ಕಲ್ಯಾಣಚಾಲುಕ್ಯರ ಕಾಲದಿಂದಲೂ ಶಾಸನಗಳಲ್ಲಿ ಕಾಣಿಸಿಕೊಳ್ಳುವ ಕುಮ್ಮಟದುರ್ಗ ಇಂದು ಭಗ್ನಾವಶೇಷಗಳ ತೊಟ್ಟಿಲಾಗಿ ಉಳಿದಿದೆ. ಎಂ.ಎಚ್. ರಾಮಶರ್ಮ ಎಂಬುವರು ಮೊಟ್ಟಮೊದಲ ಬಾರಿಗೆ ಕುಮ್ಮಟದುರ್ಗದಲ್ಲಿ ಕ್ಷೇತ್ರಕಾರ್ಯ ಕೈಗೊಂಡು, ಆ ಕುರಿತಂತೆ ಸಂಶೋಧನಾತ್ಮಕ ಲೇಖನಗಳನ್ನು ಪ್ರಕಟಿಸುವುದರ ಮೂಲಕ ಕುಮ್ಮಟದುರ್ಗವನ್ನು ಬೆಳಕಿಗೆ ತಂದು ಪರಿಚಯಿಸಿದರು. ಬಹು ಉಪಯುಕ್ತವಾದ ಈ ಲೇಖನಗಳು ಮುಂದಿನ ಸಂಶೋಧನೆ ಗಳಿಗೆ ಆಕರ ಸಾಮಗ್ರಿಗಳಾಗಿವೆ. ಜಿ.ವರದರಾಜರಾವ್ ಮತ್ತಿತರರು ಸಹ ಇಲ್ಲಿ ಕ್ಷೇತ್ರಕಾರ್ಯ ನಡೆಸಿ ಹೊಸ ಹೊಸ ಸಂಗತಿಗಳನ್ನು ಬೆಳಕಿಗೆ ತಂದಿದ್ದಾರೆ. ಇತ್ತೀಚೆಗೆ ರಾಜ್ಯ ಪುರಾತತ್ವ ಇಲಾಖೆಯ ಡಾ.ಸಿ.ಎಸ್.ಪಾಟೀಲರು ಕ್ರಮಬದ್ಧವಾದ ಕ್ಷೇತ್ರಕಾರ್ಯ ಕೈಗೊಂಡು, ಕುಮ್ಮಟ ದುರ್ಗದ ಪ್ರಾಚ್ಯಾವಶೇಷಗಳನ್ನು ಮತ್ತು ಅದರ ಚರಿತ್ರೆಗೆ ಸಂಬಂಧಿಸಿದ ಆಕರ ಮೂಲಗಳನ್ನು ಒಳಗೊಂಡ ಸಮಗ್ರ ಲೇಖನಗಳನ್ನು ಪ್ರಕಟಿಸಿದ್ದಾರೆ (Patil 1991: 179-198; 199-216). ಡಾ. ಕಲಬುರ್ಗಿಯವರು ಅಪ್ರಕಟಿತ ರೂಪದಲ್ಲಿ ಉಳಿದಿದ್ದ ಕುಮಾರರಾಮನನ್ನು ಕುರಿತ ನಾಲ್ಕು ಸಾಂಗತ್ಯ ಕಾವ್ಯಗಳನ್ನು ಇತ್ತೀಚೆಗೆ ಪ್ರಕಟಿಸಿದ್ದಾರೆ. ಈ ಲೇಖನ, ಕಾವ್ಯಗಳು ಕುಮ್ಮಟ ದುರ್ಗದ ಚರಿತ್ರೆಯ ಸಂಶೋಧಕರಿಗೆ ಮಾರ್ಗದರ್ಶನ ನೀಡುತ್ತವೆ.

ಕಂಪಿಲದೇವನು ಕುಮ್ಮಟದುರ್ಗ ಮತ್ತು ಹೊಸಮಲೆದುರ್ಗಗಳೆರಡನ್ನು ರಾಜಧಾನಿ ಗಳನ್ನಾಗಿ ಮಾಡಿಕೊಂಡಿದ್ದನು. ಕುಮ್ಮಟದುರ್ಗವನ್ನು ಮುಖ್ಯವಾಗಿ ಯುದ್ಧಗಳಿಗಾಗಿ ಬಳಸಿಕೊಳ್ಳುತಿದ್ದನೆಂದು ಕಂಡುಬರುತ್ತದೆ. ಏಕೆಂದರೆ ಕುಮ್ಮಟದುರ್ಗ ಪರ್ವತಮಯವಾದ ಪರಿಸರದಿಂದ ಕೂಡಿದ್ದು, ಶತ್ರುಗಳ ಚಲನೆಗೆ ಅಡ್ಡಿಆತಂಕಗಳನ್ನು ಉಂಟುಮಾಡುತ್ತಿತ್ತು. ಇದರಿಂದಲೇ ನಾಲ್ಕುಬಾರಿ ದೆಹಲಿ ಸೈನ್ಯದ ದಾಳಿಗಳನ್ನು ಎದುರಿಸಲು ಸಾಧ್ಯವಾಯಿತು. ಬೇರೆಲ್ಲಾ ಯುದ್ಧತಂತ್ರಗಳಿಗೆ ಹೇಳಿಮಾಡಿಸಿದ ನೆಲೆಯಾಗಿದೆ.

ಸಮುದ್ರಮಟ್ಟದಿಂದ ಸುಮಾರು ೬೯೬ ಮೀ. ಎತ್ತರವಿರುವ ಕುಮಾರರಾಮನ ಗುಡ್ಡ ಅಥವಾ ರಾಮಸ್ವಾಮಿಗುಡ್ಡ ಕುಮ್ಮಟದುರ್ಗದ ಹೃದಯಭಾಗ. ಈ ಗುಡ್ಡದ ಅತ್ಯಂತ ಪ್ರಾಚೀನ ಅವಶೇಷವೆಂದರೆ, ರಾಮದೇವಾಲಯದಿಂದ ನೀರಿನ ಕೊಳದೆಡೆಗೆ ಸಾಗುವ ಮಾರ್ಗದ ಕೆಲವು ಮೀಟರ್‌ಗಳ ಅಂತರದಲ್ಲಿ ಬಲಭಾಗಕ್ಕೆ ಸಮತಟ್ಟಾದ ಹಾಗೂ ವಿಶಾಲವಾದ ಬಂಡೆಯಿದೆ. ಇದರ ಮೇಲೆ, ಪೂರ್ವಾಭಿಮುಖವಾಗಿದ್ದ ಸಣ್ಣ ಕೊಠಡಿಯೊಂದರ ಗೋಡೆಯ ತಳಭಾಗದ ಅವಶೇಷ ಕಂಡುಬರುತ್ತದೆ. ಇದರ ಪೂರ್ವಕ್ಕೆ ಸುಮಾರು ೫ ಮೀ. ಅಂತರದಲ್ಲಿ, ಹಾಸುಬಂಡೆಯ ಮೇಲೆ ಕೊರೆದಿರುವ ಎರಡು ತೆರನಾದ ರೇಖಾಚಿತ್ರಗಳಿವೆ. ಇವು ತಾಂತ್ರಿಕ ಆರಾಧನೆಯ ಕುರುಹುಗಳಿರಬೇಕು. ಇವುಗಳ ಕಾಲಮಾನದ ಬಗ್ಗೆ ಸ್ಪಷ್ಟವಿಲ್ಲ. ನಂತರದ ಪ್ರಾಚೀನ ರಚನೆ ಹಾಳುಬಿದ್ದ ಜೈನಬಸದಿ. ಇದು ಕಲ್ಯಾಣ ಚಾಲುಕ್ಯರ ಕಾಲದ ರಚನೆ. ಕುಮಾರರಾಮನು ಇಲ್ಲಿದ್ದ ಜೈನರನ್ನು ಓಡಿಸಿ, ಈ ಸ್ಥಳವನ್ನು ವಶಮಾಡಿಕೊಂಡು ಕೋಟೆ ಕಟ್ಟಿಸಿದನೆಂದು ಹೇಳಲಾಗುತ್ತದೆ. ಇಲ್ಲಿ ಜೈನರಿಗೆ ಸಂಬಂಧಿಸಿದ ಕೆಲವು ವೀರಗಲ್ಲುಗಳನ್ನು ಕಾಣಬಹುದು. ಬಹುಶಃ ಇವು, ಇಲ್ಲಿ ನೆಲೆಸಿದ್ದ ಜೈನರಿಗೂ ಮತ್ತು ಮುಮ್ಮಡಿ ಸಿಂಗೆಯನಾಯಕನಿಗೂ ನಡೆದ ಘರ್ಷಣೆಯಲ್ಲಿ ಸಾವನ್ನಪ್ಪಿದ ಜೈನರ ವೀರಗಲ್ಲುಗಳಾಗಿರಬಹುದು. ಲಂಡನ್ನಿನ ವಿಕ್ಟೋರಿಯಾ ಆಂಡ್ ಆಲ್ಬರ್ಟ್ ಮ್ಯೂಸಿಯಂನಲ್ಲಿರುವ ಪಾರ್ಶ್ವನಾಥ ಶಿಲ್ಪದ ಪೀಠದಲ್ಲಿರುವ ಕನ್ನಡ ಶಾಸನವು, ಮುಮುಡಿ ಸಿಂಗನು ಎರಂಬರೆಗೆಯ (ಯಲಬುರ್ಗಾ) ಜೈನಧರ್ಮವನ್ನು ಕೆಡಿಸಿದನೆಂದಿದೆ (ಪಾಟೀಲ ೧೯೯೮: ೯೪). ಅಂದರೆ ಮುಮ್ಮಡಿ ಸಿಂಗನು ಜೈನಧರ್ಮದ ವಿರೋಧಿಯಾಗಿದ್ದನೆಂದು ತಿಳಿದುಬರುತ್ತದೆ. ಅಹಿಂಸೆಯನ್ನು ಬೋಧಿಸುವ ಜೈನಧರ್ಮವು, ಯುದ್ಧ ಮತ್ತು ಆಕ್ರಮಣದಲ್ಲಿ ತೊಡಗಿದ್ದ ಮುಮ್ಮಡಿ ಸಿಂಗೆಯನಾಯಕನಿಗೆ ಹಿಡಿಸಿಲ್ಲದಿರಬಹುದು. ಜೊತೆಗೆ ಇವನು ಶೈವಪರಂಪರೆಯಲ್ಲಿ ನಂಬಿಕೆಯುಳ್ಳವನಾಗಿದ್ದನು. ಇವನ ಹೆಸರಿನಲ್ಲಿ ಮಗ ಕಂಪಿಲದೇವನು ಹಂಪಿಯಲ್ಲಿ ತ್ರಿಕೂಟ ದೇವಾಲಯವನ್ನು ಕಟ್ಟಿಸಿರುವುದು ಗಮನಾರ್ಹ.

ರಾಮಸ್ವಾಮಿ ಗುಡ್ಡದಲ್ಲಿ ಸುಸ್ಥಿತಿಯಲ್ಲಿರುವ ದೇವಾಲಯವೆಂದರೆ ರಾಮಸ್ವಾಮಿ ದೇವಾಲಯ. ಪಶ್ಚಿಮಾಭಿಮುಖವಾಗಿರುವ ಇದು ಗರ್ಭಗೃಹ ಮತ್ತು ಸಭಾಮಂಟಪವನ್ನು ಹೊಂದಿದೆ. ಸಭಾಮಂಟಪಕ್ಕೆ ಮೂರು ದ್ವಾರಗಳಿವೆ. ಗರ್ಭಗೃಹದಲ್ಲಿ ಗುಂಡುಕಲ್ಲೊಂದು ಇದ್ದು. ಅದನ್ನು ರಾಮಸ್ವಾಮಿ ಎಂದು ಪೂಜಿಸುತ್ತಾರೆ. ಸಭಾಮಂಟಪದಲ್ಲಿ ನಾಲ್ಕು ಕಂಬಗಳಿದ್ದು, ಅವುಗಳ ನಾಲ್ಕೂ ಮುಖದಲ್ಲಿ ಆನೆ ಸವಾರ, ಕುದುರೆ ಸವಾರ, ನೃತ್ಯಗಾತಿ, ಬೇಟೆಗಾರ, ಶಂಖ, ಚಕ್ರ, ನಾಮ, ಚಂದ್ರ, ಮೀನು ಮುಂತಾದ ಉಬ್ಬುರಚನೆಗಳಿವೆ. ದೇವಾಲಯದ ನಿರ್ಮಾಣ ಕಾಲವನ್ನು ಕ್ರಿ.ಶ. ೧೫-೧೬ನೆಯ ಶತಮಾನಕ್ಕೆ ನಿರ್ದೇಶಿಸಲಾಗಿದೆ (Patil 199: 210). ಈ ದೇವಾಲಯವನ್ನು ಸಹ ಕುಮಾರರಾಮನ ಹೆಸರಿನಲ್ಲಿ ನಿರ್ಮಿಸಿ ರಬಹುದು. ಮಾದಿಗ ಹಂಪಯ್ಯನ ಗುಡ್ಡದ ಈಶಾನ್ಯ ದಿಕ್ಕಿಗೆ ಕೆಳಭಾಗದಲ್ಲಿರುವ ಈಶ್ವರ ದೇವಾಲಯ, ಮೂಲತಃ ಮಲ್ಲಿಕಾರ್ಜುನ ದೇವಾಲಯವಾಗಿದೆ. ಇಲ್ಲಿ ಇನ್ನಿತರ ಹಾಳುಬಿದ್ದ ದೇವಾಲಯಗಳಿವೆ. ಅವುಗಳೆಂದರೆ ವಕ್ರಾಣಿಕೆರೆಯ, ದಕ್ಷಿಣಕ್ಕಿರುವ ಹಾಳುಬಿದ್ದ ದೇವಾಲಯ, ಬೊಲ್ಲನಕೆರೆಯ ವಾಯವ್ಯಕ್ಕಿರುವ ಹಾಳುಬಿದ್ದ ದೇವಾಲಯ, ಚಿಂತಾಲಕಲ್ ಸಮೀಪದಲ್ಲಿರುವ ಬೈಚಪ್ಪ ದೇವಾಲಯ, ಆನೆಪಾಗದ ಹತ್ತಿರವಿರುವ ಕಾಟಪ್ಪನಗುಡಿ, ರಾಮದೊಣೆ ಕೊಳದ ಹತ್ತಿರವಿರುವ ಆಂಜನೇಯ ದೇವಾಲಯ ಮತ್ತು ರಾಮಸ್ವಾಮಿಗುಡ್ಡದ ದಕ್ಷಿಣಕ್ಕೆ ಹೊರಕೋಟೆಯ ಹೊರಭಾಗದಲ್ಲಿರುವ ದೇವಾಲಯಗಳು.

ಕುಮ್ಮಟದುರ್ಗದಲ್ಲಿ ಅನೇಕ ದೇವಾಲಯಗಳು ಹಾಳಾಗಿರುವ ಹಿನ್ನೆಲೆಯಲ್ಲಿ ಬಿಡಿಶಿಲ್ಪ ಗಳು ಹೆಚ್ಚಾಗಿ ಕಂಡುಬರುತ್ತಿಲ್ಲ. ಆದರೂ ಕೆಲವು ಬಿಡಿಶಿಲ್ಪಗಳು ಅಲ್ಲಲ್ಲಿ ಕಂಡುಬರುತ್ತವೆ. ಅವುಗಳಲ್ಲಿ ಅತ್ಯಂತ ಮುಂಚಿನದು ದೇವಿಶಿಲ್ಪ. ಸ್ಥಳೀಯರು ಯಲ್ಲಮ್ಮ ಎಂದು ಕರೆಯುತ್ತಾರೆ. ಇದರ ಕಾಲ ಕ್ರಿ.ಸು. ೧೧-೧೨ನೆಯ ಶತಮಾನವಿರಬಹುದು. ಇದು ರಾಮಸ್ವಾಮಿ ಗುಡ್ಡಕ್ಕೆ ವಾಯವ್ಯ ದಲ್ಲಿರುವ ಬೇವಿನಮರದ ಕೆಳಗಿದೆ. ಇದೆ ಪರಿಸರದಲ್ಲಿ ಸೂರ್ಯ ಮತ್ತು ಲಿಂಗಶಿಲ್ಪಗಳನ್ನು ಕಾಣಬಹುದು. ಈ ಗುಡ್ಡದ ದಕ್ಷಿಣದ ಕಣಿವೆಯಲ್ಲಿರುವ ಭೈರವ ಹಾಗೂ ಇತ್ತೀಚೆಗೆ ಕುಮ್ಮಟದುರ್ಗದ ಸಮೀಪ ದೊರೆತ ಕಾಳಿ ವಿಗ್ರಹ ಮುಖ್ಯವಾಗಿದ್ದು, ಕ್ರಿ.ಶ. ೧೩-೧೪ ನೆಯ ಶತಮಾನಕ್ಕೆ ಸೇರುತ್ತವೆ. ಇಲ್ಲಿ ದೊರೆತಿರುವ ವೀರಗಲ್ಲುಗಳ ಸಂಖ್ಯೆ ೧೮. ಇಷ್ಟೊಂದು ಸಂಖ್ಯೆಯ ವೀರಗಲ್ಲು ಗಳನ್ನು ಗಮನಿಸಿದಾಗ ಇಲ್ಲಿ ನಡೆದಿರಬಹುದಾದ ಯುದ್ಧದ ಚಿತ್ರವನ್ನು ಕಲ್ಪಿಸಿಕೊಳ್ಳಬಹುದು. ಇವುಗಳಲ್ಲಿ ಕೆಲವು ಶಾಸನವನ್ನು ಹೊಂದಿದ್ದು, ಕುಮ್ಮಟದ ಅರಸರ ಚರಿತ್ರೆ ರಚನೆಗೆ ಪೂರಕ ಮಾಹಿತಿಗಳನ್ನು ನೀಡುತ್ತವೆ.

ಕುಮ್ಮಟದುರ್ಗದ ಕೋಟೆಯು, ನೆಲ ಮತ್ತು ಗುಡ್ಡಗಳನ್ನು ಹಾಯ್ದು ಪ್ರಾಕೃತಿಕವಾದ ಬಂಡೆಗಲ್ಲುಗಳನ್ನು ಒಳಗೊಂಡು ನಿರ್ಮಾಣವಾಗಿದೆ. ಕೋಟೆಯ ಹಲವು ಸಾಲುಗಳು ಕುಮಾರರಾಮನಗುಡ್ಡ ಮತ್ತು ಮಾದಿಗ ಹಂಪಯ್ಯನ ಗುಡ್ಡಗಳನ್ನು ಸುತ್ತುವರೆದಿವೆ. ಈ ಪರಿಸರದಲ್ಲಿರುವ ಇತರ ಗುಡ್ಡಗಳೆಂದರೆ ಗುಲಗಂಜಿಗುಡ್ಡ, ಕಾಟಪ್ಪನ ಗುಡ್ಡ, ಬೊಲ್ಲನ ಗುಡ್ಡ ಮತ್ತು ಹನುಮಂತದೇವರ ಗುಡ್ಡ. ಕುಮಾರರಾಮನ ಗುಡ್ಡದ ನೆತ್ತಿಯಲ್ಲಿ ಆಯತಾಕಾರದ ಕೋಟೆಯಿದ್ದು, ಇದನ್ನು ನಂತರದ ಕಾಲದಲ್ಲಿ ನಿರ್ಮಿಸಲಾಗಿದೆ. ರಕ್ಷಣಾ ವ್ಯವಸ್ಥೆಯಲ್ಲಿ ಬರುವ ಮತ್ತೊಂದು ಆಯತಾಕಾರದ ಕಟ್ಟಡವೊಂದು ಅರಮನೆ ಅಧಿಷ್ಠಾನದ ಬಳಿ ಇದೆ. ಕಲ್ಲು, ಮಣ್ಣು ಮತ್ತು ಗಾರೆಯಿಂದ ನಿರ್ಮಿತವಾದ ಈ ಕಟ್ಟಡ ಯಾವುದೇ ಬಾಗಿಲನ್ನು ಹೊಂದಿಲ್ಲ. ಇದರ ಹೊರಭಾಗವನ್ನು ಗಾರೆಯಿಂದ ಮುಚ್ಚಲಾಗಿದೆ. ಈ ಕಟ್ಟಡದ ರಚನೆಯಲ್ಲಿ ದೇವಾಲಯದ ಅವಶೇಷಗಳನ್ನು ಬಳಸಲಾಗಿದೆ. ಇದು ಸಹ ನಂತರದ ಕಾಲದ ರಚನೆ.

ಇಲ್ಲಿ ಅರಮನೆಯ ಎರಡು ಅಧಿಷ್ಠಾನಗಳಿದ್ದು, ರಚನೆಯಲ್ಲಿ ವಿಜಯನಗರ ಕಾಲದ ಅರಮನೆಯ ಅಧಿಷ್ಠಾನಗಳನ್ನು ಹೋಲುತ್ತವೆ. ರಾಮಸ್ವಾಮಿ ದೇವಾಲಯದ ನೈರುತ್ಯಕ್ಕಿರುವ ಆನೆಪಾಗ ಅಥವಾ ಆನೆಲಾಯವು ದೊಡ್ಡದಾದ ಆಯತಾಕಾರದ ರಚನೆ. ದೊಡ್ಡಕಲ್ಲುಗಳಿಂದ ನೀಳವಾದ ಗೋಡೆಯನ್ನು ರಚಿಸಲಾಗಿದೆ. ಪಶ್ಚಿಮಕ್ಕೆ ಬಾಗಿಲು ಹೊಂದಿರುವ ಇದು ಚಾವಣಿ ಯನ್ನಾಗಲಿ ಅಥವಾ ವಿಂಗಡಣೆಯ ಗೋಡೆಗಳನ್ನಾಗಲಿ ಹೊಂದಿಲ್ಲ. ಮಾದಿಗನ ಹಂಪಯ್ಯನ ಗುಡ್ಡದಲ್ಲಿ ಬುರುಜೊಂದನ್ನು ನಿರ್ಮಿಸಲಾಗಿದೆ. ಕುಮ್ಮಟದುರ್ಗದ ರಕ್ಷಣಾ ವ್ಯವಸ್ಥೆಯಲ್ಲಿ ಕುದುರೆಕಲ್ಲುಗಳ ಪಾತ್ರ ಮುಖ್ಯವಾಗಿದೆ. ಎರಡು ಗುಡ್ಡಗಳ ನಡುವಿನ ಸಮತಟ್ಟಾದ ಪ್ರದೇಶದಲ್ಲಿ ದೊಡ್ಡ ದೊಡ್ಡ ಕಲ್ಲುಗಳನ್ನು ಗೂಟಗಳಂತೆ ಅನೇಕ ಸಾಲುಗಳಲ್ಲಿ ನೆಡಲಾಗಿದೆ. ಇದು ಶತ್ರುಗಳ ಚಲನೆಗೆ ತಡೆಯುಂಟುಮಾಡುತ್ತಿತ್ತು. ಈ ಸಂದರ್ಭವನ್ನು ಬಳಸಿಕೊಂಡು ಆಕ್ರಮಣಮಾಡಲಾಗುತ್ತಿತ್ತು. ಈ ರಕ್ಷಣಾ ವ್ಯವಸ್ಥೆಯು ಕುಮ್ಮಟದ ಅರಸರ ಅಮೂಲ್ಯ ಕೊಡುಗೆಯಾಗಿದೆ. ಇಂತಹ ಕಲ್ಲುಗಳನ್ನು ಸ್ಥಳೀಯರು ಕುದುರೆಕಲ್ಲುಗಳೆಂದು ಕರೆಯುತ್ತಾರೆ. ಏಕೆಂದರೆ ಇದು ಮುಖ್ಯವಾಗಿ ಕುದುರೆಗಳ ಚಲನೆಯನ್ನು ನಿಯಂತ್ರಿಸುತ್ತಿದ್ದಂತೆ ಕಂಡುಬರುತ್ತದೆ. ಅದರಿಂದಾಗಿ ಇವುಗಳನ್ನು ಕುದುರೆಕಲ್ಲುಗಳೆಂದು ಕರೆದಿರಬಹುದು. ಕುಮ್ಮಟ ದುರ್ಗದ ನೈರುತ್ಯ ಮತ್ತು ದಕ್ಷಿಣಭಾಗಗಳಲ್ಲಿ ಕುದುರೆಕಲ್ಲುಗಳ ಸಮೂಹ ರಚನೆಯನ್ನು ಕಾಣಬಹುದು.

ಕೊನೆಯದಾಗಿ ಕುಮ್ಮಟದುರ್ಗಕ್ಕಿದ್ದ ನೀರಿನ ಆಸರೆಗಳೆಂದರೆ ಬೊಲ್ಲನಕೆರೆ, ವಕ್ರಾಣಿಕೆರೆ, ಮಾದಿಗಹಂಪಯ್ಯನ ಗುಡ್ಡದ ಮೇಲಿನ ಸಣ್ಣ ಕೆರೆ ಮತ್ತು ಕುಮಾರರಾಮನ ಗುಡ್ಡದಲ್ಲಿರುವ ಪ್ರಕೃತಿ ನಿರ್ಮಿತ ಆರು ಕೊಳಗಳನ್ನು ಹೆಸರಿಸಬಹುದು. ಇವು ಮಳೆನೀರಿನಿಂದ ಮಾತ್ರ ತುಂಬಬೇಕು. ಇಂದಿಗೂ ರಾಮನ ದೋಣಿ ಎನ್ನುವ ಕೊಳದ ನೀರನ್ನು ಜಾತ್ರೆ ವೇಳೆ ಕುಡಿಯಲು ಬಳಸಲಾಗುತ್ತದೆ. ರಾಮನಗುಡ್ಡದ ಪಶ್ಚಿಮಕ್ಕೆ ಕೋಟೆ ಹೊರಭಾಗದಲ್ಲಿ ಕಿರುಮೆಟ್ಟಿಲಿರುವ ಹಾಲುಬಾವಿಯು, ಹಿಂದೆ ಕುಮ್ಮಟದ ಜನರ ನೀರಿನ ಅಗತ್ಯವನ್ನು ಪೂರೈಸುತ್ತಿತ್ತೆಂದು ಅಭಿಪ್ರಾಯವಿದೆ. ಆದರೂ ಕುಮ್ಮಟದುರ್ಗದ ಅವನತಿಗೆ ನೀರಿನ ಅಭಾವವೂ ಒಂದು ಪ್ರಮುಖ ಕಾರಣವೆಂದು ಹೇಳಬಹುದು. ಹೀಗೆ ಕುಮ್ಮಟದುರ್ಗ ತನ್ನ ಗರ್ಭದಲ್ಲಿ ಅಸಂಖ್ಯಾತ ಚಾರಿತ್ರಿಕ ಕುರುಹುಗಳನ್ನು ತುಂಬಿಕೊಂಡಿದೆ. ಇಷ್ಟೊಂದು ಅವಶೇಷಗಳು ಕಂಪಿಲರಾಯನ ಮತ್ತೊಂದು ರಾಜಧಾನಿ ಹೊಸಮಲೆದುರ್ಗವೆಂದು ಗುರುತಿಸಿರುವ ರಾಮಘಡದಲ್ಲಿ ಕಂಡುಬರುವುದಿಲ್ಲ. ಇದರಿಂದಾಗಿ ಕುಮ್ಮಟದುರ್ಗ ಮುಖ್ಯ ರಾಜಧಾನಿಯಾಗಿತ್ತೆಂದು ಸ್ಪಷ್ಟವಾಗುತ್ತದೆ. ಆದ್ದರಿಂದ ಇದನ್ನು ಆಳಿದ ಮುಮ್ಮಡಿ ಸಿಂಗೆಯ ನಾಯಕ ಮತ್ತು ಕಂಪಿಲದೇವನನ್ನು ಪ್ರಸ್ತುತ ಅಧ್ಯಯನದಲ್ಲಿ ಕುಮ್ಮಟದ ಅರಸರೆಂದು ಕರೆಯಲಾಗಿದೆ.

ರಾಜಧಾನಿ ಪಟ್ಟಣಗಳು

ಮುಮ್ಮಡಿ ಸಿಂಗೆಯನಾಯಕ ಮತ್ತು ಕಂಪಿಲದೇವನ ರಾಜಧಾನಿಗಳನ್ನು ಹಿಂದಿನ ಅಧ್ಯಾಯಗಳಲ್ಲಿ ಸಾಂದರ್ಭಿಕವಾಗಿ ಹೇಳಲಾಗಿದೆ. ಈ ಕುರಿತಂತೆ ಡಾ.ಸಿ.ಎಸ್. ಪಾಟೀಲರು ತಮ್ಮ ಲೇಖನದಲ್ಲಿ ವಿವರವಾಗಿ ಚರ್ಚಿಸಿದ್ದಾರೆ (Patil 1991: 192-195). ಹನೆಯ, ದೊರವದಿ, ಹೊಸಮಲೆದುರ್ಗ ಮತ್ತು ಕುಮ್ಮಟ ರಾಜಧಾನಿಗಳಾಗಿದ್ದವೆಂದು ಸಾಹಿತ್ಯ ಮತ್ತು ಶಾಸನಾಧಾರಗಳಿಂದ ತಿಳಿದುಬರುವುದು. ಮೊದಲನೆಯದಾಗಿ, ಮೊಳಕಾಲ್ಮೂರು ತಾಲ್ಲೂಕಿನ ಬ್ರಹ್ಮಗಿರಿ ಹತ್ತಿರ ಹಾಳು ಬಿದ್ದಿರುವ ಹನೆಯ ಗ್ರಾಮ. ಇದನ್ನು ಪ್ರಾಚೀನ ಹನೆಯ ಪಟ್ಟಣ ವೆಂದು ಗುರುತಿಸಲಾಗಿದೆ. ಹನೆಯವು ೧೩ನೆಯ ಶತಮಾನದಲ್ಲಿ ಪ್ರಮುಖ ಕೋಟೆಯಾಗಿತ್ತು. ಹೊಯ್ಸಳರ ಎರಡನೆಯ ಬಲ್ಲಾಳ ಕ್ರಿ.ಶ. ೧೨೧೫ರಲ್ಲಿ ಇದನ್ನು ವಶಪಡಿಸಿಕೊಂಡು ವಿಜಯಗಿರಿ ಎಂಬ ಹೆಸರಿನಲ್ಲಿ ಪಟ್ಟಣವನ್ನು ನಿರ್ಮಿಸಿದನೆಂದು ಶಾಸನವೊಂದು ತಿಳಿಸುತ್ತದೆ (EC XI: Molakalmur 12). ಚೋಳ ಬಮ್ಮದೇವನ ಮಂತ್ರಿ ಬೈಚ ಎಂಬುವನು ಇದನ್ನು ನಿರ್ಮಿಸಿದನೆಂದು ಮತ್ತೊಂದು ಶಾಸನ ತಿಳಿಸುವುದು (EC XI : Molakalmur 30). ಹನೆಯವು ಚೋಳ ಇರುಂಗೋಳನ ಮಗನಾದ ತ್ರಿಪುರಾಂತದೇವನ ರಾಜಧಾನಿಯಾಗಿತ್ತು (EC XI : Sira 34).

ಗಂಗನ ಚೆನ್ನರಾಮನ ಸಾಂಗತ್ಯದಿಂದ, ದೇವಗಿರಿಯಿಂದ ಬಂದ ಮುಮ್ಮಡಿ ಸಿಂಗೆಯ ನಾಯಕನು ಹನೆಯದೆರೆಯಲ್ಲಿ ನೆಲಸಿದನೆಂದು, ನಂತರ ರಾಯದುರ್ಗದ ಮಲ್ಲನನ್ನು ಭೇಟಿ ಮಾಡಿ ದಳವಾಯಿ ಆದನೆಂದು ತಿಳಿದುಬರುವುದು. ಕುಮಾರರಾಮನಿಗೆ ಜಟಿಂಗರಾಮೇಶ್ವರನ ಹೆಸರಿಟ್ಟಿರುವುದು ಹಾಗೂ ಹನೆಯವು ರಾಯದುರ್ಗಕ್ಕೆ ಸಮೀಪವಾಗಿರುವುದರಿಂದ ಮೇಲಿನ ಸಾಂಗತ್ಯದ ಹೇಳಿಕೆಯನ್ನಾಧರಿಸಿ ಹನೆಯವು ಮುಮ್ಮಡಿ ಸಿಂಗನ ಮೊದಲ ರಾಜಧಾನಿ ಯಾಗಿತ್ತೆಂದು ತಿಳಿಯಲಾಗಿದೆ (Patil 1991: 192-195). ವಿಜಯನಗರ ಕಾಲದಲ್ಲಿ ಇದು ಪ್ರಾಂತೀಯ ವಿಭಾಗವಾಗಿದ್ದು, ಹನೆಯನಾಡು ಎಂದು ಕರೆಯಲಾಗಿದೆ (EC XI : Molakalmur 31 & 32). ಹೀಗೆ ಹನೆಯವು ತನ್ನದೇ ಆದ ಚರಿತ್ರೆಯನ್ನು ಹೊಂದಿದ್ದು, ಅಲ್ಲಿ ಸುಮಾರು ೧೩ನೆಯ ಶತಮಾನಕ್ಕೆ ಸೇರುವ ದೇವಾಲಯ ಮತ್ತು ಕೋಟೆಯ ಅವಶೇಷಗಳು ಕಂಡುಬರುತ್ತವೆ.

ಎರಡನೆಯದಾಗಿ, ಸೊಂಡೂರು ತಾಲ್ಲೂಕಿನ ಇಂದಿನ ದರೋಜಿ. ಇದನ್ನು ದೊರವದಿ ಎಂದು ಗುರುತಿಸಲಾಗಿದೆ (ಹು. ಶ್ರೀನಿವಾಸಜೋಯಿಸ ೧೯೪೩: ೩೭-೪೦). ಕ್ರಿ.ಶ. ೧೧೯೯ರಲ್ಲಿ ಹೊಯ್ಸಳರ ಎರಡನೆಯ ಬಲ್ಲಾಳನು ದೊರವದಿಯನ್ನು ವಶಪಡಿಸಿಕೊಂಡ ಬಗ್ಗೆ ಉಲ್ಲೇಖವಿದೆ (EC V : Channarayapattana 179). ಇದು ಕುರುಗೋಡು ನಾಡಿನಲ್ಲಿತ್ತು (EC VII : Channagiri 24). ಈ ಶಾಸನಗಳು, ದೊರವದಿಯು ಕ್ರಿ.ಶ. ೧೨ನೆಯ ಶತಮಾನದಲ್ಲೆ ಪ್ರಾಮುಖ್ಯತೆ ಪಡೆದ ಸ್ಥಳವಾಗಿತ್ತೆಂಬುದನ್ನು ಸೂಚಿಸುತ್ತವೆ. ಮುಮ್ಮಡಿ ಸಿಂಗೆಯನಾಯಕನ ವಿರುದ್ಧ ದೇವಗಿರಿ ಸೇವುಣರು ದೊರವದಿಯ ಮೇಲೆ ದಂಡೆತ್ತಿ ಬರುತ್ತಾರೆ (ಅದೇ). ನಂತರ ಹೊಯ್ಸಳರು ಕಂಪಿಲದೇವನ ವಿರುದ್ಧ ದೊರವದಿಯ ಮೇಲೆ ದಾಳಿ ಮಾಡುತ್ತಾರೆ (EC VII: Nagara 19). ಹೀಗೆ ಸೇವುಣರ ಮತ್ತು ಹೊಯ್ಸಳರ ದಾಳಿಯ ಕೇಂದ್ರವಾಗಿದ್ದ ದೊರವದಿಯು ಸಹ ಮುಮ್ಮಡಿ ಸಿಂಗೆಯನ ರಾಜಧಾನಿಯಾಗಿದ್ದಿರಬಹುದು. ಆದರೆ ಕಂಪಿಲದೇವನ ಕಾಲಕ್ಕೆ ಇದು ಪ್ರಮುಖ ಕೋಟೆಯಾಗಿತ್ತೆಂಬುದರಲ್ಲಿ ಸಂದೇಹವಿಲ್ಲ. ವಿಜಯನಗರ ಕಾಲದಲ್ಲಿ ದೊರವದಿ ವೆಂಠೆಯು ಹಸ್ತಿನಾವತಿ ವಳಿತದಲ್ಲಿ ಉಪವಿಭಾಗವಾಗಿತ್ತು. ದರೋಜಿಯಲ್ಲಿ ಸುಮಾರು ೧೩-೧೪ನೆಯ ಶತಮಾನಕ್ಕೆ ಸೇರುವ ದೇವಾಲಯಗಳು, ಶಿಲ್ಪಗಳು ಮತ್ತು ಶಾಸನಗಳನ್ನು ಕಾಣಬಹುದು.

ಮೂರನೆಯದಾಗಿ, ಕಂಪಿಲರಾಯನು ಕೋಟೆಯೊಂದನ್ನು ನಿರ್ಮಿಸಿ, ಹೊಸಮಲೆ ದುರ್ಗವೆಂದು ಕರೆದು ರಾಜಧಾನಿಯನ್ನಾಗಿ ಮಾಡಿಕೊಂಡನೆಂದು ಗಂಗನ ಚೆನ್ನರಾಮನ ಸಾಂಗತ್ಯದಲ್ಲಿ ಹೇಳಲಾಗಿದೆ. ಆನೆಗುಂದಿಯೆ ಹೊಸಮಲೆದುರ್ಗವೆಂದು ಎನ್. ವೆಂಕಟರಮಣಯ್ಯನವರ ಅಭಿಪ್ರಾಯ. ನಂಜುಂಡನ ಕುಮಾರರಾಮ ಚರಿತೆಯಲ್ಲಿ ಹಂಪೆಯ ದಕ್ಷಿಣಕ್ಕಿರುವ ಅರಣ್ಯವನ್ನು ಹೊಸಮಲೆ ಎಂದು ಕರೆದಿದೆ. ಇದು ಸೊಂಡೂರು ಪ್ರದೇಶದಿಂದ ಸುತ್ತುವರೆದಿದ್ದು, ಈ ಪ್ರದೇಶವನ್ನು ಈಗಲೂ ಹೊಸಮಲೆ ಎಂದು ಕರೆಯುತ್ತಾರೆ. ಹಾಗು ಇಲ್ಲಿ ಕೋಟೆ ಅವಶೇಷಗಳನ್ನು ಕಾಣಬಹುದೆಂದು ಹುಲ್ಲೂರು ಶ್ರೀನಿವಾಸ ಜೋಯಿಸರು ತಿಳಿಸುತ್ತಾರೆ (ಶರಣ ಸಾಹಿತ್ಯ ಸಂ VI, ೧೯೪೩-೪೪ : ೩೨೮). ಹೀಗೆ ಹೊಸಮಲೆದುರ್ಗವನ್ನು ಗುರುತಿಸುವ ಸಂಬಂಧ ವಿವಿಧ ಅಭಿಪ್ರಾಯಗಳಿವೆ.

ಮೇಲಿನ ಕೆಲವು ಹೇಳಿಕೆಗಳು ಮತ್ತು ಶಾಸನಾಧಾರಗಳು, ಇಂದಿನ ರಾಮಘಡವೇ (ಸೊಂಡೂರು ತಾಲ್ಲೂಕು) ಹೊಸಮಲೆದುರ್ಗ ಎಂಬುದನ್ನು ಸ್ಪಷ್ಟಪಡಿಸಿವೆ. ಕಬ್ಬಿಣದ ಅದಿರನ್ನು ಒಳಗೊಂಡ ರಾಮಘಡ ಪ್ರದೇಶವು ಸೊಂಡೂರು ತಾಲ್ಲೂಕಿನಲ್ಲಿದೆ. ರಾಮಘಡದ ಶಾಸನವೊಂದು ಹೊಯ್ಸಳರ ಬಲ್ಲಾಳನಿಗೂ ಮತ್ತು ಕಂಪಿಲದೇವನಿಗೂ ನಡೆದ ಯುದ್ಧವನ್ನು ಉಲ್ಲೇಖಿಸುತ್ತದೆ (ARIE 1943-44 : No. B 75). ಇಲ್ಲಿನ ಮತ್ತೊಂದು ಶಾಸನದಲ್ಲಿ (ಅದೇ, ನಂ. B ೭೬) ಹೊಸಮಲೆಯ ರಾಮನಾಥವೊಡೆಯನ ನೆನಪಿಗಾಗಿ ಹೊಸಮಲೆ ದುರ್ಗದಲ್ಲಿ ರಾಮನಾಥ ದೇವಾಲಯವನ್ನು ನಿರ್ಮಿಸಿದ ಉಲ್ಲೇಖವುಂಟು. ರಾಮಘಡದಲ್ಲಿರುವ ಈ ದೇವಾಲಯವು ಈಗ ಜೀರ್ಣೋದ್ಧಾರಗೊಂಡಿದೆ. ಹೀಗೆ ೧೩-೧೫ನೆಯ ಶತಮಾನಕ್ಕೆ ಸೇರುವ ಕೋಟೆ, ಶಿಲ್ಪಗಳು ಮತ್ತು ಶಾಸನಗಳು ಇಲ್ಲಿ ಕಂಡುಬರುವುದರಿಂದ ರಾಮಘಡವೆ ಕಂಪಿಲನು ನಿರ್ಮಿಸಿದ ಹೊಸಮಲೆದುರ್ಗವೆಂಬುದು ಸ್ಪಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ ಹೊಸಮಲೆದುರ್ಗವನ್ನು ಕಂಪಿಲನ ರಾಜಧಾನಿಯಾಗಿತ್ತೆಂದು ಅಭಿಪ್ರಾಯಪಡಲಾಗಿದೆ. ಬಹುಶಃ ಕಂಪಿಲದೇವನು ಅರಣ್ಯದಿಂದ ಕೂಡಿದ ಹೊಸಮಲೆಯಲ್ಲಿ ರಕ್ಷಣೆಯ ದೃಷ್ಟಿಯಿಂದ ಹಾಗೂ ಈ ಬೆಟ್ಟಗುಡ್ಡಗಳಲ್ಲಿದ್ದ ಖನಿಜ ಸಂಪನ್ಮೂಲದ ಉಸ್ತುವಾರಿಗಾಗಿ ಇಲ್ಲಿ ಗಿರಿದುರ್ಗವನ್ನು ನಿರ್ಮಿಸಿರಬೇಕು. ಕಾರಣಗಳು ಏನೇ ಇದ್ದರೂ ಕಂಪಿಲನು ತನ್ನ ರಕ್ಷಣೆಯ ದೃಷ್ಟಿಯಿಂದ ಹೊಸಮಲೆಯಲ್ಲಿ (ಇಂದಿನ ರಾಮಘಡ) ಗಿರಿದುರ್ಗ ವನ್ನು ನಿರ್ಮಿಸಿದ ಬಗ್ಗೆ ಅನುಮಾನ ವಿಲ್ಲ.

ವಿಜಯನಗರ ಕಾಲದ ಶಾಸನವೊಂದು, ಹೊಸಮಲೆಯ ರಾಮನಾಥ ಒಡೆಯನ ನೆನಪಿನಲ್ಲಿ ರಾಮನಾಥ ದೇವಾಲಯವನ್ನು ನಿರ್ಮಿಸಿರುವುದಾಗಿ ತಿಳಿಸಿದ್ದರೂ, ಇದು ಕಂಪಿಲ ಅಥವಾ ರಾಮನಾಥನ ರಾಜಧಾನಿಯಾಗಿತ್ತೆಂದು ನಿರ್ಣಯಿಸುವುದು ಕಷ್ಟ. ಹೊಸಮಲೆದುರ್ಗವು ಗೆರಿಲ್ಲಾ ತಂತ್ರದ ಯುದ್ಧಕ್ಕಾಗಿ ನಿರ್ಮಾಣಗೊಂಡ ಕೋಟೆ ಎಂದು ಹೇಳಬಹುದು. ಇಂತಹ ನೆಲೆಗಳು ಕಂಪಿಲನಿಗೆ ಅನಿವಾರ್ಯವಾಗಿದ್ದವು. ವಿಜಯನಗರದ ಅಚ್ಯುತರಾಯನ ಶಾಸನವೊಂದು ಹೊರಮಲೆಯ ನಾಡಿನ ಚೋರಮನೂರು ಸೀಮೆಯನ್ನು ಉಲ್ಲೇಖಿಸುತ್ತದೆ. ಈ ಶಾಸನದಲ್ಲಿ ಹೊಸಮಲೆ ಬದಲಿಗೆ ಹೊರಮಲೆ ಎಂದಿದೆ. ಬಹುಶಃ ಈ ಬೆಟ್ಟಸಾಲು ಆ ಭಾಗದಲ್ಲಿ ಹೊರಸಾಲಿನಂತೆ ಕಂಡುಬರುವುದರಿಂದ ವಿಜಯನಗರ ಕಾಲದಲ್ಲಿ ಹೊರಮಲೆ ಎಂದಿರಬೇಕು. ಚೋರಮನೂರು ಇಂದಿನ ಚೋರನೂರಾಗಿದ್ದು, ರಾಮಘಡದ ಆಗ್ನೇಯಕ್ಕಿದೆ.

ಕೊನೆಯದಾಗಿ, ಕುಮ್ಮಟ ದುರ್ಗವು ಸುಮಾರು ೧೧-೧೨ನೆಯ ಶತಮಾನಗಳಲ್ಲೇ ಬಲವಾದ ಮತ್ತು ಮಹತ್ವದ ಕೋಟೆಯಾಗಿತ್ತು[ARIE 1957-58 : No. B 342; EC IV : Nagamangala 70; EC II : Shravanabelagola 335 (130); MAR 1937 : No. 26]. ಲಕ್ಷ್ಮೇಶ್ವರದ ಶಾಸನವೊಂದು, ಮುಮ್ಮಡಿ ಸಿಂಗೆಯನು ಕುಮ್ಮಟದ ಕೋಟೆಯನ್ನು ವಶಪಡಿಸಿಕೊಂಡನೆಂದು ತಿಳಿಸುತ್ತದೆ (ARIE 1935-36 : No. E 23; SI.I. XX : No. 222). ಹೀಗಾಗಿ ಕುಮ್ಮಟದಲ್ಲಿ ಮೊದಲೇ ಕೋಟೆ ಇದ್ದು, ಅದರ ಭೌಗೋಳಿಕ ಮಹತ್ವ ವನ್ನರಿತು ಸಿಂಗೆಯನಾಯಕ ವಶಪಡಿಸಿಕೊಂಡಿರುವುದು ಸ್ಪಷ್ಟವಾಗುತ್ತದೆ. ಕುಮಾರರಾಮನ ಸಾಂಗತ್ಯಗಳಲ್ಲಿ ಕುಮ್ಮಟದ ಪ್ರಸ್ತಾಪವಿದೆ. ಇದನ್ನು ಕುಮಾರರಾಮ ನಿರ್ಮಿಸಿದನೆಂದು ಕೆಲವು ಸಾಹಿತ್ಯಾಧಾರಗಳು ತಿಳಿಸುತ್ತವೆ.

ಇತ್ತೀಚೆಗೆ ಕುಮ್ಮಟದಲ್ಲಿ ಎರಡು ವೀರಗಲ್ಲು ಶಾಸನಗಳು ದೊರೆತಿವೆ. ಒಂದು ಶಾಸನವು, ಕ್ರಿ.ಶ.೧೩೦೬ರಲ್ಲಿ ಕಂಪಿಲದೇವನು ಕುಮ್ಮಟದಿಂದ ಆಳುತ್ತಿದ್ದನೆಂದು ತಿಳಿಸುತ್ತದೆ. ಮುಸ್ಲಿಂ ಸೇನೆಯು ಕುಮ್ಮಟದ ಮೇಲೆ ದಾಳಿ ಮಾಡಿದ ಉಲ್ಲೇಖವುಂಟು. ಮತ್ತೊಂದು ಶಾಸನದಲ್ಲೂ ಸಹ ಕಂಪಿಲದೇವನು ಸುಲ್ತಾನನ ಸೈನ್ಯದೊಡನೆ ಯುದ್ಧ ಮಾಡಿದ ವಿವರವಿದೆ. ಇದರಿಂದ ಕುಮ್ಮಟವೇ ಕಂಪಿಲನ ರಾಜಧಾನಿಯಾಗಿತ್ತೆಂಬುದು ಸುಸ್ಪಷ್ಟ. ಕುಮಾರರಾಮ ಚರಿತೆಯು, ಹೊಸಮಲೆದುರ್ಗದಲ್ಲಿದ್ದ ಕಂಪಿಲನು ದೆಹಲಿ ಸೈನ್ಯದೊಂದಿಗೆ ಯುದ್ಧ ಮಾಡಲು ಕುಮ್ಮಟ ದುರ್ಗಕ್ಕೆ ಬಂದನೆಂದು ತಿಳಿಸುತ್ತದೆ. ಹಾಗೂ ವಿಜಯನಗರ ಕಾಲದ ಶಾಸನವೊಂದು, ಹೊಸಮಲೆದುರ್ಗದ ರಾಮನಾಥವೊಡೆಯ ಎಂದು ಕರೆದಿರುವುದರಿಂದ ಬಹುಶಃ ಕಂಪಿಲ ಮತ್ತು ರಾಮನಾಥರು ಹೊಸಮಲೆದುರ್ಗದಲ್ಲಿ ಆಗಾಗ ತಂಗುತ್ತಿದ್ದಂತೆ ಕಾಣುತ್ತದೆ. ದೆಹಲಿ ಸುಲ್ತಾನನ ನಾಲ್ಕು ದಾಳಿಗಳಲ್ಲಿ ಕುಮ್ಮಟವೇ ಕೇಂದ್ರವಾಗಿರುವುದರಿಂದ, ಕುಮ್ಮಟದುರ್ಗವೇ ಕಂಪಿಲದೇವನ ಅಧಿಕೃತ ರಾಜಧಾನಿಯಾಗಿತ್ತೆಂಬುದರಲ್ಲಿ ಸಂದೇಹವಿಲ್ಲ.

ಈ ಮೇಲೆ ಹೇಳಿದ ಸ್ಥಳಗಳಲ್ಲದೆ, ಕುಮ್ಮಟ ರಾಜ್ಯದಲ್ಲಿ ಕೆಲವು ಪ್ರಮುಖ ಪಟ್ಟಣ ಗಳಿದ್ದವು. ಅವುಗಳಲ್ಲಿ ಕಂಪ್ಲಿ ಮತ್ತು ಆನೆಗೊಂದಿ ಮುಖ್ಯವಾಗಿವೆ. ಕೆಲವು ವಿದ್ವಾಂಸರು, ಇವುಗಳು ಸಹ ಕಂಪಿಲನ ರಾಜಧಾನಿಗಳಾಗಿದ್ದವೆಂದು ವಾದಿಸುತ್ತಾರೆ. ಆದರೆ ಸಮಕಾಲೀನ ಯಾವುದೇ ದಾಖಲೆಗಳು ಈ ಅಭಿಪ್ರಾಯಗಳನ್ನು ಬೆಂಬಲಿಸುವುದಿಲ್ಲ.