈ ಮೇಲಿನ ಯುದ್ಧವನ್ನು ಉಲ್ಲೇಖಿಸುತ್ತದೆ. ಈ ಯುದ್ಧದಲ್ಲಿ ಹೊಯ್ಸಳರ ಕಡೆಯ ಕೆಂದಾರಿ ದೇವರಸನ ಭಾವಮೈದುನನಾದ ಬಸವಪ್ಪನು ಮಡಿಯುತ್ತಾನೆ (EC XI, Holalkere 106). ಕಂಪಿಲದೇವನ ಈ ದಾಳಿಯನ್ನು ಹೆಚ್ಚು ಶಾಸನಗಳು ಉಲ್ಲೇಖಿಸಿವೆ. ಇದರಿಂದಾಗಿ ಇದೊಂದು ಮಹತ್ವದ ಯುದ್ಧವಾಗಿರಬಹುದು. ಈ ಯುದ್ಧದ ಫಲಿತಾಂಶ ತಿಳಿದುಬರುವುದಿಲ್ಲ. ಹುಲ್ಲೂರು ಶ್ರೀನಿವಾಸ ಜೋಯಿಸರು, ಈ ಯುದ್ಧದಲ್ಲಿ ಹೊಯ್ಸಳರು ಸೋತು, ಕಪ್ಪಕಾಣಿಕೆಯನ್ನು ಕೊಡಲು ಒಪ್ಪಿಕೊಂಡಂತೆ ಕಾಣುತ್ತದೆ ಎಂದು ಅಭಿಪ್ರಾಯಪಡುತ್ತಾರೆ. ಆದರೆ ಈ ಅಭಿಪ್ರಾಯಕ್ಕೆ ಸಮಂಜಸವಾದ ಯಾವುದೇ ಆಧಾರವಿಲ್ಲ.

ಸೇವುಣರ ದೊರೆ ರಾಮಚಂದ್ರ ಅಷ್ಟೇನು ಸಮರ್ಥನಲ್ಲ. ಕ್ರಿ.ಶ.೧೨೯೬ರಲ್ಲಿ ಅಲ್ಲಾವುದ್ದೀನ್ ಖಿಲ್ಜಿ ದೇವಗಿರಿಯ ಮೇಲೆ ದಾಳಿ ಮಾಡುತ್ತಾನೆ (Roy1960 : 16). ಆಗ ರಾಮಚಂದ್ರ ಶಾಂತಿ ಒಪ್ಪಂದ ಮಾಡಿಕೊಂಡು ದೆಹಲಿ ಸುಲ್ತಾನನಿಗೆ ಕಪ್ಪಕಾಣಿಕೆಯನ್ನು ಸಲ್ಲಿಸುತ್ತಾನೆ. ಜೊತೆಗೆ ಅತ್ಯಧಿಕ ಸಂಖ್ಯೆಯಲ್ಲಿ ಕುದುರೆ, ಆನೆ ಮತ್ತಿತರ ಕಾಣಿಕೆಗಳನ್ನು ನೀಡುತ್ತಾನೆ. ಹೀಗೆ ಸೇವುಣರು ಚೇತರಿಸಿಕೊಳ್ಳಲಾಗದ ಮಟ್ಟಿಗೆ ದೆಹಲಿ ಸುಲ್ತಾನನ ದಾಳಿಗೆ ಬಲಿಯಾದರು. ಅಲ್ಲದೆ ಹೊಯ್ಸಳರ ಮೇಲಿನ ಯುದ್ಧಗಳಿಂದಾಗಿ ಸೇವುಣರ ಶಕ್ತಿ ಮತ್ತಷ್ಟು ಕುಸಿಯತೊಡಗಿತು. ಹೊಯ್ಸಳರಿಗಾಗಲಿ, ಸೇವುಣರಿಗಾಗಲಿ, ಕುಮ್ಮಟದ ಅರಸರಿಗಾಗಲಿ ಮುಂದೆ ಬರುವ ಮಾರಕಪ್ರಾಯವಾದ ದೆಹಲಿ ದಾಳಿಯ ಕಲ್ಪನೆಯೇ ಇರಲಿಲ್ಲ. ಇದು ದಕ್ಷಿಣ ಭಾರತದ ರಾಜನೀತಿಯ ಬೌದ್ದಿಕ ಅಭಾವವನ್ನು ಸೂಚಿಸುತ್ತದೆ. ದಕ್ಷಿಣ ಭಾರತದ ರಾಜಮನೆತನಗಳ ನಡುವಿನ ವೈಮನಸ್ಸು ದೆಹಲಿ ಸುಲ್ತಾನರ ದಾಳಿಗೆ ಸುಗಮವಾದ ಮಾರ್ಗವನ್ನು ಮಾಡಿಕೊಟ್ಟಿತ್ತು. ಕ್ರಿ.ಶ. ೧೨೯೬ರಲ್ಲಿ ದೆಹಲಿ ಸಿಂಹಾಸನಕ್ಕೆ ಬಂದ ಅಲ್ಲಾವುದ್ದೀನ ಖಿಲ್ಜಿ ದಕ್ಷಿಣಭಾರತವನ್ನು ಅತ್ಯಂತ ಸಂಪದ್ಭರಿತವಾದ ಪ್ರದೇಶವೆಂದು ಪರಿಗಣಿಸಿ ತನ್ನ ದಾಳಿಯ ಮುಖ್ಯ ಕೇಂದ್ರವನ್ನಾಗಿ ಮಾಡಿಕೊಂಡನು. ಕ್ರಿ.ಶ. ೧೩೦೭ರಲ್ಲಿ ತನ್ನ ಸೇನಾನಿ ಮಲಿಕ್ ನಾಯಿಬ್ ಕಾಫರನ ನೇತೃತ್ವದಲ್ಲಿ ದೇವಗಿರಿಯ ಮೇಲೆ ಸೈನ್ಯವನ್ನು ಕಳುಹಿಸುತ್ತಾನೆ (Roy 1960: 31). ಈ ಯುದ್ಧದಲ್ಲಿ ರಾಮಚಂದ್ರನನ್ನು ಬಂಧಿಸಿ ದೆಹಲಿಗೆ ಕರೆದೊಯ್ಯಲಾಯಿತು. ರಾಮಚಂದ್ರನ ಮಗ ಮೂರನೆಯ ಸಿಂಘಣ ಯುದ್ಧ ಭೂಮಿಯಿಂದ ಓಡಿಹೋಗುತ್ತಾನೆ. ದೆಹಲಿಯಲ್ಲಿ ರಾಮಚಂದ್ರನನ್ನು ಗೌರವಿಸಿ ದೇವಗಿರಿಗೆ ಕಳುಹಿಸಿದರು. ರಾಮಚಂದ್ರ ದೆಹಲಿಯ ಸಾಮಂತನಾಗಿ ಮುಂದುವರಿಯುತ್ತಾನೆ. ಕ್ರಿ.ಶ. ೧೩೦೯ರಲ್ಲಿ ಅಲ್ಲಾವುದ್ದೀನನು ದೇವಗಿರಿಯ ರಾಮಚಂದ್ರನ ಸಹಾಯ ಪಡೆದು, ವಾರಂಗಲ್ ಮೇಲಿನ ದಾಳಿಗೆ ಮಲಿಕ್ ನಾಯಿಬ್ ಕಾಫರನ ನೇತೃತ್ವದಲ್ಲಿ ಸೈನ್ಯವನ್ನು ಕಳಿಸುತ್ತಾನೆ. ವಾರಂಗಲ್ಲಿನ ಲೂಟಿಯ ನಂತರ, ಕ್ರಿ.ಶ. ೧೩೧೦ರಲ್ಲಿ ಮಲಿಕ್ ನಾಯಿಬ್ ಕಾಫರನು ದೆಹಲಿಗೆ ಹಿಂತಿರುಗುತ್ತಾನೆ. ಹೀಗೆ ದಕ್ಷಿಣ ಭಾರತದಲ್ಲಿ ದೇವಗಿರಿ ಮತ್ತು ವಾರಂಗಲ್ಲು ರಾಜ್ಯಗಳು ತಮ್ಮ ರಾಜಕೀಯ ವರ್ಚಸ್ಸನ್ನು ಕಳೆದುಕೊಂಡು ದುಸ್ಥಿತಿಯನ್ನು ತಲುಪಿದವು. ಉಳಿದದ್ದು ಹೊಯ್ಸಳರ ದ್ವಾರಸಮುದ್ರ. ಅಲ್ಲಾವುದ್ದೀನನ ದೃಷ್ಟಿ ಈಗ ದ್ವಾರಸಮುದ್ರದ ಮೇಲಿತ್ತು. ಇದಕ್ಕಾಗಿ ಮಲಿಕ್ ನಾಯಿಬ್ ಕಾಫರನ ನೇತೃತ್ವದಲ್ಲಿ ಸೈನ್ಯವನ್ನು ದ್ವಾರಸಮುದ್ರದ ಮೇಲಿನ ದಾಳಿಗೆ ಕಳುಹಿಸುತ್ತಾನೆ. ಈ ಸೈನ್ಯವು ಕ್ರಿ.ಶ. ೧೩೧೧ರಲ್ಲಿ ದೇವಗಿರಿಯನ್ನು ತಲುಪಿತು. ರಾಮಚಂದ್ರನ ಮುಖ್ಯ ಸೇನಾನಿ ಪರಶುರಾಮ ದಳವಾಯಿಯ ಮಾರ್ಗದರ್ಶನ ಮತ್ತು ಸಹಕಾರವನ್ನು ಪಡೆದು ದ್ವಾರಸಮುದ್ರದ ಮೇಲೆ ದಾಳಿಮಾಡಿತು. ಮೂರನೆಯ ಬಲ್ಲಾಳ ಸೋತು ತನ್ನ ಅಪರಿಮಿತ ಸಂಪತ್ತನ್ನು ದಾಳಿಕೊರನಿಗೆ ಒಪ್ಪಿಸಿದನು. ಅಲ್ಲಿಂದ ಬಲ್ಲಾಳನ ಸಹಾಯ ಪಡೆದು ಪಾಂಡ್ಯರ ರಾಜ್ಯದ ಮೇಲೆ ದಾಳಿಮಾಡುತ್ತಾನೆ. ಅಪಾರವಾದ ಸಂಪತ್ತಿನೊಂದಿಗೆ ಮಲಿಕ್ ನಾಯಿಬ್ ಕಪೂರ್ ಕ್ರಿ.ಶ. ೧೩೧೨ರಲ್ಲಿ ದೆಹಲಿಗೆ ಹಿಂತಿರುಗಿದನು (Roy1960 : 35-36). ಇದೇ ವರ್ಷ ದೇವಗಿರಿಯ ರಾಮಚಂದ್ರ ಮೃತನಾಗಲು, ನಂತರ ಅಧಿಕಾರಕ್ಕೆ ಬಂದ ಈತನ ಮಗ ಮೂರನೆಯ ಸಿಂಘಣನು, ದೆಹಲಿ ಸುಲ್ತಾನನಿಗೆ ಕಪ್ಪಕಾಣಿಕೆಯನ್ನು ನಿಲ್ಲಿಸುತ್ತಾನೆ. ಈತನನ್ನು ಶಿಕ್ಷಿಸಲು ಕ್ರಿ.ಶ. ೧೩೧೩ರಲ್ಲಿ ಮಲಿಕ್ ನಾಯಿಬ್ ಕಪೂರ್ ದೇವಗಿರಿಯ ಮೇಲೆ ದಾಳಿಮಾಡಿದನು. ಶಕ್ತಿಮೀರಿ ಹೋರಾಡಿದ ಸಿಂಘಣ ಕೊನೆಗೆ ಬಂಧಿಯಾಗಿ ಸಾವಿಗೀಡಾಗುತ್ತಾನೆ. ದೇವಗಿರಿಯನ್ನು ತನ್ನ ವಶಕ್ಕೆ ತೆಗೆದುಕೊಂಡ ಮಲಿಕ್ ನಾಯಿಬ್ ಕಪೂರ್, ಕುಮ್ಮಟದುರ್ಗದ ಮೇಲಿನ ದಾಳಿಗೆ ಮುಂದಾಗುತ್ತಾನೆ. ಈ ವೇಳೆಗಾಗಲೇ ಕಂಪಿಲದೇವ ಸೇವುಣರೊಂದಿಗಿನ ಸಂಬಂಧಗಳನ್ನು ಕಡಿದುಕೊಂಡು ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದ್ದನು. ಮಲಿಕ್ ನಾಯಿಬ್ ಕಪೂರ್ ಕ್ರಿ.ಶ ೧೩೧೫ರಲ್ಲಿ ಕುಮ್ಮಟದುರ್ಗದ ಮೇಲೆ ದಾಳಿಮಾಡಿ ಏನನ್ನು ಸಾಧಿಸಲಾರದೆ ಬರಿಗೈಯಲ್ಲಿ ದೆಹಲಿಗೆ ಹಿಂತಿರುಗುತ್ತಾನೆ.

ಇತ್ತೀಚೆಗೆ ಬೆಳಕಿಗೆ ಬಂದ ಕುಮ್ಮಟದುರ್ಗದ ಎರಡು ವೀರಗಲ್ಲು ಶಾಸನಗಳು ಮಲಿಕ್ ನಾಯಿಬ್ ಕಾಫರನ ದಾಳಿಯನ್ನು ಮತ್ತು ಇತರ ಮಹತ್ವದ ಸಂಗತಿಯನ್ನು ತಿಳಿಸುತ್ತವೆ (Patil 1991: 190). ಕ್ರಿ.ಶ. ೧೩೧೫ರಲ್ಲಿ ಕುಮ್ಮಟದಲ್ಲಿ ರಾಜ್ಯವಾಳುತ್ತಿದ್ದ ವೀರ ಕಂಪಿಲ ದೇವನ ಮೇಲೆ ಸುಲ್ತಾನನ ಸೇನೆಯು ನೇಮಿ ಎಂಬುವನ ಮುಂದಾಳತ್ವದಲ್ಲಿ ದಾಳಿ ಮಾಡಿತೆಂದು, ದಾಳಿಯಲ್ಲಿ ರಾಮನಾಯ್ಕನು ಮಡಿದನೆಂದು ತಿಳಿದುಬರುತ್ತದೆ. ಕಂಪಿಲದೇವನು ಪ್ರತಾಪಚಕ್ರವರ್ತಿ ಎಂಬ ಬಿರುದನ್ನು ಧರಿಸಿ ಕುಮ್ಮಟದುರ್ಗದಿಂದ ರಾಜ್ಯವಾಳುತ್ತಿದ್ದನೆಂದು ಸಹ ಸ್ಪಷ್ಟವಾಗುತ್ತದೆ. ಸುಲ್ತಾನನ ಸೇನಾಪತಿಯನ್ನು ನೇಮಿ ಎಂದು ಕರೆಯಲಾಗಿದೆ. ಇದೇ ಸ್ಥಳದ ಮತ್ತೊಂದು ವೀರಗಲ್ಲು ಶಾಸನ, ಕಂಪಿಲದೇವನು ಸುಲ್ತಾನನ ಸೇನೆಯೊಡನೆ ನಡೆಸಿದ ಹೋರಾಟವನ್ನು ಪ್ರಸ್ತಾಪಿಸಿ, ಸಿಂಗ ಎಂಬುವನು ಮಡಿದ ಬಗ್ಗೆ ಉಲ್ಲೇಖಿಸುತ್ತದೆ. ಈ ವೇಳೆಗೆ ಕಂಪಿಲದೇವನ ಕುಮ್ಮಟ ರಾಜ್ಯವು ರಾಯಚೂರು, ಬಳ್ಳಾರಿ, ಕರ್ನೂಲು, ಅನಂತಪುರ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಹಾವೇರಿ, ಗದಗ ಮತ್ತು ಕೊಪ್ಪಳ ಜಿಲ್ಲೆಗಳ ಭಾಗ ಗಳನ್ನೂ ಒಳಗೊಂಡಿತ್ತು.

ದೇವಗಿರಿಯ ಸೇವುಣರು, ದೆಹಲಿ ಸೈನ್ಯಕ್ಕೆ ಸಹಕರಿಸಿ ವಾರಂಗಲ್ಲು ಪತನಕ್ಕೆ ಕಾರಣರಾದರು. ಹಾಗು ದ್ವಾರಸಮುದ್ರದ ಮೇಲಿನ ದಾಳಿಯಲ್ಲೂ ಭಾಗವಹಿಸಿದರು. ಹಾಗೆಯೆ ಹೊಯ್ಸಳರು, ಪಾಂಡ್ಯ ರಾಜ್ಯದ ಮೇಲಿನ ದಾಳಿಯಲ್ಲಿ ಸಹಕರಿಸಿ ಅವರ ಅವನತಿಗೆ ಕಾರಣರಾದರು. ಆದರೆ ಕಂಪಿಲದೇವ ಇಂತಹ ಕೆಲಸ ಮಾಡದೆ, ದೆಹಲಿ ಸೈನ್ಯದ ವಿರುದ್ಧ ಹೋರಾಡುವ ಛಲವನ್ನು ಕೈಗೊಳ್ಳುತ್ತಾನೆ. ಈ ನಡುವೆ ದೆಹಲಿಯಲ್ಲಿ ಅನೇಕ ರಾಜಕೀಯ ಬದಲಾವಣೆಗಳಾದವು. ಅಲ್ಲಾವುದ್ದೀನನ ಮೂರನೆಯ ಮಗ ಮುಬಾರಕ್ ಖಾನನ ಸುಲ್ತಾನನಾಗಿದ್ದ. ತನ್ನ ಸೋದರ ಶಿಹಬುದ್ದೀನ್ ಉಮರ್‌ನನ್ನು ಕೊಂದು, ದೆಹಲಿ ಸಿಂಹಾಸನವನ್ನೇರಿದನು. ಈ ವೇಳೆಗೆ ಗುಜರಾತ್ ಮತ್ತು ದೇವಗಿರಿಯಲ್ಲಿ ದಂಗೆಗಳು ಉಂಟಾದವು. ಕ್ರಿ.ಶ. ೧೩೧೮ರಲ್ಲಿ ಸ್ವತಃ ದೇವಗಿರಿಗೆ ಬಂದು, ದಂಗೆ ಎದ್ದಿದ್ದ ರಾಮಚಂದ್ರನ ಅಳಿಯ ಹರಿಪಾಲ ಮತ್ತು ಮಂತ್ರಿ ರಾಘವನನ್ನು ಎದುರಿಸುತ್ತಾನೆ. ಈ ಘಟನೆಯಲ್ಲಿ ಹರಿಪಾಲ ಸೆರೆಸಿಕ್ಕಿ ಪ್ರಾಣ ಕಳೆದುಕೊಳ್ಳು ತ್ತಾನೆ. ರಾಘವ ಪಲಾಯನ ಮಾಡುತ್ತಾನೆ. ಮುಬಾರಕನು ಗುಲ್ಬರ್ಗಾ, ಸಗರ ಮುಂತಾದೆಡೆ ಗಳಲ್ಲಿ ಸೈನಿಕ ಠಾಣೆಗಳನ್ನು ಸ್ಥಾಪಿಸುತ್ತಾನೆ (Desai 1981). ಇವನು ಕಂಪಿಲನ ವಿರುದ್ಧ ಯುದ್ಧ ಮಾಡಿದಂತೆ ಕಂಡುಬರುವುದಿಲ್ಲ.

ದ್ವಾರಸಮುದ್ರದ ಹೊಯ್ಸಳರಿಗೂ, ಕಂಪಿಲದೇವನಿಗೂ ಆಗಾಗ್ಗೆ ಕದನಗಳು ನಡೆಯು ತ್ತಿದ್ದವು. ಈ ವೇಳೆಗಾಗಲೇ ದ್ವಾರಸಮುದ್ರವು ದೆಹಲಿ ಸೈನ್ಯದ ದಾಳಿಯ ಕಹಿಯನ್ನು ಅನುಭವಿಸಿದರೂ ನೆರೆಹೊರೆಯವರೊಡನೆ ಸೌಹಾರ್ದ ಸಂಬಂಧ ಸ್ಥಾಪನೆಗೆ ಮುಂದಾಗಲಿಲ್ಲ. ಬದಲಾಗಿ ಯುದ್ಧಗಳನ್ನು ಮುಂದುವರಿಸಿದರು. ಬಹುಶಃ ಹೊಯ್ಸಳರು ಮತ್ತು ಕಂಪಿಲದೇವ ಒಂದಾಗಿದ್ದರೆ, ದೆಹಲಿ ಸುಲ್ತಾನರ ದಾಳಿಗಳನ್ನು ಅತ್ಯಂತ ಯಶಸ್ವಿಯಾಗಿ ತಡೆಯಬಹು ದಾಗಿತ್ತು. ಹೊಯ್ಸಳರ ಮೂರನೆಯ ಬಲ್ಲಾಳ ಕ್ರಿ.ಶ. ೧೩೨೦ರಲ್ಲಿ ದೊರವಾಡಿಯ ಮೇಲೆ ಕಂಪಿಲನ ವಿರುದ್ಧ ದಾಳಿ ಮಾಡುತ್ತಾನೆ. ಈ ಯುದ್ಧದಲ್ಲಿ ಬಲ್ಲಾಳನ ಸೇನಾಪತಿ ಕುರಕನಾಯಕ ಮಡಿಯುತ್ತಾನೆ (EC VII, Nagara 19). ದೊರವಾಡಿಯು ಕುಮ್ಮಟ ರಾಜ್ಯದ ಮುಖ್ಯ ಕೋಟೆಗಳಲ್ಲಿ ಒಂದು. ಮುಮ್ಮಡಿ ಸಿಂಗೆಯನ ಕಾಲದಲ್ಲೂ ಇದು ಮುಖ್ಯ ಸ್ಥಳವಾಗಿತ್ತು. ಇದಾದನಂತರ ಪುನಃ ಕ್ರಿ.ಶ. ೧೩೨೩ರಲ್ಲಿ ಮೂರನೆಯ ಬಲ್ಲಾಳನು ಕಂಪಿಲನ ವಿರುದ್ಧ ದಂಡೆತ್ತಿ ಬರುತ್ತಾನೆ (ARSIE 1943-44 : No.75). ಈ ಯುದ್ಧದಲ್ಲಿ ಬಯಿಚಬೋವ ಎಂಬುವನು ಮಡಿಯುತ್ತಾನೆ. ಕ್ರಿ.ಶ. ೧೩೨೫ರಲ್ಲಿ ಕಂಪಿಲದೇವನು ಹೊಯ್ಸಳರ ಸಾಮಂತ ಹುಳಿಯಾರಿನ ನಾಡಪ್ರಭುವನ್ನು ಸೋಲಿಸುತ್ತಾನೆ. ಹಿಂದಿರುಗಿ ಬರುವಾಗ ಮೊಲಲೂರಿನ ಬಳಿ ಹೊಯ್ಸಳರ ದಂಡನಾಯಕ ಹಾಗೂ ಮಂತ್ರಿ ಬೇಬೆಯ ದಂಡನಾಯಕನನ್ನು ಎದುರಿಸುತ್ತಾನೆ. ಈ ಯುದ್ಧದಲ್ಲಿ ನಾಗೆಯನಾಯಕನ ಕಿರಿಯ ಸಹೋದರ ಜಕ್ಕಿಯನಾಯಕ ಮಡಿಯುತ್ತಾನೆ (EC XI, Hiriyur 16). ಈ ಶಾಸನದಲ್ಲಿ ಕಂಪಿಲನನ್ನು ಕಂಬಿಲ ಎಂದು ಕರೆಯಲಾಗಿದೆ. ಕಡಸೂರಿನ ಕ್ರಿ.ಶ. ೧೩೨೫ರ ಶಾಸನವೊಂದು, ಹೊಯ್ಸಳರಿಗೂ ಕುಮ್ಮಟದ ಅರಸರಿಗೂ ನಡೆದ ಹೋರಾಟದಲ್ಲಿ ವ್ಯಕ್ತಿಯೊಬ್ಬನು ಮಡಿದ ಬಗ್ಗೆ ತಿಳಿಸುತ್ತದೆ (EC XII, Tiptur 24). ಕೂಡಲಿಯ ವೀರಗಲ್ಲು ಶಾಸನವು, ಸಿರಗುಪ್ಪೆ ಎಂಬಲ್ಲಿ ಕಂಪಿಲದೇವನಿಗೂ ಮತ್ತು ಮೂರನೆಯ ಬಲ್ಲಾಳನಿಗೂ ನಡೆದ ಕದನವನ್ನು ಪ್ರಸ್ತಾಪಿಸಿದೆ (MAR 1923 : No 121: 119). ಹೀಗೆ ಹೊಯ್ಸಳರು ಮತ್ತು ಕುಮ್ಮಟದ ಅರಸರು ನಿರಂತರವಾಗಿ ಯುದ್ಧವನ್ನು ಕೈಗೊಂಡರೂ, ಇದರಿಂದ ಯಾರಿಗೂ ಯಾವುದೇ ಲಾಭವಾದಂತೆ ಕಂಡುಬರುವುದಿಲ್ಲ. ಈ ವೇಳೆಗಾಗಲೆ ಪತನಗೊಂಡಿದ್ದ ವಾರಂಗಲ್ ಮತ್ತು ದೇವಗಿರಿಯಿಂದ ಬಂದ ಅಧಿಕಾರಿಗಳು ಹೊಯ್ಸಳ ರಾಜ್ಯದಲ್ಲಿ ಮತ್ತು ಕುಮ್ಮಟದ ಅರಸರಲ್ಲಿ ಸೇವೆಗೆ ನಿಂತಂತೆ ಕಂಡುಬರು ತ್ತದೆ (Dikshit 1996 : 6).

ಕಂಪಿಲದೇವನು ಹುಳಿಯಾರಿನ ಮೇಲೆ ಕೈಗೊಂಡ ದಾಳಿಯನ್ನು ನಂಜುಂಡ ಕವಿಯು ತನ್ನ ಸಾಂಗತ್ಯದಲ್ಲಿ ಪ್ರಸ್ತಾಪಿಸಿದ್ದಾನೆ. ಈ ಕುರಿತು ಶಾಸನವೂ ಸಹ ಸೂಚ್ಯವಾಗಿ ತಿಳಿಸುತ್ತದೆ. ಹಾಗೆಯೇ ಕಂಪಿಲನು ವಾರಂಗಲ್ಲಿನ ಕಾಕತೀಯರ ಪ್ರತಾಪರುದ್ರನೊಡನೆ ಯುದ್ಧಮಾಡಿ ಸೋತನೆಂದು ಹೇಳಲಾಗಿದೆ (Rama Rao: 94). ತೆಲುಗು ಕವಿಗಳು ಈ ಘಟನೆಯನ್ನು ಪ್ರಸ್ತಾಪಿಸಿದ್ದಾರೆ. ಕುಮ್ಮಟದ ಉದ್ಯಾನಕ್ಕೆ ದಾಳಿಯಿಟ್ಟ ತೆಲುಗು ದಳಪತಿಗಳು, ಅದನ್ನು ಹಾಳುಮಾಡಿ ಹೋದರು ಎಂಬ ವರ್ಣನೆ ಇದೆ (ಶ್ರೀನಾಥ: ಆ ೧, ಪ ೪೮). ಕನ್ನಡದ ಕವಿಗಳು ರಚಿಸಿದ ಸಾಂಗತ್ಯಗಳು ಸಹ ಕಂಪಿಲನ ವಾರಂಗಲ್ಲಿನ ಯುದ್ಧವನ್ನು ಪ್ರಸ್ತಾಪ ಮಾಡುತ್ತವೆ.

ದೆಹಲಿಯಲ್ಲಿ ಖಿಲ್ಜಿ ಸಂತತಿಯ ಆಡಳಿತ ಕೊನೆಗೊಂಡು, ತುಘಲಕ್ ಸಂತತಿಯ ಆಳ್ವಿಕೆ ಆರಂಭಗೊಂಡಿತು. ಮಹಮದ್ ಬಿನ್ ತುಘಲಕನು ಕ್ರಿ.ಶ. ೧೩೨೫ರಲ್ಲಿ ಸುಲ್ತಾನನಾದಾಗ ವಿರೋಧವೊಂದನ್ನು ಎದುರಿಸಬೇಕಾಯಿತು. ಈ ವಿರೋಧ ಬಂದದ್ದು ಸಗರದ (ಗುಲ್ಬರ್ಗಾ ಜಿಲ್ಲೆ) ರಾಜ್ಯಪಾಲನಾಗಿದ್ದ ಬಹಉದ್ದೀನ್ ಗುರ್ಶಾಸ್ಪನಿಂದ. ಈತ ತುಘಲಕನ ಸೋದರ ಸಂಬಂಧಿ. ದೆಹಲಿ ಸಿಂಹಾಸನಕ್ಕೆ ತಾನು ಸಹ ಹಕ್ಕುದಾರನೆಂದು ದಂಗೆ ಏಳುತ್ತಾನೆ. ಈ ಚಾರಿತ್ರಿಕ ಸಂಗತಿಯನ್ನು ಮುಸ್ಲಿಂ ಬರಹಗಾರರಾದ ಇಬ್ನಬತೂತ ಮತ್ತು ಇಸಾಮಿ ತಮ್ಮ ಬರಹಗಳಲ್ಲಿ ತಿಳಿಸಿದ್ದಾರೆ (Foreign Notices of India: 216-217). ಹಾಗೆಯೆ ಸಾಂಗತ್ಯಗಳಲ್ಲೂ ಈ ಸಂಗತಿ ಮೂಡಿಬಂದಿದೆ. ಸುಲ್ತಾನನ ಸೇನೆಯನ್ನು ಎದುರಿಸಲಾಗದೆ, ದಂಗೆಯೆದ್ದಿದ್ದ ಬಹಉದ್ದೀನ್ ಗುರ್ಶಾಸ್ಪನು ತನ್ನ ಹೆಂಡತಿ ಮಕ್ಕಳ ಸಮೇತ ರಕ್ಷಣೆಗಾಗಿ ಕುಮ್ಮಟಕ್ಕೆ ಬಂದು ಕಂಪಿಲದೇವನಲ್ಲಿ ಆಶ್ರಯ ಪಡೆಯುತ್ತಾನೆ. ಈ ಮೊದಲು ತುಘಲಕನ ಸೇನೆ ಕುಮ್ಮಟದುರ್ಗದ ಮೇಲೆ ಎರಡು ಬಾರಿ ದಾಳಿ ನಡೆಸಿತ್ತು. ಈ ದಾಳಿಗಳು ಕ್ರಮವಾಗಿ ಮಲಿಕ್ ರುಕ್ನುದ್ದೀನ್ ಮತ್ತು ಕುತ್ಬುಲ್ ಮುಲ್ಕ್ ಇವರ ನೇತೃತ್ವದಲ್ಲಿ ನಡೆದು ವಿಫಲಗೊಂಡಿದ್ದವು (Subramanyam 1973: 82-83). ಈ ವಿಫಲತೆಗೆ ಕುಮ್ಮಟದುರ್ಗ ಹೊಂದಿರುವ ಭೌಗೋಳಿಕ ಪರಿಸರವೇ ಕಾರಣ. ಇದರಿಂದಾಗಿ ತುಘಲಕ್ ಮೊದಲೇ ಕುಮ್ಮಟದುರ್ಗದ ಬಗೆಗೆ ಆತೃಪ್ತಿ ಹೊಂದಿದ್ದನು. ಈಗ ಶತ್ರುವಿಗೆ ಆಶ್ರಯ ನೀಡಿದ ಮೇಲಂತೂ ಕಂಪಿಲನ ಮೇಲೆ ಕುಪಿತಗೊಂಡನು. ಕುಮ್ಮಟದ ಮೇಲಿನ ದಾಳಿಗಾಗಿ ಕ್ರಿ.ಶ. ೧೩೨೭ರಲ್ಲಿ ಮಲಿಕ್-ಜಾದ-ಖ್ವಾಜಾ-ಇ-ಜಹಾನ್ ಎಂಬುವನ ನೇತೃತ್ವದಲ್ಲಿ ಭಾರಿ ಸೈನ್ಯವನ್ನು ಕಳುಹಿಸುತ್ತಾನೆ. ಇದು, ಕುಮ್ಮಟದ ಮೇಲೆ ತುಘಲಕ್‌ನ ಸೇನೆಯ ಮೂರನೆಯ ದಾಳಿಯಾಗಿತ್ತು. ಶತ್ರು ಸೈನ್ಯವು ಎಲ್ಲಾ ದಿಕ್ಕಿನಿಂದಲೂ ಕುಮ್ಮಟವನ್ನು ಸುತ್ತುವರೆಯಿತು. ಕಂಪಿಲದೇವ ಕೋಟೆಯನ್ನು ಮುಚ್ಚಿಸುತ್ತಾನೆ. ಆದರೆ ನೀರು ಮತ್ತಿತರ ಅವಶ್ಯಕ ಸಾಮಗ್ರಿಗಳ ಅಭಾವದಿಂದ ಹೆಚ್ಚುಕಾಲ ಕೋಟೆಯನ್ನು ಮುಚ್ಚಲು ಸಾಧ್ಯವಾಗಲಿಲ್ಲ. ದೃಢನಿರ್ಧಾರ ಮಾಡಿದ ಕಂಪಿಲ, ರಾಜಕುಟುಂಬದ ಸ್ತ್ರೀಯರೆಲ್ಲರೂ ಅಗ್ನಿಪ್ರವೇಶ ಮಾಡಲು ತಿಳಿಸಿದನು. ಇವರನ್ನು ಅನುಸರಿಸಿ ಮಂತ್ರಿಗಳ ಮತ್ತು ಗಣ್ಯರ ಸ್ತ್ರೀಯರು ಸಹ ಅಗ್ನಿಪ್ರವೇಶ ಮಾಡಿದರು (Patil, 1991:181). ಈ ನಡುವೆ ಬಹಉದ್ದೀನ್ ಗುರ್ಶಾಸ್ಪ್ ಮತ್ತು ಆತನ ಕುಟುಂಬ ವರ್ಗದವರನ್ನು ರಕ್ಷಣೆಗಾಗಿ ದ್ವಾರಸಮುದ್ರಕ್ಕೆ ಕಳುಹಿಸಿದನು. ಇದರ ಅಪಾಯವನ್ನು ಅರಿತ ಮೂರನೆಯ ಬಲ್ಲಾಳ ಬಹಉದ್ದೀನನನ್ನು ಬಂಧಿಸಿ ಸುಲ್ತಾನನ ಸೈನ್ಯಕ್ಕೆ ಒಪ್ಪಿಸುತ್ತಾನೆ. ಈ ಯುದ್ಧದಲ್ಲಿ ಕಂಪಿಲದೇವ ಮತ್ತು ಈತನ ಮಗ ರಾಮನಾಥ ಹೋರಾಡಿ ಮಡಿದರು. ಮಹಮ್ಮದೀಯರು ಕಂಪಿಲನನ್ನು ಮೂರನೆಯ ಬಾರಿಗೆ ಗೆದ್ದರೆಂದು ಬರನಿ, ಫೆರಿಸ್ತಾ ಮತ್ತು ಇಸಾಮಿ ತಿಳಿಸಿದ್ದಾರೆ (Elliot 1953: 160). ನ್ಯುನಿಜನು ಸಹ ಆನೆಗೊಂದಿ ಕೋಟೆಯಲ್ಲಿ ಕಂಪಿಲನ ಕೊನೆಯಾಯಿತೆಂದು ತಿಳಿಸುತ್ತಾನೆ (Sewell : 1962 : 283 ). ಮುಂದೆ ಕುಮ್ಮಟರಾಜ್ಯ ದೆಹಲಿ ಸುಲ್ತಾನಾಧಿಪತ್ಯಕ್ಕೆ ಸೇರಿತು. ಕಂಪಿಲನ ರಾಜ್ಯವನ್ನು ಕಂಪಿಲಿ ರಾಜ್ಯವೆಂದು ಕರೆಯಲಾಯಿತು. ಇದನ್ನು ಪ್ರತ್ಯೇಕ ಪ್ರಾಂತ್ಯವನ್ನಾಗಿ ರಚಿಸಿ, ಮಲಿಕ್ ಮಹಮದನನ್ನು ರಾಜ್ಯಪಾಲನನ್ನಾಗಿ ನೇಮಿಸಲಾಯಿತು (Majumdar 1960: 61-62). ಕಂಪಿಲದೇವನ ಬಂಧುಗಳನ್ನು ಸೆರೆಹಿಡಿದು ದೆಹಲಿಗೆ ಕರೆದುಕೊಂಡು ಹೋದರು.

ಕುಮ್ಮಟ ರಾಜ್ಯವು ತನ್ನ ಅಲ್ಪಜೀವಿತ ಕಾಲದಲ್ಲಿ ಮಹತ್ವದ ಕೆಲಸಗಳನ್ನು ಸಾಧಿಸಿತು. ಅದು ದೇವಗಿರಿಯ ಸೇವುಣ, ವಾರಂಗಲ್ಲಿನ ಕಾಕತೀಯ ಮತ್ತು ದ್ವಾರಸಮುದ್ರದ ಹೊಯ್ಸಳ ರೊಡನೆ ಅನೇಕ ಯುದ್ಧಗಳನ್ನು ಕೈಗೊಂಡು ತನ್ನ ಶೌರ್ಯಪರಾಕ್ರಮವನ್ನು ಪ್ರದರ್ಶಿಸಿತು. ಎಲ್ಲಕ್ಕಿಂತ ಮುಖ್ಯವಾಗಿ ನಾಲ್ಕುಬಾರಿ ದೆಹಲಿ ಸುಲ್ತಾನರ ದಾಳಿಯನ್ನು ಎದುರಿಸಿದ ಕೀರ್ತಿ ಕುಮ್ಮಟರಾಜ್ಯಕ್ಕೆ ಸಲ್ಲುತ್ತದೆ. ಇದು ದೆಹಲಿ ಸೈನ್ಯಕ್ಕೆ ಒಡ್ಡಿದ ಪ್ರತಿರೋಧವನ್ನು ಬೇರಾವ ಪ್ರಸಿದ್ಧ ರಾಜ್ಯಗಳು ತೋರಿಸಲಾಗಲಿಲ್ಲ. ಕ್ರಿ.ಶ. ೧೨ರಿಂದ ೧೪ನೆಯ ಶತಮಾನದ ಕರ್ನಾಟಕದಲ್ಲಿ ವೀರತ್ವಕ್ಕೆ ವಿಶೇಷವಾದ ಮನ್ನಣೆ ದೊರೆತಿದ್ದಂತೆ ಕಂಡುಬರುತ್ತದೆ. ಇದರ ಪರಿಣಾಮ ಕುಮ್ಮಟದಂತಹ ಸಣ್ಣರಾಜ್ಯ ದೆಹಲಿ ಸೈನ್ಯದೊಡನೆ ಸೆಣಸಲು ಸಾಧ್ಯವಾಯಿತು. ಶೌರ್ಯವನ್ನು ತೋರಿದವರಿಗೆ ದೇವಾಲಯಗಳನ್ನು ನಿರ್ಮಿಸಿ, ಕಾವ್ಯವನ್ನು ರಚಿಸಿ ಹಾಡಲಾಯಿತು. ವಾಸ್ತವವಾಗಿ ಇದು ವೀರತ್ವದ ಆರಾಧನೆ ಮತ್ತು ಪ್ರಶಸ್ತಿಯೇ ಆಗಿತ್ತು.

ಕಂಪಿಲದೇವ, ತನ್ನ ತಂದೆತಾಯಿಗಳ ಬಗೆಗೆ ಅಪಾರವಾದ ಭಕ್ತಿಗೌರವವನ್ನು ಹೊಂದಿದ್ದನು. ತಂದೆ ಮುಮ್ಮಡಿ ಸಿಂಗೆಯನಾಯಕ, ತಾಯಿ ಮಾದನಾಯಕಿತಿ ಮತ್ತು ಪೆರುಮೆಯನಾಯಕ ಎಂಬುವರ ಹೆಸರಿನಲ್ಲಿ ಹಂಪಿಯ ಹೇಮಕೂಟದಲ್ಲಿ ತ್ರಿಕೂಟ ದೇವಾಲಯವನ್ನು ನಿರ್ಮಿಸಿ, ಲಿಂಗಗಳನ್ನು ಪ್ರತಿಷ್ಠಾಪಿಸುತ್ತಾನೆ (ARIE 1934-35, No B 353). ಕಂಪಿಲದೇವನ ರಾಣಿ ಗುಜಲ ಹರಿಹರದೇವಿ. ಮಗ ರಾಮನಾಥ ತನ್ನ ಶೌರ್ಯಪ್ರತಾಪಗಳಿಂದಾಗಿ ಕುಮಾರರಾಮನೆಂಬ ಹೆಸರಿನಿಂದ ಇಂದಿಗೂ ಕರ್ನಾಟಕದಲ್ಲಿ ಮನೆಮಾತಾಗಿದ್ದಾನೆ (ಈ ಕುರಿತು ಮುಂದಿನ ಅಧ್ಯಾಯ ದಲ್ಲಿ ಹೇಳಲಾಗುವುದು). ಕಂಪಿಲನಿಗೆ ಮಾರವ್ವ ಮತ್ತು ಸಿಂಗಮ್ಮ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದರೆಂದು ಮತ್ತು ಭಾವಸಂಗಮನೆಂಬ ಅಳಿಯನಿದ್ದನೆಂದು ನಂಜುಂಡನ ಕುಮಾರರಾಮನ ಸಾಂಗತ್ಯದಿಂದ ತಿಳಿದುಬರುತ್ತದೆ. ಮಾರವ್ವ ಭಾವಸಂಗಮನ ಪತ್ನಿಯಾಗಿದ್ದಳು. ಕುಮಾರ ರಾಮನು, ಚೆಂಡಾಟದ ಸಮಯದಲ್ಲಿ ಅಳಿಯ ಪೈಕದವರನ್ನೆಲ್ಲ ಎದುರುಗುಂಪಿಗೆ ಸೇರಿಸಿ ಭಾವಸಂಗಮನನ್ನು ನಾಯಕನನ್ನಾಗಿ ಮಾಡುತ್ತಾನೆ (ವರದರಾಜರಾವ್ ೧೯೬೩: ೮೭). ಒಂದನೆಯ ಬುಕ್ಕರಾಯನ ಎಡತೊರೆಯ ಶಾಸನ, ಹಂಪೆಯ ಪರಿಸರದಲ್ಲಿದ್ದ ಭವಸಂಗಮನನ್ನು ಉಲ್ಲೇಖಿಸುತ್ತದೆ (Dikshit 1996: 5). ಕಂಪಿಲನಿಗೆ ಕಪ್ಪಕಾಣಿಕೆ ಸಲ್ಲಿಸುತ್ತಿದ್ದವರಲ್ಲಿ ಕುರುಗೋಡಿನ ಸಂಗಮನೂ ಒಬ್ಬ ಎಂದು ಕೈಫಿಯತ್ತು ತಿಳಿಸುತ್ತದೆ (ಕಲಬುರ್ಗಿ ೧೯೯೪: ೪೬೬). ಕುರುಗೋಡು ಹಂಪೆಗೆ ಸಮೀಪದಲ್ಲಿದೆ. ಬಹುಶಃ ಇವನೇ ಶಾಸನದ ಭವಸಂಗಮ ನಾಗಿರಬಹುದು. ಹೀಗೆ ಕುಮಾರರಾಮನ ಸಾಂಗತ್ಯದಲ್ಲಿ ಬರುವ ಭಾವಸಂಗಮ, ಶಾಸನದ ಭವಸಂಗಮ ಮತ್ತು ಕೈಫಿಯತ್ತಿನಲ್ಲಿ ಉಲ್ಲೇಖಗೊಂಡಿರುವ ಕುರುಗೋಡು ಸಂಗಮ ಬೇರೆಯಾಗಿರದೆ ಒಬ್ಬನೆ ಆಗಿರಬಹುದು. ಇದರಿಂದ ಸಂಗಮ ಮನೆತನದ ಮೂಲಪುರುಷನಾದ ಸಂಗಮನು ಕುರುಗೋಡಿನವನಾಗಿದ್ದು, ಕಂಪಿಲದೇವನ ಅಳಿಯನೆಂದು ಗುರುತಿಸಬಹುದು. ಇದು ಸ್ಪಷ್ಟವಾದಲ್ಲಿ ವಿಜಯನಗರ ಸಾಮ್ರಾಜ್ಯ ಸ್ಥಾಪಕರಾದ ಹರಿಹರ ಮತ್ತು ಸಹೋದರರು ಸಂಗಮನ ಮಕ್ಕಳಾಗಿರುವುದರಿಂದ ಕಂಪಿಲನ ಮೊಮ್ಮಕ್ಕಳೇ ಆಗುತ್ತಾರೆ. ಸಂಗಮನ ಹಿರಿಯ ಮಗ ಹರಿಹರನಿಗೆ ಅಜ್ಜಿ ಹರಿಹರದೇವಿಯ ಹೆಸರನ್ನು, ನಾಲ್ಕನೆಯ ಮಗ ಮಾರಪ್ಪನಿಗೆ ತಾಯಿ ಮಾರವ್ವಳ ಹೆಸರನ್ನು ಇಟ್ಟಿರಬಹುದು. ಹರಿಹರ ಮತ್ತು ಬುಕ್ಕ ಕಂಪಿಲನಲ್ಲಿ ಭಂಡಾರದ ಸೇವೆಯಲ್ಲಿದ್ದರು ಎಂದು ತಿಳಿದುಬರುವುದು. ಬಹುಶಃ ಸಂಗಮನು ಕ್ರಿ.ಶ. ೧೩೨೭ರ ಯುದ್ಧದಲ್ಲಿ ಮರಣ ಹೊಂದಿರಬಹುದೆ? ಈ ಎಲ್ಲ ಅಭಿಪ್ರಾಯಗಳನ್ನು ಕುರಿತು ಹೆಚ್ಚಿನ ಅಧ್ಯಯನಗಳು ನಡೆಯಬೇಕಾಗಿದೆ.

ಆನೆಗುಂದಿ, ಕುಮ್ಮಟ ರಾಜ್ಯದ ಪ್ರಮುಖ ಪಟ್ಟಣಗಳಲ್ಲಿ ಒಂದಾಗಿತ್ತು. ಕುಮ್ಮಟ ರಾಜ್ಯ ದೆಹಲಿ ಸುಲ್ತಾನನ ವಶವಾದ ನಂತರ ಆನೆಗುಂದಿ ಅದರ ಮುಖ್ಯ ಆಡಳಿತಕೇಂದ್ರ ವಾದಂತೆ ಕಂಡುಬರುತ್ತದೆ. ಸ್ವಲ್ಪ ಕಾಲಾನಂತರ ಸ್ಥಳೀಯರ ಉಪಟಳವನ್ನು ತಾಳಲಾರದೆ ರಾಜ್ಯಪಾಲ ಮಲಿಕ್ ಮಹಮದ್ ಹಿಂದಿರುಗುತ್ತಾನೆ. ಸುಲ್ತಾನ ಇದರ ನಿರ್ವಹಣೆಗೆ ಕಂಪಿಲಿಯ ಇಬ್ಬರು ಅಧಿಕಾರಿಗಳನ್ನು ನಿಯೋಜಿಸಿದನೆಂದು ಇಬ್ನಬತೂತ ತಿಳಿಸುತ್ತಾನೆ. ಬರನಿ ಎಂಬ ಮುಸಲ್ಮಾನ ಇತಿಹಾಸಕಾರ “ಕಂಪಿಲಿರಾಯನ ಬಂಧುವೊಬ್ಬ ಇಸ್ಲಾಂ ಮತ ಸ್ವೀಕರಿಸಿ ದೆಹಲಿ ಸುಲ್ತಾನನಿಗೆ ವಿಧೇಯನಾಗಿರುತ್ತಾನೆ. ಮುಂದೆ ದೆಹಲಿಯ ಸುಲ್ತಾನನು, ಅವನನ್ನು ಕಂಪಿಲಿಗೆ ರಾಯಭಾರಿಯಾಗಿ ಕಳುಹಿಸಿದಾಗ ಮುಸಲ್ಮಾನ ಮತ ತ್ಯಜಿಸಿ, ಸುಲ್ತಾನನ ವಿರುದ್ಧ ಬಂಡೇಳುವನು, ಕಂಪಿಲದೇಶವೆಲ್ಲ ಹಿಂದೂಗಳ ಕೈಯಲ್ಲಿ ಬರುತ್ತದೆ’’ ಎಂದು ಬರೆದಿದ್ದಾನೆ (ವಸುಂಧರಾ ಫಿಲಿಯೋಜಾ ೧೯೮೦: ೯). ಬಹುಶಃ ಈ ಮೇಲಿನ ಹೇಳಿಕೆಗಳನ್ನು ನಂಬುವುದಾದರೆ, ಅವರು ಹರಿಹರ ಮತ್ತು ಸಹೋದರರೆ ಆಗಿರುತ್ತಾರೆ. ಈ ಹೇಳಿಕೆಗೆ ಪೂರಕವಾಗಿ, ಹರಿಹರ ಮತ್ತು ಸಹೋದರರು ಆನೆಗುಂದಿಯಲ್ಲಿ ಆಳ್ವಿಕೆಯನ್ನು ನಡೆಸಿದ ಸಂಗತಿ ವಿಜಯನಗರದ ಚರಿತ್ರೆಯಿಂದ ತಿಳಿದುಬರುತ್ತದೆ. ಹರಿಹರ ಮತ್ತು ಸೋದರರು ಕಂಪಿಲನ ಸಮೀಪದ ಬಂಧುಗಳಾಗಿದ್ದರಿಂದಲೇ, ಅವರಿಗೆ ರಾಜ್ಯನಿರ್ವಹಣೆಯ ಅವಕಾಶ ಸಿಕ್ಕಿದಂತೆ ಕಾಣುತ್ತದೆ. ಈ ವೇಳೆಗೆ ದಕ್ಷಿಣ ಭಾರತದ ಹಲವೆಡೆ ಹಿಂದೂ ಧರ್ಮ ಮತ್ತು ಸಂಸ್ಕೃತಿಯ ರಕ್ಷಣೆಗಾಗಿ ಹೋರಾಟ ಆರಂಭವಾಗಿತ್ತು. ಮುಸ್ಲಿಂ ಆಡಳಿತಗಾರರ ಉಚ್ಚಾಟನೆಗಾಗಿ ಪ್ರಯತ್ನಗಳು ಚುರುಕುಗೊಂಡವು. ಇಂತಹ ಸನ್ನಿವೇಶದಲ್ಲಿ ಹೊಯ್ಸಳರ ಮೂರನೆಯ ಬಲ್ಲಾಳನು ತನ್ನ ರಾಜ್ಯದ ಉತ್ತರ ಗಡಿಯ ಆನೆಗೊಂದಿಯಲ್ಲಿ ಆಳ್ವಿಕೆ ನಡೆಸುತ್ತಿದ್ದ ಸಂಗಮ ವಂಶಸ್ಥರನ್ನು ತನ್ನ ಮಾಂಡಲೀಕರನ್ನಾಗಿ ಮಾಡಿಕೊಂಡು ಅವರಿಗೆ ಹೆಚ್ಚಿನ ಲಕಿಜಿತ್ಸಾಹ ಮತ್ತು ಸಹಕಾರಗಳನ್ನು ನೀಡಿ, ತನ್ನ ರಾಜ್ಯದ ಉತ್ತರ ಭಾಗದ ನಿರ್ವಹಣೆ ಯನ್ನು ಇವರಿಗೆ ವಹಿಸಿದಂತೆ ಕಂಡುಬರುತ್ತದೆ. ಹೀಗೆ ಕುಮ್ಮಟ ರಾಜ್ಯದ ಅವಸಾನವು ಪ್ರಬಲವಾದ ವಿಜಯನಗರ ಸಾಮ್ರಾಜ್ಯದ ಹುಟ್ಟಿಗೆ ಕಾರಣವಾಯಿತು.