ಕಂಪಿಲದೇವ ಮತ್ತು ಗುಜಲ ಹರಿಹರದೇವಿಯರ ಮಗ ರಾಮನಾಥ. ಮುಮ್ಮಡಿ ಸಿಂಗೆಯನಾಯಕನ ವಂಶದಲ್ಲಿ ಕೊನೆಯವನು. ಜಟಿಂಗ ರಾಮೇಶ್ವರನ ವರಪ್ರಸಾದದಿಂದ ಹುಟ್ಟಿದ ಇವನಿಗೆ ರಾಮನಾಥನೆಂದು ಹೆಸರು ಇಡಲಾಯಿತೆಂಬ ಹೇಳಿಕೆಯಿದೆ. ತನ್ನ ಶೌರ್ಯ ಮತ್ತು ಆದರ್ಶಗುಣಗಳಿಂದಾಗಿ ದೇವತಾಸ್ಥಾನ ಪಡೆದಿದ್ದಾನೆ. ಕರ್ನಾಟಕದಲ್ಲಿ ರಾಮನಾಥ, ಕುಮಾರರಾಮನೆಂಬ ಹೆಸರಿನಲ್ಲಿ ವೀರತ್ವದ ಸಂಕೇತವಾಗಿದ್ದಾನೆ. ಕನ್ನಡದಲ್ಲಿ ಇವನ ಬಗೆಗೆ ವಿಪುಲವಾದ ಸಾಹಿತ್ಯ ಕೃತಿಗಳು ರಚನೆಗೊಂಡಿವೆ. ಕನ್ನಡವೇ ಅಲ್ಲದೆ ತೆಲುಗು ಮತ್ತು ತುಳುಭಾಷೆಯಲ್ಲೂ ಈತನನ್ನು ಕುರಿತಂತೆ ಜನಪದ ಸಾಹಿತ್ಯ ಸೃಷ್ಟಿಯಾಗಿದೆ. ತೆಲುಗಿನಲ್ಲಿ “ಕುಮಾರ ರಾಮುನಿ ಕಥ’’ ಎಂಬ ತಂದನಾನಾ ಪದವಿದೆ. ತುಳುವಿನಲ್ಲಿ ಕೋಮಲ್ ರಾಯನ ಚರಿತ್ರೆ ಎಂಬ ಪಾಡ್ಡನವಿದೆ. ಅಲ್ಲದೆ ಆಧುನಿಕ ಕನ್ನಡದಲ್ಲೂ ಕುಮಾರ ರಾಮನನ್ನು ಕುರಿತಂತೆ ಅತ್ಯಧಿಕ ಸಂಖ್ಯೆಯ ಗ್ರಂಥಗಳು, ಲೇಖನಗಳು ಪ್ರಕಟಗೊಂಡಿವೆ. ಬಸವಣ್ಣಯ್ಯ ಎಂಬುವನು (೧೬ ಮತ್ತು ೧೭ನೆಯ ಶತಮಾನ) ರಚಿಸಿರುವ ‘ನವರತ್ನಮಾಲಿಕೆ’ ಓಲೆ ಕೃತಿಯ ಹದಿಮೂರನೆ ಸಂಧಿಯ ೨೦ರಿಂದ ೬೧ರವರೆಗಿನ ಪದ್ಯಗಳು ಕುಮಾರರಾಮನ ಅಂತ್ಯಕಾಲಕ್ಕೆ ಸಂಬಂಧಿಸಿದಂತೆ ಬೆಳಕು ಚೆಲ್ಲುತ್ತವೆ. ರಾಮನಾಥ ತನ್ನ ತಂದೆಯೊಡಗೂಡಿ ಅನೇಕ ಯುದ್ಧಗಳಲ್ಲಿ ಭಾಗವಹಿಸಿದ್ದನು. ಕ್ರಿ.ಶ. ೧೩೨೭ರ ಕುಮ್ಮಟದ ಯುದ್ಧದಲ್ಲಿ ದೆಹಲಿ ಸೈನ್ಯದ ವಿರುದ್ಧ ಹೋರಾಡಿ ತಂದೆಯೊಡನೆ ಮಡಿಯುತ್ತಾನೆ (Patil1991:196). ಇವನು ಅಪ್ರತಿಮ ಶೂರ ನಾಗಿದ್ದನು. ಈತನ ಮರಣಾನಂತರ, ಈತನನ್ನು ಉಲ್ಲೇಖಿಸುವ ಶಾಸನಗಳನ್ನು ಕಾಣುತ್ತೇವೆ.

ಮೊದಲನೆಯದಾಗಿ ಕ್ರಿ.ಶ. ೧೪೦೭ರ ಸಂಗೂರಿನ (ಹಾವೇರಿ ತಾಲ್ಲೂಕು) ಶಾಸನ ವಿಜಯನಗರದ ಒಂದನೆಯ ದೇವರಾಯನ ಕಾಲದ್ದು (EI XXIII. No.28). ಇದರಲ್ಲಿ, ಕಂಪಿಲರಾಯನ ಬಾಹತ್ತರನಿಯೋಗಾಧಿಪತಿಯಾದ ಬೈಚವೆಗ್ಗಡೆಯ ಮೊಮ್ಮಗ ಹಾಗೂ ಸೇನಾಧಿಪತಿ ಸಂಗಮನ ಮಗ ಮಾದರಸನು ಚಂಗಪುರದಲ್ಲಿ ಕುಮಾರರಾಮನಾಥನ ಪ್ರತಿಮೆಯನ್ನು ಪ್ರತಿಷ್ಠಾಪನೆ ಮಾಡಿದ ಉಲ್ಲೇಖವಿದೆ. ಈ ಶಾಸನದ ಮೇಲ್ಭಾಗದಲ್ಲಿ ಕುದುರೆಯ ಮೇಲೆ ಕುಳಿತ ವೀರನೊಬ್ಬನ ಉಬ್ಬುಶಿಲ್ಪವಿದೆ. ಈ ಶಿಲ್ಪದ ಬಲಗೈಯಲ್ಲಿ ಕತ್ತಿಯನ್ನು ಹಾಗೂ ಸೊಂಟಪಟ್ಟಿಯಲ್ಲಿ ಕಠಾರಿಯೊಂದನ್ನು ಬಿಡಿಸಲಾಗಿದೆ. ಇದು, ಕುಮ್ಮಟದಲ್ಲಿರುವ ಶಿಲ್ಪವೊಂದನ್ನು ಹೋಲುವುದೆಂದು ಸಿ.ಎಸ್.ಪಾಟೀಲರು ಅಭಿಪ್ರಾಯ ಪಡುತ್ತಾರೆ (Patil 1991: 191). ಈ ಶಾಸನದಲ್ಲಿ ಉಲ್ಲೇಖಗೊಂಡಿರುವ ಬೈಚವೆಗ್ಗಡೆ, ಕುಮಾರರಾಮನ ಸಾಂಗತ್ಯದಲ್ಲಿ ಬರುವ ಕಂಪಿಲರಾಯನ ಮಂತ್ರಿ ಬೈಚ ದಂಡನಾಯಕನೆ ಆಗಿದ್ದಾನೆ. ಈ ದೃಷ್ಟಿಯಿಂದ ಇದೊಂದು ಮಹತ್ವದ ಶಾಸನ. ತೀರ್ಥಹಳ್ಳಿ ತಾಲ್ಲೂಕಿನ ಕೊಕ್ಕೊಡು ಶಾಸನದಲ್ಲಿ ಕುಮಾರರಾಮನಾಥನ ಶೌರ್ಯವನ್ನು ಪ್ರಸ್ತಾಪಿಸಿ, ವೀರನೊಬ್ಬನ ಪರಾಕ್ರಮವನ್ನು ವರ್ಣಿಸಲು ಉದಾಹರಿಸಲಾಗಿದೆ. ಸೊಂಡೂರು ತಾಲ್ಲೂಕಿನ ರಾಮಘಡದ ಕ್ರಿ.ಶ. ೧೫೨೮ರ ಶಾಸನವೊಂದು, ಹೊಸಮಲೆದುರ್ಗದಲ್ಲಿ ರಾಮನಾಥ ದೇವರ ದೇವಾಲಯ ನಿರ್ಮಿಸಿದ ಸಂಗತಿಯನ್ನು ಹೇಳುತ್ತದೆ (ARIE 1943-44, No. B 76). ಈ ದೇವಾಲಯವನ್ನು ಗೋಪಾಯಿ, ಅವಳ ಕಿರಿಯ ಸೋದರ ರಾಮನ ಮತ್ತು ಇತರರು ಸೇರಿ, ಯುದ್ಧದಲ್ಲಿ ಮಡಿದ ಹೊಸಮಲೆಯ ರಾಮನಾಥವೊಡೆಯನ ಹೆಸರಿನಲ್ಲಿ ನಿರ್ಮಿಸುತ್ತಾರೆ. ಈ ಶಾಸನ ಮುಮ್ಮಡಿ ಸಿಂಗನನ್ನು ಪ್ರಸ್ತಾಪಿಸಿ, ಈತನ ಮಗ ಖಂಡೆಯರಾಯ ಕಂಪಿಲರಾಯನೆಂದು, ಇವನ ರಾಣಿ ವೀರ ಗುಜಲ ಹರಿಹರದೇವಿಯೆಂದು, ಇವರ ಮಗನೆ ರಾಮನಾಥನೆಂದು ಸ್ಪಷ್ಟವಾಗಿ ತಿಳಿಸುತ್ತದೆ. ಹೀಗೆ ಲಭ್ಯವಿರುವ ಶಾಸನಗಳು, ಅವನ ಶೌರ್ಯಗುಣಗಳ ಪ್ರಶಂಸೆ ಮತ್ತು ಅವನ ಹೆಸರಿನಲ್ಲಿ ದೇವಾಲಯಗಳನ್ನು ನಿರ್ಮಿಸಿ ಪೂಜಿಸಿದ ಬಗ್ಗೆ ತಿಳಿಸುತ್ತವೆ. ರಾಮಘಡದ ಶಾಸನ ಅತ್ಯಂತ ಸ್ಪಷ್ಟವಾಗಿ ಕುಮ್ಮಟದ ಅರಸರ ವಂಶಾವಳಿಯ ಚಿತ್ರವನ್ನು ನೀಡುತ್ತದೆ.

ಕರ್ನಾಟಕವನ್ನಾಳಿದ ಯಾವುದೇ ಮನೆತನದ ದೊರೆ ಕುಮಾರರಾಮನಾಥನಷ್ಟು ಜನಪ್ರಿಯನಾಗಲಿಲ್ಲ ಹಾಗೂ ಪೂಜಿತನಾಗಲಿಲ್ಲ. ಇಂದೂ ಸಹ ಕುಮಾರರಾಮನಿಗೆ ಪೂಜೆ ಪುರಸ್ಕಾರಗಳು ನಡೆಯುತ್ತಿವೆ. ಈತನ ಹೆಸರಿನಲ್ಲಿ ಜಾತ್ರೆಗಳನ್ನು ಮಾಡುತ್ತಿದ್ದಾರೆ. ಕುಮ್ಮಟದ ಅರಸರು ಕರ್ನಾಟಕದ ಇತರ ರಾಜಮನೆತನಗಳಷ್ಟೇ ಸ್ಥಾನಮಾನ ಪಡೆಯುವ ಅರ್ಹತೆ ಹೊಂದಿದ್ದಾರೆ. ಇವರ ಸಾಧನೆ ಸ್ಮರಣೀಯ. ಕರ್ನಾಟಕದ ಚರಿತ್ರೆಯ ಪುಟಗಳಲ್ಲಿ ಕುಮ್ಮಟದ ಅರಸರ ಶೌರ್ಯ, ಪರಾಕ್ರಮ, ತ್ಯಾಗ, ಆದರ್ಶ ಮತ್ತು ಸಾಧನೆಗಳು ಅಚ್ಚಾಗಬೇಕಾಗಿದೆ.

ಕ್ರಿ.ಶ. ೧೩೨೭ರಲ್ಲಿ ದೆಹಲಿಯ ಮಹಮದ್‌ಬಿನ್ ತುಘಲಕ್‌ನ ಸೈನ್ಯ ಕುಮ್ಮಟದ ಮೇಲೆ ದಾಳಿಮಾಡಿತು (Majumdar 1960: 61-62). ಈ ದಾಳಿಯಲ್ಲಿ ಕಂಪಿಲದೇವ ಹಾಗೂ ಅವನ ಮಗನಾದ ರಾಮನಾಥ ಮರಣಹೊಂದಿದರು (Devaraj/Patil, 1991:181-84). ಕುಮ್ಮಟ ರಾಜ್ಯ ದೆಹಲಿ ಸುಲ್ತಾನನ ವಶವಾಯಿತು (Majumdar 1960: 61-62). ಈ ವೇಳೆಗಾಗಲೇ ಮುಸ್ಲಿಮ್ ದಾಳಿಯಿಂದ ಸಂಕಷ್ಟಕ್ಕೊಳಗಾಗಿದ್ದ ಮೂರನೆಯ ಬಲ್ಲಾಳನಿಗೆ ಅಪಾಯದ ಮುನ್ಸೂಚನೆ ಇತ್ತು. ಕುಮ್ಮಟದ ಪತನದ ನಂತರ ಹರಿಹರ ಮತ್ತು ಸಹೋದರರು ಆನೆಗೊಂದಿಯಿಂದ ಈ ಭಾಗದ ಆಡಳಿತವನ್ನು ನಿರ್ವಹಿಸಿದರು. ಇವರು ಸ್ಥಳೀಯರಾಗಿದ್ದು, ಕಂಪಿಲನ ಬಂಧುಗಳಾಗಿದ್ದ ಕಾರಣ ಜನರ ಬೆಂಬಲವನ್ನು ಪಡೆದಿದ್ದರು. ಸ್ಥಳೀಯವಾಗಿ ಜನಪ್ರಿಯರಾಗಿದ್ದ, ಈ ಸಹೋದರರ ಬಗ್ಗೆ ಮೂರನೆಯ ಬಲ್ಲಾಳ ವಿಶೇಷ ಪ್ರೀತಿಯನ್ನು ತೋರಿಸಿದನು. ತನ್ನ ಮಹಾಮಂಡಲೇಶ್ವರರನ್ನಾಗಿ ಮಾಡಿಕೊಂಡನು. ಉತ್ತರದ ಕಡೆಯ ದಾಳಿಗಳನ್ನು ತಡೆಯಲು ಅವರಿಗೆ ಹೆಚ್ಚಿನ ಅಧಿಕಾರಗಳನ್ನು ನೀಡಿ ಲಕಿಜಿತ್ಸಾಹಿಸಿದನು. ಹಂಪೆಯಲ್ಲಿ ತಾನು ನಿರ್ಮಿಸಿದ ಹೊಸಪಟ್ಟಣದಲ್ಲಿ ನೆಲೆಗೊಳ್ಳುವಂತೆ ಮಾಡಿದನು (ಎಚ್ಚೆಸ್ಕೆ ೧೯೮೫: ೭೧). ಕ್ರಿ.ಶ. ೧೩೪೬ರ ವೇಳೆಗೆ ಹೊಯ್ಸಳರ ಆಳ್ವಿಕೆ ಕೊನೆಗೊಂಡು, ಹರಿಹರ ಮತ್ತು ಸಹೋದರರು ಸ್ವತಂತ್ರವಾಗಿ ಆಳ್ವಿಕೆಯನ್ನು ಆರಂಭಿಸಿ ವಿಜಯಗರ ಸಾಮ್ರಾಜ್ಯವನ್ನು ಸ್ಥಾಪಿಸಿದರು ( ಶಿವಣ್ಣ ೧೯೯೭: ೧೫). ಈ ಮೇಲಿನ ವಿವರಗಳಿಂದ ಕುಮ್ಮಟ ಮತ್ತು ವಿಜಯನಗರ ಸ್ಥಾಪಕರ ಸಂಬಂಧಗಳು ವ್ಯಕ್ತವಾಗುತ್ತವೆ. ಕುಮ್ಮಟ ರಾಜ್ಯದ ಸಮಾಧಿಯ ಮೇಲೆ ವಿಜಯನಗರ ರಾಜ್ಯವನ್ನು ಸ್ಥಾಪಿಸಲಾಯಿತು ಎನ್ನುವ ಮಾತು ಅರ್ಥಪೂರ್ಣ ವಾಗಿದೆ (Burton Stein 1993 :19). ಇದೇ ಅರ್ಥದಲ್ಲಿ, ಕಂಪಿಲನ ಮನೆತನದ ಅವಸಾನದಲ್ಲಿಯೇ ಸಾಮ್ರಾಜ್ಯವೊಂದರ ಕಿಡಿ ಹುದುಗಿತ್ತು ಎನ್ನುವ ದೇಶಿ ವಿದ್ವಾಂಸನ ಮಾತನ್ನು ಮೊದಲು ಒಪ್ಪಬೇಕಾಗುತ್ತದೆ (ವರದರಾಜರಾವ್ ೧೯೬೩ : xxix).

ವಿಜಯನಗರವು ಜನಮನದಲ್ಲಿ ಪ್ರೀತಿ ಮತ್ತು ಗೌರವವನ್ನು ಕ್ಷಿಪ್ರವಾಗಿ ಗಳಿಸಿಕೊಳ್ಳಲು ಅನೇಕ ಅಂಶಗಳು ಕಾರಣವಾಗಿವೆ. ಅವುಗಳಲ್ಲಿ ಕುಮ್ಮಟದ ಪತನದ ಬಗೆಗಿದ್ದ ಅನುಕಂಪವೂ ಒಂದು. ಅಂದರೆ ಕಂಪಿಲ ಮತ್ತು ಮಗ ರಾಮನಾಥ ಶೌರ್ಯದಿಂದ ಹೋರಾಡಿ ಪ್ರಾಣತ್ಯಾಗ ಮಾಡಿದರು. ರಾಮನಾಥ ತನ್ನ ಶೌರ್ಯ ಸಾಹಸಗಳಿಗೆ ಹೆಸರಾಗಿದ್ದು, ಸದ್ಗುಣಗಳ ಗಣಿಯಾಗಿದ್ದನು. ಈತನನ್ನು ಕುರಿತಂತೆ ಐತಿಹ್ಯ, ಕಥೆ ಮತ್ತು ಕಾವ್ಯಗಳು ವಿಜಯನಗರ ಕಾಲದಲ್ಲಿ ವ್ಯಾಪಕವಾಗಿ ರಚನೆಗೊಂಡವು. ಕಂಪಿಲನ ಮನೆತನದ ಅವಸಾನದಲ್ಲಿಯೇ ಸಾಮ್ರಾಜ್ಯವೊಂದರ (ವಿಜಯನಗರ) ಕಿಡಿ ಹುದುಗಿತ್ತು ಎನ್ನುವುದನ್ನು ಮನಗಂಡರೆ, ವೀರ ಕಥಾನಕವಾದ ಕುಮಾರ ರಾಮನ ಕಥೆಗೆ ವಿಜಯನಗರದ ಉಚ್ಚ್ರಾಯ ಕಾಲದಲ್ಲಿ ಏಕೆ ಪ್ರಾಶಸ್ತ್ಯ ಬಂತು ಎನ್ನುವುದು ವೇದ್ಯವಾಗುತ್ತದೆ ಎಂದು ವರದರಾಜರಾವ್ ಅಭಿಪ್ರಾಯಪಡುತ್ತಾರೆ (ಅದೇ). ಶಾಸನಗಳು ರಾಮನಾಥ ಎಂದು ಕರೆದರೆ, ಜನಪದರಲ್ಲಿ ಕುಮಾರರಾಮನೆಂದು ಪ್ರಸಿದ್ಧನಾದನು. ಈತನನ್ನು ಕುರಿತ ಕಾವ್ಯಗಳು, ಕುಮಾರರಾಮನ ಸಾಂಗತ್ಯಗಳೆಂದು ಕನ್ನಡ ಸಾಹಿತ್ಯ ಲೋಕದಲ್ಲಿ ಚಿರಪರಿಚಿತವಾಗಿವೆ. ಕರ್ನಾಟಕದ ಯಾವೊಬ್ಬ ಚಾರಿತ್ರಿಕ ವ್ಯಕ್ತಿಯನ್ನು ಕುರಿತಂತೆ ಈ ಸಂಖ್ಯೆಯಲ್ಲಿ ಸಾಂಗತ್ಯ ಕೃತಿಗಳು ರಚನೆಯಾಗಲಿಲ್ಲವೆಂದು ಹೇಳಬಹುದು. ಕುಮಾರರಾಮ ಅಥವಾ ರಾಮನಾಥನ ತ್ಯಾಗ, ಆದರ್ಶ, ಸದ್ಗುಣಗಳು ಎಲ್ಲ ಕಾಲಕ್ಕೂ ಮೌಲಿಕವಾಗಿವೆ. ಕುಮಾರರಾಮನಿಗೆ, ಸಾಹಿತ್ಯರಚನೆಗೂ ಮೊದಲೇ ದೇವಾಲಯಗಳನ್ನು ನಿರ್ಮಿಸಿ, ಅವನ ಶಿಲ್ಪಗಳನ್ನು ಪ್ರತಿಷ್ಠಾಪಿಸಿ ಪೂಜಿಸಲಾಯಿತು. ಈ ರೀತಿ ವಿಜಯನಗರ ಕಾಲದಲ್ಲಿ ಕುಮಾರ ರಾಮನು ಆರಾಧನೆಗೊಳಪಟ್ಟದ್ದು ಹಾಗೂ ಆ ಸಂಬಂಧವಾಗಿ ರಚನೆಗೊಂಡ ಸ್ಮಾರಕಗಳು ಮತ್ತು ಸಾಹಿತ್ಯ ಕೃತಿಗಳ ರಚನೆಯ ಹಿಂದಿರುವ ಸಮಕಾಲೀನ ಉದ್ದೇಶ ಮತ್ತು ಮಹತ್ವವನ್ನು ಅರಿಯುವ ಪ್ರಯತ್ನ ಮಾಡಲಾಗಿದೆ.

ಕ್ರಿ.ಶ. ೧೩೨೭ರಲ್ಲಿ ಕುಮ್ಮಟವು ಪತನವಾದ ನಂತರ, ಮೊದಲ ಬಾರಿಗೆ ಕ್ರಿ.ಶ. ೧೪೦೭ರಲ್ಲಿ ಹಾವೇರಿ ತಾಲ್ಲೂಕಿನ ಸಂಗೂರಿನಲ್ಲಿ ಮಾದರಸ ಎಂಬುವನು ಕುಮಾರರಾಮನಾಥ ದೇವರ ಪ್ರತಿಷ್ಠೆ ಮಾಡಿಸಿದನು. ಈ ಮಾದರಸನು, ಸೇನಾಧಿಪತಿ ಸಂಗಮನ ಮಗ ಹಾಗೂ ಕಂಪಿಲರಾಯನಲ್ಲಿ ಬಾಹತ್ತರ ನಿಯೋಗಾಧಿಪತಿಯಾಗಿದ್ದ ಬೈಚವೆಗ್ಗಡೆಯ ಮೊಮ್ಮಗ ನಾಗಿದ್ದನು. ಅಂದರೆ ಬೈಚವೆಗ್ಗಡೆಯು ಹಿಂದಿನ ಕುಮ್ಮಟ ರಾಜ್ಯದಲ್ಲಿ ಸೇವೆಯಲ್ಲಿದ್ದನು. ಅವನ ಮಗ ಸಂಗಮ ಮತ್ತು ಮೊಮ್ಮಗ ಮಾದರಸರು ವಿಜಯನಗರದ ಸೇವೆಯಲ್ಲಿದ್ದ ರೆಂಬುದು ಗಮನಾರ್ಹ. ಕುಮ್ಮಟ ರಾಜ್ಯದ ಅಧಿಕಾರಿಗಳ ಮಕ್ಕಳು ಮತ್ತು ಮೊಮ್ಮಕ್ಕಳು ವಿಜಯನಗರ ಕಾಲದಲ್ಲಿ ಅಧಿಕಾರಿಗಳಾಗಿ ಮುಂದುವರೆದರೆಂಬುದಕ್ಕೆ ಇದೊಂದು ಉದಾಹರಣೆ. ಕುಮಾರ ರಾಮನಾಥನು ತೀರಿಕೊಂಡ ಎಂಭತ್ತು ವರ್ಷಗಳ ನಂತರ, ಅವನ ಶಿಲ್ಪವನ್ನು ಪ್ರತಿಷ್ಠಾಪಿಸಿದ್ದಾರೆ. ಇದು ಕುಮ್ಮಟ ರಾಜ್ಯದ ಬಗೆಗಿದ್ದ ಗೌರವವನ್ನು ಸೂಚಿಸುತ್ತದೆ. ಈ ಶಾಸನ ಕಲ್ಲಿನಲ್ಲಿರುವ ಕುಮಾರರಾಮ ಅಥವಾ ರಾಮನಾಥನ ಶಿಲ್ಪ ಸುಂದರವಾಗಿದೆ. ರಾಮನಾಥನನ್ನು ಕುರಿತ ಸಂಗತಿಗಳು ಇನ್ನೂ ಹಸಿಹಸಿಯಾಗಿಯೇ ಜನಸಾಮಾನ್ಯರಲ್ಲಿ ಉಳಿದಿದ್ದವು ಎಂಬುದನ್ನು ಈ ಮೇಲಿನ ಧರ್ಮಕಾರ್ಯವು ಪ್ರಸ್ತುತಪಡಿಸುತ್ತದೆ. ಇದನ್ನು ಇಡೀ ಸಮಾಜವು ಮಾನ್ಯಮಾಡಿದೆ. ಈ ಮೂಲಕ ರಾಮನಾಥನು ಬದುಕಿದ್ದಾಗಲೆ ಜನರ ಗೌರವಾದರಗಳಿಗೆ ಪಾತ್ರನಾಗಿದ್ದು, ದೈವಾಂಶ ಸಂಭೂತನೆನಿಸಿದ್ದನು ಎಂದು ತಿಳಿದುಬರುವುದು. ಆದರೂ ಯಾವುದೇ ಸಮಕಾಲೀನ ಶಾಸನ ಇವನನ್ನು ಪ್ರಸ್ತಾಪಿಸುವುದಿಲ್ಲ. ಕುಮ್ಮಟದ ವೀರಗಲ್ಲೊಂದು, ಸುಲ್ತಾನನ ಸೈನ್ಯದೊಡನೆ ಹೋರಾಡಿ ಮಡಿದ ರಾಮ ಎಂಬುವನನ್ನು ಉಲ್ಲೇಖಿಸುತ್ತದೆ. ಇವನೇ ರಾಮನಾಥ ಎಂಬುದರ ಬಗ್ಗೆ ಸ್ಪಷ್ಟವಿಲ್ಲ.

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಮಾಳಗೊಂಡನಕೊಪ್ಪ (ಬಳ್ಳಿಗಾವೆ ಮತ್ತು ತಾಳಗುಂದದ ನಡುವೆ) ಗ್ರಾಮದ ಪಶ್ಚಿಮಭಾಗದಲ್ಲಿ ಒಂದಂಕಣದ ಕುಮಾರರಾಮನ ದೇವಾಲಯವಿದೆ. ಇಲ್ಲಿ ದೊರೆತ ಹೊಸ ಶಾಸನವು, ಕಂಪಿಲದೇವನ ಕುಮಾರ ರಾಮನಾಥ ವೊಡೆಯರಿಗೆ ತಾಳಗುಂದದ ಒಳಗಣ ಕೊಪ್ಪದ ಕೆಂಚಗೌಡನ ಮಗ ಮಾಳಗೌಡನು ಕೌಲಕಟ್ಟೆಯ ಕೆಳಗಣ ಗದ್ದೆಯನ್ನು ದೇವರ ಸೇವೆಗೆ ಬಿಟ್ಟನು ಎಂದಿದೆ (ಭೋಜರಾಜ ೧೯೯೮: ೩೨). ಶಾಸನದ ಮೇಲ್ಭಾಗದಲ್ಲಿ, ಕುದುರೆಯ ಮೇಲೆ ಕುಳಿತು ಈಟಿ ಹಿಡಿದಿರುವ ರಾಮನಾಥನ ಉಬ್ಬುಶಿಲ್ಪವಿದೆ. ಕುದುರೆಯ ಹಿಂಭಾಗದಲ್ಲಿ ವ್ಯಕ್ತಿಯೊಬ್ಬ ನಿಂತು ರಾಮನಾಥನಿಗೆ ಛತ್ರಿ ಹಿಡಿದಿದ್ದಾನೆ. ಈ ರೀತಿ ಶಾಸನೋಕ್ತ ಶಿಲ್ಪಗಳು ತೀರಾ ವಿರಳ. ಕುಮಾರರಾಮನ ಶಿಲ್ಪಗಳು ಹೆಚ್ಚಾಗಿ ಅರೆಮಲೆನಾಡು ಪ್ರದೇಶಗಳಲ್ಲಿವೆ. ಬಹುಶಃ ಕುಮ್ಮಟವು ಪತನವಾದ ನಂತರ ಅಧಿಕಾರಿಗಳು, ಮತ್ತಿತರರು ಪ್ರಾಣರಕ್ಷಣೆ ಹಾಗೂ ಇನ್ನಿತರ ಕಾರಣಗಳಿಂದ ಅರೆಮಲೆನಾಡು ಪ್ರದೇಶಗಳಿಗೆ ಪಲಾಯನ ಮಾಡಿರಬಹುದು. ಅಂದರೆ ಇಂದಿನ ಹಾವೇರಿ, ಉತ್ತರ ಕನ್ನಡ, ಶಿವಮೊಗ್ಗ ಮತ್ತು ಧಾರವಾಡ ಜಿಲ್ಲೆಯ ಭಾಗಗಳಾಗಿವೆ. ಈ ಭಾಗಗಳಲ್ಲಿ ನೆಲಸಿರುವ ಜನರು ಇಂದಿಗೂ ಕುಮಾರರಾಮನನ್ನು ಆರಾಧಿಸುತ್ತಾರೆ. ಬಹುಶಃ ಕುಮ್ಮಟದಿಂದ ಪಲಾಯನ ಮಾಡಿದ ಜನರು ತಮ್ಮ ಅರಸನಾದ ಕುಮಾರರಾಮನಾಥನನ್ನು ದೈವಾಂಶ ಸಂಭೂತನೆಂದು ನಂಬಿ, ಅವನ ಪ್ರತಿಮೆಗಳನ್ನು ಸ್ಥಾಪಿಸಿ, ಪೂಜಿಸುವುದರ ಮೂಲಕ ತಮ್ಮ ಗತವಲಸೆಯ ಕುರುಹನ್ನು ಉಳಿಸಿಕೊಂಡಿರಬಹುದು.

ತೀರ್ಥಹಳ್ಳಿ ತಾಲ್ಲೂಕಿನ ಕೊಕ್ಕೊಡು ಸ್ಥಳದ ಕ್ರಿ.ಶ. ೧೪೩೨ರ ಶಾಸನೊಕ್ತ ವೀರಗಲ್ಲೊಂದು ವಿಜಯನಗರದ ಎರಡನೆಯ ದೇವರಾಯನ ಕಾಲಕ್ಕೆ ಸೇರಿದೆ. ಇದರಲ್ಲಿ ವೀರನೊಬ್ಬನ ಶೌರ್ಯದ ವರ್ಣನೆಗಾಗಿ ಕುಮಾರ ರಾಮನಾಥನನ್ನು ಉದಾಹರಿಸಲಾಗಿದೆ (ಎ.ಕ viii : ತೀರ್ಥಹಳ್ಳಿ ೨೩). ಇದರಿಂದ, ವಿಜಯನಗರ ಕಾಲದಲ್ಲಿ ಕುಮಾರರಾಮನ ಶೌರ್ಯ ಸಾಹಸಗಳ ವರ್ಣನೆ ಜೀವಂತವಿದ್ದು, ಯುದ್ಧದಲ್ಲಿ ಹೋರಾಡುವ ವೀರರಿಗೆ ಸ್ಫೂರ್ತಿ ಯಾಗಿದ್ದನು ಎಂದು ಈ ಮೇಲಿನ ಶಾಸನದಿಂದ ಗ್ರಹಿಸಬಹುದು. ಇದು ಆ ಕಾಲದ ಸಮಾಜದ ನಂಬಿಕೆಯೂ ಸಹ ಆಗಿತ್ತು.

ಸೊಂಡೂರು ತಾಲ್ಲೂಕಿನ ರಾಮಘಡದ ಕ್ರಿ.ಶ. ೧೫೨೮ರ ಶಾಸನವು, ಮುಮ್ಮಡಿ ಸಿಂಗನ ಮೊಮ್ಮಗನೂ, ಕಂಪಿಲರಾಯ ಮತ್ತು ಹರಿಹರದೇವಿಯರ ಮಗನೂ ಆದ ಹೊಸಮಲೆದುರ್ಗದ ರಾಮನಾಥ ಒಡೆಯ ಹಾಗೂ ಇತರ ವೀರರು ಯುದ್ಧದಲ್ಲಿ ಮಡಿದ ಸ್ಮರಣಾರ್ಥವಾಗಿ, ಗೋಪಾಯಿ, ಅವಳ ತಮ್ಮನಾದ ರಾಮನ ಮತ್ತು ಇತರರು ಸೇರಿ ಹೊಸಮಲೆಯಲ್ಲಿ ರಾಮನಾಥದೇವರ ದೇವಾಲಯವನ್ನು ನಿರ್ಮಿಸಿ, ಪೂಜಾ ಸಾಮಾಗ್ರಿಗಳನ್ನು ನೀಡಿದರೆಂದು ತಿಳಿಸುತ್ತದೆ (ARIE 1943-44: B 76). ಇದರಿಂದ ಪೂರ್ವಕಾಲದಲ್ಲಿ ಆಗಿಹೋದ ವೀರನೊಬ್ಬನ ಶೌರ್ಯಸಾಹಸಗಳಿಗೆ ವಿಜಯನಗರ ಕಾಲದಲ್ಲಿ ದೊರೆತ ಗೌರವ ಪುರಸ್ಕಾರವನ್ನು ಮನಗಾಣಬಹುದು. ಈ ಮೂಲಕ ಆ ಕಾಲದ ಸೈನಿಕರಿಗೆ ಆತ್ಮಸ್ಥೈರ್ಯ ಹೆಚ್ಚುತ್ತಿತ್ತು. ಆದರೂ ಪ್ರಬಲ ಐತಿಹ್ಯವಾಗಿದ್ದ ಕುಮಾರರಾಮನಾಥನಿಗೆ ವಿಜಯನಗರದ ಅರಸರು ಯಾವುದೇ ಗುಡಿಗುಂಡಾರಗಳನ್ನು ಕಟ್ಟದಿರುವುದು ಆಶ್ಚರ್ಯದ ಸಂಗತಿ. ಬಹುಶಃ ಅವರಿಗೆ ತಮ್ಮ ಪೂರ್ವದಲ್ಲಿ ಆಗಿಹೋದ ಸಣ್ಣ ರಾಜ್ಯವೊಂದರ ರಾಜರನ್ನು ಆರಾಧಿಸುವುದರಿಂದ ತಮ್ಮ ಘನತೆಗೆ ಎಲ್ಲಿ ಕುಂದು ಬರಬಹುದೆಂಬ ಮನಸ್ಥಿತಿ ಕಾರಣವಿರಬಹುದು. ಅಲ್ಲದೆ ಸ್ವತಂತ್ರ ರಾಜ್ಯವೊಂದು, ತನ್ನ ಗುರುತಿಗಾಗಿ ತನ್ನನ್ನೇ ಮೂಲಶಕ್ತಿಯಾಗಿ ಕಂಡುಕೊಳ್ಳುವ ಪ್ರಯತ್ನ ಮಾಡುತ್ತದೆಯೆ ಹೊರತು, ಮತ್ತೊಂದು ರಾಜ್ಯಶಕ್ತಿಯಿಂದ ತಾನು ಪ್ರಭಾವಿತನಾದನೆಂದು ಹೇಳಿಕೊಳ್ಳುವುದಿಲ್ಲ. ಹಾಗೂ ಅಂತಹ ಸಾಧ್ಯತೆಗಳು ಕಡಿಮೆ. ವಿಜಯನಗರದ ಅರಸರು ಗತಿಸಿಹೋದ ಕುಮ್ಮಟದ ಅರಸರನ್ನು ಎಲ್ಲಿಯೂ ಸ್ಮರಿಸುವುದಿಲ್ಲ. ಹಾಗು ಅವರಿಗಾಗಿ ಯಾವುದೇ ಸ್ಮಾರಕಗಳನ್ನು ಸಹ ನಿರ್ಮಿಸಲಿಲ್ಲ.

ಕುಮ್ಮಟದುರ್ಗದಲ್ಲಿರುವ ರಾಮಸ್ವಾಮಿ ದೇವಾಲಯದಲ್ಲಿ ಸಾಲಾಗಿ ಇಟ್ಟಿರುವ ಹನ್ನೆರಡು ಕಲ್ಲುಗುಂಡುಗಳಿವೆ. ಇವು ಕುಮಾರರಾಮ ಮತ್ತು ಇತರರ ಶಿರಗಳೆಂದು ಹೇಳುತ್ತಾರೆ. ಇಲ್ಲಿ ವರ್ಷಕ್ಕೊಮ್ಮೆ ಜಾತ್ರೆ ನಡೆಯುತ್ತದೆ (ಸುರೇಶ್ ೨೦೦೧). ಇಲ್ಲಿ ಬೈಚಪ್ಪ ಮತ್ತು ಕಾಟಪ್ಪ ಅವರುಗಳ ಹೆಸರಿನಲ್ಲೂ ದೇವಾಲಯಗಳಿವೆ. ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ದೊಡ್ಡಪಾಲನಹಳ್ಳಿಯಲ್ಲಿ ಕುಮಾರರಾಮನ ಗುಡಿ ಇದೆ. ಇಲ್ಲಿಯೂ ಸಹ ಪ್ರತಿವರ್ಷ ಜಾತ್ರೆ ನಡೆಯುತ್ತದೆ (ಲಕ್ಷ್ಮಣ ತೆಲಗಾವಿ ೧೯೯೫: ೧೦೨). ಕುಮ್ಮಟದುರ್ಗದ ಸಮೀಪವಿರುವ ಮಲ್ಲಾಪುರ ಗ್ರಾಮದಲ್ಲಿ ಕುಮಾರರಾಮನ ದೇವಾಲಯವಿದ್ದು, ಕುಮಾರರಾಮ ಮತ್ತು ಹೋಲಿಕೆರಾಮರ ರುಂಡಗಳ ಮರದ ಪ್ರತಿಮೆಗಳಿವೆ. ಸ್ಥಳೀಯರು ಅದನ್ನು ರಾಮನ ಗುಡಿ ಎಂದು ಕರೆಯುತ್ತಾರೆ. ಇದೇ ರೀತಿ ಸಮೀಪದ ಇಂದರಗಿ ಗ್ರಾಮದಲ್ಲೂ ಮರದಿಂದ ಮಾಡಿದ ಆರು ರುಂಡಶಿಲ್ಪಗಳಿವೆ. ಇವು ಕುಮಾರರಾಮ, ಹೋಲಿಕೆರಾಮ, ಬೈಚಪ್ಪ, ಕಾಟಣ್ಣ, ಕಂಪಿಲ, ಸಂಗಮದೇವ ಎಂಬ ಹೆಸರುಗಳಿಂದ ಗುರುತಿಸಲ್ಪಡುತ್ತವೆ. ಹೀಗೆ ಕುಮಾರರಾಮನ ಆರಾಧನಾ ಮೂರ್ತಿಗಳ ಸ್ವರೂಪವನ್ನು ಮುಖ್ಯವಾಗಿ ಮೂರು ರೀತಿಯಲ್ಲಿ ಗುರುತಿಸಲಾಗಿದೆ. ಮೊದಲನೆಯದು ಗುಂಡುಕಲ್ಲಿನ ಆಕಾರದ ಮೂರ್ತಿಗಳು, ಇವು ಕರ್ನಾಟಕದಾದ್ಯಂತ ಅಲ್ಲಲ್ಲಿ ಕಂಡುಬರುತ್ತವೆ. ಅವುಗಳನ್ನು ಜಟಿಂಗಪ್ಪ, ಜಟಂಗಿವೀರ, ಜಟಂಗಿ ಈರ ಎನ್ನಲಾಗುವುದು (ಕುಮಾರ್ ೨೦೦೧: ೮). ಎರಡನೆಯದಾಗಿ ದೇವಾಲಯಗಳು, ಈ ಮೊದಲು ಹೇಳಿದ ಸ್ಥಳಗಳಲ್ಲದೆ, ಶಂಕರಿಕೊಪ್ಪ (ಸೊರಬ), ಬೇಡಕಣಿ (ಸಿದ್ದಾಪುರ), ಮೂಡೂರು, ಮುಲ್ಲಂದ, ಶಿರಕೋಡ (ಹಾನಗಲ್), ಮೂಡ್ಲೂರು (ಹಿರೇಕೆರೂರು) ಮುಂತಾದ ಸ್ಥಳಗಳಲ್ಲಿ ದೇವಾಲಯಗಳಿವೆ.

ಕೊನೆಯದಾಗಿ ವೀರಗಲ್ಲುಗಳು, ಹಿರೇಮಾಗೂರು ಎಂಬಲ್ಲಿರುವ ವೀರಗಲ್ಲನ್ನು ರಾಮ, ಕುಮಾರರಾಮ ಎಂದು ಸ್ಥಳೀಯರು ಪೂಜಿಸುತ್ತಾರೆ (ಅದೇ). ಇದನ್ನು ವಿಶೇಷವಾಗಿ ಗಂಗಾಮತಸ್ಥರು ಪೂಜಿಸುತ್ತಾರೆ. ಹೊಸಪೇಟೆ ತಾಲೂಕಿನ ರಾಮಸಾಗರ ವ್ಯಾಪ್ತಿಯ ತುಂಗಭದ್ರಾ ನದಿಗೆ ಹತ್ತಿರದಲ್ಲಿ ಸುಮಾರು ಮೂರು ಅಡಿ ಎತ್ತರದ ವೀರಗಲ್ಲೊಂದು ಕಂಡು ಬರುತ್ತದೆ. ಈ ವೀರಗಲ್ಲಿನ ಬಲಭಾಗದಲ್ಲಿ ಸುಮಾರು ಎರಡು ಮುಕ್ಕಾಲು ಅಡಿ ಎತ್ತರದ ಪುರುಷನ ಉಬ್ಬುಶಿಲ್ಪವಿದೆ. ಇದರ ಎಡಭಾಗಕ್ಕೆ ಸ್ವಲ್ಪ ಚಿಕ್ಕದಾದ ಸ್ತ್ರೀ ಉಬ್ಬುಶಿಲ್ಪವಿದೆ. ಪುರುಷ ಶಿಲ್ಪವು ಬಲಗೈಯಲ್ಲಿ ಬಾಣವನ್ನು, ಎಡಗೈಯಲ್ಲಿ ಬಿಲ್ಲನ್ನು ಹಿಡಿದಿದೆ. ನಡುವಿನಲ್ಲಿ ಕಠಾರಿಯುಂಟು. ತುರುಬಿನ ಕೇಶಾಲಂಕಾರವಿದೆ. ಗಡ್ಡ ಮತ್ತು ಮೀಸೆಗಳನ್ನು ಒಳಗೊಂಡಿದ್ದು, ನಡುವಿನ ಸುತ್ತ ದೋತಿಯನ್ನು ಬಿಗಿದು ಕಟ್ಟಲಾಗಿದೆ. ಸ್ತ್ರೀ ಶಿಲ್ಪವು ಸಹ ಬಲಗೈಯಲ್ಲಿ ಆಯುಧವನ್ನು ಹಾಗೂ ಎಡಗೈಯಲ್ಲಿ ಹೂವನ್ನು ಹಿಡಿದುಕೊಂಡಂತಿದೆ. ಆಕೆಯ ತುರುಬನ್ನು ಬಲಕ್ಕೆ ಕಟ್ಟಲಾಗಿದೆ. ಈ ಶಿಲ್ಪವಿರುವ ಪರಿಸರವನ್ನು ರಾಜಾಪುರ ಎಂದು ಸ್ಥಳೀಯರು ಗುರುತಿಸುತ್ತಾರೆ. ಈ ಶಿಲ್ಪವನ್ನು ರಾಮಸಾಗರದ ಗಂಗಾಮತಸ್ಥರು ಪೂಜಿಸುತ್ತಾರೆ. ಅವರು ಇದನ್ನು ರಾಮನಾಥ ದೇವರೆನ್ನುತ್ತಾರೆ. ಶಿಲ್ಪವು ಲಕ್ಷಣದ ದೃಷ್ಟಿಯಿಂದ ವಿಜಯನಗರೋತ್ತರ ಕಾಲಕ್ಕೆ ಸೇರುತ್ತದೆ. ಪ್ರಮಾಣಬದ್ಧವಲ್ಲದ ಈ ಶಿಲ್ಪ ಕಮಾನಿನ ಅಲಂಕರಣವನ್ನು ಹೊಂದಿದೆ. ಸ್ತ್ರೀ ಶಿಲ್ಪವನ್ನು ಕುಮಾರರಾಮನ ಹೆಂಡತಿಯೆಂದು ತಿಳಿಸುತ್ತಾರೆ.

ಈ ಮೇಲಿನ ವಿವರಗಳಿಂದ ವಿಜಯನಗರ ಕಾಲದಲ್ಲಿ ಕುಮಾರರಾಮನಿಗಾಗಿ ನಿರ್ಮಾಣಗೊಂಡ ಸ್ಮಾರಕಗಳು ಮತ್ತು ಅವುಗಳ ಹಿಂದಿದ್ದ ಭಕ್ತಿ ಗೌರವಗಳು ವ್ಯಕ್ತವಾಗುತ್ತವೆ. ಇದರ ಮುಂದಿನ ಹೆಜ್ಜೆಯಾಗಿ ಸಾಹಿತ್ಯ ಕೃತಿಗಳು ರಚನೆಗೊಂಡವು. ವಿಜಯನಗರ ಸ್ಥಾಪನೆಗೆ ಮುಂಚೆ ಬದುಕಿ ಬಾಳಿದ ಕುಮಾರರಾಮ ಅಥವಾ ರಾಮನಾಥನ ಆದರ್ಶ ಮತ್ತು ಸಾಹಸಗಳನ್ನು ನಮ್ಮ ಚರಿತ್ರೆಕಾರರು ಗಮನಿಸಲಿಲ್ಲ. ಆದರೂ ಅವನ ಹೆಸರನ್ನು ಹಚ್ಚಹಸಿರಾಗಿ ಉಳಿಸಿದ ಕೀರ್ತಿ ಕನ್ನಡದ ಕವಿಗಳಿಗೆ ಸಲ್ಲುತ್ತದೆ ಎಂದು ಅಭಿಪ್ರಾಯಪಡಲಾಗಿದೆ (ಲಕ್ಷ್ಮಣ್ ತೆಲಗಾವಿ ೧೯೮೭: ೧೫೫). ಆದರೆ ಇತ್ತೀಚಿನ ದಿನಗಳಲ್ಲಿ ಕುಮಾರರಾಮನನ್ನು ಕುರಿತಂತೆ ಶಾಸನಗಳು, ಶಿಲ್ಪಗಳು ಅಲ್ಲಲ್ಲಿ ಶೋಧಗೊಳ್ಳುತ್ತಿವೆ. ಇವು ಸಾಹಿತ್ಯ ಕೃತಿಗಳಲ್ಲಿನ ಕೆಲವು ಘಟನಾವಳಿಗಳನ್ನು ಸಮರ್ಥಿಸಿವೆ. ಹೀಗೆ ಹೆಚ್ಚು ಹೆಚ್ಚು ಆಧಾರಗಳು ದೊರಕುತ್ತಿರುವುದರ ಹಿನ್ನೆಲೆಯಲ್ಲಿ ಚರಿತ್ರೆಕಾರರು ಕುಮಾರರಾಮನನ್ನು ಕುರಿತು ಹೆಚ್ಚಿನ ಅಧ್ಯಯನಗಳಲ್ಲಿ ತೊಡಗಿದ್ದಾರೆ.

ದೆಹಲಿ ಸುಲ್ತಾನನೊಡನೆ ರಾಜಿಮಾಡಿಕೊಳ್ಳದೆ ತನ್ನ ಪ್ರಾಣವನ್ನೇ ಅರ್ಪಿಸಿದ ರಾಮನಾಥನು ತನ್ನ ಶೌರ್ಯ, ಪರಾಕ್ರಮ ಮತ್ತು ಆದರ್ಶಗುಣಗಳಿಂದಾಗಿ ಜನತೆಯ ಪಾಲಿಗೆ ದೈವಾಂಶ ಸಂಭೂತನಾಗಿ ಗೋಚರಿಸಿದ. ಇದು ಅವನ ಆರಾಧನೆಗೆ ದಾರಿ ಮಾಡಿಕೊಟ್ಟಿತು. ಹೀಗೆ ಜನಮನ್ನಣೆಯನ್ನು ಗಳಿಸಿದ ಈ ಜಾತಿವೀರನನ್ನು ಮೆಚ್ಚಿಕೊಂಡ ಕನ್ನಡದ ಕವಿಗಳಾದ ಪಾಂಚಾಳ ಗಂಗ, ನಂಜುಂಡ, ಮಹಾಲಿಂಗಸ್ವಾಮಿ ಮೊದಲಾದವರು ಸಾಹಿತ್ಯ ಕೃತಿಗಳನ್ನು ರಚಿಸಿದರು (ಅದೇ: ೧೫೬). ಇವೆಲ್ಲವೂ ಸಾಂಗತ್ಯರೂಪದಲ್ಲಿದ್ದು, ಸುಲಭವಾದ ಮತ್ತು ಹುರಿದುಂಬಿಸುವ ಶೈಲಿಯಲ್ಲಿ ಬರೆಯಲ್ಪಟ್ಟಿವೆ. ಪಾಂಚಾಳ ಗಂಗನು ಚೆನ್ನರಾಮನ ಸಾಂಗತ್ಯವನ್ನು ಬರೆದನು. ಇದನ್ನು ಹಳೆಯ ಕುಮಾರರಾಮನ ಸಾಂಗತ್ಯ ಎಂಬ ಹೆಸರಿನಿಂದ ಪ್ರಕಟಿಸಲಾಗಿದೆ (ಕಲಬುರ್ಗಿ ೨೦೦೮). ಅನಾಮಧೇಯನ ಹೊಸ ಕುಮಾರರಾಮನ ಕಾವ್ಯವನ್ನು ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸಿದೆ (ಕಲಬುರ್ಗಿ ೨೦೦೧). ನಂಜುಂಡ ಕವಿ ರಚಿಸಿದ ‘ರಾಮನಾಥಚರಿತೆ’ಯ ಕಾಲ ಕ್ರಿ.ಶ. ೧೫೨೫ ಎನ್ನಲಾಗಿದೆ (ಲಕ್ಷ್ಮಣ್ ತೆಲಗಾವಿ ೧೯೯೭: ೧೫೬). ಹಂಪೆಯ ಚರಪತಿ ಮಹಾಲಿಂಗಸ್ವಾಮಿಯು ಬಾಲರಾಮನ ಸಾಂಗತ್ಯವನ್ನು, ಇನ್ನೊಬ್ಬ ಅನಾಮಧೇಯ ಕೊಮಾರರಾಮಯ್ಯನ ಚರಿತೆಯನ್ನು ಬರೆದಿದ್ದಾರೆ ಇವೆರಡೂ ಪ್ರಕಟವಾಗಿವೆ (ಕಲಬುರ್ಗಿ೨೦೦೭, ೨೦೦೧). ಹೀಗೆ ಕುಮಾರರಾಮನನ್ನು ಕುರಿತು ರಚನೆಗೊಂಡಿರುವ ಸಾಂಗತ್ಯಗಳಲ್ಲಿ ಕಥಾನಿರೂಪಣೆ ಮತ್ತು ವಿವರಣೆಗಳಲ್ಲಿ ಅಂತರಗಳಿವೆ (ವರದರಾಜರಾವ್ ೧೯೬೩: III-IV).

ಕುಮಾರರಾಮನ ಸಾಂಗತ್ಯದಲ್ಲಿ ನೂರಕ್ಕೆ ನೂರು ಚರಿತ್ರೆ ದೊರೆಯದಿದ್ದರೂ, ಕೆಲವು ಸಂಗತಿಗಳಾದರೂ ಸ್ಥೂಲವಾಗಿ ತಿಳಿದುಬರುತ್ತವೆ ಎಂದು ಅಭಿಪ್ರಾಯಪಡಲಾಗಿದೆ (ಅದೇ : XXIX). ಈ ಎಲ್ಲ ಸಾಂಗತ್ಯಗಳಲ್ಲಿ ಕುಮಾರರಾಮನನ್ನು ಬೇಡ ಕುಲದವನೆಂದು ಚಿತ್ರಿಸ ಲಾಗಿದೆ. ಚಿತ್ರದುರ್ಗದ ಪಾಳೆಯಗಾರರ ಪೂರ್ವಿಕರು ಕುಮಾರರಾಮನ ಕುಲಸ್ಥರಾಗಿದ್ದು, ಅಲ್ಲಿ ಸೇವೆ ಸಲ್ಲಿಸುತ್ತಿದ್ದರಂತೆ. ಹಾಗೂ ಗುಡಿಕೋಟೆ, ಹರಪನಹಳ್ಳಿ ಮತ್ತು ತರಿಕೆರೆ ಪಾಳೆಯಗಾರರು ಕುಮಾರರಾಮನ ವಂಶೀಯರು ಎನ್ನಲಾಗಿದೆ (ಅದೇ: ೧೦೩). ಈ ಸಾಂಗತ್ಯ ಗಳಲ್ಲಿ ರಾಮನಾಥ ಚರಿತೆಯು ವಿಜಯನಗರ ಕಾಲದಲ್ಲಿ ಬರೆದಿದ್ದು, ಇದು ಹೆಚ್ಚು ಚಾರಿತ್ರಿಕ ಅಂಶಗಳನ್ನು ಒಳಗೊಂಡಿದೆ. ವಿಜಯನಗರ ಮತ್ತು ಉತ್ತರ ಕಾಲದಲ್ಲಿ ಬೇಡ ಸೈನಿಕ ಪಡೆಯನ್ನು ಬೆಳೆಸಲು ಹಾಗೂ ಹುರಿದುಂಬಿಸಲು ಕುಮಾರರಾಮನನ್ನು ಕಥಾನಾಯಕನನ್ನಾಗಿ ಚಿತ್ರಿಸುವ ಪ್ರಯತ್ನ ನಡೆದಂತೆ ಕಂಡುಬರುತ್ತದೆ. ಏಕೆಂದರೆ ಈ ಮೊದಲೆ ತಿಳಿಸಿದಂತೆ ಸಾಂಗತ್ಯಗಳು ಹುರಿದುಂಬಿಸುವ ಶೈಲಿಯಲ್ಲಿ ಬರೆಯಲ್ಪಟ್ಟಿವೆ (ಲಕ್ಷ್ಣಣ್ ತೆಲಗಾವಿ ೧೯೯೫: ೯೬). ಈ ಸಾಹಿತ್ಯ ಕೃತಿಗಳ ರಚನೆಯ ಸಂದರ್ಭದಲ್ಲಿ ವಿಜಯನಗರವು ಬಹಮನಿ ರಾಜ್ಯಗಳೊಂದಿಗೆ ನಿರಂತರವಾಗಿ ಯುದ್ಧಗಳಲ್ಲಿ ತೊಡಗಿತ್ತು. ವಿಜಯನಗರ ಸೈನ್ಯದಲ್ಲಿ ಅಸಂಖ್ಯಾತ ಬೇಡ ಪಾಳೆಯಪಟ್ಟುಗಳು ಸೇರಿದ್ದವು. ಬಹುಶಃ ಅವರಲ್ಲಿ ಯುದ್ಧೋತ್ಸಾಹವನ್ನು ತುಂಬಲು, ಈ ಹಿಂದೆ ಮುಸ್ಲಿಮ್ ಸೈನ್ಯದೊಂದಿಗೆ ವೀರಾವೇಶದಿಂದ ಹೋರಾಡಿ ಪ್ರಾಣತ್ಯಾಗ ಮಾಡಿ, ದೈವಾಂಶ ಸಂಭೂತನೆನಿಸಿಕೊಂಡ ಕುಮಾರರಾಮನನ್ನು ಕುರಿತಂತೆ ಕಾವ್ಯ ರಚನೆಯನ್ನು ಮಾಡಿರಬಹುದು. ಇದು ಪುಣ್ಯಕಥೆ ಎನ್ನುವುದರ ಮೂಲಕ ಜನಸಾಮಾನ್ಯರಲ್ಲಿ ಹೆಚ್ಚು ಪ್ರಚಾರವಾಯಿತು. ಬಾಲಕುಮಾರರಾಮನ ಸಾಂಗತ್ಯದಲ್ಲಿ, ತಾಯಿ ಹರಿಯಲದೇವಿಯು ತನ್ನ ಮಗನ ಮುಖವನ್ನು ನೋಡಿ ಕುಲಕ್ಕೆಲ್ಲ ದೇವರಾಗೆಂದು ಪೂಜಿಸಿದಳು. ಕಂಪಿಲರಾಯನು, ರಾಮನೆಂಬ ಹೆಸರಿನಿಂದ ಬೇಡರ ಕುಲದಿಂದ ಪೂಜಿಸಿಕೊಳ್ಳೆಂದೂ, ಬೇಡರು ನಿನ್ನ ಜಾತ್ರೆ ನಡೆಸಲಿ ಎಂದೂ ನುಡಿದನು ಎಂದಿದೆ. ಇದರಿಂದಾಗಿ ಕುಮಾರರಾಮನು ಬೇಡ ಕುಲದವನೆಂದು ಹೇಳಲಾಗುತ್ತಿದೆ.

ಆದರೆ ಕುರುಬರು, ಬೇಡರು, ಬೆಸ್ತರು, ದೀವರು, ಉಪ್ಪಾರರು ಮೊದಲಾದ ಶ್ರಮಿಕ ಜನರ ನಡುವೆ ಕುಮಾರರಾಮನ ಆರಾಧನೆ ಇಂದಿಗೂ ಜೀವಂತವಾಗಿದೆ (ಹಿರೇಮಠ ೨೦೦೦: ೧೭). ಜಾತ್ರೆಗೆ ಬರುವ ಕುರುಬರು, ಬೇಡರು, ಬೆಸ್ತರು, ಉಪ್ಪಾರರು ಈಡಿಗರು ಮೊದಲಾದ ಶ್ರಮಿಕಜನ ಕುಲಗಳಿಗೆ ಇಲ್ಲಿರುವ ರಾಮಸ್ವಾಮಿಯೇ ಮನೆದೇವರು ಹಾಗೂ ಕುಲ ದೇವರಾಗಿದ್ದಾನೆ (ಅದೇ: ೨೦). ಕುಮ್ಮಟದ ಸಮೀಪದಲ್ಲಿರುವ ಬೂದಗುಂಪ ಗ್ರಾಮದ ಕೆಲವರು, ಕುಮ್ಮಟದ ರಾಮಸ್ವಾಮಿ ಕುರುಬರ ದೇವರಾಗಿದ್ದು, ಕುರುಬರೇ ಹೆಚ್ಚಾಗಿ ನಡೆದುಕೊಳ್ಳುತ್ತಾರೆ ಎಂದು ತಿಳಿಸುತ್ತಾರೆ. ಸಮೀಪದ ಇಂದರಗಿಯ ನಾಯಕರು, ರಾಮಸ್ವಾಮಿಯು, ನಾಯಕ ಕುಲದವನು ಎನ್ನುತ್ತಾರೆ (ಅದೇ : ೨೧). ಜಾತ್ರೆಯ ಸಂದರ್ಭದಲ್ಲಿ ದೇವರಿಗೆ ಮೇಕೆಯನ್ನು ಕಡಿಯುವವರು ಕುರುಬ ಜನಾಂಗದವರು. ಮಲೆನಾಡಿನ ದೀವರು (ಈಡಿಗರು) ಕುಮಾರರಾಮನನ್ನು ಆರಾಧಿಸುತ್ತಾರೆ. ಇವರು ಬೇಟೆ ಮತ್ತು ಇತರ ವೃತ್ತಿಗಳನ್ನು ಮಾಡುತ್ತಾರೆ. ಹೀಗೆ ಅನೇಕ ಜನಜಾತಿಗಳು ಕುಮಾರರಾಮನನ್ನು ನಂಬಿ ಆಚರಣೆಯಲ್ಲಿ ತೊಡಗಿವೆ. ಹೀಗಾಗಿ ಕೆಲವರು ಇವನ ಜಾತಿಯ ಬಗ್ಗೆ ಸಂದೇಹ ತಾಳಿದ್ದಾರೆ.

ಒಟ್ಟಿನಲ್ಲಿ ಕುಮಾರರಾಮನನ್ನು ಕುರಿತು ರಚನೆಗೊಂಡ ಪುರಾತತ್ವ ಸ್ಮಾರಕಗಳು ಮತ್ತು ಸಾಹಿತ್ಯ ಕೃತಿಗಳು ಮಧ್ಯಕಾಲೀನ ಕರ್ನಾಟಕದ ಯುದ್ಧ ರಾಜಕಾರಣದಲ್ಲಿ ಪ್ರಭಾವ ಬೀರಿವೆ. ಈ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಅಧ್ಯಯನಗಳು ನಡೆಯಬೇಕಾಗಿದೆ.