ಸಾವಿರಾರು ವರ್ಷಗಳ ಸುದೀರ್ಘ ಮತ್ತು ಉಜ್ವಲ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ಕರ್ನಾಟಕದ ಆಧುನಿಕ ಇತಿಹಾಸದಲ್ಲಿ ಕರ್ನಾಟಕದ ಏಕೀಕರಣ ಒಂದು ಐತಿಹಾಸಿಕವೂ ಮತ್ತು ಮಹತ್ವಪೂರ್ಣವೂ ಆದ ವಿಶಿಷ್ಟ ಘಟನೆ. ಹಾಗೆಯೇ ಕನ್ನಡ ವಿಶ್ವವಿದ್ಯಾಲಯದ ಸ್ಥಾಪನೆ ಮತ್ತೊಂದು ಮಹತ್ವದ ಐತಿಹಾಸಿಕ ಘಟನೆ. ಕರ್ನಾಟಕದ ಇತರೆ ವಿಶ್ವವಿದ್ಯಾಲಯಗಳು ಕೇವಲ ಕೆಲವು ಜಿಲ್ಲೆಗಳಿಗೆ ಮಾತ್ರ ಪರಿಮಿತಿಗೊಂಡಿದ್ದರೆ ಕನ್ನಡ ವಿಶ್ವವಿದ್ಯಾಲಯದ ವ್ಯಾಪ್ತಿ ಅಖಂಡ ಕರ್ನಾಟಕ ಮಾತ್ರವಲ್ಲದೆ ಕನ್ನಡಿಗ ಮತ್ತು ಕನ್ನಡ ಸಂಸ್ಕೃತಿ ನೆಲೆಸಿರುವ ಎಲ್ಲ ದೇಶ ಮತ್ತು ವಿದೇಶಗಳನ್ನೂ ಒಳಗೊಂಡಿದೆ. ಈ ಕಾರಣದಿಂದ ನಮ್ಮ ವಿಶ್ವವಿದ್ಯಾಲಯದ ದಾರಿ ಮತ್ತು ಗುರಿ ಎರಡೂ ವಿಭಿನ್ನವೂ ಮತ್ತು ವೈಶಿಷ್ಟ್ಯಪೂರ್ಣವೂ ಆಗಿವೆ.

ಕನ್ನಡ ವಿಶ್ವವಿದ್ಯಾಲಯ ಕನ್ನಡ ನಾಡು, ನುಡಿ, ಸಂಸ್ಕೃತಿ ಮತ್ತು ಜನಜೀವನದ ಸರ್ವಮುಖಗಳ ವಿಶಿಷ್ಟವಾದ ಅಂತರಂಗ ಮತ್ತು ಬಹಿರಂಗ ಸಂಪತ್ತನ್ನು ಕುರಿತು ಅಧ್ಯಯನ ಮಾಡುವ, ಸಂಶೋಧಿಸುವ ಮತ್ತು ಅದರ ಅಧ್ಯಯನದ ಫಲಿತಗಳನ್ನು ಜಗತ್ತಿನಾದ್ಯಂತ ಪ್ರಸಾರ ಮಾಡಿ ಕರ್ನಾಟಕದ ಬಗೆಗಿನ ಅರಿವನ್ನು ಜಮಸಮುದಾಯದಲ್ಲಿ ವಿಸ್ತರಿಸುವ ಹಾಗೂ ಅನಂತಮುಖಿಯಾದ ವಿಶ್ವಜ್ಞಾನವನ್ನು ಕನ್ನಡಜ್ಞಾನವನ್ನಾಗಿ ಪರಿವರ್ತಿಸಿ ಅದು ಕನ್ನಡಿಗರೆಲ್ಲರಿಗೆ ದಕ್ಕುವಂತೆ ಮಾಡುವ ಮೂಲಭೂತ ಆಶಯದ ಪ್ರತಿನಿಧಿಯಾಗಿ ಸ್ಥಾಪಿತಗೊಂಡಿದೆ. ಬೋಧನೆ ಗಿಂತ ಸಂಶೋಧನೆ, ಸೃಷ್ಟಿಗಿಂತ ವಿಶ್ವಂಭರ ದೃಷ್ಟಿ, ಶಿಥಿಲ ವಿವರಣೆಗಿಂತ ಅತುಳ ಸಾಧ್ಯತೆಗಳನ್ನೊಳಗೊಂಡ ಅನನ್ಯ ಅಭಿವ್ಯಕ್ತಿ, ನಾಡಿನ ಕೋಟಿ ಕೋಟಿ ಶ್ರೀಸಾಮಾನ್ಯರ ವಿವಿಧ ಪ್ರತಿಭಾಶಕ್ತಿ ಮತ್ತು ಸಾಮರ್ಥ್ಯಗಳ ಸದ್ಬಳಕೆಯ ಮೂಲಕ ಅವರ ಅಂತಃಪ್ರಜ್ಞೆಯನ್ನು ಎಚ್ಚರಿಸುವ, ವಿಕಸಿಸುವ ಶ್ರದ್ಧಾನ್ವಿತ ಕಾಯಕ ಇದರ ದಾರಿಯಾಗಿದೆ.

ಕನ್ನಡ ನಾಡನ್ನು ಕನ್ನಡ ವಿಶ್ವವಿದ್ಯಾಲಯದಲ್ಲಿ ನೋಡು, ಕನ್ನಡ ವಿಶ್ವವಿದ್ಯಾಲಯವನ್ನು ನೋಡಿದಲ್ಲದೆ ಕನ್ನಡ ನಾಡಿನ ಯಾತ್ರೆ ಸಂಪೂರ್ಣವಾಗದು, ಸಾರ್ಥಕವಾಗದು ಎಂಬಂತೆ ರೂಪುಗೊಳ್ಳುತ್ತಿರುವ ಮತ್ತು ರೂಪುಗೊಳ್ಳಬೇಕಾದ ಮಹಾ ಸಂಸ್ಥೆ ಇದು. ಕನ್ನಡಪ್ರಜ್ಞೆ ತನ್ನ ಸತ್ವ ಮತ್ತು ಸ್ವತ್ವದೊಡನೆ ವಿಶ್ವಪ್ರಜ್ಞೆಯಾಗಿ ಅರಳಿ ನಳನಳಿಸಬೇಕು; ವಿಶ್ವಪ್ರಜ್ಞೆ ಕನ್ನಡ ದೇಶೀ ಪ್ರಜ್ಞೆಯೊಳಗೆ ಪ್ರವೇಶಿಸಿ, ಪ್ರವಹಿಸಿ, ಸಮನ್ವಯಗೊಂಡು, ಸಂಲಗ್ನಗೊಂಡು, ಸಮರಸಗೊಂಡು ಸಾಕ್ಷಾತ್ಕಾರಗೊಳ್ಳಬೇಕುಎಂಬುದೇ ಇದರ ಗುರಿ. ಈ ಗುರಿಯ ಮೂಲಕ ಕನ್ನಡ ಕರ್ನಾಟಕತ್ವದ ಉಸಿರಾಗಿ, ವಿಶ್ವಪ್ರಜ್ಞೆಯ ಹಸಿರಾಗಿ, ಕನ್ನಡಮಾನವ ವಿಶ್ವ ಮಾನವನಾಗಿ ಬೆಳೆಯಲು ಸಾಧನವಾಗಬೇಕು. ಕನ್ನಡಗಿರೆಲ್ಲರ ಸಾಮೂಹಿಕ ಶ್ರಮ ಮತ್ತು ಪ್ರತಿಭೆಗಳ ಸಮಷ್ಟಿ ಪ್ರಕ್ರಿಯೆಯಿಂದ ಬೆಳಕಿನ ಈ ಮಹಾರಥವನ್ನು ಕ್ರಮಿಸುವುದು ನಮ್ಮ ವಿಶ್ವವಿದ್ಯಾಲಯದ ಮಹತ್ವದ ಆಶಯ.

ನಾಗಾಲೋಟದಿಂದ ಕ್ರಮಿಸುತ್ತಿರುವ ಜಗತ್ತಿನ ವ್ಯಾಪಕ ಜ್ಞಾನ, ತಂತ್ರಜ್ಞಾನ ಮತ್ತು ವಿಜ್ಞಾನಗಳ ಶೋಧನೆ ಮತ್ತು ಚಿಂತನೆಗಳನ್ನು ಕನ್ನಡದಲ್ಲಿ ಸತ್ವಪೂರ್ಣವಾಗಿ ದಾಖಲಿಸಿ ಕನ್ನಡ ಓದುಗರ ಜ್ಞಾನವನ್ನು ವಿಸ್ತರಿಸಿ ಅವರಲ್ಲಿ ಪುಸ್ತಕ ಸಂಸ್ಕೃತಿಯನ್ನು ಪ್ರಸರಿಸುವ ವಿಶೇಷ ಹೊಣೆಯನ್ನು ಹೊತ್ತು ನಮ್ಮ ವಿಶ್ವವಿದ್ಯಾಲಯದ ಪ್ರಸಾರಾಂಗ ಅಸ್ತಿತ್ವಕ್ಕೆ ಬಂದಿದೆ. ಶ್ರವ್ಯ, ದೃಶ್ಯ ಮತ್ತು ವಾಚನ ಸಾಮಗ್ರಿಗಳ ಸಮರ್ಪಕ ಉತ್ಪಾದನೆ ಮತ್ತು ವಿತರಣಾ ಪ್ರಕ್ರಿಯೆಗಳ ಮೂಲಕ ಇದು ಈ ಗುರಿಯನ್ನು ತಲುಪಲು ಶಕ್ತಿಮೀರಿ ಪ್ರಯತ್ನಿಸುತ್ತಿದೆ. ಈಗಾಗಲೇ ೬೦೦ಕ್ಕೂ ಹೆಚ್ಚು ವೈವಿಧ್ಯಮಯ ಮತ್ತು ವೈಶಿಷ್ಟ್ಯಮಯ ಕೃತಿಗಳ ಮೂಲಕ ಕನ್ನಡ ಗ್ರಂಥಲೋಕದ ಅಂತರಂಗ ಮತ್ತು ಬಹಿರಂಗ ಸೌಂದರ್ಯಗಳನ್ನು ಉಜ್ವಲಿಸಿರುವ ಇದು ತನ್ನ ಮುಂದಿನ ಗುರಿಯ ಕಡೆಗೆ ಆಶಾದಾಯಕವಾಗಿ ಚಲಿಸುತ್ತಿದೆ.

ಯಾವುದೇ ಜ್ಞಾನಶಿಸ್ತಿನಲ್ಲಿ ವ್ಯಾಪಕವೂ ಮತ್ತು ಸೂಕ್ಷ್ಮವೂ ಆದ ಸಂಶೋಧನೆಗಳು, ಅಧ್ಯಯನಗಳು ಬೆಳೆದಂತೆಲ್ಲ ಆ ನಿಟ್ಟಿನಲ್ಲಿ ಇರಿಸಿಕೊಂಡ ಪೂರ್ವ ನಿರ್ಧರಿತ ಉದ್ದೇಶಗಳು ಮತ್ತು ಕ್ಷೇತ್ರಗಳ ಚೌಕಟ್ಟು ಹಾಗೂ ಗಮಿಸುವ ಹಾದಿ ಪರಿಮಿತಗೊಂಡಿರುವ ಅನುಭವ ನೈಜ ಸಂಶೋಧಕರನ್ನು ಪದೇ ಪದೇ ಕಾಡುತ್ತದೆ, ಕೆಣಕುತ್ತದೆ; ಉದ್ದೇಶಿತ ಮತ್ತು ವಿಷಯದ ಬೇರು ತಾಳು ನಾಡಿಗಳು ಈ ಸೀಮಿತ ಕಣ್ಣುಪಟ್ಟಿಯ ವಸಯದಲ್ಲಿ ಮಾತ್ರವಲ್ಲದೆ ಅದರಿಂದಾಚೆಗೂ ಗೋಚರಾಗೋಚರವಾಗಿ ಹಬ್ಬಿಕೊಂಡಿರುವ, ಅವುಗಳ ಬೆನ್ನಹತ್ತಿ ಹುಡುಕದಿದ್ದರೆ ಪರ್ಯಾಲೋಚಿಸದಿದ್ದರೆ ಮೂಲ ಸಮಸ್ಯೆಗಳ ಬಗೆಗಿನ ಅರಿವು ಮುಕ್ಕಾಗುವ, ಆ ಕಾರಣದಿಂದಾಗಿ ತಪ್ಪು ನಿರ್ಣಯಗಳ ನಿಲ್ದಾಣದಲ್ಲಿ ಸಂಶೋಧಕ ನಿಂತುಬಿಡುವ ಅಪಾಯಗಳು ಸಂಭವಿಸುತ್ತವೆ. ಸಂಶೋಧಕನ ಅನ್ಯಜ್ಞಾನ ಶಿಸ್ತುಗಳ ಅರಿವು, ಪ್ರಸ್ತುತ ವಿಷಯಕ್ಕೆ ಸಂಬಂಧಿಸಿ ಆ ಅರಿವನ್ನು ಅನ್ವಯಿಸುವ ವಿವೇಚನಾ ಕೌಶಲ, ತಾನು ಕಂಡ ಮೊಲಕೆ ಮೂರು ಕೊಂಬು ಎನ್ನುವ ಅಹಂ ಪ್ರತಿಷ್ಠೆಗೆ ಬದಲಾಗಿ ಸತತ ಪರಿಶ್ರಮ ಮತ್ತು ಸತ್ಯನಿಷ್ಠೆಯಿಂದ ತಾನು ತಲುಪಿದ ನಿರ್ಣಯಗಳನ್ನು ಸಮಾನ ಮನಸ್ಕರೊಡನೆ ಸಮಾಲೋಚಿಸುವ ಸಂವಾದಿಸುವ ಮೂಲಕ ಪರಿಷ್ಕರಿಸಿ ನಿಷ್ಕ್ರಷ್ಟಗೊಳಿಸಿಕೊಳ್ಳುವ ಪ್ರಾಂಜಲ ಸಂಶೋಧನಾ ಬರಹಗಳಿಗೆ ಅಧಿಕೃತ ವ್ಯಾಪ್ತಿ ಮತ್ತು ಮೌಲಿಕತೆ ಪ್ರಾಪ್ತವಾಗುತ್ತದೆ; ಆಗ ಅದು ಸತ್ಯದರ್ಶನ ನಿಷ್ಠ ಜನಾಂಗದ ಕಣ್ಣು ತೆರೆಸಲು ಸಾಧ್ಯವಾಗುತ್ತದೆ.

ಮೇಲಿನ ಹಿನ್ನೆಲೆಯಲ್ಲಿ, ಮೌಲಿಕ ಸಂಶೋಧನೆಗಾಗಿಯೇ ಮೈವೆತ್ತಿರುವ ಕನ್ನಡ ವಿಶ್ವವಿದ್ಯಾಲಯದ ಪುರಾತತ್ವ ಮತ್ತು ಪ್ರಾಚೀನ ಇತಿಹಾಸ ವಿಭಾಗ ಪುರಾತತ್ವದೊಂದಿಗೆ ಪ್ರಾಚೀನ ಇತಿಹಾಸವನ್ನು ತನ್ನ ಕಕ್ಷ್ಯೆಗೆ ತೆಗೆದುಕೊಂಡು, ತನ್ನ ಸಂಶೋಧನೆಗಳಿಗೆ ಅರ್ಥಪೂರ್ಣ ವ್ಯಾಪ್ತಿಯನ್ನು ಮತ್ತು ಹೆಚ್ಚಿನ ಗಟ್ಟಿತನ ಹಾಗೂ ಗಾಂಭೀರ್ಯಗಳನ್ನು ಮೇಳವಿಸಿಕೊಂಡಿದೆ.

ಪ್ರಾಚೀನ ಕರ್ನಾಟಕದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಮೌಲ್ಯಗಳು ಅಚ್ಚರಿಗೊಳಿಸುವಷ್ಟು ಅಗಾಧ ಪ್ರಮಾಣದಲ್ಲಿದ್ದು ಅವಿನ್ನೂ ಸಂಪೂರ್ಣವಾಗಿ ಅನಾವರಣಗೊಂಡಿಲ್ಲ. ಆಗಿರುವ ಎಷ್ಟೋ ಅಧ್ಯಯನಗಳು ಏಕಮುಖತೆಯಿಂದ ಪೂರ್ವಗ್ರಹಗಳಿಂದ ಪಾರ್ಶ್ವವಾಯುಗ್ರಸ್ತವಾಗಿದೆ. ಈ ಕೊರತೆಯನ್ನು ದೃಷ್ಟಿಯಲ್ಲಿರಿಸಿಕೊಂಡು, ಅದನ್ನು ದಾಟುವ ಪೂರ್ಣತೆಯ ಕಡೆಗೆ ಚಲಿಸುವ ಪ್ರಾಮಾಣಿಕ ಉದ್ದೇಶವನ್ನು ಇರಿಸಿಕೊಂಡು ಈ ವಿಭಾಗ ಬಳ್ಳಾರಿ ಜಿಲ್ಲೆಯ ಪ್ರಸಿದ್ಧ ಪುರಾತತ್ವ ಕ್ಷೇತ್ರಗಳಲ್ಲಿ ಒಂದಾದ ಕುರುಗೋಡನ್ನು ಕುರಿತು ಬಹುದೃಷ್ಟಿಕೋನಗಳಲ್ಲಿ ನಡೆಸಿದ ಚಿಂತನ ಮಂಥನದ ಫಲಶ್ರುತಿ ಈ ಕೃತಿ. ಕುರುಗೋಡಿನ ಪ್ರಾಕೃತಿಕ ಪರಿಸರ, ಪ್ರಾಗಿತಿಹಾಸ, ಚಿತ್ರಕಲೆ, ಚರಿತ್ರೆ, ವಾಸ್ತು ಮತ್ತು ಮೂರ್ತಿಶಿಲ್ಪ, ಶಾಸನಗಳು, ರಕ್ಷಣಾವಾಸ್ತು, ಮೌಖಿಕ ಆಕರಗಳು, ನಂಬಿಕೆ ಮತ್ತು ಆಚರಣೆಗಳು ಇಲ್ಲಿ ಸೋಪಜ್ಞಶೀಲ ವಿಶ್ಲೇಷಣೆಗೆ ಒಳಗಾಗಿವೆ. ಎಂಟು ಜನ ವಿದ್ವಾಂಸರು ಸೂಕ್ಷ್ಮವಾದ ಕ್ಷೇತ್ರಕಾರ್ಯ ಹಾಗೂ ಉಪಲಬ್ಧ ಸಾಮಗ್ರಿಗಳ ಗಂಭೀರ ಅಧ್ಯಯನಗಳಿಂದ ಈ ಪ್ರಬಂಧಗಳನ್ನು ರೂಪಿಸಿದ್ದಾರೆ. ಆ ಸ್ಥಳಕ್ಕೆ ಸಂಬಂಧಿಸಿದ ಹಲವು ಹೊಸ ವಿಷಯಗಳು ಇಲ್ಲಿ ಮೊದಲ ಬಾರಿಗೆ ಚರ್ಚೆ, ಚಿಂತನೆಗಳ ಮೂಲಕ ಹೊರಹೊಮ್ಮಿವೆ; ಮುಂದೆ ವಿಭಾಗ ಕೈಗೊಳ್ಳಬಹುದಾದ ವಿಶಿಷ್ಟ ಯೋಜನೆಗಳ ಬಗ್ಗೆ ಬೌದ್ಧಿಕ ಮತ್ತು ಸಾಂಸ್ಕೃತಿಕ ಕುತೂಹಲ ಆಸಕ್ತಿಗಳನ್ನು ಮೂಡಿಸುವಲ್ಲಿ ಸಫಲವಾಗಿದೆ ಎಂಬುದು ಸಂತೋಷದ ಸಂಗತಿ. ಇಂಥ ಹೊಸ ಹುಡುಕಾಟದ ನೆಲೆಗಳನ್ನು ಶೋಧಿಸುತ್ತಿರುವ ಪುರಾತತ್ವ ಮತ್ತು ಪ್ರಾಚೀನ ಇತಿಹಾಸ ವಿಭಾಗಕ್ಕೆ, ಮುಖ್ಯಸ್ಥರಾದ ಡಾ.ಸಿ.ಮಹದೇವವರಿಗೆ, ತಜ್ಞ ಸಂಪಾದಕರಾದ ಶ್ರೀ ಬಾಲಸುಬ್ರಹ್ಮಣ್ಯ ಅವರಿಗೆ, ಈ ಸಂಕಿರಣದಲ್ಲಿ ಪಾಲ್ಗೊಂಡು ಉತ್ತಮ ಪ್ರಬಂಧಗಳನ್ನು ಸಾದರಪಡಿಸಿದ ವಿದ್ವಾಂಸರಿಗೆ ಹಾರ್ದಿಕ ಅಭಿನಂದನೆಗಳು.

ಡಾ. ಎಚ್.ಜೆ. ಲಕ್ಕಪ್ಪಗೌಡ
ಕುಲಪತಿಯವರು