ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗವು ೨೦೦೩ನೆಯ ವರ್ಷದಿಂದ ಸ್ಥಳೀಯ ಚರಿತ್ರೆ ಮತ್ತು ಪುರಾತತ್ವ ಮಾಲೆ ಎಂಬ ನಿರಂತರ ಯೋಜನೆಯನ್ನು ಆರಂಭಿಸಿದೆ. ಈ ಯೋಜನೆ ಅಡಿಯಲ್ಲಿ ಪ್ರತಿ ಆರು ತಿಂಗಳಿಗೊಮ್ಮೆ ಸಾಂಸ್ಕೃತಿಕವಾಗಿ ಮಹತ್ವ ಪಡೆದ ಸ್ಥಳವೊಂದನ್ನು ಆಯ್ಕೆಮಾಡಿಕೊಂಡು ಚರಿತ್ರೆ ಮತ್ತು ಪುರಾತತ್ವದ ನೆಲೆಯಲ್ಲಿ ಅದರ ಬಹುಮುಖ ಅಧ್ಯಯನವನ್ನು ಮಾಡಲಾಗುವುದು. ಜೊತೆಗೆ ಸಂಬಂಧ ಪಟ್ಟ ಕ್ಷೇತ್ರದ ಸೂಕ್ಷ್ಮ ಅಧ್ಯಯನವೂ ಆಗಿದೆ. ಹೀಗೆ ಹೊಸದಾಗಿ ಕ್ಷೇತ್ರಕಾರ್ಯಮಾಡಿ ಸಿದ್ಧಗೊಂಡ ಈ ಸಂಶೋಧನ ಲೇಖನಗಳನ್ನು ವಿಶ್ವವಿದ್ಯಾಲಯವು ಪ್ರಕಟಿಸುವುದು. ಪ್ರಕಟಣೆಗೆ ಮುನ್ನ, ಆ ಸ್ಥಳದಲ್ಲಿ ವಿಚಾರ ಸಂಕಿರಣವನ್ನು ನಡೆಸಿ, ಆ ಮೂಲಕ ಅಲ್ಲಿನ ಜನರಿಗೆ ಚರಿತ್ರೆ ಮತ್ತಿತರ ಸಂಗತಿಗಳನ್ನು ತಿಳಿಸುವ ಪ್ರಯತ್ನ ಮಾಡಲಾಗುತ್ತದೆ. ಅಲ್ಲಿ ನಡೆದ ಚರ್ಚಿತ ವಿಷಯಗಳನ್ನು ಅಳವಡಿಸಿಕೊಂಡು ಅಂತಿಮವಾಗಿ ಪುಸ್ತಕವನ್ನು ಪ್ರಕಟಿಸುವುದು ಈ ಯೋಜನೆಯ ಮುಖ್ಯ ಆಶಯ.

ಪ್ರಸ್ತುತ ಯೋಜನೆಯಿಂದಾಗಿ ನಿರ್ಲಕ್ಷಕ್ಕೊಳಪಟ್ಟ ಸಾಂಸ್ಕೃತಿಕ ಸ್ಥಳಗಳು ಅಧ್ಯಯನಕ್ಕೊಳಪಟ್ಟಿವೆ. ಈ ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ಮಾನ್ಯ ಕುಲಪತಿಗಳಾದ ಡಾ. ಎಚ್.ಜೆ. ಲಕ್ಕಪ್ಪಗೌಡ ಅವರು, ಮಾನ್ಯ ಕುಲಸಚಿವರಾದ ಡಾ. ಕೆ.ವಿ. ನಾರಾಯಣ ಅವರು, ಹಾಗೂ ಮಾನ್ಯ ಅಧ್ಯಯನಾಂಗದ ನಿರ್ದೇಶಕರಾದ ಡಾ. ಕರೀಗೌಡ ಬೀಚನಹಳ್ಳಿ ಅವರು ವಿಶೇಷವಾದ ಆಸಕ್ತಿಯನ್ನು ತೋರಿಸಿದ್ದಾರೆ. ಈ ಯೋಜನೆಯ ಮೊದಲ ಪ್ರಯತ್ನವಾಗಿ ಬಳ್ಳಾರಿ ಜಿಲ್ಲೆ ಕುರುಗೋಡು ಪಟ್ಟಣವನ್ನು ಆಯ್ಕೆ ಮಾಡಿಕೊಳ್ಳಲಾಯಿತು. ಅದರ ಫಲವೇ ಪ್ರಸ್ತುತ ಕೃತಿ.

ಪ್ರಾಚೀನ ಕಾಲದಿಂದಲೂ ರಾಜಕೀಯವಾಗಿ ಹಾಗೂ ಸಾಂಸ್ಕೃತಿಕವಾಗಿ ತನ್ನ ಹಿರಿಮೆಯನ್ನು ಪ್ರಕಟಿಸುತ್ತ ಬಂದಿರುವ ಕುರುಗೋಡು ಇಂತಹ ಅಧ್ಯಯನಕ್ಕೆ ಒಳಗಾದುದು ನಿಜಕ್ಕೂ ಸಾರ್ಥಕ ಕೆಲಸ. ಪ್ರಸ್ತುತ ಕೃತಿಯನ್ನು ಸಂಪಾದಿಸುವ ಮೂಲಕ ಪ್ರೊ.ಬಾಲಸುಬ್ರಮಣ್ಯ ಅವರು ವಿಭಾಗದ ಹಿರಿಮೆಯನ್ನು ಹೆಚ್ಚಿಸಿದ್ದಾರೆ. ಅವರ ಶ್ರಮವನ್ನು ಪ್ರೀತಿಯಿಂದ ನೆನೆಯುತ್ತೇನೆ. ಪ್ರಸ್ತುತ ಕೃತಿ ಕರ್ನಾಟಕದ ಪ್ರಾಚೀನ ಚರಿತ್ರೆ ಮತ್ತು ಪುರಾತತ್ವ ಅಧ್ಯಯನ ಕ್ಷೇತ್ರಕ್ಕೆ ಮಹತ್ವದ ಸೇರ್ಪಡೆ ಎಂದು ಹೇಳಲು ಹರ್ಷಿಸುತ್ತೇನೆ. ಕೃತಿಯ ಪ್ರಕಟಣೆಗೆ ಕಾರಣಕರ್ತರಾದ ವಿದ್ವಾಂಸರನ್ನು ಹಾಗೂ ಪ್ರಸಾರಾಂಗದ ನಿರ್ದೇಶಕರಾದ ಡಾ. ಹಿ.ಚಿ.ಬೋರಲಿಂಗಯ್ಯ ಅವರನ್ನು ವಿಭಾಗದ ವತಿಯಿಂದ ಸ್ಮರಿಸುತ್ತೇನೆ.

ಡಾ. ಸಿ. ಮಹದೇವ