ಪುರಾತತ್ವ ಮತ್ತು ಇತಿಹಾಸಗಳಂಥ ವಿಷಯಗಳ ಅಧ್ಯಯನ ಕ್ರಮಗಳು ಕಾಲಕಾಲಕ್ಕೆ ಬದಲಾಗುತ್ತಾ ಬಂದಿವೆ. ಗತಕಾಲದ ರಾಜಕೀಯ ವಿದ್ಯಮಾನಗಳು ಮಾತ್ರ ಇತಿಹಾಸವನ್ನು ಕಟ್ಟಿಕೊಡುವ ಪ್ರಮುಖ ಆಕರಗಳಲ್ಲ. ಸುತ್ತಲಿನ ಪರಿಸರದಲ್ಲಿ ಅಗಣಿತವಾಗಿ ಹಾಗೂ ವಿಸ್ತಾರವಾಗಿ ಹರಡಿಕೊಂಡಿರುವ ಎಲ್ಲ ತರದ ಅವಶೇಷಗಳು ತುಂಬಾ ಮಹತ್ವವಾದುವುಗಳು. ಅಲ್ಲಿರುವ ಬೆಟ್ಟಗುಡ್ಡಗಳು, ಗವಿಗಳು, ಅಲ್ಲಿರುವ ಚಿತ್ರ ಅಲಂಕರಣೆಗಳು, ಪ್ರಾಚೀನ ಕಾಲದ ಆಯುಧ ಸಲಕರಣೆಗಳು, ಮಡಿಕೆ-ಕುಡಿಕೆ, ಕೋಟೆ ಕೊತ್ತಲಗಳು ಹಾಗೂ ಇತರೆ ಅವಶೇಷಗಳು ವಸ್ತುನಿಷ್ಠ ಸಾಧ್ಯವಾದ ಪ್ರಾಚೀನ ಇತಿಹಾಸ ಪರಂಪರೆಯನ್ನು ನಿರ್ಮಿಸಿ, ನಿರ್ಣಯಿಸುವ ಜೀವಂತ ಸೆಲೆಯಾಗಿವೆ. ಇಂಥ ಪ್ರಮಾಣಬದ್ಧ ಆಕರ ಸಾಮಗ್ರಿಗಳನ್ನು ಮೇಳೈಸಿಕೊಂಡು ಪ್ರತಿ ಗ್ರಾಮದ ಸಮಗ್ರ ಪುರಾತತ್ವ ಇತಿಹಾಸವನ್ನು ಕಟ್ಟಬೇಕಾಗಿದೆ.

ಹೆಚ್ಚಿನ ಸಂಖ್ಯೆಯಲ್ಲಿ ಐತಿಹಾಸಿಕ ಹಳ್ಳಿಗಳನ್ನೇ ಹೊಂದಿರುವ ಕರ್ನಾಟಕದ ಪ್ರದೇಶವನ್ನು ಇತಿಹಾಸ ಮತ್ತು ಪುರಾತತ್ವದಂಥ ಮಾನವಿಕ ಅಧ್ಯಯನಗಳ ಹಿನ್ನೆಲೆಯಲ್ಲಿ ಸೂಕ್ಷ್ಮ ಅಧ್ಯಯನಾತ್ಮಕ ದೃಷ್ಟಿಕೋನದಿಂದ ನೋಡುವ ಅಗತ್ಯವಿದೆ. ಅಲ್ಲದೇ ನಿತ್ಯವು ದೊರಕುವ ಆಕರ ಮಾಹಿತಿಗಳ ಎಲ್ಲ ಮಗ್ಗಲುಗಳನ್ನು ಬಳಸಿಕೊಂಡು ಸಮಕಾಲೀನಗೊಳಿಸುವ ಕಾರ್ಯವನ್ನು ಪುರಾತತ್ವ ಇತಿಹಾಸಕ್ತ ಅಧ್ಯಯನಕಾರರು ಮಾಡಬೇಕಾಗಿದೆ. ಸಿಕ್ಕುವ ಅವಶೇಷಗಳನ್ನು ಸೂಕ್ಷ್ಮ ಅಧ್ಯಯನಗಳ ಚೌಕಟ್ಟಿನಲ್ಲಿಟ್ಟು ನೋಡುವ ಹಾಗೂ ಅವುಗಳಿಂದ ವಿಶ್ಲೇಷಣಾತ್ಮಕ ಫಲಿತಗಳನ್ನು ಕಂಡುಕೊಳ್ಳುವ ದಿಸೆಯತ್ತ ಕ್ರಮವಹಿಸಬೇಕಾಗಿದೆ. ಆದ್ದರಿಂದಲೇ ಈ ಹೊತ್ತಿನ ಸಂದರ್ಭಗಳಲ್ಲಿ ಪ್ರಾದೇಶಿಕ ಹಾಗೂ ಸ್ಥಳೀಯ ಅಧ್ಯಯನಗಳು ಹೆಚ್ಚಿನ ಮಹತ್ವ ಪಡೆಯುತ್ತವೆ. ಇಂಥ ಅಧ್ಯಯನಗಳು ಮೌಲ್ಯಯುತಗೊಳ್ಳಬೇಕಾದರೆ ಮೊದಲು ಆಕರಸಾಮಗ್ರಿಗಳನ್ನು ಕ್ರೂಢೀಕರಿಸುವುದು ಅವಶ್ಯಕ.

ನೆಲದಡಿಯಲ್ಲಿ ಮರೆಯಾಗಿರುವ ಆಕರಸಾಮಗ್ರಿಗಳನ್ನು ಅಚ್ಚುಕಟ್ಟಾದ ಕ್ಷೇತ್ರ ಕಾರ್ಯದ ಮೂಲಕ ಅನಾವರಣಗೊಳಿಸುವುದು ಹಾಗೂ ಸಿಗುವ ಮಾಹಿತಿಗಳನ್ನು ಪ್ರಸ್ತುತಗೊಳಿಸುವುದು ಪುರಾತತ್ವ ಇತಿಹಾಸ ಅಧ್ಯಯನಕಾರರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಪ್ರತಿ ಗ್ರಾಮದ ಪುರಾತತ್ವ ಹಾಗೂ ಚರಿತ್ರೆಯನ್ನು ಏಕವ್ಯಕ್ತಿ ಸಾಹಸಿಗರಾಗಿ ಮಂಥನ ಮಾಡಿ ಕಟ್ಟಿಕೊಡುವುದಕ್ಕಿಂತ ಬಹುಜನರು ಭಿನ್ನ ನೆಲೆಗಳಿಂದ ಹಾಗೂ ಹೊಸ ಆಯಾಮಗಳಿಂದ ವಿಶ್ಲೇಷಿಸಿ ಬರೆಯುವುದು ತುಂಬಾ ಅವಶ್ಯಕವಾಗಿದೆ. ಹೀಗಾಗಿ ಮೌಖಿಕ ಚರಿತ್ರೆ, ಸಾಹಿತ್ಯ ಆ ಪ್ರದೇಶದ ಜನರ ನಂಬಿಕೆ ಆಚರಣೆಗಳ ಚಿದಂಬರ ರಹಸ್ಯಗಳನ್ನು ಬಿಡಿಸಿ ನೋಡುವುದು ಸಹ ಪ್ರಾಮುಖ್ಯವಾದುದು.

ಈ ನಿಟ್ಟಿನಲ್ಲಿ ನಮ್ಮ ವಿಭಾಗವು ಕರ್ನಾಟಕದ ಐತಿಹಾಸಿಕ ಗ್ರಾಮಗಳನ್ನು ಬಿಡಿ ಬಿಡಿಯಾಗಿ ಅವಲೋಕಿಸುತ್ತಾ ಇಡೀಯಾದ ಫಲಿತಾಂಶಗಳನ್ನು ಕಂಡುಕೊಳ್ಳುವ ಯೋಜನೆಯನ್ನು ಪ್ರಾರಂಭಿಸಿದೆ. ಸ್ಥಳೀಯ ಚರಿತ್ರೆ ಮತ್ತು ಪುರಾತತ್ವ ಮಾಲೆ ಎಂಬ ಮಹತ್ ಯೋಜನೆಯ ಅತೀ ಪ್ರಮುಖ ಉದ್ದೇಶವೆಂದರೆ ಆಯಾ ‌ಗ್ರಾಮದ ಸಮಗ್ರ ಇತಿಹಾಸವನ್ನು ಅಲ್ಲಿಯ ಜನರಿಗೆ ತಿಳಿಸುವುದಾಗಿದೆ. ಜೊತೆಗೆ ಕರ್ನಾಟಕದ ಪ್ರಾಚೀನ ಇತಿಹಾಸದಲ್ಲಿ ಅಲ್ಲಲ್ಲಿ ಕಳಚಿಹೋಗಿರುವ ಪುರಾತತ್ವ ಹಾಗೂ ಇತಿಹಾಸದ ಕೊಂಡಿಗಳನ್ನು ಮರುಜೋಡಿಸುವ ಅಥವಾ ಮರುನಿರ್ಮಿಸುವ ತುಡಿತವಿದೆ. ಇಂಥ ಮಹತ್ತರ ಯೋಜನೆ ಮತ್ತು ಯೋಚನೆ ಹೊಂದಿರುವ ನಮ್ಮ ವಿಭಾಗವು ಚೊಚ್ಚಲ ಪ್ರಯತ್ನವಾಗಿ ಅಧ್ಯಯನಕ್ಕೆ ಕುರುಗೋಡು ಪಟ್ಟಣವನ್ನು ಆಯ್ದುಕೊಂಡಿದೆ. ಬಳ್ಳಾರಿ ಜಿಲ್ಲೆಯಲ್ಲಿರುವ ಈ ಐತಿಹಾಸಿಕ ಪಟ್ಟಣದ ಅಧ್ಯಯನವನ್ನು ಇದೇ ಜಿಲ್ಲೆಯಲ್ಲಿರುವ ನಮ್ಮ ವಿಶ್ವವಿದ್ಯಾಲಯವು ಅಧ್ಯಯನಕ್ಕೆ ಆಯ್ದುಕೊಂಡಿರುವುದು ಸಮಂಜಸವಾಗಿದೆಯೆಂದು ಭಾವಿಸಿದ್ದೇನೆ.

ಕುರುಗೋಡು ಪಟ್ಟಣದ ಪುರಾತತ್ವ ಹಾಗೂ ಇತಿಹಾಸ ಅಧ್ಯಯನಗಳ ಹೊರತಾಗಿ ಅಲ್ಲಿರುವ ಐತಿಹ್ಯ, ಪುರಾಣ ಹಾಗೂ ಜನಪದಗಳಂಥ ವಿಷಯಗಳನ್ನು ಒಳಗು ಮಾಡಿಕೊಂಡು ಅಧ್ಯಯನದ ಮಹತ್ವ ಹಾಗೂ ವಿಸ್ತಾರವನ್ನು ಹೆಚ್ಚಿಸಿಕೊಳ್ಳಲಾಗಿದೆ. ಕುರುಗೋಡು ಪಟ್ಟಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಅನೇಕ ಮಹತ್ ಕಾರ್ಯಗಳು ಆಗಿವೆ. ಅಲ್ಲಲ್ಲಿ ಬಿಡಿ ಲೇಖನಗಳು ಪ್ರಕಟವಾಗಿದೆ. ಅಚ್ಚಾದ ಮಾಹಿತಿಗಳನ್ನು ಸೇರಿಸಿಕೊಂಡು ಹೆಚ್ಚಿನ ಸಮಗ್ರತೆಯನ್ನು ತಂದುಕೊಡುವಲ್ಲಿ ಎಲ್ಲ ಅಧ್ಯಯನಕಾರರು ಪ್ರಯತ್ನಿಸಿದ್ದಾರೆ. ಹಾಳಾಗಿರುವ ಹಳೆಯ ಕುರುಗೋಡು ಪಟ್ಟಣದಲ್ಲಿ ಅನೇಕ ಮಾಹಿತಿಗಳು ನೆಲದಲ್ಲಿಯೇ ಹುದುಗಿಕೊಂಡಿರುವುದರಿಂದ ಇಂಥ ಮಾಹಿತಿಗಳ ಅಲಭ್ಯತೆಯಿಂದ ಪೂರ್ಣ ಮಾಹಿತಿಗಳನ್ನು ದೊರಕಿಸಿಕೊಡುವಲ್ಲಿ ಕೆಲವು ಕೊರತೆಗಳನ್ನು ಅಧ್ಯಯನಕಾರರು ಅನುಭವಿಸಿದ್ದಾರೆ.

ವಿಶಾದದಿಂದ ಹೇಳುವ ಇನ್ನೊಂದು ಸಂಗತಿಯೆಂದರೆ, ನಾವು ವಿಚಾರ ಸಂಕಿರಣ ಹಮ್ಮಿಕೊಂಡು ಅಲ್ಲಿ ಚರ್ಚಿತ ವಿಷಯಗಳನ್ನು ಪ್ರಕಟಗೊಳಿಸುವುದರ ಒಳಗಾಗಿಯೇ ಕುರುಗೋಡು ಬೆಟ್ಟಗಳಲ್ಲಿರುವ ಅನೇಕ ಗುಹಾಚಿತ್ರಗಳು ಗಣಿಗಾರಿಕೆಯಂಥ ಕೆಲಸಗಳಿಂದ ನಾಶವಾಗಿವೆ. ಹಾಗೂ ಪಟ್ಟಣದಲ್ಲಿ ಅಲ್ಲಲ್ಲಿ ಬಿದ್ದುಹೋಗಿರುವ ಪ್ರಾಚೀನ ಮಹತ್ವದ ಸ್ಮಾರಕಗಳು ತುಂಬಾ ಅವಜ್ಞೆಗೆ ಒಳಗಾಗಿವೆ. ಇಂಥ ಪ್ರಮಾದಗಳನ್ನು ಎಲ್ಲರೂ ಗಂಭೀರವಾಗಿ ಪರಿಗಣಿಸುವುದು ಸೂಕ್ತ ಎಂಬುದು ನನ್ನ ಕಳಕಳಿ.

ನಮ್ಮ ಮಹತ್ ಯೋಜನೆಗೆ ಸ್ಫೂರ್ತಿಸೆಲೆಯಾಗಿ ನಿಂತವರು ಮಾನ್ಯ ಕುಲಪತಿಗಳಾದ ಪ್ರೊ. ಎಚ್‌.ಜೆ. ಲಕ್ಕಪ್ಪಗೌಡ ಅವರು. ಅವರಿಗೆ ನಮ್ಮ ವಿಭಾಗವು ಋಣಿಯಾಗಿದೆ. ಸೂಕ್ತ ಸಲಹೆ ಸೂಚನೆಗಳಿತ್ತು ಪ್ರೋತ್ಸಾಹಿಸಿದವರು ನಮ್ಮ ಕುಲಸಚಿವರಾದ ಪ್ರೊ. ಕೆ.ವಿ.ನಾರಾಯಣ ಅವರು ಅವರಿಗೂ ನಾವು ಆಭಾರಿಯಾಗಿದ್ದೇವೆ. ಸಹಕಾರ ನೀಡಿದ ಅಧ್ಯಯನಾಂಗ ನಿರ್ದೇಶಕ ಪ್ರೊ.ಕರೀಗೌಡ ಬೀಚನಹಳ್ಳಿ ಹಾಗೂ ಪ್ರಸಾರಾಂಗದ ನಿರ್ದೇಶಕರಾದ ಪ್ರೊ. ಹಿ.ಚಿ.ಬೋರಲಿಂಗಯ್ಯ ಅವರಿಗೂ ನಮ್ಮ ಕೃತಜ್ಞತೆಗಳು ಸಲ್ಲುತ್ತವೆ. ಸ್ಥಳೀಯ ಚರಿತ್ರೆ ಮತ್ತು ಪುರಾತತ್ವ ಮಾಲೆ ೧ರ ಕುರುಗೋಡು ವಿಚಾರ ಸಂಕೀರ್ಣವನ್ನು ಉದ್ಘಾಟಿಸಿ ಮೌಲಿಕ ಮಾತುಗಳನ್ನಾಡಿದ ಪ್ರೊ. ಎಸ್.ರಾಜಶೇಖರ, ಪ್ರಧ್ಯಾಪಕರು, ಚರಿತ್ರೆ ಮತ್ತು ಪುರಾತತ್ವ ವಿಭಾಗ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ಹಾಗೂ ಗೋಷ್ಠಿಗಳ ಅಧ್ಯಕ್ಷತೆಯನ್ನು ವಹಿಸಿ ವಿಚಾರ ಸಂಕಿರಣದ ಮಹತ್ವವನ್ನು ಹೆಚ್ಚಿಸಿದ ನಮ್ಮವರೇ ಆದ ಪ್ರೊ. ಲಕ್ಷ್ಮಣ್ ತೆಲಗಾವಿ ಅವರಿಗೂ ಆಭಾರಿಯಾಗಿದ್ದೇವೆ. ವಿಚಾರಸಂಕಿರಣದ ಗೋಷ್ಠಿಗಳಲ್ಲಿ ಭಾಗವಹಿಸಿ ಸಕಾಲಕ್ಕೆ ಲೇಖನಗಳನ್ನು ಕೊಟ್ಟು ಸಹಕರಿಸಿದ ವಿದ್ವಾಂಸ ಮಿತ್ರರಿಗೆ ವಂದನೆಗಳು.

ಮೃದುಭಾಷಿ ಹಾಗೂ ಸಹೃದಯಿಗಳಾದ ಕುರುಗೋಡಿನ ಶಾಸಕ, ಸಚಿವರಾದ ಅಲ್ಲಂ ವೀರಭದ್ರಪ್ಪನವರನ್ನು ನೆನೆಯಲೇಬೇಕು. ನಮ್ಮ ವಿಶ್ವವಿದ್ಯಾಲಯದ ಬಗೆಗೆ ಅಪಾರ ಪ್ರೀತಿ ಹೊಂದಿರುವ ಅವರು ವಿಚಾರ ಸಂಕಿರಣವನ್ನು ಯಶಸ್ವಿಗೊಳಿಸುವಲ್ಲಿ ಪ್ರಮುಖ ರೂವಾರಿಯಾಗಿ ನಿಂತಿದ್ದಾರೆ. ಉತ್ಸಾಹಿ ಯುವಕ ಸಿ.ಯುವರಾಜ, ಉಪಾಧ್ಯಕ್ಷರು, ಬಳ್ಳಾರಿ ತಾಲ್ಲೂಕು ಪಂಚಾಯತ್ ನಮ್ಮ ಕಾರ್ಯವನ್ನು ಫಲಪ್ರದಗೊಳಿಸುವಲ್ಲಿ ತುಂಬಾ ಮುತ ವರ್ಜಿವಹಿಸಿದ್ದಾರೆ. ಅದೇ ರೀತಿ ಮಹನೀಯರಾದ ಎ. ರವೀಂದ್ರ, ಮಂಜುನಾಥಗೌಡ, ತಿಪ್ಪೇರುದ್ರಗೌಡ ಹಾಗೂ ವೈ. ಹನುಮಂತರೆಡ್ಡಿ ಅವರಿಗೂ ಪರೋಕ್ಷವಾಗಿ ಸಹಕರಿಸಿದ ಕುರುಗೋಡು ನಾಗರಿಕ ವೇದಿಕೆಯ ಎಲ್ಲ ಸದಸ್ಯರಿಗೂ ಹಾಗೂ ಸ್ಥಳೀಯರಿಗೆ ನಮ್ಮ ಕೃತಜ್ಞತೆಗಳು ಸಲ್ಲುತ್ತವೆ.

ಪುಸ್ತಕ ಪ್ರಕಟಣೆಯಲ್ಲಿ ಸಹಕರಿಸಿದ ನಮ್ಮ ವಿಭಾಗದ ಎಲ್ಲ ಸದಸ್ಯರಿಗೂ ಹಾಗೂ ಪ್ರಸಾರಾಂಗದ ಶ್ರೀ ಕೆ.ಎಲ್. ರಾಜಶೇಖರ್, ಸುಂದರವಾಗಿ ಅಕ್ಷರ ಸಂಯೋಜಿಸಿದ ವಿದ್ಯಾರಣ್ಯ ಗಣಕ ಕೇಂದ್ರದ ಶ್ರೀನಿವಾಸ ಕೆ.ಕಲಾಲ್ ಹಾಗೂ ಶ್ರೀ ಎಸ್.ಕೆ. ವಿಜಯೇಂದ್ರ ಹಾಗೂ ಅಚ್ಚುಕಟ್ಟಾಗಿ ಮುದ್ರಿಸಿದ ಸತ್ಯಶ್ರೀ ಪ್ರಿಂಟರ್ಸ್, ಬೆಂಗಳೂರು ಅವರಿಗೆ ಧನ್ಯವಾದಗಳು.

ಬಾಲಸುಬ್ರಮಣ್ಯ