ಕರ್ನಾಟಕದ ದಕ್ಷಿಣದಲ್ಲಿರುವ ಕಾಸರಗೋಡು ಬೆಟ್ಟ ಗುಡ್ಡಗಳ, ತಗ್ಗು ತಪ್ಪಲುಗಳ ಪ್ರದೇಶ. ಇದು ದಕ್ಷಿಣ ಕನ್ನಡಕ್ಕೆ ಹೊಂದಿಕೊಂಡಂತೆಯೇ ಇದೆ. ಅಡಿಕೆ, ತೆಂಗಿನ ತೋಟಗಳು, ರಭಸದಿಂದ ಹರಿಯುವ ನದಿ ತೋಡುಗಳು, ಹಸಿರು ರಾಶಿ ಹಾಕಿದಂತೆ ಕಾಡುಗಳು ಇಲ್ಲಿ ಎಲ್ಲೆಡೆ ಕಾಣಿಸುತ್ತವೆ.

ಕುಂಬಳೆ ಸೀಮೆ ಕರಾವಳಿಯಾದರೆ, ವಿಟ್ಲ ಸೀಮೆ ಬೆಟ್ಟ ಬಯಲುಗಳ ಭಾಗ. ಎಲ್ಲ ಕಡೆ ಊರಿಗೊಂದು ದೇವಾಲಯ, ಅದಕ್ಕೊಂದು ಕಥೆ. ಪ್ರತಿ ಮನೆಗೂ ಒಂದು ಹೆಸರು, ಎಲ್ಲಕ್ಕೂ ಒಂದೊಂದು ಕಥೆ. ಸಾಹಸ, ಶೌರ್ಯ, ಪರಾಕ್ರಮಗಳು ಇಲ್ಲಿನ ಕಥೆಗಳಲ್ಲಿವೆ. ಜನರೂ ಹಾಗೇ ಸಾಹಸಿಗಳು, ಪರಿಶ್ರಮಿಗಳು, ಕಲಾ ಪ್ರೇಮಿಗಳು. ಕಲಾವಿ ದರು.

ಯಕ್ಷಗಾನ

ಕರ್ನಾಟಕದ ಪ್ರಸಿದ್ಧ ಜನಪದ ಕಲೆ ಯಕ್ಷಗಾನ ಬಯಲಾಟ. ಇದಕ್ಕೆ ಎರಡು ಮುಖ- ‘ತೆಂಕುತಿಟ್ಟು’, ‘ಬುಡಗುತಿಟ್ಟು’. ದಕ್ಷಿಣ ಕನ್ನಡ ಜಿಲ್ಲೆಯದು ತೆಂಕುತಿಟ್ಟು. ಉತ್ತರ ಕನ್ನಡ ಜಿಲ್ಲೆಯದು ಬಡಗುತಿಟ್ಟು. ಉಡಿಗೆ-ತೊಡಿಗೆ, ಕುಣಿತದ ಕೆಲವು ವಿನ್ಯಾಸ ಬಿಟ್ಟರೆ ಈ ಎರಡು ಮುಖಗಳಿಗೂ ಹೆಚ್ಚಿನ ವ್ಯತ್ಯಾಸವಿಲ್ಲ. ಇಂದು ಕಾಸರ ಗೋಡಿನ ಭಾಗ ಕೇರಳಕ್ಕೆ ಸೇರಿದೆ.

ಯಕ್ಷಗಾನ ಬಯಲಾಟವೆಂದರೆ ಪೌರಾಣಿಕ ಪಾತ್ರ ಗಳಂತೆ ಬಣ್ಣಬಣ್ಣದ ವೇಷ ಧರಿಸಿ ಚೆಂಡೆ, ಮದ್ದಲೆ, ತಾಳಗಳ ಲಯಬದ್ಧ ವಾದನಕ್ಕೆ ತಕ್ಕಂತೆ, ಭಾಗವತರ ಹಾಡಿನ ತಾಳಕ್ಕೆ ಸರಿಯಾಗಿ ಕುಣಿದು, ಹಾಡಿನ ಜಾಡಿನಲ್ಲಿ ಪೌರಾಣಿಕ ಪಾತ್ರಗಳಂತೆ ಸಂಭಾಷಣೆ ಹೇಳಿ, ಯಾವು ದಾದರೂ ಒಂದು ಪೌರಾಣಿಕ ಕಥಾಭಾಗವನ್ನು ಅಭಿನಯಿ ಸುವ ನೃತ್ಯನಾಟಕ. ಊರ ಹೊರಗಿನ ಬಯಲಿನಲ್ಲಿ ಇದು ನಡೆಯುತ್ತದೆ. ಅದಕ್ಕೆ ‘ಬಯಲಾಟ’ವೆಂದು ಕರೆಯುತ್ತಾರೆ.

ವಿಷ್ಣುವಿನ ‘ದಶಾವತಾರ’ದ ಕಥೆಗಳೇ ಹೆಚ್ಚಿನ ಬಯಲಾಟಗಳ ಕಥೆಗಳು. ಅದಕ್ಕೆ ‘ದಶಾವತಾರ ಆಟ’ ಎಂದೂ ಹೇಳುವುದಿದೆ. ಪಾತ್ರಗಳು ಭಾಗವತರು ಹಾಡುವ ಹಾಡಿಗೆ ತಕ್ಕಂತೆ ಪಾತ್ರೋಚಿತ ಸಂಭಾಷಣೆ ನಡೆಸುತ್ತವೆ. ಈ ಸಂಭಾಷಣೆಯನ್ನು ‘ಅರ್ಥ ಹೇಳುವುದು’ ಎನ್ನುತ್ತಾರೆ. ಕಣ್ಣು, ಕಿವಿ, ಬುದ್ಧಿ, ಮನಸ್ಸುಗಳಿಗೆ ಒಂದೇ ಕಾಲದಲ್ಲಿ ರಂಜನೆ ನೀಡುವ ಯಕ್ಷಗಾನ ಬಯಲಾಟ ಅತ್ಯಂತ ಜನಪ್ರಿಯ ಕಲೆ.

ಮಂಜೇಶ್ವರದಿಂದ ಎಂಟು ಮೈಲಿದೂರ ಕೊಳ್ಯೂರು. ಐವತ್ತು ವರ್ಷಗಳ ಹಿಂದೆ ‘ಕೊಳ್ಯೂರು ಶಂಕರ ನಾರಾಯಣ ಯಕ್ಷಗಾನ ನಾಟಕ ಸಭಾ’ ಬಹಳ ಪ್ರಖ್ಯಾತ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತ್ರವಲ್ಲ ರಾಜ್ಯದ ಇತರ ಕಡೆಗಳಲ್ಲೂ ಹಾಗೂ ಮುಂಬಯಿ, ಮದರಾಸು ನಗರಗಳಲ್ಲಿ ನಾಟಕ ಸಭಾ ಪ್ರದರ್ಶನ ನೀಡಿತ್ತು. ಬಯಲಾಟದಂತೆ ಕುಣಿತ, ನೃತ್ಯಗಳು ‘ನಾಟಕ ಸಭಾ’ದ ಪ್ರದರ್ಶನಗಳಲ್ಲಿ ಇರುತ್ತಿರಲಿಲ್ಲ. ಮತ್ತೆಲ್ಲವೂ ಬಯಲಾಟ ದಂತೆಯೇ.

ಕುರಿಯ ವೆಂಕಟರಮಣಭಟ್ಟರು ‘ನಾಟಕ ಸಭಾ’ದ ಪ್ರಧಾನ ನಟ, ನಿರ್ದೇಶಕ, ಮಾಲೀಕರೂ ಸಹ. ‘ಕುರಿಯ’ ಅವರ ಮನೆಯ ಹೆಸರು. ವೆಂಕಟರಮಣ ಭಟ್ಟರು ಗೌರವರ್ಣದ ಗಟ್ಟಿಮುಟ್ಟಾದ ಎತ್ತರದ ಆಳು. ಅಗಲ ಮುಖದಲ್ಲಿ ಗಾಂಭೀರ್ಯ. ಅಡಿಕೆ ತೋಟ, ಗದ್ದೆಗಳಲ್ಲಿ ವ್ಯವಸಾಯ ಮಾಡಿಸುವ ಇವರು ವಿದ್ವಾಂಸ, ಕವಿ, ಕಲಾವಿದ. ಮನೆತನದ ಹೆಸರು ‘ಶಾಸ್ತ್ರಿ’ ಎಂದಾದರೂ ‘ಭಟ್ಟ’ರೆಂದೇ ಇವರು ಪರಿಚಿತರು.

ಮಳೆಗಾಲದ ರಾತ್ರಿಗಳಲ್ಲಿ ಜರಗುವ ತಾಳ ಮದ್ದಲೆ ಗಳಲ್ಲಿ ಅರ್ಥ ಹೇಳುವುದು, ಹಾಡುವುದು ಇವರ ಯೌವನದ ಹವ್ಯಾಸ.

ರಂಗಮಂಟಪ, ಕುಣಿತ, ವೇಷಭೂಷಣಗಳನ್ನು ಬಿಟ್ಟರೆ ತಾಳ ಮದ್ದಲೆ ಬಯಲಾಟದಂತೆಯೇ. ಜಾಗಂಟೆಯ ತಾಳದಲ್ಲಿ ಭಾಗವತರು ಹಾಡಿದರೆ ಪಕ್ಕ ವಾದ್ಯದಲ್ಲಿ ಚೆಂಡೆ, ಮದ್ದಲೆ, ಚಕ್ರತಾಳಗಳು ಧುಮುಗುಡುತ್ತವೆ. ಪಾತ್ರಧಾರಿಗಳು ಇದಿರಿಗೆ ಸಾದಾ ಉಡುಪಿನಲ್ಲಿ ಕುಳಿತಿರುತ್ತಾರೆ. ನೂರಾರು ಶ್ರೋತೃಗಳೂ ಇರುತ್ತಾರೆ. ಕುಳಿತಲ್ಲೇ ಪಾತ್ರಗಳ ಸಂಭಾಷಣೆ ನಡೆಯುತ್ತದೆ. ಇವರ ಮಾತುಗಳು ಬಾಯಿಪಾಠ ಕಲಿತವಲ್ಲ.  ಪದ್ಯದ ಆಧಾರದಿಂದ, ಸ್ವಯಂಸ್ಫೂರ್ತಿಯಿಂದ ತರ್ಕಬದ್ಧ ವಾಗಿ ಪುರಾಣಕ್ಕೆ ಅಪಚಾರವಾಗದಂತೆ ಸಂಭಾಷಣೆ ಸಾಗುತ್ತದೆ.

ವೆಂಕಟರಮಣಭಟ್ಟರ ಕಂಸ, ಹಿರಣ್ಯಕಶಿಪು, ರಾವಣ ಮುಂತಾದ ಪಾತ್ರಗಳ ‘ಅರ್ಥ ಹೇಳುವಿಕೆ’ ಎದೆ ಝಲ್ಲೆನಿಸುವಂತಹದು. ಈ ರೀತಿ ತಾಳ ಮದ್ದಲೆಯ ಗುಂಪು ಮುಂದೆ ನಾಟಕ ಸಭಾ ಕಟ್ಟಲು ಪ್ರೇರಣೆ ನೀಡಿತು.

ಬಯಲಾಟದಲ್ಲಿ ಒಲವು

ನಡುವಯಸ್ಸಿನ ಕುರಿi ವೆಂಕಟರಮಣಭಟ್ಟರಿಗೆ ೧೯೧೨ರ ಆಗಸ್ಟ್ ೨೫ ರಂದು ಮೊದಲ ಮಗ ಜನಿಸಿದ. ಗುಂಗುರು ಕೂದಲಿನ ಗೋದಿ ಬಣ್ಣದ ಮಗನಿಗೆ ವಿಠಲನೆಂದು ನಾಮಕರಣ ಮಾಡಿದರು.

ಅಪ್ಪನ ಅಕ್ಕರೆಯ ಮಗು ವಿಠಲ ಮಾತು ಕಲಿತ ಹೊಸದರಲ್ಲೆ ಯಕ್ಷಗಾನದ ಹಾಡು ಹಾಡುತ್ತಿದ್ದ; ಅರ್ಥ ಹೇಳುತ್ತಿದ್ದ. ತಾಳ ಮದ್ದಲೆಗೆ, ಬಯಲಾಟಕ್ಕೆ ಅಪ್ಪನ ಜೊತೆಗೆ ತಪ್ಪದೆ ಹಾಜರಾಗುತ್ತಿದ್ದ.

ಹತ್ತಿರದ ಕುರುಡ ಪದವಿನ ಪ್ರಾಥಮಿಕ ಶಾಲೆಗೆ ಸೇರಿದ ವಿಠಲನಿಗೆ ಒಂಬತ್ತನೇ ವಯಸ್ಸಿಗೇ ಉಪನಯನ.

ಇಬ್ಬರು ತಂಗಿಯರು, ಒಬ್ಬ ತಮ್ಮನೂ ಆಗಲೇ ಜನಿಸಿದ್ದರು. ಪಾಠದಲ್ಲಿ ಅಷ್ಟು ಆಸಕ್ತಿ ಇಲ್ಲದ ವಿಠಲ ಆಟದಲ್ಲಿ ಜಾಣ.

ಶಾಲೆಯಿಂದ ಓಡಿಬಂದು ಸ್ಲೇಟು ಪುಸ್ತಕ ಬಿಸಾಡಿ ಅಡಿಕೆ ತೋಟದಲ್ಲಿ ಗೆಳೆಯರನ್ನು, ತಂಗಿ ತಮ್ಮನನ್ನು ಕೂಗಿ ಕರೆದು ಆಡುವ ಆಟ ‘ಬಯಲಾಟ’. ಹಲಸಿನ ಎಲೆ, ಅಡಿಕೆ ಹಾಳೆ, ತೆಂಗಿನ ಗರಿಗಳ ಕಿರೀಟ, ತೆಂಗಿನ ನಾರು, ಕಂಬಳಿ ಕುಚ್ಚುಗಳ ಮೀಸೆ. ಅರಿಸಿನ ಕುಂಕುಮ, ಒಲೆಯ ಕರಿಬಣ್ಣ, ಅಡಿಕೆ ದೆಬ್ಬೆಯ ಖಡ್ಗ, ಊಟದ ಮಣೆಯ ಚೆಂಡೆ, ಬಿಂದಿಗೆ ಮದ್ದಲೆ, ಬಟ್ಟಲು ಜಾಗಂಟೆ  ಕಿವಿಗಡಚಿಕ್ಕುವಂತಹ ಆರ್ಭಟ. ಹಿರಿಯರು ಗದರಿಸಬೇಕು ಅಥವಾ ಕತ್ತಲಾಗಬೇಕು. ಆಗ ಆಟಕ್ಕೆ ಮುಕ್ತಾಯ.

ಅಟ್ಟದಲ್ಲಿ ಆಟ

ಮಳೆಗಾಲದ ಒಂದು ದಿನ. ಅಂದು ಕುರಿಯದಲ್ಲಿ ಭಾರೀ ಸಮಾರಂಭ. ಸುತ್ತಣದ ಹತ್ತಾರು ಮನೆಗಳ ಅತಿಥಿಗಳು ಊಟ ಮಾಡಿ ಚಾವಡಿಯಲ್ಲಿ ಮಲಗಿದ್ದರು. ತಡವಾಗಿ ಆದ ಪಾಯಸದ ಊಟ. ಎಲ್ಲರಿಗೂ ಒಳ್ಳೆಯ ನಿದ್ರೆ. ಹೊರಗೆ ಮಳೆ ಬರುತ್ತಿತ್ತು.

ಅಡಿಕೆ ಸೋಗೆ ಹೊದಿಸಿದ ಮಹಡಿ ಮನೆ ಆಟದಲ್ಲಿ ಮಕ್ಕಳ ಗುಂಪಿನ ತಾಳ ಮದ್ದಲೆ. ಅಟ್ಟದಲ್ಲಿದ್ದ ಚೆಂಡೆ, ಮದ್ದಲೆಗಳು ಹೊರಬಂದಿದ್ದವು. ‘ರಂಡ್ಗಂ ರಂಡಂ, ರಂಗ್ ಡಂ ರಡಂ, ಡಂಗ್ ಡಂಗ್ ಡಂ…………’ ಚೆಂಡೆ ಮದ್ದಲೆಗಳು ಅಬ್ಬರಿಸಿದವು. ಜಾಗಂಟೆಯ ತಾಳದ ಜೊತೆಗೆ ಹಾಡು ‘-ತಂಗಿಯ ಕರೆದೂ ಮಾತಾಡಿದ. ಮಾನಭಂಗದ ಪರಿಯನೆಲ್ಲವ ಕೇಳಿದ…..’-ಪಂಚವಟಿ ಪ್ರಸಂಗದ ಹಾಡು.

ಹಾಡು ನಿಂತಿತು. ‘ಆ….ಹಹಹಾ….’ ಎಂಬ ಆರ್ಭಟದ ಜೊತೆಗೆ ರಾವಣನ ಮಾತು- ‘ತಂಗೀ ಶೂರ್ಪಣಖೀ….. ಬಾ ಇತ್ತ. ಏನಾಯ್ತು? ನಿನಗೆ ಈ ರೀತಿಯ ಅಪಮಾನ ಮಾಡಿದವರು ಯಾರು ? ಬೇಗ ಹೇಳು. ಅಳಬೇಡ. ಹೆದರಬೇಡ. ಧೈರ್ಯ ತಂದುಕೋ.’

ತಂಗಿ ಅಳುತ್ತ ಹೇಳಿದಳು : ‘ಅಣ್ಣಾ…. ಕೇಳು….’

ಮತ್ತೆ ಹಾಡು. ಜೊತೆಗೇ ಚೆಂಡೆ, ಮದ್ದಲೆಗಳ ಮೊಳಗು. ಅದರಲ್ಲಿನ ಗದ್ದಲಕ್ಕೆ ಚಾವಡಿಯಲ್ಲಿ ಮಲಗಿದ್ದವರ ನಿದ್ರೆಗೆ ಗುದ್ದು ಬಿತ್ತು. ವೆಂಕರಮಣಭಟ್ಟರಿಗೂ ಎಚ್ಚರವಾಯಿತು.

“ಏ ಮಗುವಾ, ಏನಿದು ಗಲಾಟೆ ನಿಮ್ಮದು ? ಇಳೀರಿ ಕೆಳಗೆ” ಕೆಳಗಿನಿಂದಲೇ ಗರ್ಜಿಸಿದರು. ಅದು ಅಟ್ಟದ ತನಕ ಮುಟ್ಟಲಿಲ್ಲ. ರಾವಣನ ಪಾತ್ರ ವಿಠಲನದು. ಅವನ ತಂಗಿ ಶಂಕರಿಯೇ ಶೂರ್ಪಣಖಿಯಾಗಿ ಅರ್ಥ ಹೇಳುತ್ತಿದ್ದಳು.

ಭಟ್ಟರು ದಢದಢನೆ ಅಟ್ಟ ಹತ್ತಿದರು. ‘ನಿಲ್ಲಿಸಿರೋ ರಂಪಾಟ.’ ಸಿಡಿಲಿನಂಥ ಸ್ವರಕ್ಕೆ ಹೆದರಿದ ಹುಡುಗರು ಎದ್ದುನಿಂತರು. ಶೂರ್ಪಣಖಿಯಾಗಿ ಅಳುತ್ತಿದ್ದ ಶಂಕರಿ ನಿಜಕ್ಕೂ ಅಳತೊಡಗಿದಳು.

ಅಪ್ಪನ ಗರಡಿಯಲ್ಲಿ

ವೆಂಕಟರಮಣಭಟ್ಟರ ನಾಟಕ ಸಭಾದಲ್ಲಿ ನಡೆಯು ತ್ತಿದ್ದ ಜನಪ್ರಿಯ ಪ್ರಸಂಗಗಳು ಕೆಲವು ಮಾತ್ರ. ‘ಪ್ರಹ್ಲಾದ ಚರಿತ್ರೆ’, ‘ಕೃಷ್ಣಲೀಲೆ ಕಂಸವಧೆ’, ‘ಲಂಕಾದಹನ’ ಇವು ಹೆಚ್ಚಾಗಿ ನಡೆಯುತ್ತಿದ್ದವು. ತಂದೆ ಹಿರಣ್ಯಕಶಿಪುವಿನ ಪಾತ್ರ ಮಾಡಿದರೆ ಮಗ ವಿಠಲ ಪ್ರಹ್ಲಾದ ಪಾತ್ರ. ‘ತೋರಾದೊಡೆ ಈ ಕಂಬದಿ ಹರಿಯ….’ ಎಂಬ ಪದ್ಯಕ್ಕೆ ಅಭಿನಯಿಸುತ್ತ ಭಟ್ಟರು ಮಗ ಪ್ರಹ್ಲಾದನಿಗೆ ನೀಡುವ ಚಿತ್ರಹಿಂಸೆ, ಹೊಡೆತ, ಒದೆತಗಳನ್ನು ವಿಠಲ ತುಟಿಪಿಟಕ್ಕೆನ್ನದೆ ಪ್ರಹ್ಲಾದನಂತೆ ಸಹಿಸುತ್ತಿದ್ದ.

ಅವು ನಾಟಕದ ಹೊಡೆತಗಳಲ್ಲ. ನಿಜವಾದ ಒದೆತಗಳಾಗುತ್ತಿದ್ದವು. ಕೆಲವು ಸಲ ಮರುದಿನ ಬಿಸಿ ನೀರಿನ ಶಾಖ ಬೇಕಾಗುತ್ತಿತ್ತು. ‘ಕೃಷ್ಣಲೀಲೆ-ಕಂಸವಧೆ’ಯಲ್ಲಿ ತಂದೆ ‘ಕಂಸ’ನಾದರೆ ಮಗ ‘ಕೃಷ್ಣ’ ಅಪ್ಪನ ಜುಟ್ಟು ಹಿಡಿದು ನೆಲಕ್ಕೆ ಬೀಳಿಸಿ ಎದೆಯಲ್ಲಿ ಕುಳಿತು ನಿಜಕ್ಕೂ ವಿಠಲ ಗುದ್ದುತ್ತಿದ್ದ. ಕೆಳಗಿರುವುದು ಅಪ್ಪನೆಂಬ ನೆನಪೇ ಇಲ್ಲ.

ಕಿಶೋರ ಪ್ರಾಯದ ವಿಠಲನಿಗೆ ಕೈಕೆ, ಸೀತೆಯಂತಹ ಸ್ತ್ರೀ ಪಾತ್ರಗಳು ನಾಟಕ ಕಂಪನಿಯಲ್ಲಿ ಮೀಸಲು. ಸುಂದರ ರೂಪ, ಸ್ಫುಟವಾದ ಮಾತು, ಉದ್ದನೆಯ ಕೂದಲು, ಭಾವಪೂರ್ಣ ಅಭಿನಯ, ಪಾತ್ರಗಳಲ್ಲಿ ತಲ್ಲೀನತೆ ಇವು ವಿಠಲನ ಹುಟ್ಟುಗುಣಗಳಾಗಿದ್ದವು.

‘ಬೇಗ ಹೇಳು. ಅಳಬೇಡ. ಹೆದರಬೇಡ.’

ವಿಠಲನ ತಾಯಿ ಶಂಕರಿ ಅಮ್ಮನಿಗೆ ಎದೆನೋವಿನ ಕಾಯಿಲೆ. ಸಾಯುವ ಮೊದಲು ಮನೆಗೆ ಸೊಸೆ ಬರಬೇಕು ಎಂದು ಹಟ ಹಿಡಿದರು. ಹತ್ತಿರದ ಸರ್ಪಂಗಳ ಮಹಾಲಿಂಗಭಟ್ಟರ ಮಗಳು ಹದಿಮೂರು ವರ್ಷದ ಗಂಗಮ್ಮ ಇಪತ್ತಮೂರು ವರ್ಷ ಪ್ರಾಯದ ವಿಠಲ ಶಾಸ್ತ್ರಿಗಳ ವಧುವಾದರು. ಮನೆ ತುಂಬಿದರು. ಅತ್ತೆಯ ಮನ ತುಂಬಿದರು. ಕಾಯಿಲೆಯಿಂದ ನರಳುತ್ತಿದ್ದ ಶಂಕರಿಯಮ್ಮ ಸಂತಸದ ನಗೆ ಸೂಸಿದರು.

ಹೀಗೆ ಅಪ್ಪನ ಯಕ್ಷಗಾನ ನಾಟಕದ ಗರಡಿಯಲ್ಲಿ ವಿಠಲಶಾಸ್ತ್ರಿಗಳು ಇಪ್ಪತ್ತೈದರ ಪ್ರಾಯಕ್ಕೆಲ್ಲ ಕೃಷ್ಣ, ಪ್ರಹ್ಲಾದ, ಕೈಕೆ, ಸೀತೆ, ದಿತಿದೇವಿ ಮುಂತಾದ ಸ್ತ್ರೀಪುರುಷ ಪಾತ್ರಗಳಿಂದ ಜನಪ್ರಿಯ ಕಲಾವಿದರಾಗಿದ್ದರು. ಕೆಲವು ವಿಶೇಷ ಬಯಲಾಟ ಮೇಳಗಳೂ ಆಗಾಗ ವಿಠಲ ಶಾಸ್ತ್ರಿಗಳನ್ನು ಕೆಲವು ಪ್ರಸಂಗದ ಪ್ರದರ್ಶನಗಳಿಗೆ ಕರೆಸಿ ಕೊಳ್ಳುತ್ತಿದ್ದವು. ಬಯಲಾಟಕ್ಕೆ ಹೋದಾಗ ಪ್ರೇಕ್ಷಕರಿಗೆ ಅಷ್ಟಾಗಿ ಗೊತ್ತಾಗುತ್ತಲಿರಲಿಲ್ಲವಾದರೂ ಕುಣಿತವಿಲ್ಲದ ಕೊರತೆ ಶಾಸ್ತ್ರಿಗಳನ್ನು ಕಾಡುತ್ತಿತ್ತು.

ಇಪ್ಪತ್ತೆಂಟರ ಪ್ರಾಯಕ್ಕೆಲ್ಲ ಶಾಸ್ತ್ರಿಗಳು ಒಬ್ಬ ಮಗ, ಒಬ್ಬಳು ಮಗಳ ತಂದೆ. ಈ ನಡುವೆ ಪುತ್ತೂರಿನ ‘ಬಾಲವನ’ದಲ್ಲಿ ಶಿವರಾಮ ಕಾರಂತರು ಪ್ರಾರಂಭಿಸಿದ್ದ ‘ಕಿನ್ನರ ನೃತ್ಯ’ ತರಗತಿಗೆ ಸೇರಿ ಮೂಖಾಭಿನಯವನ್ನೂ ಕಲಿತರು. ಮಳೆಗಾಲದಲ್ಲಿ ಶಾಸ್ತ್ರಿಗಳು ತನ್ನ ಶಿಷ್ಯರಿಗೆ ನೃತ್ಯ ಕಲಿಸುವಾಗ, ಕಾಲು ಸೋತಿತು ಎಂದು ಅವರು ಕುಳಿತಾಗ, ತಪ್ಪಿದಲ್ಲಿ ಕೋಪದಿಂದ ತಾನು ಹೊಡೆದಾಗದ ಹಿಂದೆ ತಾನು ಕಾರಂತರಿಂದ ಏಟು ತಿಂದು ಕಲಿತುದನ್ನು ನೆನಪಿಸಿ ಕೊಳ್ಳುತ್ತಿದ್ದರಂತೆ. ಈ ಸಂಗತಿ ಶಾಸ್ತ್ರಿಗಳ ಶಿಷ್ಯರು ಹೇಳುತ್ತಾರೆ.

ಮೇಳಗಳ ತಿರುಗಾಟ

ಯಕ್ಷಗಾನ ಬಯಲಾಟದ ಮೇಳಗಳು ಅಂದು ಹೆಚ್ಚಾಗಿ ದೇವಸ್ಥಾನಗಳ ವಶದಲ್ಲಿರುತ್ತಿದ್ದವು. ಮೇಳದ ಉಸ್ತುವಾರಿ, ನಿರ್ದೇಶನ ಭಾಗವತರದು. ಕಲಾವಿದರನ್ನೆಲ್ಲ ಕಲೆಹಾಕಿ ದೀಪಾವಳಿ ಕಳೆದನಂತರ ‘ಮೇಳ’ ಸಂಚಾರಕ್ಕೆ ಹೊರಡುತ್ತಿತ್ತು. ಯಾವುದಾದರೂ ಊರಿನ ಕಲಾಭಿ ಮಾನಿಗಳು ಮೇಳಕ್ಕೆ ‘ವೀಳ್ಯ’(ಆಮಂತ್ರಣ)ವಿತ್ತು ಬಯಲಾಟ ಆಡಿಸುತ್ತಿದ್ದರು. ದೇವಾಲಯದ ಭಕ್ತರು ಹರಕೆ ಹೇಳಿಕೊಂಡು ಆಟ ಆಡಿಸುವುದೂ ಉಂಟು.

ಮೇಳದಲ್ಲಿ ಪೆಟ್ಟಿಗೆ ಹೊರುವವನಿಂದ ಹಿಡಿದು, ಭಾಗವತರವರೆಗೆ ಎಲ್ಲರೂ ಇರುತ್ತಿದ್ದರು. ಅಡಿಗೆ ಭಟ್ಟನೂ ಮೇಳದಲ್ಲೇ. ವೇಷ ಭೂಷಣಗಳು ಮೇಳದವುಗಳೇ. ಕೆಲವು ಕಲಾವಿದರು ಸ್ವಂತದ ಸಲಕರಣೆ ಇಟ್ಟುಕೊಳ್ಳುತ್ತಿದ್ದರು.

ನೃತ್ಯಾಭ್ಯಾಸ

ಸುಮಾರು ೧೯೪೦ ನೇ ಇಸವಿ. ಕೊಳ್ಯೂರು ನಾಟಕ ಸಭಾ ತನ್ನ ಪ್ರಸಿದ್ಧಿ ಸುತ್ತೆಲ್ಲ ಹರಡಿ ತಟಸ್ಥವಾಗಿತ್ತು. ನಾಟಕದಲ್ಲಿ ಪ್ರಸಿದ್ಧಿ ಪಡೆದ ವಿಠಲ ಶಾಸ್ತ್ರಿಗಳಿಗೆ ಅದು ನಿಂತಾಗ ಹತ್ತಿರ ಮರ ಮುರಿದಂತಾಯಿತು. ಪುಟಿದೇಳುತ್ತಿದ್ದ ಕೀರ್ತಿಕಾಮನೆ, ಕಲಾಸೇವೆಯ ಗೀಳು ಕಸಿವಿಸಿ ಉಂಟುಮಾಡಿತು. ಬಯಲಾಟಕ್ಕೆ ಸೇರಬಾರದೇಕೆ ಎಂಬ ಯೋಚನೆ. ತಂದೆ ಬೇಡವೆಂದರೂ ಮಗ ಹಟ ಹಿಡಿದರು- ‘ಈ ವರ್ಷ ಮೇಳಕ್ಕೆ ಹೋಗುವುದು ಖಂಡಿತ.’

ಗೋಕುಲಾಷ್ಟಮಿಯ ಮರುದಿನ ಕಟೀಲಿನಲ್ಲಿ ‘ಸೇವೆ ಆಟ.’ ಅದರಲ್ಲಿ ಶಾಸ್ತ್ರಿಗಳು ವೇಷ ಮಾಡಿದರು. ‘ಸೇವೆ ಆಟ’ ಮುಂದಿನ ತಿರುಗಾಟಕ್ಕೆ ಪಾತ್ರಧಾರಿಗಳನ್ನು ಆಯ್ಕೆ ಮಾಡುವ ಒಂದು ಪ್ರದರ್ಶನವಿದ್ದಂತೆ. ಶಾಸ್ತ್ರಿಗಳಿಗೆ ಬೇಸಗೆಯ ತಿರುಗಾಟಕ್ಕೆ ಪ್ರವೇಶ ದೊರೆಯಿತು.

ಆದರೆ ನೆಚ್ಚಿನ ಪಾತ್ರಗಳಾದ ಕೃಷ್ಣ, ಪ್ರಹ್ಲಾದಗಳಿಗೆ ಅವಕಾಶ ಸಿಗಲಿಲ್ಲ. ರುಕ್ಮಿಣಿ, ಸೀತೆ ಮುಂತಾದ ಸ್ತ್ರೀ ಪಾತ್ರಗಳು ದೊರೆತವು. ಇದ್ದುದರಲ್ಲಿಯೇ ಎದ್ದುನಿಂತ ಶಾಸ್ತ್ರಿಗಳು ಜನರ ಕಣ್ಣಿಗೆ ಮಿಂಚು ಹೊಳೆದಂತೆ ಮಿರುಗಿದರು. ವರ್ಷ ಉರುಳಿತು.

‘ಯಕ್ಷಗಾನ ಬಯಲಾಟಕ್ಕೆ ಕುಣಿತವೇ ಮುಖ್ಯ ಆಧಾರ’ ಎಂಬ ಸತ್ಯ ಸ್ಪಷ್ಟವಾಯಿತು. ತಾನೂ ಉತ್ತಮ ನೃತ್ಯ ಕಲಿಯಬೇಕು ಎಂಬ ಹಟ ಮೂಡಿತು.

ಕುಂಬಳೆ ಸಮೀಪದ ಕಾವುಗೋಳಿಯ ಕಣ್ಣನ್ ಪ್ರಖ್ಯಾತ ಯಕ್ಷಗಾನ ಕಲಾವಿದರು. ಕುಣಿತ, ನೃತ್ಯಗಳಲ್ಲಿ ಅವರನ್ನು ಮೀರಿಸುವವರಿರಲಿಲ್ಲ. ತಾಳ ತಪ್ಪದೆ ಪದಾಭಿ ನಯ ಮಾಡುವುದರಲ್ಲಿ ಎತ್ತಿದ ಕೈ. ಅವರ ಕೃಷ್ಣನ ಪಾತ್ರ ಪ್ರಖ್ಯಾತ.

ಕೊಳ್ಯೂರಿಗೆ ಹತ್ತಿರದ ದೇಲಂತ ಬೆಟ್ಟು ದೇವಸ್ಥಾನ ದಲ್ಲಿ ವಿಠಲಶಾಸ್ತ್ರಿಗಳು ಮತ್ತು ಅವರ ಕೆಲವು ಗೆಳೆಯರು ನೃತ್ಯಾಭ್ಯಾಸ ಮಾಡಿದರು. ಗುರು ಕಣ್ಣನ್‌ರವರನ್ನು ಅಲ್ಲಿಗೇ ಕರೆಸಿಕೊಂಡರು. ಹುಟ್ಟುಕಲಾವಿದರಿಗೆ ನೃತ್ಯ ಕಲಿಸಲು ಕಣ್ಣನ್‌ರಿಗೂ ಆನಂದ. ಆರು ತಿಂಗಳ ಕಾಲ ಎಡೆಬಿಡದೆ ನೃತ್ಯಾಭ್ಯಾಸ ಮಾಡಿದಾಗ ವಿಠಲಶಾಸ್ತ್ರಿಗಳು ಪಕ್ಕಾ ಯಕ್ಷಗಾನ ಕಲಾವಿದರಾದರು. ಹಿಂದಿನ ಸಂಸ್ಕಾರ, ಅನುಭವಗಳಿಗೆ ತರಬೇತಿಯ ಮೆರಗು ಬಂದು ಮಿಂಚಿಸಿತ್ತು.

ಮರುವರ್ಷ ಶಾಸ್ತ್ರಿಗಳಿಗೆ ಮೇಳದಲ್ಲಿ ಹೆಚ್ಚಿನ ಗೌರವ. ಅನಿರುದ್ಧ, ಅಭಿಮನ್ಯುವಿನಂತಹ ಕೆಲವು ತರುಣ ಪಾತ್ರಗಳೂ ದೊರೆತವು. ಕುಣಿತದ ಬಲದಿಂದ ಪಾತ್ರಗಳು ಇಮ್ಮಡಿ ಬೆಳಗಿದವು.

ದೇವೇಂದ್ರ

ಅಂದು ಅಯ್ಯನಕಟ್ಟೆ ಎಂಬಲ್ಲಿ ಕುಮಾರ ವಿಜಯ ಪ್ರಸಂಗದ ಆಟ. ಕತ್ತಲಾಗಿ ಬಹಳ ಹೊತ್ತಾದರೂ ಪ್ರಸಂಗದ ಪ್ರಧಾನ ಪಾತ್ರ ‘ದೇವೇಂದ್ರ’ ಮಾಡುವಾತ ಬಂದಿರಲ್ಲಿಲ್ಲ. ಭಾಗವತರು ಕಂಗಾಲಾದರು. ಒಂಬತ್ತು ಗಂಟೆಗೆ ಪ್ರವೇಶ ಮಾಡಿ ಹತ್ತು ಗಂಟೆಗೆ ಪೀಠಿಕೆ ಬಾರಿಸಿಬಿಡಬೇಕು. ಭಾಗವತರಿಗೆ ಥಟ್ಟನೆ ಶಾಸ್ತ್ರಿಗಳ ನೆನಪಾಯಿತು. “ಶಾಸ್ತ್ರಿಗಳೇ, ನೀವು ಇಂದು ದೇವೇಂದ್ರನ ಪಾತ್ರ ಮಾಡಿ” ಎಂದರು. ಶಾಸ್ತ್ರಿಗಳು ಅದುತನಕ ಮುಖ್ಯ ವೇಷ ಮಾಡಿದ್ದಿಲ್ಲ. ತುಸು ಅನುಮಾನಿಸಿದರು.

“ಏನಿಲ್ಲ, ನೀವು ಚೆನ್ನಾಗಿ ಮಾಡುತ್ತೀರಿ. ದೇವಿಯನ್ನು ನೆನೆದು ವೇಷಕ್ಕೆ ಕುಳಿತುಕೊಳ್ಳಿ” ಎಂದರು ಭಾಗವತರು.

‘ಸರಿ’ ಎಂದ ಶಾಸ್ತ್ರಿಗಳು ಬಣ್ಣ ಹಾಕುವ ಚೌಕಿಗೆ ಹೋಗಿ ಅಲ್ಲಿರುವ ಮಹಾಗಣಪತಿಗೆ ಕೈ ಮುಗಿದು, ದೇವಿಯನ್ನು ನೆನೆದು ವೇಷಕ್ಕೆ ಕುಳಿತರು. ಯಕ್ಷಗಾನ ಕಲಾವಿದರು ತಮ್ಮ ಮುಖದ ಬಣ್ಣ ತಾವೇ ಹಾಕಿಕೊಳ್ಳ ಬೇಕು. ಪೀಠಿಕೆಯ ವೇಳೆಗೆ ಶಾಸ್ತ್ರಿಗಳು ದೇವೇಂದ್ರನ ಪಾತ್ರದಲ್ಲಿ ಝಗಝಗಿಸುತ್ತ ರಂಗಸ್ಥಳ ಪ್ರವೇಶಿಸಿದರು.

ಕುಣಿತ, ಮಾತು, ಗತ್ತುಗಾರಿಕೆಗಳಿಂದ ಪ್ರೇಕ್ಷಕರಿಗೆ ವೇಷ ಮಾಡಿದ್ದು ಯಾರೆಂದೇ ಅರ್ಥವಾಗಲಿಲ್ಲ. ಗುರು ಕಣ್ಣನ್‌ರವರಿಂದ ಕಲಿತ ರಾಜವೇಷದ ವಿವಿಧ ನೃತ್ಯಗತಿ ಗಳನ್ನು ಪ್ರದರ್ಶಿಸಿ ಶಾಸ್ತ್ರಿಗಳು ಬೆಳಗಿನ ತನಕ ದೇವೇಂದ್ರ ನಾಗಿ ‘ಸೈಸೈ’ ಅನ್ನಿಸಿಕೊಂಡರು. ಸಹಕಲಾವಿದರು, ಭಾಗವತರು ಮೆಚ್ಚುಗೆ ವ್ಯಕ್ತಪಡಿಸಿದರು. “ಎಲ್ಲ ಆ ಮಹಾಗಣಪತಿಯ ಕೃಪೆ” ಎಂದರು ಶಾಸ್ತ್ರಿಗಳು.

ಮಾತಿನ ಮಲ್ಲ

ಪ್ರಸಂಗಾವಧಾನತೆಯಿಂದ ಪಾತ್ರೋಚಿತವಾದ ಮಾತು ಆಡುವುದರಲ್ಲಿ ಶಾಸ್ತ್ರಿಗಳು ಜಾಣರು. ಮಾತಿನಿಂದಲೇ ಜನರಂಜನೆ ಮಾಡುತ್ತಿದ್ದರು. ಇದಿರು ಪಾತ್ರದ ಭಾವವರಿತು ಆಡುವ ಮಾತು ಸಾಹಿತ್ಯದ ಸುಗ್ಗಿಯಾಗುತ್ತಿತ್ತು. ಒಮ್ಮೆ ಶ್ರೀಕೃಷ್ಣ ಪಾರಿಜಾತ ಪ್ರಸಂಗದಲ್ಲಿ ರುಕ್ಮಿಣಿಯಾಗಿ ಶಾಸ್ತ್ರಿಗಳು ಸತ್ಯಭಾಮೆಯೊಡನೆ ಒಂದೂವರೆ ಗಂಟೆ ಕಾಲ ವಾದ ಮಾಡಿದ್ದರಂತೆ. ಅಷ್ಟು ಹೊತ್ತೂ ಜನ ಬಾಯಿಬಿಟ್ಟು ಮಾತು ಕೇಳುತ್ತಿದ್ದರು.

ಧರ್ಮಸ್ಥಳದ ಮಂಜಯ್ಯ ಹೆಗ್ಗಡೆಯವರು ಕಲಾ ಪ್ರೇಮಿಗಳಾಗಿದ್ದರು. ತಮ್ಮಲ್ಲಿ ಮೇಳವನ್ನು ಉತ್ತಮ ಪಡಿಸಿ ಕಲಾಸೇವೆ ಮಾಡಬೇಕೆಂದು ಅವರ ಮಹದಾಸೆ. ಕುರಿಯ ವಿಠಲಶಾಸ್ತ್ರಿಗಳು ಕಟೀಲು ಮೇಳದಲ್ಲಿದ್ದುದು, ಕುಂಡಾವು ಮೇಳ ನಡೆಸಿದ್ದುದು, ಅವರು ಉತ್ತಮ ಕಲಾವಿದರೆಂಬ ಸಂಗತಿ ಅವರಿಗೆ ತಿಳಿದಿತ್ತು. ಒಂದೆರಡು ಸಲ ಶಾಸ್ತ್ರಿಗಳ ಸುಧಾರಿಸಿದ ರೀತಿಯ ರಾಮ, ಕೃಷ್ಣರ ಪಾತ್ರಗಳನ್ನು ನೋಡಿ ಮೆಚ್ಚಿದ್ದರು.

ಎಲ್ಲಕ್ಕಿಂತ ಹೆಚ್ಚಾಗಿ, ‘ಇವರು ಒಳ್ಳೆಯ ಸಂಸ್ಕಾರವುಳ್ಳ ಕಲಾವಿದ, ಶಿಕ್ಷಕ. ಆಗಲೇ ಒಂದಿಬ್ಬರು ಉತ್ತಮ ಶಿಷ್ಯರನ್ನು ತಯಾರು ಮಾಡಿದ್ದಾರೆ. ಸಹಕಲಾವಿದರನ್ನು ರಂಗಸ್ಥಳದಲ್ಲಿ ಚೆನ್ನಾಗಿ ನಿಭಾಯಿಸುತ್ತಾರೆ’ ಎಂಬ ಸಂಗತಿಗಳು ಹೆಗ್ಗಡೆ ಯವರಿಗೆ ಪ್ರಿಯವಾಗಿದ್ದವು. ಇಂಥ ಕಲಾವಿದರು ಮುಂದೆಬಂದರೆ ಇವರ ಕೈಗೆ ಮೇಳ ಕೊಡಬಹುದು ಎಂದುಕೊಂಡಿದ್ದರು.

ಕ್ರಾಂತಿ

ತಮಿಂಗಿಲಕ್ಕೆ ಚಿಕ್ಕ ಕೆರೆ ಸಾಕಾಗುತ್ತದೆಯೆ ? ಕಟೀಲು ಮೇಳ, ಕುಂಡಾವು ಮೇಳಗಳಲ್ಲಿ ದೊರೆಯುತ್ತಿದ್ದ ಸೀಮಿತ ಅವಕಾಶ ಶಾಸ್ತ್ರಿಗಳಿಗೆ ಸಾಲದಾಯಿತು. ‘ಯಕ್ಷಗಾನ ಬಯಲಾಟ’ ಕ್ಷೇತ್ರದಲ್ಲಿ ಒಂದು ಕ್ರಾಂತಿ ಮಾಡಬೇಕೆಂದಿದ್ದ ಅವರು ತನ್ನ ಗೆಳೆಯರೊಡನೆ ಚರ್ಚಿಸಿ ಒಂದು ಯೋಜನೆ ಸಿದ್ಧಪಡಿಸಿದ್ದರು. ಅದು ಹೀಗಿತ್ತು-

೧. ಹಳೆಯ ಸಂಪ್ರದಾಯದ ವೇಷಭೂಷಣಗಳ ಬದಲು ಪಾತ್ರೋಚಿತ ಸುಧಾರಿಸಿದ ವೇಷಭೂಷಣಗಳನ್ನು ಬಳಸುವುದು.

೨. ಅಶಿಕ್ಷಿತರು ಆಡುವಂತಹ ಅಸಂಬದ್ಧ ಸಂಭಾ ಷಣೆ, ತಪ್ಪು ಉಚ್ಚಾರಣೆ, ಅಶ್ಲೀಲ ಚೇಷ್ಟೆಗಳ ಬದಲು ಪಾತ್ರಗೌರವಕ್ಕೆ ಕುಂದುಬಾರದ ಹಾಗೆ ಸಾಹಿತ್ಯಕ್ಕೆ ಸಂಭಾಷಣೆ, ಸುಸಂಸ್ಕೃತ ಅಭಿನಯ ಇರುವಂತೆ ಮಾಡುವುದು.

೩. ಯಕ್ಷಗಾನ ಬಯಲಾಟಕ್ಕೆ ಸುಶಿಕ್ಷಿತ ಯುವಕರನ್ನು ಆಕರ್ಷಿಸುವುದು.

೪. ಹೊಸ ಪ್ರಸಂಗಗಳ ರಚನೆ ಮತ್ತು ಪ್ರಯೋಗ.

೫. ಕಲಾವಿದರಿಗೆ ಆರು ತಿಂಗಳ ತಿರುಗಾಟದ ಅವಧಿಗೆ ಇಂತಿಷ್ಟು ಎಂದು ನಿಗದಿ ಮಾಡಿದ ಸಂಭಾವನೆ ನೀಡಿ, ಹೋದಲ್ಲಿ ಊಟ, ವಸತಿ ಸೌಕರ್ಯ ಏರ್ಪಡಿ ಸುವುದು.

೬. ವೀಳ್ಯದ ಆಮಂತ್ರಣ ಪಡೆದು ಬಯಲಾಟ ಆಡುವ ಬದಲು ‘ಹಣ ಕೊಟ್ಟು ಪ್ರವೇಶ’ದ ಪ್ರದರ್ಶನ ನೀಡುವುದು. ಇಲ್ಲಿ ಪ್ರೇಕ್ಷಕರಿಗೆ ಆಸನಗಳ ವ್ಯವಸ್ಥೆ ಮಾಡುವುದು.

ಅಭಿಮನ್ಯು ಪಾತ್ರದಲ್ಲಿ ಕುರಿಯ ವಿಠಲಶಾಸ್ತ್ರಿ.

 ೭. ಊರಿಂದೂರಿಗೆ ‘ತಲೆ ಹೊರೆ’ಯಲ್ಲಿ ಆಟದ ಸಾಮಾನು ಸಾಗಿಸುವ ಬದಲು ವಾಹನ ವ್ಯವಸ್ಥೆ ಮಾಡುವುದು.

೮. ರಂಗಸ್ಥಳದಲ್ಲಿ ಪಂಜಿನ ಬೆಳಕು, ಪೆಟ್ರೋಮ್ಯಾಕ್ಸ್ ದೀಪದ ಬದಲು ಡೈನಮೋದಿಂದ ವಿದ್ಯುದ್ದೀಪ ಅಳವಡಿಸು ವುದು.

೯. ಜಿಲ್ಲೆಯ ಗಡಿ ದಾಟಿ ರಾಜ್ಯಾದ್ಯಂತ, ಹೊರ ನಾಡುಗಳಿಗೂ ಸಂಚರಿಸುವುದು.

೧೦. ಯಕ್ಷಗಾನ ಕಲೆಯ ಮೂಲ, ಪರಂಪರೆಗೆ ಧಕ್ಕೆ ಬಾರದ ಹಾಗೆ ಸರ್ವತೋಮುಖ ಹೊಸತನ ರೂಪಿಸು ವುದು.

ಇಂಥ ಹತ್ತು ಹಲವು ಯೋಜನೆ, ಮಹತ್ವಾಕಾಂಕ್ಷೆ ಹೊತ್ತ ವಿಠಲ ಶಾಸ್ತ್ರಿಗಳು ಮಂಜಯ್ಯ ಹೆಗ್ಗಡೆಯವರ ಬಳಿ ಹೋದರು. ಕರೆದಂತೆ ಬಂದ ಶಾಸ್ತ್ರಿಗಳಿಗೆ ಮಂಜುನಾಥನ ಕೃಪೆಯಾಯಿತು. ಹೆಗ್ಗಡೆಯವರು ಶಾಸ್ತ್ರಿಗಳಿಗೆ ಮೇಳ ವಹಿಸಿಕೊಟ್ಟರು.

‘ಹೊಸ ಪ್ರಸಂಗ’ದಿಂದ ಮೇಳ ಪ್ರಾರಂಭಿಸಬೇಕೆಂದು ನಿರ್ಧರಿಸಿದ ಶಾಸ್ತ್ರಿಗಳು ಚಿಪ್ಪಾರು ವೆಂಕಟರಮಣಭಟ್ಟರಿಂದ ‘ಬ್ರಹ್ಮಕಪಾಲ’ವೆಂಬ ಹೊಸ ಪ್ರಸಂಗ ಬರೆಸಿದರು.

‘ಬ್ರಹ್ಮಕಪಾಲ’ದ ಕಥೆ ಹೀಗೆ –

ಈಶ್ವರನ ಮದುವೆ ಸಂದರ್ಭದಲ್ಲಿ ಬ್ರಹ್ಮನೂ ಬಂದಿದ್ದ. ಮಾತಿಗೆ ಮಾತು ಬೆಳೆದು ಬ್ರಹ್ಮ ತಾನು ಈಶ್ವರನಿಗೆ ಸಮ ಎಂದು ವಾದಿಸಿದ. ಬ್ರಹ್ಮನಿಗೂ ಐದು ತಲೆ, ಈಶ್ವರನಿಗೂ ಐದು ತಲೆ. ಸಮಾನತೆಗೆ ಕಾರಣವಾದ ಬ್ರಹ್ಮನ ಐದನೇ ತಲೆಯನ್ನು ಈಶ್ವರ ಕೇಳುತ್ತಾನೆ.

ಬ್ರಹ್ಮನ ಶಾಪ, ಬ್ರಹ್ಮಹತ್ಯಾ ದೋಷದಿಂದ ‘ಬ್ರಹ್ಮ ಕಪಾಲ’ ಈಶ್ವರನ ಕೈ ಕಚ್ಚಿಕೊಂಡು ರಕ್ತ ಹೀರುತ್ತದೆ, ಕಾಡಿಸುತ್ತದೆ. ಈಶ್ವರ ದಿಗಂಬರನಾಗಿ ಭಿಕ್ಷೆ ಬೇಡುತ್ತ, ಲೋಕಲೋಕಗಳನ್ನು ಸಂಚರಿಸುತ್ತಾನೆ. ಹಲವರ ಭೇಟಿ, ಹಲವರ ಹಾಸ್ಯ. ಕೊನೆಗೆ ಮಹಾವಿಷ್ಣುವಿನ ತಂತ್ರದಿಂದ ‘ಬ್ರಹ್ಮಕಪಾಲ’ ಈಶ್ವರನನ್ನು ಬಿಡುತ್ತದೆ.

ಹಣ ಕೊಟ್ಟು ಪ್ರವೇಶ

೧೯೪೫ರ ಮಳೆಗಾಲ. ಕುರಿಯದಲ್ಲಿ ದಿನವೂ ಹತ್ತಾರು ಜನರಿಗೆ ಸಂತರ್ಪಣೆ. ಹೊಸ ಪ್ರಸಂಗದ ಸಿದ್ಧತೆಗೆ ಮೇಳದ ಕಲಾವಿದರೆಲ್ಲ ಶಾಸ್ತ್ರಿಗಳಲ್ಲೇ ವಾಸ. ಪಾತ್ರಗಳ ಗುಣಸ್ವಭಾವದ ಚರ್ಚೆ, ಸಂಭಾಷಣೆಯ ಜಾಡಿನ ವಿವರಣೆ, ವೇಷ ವಿನ್ಯಾಸವನ್ನು ಕುರಿತು ಸಮಾಲೋಚನೆ. ಪ್ರಥಮ ಪ್ರಯೋಗ ಎಲ್ಲಿ ? ಹೇಗೆ ? ಎಂಬ ಯೋಜನೆ.

ಪ್ರಥಮ ಪ್ರದರ್ಶನ ಮೂಡಬಿದಿರೆಯಲ್ಲಿ. ‘ಹಣ ಕೊಟ್ಟು ಪ್ರವೇಶ’ದ ಪ್ರದರ್ಶನ. ರಂಗಸ್ಥಳದ ಸುತ್ತ ಆವರಣ. ಹೊಸ ವೇಷಭೂಷಣ. ಭಿತ್ತಿಪತ್ರ, ಕರಪತ್ರಗಳ ಮೂಲಕ ಪ್ರಚಾರ. ಅದ್ಧೂರಿಯ ಸಿದ್ಧತೆ. ಮೂಡಬಿದಿರೆಯ ಲಾವಂತಬೆಟ್ಟ ಎಂಬಲ್ಲಿ ರಂಗಸ್ಥಳ. ‘ಬ್ರಹ್ಮಕಪಾಲ’ದ ಪ್ರಥಮ ಪ್ರದರ್ಶನ. ಸ್ವತಃ ಹೆಗ್ಗಡೆಯವರೇ ಹಾಜರಿದ್ದರು. ಯಕ್ಷಗಾನ ಬಯಲಾಟ ಕ್ಷೇತ್ರದಲ್ಲಿ ನೂತನ ಕ್ರಾಂತಿ ಆರಂಭ.

‘ಬ್ರಹ್ಮಕಪಾಲ’ದ ಈಶ್ವರನಾಗಿ ಶಾಸ್ತ್ರಿಗಳು ವಿಜೃಂಭಿಸಿ ದರು. ಕೋಪದಿಂದ ಬ್ರಹ್ಮನ ತಲೆ ಕಿತ್ತು ತಾಂಡವವಾಡಿ, ಬ್ರಹ್ಮಕಪಾಲದಿಂದ ಕಚ್ಚಿಸಿಕೊಂಡು ನೋವಿನಿಂದ ನರಳಿ ದರು. ‘ಭವತಿ ಭಿಕ್ಷಾಂ ದೇಹಿ’ ಎಂದು ಭೈರವನಾಗಿ ಭಿಕ್ಷೆ ಬೇಡಿದರು. ಎಲ್ಲ ದೃಶ್ಯಗಳಲ್ಲಿಯೂ ಸಮರ್ಥನಾಗಿ ಅಭಿನಯಿಸಿದರು. ಹೂವಿನ ಹಾರಗಳ ಸುರಿಮಳೆ. ದೇವರೆಂಬ ನಂಬಿಕೆಯಿಂದ ರಂಗಸ್ಥಳದಲ್ಲೇ ನಮಸ್ಕಾರ, ಪೂಜೆ. ದೇವರ ಕಷ್ಟ ಕಂಡು ಜನರು ಅತ್ತರು. ಮನಸಾರೆ ಮೆಚ್ಚಿದರು. ಯಕ್ಷಗಾನ ಬಯಲಾಟದ ಸಂಪ್ರದಾಯಕ್ಕೆ ನಾಟಕೀಯತೆಯ ಕಂಪು ಬೆರೆತು ಕಲೆ ಜನರ ಮನ ರಂಜಿಸಿತು.

ನಡುವೆ ಬಿಡುವಿಗಾಗಿ ಎರಡು ದಿನ ಬೇರೆ ಪ್ರಸಂಗ. ಒಂದೇ ಕಡೆ ಎರಡು ವಾರ ‘ಬ್ರಹ್ಮಕಪಾಲ’ದ ಪ್ರದರ್ಶನ. ಮತ್ತೆ ಜಿಲ್ಲೆಯಾದ್ಯಂತ ಅದೇ ಪ್ರಸಂಗ. ಆ ತಿರುಗಾಟದಲ್ಲಿ ೮೦ ಕ್ಕೂ ಹೆಚ್ಚಿನ ಪ್ರದರ್ಶನ ‘ಬ್ರಹ್ಮಕಪಾಲ’ದ್ದು. ಜೊತೆಗೇ ‘ಕೃಷ್ಣಲೀಲೆ – ಕಂಸವಧೆ’ಯನ್ನು ಹೊಸ ರೀತಿಯಲ್ಲಿ ರಂಗಸ್ಥಳಕ್ಕೆ ಅಳವಡಿಸಿದರು. ಕೃಷ್ಣನ ಮುಗ್ಧ ಶೃಂಗಾರ ಚೇಷ್ಟೆಗಳು, ತುಂಟಾಟಗಳು ಶಾಸ್ತ್ರಿಗಳ ಅಭಿನಯದಲ್ಲೇ ನೋಡಲು ಚಂದ. ಈಗ ಅವರಂತೆ ಶ್ರೀಕೃಷ್ಣನಾಗಿ ಅಭಿನಯಿಸುವವರು, ಅವರ ಶಿಷ್ಯರು ಮತ್ತು ಅವರ ಅಭಿನಯವನ್ನು ನೋಡಿ ಕಲಿತವರು ಮಾತ್ರ.

ಎಷ್ಟು ಕಲಿತರೂ ಸಾಲದು

ಆ ವರ್ಷ ‘ಮೇಳ’ ಒಳಗೆ ಬಂದ ಕೂಡಲೇ ಶಾಸ್ತ್ರಿ ಗಳಿಗೆ ಶಿವತಾಂಡವ ನೃತ್ಯಕ್ಕೆ ಪೂರಕವಾದ ಭರತ ನಾಟ್ಯ, ಕಥಕ್ಕಳಿ ಕಲಿಯಬೇಕೆಂಬ ಹಂಬಲ ಹುಟ್ಟಿತು. ಅದೇ ವರ್ಷ ಮಂಜೇಶ್ವರದಲ್ಲಿ ಕಥಕ್ಕಳಿ, ಭರತನಾಟ್ಯ ತರಗತಿ ಪ್ರಾರಂಭವಾಗಿತ್ತು.

ಕೊಚಿನ್‌ನಿಂದ ಪರಮಶಿವನ್ ಎಂಬ ನೃತ್ಯ ವಿದ್ವಾಂಸರನ್ನು ಶ್ರೀಮಂತರೊಬ್ಬರು ಕರೆಸಿದ್ದರು. ಶಾಸ್ತ್ರಿಗಳು ಪರಮಶಿವನ್‌ರವರ ಬಳಿ ಶಿಷ್ಯನಾಗುವ ಬಯಕೆ ತೋರಿ ದರು ಪರಮಶಿವನ್ ಸಂತೋಷದಿಂದ ಸ್ವಾಗತಿಸಿದರು. ಕಲಿಕೆ-ಸಾಧನೆ ಪ್ರಾರಂಭವಾಯಿತು. ಶಿವತಾಂಡವ ನೃತ್ಯದ ಲಯ ವಿನ್ಯಾಸ, ತರಂಗಿತತೆ, ಮುದ್ರೆ, ಮುಖ ಭಾವಗಳನ್ನು ಒಣನೆಲ ನೀರು ಹೀರುವಂತೆ ಎಲ್ಲವನ್ನು ಶಾಸ್ತ್ರಿಗಳು ಕರಗತ ಮಾಡಿಕೊಂಡರು; ಒಮ್ಮೆ ಹೇಳಿ ತೋರಿಸಿದರೆ ಸಾಕು ಕಲಿತುಬಿಡುತ್ತಿದ್ದರು.

“ಇದೆಲ್ಲ ನಿನಗೆ ಯಾಕೆ ಮಗು ? ಇದ್ದುದು ಸಾಕು” ಎಂದು ಅಪ್ಪ ಗೊಣಗಿದರು. “ಎರಡು ಮಕ್ಕಳಾದ ಅನಂತರವೂ ನೀವು ಕಲಿಯುವುದೆಂದರೇನು ? ಯಾರಾ ದರೂ ನೆಗಾಡಿಯಾರು !” ಎಂದರು ಹೆಂಡತಿ ಗಂಗಮ್ಮ.

“ಈ ಕಲೆಗೆ ಎಷ್ಟು ಕಲಿತರೂ ಸಾಲದು” ಎಂದರು. ವಿಠಲಶಾಸ್ತ್ರಿಗಳು, “ಮಕ್ಕಳಾದರೆ ಕಲಿಯಬಾರದೂಂತ ಇದೆಯಾ ? ವಿದ್ಯೆ ಬರುವುದಿಲ್ಲವಾ ? ನಾನು ನನಗಾಗಿ ಕಲೀತಾ ಇಲ್ಲ. ಹತ್ತಾರು ಜನ ಶಿಷ್ಯರನ್ನು ತಯಾರು ಮಾಡಿ ಒಂದು ಸುಂದರ ಗುಂಪು ಕಟ್ಟಬೇಕು. ಅದಕ್ಕಾಗಿ ಇನ್ನೂ ಕಲಿಯಬೇಕು” ಎಂದರು

ನೋವಿನಲ್ಲೂ ನಿಷ್ಠೆ

ಒಮ್ಮೆ ಶಿಷ್ಯ ಶಾಸ್ತ್ರಿಗಳ ನಿಷ್ಠೆಯ ಪರೀಕ್ಷೆ.

ಮೂರು ದಿನಗಳ ಹಿಂದೆ ಊರಲ್ಲಿ ಎಲ್ಲರಿಗೂ ‘ದಾಕು’ ಹಾಕಿದ್ದರು. ಶಾಸ್ತ್ರಿಗಳಿಗೂ ಹಾಕಿತ್ತು. ದಿನವೂ ಕೊಳ್ಯೂರಿನಿಂದ ಎಂಟು ಮೈಲಿ ದೂರದ ಮಂಜೇಶ್ವರಕ್ಕೆ ಸೈಕಲ್ ಮೇಲೆ ಹೋಗಿ ನೃತ್ಯ ಅಭ್ಯಾಸ ಮಾಡಿ ಬರುತ್ತಿದ್ದರು. ದಾಕು ಹಾಕಿದ ಮರುದಿನವೂ ಹೋಗಿದ್ದರು. ಅಂದು ತಾಂಡವನೃತ್ಯದ ರಭಸಗತಿಯನ್ನು ಅಭ್ಯಾಸ ಮಾಡಿದ್ದರು.

ರಾತ್ರಿ ಮನೆಗೆ ಬಂದಾಗ ಮಳೆಯಲ್ಲಿ ನೆನೆದು, ದಾಕಿನ ನೋವಿಗೆ ಜ್ವರ ಬಂದಿತು. ಮರುದಿನ ಬೆಳಿಗ್ಗೆ ಎದ್ದಾಗ ಎಡತೋಳು ಒನಕೆಯಂತೆ ಊದಿಕೊಂಡಿತ್ತು. ಜ್ವರ ಸುಡುತ್ತಿತ್ತು. ನರಳುತ್ತಲೇ ಹೊರಟುನಿಂತ ಗಂಡನನ್ನು ಹೆಂಡತಿ ಗಂಗಮ್ಮ ತಡೆದು, “ಜೀವದ ಮೇಲೆ ಆಸೆ ಇಲ್ಲವೆ ?” ಎಂದರು. ತಮ್ಮ, ರಾಮಶಾಸ್ತ್ರಿಗಳೂ ತಡೆದರು. ಆದರೆ ವಿಠಲಶಾಸ್ತ್ರಿಗಳಿಗೆ ಶಿವ ತಾಂಡವದ ಗೀಳು. ಯಾರ ಮಾತನ್ನೂ ಕೇಳದೆ ಬಿರುಗಾಳಿ, ಮಳೆ ಲೆಕ್ಕಿಸದೆ ಒಂದೇ ಕೈಯಲ್ಲಿ ಸೈಕಲ್ ನಡೆಸುತ್ತ ಮಂಜೇಶ್ವರ ತಲುಪಿದರು.

ಪರಮಶಿವನ್ ಶಿಷ್ಯನ ನಿಷ್ಠೆ ಕಂಡು ಬೆರಗಾದರು.

‘ತಾಂಡವ ನೃತ್ಯ’ದ ಮೆರಗು ತುಂಬಿದ ‘ಬ್ರಹ್ಮಕಪಾಲ’ ಮರುವರ್ಷ ಇನ್ನೂ ಚೆನ್ನಾಗಿ ಮೆರೆಯಿತು.

ಲಕ್ಷ್ಮಣನಂಥ ತಮ್ಮ

ಹೊಗಳಿಕೆಗೆ ಹಿಗ್ಗದವರಾರು ? ಕಲಾವಿದರೆಂದರೆ ಪ್ರಶಂಸಾಪ್ರಿಯರು. ಕಲೆಗಾಗಿ ತನ್ನ ಸರ್ವಸ್ವ ಮುಡಿಪಾಗಿಟ್ಟ ವಿಠಲಶಾಸ್ತ್ರಿಗಳಂತೂ ತುಂಬ ಧಾರಾಳಿ. ಹೋದ ಹೋದ ಕಡೆ ಬಂಧುಗಳು, ಮಿತ್ರರು, ಪ್ರಶಂಸಕರು. ಬೆಳಗಾಗುವ ತನಕ ಬೆವರು ಸುರಿಸಿ ಕುಣಿದು ಬೆಳಿಗ್ಗೆ ಬಣ್ಣ ಒರಸಿದ ಕೂಡಲೇ ಮಿತ್ರರ ಬಳಿ, ಆತ್ಮೀಯರ ಮನೆ ಸೇರಿಬಿಡು ತ್ತಿದ್ದರು. ಮನಬಂದಂತೆ ನಡೆಯುತ್ತಿದ್ದರು. ಸಂಪಾದನೆ ಯಂತೇ ಖರ್ಚಿಗೂ ಮಿತಿಯಿಲ್ಲ. ಸಂಪಾದಿಸಿ ಉಳಿದುದು ಕೀರ್ತಿ ಮಾತ್ರ.

ವಿಠಲಶಾಸ್ತ್ರಿಗಳ ತಮ್ಮ ರಾಮಶಾಸ್ತ್ರಿಗಳು. ಹೆಸರು ರಾಮನಾದರೂ ಲಕ್ಷ್ಮಣನಂತೆ ಅಣ್ಣನನ್ನು ನೆರಳಾಗಿ ಅನುಸರಿಸುವ ಸ್ವಭಾವ.

ಮಳೆಗಾಲದ ಒಂದು ದಿನ. ಅಣ್ಣ-ತಮ್ಮಂದಿರು ಮೇಳದ ಆರ್ಥಿಕ ಸ್ಥಿತಿಯನ್ನು ಕುರಿತು ಚರ್ಚಿಸಿದರು.

‘ಹೀಗೆ ನಡೆದರೆ ನಾವು ಹೆಚ್ಚು ವರ್ಷ ಮೇಳ ನಡೆಸಲಿಕ್ಕಾಗದು. ಮನೆಯ ಆಸ್ತಿಯೂ ಹೋದೀತು’ _ ತಮ್ಮ ಚಿಂತೆಯಿಂದ ಹೇಳಿದರು.

“ಹಾಗಾದರೆ ಏನು ಮಾಡುವುದೂಂತ ನೀನು ಹೇಳುವುದು ? ನಾನಿರುವವರೆಗೆ ಮೇಳ ಬಿಡುವುದಂತೂ ಸಾಧ್ಯವಿಲ್ಲ.”

ವಿಠಲಶಾಸ್ತ್ರಿಗಳೂ ಚಿಂತಿತರಾಗಿದ್ದರು.

“ನೀನು ಒಪ್ಪಿದರೆ ನನ್ನದು ಒಂದು ಸಲಹೆ ಇದೆ…..”

“ಏನು ?” ತಮ್ಮನ ಮಾತು ನಿಲ್ಲುವ ಮೊದಲೇ ಅಣ್ಣ ಕೇಳಿದರು.

“ಮತ್ತೇನೂ ಇಲ್ಲ; ಒಳಗಿನ ವ್ಯವಸ್ಥೆ ಮಾತ್ರ ನೋಡಿಕೋ. ಹೊರಗಿನ ವ್ಯವಹಾರ ನನಗಿರಲಿ. ನೀನು ಅದಕ್ಕೆ ತಲೆ ಹಾಕಬೇಡ” – ತಮ್ಮ ಅಳುಕುತ್ತ ಹೇಳಿದರು.

“ಅದನ್ನೇ ನಾನೂ ಹೇಳಬೇಕೂಂತ ಇದ್ದೆ” ಎಂದರು ಅಣ್ಣ.

“ಸರಿ, ಹಾಗಾದರೆ” ತಮ್ಮ ಸಮ್ಮತಿಸಿದರು. ಚರ್ಚೆ ನಿಂತಿತು. ಅಂದಿನಿಂದ ಮೇಳದ ಹೊರ ಉಸ್ತುವಾರಿ ರಾಮಶಾಸ್ತ್ರಿಗಳದ್ದು.

ಶೂರ್ಪಣಖಿ ಮತ್ತು ಆಂಜನೇಯ

ರಾಮಶಾಸ್ತ್ರಿಗಳ ಉಸ್ತುವಾರಿಯಲ್ಲಿ ಹೊರಗಿನ ವ್ಯವಸ್ಥೆ ಸಮರ್ಪಕವಾದಾಗ ವಿಠಲಶಾಸ್ತ್ರಿಗಳು ರಂಗ ಸ್ಥಳಕ್ಕೆ ಹೆಚ್ಚಿನ ಗಮನ ನೀಡತೊಡಗಿದರು.

ಮೇಳ, ಜಿಲ್ಲೆಯ ಗಡಿ ದಾಟಿ ಉತ್ತರ ಕನ್ನಡಕ್ಕೆ ಕಾಲುಹಾಕಿತು. ಮರುವರ್ಷ ಘಟ್ಟದ ಮೇಲೆಯೂ ಬಂತು. ಮಳೆಗಾಲದಲ್ಲಿ  ಮುಂಬಯಿ, ಮದರಾಸುಗಳಿಗೂ ಹೋಯಿತು. ‘ಬ್ರಹ್ಮಕಪಾಲ’, ‘ಕೃಷ್ಣಲೀಲೆ’, ‘ಶ್ರೀಕೃಷ್ಣ – ಪಾರಿಚಾತ’ದಂಥ ಪ್ರಸಂಗಗಳು ಜನಜನಿತವಾದವು.

೧೯೫೨-೫೩ ರ ಸುಮಾರಿಗೆ ವಿಠಲಶಾಸ್ತ್ರಿಗಳು ಇನ್ನೆರಡು ಹೊಸ ರೀತಿಯ ಪಾತ್ರಗಳನ್ನು ರಂಗಸ್ಥಳಕ್ಕೆ ತಂದರು. ಅವು ಶೂರ್ಪಣಖಿ ಮತ್ತು ಆಂಜನೇಯ. ಇವೆರಡನ್ನೂ ಶಾಸ್ತ್ರಿಗಳೇ ನಿರ್ವಹಿಸುತ್ತಿದ್ದರು. ಚಕ್ರಾಕಾರದ ಚಪ್ಪಟೆ ಕಿರೀಟ ಸಾಂಪ್ರದಾಯಿಕ ಬಯಲಾಟದಲ್ಲಿ ಹನುಮಂತನ ಕಿರೀಟವೆಂದು ಪರಿಚಿತ. ಮುಖ್ಯ ವರ್ಣದಲ್ಲಿ ತುಸು ಬದಲಾವಣೆ, ಈ ಕಿರೀಟ, ಹುಯ್ಯೋ, ಕುರ್ರೋ ಎನ್ನುತ್ತ ರಂಗ ಪ್ರವೇಶಿಸುವುದು ಬಿಟ್ಟರೆ ಇನ್ನಾವುದೇ ರೀತಿಯಲ್ಲಿ ಆಂಜನೇಯನ ಪಾತ್ರಕ್ಕೂ ಇತರ ಪಾತ್ರಗಳಿಗೂ ರೂಪದಲ್ಲಿ ವ್ಯತ್ಯಾಸ ಕಾಣಿಸುತ್ತಿರಲಿಲ್ಲ.

ವಿಠಲಶಾಸ್ತ್ರಿಗಳು ನಾಟಕದ ಆಂಜನೇಯನಂತೆ ಮೈತುಂಬ ಕೂದಲಿನ ಹಸಿರು ಅಂಗಿ ಚಲ್ಲಣ ತೊಟ್ಟು ಬಾಲ ಇಳಿಬಿಟ್ಟು, ತಲೆಯ ಮೇಲೆ ಜುಟ್ಟು ಬಿಗಿದು ಕಟ್ಟಿ, ಚಿತ್ರಗಳಲ್ಲಿರುವಂತೆ ಮುಖವರ್ಣ ರಚಿಸಿ ರಾಮನಾಮ ಹಾಡುತ್ತ ರಂಗಕ್ಕೆ ಬಂದರು. ಭಕ್ತಿರಸದ ಪ್ರವಾಹ, ಸಾಹಸಶೌರ್ಯದ ಮಿಂಚು, ಹಾಸ್ಯದ ಹೊನಲು ಹರಿಸಿ ಕಿರಿಯರನ್ನೂ ಹಿರಿಯರನ್ನೂ ರಂಜಿಸಿದರು.

‘ಚೂಡಾಮಣಿ’ ಪ್ರಸಂಗದಲ್ಲಿ ಲಂಕೆಗೆ ಧುಮುಕುವ ಸನ್ನಿವೇಶ ತೋರಿಸಲು ರಂಗಸ್ಥಳದ ರಥದಿಂದ ‘ಜೈ ರಾಂ’ ಎಂದು ಜನರ ಗುಂಪಿಗೇ ಧುಮುಕಿಬಿಡುತ್ತಿದ್ದರು. ರಂಗ ಸ್ಥಳದ ಪಕ್ಕದಲ್ಲಿ ಭಾರೀ ಮರದ ಕೊಂಬೆ ನೆಟ್ಟು ಅಶೋಕ ವನದ ದೃಶ್ಯದಲ್ಲಿ ಮರ ಹತ್ತಿ ಕುಳಿತು ಕೊಳ್ಳುತ್ತಿದ್ದರು. ಬಾಲಕ್ಕೆ ಬೆಂಕಿ ಹಚ್ಚಿಸಿಕೊಂಡು ‘ಲಂಕಾ ದಹನ’ ಮಾಡುವ ಅಭಿನಯದಲ್ಲಿ ಜನರ ನಡುವೆ ಓಡಾಡುತ್ತಿದ್ದರು. ಇಂಥ ಆಂಜನೇಯ ಜನಪ್ರಿಯನಾದ, ಅನುಕರಣೀಯನಾದ.

ಇದೇ ರೀತಿ ಶೂರ್ಪಣಖಿಯ ವೇಷದಲ್ಲೂ ಸುಧಾ ರಣೆ ತಂದರು. “ಶೂರ್ಪಣಖಿ ರಾಕ್ಷಸಿಯಾದರೂ ‘ಹೆಣ್ಣು’ ಎಂಬ ಸಂಗತಿ ಮರೆಯಬಾರದು” ಎಂದು ಶಾಸ್ತ್ರಿಗಳ ವಾದ. ಪಂಚವಟಿಯಲ್ಲಿ ರಾಮನನ್ನು ಕಂಡು,

‘ಕಂಡರೆ ಮದನನಂತಿಹ ಗಂಡುಸಾಗಿಹನೀತ
ಕೊಂಡೊಯ್ದು ಮನೆಗೆನ್ನ ಗಂಡನ ಮಾಳ್ಪೆ’

ಎಂಬ ಪದ್ಯಕ್ಕೆ ಶೂರ್ಪಣಖಿಯಾಗಿ ಶಾಸ್ತ್ರಿಗಳು ನೀಡುವ ಅಭಿನಯ ಶೃಂಗಾರದ ಉತ್ತಮ ಪ್ರದರ್ಶನ. ಅಭಿನಯದಿಂದಲೇ ಮಾತು ಅರ್ಥವಾಗುತ್ತಿತ್ತು.

‘ಈ ಕಲೆಗೆ ಎಷ್ಟು ಕಲಿತರೂ ಸಾಲದು.’

 ಕಂಸ

ಪ್ರಾಯ ಬಲಿತಂತೆ ಕಾಯವೂ ಬಲಿಯಿತು. ಕಿಶೋರ ಪಾತ್ರ, ಸ್ತ್ರೀ ಪಾತ್ರಗಳು ತನಗೆ ಹಿಡಿಸಲಾರವು ಎಂದು ಶಾಸ್ತ್ರಿಗಳೇ ನಿರ್ಧರಿಸಿಕೊಂಡರು. ಆ ಪಾತ್ರಗಳಿಗೆ ಆಗಲೇ ತಯಾರು ಮಾಡಿದ್ದ ತನ್ನ ಶಿಷ್ಯರನ್ನು ತಂದರು. ‘ಭಸ್ಮಾಸುರ ಮೋಹಿನಿ’, ‘ವಿಶ್ವಾಮಿತ್ರ ಮೇನಕೆ’ಯಂಥ ಪ್ರಸಂಗಗಳು ಈ ದೃಷ್ಟಿಯಿಂದ ರಚಿತವಾದವು.

‘ಬ್ರಹ್ಮಕಪಾಲ’ದ ‘ಈಶ್ವರ’ನಂತೆ ‘ಭಸ್ಮಾಸುರಮೋಹಿನಿ’ ಪ್ರಸಂಗದ ಶಾಸ್ತ್ರಿಗಳ ‘ಭಸ್ಮಾಸುರ’ನೂ ಪ್ರಖ್ಯಾತವಾಯಿತು. ಅದೇ ರೀತಿ ‘ವಿಶ್ವಾಮಿತ್ರ’ನ ಪಾತ್ರವೂ ಜನಪ್ರಿಯತೆ ಗಳಿಸಿತು. ಹೊಸತಾಗಿ ಕಾಣಿಸಿಕೊಂಡ ‘ಕಂಸ’ನ ಪಾತ್ರ ವಂತೂ ಅದ್ಭುತ ಖ್ಯಾತಿ ಗಳಿಸಿತು.

ಕಂಸನ ಪಾತ್ರ ಪ್ರಾರಂಭವಾದುದು ಹೀಗೆ :

ಎಲ್ಲ ಪ್ರೌಢಶಾಲೆಗಳಲ್ಲಿ ಸಹಾಯಾರ್ಥ ಆಟದ ವ್ಯವಸ್ಥೆಯಾಗಿತ್ತು. ಮೇಳ ಹೊರಟಿಲ್ಲವಾದುದರಿಂದ ಸುತ್ತಮುತ್ತಲ ಪ್ರಸಿದ್ಧ ಕಲಾವಿದರನ್ನು ಒಟ್ಟುಗೂಡಿಸಿದ್ದರು. ‘ಕೃಷ್ಣಲೀಲೆ ಕಂಸವಧೆ’ ಪ್ರಸಂಗ ಮೊದಲೇ ಪ್ರಕಟಿಸಿದ್ದರು.

ಪಾತ್ರಗಳನ್ನು ಹಂಚಿದ ವ್ಯವಸ್ಥಾಪಕರು ವಿಠಲ ಶಾಸ್ತ್ರಿಗಳೊಡನೆ ಕಂಸನ ಪಾತ್ರ ಮಾಡಬೇಕು ಎಂದು ವಿನಂತಿಸಿದರು. ಒಡನೇ ಶಾಸ್ತ್ರಿಗಳು ಎರಡಾಣೆ ನಾಣ್ಯ ಜೇಬಿನಿಂದ ತೆಗೆದುಕೊಟ್ಟು –

“ನನಗೆ ಇದರ ಶಂಖಪಾಷಾಣ (ವಿಷ) ತಂದು ಕೊಡು” ಎಂದರು. ಗಂಭೀರತೆಯನ್ನು ಹಾಸ್ಯದಲ್ಲಿ ಹಾರಿಸಿದ ವ್ಯವಸ್ಥಾಪಕರು, “ಅಷ್ಟು ಸ್ವಲ್ಪ ವಿಷ ನಿಮಗೆ ಸಾಲದು. ಬೆಳಿಗ್ಗೆ ನೋಡುವ. ಈಗ ನೀವು ಕಂಸನ ಪಾತ್ರ ಮಾಡಲೇಬೇಕು” ಎಂದು ಹಟ ಹಿಡಿದರು.

“ಯಾಕೆ ನನ್ನನ್ನು ಹಿಂಸೆ ಮಾಡುತ್ತೀರಿ ? ಒಂದು ಕಡೆ ಒಂದು ಹೊಸ ಪಾರ್ಟು ಮಾಡಿದರೆ ಮತ್ತೆ ಜನ ಅದೇ ಬೇಕು ಎನ್ನುತ್ತಾರೆ. ನನಗೆ ಆ ಪಾತ್ರದ ಸ್ವರೂಪ ರಚನೆಗೆ ಶುರುವಿನಿಂದ ಕಲಿಯಬೇಕಾಗುತ್ತದೆ” ಎಂದರು. ಶಾಸ್ತ್ರಿಗಳು ಒತ್ತಾಯಕ್ಕೆ ಮಾಡಿದ ಅಂದಿನ ಕಂಸನ ಪಾತ್ರ ಅನಂತರ ಎಲ್ಲೆಡೆ ಬೇಡಿಕೆ ಪಡೆಯಿತು. ಮೆಚ್ಚುಗೆ ಪಡೆಯಿತು. ಶಾಸ್ತ್ರಿಗಳ ತಂದೆಯ ‘ಕಂಸ’ ನೋಡಿದ್ದ ಜನರು ‘ಇದು ಅದಕ್ಕಿಂತಲೂ ಒಂದು ತೂಕ ಹೆಚ್ಚು’ ಎನ್ನುತ್ತಿದ್ದರು.

ದಶಾವತಾರಿ

‘ರಾವಣೋದ್ಭವ’ ಪ್ರಸಂಗದ ರಾವಣನೂ ಶಾಸ್ತ್ರಿಗಳ  ವಿಶಿಷ್ಟ ಪಾತ್ರಗಳಲ್ಲಿ ಒಂದು.

ರಾಮ, ಕೃಷ್ಣನ ಪಾತ್ರಗಳಲ್ಲಿ ಶಾಂತ, ಶೃಂಗಾರ, ಹಾಸ್ಯ; ಈಶ್ವರ, ರಾವಣ, ಭಸ್ಮಾಸುರ, ಕಂಸನಾಗಿ ರೌದ್ರ, ಭಯಾನಕ; ಕರ್ಣನಾಗಿ ಕರುಣ, ಶೋಕ; ಪ್ರಹ್ಲಾದ, ಆಂಜನೇಯನಾಗಿ ಭಕ್ತಿ, ಕಾರುಣ್ಯ ರಸ ; ಇತರ ಪಾತ್ರಗಳ ಮೂಲಕ ವಿವಿಧ ರಸಗಳ ಅಭಿನಯ ನೀಡುತ್ತಿದ್ದ ಕುರಿಯ ವಿಠಲಶಾಸ್ತ್ರಿಗಳು ನವರಸ ನಾಯಕ. ಯಕ್ಷಗಾನ ಬಯ ಲಾಟದ ಯಾವ ಪಾತ್ರವನ್ನಾದರೂ ಲೀಲಾಜಾಲ ವಾಗಿ ಮಾಡಬಲ್ಲ ‘ದಶಾವತಾರಿ’.

ಒಂದೇ ಪ್ರಸಂಗ, ಒಂದೇ ರಂಗಸ್ಥಳ; ಮೊದಲು ದಶರಥ, ಅನಂತರ ಭರತ. ಮೊದಲು ಶೂರ್ಪಣಖಿ, ಅನಂತರ ಆಂಜನೇಯ. ಕೃಷ್ಣನಾಗಲೂ ಬಲ್ಲರು, ಕಂಸನಾಗಲೂ ಗೊತ್ತು. ಬಣ್ಣ ಬಟ್ಟೆ ಬದಲಾಯಿಸಿದರೆ ಮನುಷ್ಯನೇ ಬೇರೆ ಎನಿಸುವಷ್ಟು ಬದಲಾವಣೆ.

ಬಿಡುವಿನ ವೇಳೆಯಲ್ಲಿ ಧೂಳಿನ ರಸ್ತೆಯಲ್ಲಿ ಮೋಟಾರ್‌ಸೈಕಲ್ ನಡೆಸುತ್ತ ಊರಿಂದೂರಿಗೆ ಅಲೆದಾಡು ವುದು, ಮಿತ್ರರೊಡನೆ ಹರಟುತ್ತ ಕುಳಿತುಕೊಳ್ಳು ವುದು, ಯಾವುದಾದರೂ ಪ್ರಸಂಗ ಕುರಿತು ಚರ್ಚಿಸುವುದು ವಿಠಲಶಾಸ್ತ್ರಿಗಳ ಹವ್ಯಾಸಗಳಲ್ಲಿ ಕೆಲವು.

ಹುಲಿ ಬೇಟೆಯೂ ಒಂದು ಹವ್ಯಾಸ. ಹೆಗಲಿಗೆ ಬಂದೂಕು ಏರಿಸಿ ಮೋಟಾರ್ ಸೈಕಲ್ ನಡೆಸುತ್ತ ಹೋಗುವ ಶಾಸ್ತ್ರಿಗಳ ಬೇಟೆಗಾರಿಕೆಯ ಠೀವಿಯೇ ಬೇರೆ. ಖಾದಿ ಪಂಚೆ, ಜುಬ್ಬ ಧರಿಸಿ ಕೂದಲನ್ನು ಒಳಸೇರಿಸಿ ತಲೆಗೆ ಧಾರವಾಡ ಟೋಪಿ ಹಾಕಿ, ಶಾಸ್ತ್ರಿಗಳು ಬಂದರೆ ದೂರದಿಂದಲೇ ಗುರುತಿಸಬಹುದು. ಇವರು ಒಳ್ಳೆಯ ಗುರಿಕಾರ. ಒಂದೆರಡು ಹುಲಿ, ಕೆಲವು ಕಾಡು ಹಂದಿ, ಹಲವು ಮೊಲ, ಕಾಡು ನಾಯಿ ಕೊಂದಿದ್ದರಂತೆ. ಬೇಟೆಗೆ ಹೋದರೆ ದಿನಗಟ್ಟಲೆ ಅನ್ನ-ನೀರು ಬಿಟ್ಟು ಕಾಡಿನಲ್ಲಿ ಇರುತ್ತಿದ್ದರಂತೆ.

ಕೃತಕೃತ್ಯ

‘ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಲಿ’ಯ ಸರು ಕುರಿಯ ವಿಠಲಶಾಸ್ತ್ರಿಗಳ ಜೊತೆಗೆ ಕರ್ನಾಟಕದಾದ್ಯಂತ ಪ್ರಮುಖ ಕೇಂದ್ರಗಳಲ್ಲಿ ಮೆರೆಯಿತು. ಮೈಸೂರಿನ ಮಹಾರಾಜರು, ಶೃಂಗೇರಿಯ ಜಗದ್ಗುರುಗಳು, ಹಲವು ಮಠಾಧಿಪತಿಗಳು ಶಾಸ್ತ್ರಿಗಳನ್ನು ಹೊಗಳಿ, ಹರಸಿ ಗೌರವಿಸಿದರು. ಧರ್ಮಸ್ಥಳದ ಹೆಗ್ಗಡೆ ಯವರಂತೂ ಹಲವು ಸಲ ಉಡುಗೊರೆ ನೀಡಿದ್ದಾರೆ.

೧೯೫೭ ರಲ್ಲಿ ರಷ್ಯ ದೇಶದ ನಾಯಕರುಗಳಾದ ಬುಲ್ಗಾನಿನ್ ಮತ್ತು ನಿಕಿಟಾ ಕ್ರುಶ್ಚೇವ್ ಭಾರತಕ್ಕೆ ಬಂದಾಗ ಶಾಸ್ತ್ರಿಗಳ ತಂಡಕ್ಕೆ ದೆಹಲಿಯಿಂದ ಕರೆ ಬಂತು. ಅಲ್ಲಿ ತಮ್ಮ ತಂಡದೊಂದಿಗೆ ಉತ್ತಮ ಪ್ರದರ್ಶನ ನೀಡಿ ‘ಶಹಬಾಸ್’ ಅನ್ನಿಸಿಕೊಂಡರು.

ಬಾಲ್ಯ-ಕೌಮಾರ್ಯಗಳನ್ನು ಮಕ್ಕಳಾಟ-ನಾಟಕ ಗಳಲ್ಲಿ ಕಳೆದ ಕುರಿಯ ವಿಠಲಶಾಸ್ತ್ರಿಗಳು ತಾರುಣ್ಯದಲ್ಲಿ ನಾಟಕದ ಗರಡಿ ಮನೆಯಿಂದ ಯಕ್ಷಗಾನದ ಬಯಲಿಗೆ ಬಂದು ಪ್ರೌಢಾವಸ್ಥೆ ದಾಟಿ ಮುಪ್ಪು ಕಾಣಿಸುವವರೆಗೂ ಯಕ್ಷಗಾನಕ್ಕಾಗಿ ಹಗಲಿರುಳು ದುಡಿದ ‘ಕಲಾ ಮಲ್ಲ’. ‘ಕ್ರಿಯಾಸಿದ್ಧಿಃ ಸತ್ವೇ ಭವತಿ ಮಹತಾಂ ನೋಪಕರಣೇ’. ಮಹಾತ್ಮರಿಗೆ ಕ್ರಿಯಾ ಸಿದ್ಧಿಯುಂಟಾಗುವುದು ಉಪಕರಣಗಳಿಂದಲ್ಲ, ಅಂತಃಸತ್ವದಿಂದ ಎಂಬ ಉಕ್ತಿಯನ್ನು ಸಾರ್ಥಕ ಮಾಡಿ ತೋರಿಸಿದರು.

ತಾನು ನಿರ್ಧರಿಸಿಕೊಂಡಿದ್ದ ಎಲ್ಲ ಸುಧಾರಣೆಗಳನ್ನು ತನ್ನ ಇಪ್ಪತ್ತು ವರ್ಷಗಳ ಕಲಾ ಜೀವನದಲ್ಲಿ ಅಳವಡಿಸಿ ಯಶಸ್ವಿಯಾದರು. ಮಾತ್ರವಲ್ಲ ಅವರ ಸುಧಾರಣೆಗಳು ಜನಪ್ರಿಯವೂ ಅನುಕರಣೀಯವೂ ಆದವು.

ಊರಿನ ಗೋಡೆಗಳಿಗೆ ಬಯಲಾಟದ ಭಿತ್ತಿಪತ್ರ ಅಂಟಿಸುವಾಗ ಕೂಲಿಯಾಳಿನಂತಹ ಮುಗ್ಧತೆ, ಮೇಳದ ವ್ಯಾನು, ಕಾರು, ಲಾರಿ ನಡೆಸುವಾಗ ಕೆಲಸಗಾರನ ನಿಷ್ಠೆ, ಧ್ವನಿವರ್ಧಕದಲ್ಲಿ ಪ್ರಚಾರ ನಡೆಸುವಾಗ ಪ್ರಚಾರಕನ ಉತ್ಸಾಹ, ಕಲಾವಿದರಿಗೆ ದಿನದ ವೇಷ ಹಂಚುವಾಗ ನಿರ್ದೇಶಕನ ಹೊಣೆಗಾರಿಕೆ, ಶಿಷ್ಯರ ತಪ್ಪು ತಿದ್ದುವಾಗ ಗುರುವಿನ ಗಂಭೀರತೆ. ಇದೆಲ್ಲ ಮುಗಿದು ಚೌಕಿಯಲ್ಲಿ ವೇಷಕ್ಕೆ ಕುಳಿತು ಅಂಗೈಯಲ್ಲಿ ಬಣ್ಣ ಕಲಸಿ, ಮಹಾ ಗಣಪತಿಯ ಕಡೆ ನೋಡಿ ಒಂದು ಕ್ಷಣ ಕಣ್ಣುಮುಚ್ಚಿ ದೇವರನ್ನು ಧ್ಯಾನಿಸಿದರೆ ಕಲೆಯ ಸಾನ್ನಿಧ್ಯ. ಮುಖಕ್ಕೆ ಬಣ್ಣ ಬಳಿದರೆ ವೇಷದ ಆವೇಶ.

ಇವನ್ನೆಲ್ಲ ಬಾಲ್ಯದಿಂದಲೂ ರೂಢಿಸಿಕೊಂಡ ಶಾಸ್ತ್ರಿ ಗಳು ವೃದ್ಧಾಪ್ಯ ಕಾಣದ ತರುಣ.

ಮುಗಿದ ತಾಂಡವ

೧೯೬೪ ರ ಜನವರಿ ೧೪ ರಂದು ಉಡುಪಿಯ ಬಳಿಯ ಪೆರಡೂರಿನಲ್ಲಿ ‘ಧರ್ಮಸ್ಥಳ ಕ್ಷೇತ್ರ ಮಹಾತ್ಮೆ’ ಪ್ರಸಂಗದ ಆಟ. ಆ ವರ್ಷವೇ ಹೊಸ ಪ್ರಸಂಗದ ಪ್ರಯೋಗ. ಹೆಗ್ಗಡೆಯವರು ಈ ಪ್ರಸಂಗಕ್ಕಾಗಿ ಬೆಳ್ಳಿಯ ಆಭರಣ ಕಿರೀಟಗಳನ್ನು ಮಾಡಿಸಿದ್ದರು.

ಮೇಳ ಹೊರಟ ಎರಡು ತಿಂಗಳಲ್ಲಿ ಎಲ್ಲಿ ಹೋದರೂ ಒಂದೇ ಪ್ರಸಂಗ. ವಿಠಲಶಾಸ್ತ್ರಿಗಳು ಮೊದಲು ಈಶ್ವರನಾಗಿ ನಟಿಸಿ ಅನಂತರ ಅಣ್ಣಪ್ಪ ದೈವವಾಗಿ ನಟಿಸುತ್ತಿದ್ದರು. ಶಾಸ್ತ್ರಿಗಳ ಶಿವತಾಂಡವ ನೃತ್ಯಕ್ಕಾಗಿ ಹೇಳಿ ಮಾಡಿಸಿದ ಪ್ರಸಂಗ.

ಅಂದು ನೃತ್ಯ ಮಾಡುತ್ತಿದ್ದಂತೇ ಚೆಂಡೆ ಬಾರಿಸು ತ್ತಿದ್ದವರು ಶಾಸ್ತ್ರಿಗಳು ಹೆಜ್ಜೆ ತಪ್ಪುತ್ತಿದ್ದುದನ್ನು, ತೂಕ ತಪ್ಪಿ ಕುಣಿಯುತ್ತಿದ್ದುದನ್ನು ಗಮನಿಸಿದರು. ಕುಣಿತಕ್ಕೆ ತಕ್ಕ ತಾಳ ಬಾರಿಸಿದರು. ನೃತ್ಯದ ಗತಿ ನಿಧಾನಕ್ಕೆ ಇಳಿಯಿತು. ಮುಕ್ತಾಯಕ್ಕೆ ಬರಬೇಕು – ಆಗಲೇ ಶಾಸ್ತ್ರಿಗಳು ‘ಆ ಅಮ್ಮಾ’ ಎಂದು ನರಳಿ ಎದೆ ಹಿಡಿದು ಕುಳಿತರು. ಹಾಗೇ ಉರುಳಿದರು.

ಯಕ್ಷಗಾನ ಲೋಕದ ಈಶ್ವರನ ತಾಂಡವ ನಿಂತಿತು. ಮೂರು ತಿಂಗಳು ಆಸ್ಪತ್ರೆಯ ಹಾಸಿಗೆಯಲ್ಲೇ ಮಲಗಿದ್ದ ಶಾಸ್ತ್ರಿಗಳು ಎದ್ದು ಕುಳಿತರು. ನಿಧಾನವಾಗಿ ನಡೆಯಲು ಸಮರ್ಥರಾದರು.

ಆದರೆ – ‘ಇನ್ನೆಂದೂ ಗೆಜ್ಜೆಕಟ್ಟಿ ಕುಣಿಯಬಾರದು. ಬಣ್ಣ ಬಳಿಯಬಾರದು. ಬದುಕುವ ಆಸೆಯಿದ್ದರೆ ವೇಷ ಮಾಡಬಾರದು’ – ಶತಪ್ರಯತ್ನದಿಂದ ಅವರನ್ನು ಬದುಕಿಸಿದ ವೈದ್ಯರ ತಂಡ ಕಟ್ಟಪ್ಪಣೆ ಮಾಡಿತು. ಶಾಸ್ತ್ರಿಗಳು ‘ಗೊಳೋ’ ಎಂದು ಅತ್ತರು.

ಶಾಸ್ತ್ರಿಗಳು ಮರಳಿ ರಂಗಕ್ಕೆ ಬರುವಂತಾಗಲಿ ಎಂದು ಬಂಧುಗಳು, ಮಿತ್ರರು, ಅಭಿಮಾನಿಗಳು, ಕಲಾಪ್ರೇಮಿಗಳು ಹಾರೈಸಿದರು. ಶಾಸ್ತ್ರಿಗಳು, ಕಲಾಪ್ರೇಮಿಗಳು ಹಾರೈಸಿದರು. ಶಾಸ್ತ್ರಿಗಳಿಗೂ ಅದೇ ಮನಸ್ಸು. ಆದರೆ ೪೦ ವರ್ಷಗಳ ಕಾಲ ವಿಶ್ರಾಂತಿ ಇಲ್ಲದೆ ಹಗಲೂ ರಾತ್ರಿ ದುಡಿದ ಶರೀರ ಒಪ್ಪಲಿಲ್ಲ.

ವಿಶ್ರಾಂತಿಯಲ್ಲೂ ತರಬೇತಿ

ಕಾಸರಗೋಡಿನ ಬಳಿಯ ಎಡನೀರು ಮಠದ ಸ್ವಾಮಿಗಳು ವಿಠಲಶಾಸ್ತ್ರಿಗಳ ಅಭಿಮಾನಿಗಳು. ವಿಶ್ರಾಂತಿ ಗೆಂದು ಅವರನ್ನು ತಮ್ಮಲ್ಲಿಗೆ ಕರೆಸಿಕೊಂಡು ಆರೈಕೆ ಮಾಡಿಸಿದರು. ಜೊತೆಗೆ ಕೆಲವು ತರುಣರನ್ನು ಕೂಡಿಸಿ ತರಬೇತಿಯನ್ನು ಪ್ರಾರಂಭಿಸುವಂತೆ ಮಾಡಿದರು.

ಶಾಸ್ತ್ರಿಗಳು ಕುಳಿತಲ್ಲೇ ನಿರ್ದೇಶನ ತರಬೇತಿ ನೀಡಿದರು. ನೃತ್ಯದ ತರಬೇತಿ ಕುಳಿತಲ್ಲಿ ಕೊಡುವುದು ಸಾಧ್ಯವೆ ? ತಪ್ಪಿದಲ್ಲಿ ತಾನು ಕುಣಿದು ತೋರಿಸಬೇಕು. ಸ್ವಲ್ಪ ಕುಣಿದರೂ ಸಾಕು ಎದೆನೋವು. ಮತ್ತೆ ಚಿಕಿತ್ಸೆ, ಮತ್ತೆ ಶಿಕ್ಷಣ, ನೋವು, ವಿಶ್ರಾಂತಿ. ಕೆಲವು ಕಾಲ ಮದರಾಸಿನಲ್ಲೂ ಒಂದು ತಂಡಕ್ಕೆ ಶಿಕ್ಷಣ ನೀಡಿದರು. ಹೀಗೆ ದಿನಗಳು ಸಾಗಿದವು.

ಸ್ವಲ್ಪ ಸ್ವಸ್ಥರಾದ ಶಾಸ್ತ್ರಿಗಳು ತನ್ನ ಶಿಷ್ಯವೃಂದಕ್ಕೆ ಸೂಕ್ತ ತರಬೇತಿ ನೀಡಿ ಕೂಟ ಕಟ್ಟಿದರು. ಶಾಸ್ತ್ರಿಗಳ ಶಿಷ್ಯರು ಬೆಂಗಳೂರು, ಮಂಗಳೂರು, ಮುಂಬಯಿಗಳಲ್ಲಿ ಪ್ರದರ್ಶನ ನೀಡಿದರು.

೧೯೬೮ ರಲ್ಲಿ ರಾಜ್ಯದ ಸಂಗೀತ ನಾಟಕ ಅಕಾಡೆಮಿ ಕುರಿಯ ವಿಠಲ ಶಾಸ್ತ್ರಿಗಳಿಗೆ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿತು. ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಯ ಹತ್ತು ಹಲವು ಸಂಘಸಂಸ್ಥೆಗಳು ಶಾಸ್ತ್ರಿಗಳ ಕಲಾ ಸೇವೆ ಯನ್ನು ಪ್ರಶಂಸಿಸಿ ಗೌರವಿಸಿದವು. ರಾಜ್ಯದ ಹಲವು ಕಡೆ ಇಂಥ ಗೌರವ ಸಮಾರಂಭಗಳು ಜರುಗಿದವು. ಮದರಾಸಿ ನಲ್ಲೂ ಗೌರವ ಸಂದಿತು.

ಹಿರಿಯರು ಮಾಡಿಟ್ಟ ಆಸ್ತಿ ಸಾಕಷ್ಟು ಇದ್ದುದರಿಂದ, ಮಿತ್ರವೃಂದ ಸದಾ ಸಿದ್ಧವಿರುತ್ತಿದ್ದುದರಿಂದ ವಿಠಲಶಾಸ್ತ್ರಿಗಳಿಗೆ ನಿವೃತ್ತ ಜೀವನದಲ್ಲಿ ಆರ್ಥಿಕ ತೊಂದರೆಗಳಿರಲಿಲ್ಲ. ಆದರೆ ಕಲಾರಂಗದಲ್ಲಿ ಸ್ವೇಚ್ಛೆಯಿಂದ ಹಾರಾಡುತ್ತಿದ್ದ ಹಕ್ಕಿಯ ರೆಕ್ಕೆ ಕತ್ತರಿಸಿದಂತಾಗಿ ಅವರು ಮರುಗುತ್ತಿದ್ದರು. ಅವರನ್ನು ಮನೆಯಲ್ಲಿ ತಡೆದಿಡುವುದೇ ಒಂದು ಮಹಾಸಾಹಸ.

ಧರ್ಮಸ್ಥಳದಲ್ಲಿ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರ ಸ್ಥಾಪಿತವಾಗಿ ವಿಠಲಶಾಸ್ತ್ರಿಗಳು ಅದರ ಆಚಾರ್ಯರಾದಾಗ ಅವರ ಮನಸ್ಸಿಗೆ ಹರ್ಷ. ಕೊನೆಯ ದಿನಗಳವರೆಗೂ ಅಲ್ಲಿ ನೃತ್ಯ ತರಬೇತಿ ನೀಡುತ್ತಿದ್ದರು.

ಯಕ್ಷಗಾನದಲ್ಲಿ ಚಿರಂಜೀವಿ

೧೯೭೨ ರ ನವೆಂಬರ್ ಹತ್ತೊಂಬತ್ತು. ಅಂದು ಕುರಿಯದಿಂದ ಧರ್ಮಸ್ಥಳಕ್ಕೆಂದು ಹೊರಟ ವಿಠಲಶಾಸ್ತ್ರಿಗಳು ಮನೆಯಿಂದ ಹೊರಟಾಗ ಆರೋಗ್ಯವಾಗಿದ್ದರು. ಕುರಿಯದಿಂದ ಲಾರಿಯಲ್ಲಿ ವಿಟ್ಲದವರೆಗೆ ಬಂದರು. ಅಷ್ಟರಲ್ಲಿ ಶರೀರದಲ್ಲಿ ಬಹಳ ನಿತ್ರಾಣ ಕಾಣಿಸಿತು. ವಿಟ್ಲದ ಬಳಿಯ ಮಿತ್ರರ ಮನೆಗೆ ಹೋದರು.

ಅಂಗಳದಿಂದ ಚಾವಡಿ ಹತ್ತಿದಾಗ ವಿಪರೀತ ಎದೆ ನೋವು. ತುಸು ವಿಶ್ರಾಂತಿ ಪಡೆದು ಮಿತ್ರರ ಸಲಹೆಯಂತೆ ಧರ್ಮಸ್ಥಳದ ಪ್ರಯಾಣ ನಿಲ್ಲಿಸಿ ಕಾರಿನಲ್ಲಿ ಮನೆಗೆ ಬಂದರು.

ಮನೆಗೆ ಬಂದ ಕೆಲವೇ ಗಂಟೆಗಳಲ್ಲಿ ವಿಠಲಶಾಸ್ತ್ರಿಗಳ ಹೃದಯಕ್ರಿಯೆ ನಿಂತಿತು. ಯಕ್ಷಗಾನ ಕ್ಷೇತ್ರದ ಈಶ್ವರ ಕೈಲಾಸ ಸೇರಿದ.

ಯಕ್ಷಗಾನ ಕಲೆಗೆ ಹೊಸ ತಿರುವು, ಹೊಸರೂಪ ನೀಡಿದ ಕುರಿಯ ವಿಠಲಶಾಸ್ತ್ರಿಗಳು ಈಗ ಇಲ್ಲ. ಆದರೆ ಅವರ ಶಿಷ್ಯ ಪರಂಪರೆ, ಆದರ್ಶಗಳು, ಹಾಕಿರುವ ಹೆದ್ದಾರಿ ಹಾಗೇ ಇದೆ. ಅದು ಯಕ್ಷಗಾನ ಕಲೆಯನ್ನು ಬೆಳಗುತ್ತದೆ. ಯಕ್ಷಗಾನ ಕಲೆ ಇರುವ ತನಕ ವಿಠಲಶಾಸ್ತ್ರಿಗಳು ಚಿರಂಜೀವಿ.